Connect with us

court

ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ: ಮನೀಷ್‌ಗೆ ಹೈಕೋರ್ಟ್‌ನಿಂದ ಬೇಲ್

Published

on

ಪುತ್ತೂರು, ಜು. 26: ಬಹುಚರ್ಚಿತ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮನೀಷ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಜಸ್ಟಿಸ್ ವಿಶ್ವಜಿತ್ ಶೆಟ್ಟಿ ಅವರು ಎರಡೂ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ಬಳಿಕ, ನಿಗದಿತ ಷರತ್ತುಗಳೊಂದಿಗೆ ಜಾಮೀನು ನೀಡುವಂತೆ ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶದಲ್ಲಿ ಜಾಮೀನು ಮಂಜೂರು ಮಾಡಿರುವುದು ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿದಂತಲ್ಲ. ಪ್ರಕರಣದ ಅಂತಿಮ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿಗೆ ಕಾನೂನುಬದ್ಧ ಹಕ್ಕುಗಳ ಅನ್ವಯ ನ್ಯಾಯಯುತ ಅವಕಾಶ ದೊರಕಬೇಕು ಎಂಬ ಸಂವಿಧಾನಾತ್ಮಕ ತತ್ವದ ಆಧಾರದ ಮೇಲೆ ಜಾಮೀನು ನೀಡಲಾಗಿದೆ.

ಹೈಕೋರ್ಟ್‌ನ ಆದೇಶವನ್ನು ಮನೀಷ್ ಕುಟುಂಬಸ್ಥರು ಹಾಗೂ ಆಪ್ತರು ಸ್ವಾಗತಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯ ನ್ಯಾಯಾಲಯದ ಮುಂದೆ ಹೊರಬಂದು ಅಂತಿಮವಾಗಿ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ನ್ಯಾಯಾಲಯ ವಿಧಿಸಿರುವ ಎಲ್ಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಗಮನ ಸೆಳೆದಿರುವ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಈ ಜಾಮೀನು ಆದೇಶವು ಮುಂದಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯದ ವಿಚಾರಣೆ ಬಳಿಕವೇ ಹೊರಬರಲಿದ್ದು, ಅದರತ್ತ ಎಲ್ಲರ ಗಮನ ನೆಟ್ಟಿದೆ.

2023 ನವೆಂಬರ್‌ 6ರಂದು ಅಕ್ಷಯ್‌ ಕಲ್ಲೇಗ ಅವರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಕೊಲೆಯಾದ ಅಕ್ಷಯ್‌ ಕಲ್ಲೇಗ ಅವರ ಗೆಳೆಯರೇ ಈ ಕೃತ್ಯ ಎಸಗಿದ್ದಾರೆಂದು ಈ ಪ್ರಕರಣದಲ್ಲಿ ಮನೀಷ್‌, ಚೇತನ್‌, ಮಂಜುನಾಥ್‌ ಮತ್ತು ಕೇಶವ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Belthangady

ಬಂಗ್ಲೆಗುಡ್ಡೆ ಅಸ್ಥಿಪಂಜರ ರಹಸ್ಯ ಭೇದಿಸಿದ ಎಸ್‌ಐಟಿ: ಮೂವರ ಡಿಎನ್‌ಎ ಕುಟುಂಬದ ಮಾದರಿಗೆ ತಾಳೆ, ಎಫ್‌ಎಸ್‌ಎಲ್ ದೃಢೀಕರಣ!

Published

on

ಬೆಳ್ತಂಗಡಿ: ತಾಲೂಕಿನ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಅಸ್ಥಿಪಂಜರಗಳ ತನಿಖೆಯಲ್ಲಿ ವಿಶೇಷ ತನಿಖಾ ತಂಡಕ್ಕೆ (SIT) ಪ್ರಮುಖ ಮೈಲಿಗಲ್ಲು ಸಿಕ್ಕಿದೆ. ಪತ್ತೆಯಾಗಿದ್ದ ಅಸ್ಥಿಪಂಜರಗಳ ಪೈಕಿ ಒಟ್ಟು ಮೂರು ವ್ಯಕ್ತಿಗಳ ಡಿಎನ್‌ಎ (DNA) ಮಾದರಿಯು ಅವರ ಕುಟುಂಬಸ್ಥರ ರಕ್ತದ ಮಾದರಿಗೆ ಸಂಪೂರ್ಣವಾಗಿ ತಾಳೆಯಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ (FSL) ದೃಢಪಡಿಸಿದೆ.

