karavali
ತುಳುನಾಡಿನ ಅಸ್ಮಿತೆಯ ಬೇರು: ಸಂಪ್ರದಾಯದ ಜೀವನಾಡಿ ಈ ‘ಕುಟುಂಬದ ಮನೆ’
“ತುಳುನಾಡಿನಲ್ಲಿ ಕುಟುಂಬದ ಮನೆ ಇಲ್ಲದ ಊರಿಲ್ಲ, ಕುಟುಂಬದ ಮನೆ ಇಲ್ಲದ ವ್ಯಕ್ತಿಯಿಲ್ಲ.” ಈ ಮಾತು ತುಳುನಾಡಿನ ಮಣ್ಣಿನ ಗುಣವನ್ನು ಸಾರುತ್ತದೆ. ಮನುಷ್ಯನ ಜನನದಿಂದ ಮರಣದವರೆಗೆ ಪ್ರತಿಯೊಂದು ಶುಭ-ಅಶುಭ ಕಾರ್ಯಗಳಿಗೆ ಸಾಕ್ಷಿಯಾಗುವ ‘ಕುಟುಂಬದ ಮನೆ’ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ; ಅದು ಸಾವಿರಾರು ವರ್ಷಗಳ ಸಂಸ್ಕೃತಿ, ನಂಬಿಕೆ ಮತ್ತು ರಕ್ತಸಂಬಂಧಗಳ ಬೆಸುಗೆ.
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮೂಲದ ಅಥವಾ ತರವಾಡು ಮನೆಯ ಹುಡುಕಾಟ ಒಂದು ಭಾವನಾತ್ಮಕ ಪಯಣ. ಕೆಲವರು ತಮ್ಮ ಪೂರ್ತಿ ಆಯಸ್ಸನ್ನು ಈ ಮೂಲದ ಹುಡುಕಾಟದಲ್ಲೇ ಕಳೆದರೂ ತರವಾಡು ಸಿಗದೆ ಸಂಕಷ್ಟ ಅನುಭವಿಸುವುದುಂಟು. ತುಳುನಾಡಿನ ಸಂಸ್ಕೃತಿಯಲ್ಲಿ ಕುಟುಂಬದ ಮನೆ ಎನ್ನುವುದು ಕೇವಲ ಕಟ್ಟಡವಲ್ಲ; ಅದು ಶಿಸ್ತು, ನಿಯಮ, ಸಂಪ್ರದಾಯ ಹಾಗೂ ಕಟ್ಟುಪಾಡುಗಳ ಸಂಗಮ.
ಒಬ್ಬ ಮನುಷ್ಯನ ಹುಟ್ಟು ಮತ್ತು ಸಾವಿನಿಂದ ಹಿಡಿದು ಕೌಟುಂಬಿಕವಾಗಿ ಎಲ್ಲಾ ಕಾರ್ಯಗಳಿಗೆ ಈ “ಕುಟುಂಬದ ಮನೆ” ಎಂಬುವುದು ಅವಶ್ಯಕ ಬೇಕು. ಒಂದೊಮ್ಮೆ ನಿಮ್ಮ ಮನೆಯ ಹೆಣ್ಮಗಳಿಗೆ ಮದುವೆ ವಿಚಾರ ಬಂದಾಗಲೂ ಅವಳು ಯಾವ ಮನೆತನದ ಹೆಣ್ಣು ಎಂದು ವಿಚಾರಿಸುವವರೂ ಇದ್ದಾರೆ. (ಈಗ ಗಂಡು ಮಕ್ಕಳ ಮನೆತನವನ್ನೂ ಕೇಳುತ್ತಾರೆ ) ಕಡುಬಡವನಿಂದ ಹಿಡಿದು ಆಗರ್ಭ ಶ್ರೀಮಂತ ಕೂಡ ವರ್ಷದಲ್ಲಿ ಎರಡು ಸಲ ( ನಾಗನಿಗೆ ತನು ಎರೆಯಲು ಮತ್ತು ಧರ್ಮ ದೈವದ ನೇಮೋತ್ಸವಕ್ಕೆ ) ತನ್ನ ಕುಟುಂಬದ ಮನೆಗೆ ಹೋಗಲು ಹಾತೊರೆಯುತ್ತಾನೆ. ಅಂತಹ ಶಕ್ತಿ ಕುಟುಂಬದ ಮನೆಗೆ ಇದೆ. ಕುಟುಂಬದ ಮನೆಗೆ ಹೋಗುವುದಿಲ್ಲ, ಅಲ್ಲಿ ನನಗೆ ಗೌರವ ಸಾಕಾಗುವುದಿಲ್ಲ, ಅಲ್ಲಿಗೆ ಕಾಲಿಡುವುದಿಲ್ಲ ಮೊದಲಾದ ಕಾರಣಗಳನ್ನು ನೀಡುತ್ತಾ ಹಠಮಾಡಿ ಕುಳಿತವರನ್ನು ಕೂಡ ರಾತ್ರೊ ರಾತ್ರಿ ದೈವದೇವರು ಎಬ್ಬಿಸಿಕೊಂಡು ಕರೆದುಕೊಂಡು ಹೋದ ಉದಾಹರಣೆ ಕೂಡ ನಮ್ಮಲ್ಲಿ ಇದೆ.
ಈ ನಾಡಿನಲ್ಲಿ ಎಲ್ಲಾ ಜಾತಿ ಸಮುದಾಯಕ್ಕೂ ಜಾತಿ ರೀವಾಜಿನಂತೆ ಇಂತಹುದೇ ಆದಂತಹ ಕುಟುಂಬದ ಮನೆಗಳು ಇವೆ. ಉದಾಹರಣೆಗೆ ಬೂಡು, ತಳಮನೆ, ಕಟ್ಟಮನೆ, ಬಾರಿಕೆಗಳು, ಗುತ್ತುಗಳು, ಗುರಿಕಾರ ಮನೆ, ಗರಡಿ ಮನೆಗಳು, ಭಂಡಾರ ಮನೆಗಳು, ಬೊಂಟ್ರಮನೆಗಳು,ಲೆಪ್ಪುದ ಮನೆಗಳು ತರವಾಡು, ಮಡಸಾನದ ಮನೆಗಳು, ಶುದ್ದ ಮೂಡಣಬಾಗಿಲಿನ ಮನೆಗಳು ಇವೆಲ್ಲಾ ತುಳುನಾಡಿನ ಅಂದಿನ ಕಾಲದಲ್ಲಿ ಗತವೈಭವ ಮೆರೆದ ಮನೆಗಳು.
ಅಣ್ಣ ತಮ್ಮಂದಿರ, ಅಕ್ಕ ತಂಗಿಯಂದಿರ, ಗಂಡ ಹೆಂಡತಿಯ, ಮಾವ ಅಳಿಯಂದಿರ ಎಂಥಹ ಗಲಾಟೆ, ಅಂತಃ ಕಲಹ, ಶಾಪ ಶಬ್ದ ಇದ್ದರೂ ಅವರನ್ನು ಕರೆದು ಪಂಚಾಯಿತಿ ಮಾಡಿ ಸರಿ ಮಾಡಿ ಕಳುಹಿಸಿದ ಮನೆ ಅದು.
ಎಷ್ಟೋ ಕುಟುಂಬದ ಮಕ್ಕಳು ಶಾಲೆಗೆ ಅಲ್ಲಿಂದಲೇ ಹೋಗಿ ಉನ್ನತ ಹುದ್ದೆಯನ್ನು ಅಲಂಕರಿಸಲು ಸಹಕಾರಿಯಾದ ಮನೆ ಅದು. ಅಗಿನ ಕಾಲದಲ್ಲಿ ಗ್ರಾಮದಲ್ಲಿ ಗುತ್ತು, ಬಾರಿಕೆ, ಬೂಡಿನ ಅಧಿಕಾರ ಹಿಡಿದ ಈ ಮನೆಗಳು ಈಗಿನ ಕಾಲದಲ್ಲಿ ಹೆಚ್ಚಾಗಿ ಕುಟುಂಬದ ಮನೆಗಳಾಗಿ ಪರಿವರ್ತನೆಗೊಂಡಿದೆ.
