Connect with us

JYOTHIPRAKASH

ಮಂಗಳೂರು: ‘ಮಂಗಳೂರ ಸಮಾಚಾರ’ ಹಾಗೂ ಹರ್ಮನ್ ಮೊಗ್ಲಿಂಗ್ ಕೊಡುಗೆ ಚಾರಿತ್ರಿಕವಾದದ್ದು – ಎಂ.ಎ. ಗಫೂರ್

Published

on

ಮಂಗಳೂರು: ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗಟ್ಟಿ ಬುನಾದಿ ಹಾಕಿದ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಹಾಗೂ ಅದರ ಸಂಪಾದಕರಾದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಚಾರಿತ್ರಿಕವಾದದ್ದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರು ಹೇಳಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (KJU) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ (KTC) ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ‘ಮಂಗಳೂರ ಸಮಾಚಾರ’ದ ಸಂಪಾದಕ ಡಾ. ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯ ಲೋಕಕ್ಕೂ ಅಪೂರ್ವ ಕೊಡುಗೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು, “ಮೊಗ್ಲಿಂಗ್ ಅವರು ಕೇವಲ ಪತ್ರಿಕೋದ್ಯಮಕ್ಕೆ ಮಾತ್ರವಲ್ಲದೆ, ಜೈಮಿನಿ ಭಾರತ, ಬಸವ ಪುರಾಣ, ದಾಸ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ” ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಂ. ವಾಟ್ಸನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಪಿ.ಬಿ. ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮದ ಮಹತ್ವದ ಕುರಿತು ಮಾತನಾಡಿದರು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ , ಕೋಶಾಧಿಕಾರಿ ಕೆನ್ಯೂಟ್ ಪಿಂಟೋ, ಮಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಕರ್ತರಾದ ಡೊನಾಲ್ಡ್‌ ಪಿರೇರಾ, ಎಡ್ವರ್ಡ್ ಲೋಬೋ, ಶಾರುಖ್, ಹಮೀದ್ ವಿಟ್ಲ ಸೇರಿದಂತೆ ಥಿಯೋಲೋಜಿಕಲ್ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ‌ ಈಶ್ವರ ವಾರಣಾಶಿ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

celebration

ನಾಳೆ (ಜು.23) ವಿಟ್ಲದಲ್ಲಿ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಪುತ್ತೂರು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ: ಹಿರಿಯ ಪತ್ರಕರ್ತ ಯಶವಂತ ವಿಟ್ಲರಿಗೆ ಗೌರವ ಸನ್ಮಾನ

Published

on

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಆರ್.) ಪುತ್ತೂರು ತಾಲೂಕು ಸಮಿತಿಯ ವತಿಯಿಂದ ‘ಪತ್ರಿಕಾ ದಿನಾಚರಣೆ’ ಹಾಗೂ ಹಿರಿಯ ಪತ್ರಕರ್ತ, ಸಾಹಿತಿ ಯಶು ವಿಟ್ಲ ಅವರಿಗೆ ‘ಗೌರವ ಸಮರ್ಪಣೆ’ ಕಾರ್ಯಕ್ರಮವು ಜುಲೈ 23 ರಂದು (ನಾಳೆ) ನಡೆಯಲಿದೆ.

ಇತ್ತೀಚೆಗೆ ಜುಲೈ 1ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಡಾ. ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ನಾಳೆ ಪುತ್ತೂರು ತಾಲೂಕು ಘಟಕದ ವತಿಯಿಂದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಅರ್ಥಪೂರ್ಣ ಕಾರ್ಯಕ್ರಮವು ಹಿರಿಯ ಪತ್ರಕರ್ತ ಯಶು ವಿಟ್ಲ ಅವರ ವಿಟ್ಲದ ಪಾಣೆಮಜಲು ಎಂಬಲ್ಲಿರುವ ಮನೆ ʼಶ್ರವಣʼ ದಲ್ಲಿ ನಡೆಯಲಿದೆ. ಈ ಅಪೂರ್ವವಾದ ಕಾರ್ಯಕ್ರಮಕ್ಕೆ ಪತ್ರಿಕಾರಂಗದ ಬಂಧುಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ರಾಮದಾಸ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊರಾಸ್ ಅವರು ಪ್ರಕಟಣೆಯಲ್ಲಿ ಪ್ರೀತಿಯ ಆಹ್ವಾನ ನೀಡಿದ್ದಾರೆ.

