accident
Breaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
ಬಂಟ್ವಾಳ: ಇಲ್ಲಿನ ಬರಿಮಾರು ಸಮೀಪದ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಸಂಜೆ ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ದುರಂತವಾಗಿ ಕೊನೆಯುಸಿರೆಳೆದಿದ್ದಾರೆ.

ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೇಟಿ ಎಂಬಲ್ಲಿನ ಶ್ರೀ ಕಾನಲ್ತಾಯ ದೈವಸ್ಥಾನ ದ ಬದಿಯ ಮರವೊಂದು ಚಲಿಸುತ್ತಿದ್ದ ಶಾಲಾ ವಾಹನದ ಮೇಲೆ ಬಿದ್ದು, ಸುಮಾರು 5 ವರ್ಷ ಪ್ರಾಯದ ಚಿರನ್ವಿ ಎಂಬ ಹೆಣ್ಣು ಮಗು ಮೃತ ಪಟ್ಟು, 4 ಜನ ಮಕ್ಕಳಿಗೆ ಗಾಯಗೊಂಡಿರುವುದಾಗಿ ತಿಳಿದುಬಂದಿದ್ದು, ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರಾಥಮಿಕ ತನಿಖೆ ಯಿಂದ ತಿಳಿದು ಬಂದಿರುತ್ತದೆ.
ಚಿರನ್ವಿ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಕಡಂಬು ನೆಕ್ಕರೆ ನಿವಾಸಿ ( ಬಿಳಿಯೂರು ತೋಟ) ಚಂದ್ರಶೇಖರ್ ನಾಯ್ಕ ಮತ್ತು ಅನಿತಾ ದಂಪತಿಯ ಏಕೈಕ ಪುತ್ರಿ. ಯು. ಕೆಜಿ ವಿದ್ಯಾರ್ಥಿನಿಯಾಗಿದ್ದಳು.
ಶಾಲೆ ಮುಗಿಸಿ ವಿದ್ಯಾರ್ಥಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಹಲವು ಮಕ್ಕಳು ಗಾಯಗೊಂಡಿದ್ದಾರೆ.

ಮುಗಿಲುಮುಟ್ಟಿದ ಆಕ್ರಂದನ
ಸಂಜೆ ವೇಳೆ ಗಾಳಿ-ಮಳೆಯ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ದಿಢೀರನೆ ಬಸ್‌ನ ಮೇಲೆ ಬಿದ್ದಿದೆ. ಪರಿಣಾಮ ಬಸ್‌ನ ಮುಂಭಾಗ ಮತ್ತು ಮೇಲ್ಛಾವಣಿ ಸಂಪೂರ್ಣ ಜಜ್ಜುಗುಜ್ಜಾಗಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಬಸ್‌ನಲ್ಲಿದ್ದ ಮಕ್ಕಳನ್ನು ಹೊರತೆಗೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ
ಘಟನೆಯಲ್ಲಿ ಗಾಯಗೊಂಡ ಉಳಿದ ವಿದ್ಯಾರ್ಥಿಗಳನ್ನು ಸ್ಥಳೀಯರ ಹಾಗೂ ತುರ್ತು ವಾಹನಗಳ ನೆರವಿನಿಂದ ಪುತ್ತೂರು ಮತ್ತು ತುಂಬೆಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ತನಿಖೆ ಚುರುಕು
ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವ ಕಾರ್ಯ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ವಿದ್ಯಾರ್ಥಿಯ ದುರಂತ ಸಾವು ಕಲ್ಲಡ್ಕ ಶ್ರೀರಾಮ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಇಡೀ ಬಂಟ್ವಾಳ ತಾಲೂಕಿನಲ್ಲಿ ತೀವ್ರ ಶೋಕದ ವಾತಾವರಣವನ್ನು ಸೃಷ್ಟಿಸಿದೆ.
ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಬಸ್‌ನೊಳಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ ಮಳೆ ಮತ್ತು ಬಿರುಗಾಳಿಯ ಪರಿಣಾಮ ಮರ ಉರುಳಿ ಬಿದ್ದಿರುವ ಮಾಹಿತಿ ತಿಳಿದು ಬಂದಿದೆ.