ಹಿರಿಯರಿಂದ ಬಳುವಳಿಯಾಗಿ ಬಂದ ಮೂಲವರ್ಗದ ಭೂಮಿ, ಯಾವುದೊ ಮಹತ್ಕರ‍್ಯಕ್ಕೆ ಅರಸರಿಂದ ಉಂಬಲಿಯಾಗಿ ಸಿಕ್ಕ ಭೂಮಿ, ಅಂತಃಕಲಹದಲ್ಲಿ ಮತ್ತೊಬ್ಬರ ಕೈಯಿಂದ ನಮಗೆ ದಕ್ಕಿದ ಭೂಮಿ, ಹಣ ಕೊಟ್ಟು ಖರೀದಿ ಮಾಡಿದ ಭೂಮಿ, ಒಕ್ಕಲುತನದಲ್ಲಿ ಸಿಕ್ಕಿದ ಭೂಮಿ ಈ ರೀತಿಯಲ್ಲಿ ಹಿಂದೆ ಸಿಕ್ಕಿದ ಭೂಮಿಗಳು ಮತ್ತು ಅದರಲ್ಲಿದ್ದ ಮನೆಗಳು ಈಗ ಕುಟುಂಬದ ಮನೆಗಳಾಗಿವೆ. ಕುಟುಂಬದ ಮನೆಗಳು ಎಲ್ಲವೂ ಬರಿಬಾಂದ್ರದ ಕಟ್ಟುಪಾಡಿನಲ್ಲಿ ಇಂತಹದೇ ಬರಿಯ ಕುಟುಂಬದ ಮನೆ ಎಂದು ರೂಪುಗೊಂಡಿದೆ. ಅದನ್ನು ನಾವು ಇಂತಹ ಜಾತಿಯಲ್ಲಿ ಇಂತಹ ಬರಿಯವರ ಕುಟುಂಬದ ಮನೆ ಎಂದು ನಾವು ಸಂಬೋಧಿಸುತ್ತೆವೆ. ಕುಟುಂಬದ ಮನೆಗಳಿಗೆ ಜಮ್ಮದ ಇಲ್ಲು, ಕುಟುಂಬದ ಇಲ್ಲು, ಮಡತಾನದ ಇಲ್ಲು ಎಂಬುದರ ಜೊತೆಗೆ “ತರವಾಡು ಇಲ್ಲು” ಎಂಬ ಹೆಸರುಗಳಿಂದ ಮತ್ತು ಇತರ ನಾನಾ ಹೆಸರುಗಳಿಂದ ಈಗ ಕರೆಯಲಾಗುತ್ತದೆ.
ಸಂಬಂಧಗಳ ವಿಭಜನೆ ಮತ್ತು ‘ಅರಿವೆ ಪರ್ತ್ ಬುಡ್ಪುನ’ ಪದ್ಧತಿ
ಹತ್ತು ಜನ ಸೇರಿದ್ರೆ ಕುಟುಂಬದ ಮನೆ ಆಗುವುದಕ್ಕೆ ಸಾಧ್ಯವಿಲ್ಲ, ಒಂದು ಬರಿಯ, ಒಂದು ಗುಂಪಿನ ಐದಾರು ಕವಳು ಸಮೂಹ ಸೇರಿದ್ರೆ, ಒಂದು ಕುಟುಂಬದ ಮನೆ ಅಗುವುದು. ಒಂದು ವೇಳೆ ಹತ್ತಿಪ್ಪತ್ತು ಜನ ಸೇರಿ ಒಂದು ಕುಟುಂಬದ ಮನೆ ಅಗಿದ್ರೆ, ಅವರ ಮೂಲ ಕುಟುಂಬದ ಮನೆಯೆ ಬೇರೆ ಎಲ್ಲಿಯೊ ಇದೆ ಎನ್ನುವ ಅರ್ಥ ಇದೆ. ಹಾಗೆಂದು ಮಾತ್ರಕ್ಕೆ ಇಲ್ಲವೆಂದಲ್ಲ, ಅಳಿಯ ಕಟ್ಟಿನಲ್ಲಿ ಹೆಣ್ಣು ಸಂತಾನ ಮತ್ತು ಮಕ್ಕಳ್ ಕಟ್ಟಿನಲ್ಲಿ ಗಂಡು ಸಂತಾನ ಕಮ್ಮಿಯಾಗುತ್ತಾ ಬಂದ್ರೆ ಕುಟುಂಬ ನಶಿಸಿ ಹೋಗುತ್ತದೆ. ಆಗ ಕುಟುಂಬವು ಸಣ್ಣದಾಗುತ್ತ ಕೊನೆಗೆ ನಶಿಸಿಯೂ ಹೋಗುತ್ತದೆ. ಉಳಿದರೆ ಹತ್ತಿಪ್ಪತ್ತು ಜನರ ಸಣ್ಣ ಕುಟುಂಬವಾಗಿ ಇರುತ್ತದೆ.
ಇದಕ್ಕೆ ಇನ್ನೂ ಬೇರೆ ಕಾರಣವೂ ಸಿಗುವುದುಂಟು. ಹಿಂದೆ ತುಳುವರಲ್ಲಿ ಒಂದು ಅನಿಷ್ಟ ಪದ್ದತಿ ಇತ್ತು. ಕೂಡು ಕುಟುಂಬದ ಅ ಕಾಲದಲ್ಲಿ ಮನೆಯ ಯಜಮಾನನಲ್ಲಿ ಕುಟುಂಬದ ಇನ್ನೊಂದು ಕವಳಿನ ಅಂದ್ರೆ ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಲ್ಲಿ ಏನಾದರೂ ಆಸ್ತಿ ಕಲಹ, ದೈವಗಳ ವಿಚಾರದಲ್ಲಿ, ಇನ್ನಿತರ ಕೆಲಸಗಳ ವಿಚಾರಗಳಲ್ಲಿ ಜಗಳ ಅಗಿ ಮನೆಯ ಯಜಮಾನ ಕೊನೆಗೆ ಬಿಡುವ ಅಸ್ತ್ರ “ಅರಿವೆ ಪರ್ತ್ ಬುಡ್ಪುನ” ಕ್ರಮ. ಅಂದ್ರೆ ಕುಟುಂಬದಿಂದ ಬಿಟ್ಟು ಬಿಡುವುದು. ಈ ಅರಿವೆ ಹರಿದು ಬಿಟ್ಟ ಮೇಲೆ ಮತ್ತೆ ಅವರು ಮೂಲ ಕುಟುಂಬ ಸೇರಲು ಅಷ್ಟು ಸುಲಭವಿಲ್ಲ. ಆಗ ಅವರು ಅನ್ಯಮಾರ್ಗವಿಲ್ಲದೇ ಸ್ವಂತವಾಗಿ ಸ್ವಾತಂತ್ಯವಾಗಿ ಕುಟುಂಬದ ದೈವಗಳನ್ನು ಬೇರೆ ಎಲ್ಲೊ ಒಂದು ಕಡೆ ಬಂದು ನೆಲೆ ನಿಂತು ನಂಬುತ್ತಾರೆ. ಇಂತಹ ಒಂದು ಸಣ್ಣ ಕುಟುಂಬ ಹುಟ್ಟಿ ಕೊಳ್ಳುತ್ತದೆ. ಮುಂದೆ ಅದರಲ್ಲಿ ಜನಸಂಖ್ಯೆ ಸ್ವಲ್ಪ ಮಟ್ಟಿಗೆ ಜಾಸ್ತಿ ಆಗುತ್ತಾ ಹೋದರೂ ಮೂಲ ಮನೆಯನ್ನು ಸೇರದೆ ಸಂಕಷ್ಟಗಳು ಎದುರಾಗುತ್ತಲೇ ಇರುತ್ತದೆ.
ತುಳುನಾಡಿನ ‘ಮೂಲದ’ ಹುಡುಕಾಟ: ಕುಟುಂಬದ ಮನೆ, ನಾಗಾರಾಧನೆ ಮತ್ತು ನಂಬಿಕೆಗಳು
ಎರಡು ಮೂರು ತಲೆಮಾರು ಕಳೆದ ನಂತರ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾದಾಗ ಅ ಕುಟುಂಬದ ಕಿರಿಯರಿಗೆ ತಮ್ಮ ಮೂಲ ಮನೆ, ಮೂಲ ನಾಗ ಎಲ್ಲಿ ಎಂದು ತಿಳಿದಿರುವುದಿಲ್ಲ. ಅವಾಗ ಅವರು ಮೂಲ ಕುಟುಂಬದ ಮನೆಯ ಹುಡುಕಾಟದಲ್ಲಿ ತೊಡಗುತ್ತಾರೆ.