ಸನ್ಮಾನಿತರ ಪರಿಚಯ: ಹಿರಿಯ ಪತ್ರಕರ್ತ ಯಶವಂತ ವಿಟ್ಲ (ಯಶು ವಿಟ್ಲ)

ಪರಿಚಯ: ಮಾರ್ಚ್ 9, 1953 ರಲ್ಲಿ ಜನಿಸಿದ ಯಶವಂತ ವಿಟ್ಲ ( ಬಿ.ಕಾಂ. ಡಿ.ಇ.ಜೆ) ಅವರು 3 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾರಂಗದಲ್ಲಿ ತನ್ನ ಬರಹಗಳಿಂದ ಬಹಳಷ್ಟು ಪ್ರಸಿದ್ದಿ ಪಡೆದವರು. ಅದರಂತೆ ಅದರ ಜೊತೆಯಾಗಿ , ಸಾಹಿತ್ಯ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ಪತ್ರಿಕೋದ್ಯಮ ಸೇವೆ: ಸುಮಾರು 33 ವರ್ಷಗಳ ಕಾಲ ‘ಉದಯವಾಣಿ’ ದಿನಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿರುವ ಇವರು, ಗ್ರಾಮೀಣ ಬದುಕಿನ ನೋವು-ನಲಿವುಗಳು, ಸಾರ್ವಜನಿಕ ಸಮಸ್ಯೆಗಳು ಹಾಗೂ ಅಭಿವೃದ್ಧಿ ಪರ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ಸಮಾಜದ ಮುಂದಿಟ್ಟಿದ್ದಾರೆ.

ಸಾಹಿತ್ಯ ಕ್ಷೇತ್ರ: ಸಾಹಿತ್ಯ ಕ್ಷೇತ್ರದಲ್ಲೂ ಗಮನಾರ್ಹ ಕೃಷಿ ಮಾಡಿರುವ ಇವರು ಹಲವು ಕೃತಿಗಳ ರಚನೆಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ.‌‌

📚 ಸ್ಮರಣ ಸಂಚಿಕೆ ಸಂಪಾದಕತ್ವ:

  1. ‘ಅಕ್ಷರ ಸಂಪದ’ – 2005
    • ವಿಟ್ಲ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಬೆಳ್ಳಿ ಹಬ್ಬದ ಸಂಪುಟ.
  2. ‘ಕನಕ ಸಂಪದ’ – 2005
    • ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸುವರ್ಣ ಮಹೋತ್ಸವ ಸಂಪುಟ.
  3. ‘ತ್ರಿದಳ’ – 2004
    • ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ‘ದಶಮಾನೋತ್ಸವ ಸಂಚಿಕೆ’.

📖 ಸಹ ಸಂಪಾದಕತ್ವ:

  1. ‘ಚಾಮರ’ – 1986
    • ರವಿವರ್ಮ ಕೃಷ್ಣರಾಜ ಅರಸರ ಸನ್ಮಾನ ಗ್ರಂಥ.
  2. ‘ಕಣಜ’ – 2001
    • ವಿಠಲ ವಿದ್ಯಾಸಂಘದ ಸುವರ್ಣ ಮಹೋತ್ಸವ ಗ್ರಂಥ.
  3. ‘ಒಡಿಯೂರ ತುಡರ್’ – 2001
    • ಒಡಿಯೂರು ತುಳು ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ.
  4. ‘ಸಂಪನ್ನ’ – 2004
    • ಬೆಳ್ಳಪ್ಪಾಡಿ ರಮಾನಾಥ ರೈ – ಜೀವನ ಸಾಧನೆ – ಅವಲೋಕನ ಸಂಪುಟ.
  5. ‘ವಜ್ರಜ್ಯೋತಿ’ – 2011
    • ವಿಠಲ ವಿದ್ಯಾ ಸಂಘದ ವಜ್ರಮಹೋತ್ಸವ ಸಂಪುಟ.
  6. ‘ರುದ್ರಾಕ್ಷಿ’ – 2013
    • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಗ್ರಂಥ.
  7. ‘ಪಂಚಾಕ್ಷರಿ’ – 2013
    • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪುಟ.
  8. ‘ದತ್ತಪ್ರಕಾಶ್’ ಆರಂಭ – 1999
    • ಆಧ್ಯಾತ್ಮಿಕ ದ್ವೈಮಾಸಿಕ ಶ್ರೀ ಗುರುದೇವ ಪ್ರಕಾಶನ, ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು.

ಪ್ರಕಟಿತ ಪುಸ್ತಕ:

ಬಿಂಬ-ಪ್ರತಿಬಿಂಬ – ಅಂಕಣ ಬರಹಗಳ ಸಂಗ್ರಹ.

ಸಾಧನೆಗಳು:

ಸಮಾಚಾರ ಡೈರಿ: ‘ಉದಯವಾಣಿ’ ದಿನಪತ್ರಿಕೆಯಲ್ಲಿ ‘ಸಮಾಚಾರ ಡೈರಿ’ ವರದಿಗಾರನ ಡೈರಿ ಎಂಬ 350ಕ್ಕೂ ಹೆಚ್ಚಿನ ಅಂಕಣ ಬರಹಗಳನ್ನು ಬರೆದಿದ್ದಾರೆ.

