Belthangady
ಸೌಜನ್ಯ ಪ್ರಕರಣ: ಇದು ಮರು ತನಿಖೆಯಷ್ಟೇ ಅಲ್ಲ, ತನಿಖಾಧಿಕಾರಿಗಳ ಹೊಣೆಗಾರಿಕೆಯ ಪ್ರಶ್ನೆ!
ವಿಶೇಷ ವಿಶ್ಲೇಷಣಾ ವರದಿ
ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆ ಹಾಗೂ ಮರು ತನಿಖೆಯ ಸಾಧ್ಯತೆಯ ಬೆಳವಣಿಗೆಗಳು, ಕೇವಲ ಒಂದು ಹಳೆಯ ಕ್ರಿಮಿನಲ್ ಕಡತವನ್ನುಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಯಾಗಬಾರದು. ಇದು ಭಾರತೀಯ ತನಿಖಾ ವ್ಯವಸ್ಥೆಗೆ ತನ್ನ ವಿಶ್ವಾಸಾರ್ಹತೆಯನ್ನು ನಾಗರಿಕ ಸಮಾಜದ ಎದುರು ಸಾಬೀತು ಪಡಿಸುವ ಮತ್ತು ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಅತ್ಯಂತ ಗಂಭೀರ ಸುಸಂದರ್ಭವಾಗಿದೆ.
ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ, ನ್ಯಾಯಾಲಯವು ಸಿಬಿಐ ತನಿಖೆಯ ವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದು, ಹೊಸ ತನಿಖೆಯ ಭರವಸೆ ಮೂಡಿದೆ. ಆದರೆ, ಈ ಹಂತದಲ್ಲಿ ಉದ್ಭವಿಸುವ ಅತ್ಯಂತ ಗಂಭೀರ ಪ್ರಶ್ನೆ ಎಂದರೆ—“ಹಿಂದಿನ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂಬುದನ್ನು ನ್ಯಾಯಾಲಯವೇ ಒಪ್ಪಿಕೊಂಡ ಮೇಲೆ, ಆ ಲೋಪಗಳಿಗೆ ಕಾರಣರಾದ ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಬೇಡವೇ?”
ತನಿಖಾಧಿಕಾರಿಯ ಕರ್ತವ್ಯ ಲೋಪವನ್ನು ತನಿಖೆ ಮಾಡೋರು ಯಾರು?
ಒಬ್ಬ ಸಾಮಾನ್ಯ ನಾಗರಿಕ ಕಾನೂನು ಉಲ್ಲಂಘಿಸಿದರೆ ಅಥವಾ ತಪ್ಪು ಮಾಡಿದರೆ ಆತನ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಒಂದು ಜವಾಬ್ದಾರಿಯುತ ಅಧಿಕಾರವನ್ನು ಹೊಂದಿರುವ ತನಿಖಾಧಿಕಾರಿಯೇ ತನಿಖೆಯಲ್ಲಿ ಗಂಭೀರ ಲೋಪವೆಸಗಿದಾಗ ಈ ತಪ್ಪಿತಸ್ಥಅಧಿಕಾರಿಯ ಕರ್ತವ್ಯಲೋಪವನ್ನು ಪ್ರಶ್ನಿಸುವವರು ಯಾರು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆ!
ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ನಡೆಯಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ನ್ಯಾಯಸಮ್ಮತವೋ, ಅಷ್ಟೇ ಪ್ರಾಮುಖ್ಯತೆಯನ್ನು ಈ ಹಿಂದೆ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ಅಧಿಕಾರಿಗಳ ಕರ್ತವ್ಯ ಪರಿಶೀಲನೆಗೂ ನೀಡಬೇಕಾಗಿದೆ. ಮರು ತನಿಖೆ ಎಂದರೆ ಕೇವಲ “ಹೊಸ ಆರೋಪಿಯನ್ನು ಹುಡುಕುವುದು” ಮಾತ್ರವಲ್ಲ; “ಹಿಂದಿನ ತನಿಖೆಗಳು ಏಕೆ ಮತ್ತು ಯಾರಿಂದ ಮತ್ತು ಹೇಗೆ ವಿಫಲವಾದವು?” ಎಂಬುದರ ಸತ್ಯಾಸತ್ಯತೆಯನ್ನು ಹೊರಗೆಳೆಯುವುದೂ ಆಗಿದೆ.