ದೊಡ್ಡದಾದ ಕುಟುಂಬದ ಮನೆ ಬೆಂಕಿಗಾಹುತಿಯಾದಾಗ ಎಷ್ಟೋ ಕುಟುಂಬಗಳು ಚೆಲ್ಲಾಪಿಲ್ಲಿಯಾಗಿ ಬೇರೆ ಬೇರೆ ಕಡೆ ದೈವಗಳನ್ನು ನಂಬಿ,ಸಣ್ಣ ಸಣ್ಣ ಕುಟುಂಬಗಳು ಹುಟ್ಟಿಕೊಂಡ ಉದಾಹರಣೆ ಇದೆ. ಇಂತಹ ಎಷ್ಟೋ ಘಟನೆಗಳು ನಡೆದು ಹೋಗಿವೆ. ಈಗಲೂ ಇಂತಹ ಸಣ್ಣ ಸಣ್ಣ ಕುಟುಂಬದ ಸದಸ್ಯರು ತಮ್ಮ ಮೂಲ ಕುಟುಂಬದ ನಾಗನನ್ನು ಮತ್ತು ಮನೆಯನ್ನು ಹುಡುಕುತ್ತಲೇ ಇದ್ದಾರೆ. ಕೆಲವರಂತೂ ತಮ್ಮ ಮೂಲ ಮನೆಯ ಹುಡುಕಾಟದಲ್ಲಿಯೇ ತಮ್ಮ ಪೂರ್ತಿ ಆಯಸ್ಸನ್ನು ಕಳೆದರೂ ತರವಾಡು ಸಿಗದೆ ಇಲ್ಲದ ಸಂಕಷ್ಟಗಳನ್ನು ಅನುಭವಿಸುತ್ತಾರೆ.
ಕುಟುಂಬದ ಮನೆ ಅಂದ ಮೇಲೆ ಅದಕ್ಕೆ ಅದರದೇ ಆದ ಕೆಲವೊಂದು ಶಿಸ್ತು, ನಿಯಮ ನಿಷ್ಠೆ, ಸಂಪ್ರದಾಯಗಳು,ಕಟ್ಟುಪಾಡುಗಳು ಇವೆ. ಅದನ್ನು ಪಾಲಿಸಿಕೊಂಡು ಬಂದರಷ್ಟೆ ಕುಟುಂಬದ ಮನೆಯ ಘನತೆ ಗೌರವ ಪ್ರತಿಷ್ಠೆ ಉಳಿಯುತ್ತದೆ.
ಈ ಭೂಮಿ ಯಾರಿಗೂ ಕೂಡ ಶಾಶ್ವತ ಅಲ್ಲ. ಒಂದು ಕಾಲದಲ್ಲಿ ಒಬ್ಬರಿಂದ ಒಬ್ಬರು ವಲಸಿಗರಾಗಿ ಒಂದು ಭೂಮಿಯಿಂದ ಇನ್ನೊಂದು ಭೂಮಿಗೆ ಬಂದು ನೆಲೆಯಾಗಿ ಬೇಸಾಯ ಮಾಡುತ್ತ, ಒಕ್ಕಲುತನದಲ್ಲಿ ಜೀವನ ತೇಯ್ದರೆ, ಇನ್ನು ಕೆಲವೊಂದು ಜನರು ಹಣ ಕೊಟ್ಟು ಖರೀದಿ ಮಾಡಿದ ಭೂಮಿ, ಕೆಲವೊಬ್ಬರು ದರ್ಪದಿಂದ ಇನ್ನೊಬ್ಬರನ್ನು ಓಡಿಸಿ ವಶಪಡಿಸಿಕೊಂಡು ಕುಳಿತು, ನಂತರ ನಿರ್ಸಂತಾನವಾಗಿ ಬಿಟ್ಟು ಹೋಗಿ, ಬೇರೆ ಕಡೆ ಹೋಗಿ ನೆಲೆಯಾಗಿ, ಅ ಜಾಗಕ್ಕೆ ಮತ್ತೆ ಬೇರೆ ಕೆಲವೊಂದು ಜನರು ಬಂದು ನೆಲೆಯಾಗುವುದು, ಇನ್ನು ಬೇರೆ ಬೇರೆ ಕಾರ್ಯಕ್ಕೆ ಅರಸರಿಂದ, ದೇವಸ್ಥಾನದಿಂದ, ಮಠದಿಂದ, ಗರಡಿಯಿಂದ ಉಂಬಲಿಯಾಗಿ ಸಿಕ್ಕಿದ ಭೂಮಿಯಲ್ಲಿ ನೆಲೆಗೊಂಡು, ಕೊನೆಗೊಮ್ಮೆ ಅಲ್ಲಿಯೇ ಶಾಶ್ವತವಾಗಿ ಉಳಿದುಕೊಂಡ ನೆಲ, ಮುಂದಕ್ಕೆ ಗ್ರಾಮದಲ್ಲಿ ಉತ್ತಮ ಹೆಸರು, ಅಂತಸ್ತಿಗೆ ಗಳಿಸಿ ಗುತ್ತು, ಬಾರೀಕೆಗಳಾಗಿ ಮರ‍್ಪಾಡುಗೊಂಡವು. ಇವೇ ಈಗ ಹೆಚ್ಚಿನವರ ಕುಟುಂಬದ ಮನೆ ಅಗಿದೆ.
ನಾಗನಮೂಲ ಬನ ಎಲ್ಲಿ ಇರುವುದು?
ನಮಗೆ ಮೂಲ ನಾಗ ಎಂಬುದು ನಮ್ಮ ಮೂಲ ಹಿರಿಯರು ನೆಲೆಸಿದ ಆದಿ ಮೂಲ ಜಾಗದಲ್ಲೆ ಇರುವುದು. ಅದು ಬದಲಾಗಲೂ ಸಾಧ್ಯವಿಲ್ಲ. ಈ ಆದಿಮೂಲ ಜಾಗವನ್ನು ಹುಡುಕಲು ಸಾಧ್ಯವೇ ಎಂಬ ಪ್ರಶ್ನೆಗೆ, ಈಚಿನ ಮೂರು ನಾಲ್ಕು ತಲೆಮಾರಿನ ಕುಟುಂಬವಾದರೆ ಹುಡುಕಲು ಸಾಧ್ಯ, ಆದರೆ ಐದಾರು ತಲೆಮಾರು ಕಳೆದು ಹೋಗಿ, ಸಂಪರ್ಕ ಕಡಿದು ಹೋದ ಕುಟುಂಬವಾದರೆ ಹುಡುಕುವುದು ತುಂಬಾ ಕಷ್ಟ. ಇಂತಹ ವಿಚಾರಗಳನ್ನು ಮನಗಂಡು ಕೆಲವೊಂದು ಕಡೆ ಹಿರಿಯರು ತಾವು ನೆಲೆನಿಂತ ಜಾಗದಲ್ಲೆ ಇರುವ ನಾಗಬನವನ್ನು ಕುಟುಂಬದ ನಾಗಬನವಾಗಿ ಪರಿವರ್ತನೆ ಮಾಡಿ ಕೊಂಡಿದ್ದನ್ನು ನಾವು ಕಾಣುತ್ತೆವೆ. ಇನ್ನೂ ಕೆಲವರು ಮೂಲ ಕುಟುಂಬದ ನಾಗಬನ ಸಿಗದೇ ಇದ್ದಾಗ ಅವರದೇ ಬಳಿಯ ಕೆಲವೊಂದು ಮೂಲ ನಾಗಬನಕ್ಕೆ ಹಾಲೆರೆದು ಬರುತ್ತಾರೆ. ಇನ್ನೂ ಕೆಲವರು ನಾಗ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ. ಆದರೆ ನಮ್ಮ ಮೂಲನಾಗ ಬನಕ್ಕೆ ಸಂದಾಯವಾಗುವ ನಮ್ಮ ತನುತಂಬಿಲ ಸಂದಾಯ ಆಗಲೇಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಕುಟುಂಬದ ನಾಗದೋಷ ನಮಗೆ ಕಾಣುತ್ತಲೇ ಇರುತ್ತದೆ.