ಮೂಲಿಕೆ-ಮಾಲಿಕೆ: ಔಷಧೀಯ ಸಸ್ಯಗಳ ಪರಿಚಯದ ‘ಮೂಲಿಕೆ-ಮಾಲಿಕೆ’ ಚಿತ್ರ ಮಾಹಿತಿ – ಸುಮಾರು 250 ಲೇಖನಗಳನ್ನು ಪ್ರಕಟಿಸಿದ್ದಾರೆ.

ಸಂಘಟನೆ & ಸಮಾಜ ಸೇವೆ: ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ನಿರಂತರವಾಗಿ ಶ್ರಮಿಸಿರುವ ಇವರ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಈಗಾಗಲೇ ವಿವಿಧ ಪ್ರಶಸ್ತಿ-ಸನ್ಮಾನ ನೀಡಿ ಗೌರವಿಸಿವೆ.

ಸೇವೆಗಳು ಮತ್ತು ಹುದ್ದೆಗಳ ವಿವರ:

ವರದಿಗಾರ: 33 ವರ್ಷಗಳ ಕಾಲ ‘ಉದಯವಾಣಿ’ ದಿನಪತ್ರಿಕೆಯ ವರದಿಗಾರ.

ಕಾರ್ಯದರ್ಶಿ: ವಿಠಲ ವಿದ್ಯಾಸಂಸ್ಥೆ, ವಿಟ್ಲ – ಇದರ ಕಾರ್ಯದರ್ಶಿಯಾಗಿ ಕಳೆದ 15 ವರ್ಷಗಳಿಂದ ಸೇವೆ.

ನಿರ್ದೇಶಕ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ನಿರ್ದೇಶಕ (14 ವರ್ಷಗಳಿಂದ).

ಉಪಾಧ್ಯಕ್ಷ: ವಿಟ್ಲ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ.

ಆಡಳಿತ ಸಮಿತಿ ಸದಸ್ಯ: ವಿಠಲ ಸುಪ್ರಜೀತ್ ಐ.ಟಿ.ಐ. ಆಡಳಿತ ಸಮಿತಿಯ ಸದಸ್ಯ.

ಜಿರ್ಣೋದ್ಧಾರ ಸಮಿತಿ ಕಾರ್ಯದರ್ಶಿ: ವಿಟ್ಲ ಸೀಮೆ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ.

ಸ್ಥಾಪಕ ಅಧ್ಯಕ್ಷ: ವಿಟ್ಲ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ.

ಇವರ ಸರಳ ವ್ಯಕ್ತಿತ್ವ, ವೃತ್ತಿನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ಗೌರವಿಸಿ ನಾಳೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ವತಿಯಿಂದ ‘ಗೌರವ ಸನ್ಮಾನ ಪತ್ರ’ ನೀಡಿ ಶ್ರದ್ಧಾಪೂರ್ವಕವಾಗಿ ಗೌರವಿಸಲಾಗುತ್ತಿದೆ.

Continue Reading

Article

ವಿಶೇಷ ವರದಿ: ‘ನೀನು ಸಾಯೋದು ಯಾವಾಗ?’ ಎಂದಾಗ ಅರ್ಧ ಜೀವ ಹಾರಿಹೋಗುತ್ತದೆ!ವೃದ್ಧಾಶ್ರಮಗಳೂ ಈಗ ‘ದಂಧೆ’! ಬದಲಾದ ಜೀವನಶೈಲಿ ನಡುವೆ ಹೆತ್ತವರ ಒಳಜೀವದ ಆತಂಕ; ಶಾಶ್ವತ ಪರಿಹಾರವೇನು?

Published

on

‘ಮಾತೃ ದೇವೋಭವ, ಪಿತೃ ದೇವೋಭವ’ ಎಂದು ಹೆತ್ತವರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಶ್ರೇಷ್ಠ ಸಂಸ್ಕೃತಿ ನಮ್ಮದು. ಹರಕೆ ಹೊತ್ತು ಮಕ್ಕಳನ್ನು ಪಡೆದು, ಅವರನ್ನೇ ಸರ್ವಸ್ವವೆಂದು ಬಗೆದು, ಪ್ರೀತಿ-ಕಾಳಜಿಯಿಂದ ಬೆಳೆಸಿ, ಉತ್ತಮ ಶಿಕ್ಷಣ ಹಾಗೂ ಬದುಕು ನೀಡಿದ ಪಾಲಕರಿಗೆ, ತಮ್ಮ ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎಂಬ ನಿರೀಕ್ಷೆ ಇರುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತಹ ಕಳವಳಕಾರಿ ಬೆಳವಣಿಗೆಯಾಗಿದೆ. ಪ್ರೀತಿ, ಗೌರವ ಸಿಗಬೇಕಾದ ವಯಸ್ಸಿನಲ್ಲಿ ಹಿರಿಯ ಜೀವಗಳು ತಮ್ಮದೇ ಮನೆಯಿಂದ ದೂರವಾಗಿ ವೃದ್ಧಾಶ್ರಮಗಳಲ್ಲಿ ಅನಾಥರಂತೆ ಆಶ್ರಯ ಪಡೆಯುತ್ತಿದ್ದಾರೆ.