ಮೂರೂ ಹಂತಗಳ ವೈಫಲ್ಯ: ಪ್ರಶ್ನೆಗೆ ಸಿಲುಕಿದ ತನಿಖಾ ಸಂಸ್ಥೆಗಳು
ಈ ಪ್ರಕರಣದಲ್ಲಿ ತನಿಖೆಯು ಮೂರು ಪ್ರಮುಖ ಹಂತಗಳನ್ನು ದಾಟಿ ಬಂದಿದೆ:
- ಸ್ಥಳೀಯ ಪೊಲೀಸ್ ತನಿಖೆ (ಜಿಲ್ಲಾ ಮಟ್ಟ)
- ರಾಜ್ಯ ಸಿಐಡಿ ತನಿಖೆ (ರಾಜ್ಯ ಸರ್ಕಾರದ ಅಧೀನ)
- ಸಿಬಿಐ ತನಿಖೆ (ಕೇಂದ್ರ ಸರ್ಕಾರದ ಅಧೀನ)
ಈ ಮೂರೂ ಹಂತಗಳ ತನಿಖೆಗಳು ಮುಗಿದ ಮೇಲೆಯೂ ಸಮಾಜದಲ್ಲಿ ಮತ್ತು ಸಂತ್ರಸ್ತ ಕುಟುಂಬದಲ್ಲಿ ಸತ್ಯದ ಬಗ್ಗೆ ಅನುಮಾನಗಳು ಇನ್ನೂ ಉಳಿದಿವೆ ಎಂದರೆ, ಪ್ರಶ್ನೆ ಕೇವಲ ಆರೋಪಿಯ ಮೇಲಷ್ಟೇ ಅಲ್ಲ— ಈವರೆಗೆ ತನಿಖೆ ನಡೆಸಿದ ತನಿಖಾಸಂಸ್ಥೆಗಳ ಮೇಲೆ ಹಾಗೂ ಆಡಳಿತ ವ್ಯವಸ್ಥೆಗಳ ಮೇಲೆ ಅಪನಂಬಿಕೆ ಬಂದಿದೆ. ಇದನ್ನು ಹೋಗಲಾಡಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ.
ಅಧಿಕಾರದ ಸರಪಳಿಗಳು ಬೇರೆ ಬೇರೆಯಾಗಿರಬಹುದು; ಆದರೆ ಭಾರತೀಯ ಸಂವಿಧಾನದ ಮುಂದೆ ಪ್ರತಿಯೊಂದು ತನಿಖಾ ಸಂಸ್ಥೆಯ ಕರ್ತವ್ಯವೂ ಒಂದೇ:
- ಸತ್ಯವನ್ನು ಪತ್ತೆಹಚ್ಚುವುದು
- ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು
- ಯಾವುದೇ ಕಾರಣಕ್ಕೂ ನಿರಪರಾಧಿಯನ್ನು ಬಲಿಪಶು ಮಾಡದಿರುವುದು
- ನಿಜವಾದ ಅಪರಾಧಿಯನ್ನು ಯಾವುದೇ ಪ್ರಭಾವಕ್ಕೂ ಒಳಗಾಗದೆ ರಕ್ಷಿಸದಿರುವುದು
ಈ ಮೂಲಭೂತ ಕರ್ತವ್ಯದಲ್ಲಿ ವಿಫಲವಾಗುವುದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಅದು ಕರ್ತವ್ಯಲೋಪ, ತನಿಖಾ ನಿರ್ಲಕ್ಷ್ಯ, ಸಾಕ್ಷ್ಯ ನಾಶ/ನಿರ್ವಹಣೆಯ ವೈಫಲ್ಯ ಅಥವಾ ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ.