ಕುಟುಂಬದ ಮನೆಗಳಲ್ಲಿ ನಾಗನಿಗೆ ಹೆಚ್ಚಾಗಿ ಎರಡು ಸಲ ಹಾಲೆರೆದು ತಂಬಿಲ ಮಾಡಲಾಗುತ್ತದೆ. ಒಂದು ನಾಗರ ಪಂಚಮಿ ದಿನವಾದರೆ ಇನ್ನೊಂದು ಕಾಲಾವಧಿಯ ದೈವ ದೇವರ ಕಾರ‍್ಯಕ್ರಮದ ದಿನ. ನಾಗನಿಗೆ ತನು ತಂಬಿಲ ಸಲ್ಲಿಸದಿದ್ದರೆ ಕುಟುಂಬದ ಕೆಲವರಿಗೆ ಕಣ್ಣುದೃಷ್ಠಿ ಸಂಬಂಧಿಸಿದ ದೋಷಗಳು,ನರಗಳ ದೋಷ, ಮಕ್ಕಳಾಗದೇ ಇರುವುದು, ಚರ್ಮ ಸಂಬಂಧಿಸಿದ ಖಾಯಿಲೆಗಳು, ಮದುವೆಯಾಗದೇ ಉಳಿಯುವುದು, ಇನ್ನಿತರ ಭಾದೆಗಳು ಗೋಚಾರ ಅಗುತ್ತದೆ. ಅದಕ್ಕಾಗಿ ವರ್ಷಕ್ಕೊಂದು ಸಾರಿ ಕುಟುಂಬದ ನಾಗನಿಗೆ ತನುತಂಬಿಲದ ಸೇವೆ ಪ್ರತಿಯೊಬ್ಬ ಕುಟುಂಬದ ಸದಸ್ಯ ಸಲ್ಲಿಸಲೇ ಬೇಕು. ಯಾಕೆಂದರೆ ತುಳುನಾಡು ನಾಗನಭೂಮಿ. ಈ ಮಣ್ಣು ನಾಗನದ್ದು, ನಾಗನ ಶಾಪಕ್ಕೆ ವಿಮೋಚನೆ ಸಿಗದು. ಇಲ್ಲಿನ ಮಣ್ಣೆ ನಾಗ. ಅದಕ್ಕಾಗಿ ಕೆಲವರು ಕೋಪದಿಂದ ಒಂದು ಮಾತು ಹೇಳುತ್ತಾರೆ “ಅಯಗ್ ಮಣ್ಣೆ ಮರಿಯಾದ್ ತುಚ್ಚು” ಎಂದು. ಅಂದರೆ ಇಲ್ಲಿನ ಮಣ್ಣಿಗೆ ಅಪಚಾರ ಎಸಗಬಾರದು. ಈ ಮಣ್ಣಿನಲ್ಲಿ ಬದುಕುವ ನಾವು ನಾಗ ಸಂಕುಲವನ್ನು ಗೌರವಿಸಲೇ ಬೇಕು. ತಪ್ಪಿದರೆ ಸಂಕಷ್ಟಗಳು ಕಟ್ಟಿಟ್ಟ ಬುತ್ತಿಯೇ ಸರಿ.
ಜಾಗದ ದೈವಗಳು ಮತ್ತು ಚಾವಡಿಯ ದೈವಗಳು
ಕುಟುಂಬದ ಮನೆಯಲ್ಲಿ ಜಾಗದ ದೈವಗಳು ಮತ್ತು ಚಾವಡಿಯ ದೈವಗಳನ್ನು ನಾವು ಕಾಣುತ್ತೆವೆ.
ಯಾವುದು ಇದರಲ್ಲಿ ಜಾಗದ ದೈವಗಳು? ನಮಗಿಂತ ಮುಂಚಿನ ಇನ್ನೊಂದು ಜನಾಂಗ ನೆಲೆ ನಿಂತು, ಅವರು ದೈವಗಳನ್ನು ನಂಬಿ ನಂತ್ರ ಬಿಟ್ಟು ವಲಸೆ ಹೋಗಿದ್ದು, ಅವರು ಬಿಟ್ಟು ಹೋದ ದೈವ ದೇವರು, ನಾವು ಅ ಜಾಗದಲ್ಲಿ ಮತ್ತೆ ನೆಲೆ ನಿಂತಾಗ ನಮಗೆ ಅವು ಜಾಗದ ದೈವಗಳ ಹೆಸರಲ್ಲಿ ಬಳುವಳಿಯಾಗಿ ಬಂದದ್ದು. ಮತ್ತು ಆದಿಯಿಂದಲೇ ಅ ಭೂಮಿಯ ನೆಲಮೂಲದಿಂದ ಬಂದು ನಮಗೆ ನಂಬಲು ಸಿಕ್ಕಂತಹ ಕೆಲವೊಂದು ದೈವೊಗಳು ಮತ್ತು ಕೆಲವೊಂದು ಗ್ರಾಮ ಇಳಿದು ನೇಮ ತೆಗೆದುಕೊಂಡ ದೈವಗಳು.. ಇದನ್ನು ಕುಟುಂಬದ ದೈವಗಳು ಎಂದು ಪರಿಗಣಿಸಲಾಗುವುದಿಲ್ಲ. ನೆಲಮೂಲದಲ್ಲಿ ಉದಿಪನ ಆದ ದೈವಗಳು ಇವು,ಗ್ರಾಮ ಸಂಬಂಧಿಸಿದ ರಾಜನ್ ದೈವಗಳು, ಗ್ರಾಮ ದೈವಗಳು, ಅರಸು ದೈವಗಳು ಇವು, ಆದ ಕಾರಣ ಜಾಗಕ್ಕೆ ಇರುವ ಗೌರವದಲ್ಲಿ ಕುಟುಂಬದ ಮನೆಯಲ್ಲಿ ಈ ದೈವಗಳಿಗೆ ಮೊದಲ ಪೂಜೆ ತಂಬಿಲ ಸೇವೆ ಇವಕ್ಕೆ ನಡೆಯಬೇಕು ಮತ್ತು ನಡೆಯುತ್ತದೆ. ಈ ದೈವಗಳು ನಮ್ಮ ಭೂಮಿಯ ಹೆಸರನ್ನು ಗ್ರಾಮದಲ್ಲಿ, ಮಾಗಣೆಯಲ್ಲಿ ಗುತ್ತು, ಬಾರೀಕೆಯ ಹೆಸರಲ್ಲಿ ಕರೆಸಿ, ಪ್ರಸಿದ್ಧಿ ತಂದು ಕೊಟ್ಟ ದೈವಗಳು. ಆದ್ದರಿಂದ ಕುಟುಂಬದ ಮನೆಯಲ್ಲಿರುವ ಜಾಗದ ಮತ್ತು ಧರ್ಮಚಾವಡಿಯ ದೈವಗಳನ್ನು ಯಾವತ್ತಿಗೂ ಕಡೆಗಣಿಸುವಂತಿಲ್ಲ. ಕುಟುಂಬದ ಕಾರ್ಯಕ್ರಮ ಆಗುವಾಗ ಮೊದಲ ಅರಾಧನೆ ಅ ದೈವಗಳಿಗೆ ಆನಂತರ ಉಳಿದ ಕುಟುಂಬದ ದೈವಗಳಿಗೆ ಸೇವೆ ಕೊಡುವ ಕ್ರಮ ಇರುವುದು.
ಕುಟುಂಬ ಪದ್ದತಿ ಹೇಗೆ?
ತುಳುನಾಡಿನಲ್ಲಿ ಕುಟುಂಬದ ಪದ್ಧತಿಯಲ್ಲಿ ಎರಡು ವಿಧದಲ್ಲಿ ಇವೆ.
ಆಳಿಯ ಕಟ್ಟು(ಅಪ್ಪೆ ಕಟ್ಟು)
ಮಕ್ಕಳ ಕಟ್ಟು(ಮಗನ ಕಟ್ಟು)
ಇಲ್ಲಿ ಆಳಿಯ ಕಟ್ಟು ಅಂದ್ರೆ ಅಮ್ಮನ ಮೂಲ ಕುಟುಂಬದ ಮನೆಗೆ ಹೋಗುವುದು. ಅಲ್ಲಿಯೆ ಕುಟುಂಬದ ದೈವಗಳನ್ನು ನಂಬುವುದು.