ಬೃಹತ್ ಗಾತ್ರದ ಆಲದ ಮರ ಬಿದ್ದು 5 ವರ್ಷದ ವಿದ್ಯಾರ್ಥಿನಿ ಚಿರಣ್ವಿ ಮೃತಪಟ್ಟ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದ. ಕ. ಜಿಲ್ಲಾಧಿಕಾರಿ ದರ್ಶನ್, ಮತ್ತು ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ಅವರು ಭೇಟಿ ನೀಡಿದರು.
ಸಂತಾಪ ಸಂದೇಶ
‘ಧೀರ್ಘಾಯುಷಿ’ ಎಂಬ ಸುಂದರ ಅರ್ಥವನ್ನು ತನ್ನ ಹೆಸರಿನಲ್ಲೇ ಹೊತ್ತು ಬಂದಿದ್ದ ಮುಗ್ಧ ಕಂದಮ್ಮ ಚಿರನ್ವಿ, ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಕಾಲಿಕವಾಗಿ ಇಹಲೋಕ ತ್ಯಜಿಸಿರುವುದು ಅತ್ಯಂತ ಕರುಣಾಜನಕ ಹಾಗೂ ಹೃದಯವಿದ್ರಾವಕ. ಹೆಸರಿಗೆ ತಕ್ಕಂತೆ ಹಸನ್ಮುಖಿಯಾಗಿ ನೂರಾರು ಕಾಲ ಬಾಳಬೇಕಿದ್ದ ಮಗು, ಅಲ್ಪಾಯುಷ್ಯದಲ್ಲೇ ಎಲ್ಲರನ್ನೂ ಅಗಲಿ ಹೋಗಿರುವುದು ಸರಿಪಡಿಸಲಾಗದ ಶೂನ್ಯವನ್ನು ಸೃಷ್ಟಿಸಿದೆ. ಅಗಲಿದ ಆ ಪವಿತ್ರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ. ಮಗಳನ್ನು ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿರುವ ಅವಳ ಪೋಷಕರಿಗೆ ಹಾಗೂ ಕುಟುಂಬಸ್ಥರಿಗೆ ಈ ಭೀಕರ ದುಃಖ ಮತ್ತು ಅಗಲಿಕೆಯ ನೋವನ್ನು ತಡೆಯುವ ಅಪಾರ ಶಕ್ತಿಯನ್ನು ಆ ಭಗವಂತನು ನೀಡಲೆಂದು ನಮ್ಮ ದೀವಟಿಗೆ ಡಿಜಿಟಲ್ ಮಾಧ್ಯಮದ ಪರವಾಗಿ ಭಾವಪೂರ್ಣ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ.
accident
ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ
ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.
ತನಿಖೆಗೆ ಆದೇಶ – ಹಾರಾಟ ಸ್ಥಗಿತ:
ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ
accident
ಕುಂದಾಪುರ: ಬಟ್ಟೆ ಒಗೆಯಲು ತೆರಳಿದ್ದ ಇಬ್ಬರು ಶಾಲಾ ಬಾಲಕಿಯರು ಕೆರೆಗೆ ಬಿದ್ದು ದುರಂತ ಸಾವು
ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಶಾಲಾ ಬಾಲಕಿಯರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸಮೀಪದ ಕೊಪ್ಪರಿಗೆ ಗುಡ್ಡೆ ಕಡುಬಿನ ಕೆರೆಯಲ್ಲಿ ಭಾನುವಾರ ಸಂಭವಿಸಿದೆ.
ಮೃತರನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಮುದ್ದಿನಕೊಪ್ಪ ಮೂಲದ, ಪ್ರಸ್ತುತ ಮುಳ್ಳಿಕಟ್ಟೆ ಟೆಂಟ್ ಹೌಸ್‌ನಲ್ಲಿ ವಾಸವಾಗಿದ್ದ ಚಂದ್ರು ಬಸವರಾಜ ವೇಷಗಾರ ಎಂಬುವರ ಪುತ್ರಿ ಸುನೀತಾ (13) ಹಾಗೂ ಅವರ ಸಂಬಂಧಿ ದಿ. ಮಂಜುನಾಥ್ ಅವರ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಮೃತ ಬಾಲಕಿಯರಿಬ್ಬರೂ ಹೊಸಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಘಟನೆಯ ವಿವರ: ಭಾನುವಾರ ಸಂಜೆ ಟೆಂಟ್ ಹೌಸ್ ನಿವಾಸಿಗಳಾದ 5 ಮಕ್ಕಳು ಬಟ್ಟೆ ತೊಳೆಯಲು ಕೊಪ್ಪರಿಗೆ ಗುಡ್ಡೆಯ ಕಡುಬಿನ ಕೆರೆಗೆ ತೆರಳಿದ್ದರು. ಕೆರೆಯ ದಡದಲ್ಲಿ ಸುನೀತಾ ಹಾಗೂ ವೈಶಾಲಿ ಬಟ್ಟೆ ಒಗೆಯುತ್ತಿದ್ದಾಗ, ಸುನೀತಾ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಈ ವೇಳೆ ಆಕೆಯನ್ನು ರಕ್ಷಿಸಲು ಯತ್ನಿಸಿದ ವೈಶಾಲಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಜೊತೆಯಲ್ಲಿದ್ದ ಇತರ ಮಕ್ಕಳು ಕೂಡಲೇ ವಿಷಯ ತಿಳಿಸಿದ್ದು, ಪಾಲಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ನೇತೃತ್ವದಲ್ಲಿ ಶೋಧ ಕಾರ್ಯ ನಡೆಸಿ, ಸಂಜೆ 5.15ರ ಅಂದಾಜಿಗೆ ಇಬ್ಬರೂ ಬಾಲಕಿಯರ ಮೃತದೇಹಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು.
ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸರು ಶವ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಮೃತ ಸುನೀತಾಳ ತಂದೆ ನೀಡಿದ ದೂರಿನನ್ವಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
accident
ಕೋಟ: ಸೈಕಲ್‌ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ
ಕೋಟ: ಸೈಕಲ್‌ಗೆ ಕಾರು ಡಿಕ್ಕಿ – RSS ಮುಖಂಡ ಸ್ಥಳದಲ್ಲೇ ಸಾವು, ಕಾರು ಚಾಲಕನಿಗೆ ಗಂಭೀರ ಗಾಯ
ಕೋಟ: ರಾಷ್ಟ್ರೀಯ ಹೆದ್ದಾರಿ 66ರ ಕೋಟ ಜಂಕ್ಷನ್‌ನಲ್ಲಿ ಸೋಮವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿಯಾದ ಪರಿಣಾಮ ಸೈಕಲ್ ಸವಾರ, ಸ್ಥಳೀಯ RSS ಮುಖಂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರು ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಕೋಟ ಮಣೂರು ನಿವಾಸಿ, ಆರ್‌ಎಸ್‌ಎಸ್ ಮುಖಂಡ ಗುರುದಾಸ್ ಶೆಣೈ ಮೃತಪಟ್ಟವರು. ಕೋಟೇಶ್ವರದ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಗಂಭೀರ ಗಾಯಗೊಂಡ ಕಾರು ಚಾಲಕ ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ಗುರುದಾಸ್ ಶೆಣೈ ಅವರು ಕೋಟ ಜಂಕ್ಷನ್ ಬಳಿ ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದಾಗ, ಉಡುಪಿ ಕಡೆಯಿಂದ ಕುಂದಾಪುರದತ್ತ ಅತಿವೇಗವಾಗಿ ಧಾವಿಸಿ ಬಂದ ಕಾರು ಸೈಕಲ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭರಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇತ್ತ ಸೈಕಲ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಗುರುದಾಸ್ ಶೆಣೈ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಚಾಲಕ ಪ್ರದೀಪ್ ಕಾಂಚನ್ ಅವರಿಗೂ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 months agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