ಹೊಸ ತನಿಖಾ ಸಂಸ್ಥೆಯ ಮುಂದೆ ಇರಬೇಕಾದ ನೈಜ ಆದ್ಯತೆಗಳು
ಒಂದು ವೇಳೆ ಈ ಪ್ರಕರಣದಲ್ಲಿ ಹೊಸದಾಗಿ ವಿಶೇಷ ತನಿಖಾ ತಂಡ ರಚನೆಯಾದರೆ, ಅದರ ಮೊದಲ ಕರ್ತವ್ಯ ಕೇವಲ “ಯಾರು ಅಪರಾಧಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಷ್ಟೇ ಆಗಿರಬಾರದು. ಹಾಗೂ ಪ್ರಕರಣ ದಾರಿತಪ್ಪಲು ಕಾರಣರು ಯಾರು.? ಎಂಬುವುದರ ಪತ್ತೆಗಾಗಿ:
- ಹಿಂದಿನ ತನಿಖೆಯಲ್ಲಿ ಯಾವ ಅಧಿಕಾರಿಗಳು ಯಾವ ರೀತಿಯ ಕರ್ತವ್ಯ ನಿರ್ವಹಿಸಿದರು?
- ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಯಾವುದನ್ನು ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಸಂಗ್ರಹಿಸಲಿಲ್ಲ?
- ಯಾವ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಯಿತು ಹಾಗೂ ಯಾವುದನ್ನು ಕಡೆಗಣಿಸಲಾಯಿತು?
- ತನಿಖೆಯು ತಪ್ಪು ದಿಕ್ಕಿಗೆ ತಿರುಗಲು ಯಾವ ಅಧಿಕಾರಿಯ ನಿರ್ಧಾರ ಕಾರಣವಾಯಿತು?
ನೂತನ ತನಿಖಾ ಸಂಸ್ಥೆ ಎಂದರೆ ಅದು ಕೇವಲ ಹೆಸರು ಬದಲಾವಣೆ ಎಂದಾಗಬಾರದು. ಅದು ಹಿಂದಿನ ತನಿಖಾ ಲೋಪಗಳ ಮೇಲೆಯೂ ಸ್ವತಂತ್ರವಾಗಿ ಬೆಳಕು ಚೆಲ್ಲುವ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಂಸ್ಥೆಯಾಗಬೇಕು.
ಸಂವಿಧಾನದ ಆಶಯ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷ
ಭಾರತೀಯ ಸಂವಿಧಾನದ ಕಲಂ 14 (ಕಾನೂನಿನ ಮುಂದೆ ಎಲ್ಲರೂ ಸಮಾನ) ಮತ್ತು ಕಲಂ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಯುತ ಪ್ರಕ್ರಿಯೆ ಮತ್ತು ತನಿಖೆಯನ್ನು ಖಾತರಿಪಡಿಸುತ್ತವೆ. ತನಿಖೆಯೇ ಪಕ್ಷಪಾತಪೂರ್ಣವಾಗಿದ್ದರೆ ಅಥವಾ ಗಂಭೀರ ಲೋಪಗಳಿಂದ ಕೂಡಿದ್ದರೆ, ಸಮಗ್ರ ನ್ಯಾಯವ್ಯವಸ್ಥೆಯ ಬುನಾದಿಯೇ ದುರ್ಬಲಗೊಳ್ಳುತ್ತದೆ.
ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ: ತನಿಖಾ ಸಂಸ್ಥೆಗಳು ಇರುವುದು ಯಾರಿಗೆ? ಸರ್ಕಾರಗಳಿಗಾಗಿಯೇ? ಅಧಿಕಾರಿಗಳಿಗಾಗಿಯೇ? ರಾಜಕೀಯ ಪಕ್ಷಗಳಿಗಾಗಿಯೇ? ಅಥವಾ ದೇಶದ ನೊಂದ ಕುಟುಂಬದ ಜನಸಾಮಾನ್ಯರಿಗಾಗಿಯೇ?
ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಪಕ್ಷದ ಬೆಂಬಲಿತರು ಕೇಂದ್ರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಬೆಂಬಲಿತರು ರಾಜ್ಯದ ಅಧೀನ ದಲ್ಲಿರುವ ತನಿಖಾ ಸಂಸ್ಥೆಗಳ ವೈಫಲ್ಯಗಳನ್ನು ಅಥವಾ ಲೋಪಗಳನ್ನು ಸಮರ್ಥಿಸಿಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ಕಾರ ಎಂದರೆ ಒಂದು ರಾಜಕೀಯ ಪಕ್ಷದ ಗೊಂಬೆಯಲ್ಲ; ಅದು ಸಂವಿಧಾನದಡಿಯಲ್ಲಿ ಸರ್ವರಿಗೂ ಸಮಾನ ನ್ಯಾಯ ಒದಗಿಸುವ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ. ಪೊಲೀಸ್ ಅಥವಾ ಯಾವುದೇ ಸರಕಾರಿ ಇಲಾಖೆಯ ಅಧಿಕಾರಿ ಎಂದರೆ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ರಾಜಕೀಯ ಪಕ್ಷಗಳು, ಸರ್ಕಾರಗಳು ಮತ್ತು ಅಧಿಕಾರಿಗಳು ಬದಲಾಗುತ್ತಿರ ಬಹುದು, ಆದರೆ ನ್ಯಾಯದ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ.
ಬೇಕಾಗಿದೆ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ)
ತನಿಖಾಧಿಕಾರಿ ಮಾಡುವ ಒಂದು “ಉದ್ದೇಶಪೂರ್ವಕ ಕರ್ತವ್ಯ ಲೋಪ”ದಿಂದಾಗಿ ಒಬ್ಬ ನಿರಪರಾಧಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು, ನಿಜವಾದ ಅಪರಾಧಿ ಸಮಾಜದಲ್ಲಿ ಮುಕ್ತವಾಗಿ ಓಡಾಡಬಹುದು, ಮತ್ತು ಒಂದು ಬಡ ಕುಟುಂಬ ಜೀವನಪೂರ್ತಿ ನ್ಯಾಯಕ್ಕಾಗಿ ರಸ್ತೆಯಲ್ಲಿ ಅಲೆಯಬೇಕಾಗಬಹುದು. ಆದ್ದರಿಂದ, ಸೌಜನ್ಯ ಪ್ರಕರಣದ ಮರು ತನಿಖೆಯ ಜೊತೆಗೆ ಒಂದು ಸ್ವತಂತ್ರ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ) ಅತ್ಯಗತ್ಯವಾಗಿದೆ.
- ಒಂದು ಮಗ್ಗಲಿನಲ್ಲಿ: ಅಪರಾಧದ ನೈಜ ತನಿಖೆ (ಅಪರಾಧಿಯನ್ನು ಪತ್ತೆಹಚ್ಚುವುದು).
- ಮತ್ತೊಂದು ಮಗ್ಗಲಿನಲ್ಲಿ: ಹಿಂದಿನ ತನಿಖೆಗಳ ವೈಫಲ್ಯ ಮತ್ತು ಲೋಪಗಳ ಕುರಿತು ಸ್ವತಂತ್ರ ವಿಚಾರಣೆ.
ಇದು ವೈಯುಕ್ತಿಕ ದ್ವೇಷ ಸಾಧನೆ ಅಲ್ಲ, ಬದಲಾಗಿ “ಕಾನೂನಿಗಿಂತ ಯಾರೂ ಮೇಲಲ್ಲ—ತನಿಖೆಯ ಹೆಸರಿನಲ್ಲಿ ಕರ್ತವ್ಯಲೋಪ ಎಸಗಿದರೆ ಶಿಕ್ಷೆಯನ್ನು ಅನುಭವಿಸಲೇ ಬೇಕು “ ಎಂಬ ಸಂವಿಧಾನದ ಆಶಯವನ್ನು ಸ್ಥಾಪಿಸುವುದಕ್ಕಾಗಿ. ಆಗಿದೆ.
