Connect with us

fire

ಕೋಲ್ಕತ್ತಾ ಸರ್ಕಾರಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ: 4,000 ಇವಿಎಂಗಳು ಭಸ್ಮ, ವಿಧ್ವಂಸಕ ಕೃತ್ಯದ ಶಂಕೆ?

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಅಲಿಪೋರ್‌ನಲ್ಲಿರುವ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

24 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ

ಸೌತ್ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದ ಒಂಭತ್ತು ಅಂತಸ್ತಿನ ಈ ಕಟ್ಟಡದಲ್ಲಿ ಬುಧವಾರ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಸುಮಾರು 24 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದಾಗ್ಯೂ, ಕಟ್ಟಡದ ಕೆಲವು ಭಾಗಗಳಲ್ಲಿ ಇನ್ನೂ ತಾಪಮಾನ ಹೆಚ್ಚಿರುವುದರಿಂದ ರಕ್ಷಣಾ ಮತ್ತು ತಂಪುಗೊಳಿಸುವ ಕಾರ್ಯ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ, ಕಟ್ಟಡಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಚುನಾವಣಾ ಇವಿಎಂಗಳ ನಾಶ

ಈ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದ 10 ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂಗಳನ್ನು ಈ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿತ್ತು. ಅವೆಲ್ಲವೂ ಈ ಬೆಂಕಿಯಲ್ಲಿ ನಾಶವಾಗಿವೆ ಎಂದು ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ಖಚಿತಪಡಿಸಿದ್ದಾರೆ.

ವಿಧ್ವಂಸಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ಸಚಿವರು

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೌಶಿಕ್ ಚೌಧರಿ ಅವರು ಇದರಲ್ಲಿ ವಿಧ್ವಂಸಕ ಕೃತ್ಯ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

“ಇದು ಮೇಲ್ನೋಟಕ್ಕೆ ಸಾಮಾನ್ಯ ಬೆಂಕಿಯ ಅವಘಡದಂತೆ ಕಾಣುತ್ತಿಲ್ಲ. ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಮಧ್ಯದ ನಾಲ್ಕು, ಐದು ಮತ್ತು ಆರನೇ ಮಹಡಿಗಳಿಗೆ ಯಾವುದೇ ಹಾನಿಯಾಗದೆ, ನೇರವಾಗಿ ಏಳು, ಎಂಟು, ಒಂಭತ್ತು ಮತ್ತು ಹತ್ತನೇ ಮಹಡಿಗಳಿಗೆ ಬೆಂಕಿ ಹೇಗೆ ವ್ಯಾಪಿಸಿತು ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ,” ಎಂದು ಅವರು ಹೇಳಿದ್ದಾರೆ.

ರಾಜಕೀಯ ಕೆಸರೆರಚಾಟ

ಈ ಘಟನೆಯು ರಾಜ್ಯದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸಚಿವ ಸುಕಾಂತ ಮಜುಂದಾರ್ ಹಾಗೂ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರು, ಇದೊಂದು ಯೋಜಿತ ಪಿತೂರಿ ಇರಬಹುದು ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಪೂರಕವಾದ ಯಾವುದೇ ಅಧಿಕೃತ ಸಾಕ್ಷ್ಯಗಳು ಇದುವರೆಗೆ ಲಭ್ಯವಾಗಿಲ್ಲ.

ಎಫ್‌ಐಆರ್ ದಾಖಲು, ವಿಧಿವಿಜ್ಞಾನ ತನಿಖೆಗೆ ಕಾಯ್ದಿರಿಸಿದ ಪೊಲೀಸರು

ಸೌತ್ 24 ಪರಗಣ ಜಿಲ್ಲಾಡಳಿತದ ಪರವಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ಅಲಿಪೋರ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ (ವಿದ್ಯುತ್ ದೋಷ) ಕಾರಣದಿಂದ ಬೆಂಕಿ ಹತ್ತಿಕೊಂಡಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿಧಿವಿಜ್ಞಾನ (Forensic) ತಜ್ಞರು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಲಿದ್ದು, ಅವರ ವೈಜ್ಞಾನಿಕ ವರದಿ ಬಂದ ನಂತರವಷ್ಟೇ ಬೆಂಕಿ ಅವಘಡದ ಅಸಲಿ ಕಾರಣ ಏನೆಂಬುದು ಅಧಿಕೃತವಾಗಿ ತಿಳಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇವಿಎಂಗಳ ಜೊತೆಗೆ ಕಟ್ಟಡದಲ್ಲಿದ್ದ ಪ್ರಮುಖ ಸರ್ಕಾರಿ ದಾಖಲೆಗಳು ಹಾಗೂ ಮೂಲಸೌಕರ್ಯಗಳಿಗೆ ಉಂಟಾಗಿರುವ ನಷ್ಟದ ಪ್ರಮಾಣವನ್ನು ಸದ್ಯ ಅಧಿಕಾರಿಗಳು ಲೆಕ್ಕಹಾಕುತ್ತಿದ್ದಾರೆ




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಆಕಸ್ಮಿಕ ಬೆಂಕಿ.. ಹೊತ್ತಿ ಉರಿದ ಗುಡ್ಡ..