“ನಾಳೆ ನಮ್ಮ ವೃದ್ಧಾಪ್ಯ ಹೇಗಿರುತ್ತದೋ, ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಾರೋ ಇಲ್ಲವೋ?” ಎಂಬ ತೀವ್ರ ಆತಂಕ ಇವತ್ತು ಪ್ರತಿಯೊಬ್ಬ ಪೋಷಕರನ್ನೂ ಕಾಡುತ್ತಿದೆ. ಐಷರಾಮಿ ಬದುಕು ಪಡೆದ ಮಕ್ಕಳೇ ಇವತ್ತು, ‘ನೀನು ಸಾಯೋದು ಯಾವಾಗ?’ ಎಂದು ಮುಖಕ್ಕೆ ಹೊಡೆದಂತೆ ಕೇಳುವಾಗ, ಹಿರಿಯರಿಗೆ ಬದುಕಿರುವಾಗಲೇ ಅರ್ಧ ಜೀವ ಹಾರಿಹೋಗುತ್ತದೆ.

ಹಿರಿಯರನ್ನು ದೂರ ತಳ್ಳಲು ಪ್ರಮುಖ ಕಾರಣಗಳೇನು?

ಇಂದಿನ ಆಧುನಿಕ ಸಮಾಜದಲ್ಲಿ ಹೆತ್ತವರನ್ನು ಮಕ್ಕಳು ತಮ್ಮಿಂದ ದೂರ ಮಾಡಲು ಮತ್ತು ವೃದ್ಧರು ಆತಂಕಕ್ಕೊಳಗಾಗಲು ಬದಲಾದ ಜೀವನಶೈಲಿ ಹಾಗೂ ಮಾನಸಿಕತೆಯೇ ಪ್ರಮುಖ ಕಾರಣಗಳಾಗಿವೆ:

ಅವಿಭಕ್ತ ಕುಟುಂಬಗಳ ವಿಭಜನೆ: ಹಿಂದೆ ಭಾರತದಲ್ಲಿ ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿದ್ದವು. ಮನೆಯಲ್ಲಿ ಹಿರಿಯರನ್ನು ಎಲ್ಲರೂ ಒಟ್ಟಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ವಿಭಕ್ತ (ನ್ಯೂಕ್ಲಿಯರ್) ಕುಟುಂಬ ಪದ್ಧತಿ ಹೆಚ್ಚಾಗಿದ್ದು, ಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳುವುದು ಕಡಿಮೆಯಾಗಿದೆ.

ನೈತಿಕ ಅಧಃಪತನ ಮತ್ತು ಮೌಲ್ಯಗಳ ಕುಸಿತ: ಆಧುನಿಕ ಜೀವನಶೈಲಿ ಮತ್ತು ಭೌತಿಕ ಆಸೆಗಳು ಹೆಚ್ಚಾದಂತೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳು ಸಂಪೂರ್ಣವಾಗಿ ಕುಸಿಯುತ್ತಿವೆ. ಹಣ, ಅಂತಸ್ತು ಮತ್ತು ಅಧಿಕಾರದ ಹಿಂದೆ ಬಿದ್ದಿರುವ ಇಂದಿನ ಪೀಳಿಗೆಗೆ ಹೆತ್ತವರ ಜವಾಬ್ದಾರಿ ಮರೆತುಹೋಗಿದೆ. ಪೋಷಕರನ್ನು ಕಡೆಗಣಿಸುವ ಪ್ರವೃತ್ತಿ ಬೆಳೆಯುತ್ತಿದೆ.

ಆರ್ಥಿಕ ಸ್ವಾತಂತ್ರ್ಯ ಮತ್ತು ಜಾಗತೀಕರಣ: ಜಾಗತೀಕರಣದ ಈ ಯುಗದಲ್ಲಿ ಮಕ್ಕಳು ಉದ್ಯೋಗ ಅರಸಿ ವಿದೇಶಗಳಿಗೆ ಅಥವಾ ದೂರದ ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪೋಷಕರು ಒಂಟಿಯಾಗುತ್ತಿದ್ದಾರೆ. ಇನ್ನು ಕೆಲವು ಕಡೆ ಮಕ್ಕಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ, ತಮ್ಮ ಐಷರಾಮಿ ಜೀವನಶೈಲಿಗೆ ಪೋಷಕರು ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅವರನ್ನು ಜೊತೆಯಲ್ಲಿಟ್ಟುಕೊಳ್ಳಲು ನಿರಾಕರಿಸುತ್ತಿದ್ದಾರೆ.