ನ್ಯಾಯದ ಕೊನೆಯ ಭರವಸೆ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ
ಸೌಜನ್ಯಗೆ ನ್ಯಾಯ ಸಿಗಬೇಕಾದರೆ ನಿಜವಾದ ಅಪರಾಧಿ ಯಾರು ಎಂಬುದು ಪತ್ತೆಯಾಗುವುದು ಎಷ್ಟು ಮುಖ್ಯವೋ, ಈ ನ್ಯಾಯವನ್ನು ಹುಡುಕುವ ವ್ಯವಸ್ಥೆಯೇ ಏಕೆ ವಿಫಲವಾಯಿತು ಎಂಬ ಸತ್ಯ ಹೊರಬರುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ, ಇಂದು ಸೌಜನ್ಯ ಪ್ರಕರಣ, ನಾಳೆ ಮತ್ತೊಂದು ಬಡ ಕುಟುಂಬದ ಮಗಳ ಪ್ರಕರಣ—ಮತ್ತೆ ಅದೇ ಕಡತಗಳನ್ನು ತಿರುಚಿ ನೋಡಿ ನಕಲು ಮಾಡುವುದು, ಮುಖವಾಡ ಬದಲಿಸಿದ ಅದೇ ಅಧಿಕಾರಿಗಳು, ಅದೇ ದಾಖಲೆಗಳು ಮತ್ತು ಕೊನೆಗೆ “ಸಾಕ್ಷ್ಯಾಧಾರಗಳ ಕೊರತೆ, ಕೇಸ್ ಕ್ಲೋಸ್” ಎಂಬ ಅದೇ ಹಳೆಯ ವ್ಯವಸ್ಥೆಯೇ ಪುನರಾವರ್ತನೆಯಾಗುತ್ತಲೇ ಇರುತ್ತದೆ ಎಂಬುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ನೋವಿನ ಮಾತುಗಳು.
ಸುಪ್ರೀಂ ಕೋರ್ಟ್‌ನ ಈ ಇತ್ತೀಚಿನ ಮಧ್ಯಪ್ರವೇಶವು ದೇಶದ ನ್ಯಾಯವ್ಯವಸ್ಥೆಗೆ ಸಿಕ್ಕಿರುವ ಒಂದು ಐತಿಹಾಸಿಕ ಅವಕಾಶವಾಗಿದೆ. ಈ ಅವಕಾಶವನ್ನು ಕೇವಲ ಒಂದು ಪ್ರಕರಣದ ಮರು ತನಿಖೆಗೆ ಸೀಮಿತಗೊಳಿಸದೆ, ಭಾರತದಲ್ಲಿ ತನಿಖಾ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಹೊಸ ಮಾನದಂಡವನ್ನು ಸ್ಥಾಪಿಸಲು ಬಳಸಿಕೊಳ್ಳಬೇಕಿದೆ.
ಸೌಜನ್ಯಗೆ ನ್ಯಾಯ ಸಿಗಬೇಕು, ಸತ್ಯಕ್ಕೆ ಜಯವಾಗಬೇಕು ಮತ್ತು ತನಿಖಾ ವೈಫಲ್ಯವೆಸಗಿದ ವ್ಯವಸ್ಥೆಯೂ ನ್ಯಾಯದ ಮುಂದೆ ತಲೆಬಾಗಲೇಬೇಕು.
Belthangady
ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು – ಕಾರ್ಮಿಕರ ಮೇಲೆ ಅನುಮಾನ
ಬೆಳ್ತಂಗಡಿ: ಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.
ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ.
ಘಟನೆಯ ವಿವರ:
ಅವರು ನೀಡಿದ ದೂರಿನಂತೆ ಸೆ. 13 ರಂದು ಮಧ್ಯಾಹ್ನ ಸುಮಾರು 1.45ಕ್ಕೆ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಗುರುವಾಯನಕೆರೆಗೆ ಕಳುಹಿಸಿದ ಬಳಿಕ ನೌಫಾಲ್ ಕೂಡ ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.
ಸೆ.14 ರಂದು ಫಾಲ್ಸ್ ಸೀಲಿಂಗ್ ವೈರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಮನೆಗೆ ಕರೆಸಲಾಗಿತ್ತು. ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕರೆದುಕೊಂಡು ಬಂದು ಮನೆಯಲ್ಲಿ ಕೆಲಸ ಮಾಡಿದ್ದರು. ಈ ವೇಳೆ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಮನೆಯಲ್ಲಿದ್ದರು.