ಮಕ್ಕಳ ಕಟ್ಟು ಎಂದರೆ ತಂದೆಯ ಮೂಲ ಕುಟುಂಬದ ಮನೆ ನಮಗೆ ಕುಟುಂಬದ ಮನೆ ಅಗುವುದು. ತಂದೆಯ ಪಾಲಿನ ಕುಟುಂಬದ ದೈವಗಳು ನಮಗೆ ಕುಟುಂಬದ ದೈವ ಅಗುವುದು.
ಹೆಚ್ಚಾಗಿ ಜೈನ, ಬಿಲ್ಲವ, ಬಂಟ, ಮೂಲ್ಯ, ಮಡಿವಾಳ, ದ್ರಾವಿಡ ಇನ್ನಿತರ ಜನಾಂಗಕ್ಕೆ ಆಳಿಯ ಕಟ್ಟಿನ ಪದ್ದತಿಯಾದರೆ ಗೌಡ, ಕೊಂಕಣಿ, ಬ್ರಾಹ್ಮಣ, ಇನ್ನಿತರ ಸಮುದಾಯಕ್ಕೆ ಮಕ್ಕಳ ಕಟ್ಟು ಪದ್ಧತಿ.
ಕುಟುಂಬದ ಮನೆ ನಮಗೆ ಯಾಕೆ ಅವಶ್ಯಕ?
ಹಿಂದೊಮ್ಮೆ ಕೂಡು ಕುಟುಂಬ ಎಂಬ ಕಟ್ಟು ಪಾಡಿನ ಒಳಗೆ ಎಲ್ಲಾ ಕುಟುಂಬಗಳ ಕವಳುಗಳು ಒಂದೇ ಮನೆಯಲ್ಲಿ ಇತ್ತು. ನೂರು ಜನ ಸದಸ್ಯರು ಎಂಟು ಹತ್ತು ತೊಟ್ಟಿಲು ಕಟ್ಟಿದ ಮನೆ ಎಕರೆಗಟ್ಟಲೆ ಗದ್ದೆ ಬೇಸಾಯ ಇದ್ದ ಇಂತಹ ಪ್ರಸಿದ್ದ ಮನೆಗಳು ಗ್ರಾಮದಲ್ಲಿ ಮೂರು ನಾಲ್ಕು ಮಾತ್ರ ಇದ್ದವು.
ಮನೆಯಲ್ಲಿ ಹಿರಿಯಜ್ಜಿ ಇಲ್ಲವೇ ಹಿರಿಯ ಅಮ್ಮ ರಾಜಮಾತೆ ಅ ಮನೆಗೆ. ಮನೆಯ ಗಂಡುಮಗ ಇಲ್ಲವೇ ಮೊಮ್ಮಗ ಅ ಮನೆಗೆ ಯಜಮಾನನ ಸ್ಥಾನವನ್ನು ಅಲಂಕರಿಸುತ್ತಿದ್ದ.ಉಳಿದವರು ಕೃಷಿ ಬೇಸಾಯ, ಹೈನುಗಾರಿಕೆಯಲ್ಲಿ, ಕೆಲವರು ಕುಲವೃತ್ತಿಯಲ್ಲಿ, ನಾಟಿ ಪಂಡಿತರಾಗಿ, ಮಂತ್ರ ತಂತ್ರಗಳಲ್ಲಿ ನಿರತರಾಗುತ್ತಿದ್ದರು. ಒಂದೇ ಮನೆಯ ಹಲವು ಕೊಠಡಿಯಲ್ಲಿ ಹಲವಾರು ಸಂಸಾರಗಳು ಅಲ್ಲಿದ್ದವು. ಒಂದೇ ಅಡುಗೆಯ ಮನೆಯಲ್ಲಿ ತಯಾರಾದ ಊಟ ಎಲ್ಲರಿಗೂ ಬಡಿಸುತ್ತಿದ್ದರು. ಅಲ್ಲಿ ಅಷ್ಟೊಂದು ಅನ್ಯೊನ್ಯತೆ ಇತ್ತು, ನಂಜಿ ಮತ್ಸರ ಒಂದು ಹೊತ್ತು ಬಂದು ಹೊಗುತ್ತಿತ್ತು ಕೂಡ. ಆದರೂ ರಕ್ತಸಂಬಂಧದ ಒಳಗೆ ಅದಕ್ಕೆ ಯಾರು ಕೂಡ ಸೊಪ್ಪು ಹಾಕುತ್ತಿರಲ್ಲಿಲ್ಲ. ಮತ್ತು ಕೆಲವರು ಕೂಡು ಕುಟುಂಬದಿಂದ ಹೊರಬಂದು ಇನ್ನೊಂದು ಕಡೆ ಒಕ್ಕಲುತನಕ್ಕೆ ಕೂತರೂ ಮೂಲ ಮನೆಯ ಎಲ್ಲಾ ಕಾರ್ಯಗಳಿಗೆ ಹೋಗಿ ಬರುತ್ತಿದ್ದರು.
ಕುಟುಂಬದ ದೈವಗಳು ಕೂಡ ಅಲ್ಲಿ ಒಂದೇ ರಕ್ತ ಹಂಚಿಕೊಂಡವರಿಗೆ ಯಾರು ಬಿಡಿಸಲಾಗದ ಗಟ್ಟಿಯಾದ ಕೊಂಡಿ ಅಗಿತ್ತು.
ಅಂತಹ ಮನೆಗಳಲ್ಲಿ ಅನುಕೂಲವಂತನ ಕುಟುಂಬದ ದೈವಗಳು,ಜಾಗದ ದೈವಗಳ ಧರ್ಮ ಚಾವಡಿಯ ಒಟ್ಟಿನಲ್ಲಿ ಇನ್ನೊಂದು ಮಂಚದಲ್ಲಿ ಇದ್ದರೆ, ಬಡವನ ಅಥವಾ ವಲಸೆ ಕುಟುಂಬಿಕನ ದೈವ ಮತ್ತು ಮುಡಿಪು ಬಿಳಳಿನ ಬುಟ್ಟಿಯಲ್ಲಿ( ತುಳುವಿನಲ್ಲಿ ಬೂರುದ ಬುಟ್ಟಿ) ಸೇರಿ ಮನೆಯ ಅಟ್ಟದಲ್ಲಿ ಜೋಪಾನವಾಗಿ ಇತ್ತು. ವರ್ಷಕ್ಕೊಂದು ಸಾರಿ ಕುಟುಂಬಿಕರನ್ನು ಕರೆದು, ಅದನ್ನು ಕೆಳಗೆ ತೆಗೆದು ಚೆನ್ನಾಗಿ ತೊಳೆದು ಪರ್ವ ತಂಬಿಲ ಅಗೆಲು ಬಡಿಸಲಾಗುತ್ತಿತ್ತು. ಅದರ ಜೊತೆಗೆ ನಮ್ಮೊಂದಿಗೆ ಇದ್ದು ಅನಂತರದ ಪರಲೋಕಗೈದವರಿಗೂ ಅ ದಿನ ಸಮ್ಮನ ಅಗೆಲು ಬಡಿಸುವ ಕ್ರಮವೂ ಇತ್ತು. ಅ ದಿನ ಕುಟುಂಬದ ದೈವವು ಮನೆಯ ಕುಟುಂಬದ ಕೆಲ ಸದಸ್ಯನಿಗೆ ಆವೇಶ ಬರುವುದು, ಕುಟುಂಬದಲ್ಲಿರುವ ಲೋಪ ದೋಷ ಹೇಳುವುದು, ಕೆಲ ಹೆಂಗಸರಿಗೆ ಹೆಣ್ಣು ದೈವ ಮತ್ತು ಹಿರಿಯರು ಬರುವುದು ಕುಟುಂಬವನ್ನು ಚೆನ್ನಾಗಿ ನಡೆಸುಕೊಂಡು ಹೋಗುವಂತೆ ಬುದ್ದಿಮಾತು ಹೇಳಿ ಅಸರು, ಬೊಂಡ ಕುಡಿದು ಹೋಗುವುದು ಮಾಮೂಲಿ ಅಗಿತ್ತು. ಒಂದೊಂದು ಮನೆಯಲ್ಲಿ ಐದಾರು ಜನಕ್ಕೆ ದೈವ ಬಂದು ಹೋಗುವುದು ಮಾಮೂಲಿಯೂ ಅಗಿತ್ತು ಅ ಕಾಲದಲ್ಲಿ. ಇದೊಂದು ರೀತಿ ಕುಟುಂಬ ವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಟ್ಟು ಕೊಂಡಿತ್ತು, ನಂಬಿಕೆಯನ್ನು ಕೂಡ ಉಳಿಸಿಕೊಂಡು ಬಂದಿತ್ತು ಅನ್ನೊದು ಮಾತ್ರ ಸುಳ್ಳಲ್ಲ.