ಪೋಷಕರ ಅತಿಯಾದ ನಿರೀಕ್ಷೆಗಳು: ಕೆಲವೊಮ್ಮೆ ಪೋಷಕರೇ ತಮ್ಮ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ವಿದೇಶಗಳಿಗೆ ಕಳಿಸಿ, ಅವರು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬ ಅತಿಯಾದ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಹೆತ್ತವರಿಂದಲೇ ದೂರವಾಗಲು ಈ ಅತಿಯಾದ ನಿರೀಕ್ಷೆಗಳೇ ಕಾರಣವಾಗುತ್ತಿರುವುದು ಒಂದು ವಿಪರ್ಯಾಸ.

ಪರಿಸರ ಸೌಹಾರ್ದತೆಯ ಕೊರತೆ ಮತ್ತು ವೈಯಕ್ತಿಕ ಸ್ವಾರ್ಥ: ನಗರಗಳು ಇಂದು ಕಾಂಕ್ರೀಟ್ ಕಾಡುಗಳಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧದ ಜೊತೆಗೆ ಮಾನವೀಯ ಸಂಬಂಧಗಳೂ ಕಡಿಯುತ್ತಿವೆ. ಕೇವಲ ‘ನಾನು, ನನ್ನ ಹೆಂಡತಿ, ನನ್ನ ಮಕ್ಕಳು’ ಎಂಬ ವೈಯಕ್ತಿಕ ಸ್ವಾರ್ಥ ಹೆಚ್ಚಾಗುತ್ತಿರುವುದು ಕೌಟುಂಬಿಕ ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ವಯೋವೃದ್ಧರ ಆರೋಗ್ಯ ಸಮಸ್ಯೆಗಳು: ವೃದ್ಧಾಪ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಅವರಿಗೆ ನಿರಂತರ ಆರೈಕೆ ಮತ್ತು ಸಮಯದ ಅಗತ್ಯವಿರುತ್ತದೆ. ಆದರೆ ಇಂದಿನ ಓಟದ ಬದುಕಿನಲ್ಲಿ ಮನೆಯಲ್ಲಿ ಯಾರಿಗೂ ಅವರನ್ನು ನೋಡಿಕೊಳ್ಳಲು ಸಮಯವಾಗಲಿ ಅಥವಾ ಸಂಪನ್ಮೂಲಗಳಾಗಲಿ ಇರುವುದಿಲ್ಲ. ಈ ಕಾರಣ ನೀಡಿ ವೃದ್ಧರನ್ನು ವೃದ್ಧಾಶ್ರಮಗಳಿಗೆ ತಳ್ಳಲಾಗುತ್ತಿದೆ.

ವೃದ್ಧಾಶ್ರಮಗಳೂ ಈಗ ‘ದಂಧೆ’: ಆಸ್ತಿ ಲೂಟಿಯ ವ್ಯವಸ್ಥಿತ ಜಾಲ!

ಖಾಸಗಿ ವೃದ್ಧಾಶ್ರಮಗಳು ಕೇವಲ ಸೇವಾ ಮನೋಭಾವದಿಂದ ನಡೆಯುತ್ತಿಲ್ಲ. ಅನುಕೂಲಸ್ಥ ವೃದ್ಧರನ್ನು ಗುರಿಯಾಗಿಸಿಕೊಂಡು, ಅವರಿಗೆ ಐಷರಾಮಿ ಸೌಲಭ್ಯಗಳನ್ನು ನೀಡುವ ಸೋಗಿನಲ್ಲಿ ಅವರ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ಲೂಟಿ ಮಾಡುವ ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿದೆ.

ಆಸ್ತಿ, ಹಣ ಇರುವವರೆಗೆ ವೃದ್ಧರಿಗೆ ರಾಜಾತಿಥ್ಯ ಸಿಗುತ್ತದೆ. ಒಮ್ಮೆ ಆಸ್ತಿ ಇವರ ಹೆಸರಿಗೆ ವರ್ಗಾವಣೆಯಾಯಿತೋ ಅಥವಾ ಹಣ ಖಾಲಿಯಾಯಿತೋ, ಅಲ್ಲಿಂದ ವೃದ್ಧರ ದುರಂತ ಅಂತ್ಯ ಶುರುವಾಗುತ್ತದೆ. ಇಂತಹ ಸೂಕ್ಷ್ಮ ನೋವುಗಳನ್ನು, ಒಳಸಂಚುಗಳನ್ನು ಇವತ್ತಿನ ಯಾವ ಮಾಧ್ಯಮಗಳೂ ವರದಿ ಮಾಡುತ್ತಿಲ್ಲ, ಇವುಗಳ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತಲೇ ಇಲ್ಲ. ಆಸ್ತಿಯಿದ್ದರೂ ನೆಮ್ಮದಿಯಿಲ್ಲ, ಆಸ್ತಿ ಇಲ್ಲದಿದ್ದರೆ ಬದುಕೇ ದುರ್ಭರ ಎನ್ನುವಂತಾಗಿದೆ. ಇದು ನಮ್ಮ ‘ಸಾಂಸ್ಕೃತಿಕ ಕುಸಿತ’ಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮಕ್ಕಳ ದೌರ್ಜನ್ಯದ ವಿರುದ್ಧ ಹಿರಿಯರಿಗಿರುವ ಕಾನೂನು ಅಸ್ತ್ರಗಳು:

ಇಂತಹ ದುಸ್ಥಿತಿಯಲ್ಲಿರುವ ವೃದ್ಧರ ರಕ್ಷಣೆಗೆ ಭಾರತೀಯ ಕಾನೂನಿನಲ್ಲಿ ಅತ್ಯಂತ ಬಲಿಷ್ಠವಾದ ಕಾಯಿದೆಗಳಿವೆ. ಪ್ರತಿಯೊಬ್ಬ ವೃದ್ಧರಿಗೂ ಇದರ ಪ್ರಾಥಮಿಕ ಜ್ಞಾನ ಇರುವುದು ಇಂದಿನ ತುರ್ತು ಅಗತ್ಯವಾಗಿದೆ.

1. ದಾನಪತ್ರ ರದ್ದತಿ: ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

ಹಲವು ಬಾರಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಬಕ್ಷೀಸ್ (ದಾನ) ಪತ್ರದ ಮೂಲಕ ವರ್ಗಾಯಿಸುತ್ತಾರೆ. ಆಸ್ತಿ ಕೈ ಸೇರಿದ ಮೇಲೆ ಮಗ-ಮಗಳು ಹೆತ್ತವರನ್ನು ಬೀದಿಗೆ ದೂಡುತ್ತಾರೆ. ಇಂತಹ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟು ‘ವೆಂಕಟಯ್ಯ ವರ್ಸಸ್ ಕರ್ನಾಟಕ ಸರಕಾರ’ ಎಂಬ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ: “ದಾನಪತ್ರದಲ್ಲಿ ‘ವೃದ್ಧಾಪ್ಯದಲ್ಲಿ ಹೆತ್ತವರನ್ನು ನೋಡಿಕೊಳ್ಳಬೇಕು’ ಎಂಬ ಶರತ್ತನ್ನು ಬರೆಯದಿದ್ದರೂ, ವೃದ್ಧಾಪ್ಯದಲ್ಲಿ ಅವರು ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದಲೇ ದಾನ ನೀಡಲಾಗಿದೆ ಎಂದು ಊಹಿಸಬೇಕಾಗುತ್ತದೆ. ಆಸ್ತಿ ಪಡೆದ ನಂತರ ತಂದೆಯನ್ನು ನಿರ್ಲಕ್ಷಿಸಿದರೆ 2007ರ ಕಾಯಿದೆಯ 23ನೇ ಕಲಮಿನನ್ವಯ ಆ ಆಸ್ತಿ ವರ್ಗಾವಣೆಯನ್ನು ಮೋಸ ಅಥವಾ ಒತ್ತಾಯದಿಂದ ಬರೆಸಿಕೊಳ್ಳಲಾಗಿದೆ ಎಂದು ಪರಿಗಣಿಸಿ ರದ್ದುಪಡಿಸಬಹುದು.”

2. ತಾಯಿ-ತಂದೆಯರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಯೋಗಕ್ಷೇಮ ಕಾಯಿದೆ, 2007

ಪಾಲನೆಯ ಜವಾಬ್ದಾರಿ (ಕಲಮು 4): ಆರ್ಥಿಕ ಮೂಲವಿಲ್ಲದ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯರನ್ನು ಪೋಷಿಸುವುದು ಮಕ್ಕಳ ಅಥವಾ ಮೊಮ್ಮಕ್ಕಳ ಜವಾಬ್ದಾರಿ. ಪಾಲನೆ ಎಂದರೆ ಕೇವಲ ದುಡ್ಡಲ್ಲ; ಆಹಾರ, ಬಟ್ಟೆ, ವಸತಿ ಮತ್ತು ವೈದ್ಯಕೀಯ ವೆಚ್ಚಗಳೂ ಸೇರಿವೆ.

ತ್ವರಿತ ಅರ್ಜಿ ಸಲ್ಲಿಕೆ (ಕಲಮು 5): ಹಿರಿಯ ನಾಗರಿಕರು ಜೀವನಾಂಶಕ್ಕಾಗಿ ಉಪ-ವಿಭಾಗೀಯ ಅಧಿಕಾರಿಗಳು (AC) ಅಧ್ಯಕ್ಷರಾಗಿರುವ ಟ್ರಿಬ್ಯೂನಲ್‌ಗೆ ವಕೀಲರ ಹಂಗಿಲ್ಲದೆ ಸರಳ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಬಂದ 90 ದಿನಗಳ ಒಳಗಾಗಿ ಟ್ರಿಬ್ಯೂನಲ್ ತೀರ್ಪು ನೀಡಬೇಕು. ಕೋರ್ಟ್ ಸ್ವಯಂ ಪ್ರೇರಿತವಾಗಿಯೂ (Suo-moto) ಈ ಪ್ರಕರಣ ದಾಖಲಿಸಿಕೊಳ್ಳಬಹುದು.