ಈ ಕುರಿತು ಎಸ್‌ಐಟಿ ಅಧಿಕಾರಿಗಳು ಜುಲೈ 15 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಪ್ರಮುಖ ವಿಚಾರವನ್ನು ಉಲ್ಲೇಖಿಸಿದ್ದಾರೆ.

ಶೋಧ ಕಾರ್ಯಾಚರಣೆ ಮತ್ತು ಗುರುತಿನ ಪತ್ತೆ

2025ರ ಸೆಪ್ಟೆಂಬರ್ 17 ಮತ್ತು 18 ರಂದು ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆಯಲ್ಲಿ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿ, ಒಟ್ಟು ಏಳು ಅಸ್ಥಿಪಂಜರಗಳನ್ನು ವಶಪಡಿಸಿಕೊಂಡು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು.

ಅಸ್ಥಿಪಂಜರಗಳು ಪತ್ತೆಯಾದ ಸ್ಥಳದಲ್ಲಿ ಸಿಕ್ಕಿದ್ದ ಕೆಲವು ಗುರುತಿನ ಚೀಟಿಗಳ (ID Cards) ಆಧಾರದ ಮೇಲೆ ಎಸ್‌ಐಟಿ ತಂಡವು ಸಂಬಂಧಪಟ್ಟ ಕುಟುಂಬಸ್ಥರನ್ನು ಪತ್ತೆಹಚ್ಚಿತ್ತು. ಬಳಿಕ ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದು ಕುಟುಂಬಸ್ಥರ ರಕ್ತದ ಮಾದರಿ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ಬಂದಿರುವ ವೈಜ್ಞಾನಿಕ ವರದಿಯಲ್ಲಿ ಮೂವರ ಡಿಎನ್‌ಎ ಸಂಪೂರ್ಣವಾಗಿ ತಾಳೆಯಾಗಿದೆ.

ಪತ್ತೆಯಾದ ಮೃತರ ವಿವರ ಮತ್ತು ಹಿನ್ನೆಲೆ

ಯು.ಬಿ. ಅಯ್ಯಪ್ಪ (70 ವರ್ಷ): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ. ಇವರು 2017ರ ಜೂನ್ 25ರಂದು ಮೈಸೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾಗ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟ್ಟ ವೃತ್ತದ ಶ್ರೀಮಂಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆದಿಶೇಷ ನಾರಾಯಣ (27 ವರ್ಷ): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ. ಬೆಂಗಳೂರಿನ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ, 2013ರ ಅಕ್ಟೋಬರ್ 2ರಂದು ಮನೆಗೆ ಬಂದು ಮೊಬೈಲ್ ಇಟ್ಟು ಮತ್ತೆ ನಾಪತ್ತೆಯಾಗಿದ್ದ. ಈತ ಪದೇ ಪದೇ ಮನೆಯಿಂದ ತೆರಳಿ ವಾಪಸ್ ಬರುತ್ತಿದ್ದ ಕಾರಣ ಕುಟುಂಬಸ್ಥರು ಠಾಣೆಗೆ ದೂರು ನೀಡಿರಲಿಲ್ಲ.

ಕೃಷ್ಣಪ್ಪ (85 ವರ್ಷ): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ನಿವಾಸಿ. ವಯೋಸಹಜ ಸ್ಥಿತಿಯಲ್ಲಿದ್ದ ಇವರು 2024ರ ಅಕ್ಟೋಬರ್ 22ರಂದು ಏಕಾಏಕಿ ಮನೆಯಿಂದ ಹೊರಹೋಗಿ ವಾಪಸ್ ಬಂದಿರಲಿಲ್ಲ. ಈ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಸ್ಥಿಪಂಜರ ಹಸ್ತಾಂತರಕ್ಕೆ ಕಾನೂನು ಪ್ರಕ್ರಿಯೆ