Published

on

ವಿಟ್ಲ: ಕಂಬಳಬೆಟ್ಟು ಜನಪ್ರಿಯ ವಿದ್ಯಾಸಂಸ್ಥೆ ಹಿಂಭಾಗದಲ್ಲಿರುವ ಗುಡ್ಡ ಆಕಸ್ಮಿಕ ಬೆಂಕಿ ದುರಂತದಿಂದಾಗಿ ಹೊತ್ತಿ ಉರಿಯುತ್ತಿದೆ. ಬದನಾಜೆ ಎಂಬಲ್ಲಿನ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಭಾರಿ ಪ್ರಮಾಣದಲ್ಲಿ ಗಿಡಮರಗಳು ಬೆಂಕಿಯ ಕೆನ್ನಾಲೆಗೆಗೆ ಭಸ್ಮವಾಗಿವೆ.

ವಿಟ್ಲ-ಪುತ್ತೂರು ಮುಖ್ಯ ರಸ್ತೆಗೆ ತಾಗಿಕೊಂಡಿರುವ ಬದನಾಜೆ ಎಂಬಲ್ಲಿನ ಗುಡ್ಡದಲ್ಲಿ ಸಂಜೆಯ ಹೊತ್ತಿಗೆ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ಜರೂ ಯಾರೊಬ್ಬರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕತ್ತಲಾಗುತ್ತಿದ್ದಂತೆ ಬೆಂಕಿ ಮತ್ತಷ್ಟು ಪಸರಿಸಿದ ಕಾರಣ ಭಾರಿ ಪ್ರಮಾಣದಲ್ಲಿ ಗಿಡ-ಮರಗಳು ಹೊತ್ತಿ ಉರಿದಿವೆ‌. ಆ ಬಳಿಕ ಅಪಾಯವನ್ನರಿತ ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

fire

ಚಿಕನ್ ಸೆಂಟರ್‌ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ – ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

Published

on

ವಿಟ್ಲ: ಇಲ್ಲಿನ ಬೊಬ್ಬೆಕೇರಿಯ ದೇವಸ್ಥಾನದ ಒಳರಸ್ತೆಯಲ್ಲಿರುವ ‘ಜನಪ್ರಿಯ ಚಿಕನ್ ಸೆಂಟರ್’ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸ್ಥಳೀಯರ ತುರ್ತು ಕಾರ್ಯಾಚರಣೆಯಿಂದಾಗಿ ದೊಡ್ಡ ಮಟ್ಟದ ಅಪಾಯವೊಂದು ತಪ್ಪಿದ ಘಟನೆ ನಡೆದಿದೆ.

ಇಸ್ಮಾಯಿಲ್ ಎಂಬವರ ಮಾಲೀಕತ್ವದ ಈ ಚಿಕನ್ ಸೆಂಟರ್‌ನಲ್ಲಿ ಭಾನುವಾರ ತಡರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಸಮಾರಂಭವೊಂದಕ್ಕಾಗಿ ಕೋಳಿ ಮಾಂಸದ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ, ಗ್ಯಾಸ್ ಒಲೆಯಿಂದ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕ್ಷಣಾರ್ಧದಲ್ಲಿ ಬೆಂಕಿ ಅಂಗಡಿಯಾದ್ಯಂತ ವ್ಯಾಪಿಸತೊಡಗಿತ್ತು.

ರಕ್ಷಣಾ ಕಾರ್ಯಾಚರಣೆ: ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ‘ಫ್ರೆಂಡ್ಸ್ ವಿಟ್ಲ’ ತಂಡದ ಮುರಳೀಧರ ವಿಟ್ಲ ಅವರು ಕೂಡಲೇ ತಮ್ಮ ಪಿಕಪ್ ವಾಹನದಲ್ಲಿ ನೀರು ತಂದು ಬೆಂಕಿ ನಂದಿಸಲು ಮುಂದಾದರು. ಇದೇ ಸಂದರ್ಭದಲ್ಲಿ ಆಸಿಫ್ ಪೆರುವಾಯಿ, ನವೀದ್ ವಿಟ್ಲ ಮತ್ತು ಅನ್ಸಾರ್ ಪೆರುವಾಯಿ ಅವರು ಹತ್ತಿರದ ಬೊಬ್ಬೆಕೇರಿ ಪೆಟ್ರೋಲ್ ಬಂಕ್‌ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್‌ಗಳನ್ನು ತಂದು ಬೆಂಕಿ ಹರಡದಂತೆ ತಡೆದರು. ಇವರ ಸಮಯಪ್ರಜ್ಞೆ ಮತ್ತು ಸಾಹಸಮಯ ಕಾರ್ಯದಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬಂದು, ಪಕ್ಕದ ಕಟ್ಟಡಗಳಿಗೆ ಹಾನಿಯಾಗುವುದು ತಪ್ಪಿದಂತಾಗಿದೆ.