ಶಿಕ್ಷೆಯ ಪ್ರಮಾಣ (ಕಲಮು 24): ತಂದೆ-ತಾಯಿಯರನ್ನು ಪರಿತ್ಯಜಿಸುವ ಮಕ್ಕಳಿಗೆ ಭಾರಿ ದಂಡ ಮತ್ತು 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಟ್ರಿಬ್ಯೂನಲ್ ನೀಡುವ ಆದೇಶಗಳಿಗೆ ತಡೆ (Injunction) ನೀಡುವ ಅಧಿಕಾರ ಸಿವಿಲ್ ಕೋರ್ಟ್‌ಗಳಿಗೆ ಇರುವುದಿಲ್ಲ.

3. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS-2023) / ಸಿಆರ್‌ಪಿಸಿ 125

ಹೊಸ ಕಾನೂನಾದ ಬಿಎನ್‌ಎಸ್ಎಸ್-2023ರ 144ನೇ ಕಲಮಿನನ್ವಯ ಹೆತ್ತವರನ್ನು ನೋಡಿಕೊಳ್ಳದಿದ್ದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮಕ್ಕಳಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಆದೇಶಿಸುತ್ತದೆ. ತಪ್ಪಿದರೆ ಜೈಲು ಶಿಕ್ಷೆ ಗ್ಯಾರಂಟಿ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ (ವಿಜಯ ಮನೋಹರ ಅರ್ಬತ್ ವರ್ಸಸ್ ಕಾಶಿ ರಾವ್ ರಾಜಾರಾಮ್ ಸಹಾಯ್), ಸ್ವತಂತ್ರ ಆದಾಯವಿರುವ ವಿವಾಹಿತ ಹೆಣ್ಣು ಮಕ್ಕಳಿಗೂ ಈ ಜವಾಬ್ದಾರಿ ಅನ್ವಯಿಸುತ್ತದೆ. ಇದು ಎಲ್ಲಾ ಧರ್ಮದವರಿಗೂ ಸಮಾನವಾಗಿದೆ.

4. ಹಿಂದೂ ದತ್ತಕ ಮತ್ತು ಪಾಲನಾ ಕಾಯಿದೆ 1956 (HAMA)

ಈ ಕಾಯಿದೆಯ ಕಲಮು 20, 21 ಮತ್ತು 23ರ ಅಡಿಯಲ್ಲಿ ಅಶಕ್ತ ತಾಯಿ-ತಂದೆಯರನ್ನು ಒಟ್ಟಿಗೆ ಇಟ್ಟುಕೊಳ್ಳದಿದ್ದಾಗ, ಅವರ ಸ್ಥಾನಮಾನ ಮತ್ತು ಮಕ್ಕಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಕೋರ್ಟ್ ಜೀವನಾಂಶದ ಆದೇಶ ನೀಡುತ್ತದೆ. ಆದರೆ, 2007ರ ಹಿರಿಯ ನಾಗರಿಕರ ಕಾಯಿದೆಯೇ ಅತ್ಯಂತ ತ್ವರಿತ ಮತ್ತು ಉಚಿತ ಪರಿಹಾರ ನೀಡುತ್ತದೆ.

ಶಾಶ್ವತ ಪರಿಹಾರವೇನು? ಸರಕಾರದ ಯೋಜಿತ ವೃದ್ಧಾಶ್ರಮಗಳ ತುರ್ತು ಅಗತ್ಯ

ಖಾಸಗಿ ವೃದ್ಧಾಶ್ರಮಗಳ ದಂಧೆಗೆ ಮತ್ತು ಹೆತ್ತವರ ಈ ಎಲ್ಲಾ ಆತಂಕಗಳಿಗೆ ಮುಕ್ತಿ ಹಾಡಬೇಕಾದರೆ ಸರಕಾರವೇ ಒಂದು ಮಾದರಿ ಯೋಜಿತ ವೃದ್ಧಾಶ್ರಮ ವ್ಯವಸ್ಥೆಯನ್ನು (Government Managed Senior Citizen Housing Project) ಜಾರಿಗೆ ತರಬೇಕಾಗಿದೆ.

1. ಸರಕಾರಿ ಉಸ್ತುವಾರಿ (ಕಲಮು 19): ಪ್ರತಿಯೊಂದು ಜಿಲ್ಲೆಯಲ್ಲೂ ಸರಕಾರವೇ ನೇರವಾಗಿ ಅತ್ಯಾಧುನಿಕ, ಸುಸಜ್ಜಿತ ವೃದ್ಧಾಶ್ರಮಗಳನ್ನು ನಿರ್ಮಿಸಿ ನಿರ್ವಹಿಸಬೇಕು. ಅಲ್ಲಿ ಖಾಸಗಿಯವರ ಆಸ್ತಿ ಲೂಟಿಯ ದಂಧೆಗೆ ಬ್ರೇಕ್ ಬೀಳುತ್ತದೆ.