ಡಿಎನ್‌ಎ ವರದಿ ದೃಢಪಟ್ಟಿರುವ ಹಿನ್ನೆಲೆಯಲ್ಲಿ, ಮೃತರ ಮೂರು ಕುಟುಂಬಗಳ ಸದಸ್ಯರು ಎಸ್‌ಐಟಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದರೆ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಸ್ಥಿಪಂಜರಗಳನ್ನು ಆಯಾ ಕುಟುಂಬಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ಥಳದಲ್ಲಿ ಪತ್ತೆಯಾದ ಇನ್ನುಳಿದ ಅಸ್ಥಿಪಂಜರಗಳ ತನಿಖೆ ಹಾಗೂ ಪ್ರಕರಣದ ಇತರ ಸಂಶಯಾಸ್ಪದ ಆಯಾಮಗಳ ಕುರಿತು ಎಸ್‌ಐಟಿ ಅಧಿಕಾರಿಗಳು ಸುದೀರ್ಘ ಪರಿಶೀಲನೆ ಮುಂದುವರಿಸಿದ್ದಾರೆ.

Continue Reading

Belthangady

ಅಪಾಯಕಾರಿ ಮರದ ಕಾಲುಸಂಕ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಧೀಶರ ಭೇಟಿ: ಶೀಘ್ರ ವರದಿ ನೀಡಲು ಪಂಚಾಯತ್ ಅಧಿಕಾರಿಗೆ ಸೂಚನೆ

Published

on

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಬರೆಮೇಲು ನಡುಗುಡ್ಡೆ ಎಂಬಲ್ಲಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರದ ಕಾಲುಸಂಕದ ಪ್ರದೇಶಕ್ಕೆ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ಮನು ಬಿ.ಕೆ. ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಯಾದ ರಾಮಲಿಂಗಪ್ಪ ಅವರು ಭಾನುವಾರ ಸಂಜೆ ದಿಢೀರ್ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ಕಳೆದ ಬುಧವಾರ ನಡೆದ ಲಾಯಿಲ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ವಿಶೇಷ ಗ್ರಾಮಸಭೆಯಲ್ಲಿ ಈ ಕಾಲುಸಂಕದ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ, ಶುಕ್ರವಾರ ಅಧಿಕಾರಿಗಳ ದಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಇದೀಗ ನ್ಯಾಯಾಧೀಶರುಗಳೇ ಸ್ವತಃ ಸ್ಥಳಕ್ಕೆ ಆಗಮಿಸಿ, ಅಲ್ಲಿನ ಭೀಕರ ಪರಿಸ್ಥಿತಿಯನ್ನು ಖುದ್ದಾಗಿ ವೀಕ್ಷಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಸೋಮವಾರ ಮಧ್ಯಾಹ್ನದೊಳಗೆ ವರದಿಗೆ ಸೂಚನೆ: ಈ ಕಾಲುಸಂಕವನ್ನೇ ನಿತ್ಯ ಅವಲಂಬಿಸಿರುವ ಕುಟುಂಬಗಳ ಸಮಗ್ರ ಮಾಹಿತಿಯೊಂದಿಗೆ, ಈ ವ್ಯಾಪ್ತಿಯಲ್ಲಿರುವ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವಿಶೇಷ ಚೇತನರು ಹಾಗೂ ವಿಧವೆಯರ ಪ್ರತ್ಯೇಕ ಪಟ್ಟಿ ಮತ್ತು ಮಾಹಿತಿಯನ್ನು ಸಂಗ್ರಹಿಸಿ, ಸೋಮವಾರ ಮಧ್ಯಾಹ್ನದೊಳಗೆ ವರದಿ ಸಲ್ಲಿಸುವಂತೆ ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ಹಾಗೂ ಗ್ರಾಮಾಡಳಿತಾಧಿಕಾರಿಗೆ ನ್ಯಾಯಾಧೀಶರು ಸ್ಥಳದಲ್ಲೇ ಖಡಕ್ ಸೂಚನೆ ನೀಡಿದರು.