ನಾವುಗಳು ಕುಟುಂಬದ ಮನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ನಮ್ಮ ಹಿರಿಯರು ಎಲ್ಲಾದಕ್ಕೂ ಕ್ರಮ ಕಟ್ಟಲೆ, ಕಟ್ಟು ಪಾಡು ಎಂಬ ನಿಯಮಗಳನ್ನು ಮುಂದಿಟ್ಟು ದೈವಗಳ ದೇವರ ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿದ್ದಾರೆ. ಸಿಕ್ಕ ಸಿಕ್ಕಲ್ಲಿ, ಮನೆ ಮನೆಯಲ್ಲಿ, ಎಲ್ಲಾ ಕಡೆ ಕುಟುಂಬದ ದೈವಗಳನ್ನಾಗಲಿ ಇತರೇ ದೈವಗಳನ್ನಾಗಲಿ ನಂಬುವ ಅಗಿಲ್ಲ. ಮುಡಿಪು ಕಟ್ಟುವ ಹಾಗೆಯೂ ಇಲ್ಲ. ಒಂದೇ ಕಡೆ ನೆಲೆನಿಂತು ಕುಟುಂಬದ ದೈವಗಳನ್ನು, ಗತಿಸಿ ಹೋದ ನಮ್ಮ ಹಿರಿಯರನ್ನು ಸ್ಮರಿಸುವ ಒಂದು ವ್ಯವಸ್ಥೆಯನ್ನು ಮಾಡಿಕೊಂಡು ಬಂದಿದ್ದಾರೆ.
ಕುಟುಂಬದಲ್ಲಿ ಅಜ್ಜ ಇದ್ದರೆ ಅಜ್ಜ,( ಅಜ್ಜನಿಗೆ ಸಾದ್ಯವಾಗುವುದಿಲ್ಲವಾದರೆ ಅವರ ಅನುಮತಿಯನ್ನು ಪಡೆದು ಮಾವ ) ಅಜ್ಜನ ಅನಂತರ ಮಾವನವರು, ಅನಂತರ ಹಿರಿಯ ಅಕ್ಕನ ಮಕ್ಕಳು ದೈವಗಳ ಕಾರ‍್ಯಗಳನ್ನು ನಡೆಸುವ ಹಕ್ಕು ಹೊಂದಿರುವವರು. ಆದರೆ ದೈವ ದೇವರ ಕೆಲಸ ಕಾರ್ಯ ನಡೆಸುವವರು ಹಿರಿಯರಾಗಿದ್ದರೂ ತಿಳುವಳಿಕೆ, ಸಂಸ್ಕಾರ, ಶುದ್ಧಾಚಾರ,ಭಯಭಕ್ತಿ ಇಲ್ಲದವರಾದರೆ ದೈವದೇವರಲ್ಲಿ ಭಕ್ತಿ ಶ್ರದ್ಧೆ ಇರುವವರಿಗೆ ಅವಕಾಶವನ್ನು ಮಾಡಿ ಕೊಡಬೇಕು. ಅಂದ್ರೆ ಕಿರಿಯರು ಎಷ್ಟೇ ಧನಿಕರಾಗಿದ್ದರೂ ಅವರು ಯಜಮಾನಿ ಮಾತ್ರ ಆಗುವಂತಿಲ್ಲ, ಈ ಕಾರ್ಯಗಳನ್ನು ಎಲ್ಲಾ ಪ್ರಾಯದಲ್ಲಿ ಸಣ್ಣವರು ಮಾಡುವುದಲ್ಲ. ಹಿರಿಯರು ಮಾಡಬೇಕು ಎಂಬುವುದು ಕಟ್ಟುಪಾಡು. ಕಿರಿಯರು ಅದಕ್ಕೆ ಸಂಪೂರ್ಣವಾಗಿ ಪ್ರೊತ್ಸಾಹ ಕೊಡುತ್ತ,ಮಾಡುವ ವಿಧಾನವನ್ನು ಕಲಿತು ಕೊಳ್ಳಬೇಕು. ಯಾಕೆಂದರೆ ಈ ಭೂಮಿಯಲ್ಲಿ ಯಾರು ಕೂಡ ದೀರ್ಘಾಯುಷ್ಯದ ಜನರಿಲ್ಲ, ಅಲ್ಪಾಯುಷ್ಯದ ಜನರು ಇರುವ ಇಲ್ಲಿ ಯಾರ ಜೀವನ ಎಷ್ಟು ದಿನ ಎಂದು ಹೇಳಲಾಗುವುದಿಲ್ಲ. ಯಾಜಮಾನ ಕಳೆದು ಹೋದರೆ ಅವನ ನಂತರದವ ಈ ಕಾರ‍್ಯಗಳನ್ನು ಮಾಡಲು ಸದೃಡನಿರಬೇಕು. ಎಲ್ಲಾ ವಿಚಾರಗಳು ಅವನಿಗೆ ತಿಳಿದಿರಬೇಕು. ಅದಕ್ಕಾಗಿ ಮುಂಚಿತವಾಗಿ ಬಂದು ನಿಂತು ಈ ಎಲ್ಲಾ ವಿಚಾರಗಳನ್ನು ಸಣ್ಣ ಪ್ರಾಯದ ಎಲ್ಲಾ ಕುಟುಂಬದ ಸದಸ್ಯರು ತಿಳಿದು ಕೊಳ್ಳಬೇಕು. ಮತ್ತೊಂದು ವಿಚಾರ ಅಂದರೆ ಊರಿಗೊಂದು ಕಟ್ಟು ಇರುವ ಈ ತುಳುನಾಡಿನಲ್ಲಿ ನಮ್ಮ ಕುಟುಂಬದ ಮನೆಯಲ್ಲಿ ನಡೆಯುವ ಕಾರ‍್ಯಗಳಿಗೂ ಮತ್ತು ನಮ್ಮ ಮನೆಯಲ್ಲಿ ನಡೆಯುವ ಕಾರ‍್ಯಗಳಿಗೂ ತುಂಬಾ ವ್ಯತ್ಯಾಸ ಇರಬಹುದು. ಅದಕ್ಕಾಗಿ ಅದನ್ನು ಚೆನ್ನಾಗಿ ತಿಳಿಯಲು ಕುಟುಂಬದ ಮನೆಗೆ ಮುಂಚಿತವಾಗಿ ಹೋಗಬೇಕು. ಅಲ್ಲಿನ ರೀತಿ ರೀವಾಜು ತಿಳಿದುಕೊಳ್ಳಬೇಕು.
ಬಂಗಲೆಯಲ್ಲಿ ಕುಳಿತ ಶ್ರೀಮಂತನಾದರೂ ಆತ ಸತ್ತಾಗ ಅತನ ಪ್ರೇತವನ್ನು ಕುಟುಂಬದ ಮನೆಗೆ ತರಲೇ ಬೇಕು
ನಮ್ಮ ಹಿರಿಯರು ನಡೆದು ಬಂದ ದಾರಿಯನ್ನು ನಾವು ಪಾಲಿಸಿಕೊಂಡು ಬರಬೇಕು.