2. ಆಸ್ತಿ ಮತ್ತು ಸುರಕ್ಷತೆಯ ಗ್ಯಾರಂಟಿ: ವೃದ್ಧರ ಆಸ್ತಿಯನ್ನು ಸರಕಾರದ ವಶದಲ್ಲಿಟ್ಟುಕೊಂಡು, ಅದರ ಆದಾಯದಲ್ಲೇ ಅವರ ಜೀವಿತಾವಧಿಯವರೆಗೆ ರಾಜಮರ್ಯಾದೆಯ ಊಟ, ವಸತಿ, ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು (ಕಲಮು 20ರ ಅನ್ವಯ ಸರಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಹಾಗೂ ಪ್ರತ್ಯೇಕ ಪಾಳಿ ವ್ಯವಸ್ಥೆ) ಸರಕಾರವೇ ನೀಡಬೇಕು.

3. ಸಮಾನ ಗೌರವ: ಆಸ್ತಿ ಇದ್ದವರಿಗೂ, ಇಲ್ಲದ ಬಡ ವೃದ್ಧರಿಗೂ ಸಮಾನವಾಗಿ ಪ್ರೀತಿ ಮತ್ತು ಗೌರವ ಸಿಗುವಂತಹ ವಾತಾವರಣವನ್ನು ಸರಕಾರಿ ಕೇಂದ್ರಗಳು ನಿರ್ಮಿಸಿದರೆ ಬಹುತೇಕ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ.

4. ಉಚಿತ ಸಹಾಯವಾಣಿ: ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಹಿರಿಯ ನಾಗರಿಕರ ಸಹಾಯಕ್ಕಾಗಿ 14567 ಎಂಬ ಉಚಿತ ಸಹಾಯವಾಣಿಯನ್ನು (Helpline) ತೆರೆದಿದ್ದು, ಇದರ ಮೂಲಕ ವೃದ್ಧರು ತಮಗಾಗುವ ಅನ್ಯಾಯದ ವಿರುದ್ಧ ನೆರವು ಪಡೆಯಬಹುದು.

ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಲ್ಲದ ಸಂಬಂಧಿಕರನ್ನೂ ಪ್ರೀತಿಯಿಂದ ಸಾಕಿ ಕೊನೆಯ ಕಾಲದ ಕರ್ತವ್ಯ ಮುಗಿಸುತ್ತಿದ್ದ ಉದಾತ್ತ ಸಂಸ್ಕೃತಿ ನಮ್ಮದಾಗಿತ್ತು. ಜೀವನಾಂಶ ಕೇಳಲು, ಆಸ್ತಿ ವಾಪಸ್ ಪಡೆಯಲು ಇಂದು ಕಾನೂನು, ಕೋರ್ಟುಗಳಿವೆ. ಆದರೆ ಪ್ರೀತಿ, ಕಾಳಜಿ, ಗೌರವಗಳ ಕೊರತೆಗೆ ಕಾನೂನಿನ ಬಳಿ ಉತ್ತರವಿಲ್ಲ. ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಯಿಸುವ ಇಂತಹ ಮಕ್ಕಳನ್ನು ಸಮಾಜ ಮುಕ್ತವಾಗಿ ಬಹಿಷ್ಕರಿಸಬೇಕು. ಅವರಿಗೆ ಯಾವ ವೇದಿಕೆಯಲ್ಲಿಯೂ ಸ್ಥಾನಮಾನ ನೀಡಬಾರದು.

ಕೆಲ ವರ್ಷಗಳ ಹಿಂದೆ ವೃದ್ಧಾಶ್ರಮವೊಂದರ ಉದ್ಘಾಟನೆಯಲ್ಲಿ ಹಿರಿಯರೊಬ್ಬರು, “ಈ ವೃದ್ಧಾಶ್ರಮ ಸದಾ ಖಾಲಿ ಇರಲಿ” ಎಂದು ಹಾರೈಸಿದ್ದು ಅತ್ಯಂತ ಮಾರ್ಮಿಕವಾಗಿತ್ತು. ಹಿರಿಯರ ಹಿತರಕ್ಷಣೆಯ ಕಾನೂನುಗಳ ಬಗ್ಗೆ ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕಾಗಿದೆ. ಹೆತ್ತವರನ್ನು ದೇವರೆಂದು ಭಾವಿಸುವ ನಮ್ಮ ದೇಶದಲ್ಲಿ, ಇಂತಹ ಕಾಯಿದೆಗಳನ್ನು ಬಳಸುವ ಸಂದರ್ಭವೇ ಬಾರದಿರಲಿ ಎಂದು ಆಶಿಸೋಣ

Continue Reading

Trending

Copyright © 2025 Deevatige

error: Content is protected !!