ವರ್ಷಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿರುವ ಬರೆಮೇಲು ನಡುಗುಡ್ಡೆ ಭಾಗಕ್ಕೆ ನ್ಯಾಯಾಧೀಶರು ಭೇಟಿ ನೀಡಿ ಆಡಳಿತಕ್ಕೆ ನಿರ್ದೇಶನ ನೀಡಿರುವುದರಿಂದ, ಈ ಭಾಗದ ಜನರ ಬಹುಕಾಲದ ಸುಸಜ್ಜಿತ ಸೇತುವೆಯ ಬೇಡಿಕೆ ಶೀಘ್ರವೇ ಈಡೇರಲಿದೆ ಎಂಬ ಆಶಾಭಾವನೆ ಸಾರ್ವಜನಿಕರಲ್ಲಿ ಮೂಡಿದೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆನಂದ, ಉಪ ತಹಶೀಲ್ದಾರ್ ಮಲ್ಲಪ್ಪ ನಡುಗಡ್ಡಿ, ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಸಿಬ್ಬಂದಿ ಯಲ್ಲಪ್ಪ ಹಂಗರಗಿ, ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ್, ಗ್ರಾಮಾಡಳಿತಾಧಿಕಾರಿ ರನಿತಾ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ದಲಿತ ಮುಖಂಡ ಶೇಖರ್ ಲಾಯಿಲ ಹಾಗೂ ಗ್ರಾಮ ಸಹಾಯಕ ಸತೀಶ್ ಹೆಗ್ಡೆ ಉಪಸ್ಥಿತರಿದ್ದರು.

Continue Reading

Belthangady

ಸೌಜನ್ಯ ಪ್ರಕರಣ: ಇದು ಮರು ತನಿಖೆಯಷ್ಟೇ ಅಲ್ಲ, ತನಿಖಾಧಿಕಾರಿಗಳ ಹೊಣೆಗಾರಿಕೆಯ ಪ್ರಶ್ನೆ!

Published

on

ವಿಶೇಷ ವಿಶ್ಲೇಷಣಾ ವರದಿ

ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆ ಹಾಗೂ ಮರು ತನಿಖೆಯ ಸಾಧ್ಯತೆಯ ಬೆಳವಣಿಗೆಗಳು, ಕೇವಲ ಒಂದು ಹಳೆಯ ಕ್ರಿಮಿನಲ್ ಕಡತವನ್ನುಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಯಾಗಬಾರದು. ಇದು ಭಾರತೀಯ ತನಿಖಾ ವ್ಯವಸ್ಥೆಗೆ ತನ್ನ ವಿಶ್ವಾಸಾರ್ಹತೆಯನ್ನು ನಾಗರಿಕ ಸಮಾಜದ ಎದುರು ಸಾಬೀತು ಪಡಿಸುವ ಮತ್ತು ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಅತ್ಯಂತ ಗಂಭೀರ ಸುಸಂದರ್ಭವಾಗಿದೆ.

ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ, ನ್ಯಾಯಾಲಯವು ಸಿಬಿಐ ತನಿಖೆಯ ವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದು, ಹೊಸ ತನಿಖೆಯ ಭರವಸೆ ಮೂಡಿದೆ. ಆದರೆ, ಈ ಹಂತದಲ್ಲಿ ಉದ್ಭವಿಸುವ ಅತ್ಯಂತ ಗಂಭೀರ ಪ್ರಶ್ನೆ ಎಂದರೆ—“ಹಿಂದಿನ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂಬುದನ್ನು ನ್ಯಾಯಾಲಯವೇ ಒಪ್ಪಿಕೊಂಡ ಮೇಲೆ, ಆ ಲೋಪಗಳಿಗೆ ಕಾರಣರಾದ ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಬೇಡವೇ?”

ತನಿಖಾಧಿಕಾರಿಯ ಕರ್ತವ್ಯ ಲೋಪವನ್ನು ತನಿಖೆ ಮಾಡೋರು ಯಾರು?