ಎಷ್ಟೋ ಸದಸ್ಯರು ತಮ್ಮ ಮೂಲ ಕುಟುಂಬದ ಮನೆ ಸಿಗದೇ ಹುಡುಕಾಟದಲ್ಲಿ ಕಂಗಾಲಾಗಿ ಹೋಗಿದ್ದಾರೆ.ಒಂದು ತಲೆಮಾರಲ್ಲಿ ಕುಟುಂಬದ ಕೊಂಡಿ ತಪ್ಪಿ ಹೋಗಿ, ಅದು ಮೂರು ತಲೆಮಾರು ದಾಟಿದ್ರೆ ಮತ್ತೆ ಹುಡುಕುವುದು ಕಷ್ಟ ಸಾಧ್ಯ. ಅದಕ್ಕಾಗಿ ಕುಟುಂಬದ ಕೊಂಡಿಯನ್ನು ಯಾವತ್ತಿಗೂ ಮುರಿದು ಕೊಳ್ಳಬಾರದು. ತುಳುನಾಡಿನಲ್ಲಿ ಸ್ವರ್ಗ ನರಕದ ಕಲ್ಪನೆ ಇಲ್ಲ . ಇಲ್ಲಿ ಆಳಿಯ ಕಟ್ಟಿನಲ್ಲಿ ಸತ್ತ ವ್ಯಕ್ತಿಯ ಉತ್ತರಕ್ರೀಯಾದಿಯನ್ನು ಮುಂಚೆ ನೀರನೆರಳು ಕಟ್ಟಿ ಕೂಗಿ ಇನ್ನಿತ್ತರ ಕಾರ‍್ಯಗಳಲ್ಲಿ ಮುಗಿಸುವ ಕ್ರಮ. ಆನಂತರ ಕುಟುಂಬದ ಮನೆಯಲ್ಲಿ ಮಡಪಜೆ ಮತ್ತು ಹದಿನಾರು ಕೂಡಿಸುವ ಕ್ರಮ. ದೀಪಾವಳಿಯಂದು ಅ ಸತ್ತ ವ್ಯಕ್ತಿಗೆ ಕುಟುಂಬದ ಮನೆಯಲ್ಲಿ ಅವಲಕ್ಕಿ ಮತ್ತು ಅಗೆಲು ಹಾಕುವ ಕ್ರಮ. ಅದ್ದರಿಂದ ಅತ ಎಷ್ಟೇ ದೊಡ್ಡ ಬಂಗಲೆಯಲ್ಲಿ ಕುಳಿತ ಶ್ರೀಮಂತನಾದರೂ ಆತ ಸತ್ತಾಗ ಅತನ ಪ್ರೇತವನ್ನು ಕುಟುಂಬದ ಮನೆಗೆ ತರಲೇ ಬೇಕು, ತಂದು ಕುಟುಂಬದ ಹಿರಿಯರ ಜತೆ ಸೇರಿಸಲೇ ಬೇಕು. ಇದು ನಮ್ಮ ಭೂಮಿಯಲ್ಲಿರುವ ಪರಲೋಕದ ಮನೆಯಾಗಿದೆ.
ಮುಡಿಪಿಗೆ ಹಣ ಹಾಕದೇ ಇದ್ದರೆ ಅತ ಕುಟುಂಬದ ಪಾಲಿಗೆ ಸತ್ತ ವ್ಯಕ್ತಿ
ಇನ್ನು ಮುಡಿಪು, ಒಂದು ಕುಟುಂಬದಲ್ಲಿ ಒಂದೇ ಮುಡಿಪು ಎನ್ನುವ ಕ್ರಮ ಇದೆ. ಒಂದು ವೇಳೆ ಕುಟುಂಬದ ಒಬ್ಬ ವ್ಯಕ್ತಿ ಮುಡಿಪಿಗೆ ಹಣ ಹಾಕದೇ ಇದ್ದರೆ ಅತ ಕುಟುಂಬದ ಸದಸ್ಯನಾಗಲು ಅನರ್ಹ ಮತ್ತು ಆತ ಕುಟುಂಬದ ಪಾಲಿಗೆ ಸತ್ತ ವ್ಯಕ್ತಿ ಇದ್ದಂತೆ. ಅದ್ದರಿಂದ ಹಿರಿಯರು ತುಳುವರಿಗೆ ಕುಲ ದೇವರು ಯಾರು ಅಂದರೆ ತಿರುಪತಿ ತಿಮ್ಮಪ್ಪ ದೇವರು ಎನ್ನುತ್ತಿದ್ದರು. ಈ ದೇವರಿಗೆ ನಮ್ಮ ಕಡೆಯಿಂದ ಮುಡಿಪು ಹಣ ಎಂದು ಮೀಸಲು ಹಣವನ್ನು ಡಬ್ಬಿಯಲ್ಲೊ, ಬಿದಿರಿನ ವೊಂಟೆಯಲ್ಲೊ ಇರಿಸುತ್ತಿದ್ದರು. ಅದನ್ನು ಅಟ್ಟದಲ್ಲಿ ಜೋಪಾನವಾಗಿ ಇರಿಸುತ್ತಿದ್ದರು. ಈ ಮುಡಿಪನ್ನು ದಾಸಯ್ಯರು ಬಿಟ್ರೆ ಯಾವೊಬ್ಬ ವ್ಯಕ್ತಿಗೂ, ಎಷ್ಟೇ ದೊಡ್ಡ ಬ್ರಾಹ್ಮಣ ಅರ್ಚಕನಿಗೂ ಮುಟ್ಟುವ ಮತ್ತು ಬಿಚ್ಚುವ ಅಧಿಕಾರ ಇಲ್ಲ. ವರ್ಷಕ್ಕೊಮ್ಮೆ ಕಾಲಾವಧಿ ಸಮಯದಲ್ಲಿ ದಾಸಯ್ಯರು ಬಂದು ಮುಡಿಪು ಬಿಚ್ಚಿ ತುಳಸಿ ಕಟ್ಟೆಯ ಎದುರಿಗೆ ಹರಿ ಸೇವೆ, ಮಣೆಪೂಜೆ ಕಾರ‍್ಯಕ್ರಮ ಮಾಡುವ ರೂಢಿ. ಇನ್ನೂ ಕೆಲವೊಂದು ಕಡೆ ಸೋಣ ಶನಿವಾರದಂದು ಮುಡಿಪಿಗೆ ಹಣ ತೆಗೆದು ಇರಿಸುತ್ತಾರೆ. ಅದನ್ನು ಕಾಲಾವಧಿ ದಿನ ಕುಟುಂಬದ ಮನೆಗೆ ಕೊಂಡೋಗಿ ಮುಡಿಪಿಗೆ ಹಾಕುತ್ತಾರೆ. ಅದ್ದರಿಂದ ಹಿರಿಯರು ಯಾವ ರೀತಿ ಮಾಡಿಸಿಕೊಂಡು ಬಂದಿದ್ದಾರೊ ಅದೇ ರೀತಿಯಲ್ಲಿ ಮುಂದುವರೆಸಿ.
ಕೂಡುಕುಟುಂಬದ ಯಾಜಮಾನ ಇಲ್ಲ
ಪ್ರಸ್ತುತ ಕಾಲದಲ್ಲಿ ಕುಟುಂಬದ ಮನೆಗಳು, ಕುಟುಂಬದ ಮನೆಗಳಾಗಿ ಇರದೇ ಚಾವಡಿ, ತರವಾಡು, ಟ್ರಸ್ಟ್, ಸಮಿತಿಗಳು ಎಂದು ನಾಮಾಂಕಿತ ಅಗಿವೆ. ಅಲ್ಲಿ ಯಾರು ವರ್ಷವೀಡಿ ಉಳಿದುಕೊಳ್ಳುವ ನಿಯಮ ಇಲ್ಲ. ಕೂಡುಕುಟುಂಬದ ಯಾಜಮಾನ ಅಲ್ಲಿಲ್ಲ. ಈಗೀಗ ಕುಟುಂಬದ ಮನೆಗಳಲ್ಲಿ ಗಡಿ ಅದ ವ್ಯಕ್ತಿಗಳು ಭಾರಿ ಅಪರೂಪ. ಹಾಗೂ ವರ್ಷದಲ್ಲಿ ಸಂಕ್ರಾಂತಿ ಮತ್ತು ಇನ್ನಿತರ ಕಾರ‍್ಯಕ್ರಮದಂದು ಮಾತ್ರ ಚಾವಡಿ ಬಾಗಿಲು ತೆರೆಯುತ್ತಾರೆ. ಮತ್ತೆ ಇಡೀ ವರ್ಷ ಚಾವಡಿಗೆ ಬಾಗಿಲು ಬೀಗ. ಇಂತಹ ಪರಿಸ್ಥಿತಿಯಲ್ಲಿ ನಾವು ಇರುವಾಗ ಒಂದು ಕಡೆ ದೈವಗಳ ಚಾಕ್ರಿ ಮಾಡಲು ಹಿಂದೇಟು ಹಾಕುವ ಯುವಜನತೆ. ಕುಟುಂಬದ ಮನೆ ಎಂದರೆ ನಿರ್ಲಕ್ಷ ಭಾವನೆ, ಸಮಯದ ಕೊರತೆ ಎಂಬುದು ಈಗ ಎಲ್ಲರನ್ನು ಕಾಡುವ ವ್ಯಾಧಿ. ಇನ್ನು ನಮ್ಮ ಕೆಲವರಲ್ಲಿ ದೈವಗಳ ಸರಿಯಾದ ಮಾಹಿತಿಯೆ ಇಲ್ಲ.