ಅದೇ ದಿನ ರಾತ್ರಿ ಸುಮಾರು 8.30ಕ್ಕೆ ನೌಫಾಲ್ ಕುಟುಂಬದೊಂದಿಗೆ ಮನೆಗೆ ವಾಪಸ್ ಬಂದಾಗ, ಬೆಡ್‌ರೂಂನ ಗೋದ್ರೇಜ್‌ನಲ್ಲಿ ಇಟ್ಟಿದ್ದ ಚಿನ್ನದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಪರಿಶೀಲನೆ ನಡೆಸಿದಾಗ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರೇಸ್ಲೆಟ್ ಸೇರಿದಂತೆ 15 ಲಕ್ಷ 82 ಸಾವಿರ ರೂ. ಮೌಲ್ಯದ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ಇದಲ್ಲದೆ ನೌಫಾಲ್ ಅವರ ತಾಯಿಯ ಗೋದ್ರೇಜ್‌ನಲ್ಲಿದ್ದ ಒಟ್ಟು 7 ಗ್ರಾಂ ತೂಕದ ಮೂರು ಉಂಗುರಗಳೂ ಕಾಣೆಯಾಗಿರುವುದು ಪತ್ತೆಯಾಗಿದೆ.
ಮನೆಯ ಗೋದ್ರೇಜ್‌ನ ಕೀ ಗೋದ್ರೇಜ್‌ನಲ್ಲಿಯೇ ಇದ್ದು, ಮನೆಯವರು ಹೊರಗಿದ್ದ ಅವಧಿಯಲ್ಲಿ ಯಾರೋ ಮನೆಗೆ ಪ್ರವೇಶಿಸಿ ಗೋದ್ರೇಜ್ ತೆರೆದು ಕಳವು ಮಾಡಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.
ವೈರಿಂಗ್ ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.15 ರಂದು ಕಲಂ 331(3), 331(4), 305 BNS-2023 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
arrest
ಬೆಳ್ತಂಗಡಿ: ದಲಿತ ಕುಟುಂಬದ ಜಮೀನಿಗೆ ಅಕ್ರಮ ಪ್ರವೇಶಿಸಿ ಅಶ್ಲೀಲ ಪ್ರದರ್ಶನ – ಆರೋಪಿ ಬಂಧನ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸೇರಿದ ಜಮೀನಿಗೆ ಅಕ್ರಮ ಪ್ರವೇಶಿಸಿ ಕೃತ್ಯವೆಸಗಿ, ದಲಿತ ಕುಟುಂಬದ ಮಹಿಳೆಯರ ಮುಂದೆ ಪಂಚೆ ಎತ್ತಿ ಮರ್ಮಾಂಗ ಪ್ರದರ್ಶಿಸಿ ವಿಕೃತಿ ಮೆರೆದ ವಿಲಕ್ಷಣ ಪ್ರಕರಣ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಪಟ್ಟಾಡಿ ಮನೆಯ ಅಬ್ದುಲ್ ಹನೀಫ್ ಹುಸೇನ್ (50) ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಪಡ್ಯಾರಬೆಟ್ಟು ಎಂಬಲ್ಲಿ ಸುಮಾರು 40 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಾಸ್ತವ್ಯವಿದ್ದು ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದ ಪರಿಶಿಷ್ಟ ಜಾತಿಯ ಕುಟುಂಬದ ಸ್ವಾಧೀನದ ಜಾಗದಲ್ಲಿ ಸಿಮೆಂಟ್ ಕಂಬ ಹಾಗೂ ತಂತಿ ಬೇಲಿ ಹಾಕಿ ಕುಟುಂಬ ಕೃಷಿ ಕಾರ್ಯದಲ್ಲಿ ತೊಡಗಿತ್ತು.