ಒಬ್ಬ ಸಾಮಾನ್ಯ ನಾಗರಿಕ ಕಾನೂನು ಉಲ್ಲಂಘಿಸಿದರೆ ಅಥವಾ ತಪ್ಪು ಮಾಡಿದರೆ ಆತನ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಒಂದು ಜವಾಬ್ದಾರಿಯುತ ಅಧಿಕಾರವನ್ನು ಹೊಂದಿರುವ ತನಿಖಾಧಿಕಾರಿಯೇ ತನಿಖೆಯಲ್ಲಿ ಗಂಭೀರ ಲೋಪವೆಸಗಿದಾಗ ಈ ತಪ್ಪಿತಸ್ಥಅಧಿಕಾರಿಯ ಕರ್ತವ್ಯಲೋಪವನ್ನು ಪ್ರಶ್ನಿಸುವವರು ಯಾರು ಎಂಬುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆ!

ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ನಡೆಯಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ನ್ಯಾಯಸಮ್ಮತವೋ, ಅಷ್ಟೇ ಪ್ರಾಮುಖ್ಯತೆಯನ್ನು ಈ ಹಿಂದೆ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ಅಧಿಕಾರಿಗಳ ಕರ್ತವ್ಯ ಪರಿಶೀಲನೆಗೂ ನೀಡಬೇಕಾಗಿದೆ. ಮರು ತನಿಖೆ ಎಂದರೆ ಕೇವಲ “ಹೊಸ ಆರೋಪಿಯನ್ನು ಹುಡುಕುವುದು” ಮಾತ್ರವಲ್ಲ; “ಹಿಂದಿನ ತನಿಖೆಗಳು ಏಕೆ ಮತ್ತು ಯಾರಿಂದ ಮತ್ತು ಹೇಗೆ ವಿಫಲವಾದವು?” ಎಂಬುದರ ಸತ್ಯಾಸತ್ಯತೆಯನ್ನು ಹೊರಗೆಳೆಯುವುದೂ ಆಗಿದೆ.

ಮೂರೂ ಹಂತಗಳ ವೈಫಲ್ಯ: ಪ್ರಶ್ನೆಗೆ ಸಿಲುಕಿದ ತನಿಖಾ ಸಂಸ್ಥೆಗಳು

ಈ ಪ್ರಕರಣದಲ್ಲಿ ತನಿಖೆಯು ಮೂರು ಪ್ರಮುಖ ಹಂತಗಳನ್ನು ದಾಟಿ ಬಂದಿದೆ:

  1. ಸ್ಥಳೀಯ ಪೊಲೀಸ್ ತನಿಖೆ (ಜಿಲ್ಲಾ ಮಟ್ಟ)
  2. ರಾಜ್ಯ ಸಿಐಡಿ ತನಿಖೆ (ರಾಜ್ಯ ಸರ್ಕಾರದ ಅಧೀನ)
  3. ಸಿಬಿಐ ತನಿಖೆ (ಕೇಂದ್ರ ಸರ್ಕಾರದ ಅಧೀನ)

ಈ ಮೂರೂ ಹಂತಗಳ ತನಿಖೆಗಳು ಮುಗಿದ ಮೇಲೆಯೂ ಸಮಾಜದಲ್ಲಿ ಮತ್ತು ಸಂತ್ರಸ್ತ ಕುಟುಂಬದಲ್ಲಿ ಸತ್ಯದ ಬಗ್ಗೆ ಅನುಮಾನಗಳು ಇನ್ನೂ ಉಳಿದಿವೆ ಎಂದರೆ, ಪ್ರಶ್ನೆ ಕೇವಲ ಆರೋಪಿಯ ಮೇಲಷ್ಟೇ ಅಲ್ಲ— ಈವರೆಗೆ ತನಿಖೆ ನಡೆಸಿದ ತನಿಖಾಸಂಸ್ಥೆಗಳ ಮೇಲೆ ಹಾಗೂ ಆಡಳಿತ ವ್ಯವಸ್ಥೆಗಳ ಮೇಲೆ ಅಪನಂಬಿಕೆ ಬಂದಿದೆ. ಇದನ್ನು ಹೋಗಲಾಡಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ.