ಘಟನೆಯಲ್ಲಿ ಚಿಕನ್ ಸೆಂಟರ್‌ನ ಕೆಲವು ಸಾಮಗ್ರಿಗಳು ಹಾನಿಗೀಡಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


Continue Reading

DEATH

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ

Published

on

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವು ಜನರನ್ನು ಬೆಚ್ಚಿಬೀಳಿಸಿದೆ. ಎಲೆಕ್ಟ್ರಿಕ್ ವಾಹನ (EV) ಚಾರ್ಜ್ ಮಾಡುತ್ತಿದ್ದ ವೇಳೆ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ಹೊತ್ತಿಕೊಂಡು, ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿರುವ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ನಗರದ ಬ್ರಿಜೇಶ್ವರಿ ಅನೆಕ್ಸ್ ವಸತಿ ಪ್ರದೇಶದಲ್ಲಿ ಬೆಳಗ್ಗಿನ ಜಾವ ನಡೆದಿದೆ. ಘಟನೆ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿದ್ದ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು ಎಂದು ತಿಳಿದುಬಂದಿದೆ. ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಕಾರು ಚಾರ್ಜ್ ಆಗುತ್ತಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರಿಗೆ ಬೆಂಕಿ ತಗುಲಿತು. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಮನೆಯನ್ನು ಆವರಿಸಿತು.

ಬೆಂಕಿಯ ತೀವ್ರತೆ ಅಷ್ಟರ ಮಟ್ಟಿಗೆ ಇತ್ತು, ಮನೆಯವರು ಎಚ್ಚರವಾಗುವಷ್ಟರಲ್ಲೇ ಪರಿಸ್ಥಿತಿ ಕೈಮೀರಿ ಹೋಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿಕೊಂಡಿದ್ದು, ಒಳಗಿದ್ದವರಿಗೆ ಹೊರಬರಲು ಯಾವುದೇ ಅವಕಾಶ ಸಿಗಲಿಲ್ಲ.

ಘಟನೆಯನ್ನು ಇನ್ನಷ್ಟು ಭೀಕರಗೊಳಿಸಿದ ಅಂಶವೆಂದರೆ ಮನೆಯೊಳಗೆ ಸಂಗ್ರಹಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು. ಮೂಲಗಳ ಪ್ರಕಾರ, ಮನೆಯಲ್ಲಿ ಸುಮಾರು 15 ಗ್ಯಾಸ್ ಸಿಲಿಂಡರ್‌ಗಳನ್ನು ಇಡಲಾಗಿದ್ದು, ಅವುಗಳಲ್ಲಿ ನಾಲ್ಕು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಈ ಸ್ಫೋಟಗಳ ಪರಿಣಾಮವಾಗಿ ಬೆಂಕಿ ಮತ್ತಷ್ಟು ವ್ಯಾಪಕವಾಗಿ ಹರಡಿದ್ದು, ಸುತ್ತಮುತ್ತಲಿನ ಮನೆಗಳಿಗೂ ಕಂಪನ ಉಂಟಾಗಿದೆ.

ಅಪಘಾತದ ವೇಳೆ ಮನೆಯಲ್ಲಿ ಕುಟುಂಬ ಸಭೆ ನಡೆಯುತ್ತಿದ್ದು, ಅನೇಕ ಸಂಬಂಧಿಕರು ಒಂದೇ ಕಡೆ ಸೇರಿದ್ದರಿಂದ ಹಾನಿ ಹೆಚ್ಚಾಗಿದೆ. ಸಂತೋಷದ ಕ್ಷಣಗಳು ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದ್ದು, ಸ್ಥಳೀಯರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿದರೂ, ಬೆಂಕಿಯ ತೀವ್ರತೆ ಹಾಗೂ ಕಿರಿದಾದ ರಸ್ತೆಗಳ ಕಾರಣದಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ಬಹಳ ಸಮಯದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಮನೆ ಸಂಪೂರ್ಣವಾಗಿ ಭಸ್ಮವಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಗ್ನಿ ಅವಘಡದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಆಡಳಿತವೂ ಗಮನಹರಿಸಿದ್ದು, ಇಂತಹ ಅವಘಡಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಲಾಗಿದೆ.

Continue Reading

Trending

Copyright © 2025 Deevatige

error: Content is protected !!