ಸೆ.7 ರಂದು ಸ್ಥಳೀಯ ನಿವಾಸಿ ಹನೀಫ್ ಎಂಬಾತ ಏಕಾಏಕಿ ಆ ಜಾಗಕ್ಕೆ ಅತಿಕ್ರಮ ಪ್ರವೇಶಿಸಿ, ಜಾತಿ ನಿಂದನೆ ಮಾಡಿ ಅವಾಚ್ಯ ಮತ್ತು ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಬಡ ಕುಟುಂಬ ಹಾಕಿದ್ದ ಸಿಮೆಂಟ್ ಬೇಲಿ ಕಂಬ ಹಾಗೂ ತಂತಿ ಬೇಲಿಯನ್ನು ಕಿತ್ತೆಸೆದು, ಅಡಿಕೆ ಹಾಗೂ ಬಾಳೆ ಗಿಡಗಳನ್ನು ಮುರಿದು ದಾಂಧಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಕೆಲಸದಲ್ಲಿ ತೊಡಗಿದ್ದ ದಲಿತ ಕುಟುಂಬದ ಮಹಿಳೆಯರು ದಾಂಧಲೆಯ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಆರೋಪಿ ಹನೀಫ್ ಮಹಿಳೆಯರ ಎದುರು ಬಂದು ತಾನು ಉಟ್ಟಿದ್ದ ಪಂಚೆಯನ್ನು ಎತ್ತಿ ಒಳ ಉಡುಪನ್ನು ಜಾರಿಸಿ ತನ್ನ ಗುಪ್ತಾಂಗವನ್ನು ತೋರಿಸುತ್ತಾ ಸಾರ್ವಜನಿಕವಾಗಿ ವಿಕೃತಿಯನ್ನು ಮೆರೆದಿದ್ದಾನೆ. “ನಿಮ್ಮನ್ನು ಇದರಿಂದಲೇ ಅತ್ಯಾಚಾರ ಮಾಡುತ್ತೇನೆ, ಈ ಜಾಗ ಬಿಟ್ಟು ಹೋಗದಿದ್ದರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಮಹಿಳೆಯರನ್ನು ಬೆನ್ನಟ್ಟಿಕೊಂಡು ಬಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಮತ್ತು ಬಂಧನ:
ಈತನ ವಿಕೃತಿಯಿಂದ ಭಯಗೊಂಡ ಬಡ ಕುಟುಂಬವು ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ವೇಣೂರು ಪೊಲೀಸ್ ಠಾಣೆಗೆ ತೆರಳಿ ವಿಡಿಯೋ ಚಿತ್ರೀಕರಣದ ದೃಶ್ಯಾವಳಿ ಸಾಕ್ಷ್ಯಾಧಾರಗಳೊಂದಿಗೆ ಸೆ.8 ರಂದು ದೂರು ನೀಡಿದೆ.
ದೂರಿನ ಅನ್ವಯ ವೇಣೂರು ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಹಾಗೂ ಬಿಎನ್ಎಸ್ 329(3), 352, 351(2), 75(1), 324(4) ರಂತೆ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ವೇಣೂರು ಪೊಲೀಸರು ಆರೋಪಿಯನ್ನು ಸಂಜೆ ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
40 ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಬಡ ಪರಿಶಿಷ್ಟ ಕುಟುಂಬದ ಮೇಲೆ ದೌರ್ಜನ್ಯ ನಡೆಸಿ, ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದ ಆರೋಪಿಗೆ ಸ್ಥಳೀಯ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದ ಫಲವಾಗಿ ಕಾನೂನಿನ ತಕ್ಕ ಪಾಠ ಕಲಿಸಿದಂತಾಗಿದ್ದು, ಈ ಹೋರಾಟಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
accident
ಬೆಳ್ತಂಗಡಿ: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ; ಕಾರು ಚಾಲಕನಿಗೆ ಗಂಭೀರ ಗಾಯ
ಕೊಕ್ಕಡ: ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳದ ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಕಾರು ಹಾಗೂ ಬಸ್ಸಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿರುವ ಘಟನೆ ಸೆ. 12ರ ಶನಿವಾರ ಕೊಕ್ಕಡ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಕಾರಿನಲ್ಲಿದ್ದ ಹಲವರು ಗಾಯಗೊಂಡಿದ್ದು, ಈ ವೇಳೆ ಕಾರು ಚಾಲಕನ ಕೈ ಮುರಿತವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