ಅಧಿಕಾರದ ಸರಪಳಿಗಳು ಬೇರೆ ಬೇರೆಯಾಗಿರಬಹುದು; ಆದರೆ ಭಾರತೀಯ ಸಂವಿಧಾನದ ಮುಂದೆ ಪ್ರತಿಯೊಂದು ತನಿಖಾ ಸಂಸ್ಥೆಯ ಕರ್ತವ್ಯವೂ ಒಂದೇ:

  • ಸತ್ಯವನ್ನು ಪತ್ತೆಹಚ್ಚುವುದು
  • ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು
  • ಯಾವುದೇ ಕಾರಣಕ್ಕೂ ನಿರಪರಾಧಿಯನ್ನು ಬಲಿಪಶು ಮಾಡದಿರುವುದು
  • ನಿಜವಾದ ಅಪರಾಧಿಯನ್ನು ಯಾವುದೇ ಪ್ರಭಾವಕ್ಕೂ ಒಳಗಾಗದೆ ರಕ್ಷಿಸದಿರುವುದು

ಈ ಮೂಲಭೂತ ಕರ್ತವ್ಯದಲ್ಲಿ ವಿಫಲವಾಗುವುದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಅದು ಕರ್ತವ್ಯಲೋಪ, ತನಿಖಾ ನಿರ್ಲಕ್ಷ್ಯ, ಸಾಕ್ಷ್ಯ ನಾಶ/ನಿರ್ವಹಣೆಯ ವೈಫಲ್ಯ ಅಥವಾ ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ.

ಹೊಸ ತನಿಖಾ ಸಂಸ್ಥೆಯ ಮುಂದೆ ಇರಬೇಕಾದ ನೈಜ ಆದ್ಯತೆಗಳು

ಒಂದು ವೇಳೆ ಈ ಪ್ರಕರಣದಲ್ಲಿ ಹೊಸದಾಗಿ ವಿಶೇಷ ತನಿಖಾ ತಂಡ ರಚನೆಯಾದರೆ, ಅದರ ಮೊದಲ ಕರ್ತವ್ಯ ಕೇವಲ “ಯಾರು ಅಪರಾಧಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಷ್ಟೇ ಆಗಿರಬಾರದು. ಹಾಗೂ ಪ್ರಕರಣ ದಾರಿತಪ್ಪಲು ಕಾರಣರು ಯಾರು.? ಎಂಬುವುದರ ಪತ್ತೆಗಾಗಿ:

  • ಹಿಂದಿನ ತನಿಖೆಯಲ್ಲಿ ಯಾವ ಅಧಿಕಾರಿಗಳು ಯಾವ ರೀತಿಯ ಕರ್ತವ್ಯ ನಿರ್ವಹಿಸಿದರು?
  • ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಯಾವುದನ್ನು ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಸಂಗ್ರಹಿಸಲಿಲ್ಲ?
  • ಯಾವ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಯಿತು ಹಾಗೂ ಯಾವುದನ್ನು ಕಡೆಗಣಿಸಲಾಯಿತು?
  • ತನಿಖೆಯು ತಪ್ಪು ದಿಕ್ಕಿಗೆ ತಿರುಗಲು ಯಾವ ಅಧಿಕಾರಿಯ ನಿರ್ಧಾರ ಕಾರಣವಾಯಿತು?

ನೂತನ ತನಿಖಾ ಸಂಸ್ಥೆ ಎಂದರೆ ಅದು ಕೇವಲ ಹೆಸರು ಬದಲಾವಣೆ ಎಂದಾಗಬಾರದು. ಅದು ಹಿಂದಿನ ತನಿಖಾ ಲೋಪಗಳ ಮೇಲೆಯೂ ಸ್ವತಂತ್ರವಾಗಿ ಬೆಳಕು ಚೆಲ್ಲುವ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಂಸ್ಥೆಯಾಗಬೇಕು.

ಸಂವಿಧಾನದ ಆಶಯ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷ

ಭಾರತೀಯ ಸಂವಿಧಾನದ ಕಲಂ 14 (ಕಾನೂನಿನ ಮುಂದೆ ಎಲ್ಲರೂ ಸಮಾನ) ಮತ್ತು ಕಲಂ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಯುತ ಪ್ರಕ್ರಿಯೆ ಮತ್ತು ತನಿಖೆಯನ್ನು ಖಾತರಿಪಡಿಸುತ್ತವೆ. ತನಿಖೆಯೇ ಪಕ್ಷಪಾತಪೂರ್ಣವಾಗಿದ್ದರೆ ಅಥವಾ ಗಂಭೀರ ಲೋಪಗಳಿಂದ ಕೂಡಿದ್ದರೆ, ಸಮಗ್ರ ನ್ಯಾಯವ್ಯವಸ್ಥೆಯ ಬುನಾದಿಯೇ ದುರ್ಬಲಗೊಳ್ಳುತ್ತದೆ.

ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ: ತನಿಖಾ ಸಂಸ್ಥೆಗಳು ಇರುವುದು ಯಾರಿಗೆ? ಸರ್ಕಾರಗಳಿಗಾಗಿಯೇ? ಅಧಿಕಾರಿಗಳಿಗಾಗಿಯೇ? ರಾಜಕೀಯ ಪಕ್ಷಗಳಿಗಾಗಿಯೇ? ಅಥವಾ ದೇಶದ ನೊಂದ ಕುಟುಂಬದ ಜನಸಾಮಾನ್ಯರಿಗಾಗಿಯೇ?

ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಪಕ್ಷದ ಬೆಂಬಲಿತರು ಕೇಂದ್ರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಬೆಂಬಲಿತರು ರಾಜ್ಯದ ಅಧೀನ ದಲ್ಲಿರುವ ತನಿಖಾ ಸಂಸ್ಥೆಗಳ ವೈಫಲ್ಯಗಳನ್ನು ಅಥವಾ ಲೋಪಗಳನ್ನು ಸಮರ್ಥಿಸಿಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ಕಾರ ಎಂದರೆ ಒಂದು ರಾಜಕೀಯ ಪಕ್ಷದ ಗೊಂಬೆಯಲ್ಲ; ಅದು ಸಂವಿಧಾನದಡಿಯಲ್ಲಿ ಸರ್ವರಿಗೂ ಸಮಾನ ನ್ಯಾಯ ಒದಗಿಸುವ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ. ಪೊಲೀಸ್ ಅಥವಾ ಯಾವುದೇ ಸರಕಾರಿ ಇಲಾಖೆಯ ಅಧಿಕಾರಿ ಎಂದರೆ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ರಾಜಕೀಯ ಪಕ್ಷಗಳು, ಸರ್ಕಾರಗಳು ಮತ್ತು ಅಧಿಕಾರಿಗಳು ಬದಲಾಗುತ್ತಿರ ಬಹುದು, ಆದರೆ ನ್ಯಾಯದ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ.

ಬೇಕಾಗಿದೆ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ)

ತನಿಖಾಧಿಕಾರಿ ಮಾಡುವ ಒಂದು “ಉದ್ದೇಶಪೂರ್ವಕ ಕರ್ತವ್ಯ ಲೋಪ”ದಿಂದಾಗಿ ಒಬ್ಬ ನಿರಪರಾಧಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು, ನಿಜವಾದ ಅಪರಾಧಿ ಸಮಾಜದಲ್ಲಿ ಮುಕ್ತವಾಗಿ ಓಡಾಡಬಹುದು, ಮತ್ತು ಒಂದು ಬಡ ಕುಟುಂಬ ಜೀವನಪೂರ್ತಿ ನ್ಯಾಯಕ್ಕಾಗಿ ರಸ್ತೆಯಲ್ಲಿ ಅಲೆಯಬೇಕಾಗಬಹುದು. ಆದ್ದರಿಂದ, ಸೌಜನ್ಯ ಪ್ರಕರಣದ ಮರು ತನಿಖೆಯ ಜೊತೆಗೆ ಒಂದು ಸ್ವತಂತ್ರ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ) ಅತ್ಯಗತ್ಯವಾಗಿದೆ.

  • ಒಂದು ಮಗ್ಗಲಿನಲ್ಲಿ: ಅಪರಾಧದ ನೈಜ ತನಿಖೆ (ಅಪರಾಧಿಯನ್ನು ಪತ್ತೆಹಚ್ಚುವುದು).
  • ಮತ್ತೊಂದು ಮಗ್ಗಲಿನಲ್ಲಿ: ಹಿಂದಿನ ತನಿಖೆಗಳ ವೈಫಲ್ಯ ಮತ್ತು ಲೋಪಗಳ ಕುರಿತು ಸ್ವತಂತ್ರ ವಿಚಾರಣೆ.

ಇದು ವೈಯುಕ್ತಿಕ ದ್ವೇಷ ಸಾಧನೆ ಅಲ್ಲ, ಬದಲಾಗಿ “ಕಾನೂನಿಗಿಂತ ಯಾರೂ ಮೇಲಲ್ಲ—ತನಿಖೆಯ ಹೆಸರಿನಲ್ಲಿ ಕರ್ತವ್ಯಲೋಪ ಎಸಗಿದರೆ ಶಿಕ್ಷೆಯನ್ನು ಅನುಭವಿಸಲೇ ಬೇಕು “ ಎಂಬ ಸಂವಿಧಾನದ ಆಶಯವನ್ನು ಸ್ಥಾಪಿಸುವುದಕ್ಕಾಗಿ. ಆಗಿದೆ.

ನ್ಯಾಯದ ಕೊನೆಯ ಭರವಸೆ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ

ಸೌಜನ್ಯಗೆ ನ್ಯಾಯ ಸಿಗಬೇಕಾದರೆ ನಿಜವಾದ ಅಪರಾಧಿ ಯಾರು ಎಂಬುದು ಪತ್ತೆಯಾಗುವುದು ಎಷ್ಟು ಮುಖ್ಯವೋ, ಈ ನ್ಯಾಯವನ್ನು ಹುಡುಕುವ ವ್ಯವಸ್ಥೆಯೇ ಏಕೆ ವಿಫಲವಾಯಿತು ಎಂಬ ಸತ್ಯ ಹೊರಬರುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ, ಇಂದು ಸೌಜನ್ಯ ಪ್ರಕರಣ, ನಾಳೆ ಮತ್ತೊಂದು ಬಡ ಕುಟುಂಬದ ಮಗಳ ಪ್ರಕರಣ—ಮತ್ತೆ ಅದೇ ಕಡತಗಳನ್ನು ತಿರುಚಿ ನೋಡಿ ನಕಲು ಮಾಡುವುದು, ಮುಖವಾಡ ಬದಲಿಸಿದ ಅದೇ ಅಧಿಕಾರಿಗಳು, ಅದೇ ದಾಖಲೆಗಳು ಮತ್ತು ಕೊನೆಗೆ “ಸಾಕ್ಷ್ಯಾಧಾರಗಳ ಕೊರತೆ, ಕೇಸ್‌ ಕ್ಲೋಸ್” ಎಂಬ ಅದೇ ಹಳೆಯ ವ್ಯವಸ್ಥೆಯೇ ಪುನರಾವರ್ತನೆಯಾಗುತ್ತಲೇ ಇರುತ್ತದೆ ಎಂಬುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ನೋವಿನ ಮಾತುಗಳು.

ಸುಪ್ರೀಂ ಕೋರ್ಟ್‌ನ ಈ ಇತ್ತೀಚಿನ ಮಧ್ಯಪ್ರವೇಶವು ದೇಶದ ನ್ಯಾಯವ್ಯವಸ್ಥೆಗೆ ಸಿಕ್ಕಿರುವ ಒಂದು ಐತಿಹಾಸಿಕ ಅವಕಾಶವಾಗಿದೆ. ಈ ಅವಕಾಶವನ್ನು ಕೇವಲ ಒಂದು ಪ್ರಕರಣದ ಮರು ತನಿಖೆಗೆ ಸೀಮಿತಗೊಳಿಸದೆ, ಭಾರತದಲ್ಲಿ ತನಿಖಾ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಹೊಸ ಮಾನದಂಡವನ್ನು ಸ್ಥಾಪಿಸಲು ಬಳಸಿಕೊಳ್ಳಬೇಕಿದೆ.

ಸೌಜನ್ಯಗೆ ನ್ಯಾಯ ಸಿಗಬೇಕು, ಸತ್ಯಕ್ಕೆ ಜಯವಾಗಬೇಕು ಮತ್ತು ತನಿಖಾ ವೈಫಲ್ಯವೆಸಗಿದ ವ್ಯವಸ್ಥೆಯೂ ನ್ಯಾಯದ ಮುಂದೆ ತಲೆಬಾಗಲೇಬೇಕು.

Continue Reading

Trending

Copyright © 2025 Deevatige

error: Content is protected !!