ಹಿಂದೆ ಹೆಚ್ಚಿನ ಕುಟುಂಬದ ಮನೆಯಲ್ಲಿ ಗಡಿ ಪಟ್ಟಿ ಅದವರು ಅರಸು ದೈವಗಳಿಗೆ ಪೂಪೂಜನೆ ಮಾಡುತ್ತಿದ್ದರು, ಕಲಸ ಕಟ್ಟುತ್ತಿದ್ದರು, ಶುದ್ದ ಹೋಮ ಇಡುತ್ತಿದ್ದರು. ಅದು ಅ ಕಾಲದಲ್ಲಿ ಒಂದು ರೀತಿಯ ಕ್ರಮ ಕಟ್ಟಲೆ ಕೂಡ ಅಗಿತ್ತು. ಆದರೆ ಈಗ ಒಂದೆರಡು ಜಾಗದಲ್ಲಿ ಮಾತ್ರ ಅದು ಉಳಿದಿದೆ.
ಹಿಂದೆ ಕುಟುಂಬದ ಜಾಗ ಕುಟುಂಬದ ಯಜಮಾನನ ಅಧೀನದಲ್ಲಿ ಇತ್ತು. ಅದು ಪರಂಪರಗತವಾಗಿ ಕುಟುಂಬದ ಸದಸ್ಯನಿಗೆ ಸೇರುತ್ತಿತ್ತು.ದೈವಗಳಿಗೆ ತಕ್ಕಮಟ್ಟಿನಲ್ಲಿ ಸೇವೆ ಕೊಟ್ಟರೂ ಸಂತೃಪ್ತಿ ಅಗುತ್ತಿತ್ತು.ಯಾರು ಆಡಂಭರಕ್ಕೆ ಮಣೆ ಕೂಡ ಹಾಕಿದ್ದಿಲ್ಲ. ಹಾಕಲು ಅವರಲ್ಲಿ ಅಷ್ಟೊಂದು ಅನುಕೂಲವೂ ಇರಲಿಲ್ಲ. ಈಗ ಅನುಕೂಲ ಇದ್ದವರು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಇಂದು ಕಾಲ ಬದಲಾಗಿ ಕುಟುಂಬದ ಜಾಗ ಎಲ್ಲರಿಗೂ ಹರಿದು ಹಂಚಿ ಹೋಗಿದೆ. ದೈವಕ್ಕೆ ಹತ್ತು ಸೆನ್ಸ್, ಇಪ್ಪತ್ತು ಸೆನ್ಸ್ ಜಾಗ ಉಳಿದಿರುತ್ತದೆ. ಕೆಲವು ಕಡೆ ಜಾಗ ಖರೀದಿಸಿ ಕುಟುಂಬದ ದೈವಗಳನ್ನು ನಂಬಿ ಅನುಗ್ರಹ ಪಡೆದವರೂ ಇದ್ದಾರೆ.
ಕುಟುಂಬದವರಿಗೆ ಮತ್ತು ಕುಟುಂಬದ ದೈವಗಳಿಗೆ ಮೋಸ ಮಾಡಿದರೆ, ಅದು ದೈವ ದ್ರೋಹವಾಗುತ್ತದೆ.
ಕುಟುಂಬ ನಿರ್ಲಕ್ಷದಿಂದ ಎಷ್ಟೋ ಕುಟುಂಬದ ಮನೆಗಳು ಈಗಲೂ ಅಜೀರ್ಣ ಅವಸ್ಥೆಯಲ್ಲಿ ಇದೆ. ಇನ್ನೂ ಕೆಲವು ಕಡೆ ಅರ್ಧಂಬರ್ಧವಾಗಿ ನಡೆಯುತ್ತವೆ.ಇನ್ನು ಕೆಲವು ಕುಟುಂಬದ ಮನೆಗಳು ಕೋರ್ಟು ಕಚೇರಿ ಮೆಟ್ಟಿಲೇರಿ ವ್ಯಾಜ್ಯಗಳು ನಡೆಯುತ್ತಲೇ ಇವೆ. ಅದ್ದರಿಂದ ಕುಟುಂಬ ಸದಸ್ಯರು, ತಮ್ಮ ಕುಟುಂಬದ ಹಕ್ಕಿನ ಮೇಲೆ ಕಣ್ಣಿಡದೇ ಎಲ್ಲಾ ಕುಟುಂಬಿಕರ ಶ್ರೇಯಸ್ಸಿಗಾಗಿ ವಂತಿಗೆ ಕೊಟ್ಟು ಸಹಕರಿಸುವುದು ಈಗಿನ ಕಾಲದಲ್ಲಿ ಅತೀ ಅವಶ್ಯಕ. ಯಾಕೆಂದರೆ ನಾವು ನಮ್ಮ ದೈವ ದೇವರಿಗೆ ಕಿಂಚಿತ್ತು ಮಟ್ಟದಲ್ಲಿಯಾದರೂ ಸೇವೆ ಕೊಟ್ಟರೆ ನಮಗೆ ಮತ್ತೊಂದು ಕಡೆ ಅದರ ಅನುಗ್ರಹವನ್ನು ದೈವ ದೇವರು ಪಾಲಿಸುತ್ತಾರೆ. ಮತ್ತೊಂದು ವಿಚಾರ ಅಂದ್ರೆ ಕುಟುಂಬದವರಿಗೆ ಮತ್ತು ಕುಟುಂಬದ ದೈವಗಳಿಗೆ ಮೋಸ ಮಾಡಿದರೆ, ಅದು ದೈವ ದ್ರೋಹವಾಗುತ್ತದೆ. ಅದು ಕುಟುಂಬದ ವ್ಯಕ್ತಿ ಅಗಿರಲೀ ಇಲ್ಲವೇ ಹೊರಗಿನ ವ್ಯಕ್ತಿ ಅಗಿರಲಿ ದೈವ ದೇವರ ಆಸ್ತಿ, ಹಣ ಮತ್ತು ಶಕ್ತಿಯನ್ನು ಕಬಳಿಸಿದರೆ ಅಂತವರನ್ನು ಯಾವ ಶಕ್ತಿಯು ಕರುಣಿಸದು. ದೈವದ ಸೊತ್ತುನು ಮುಟ್ಟುನವುಲ ಒಂಜೇ ಮರಿತ ಮುಟ್ಟೆಗ್ ಹಾಕುನವುಲಾ ಒಂಜೇ…. ಎಂಬಂತಾಗಿ ಅನುಭವಿಸಿದವರು ಯಾರು ಕೂಡಾ ಎಲ್ಲೂ ಉದ್ದಾರ ಆಗಿದ್ದೂ ಕಾಣುತ್ತಿಲ್ಲ.
ಕುಟುಂಬದ ಮನೆಯಲ್ಲಿ ನಿಮ್ಮ ಸೇವೆ ಏನು?
ಜ್ಯೊತೀಷ್ಯ,ಮಂತ್ರವಾದಿ ನಿಮ್ಮ ಸಮಸ್ಯೆಗೆ ಪರಿಹಾರ ಹೇಳುತ್ತಾರೆ ನಿಮ್ಮ ಕುಟುಂಬದ ಮನೆಗೆ ಘಂಟೆ ಕೊಡಿ, ಮಣಿ ಕೊಡಿ, ಆರತಿ ತಟ್ಟೆ ಕೊಡಿ, ಅದು ಕೊಡಿ, ಇದು ಕೊಡಿ ಎಂದು, ಆದರೆ ಯಾವು ಯಾವುದೋ ಉಪಯೋಗ ಅಗದೇ ಇರುವ ವಸ್ತುಗಳನ್ನು ಹರಕೆಯ ಸೇವಾ ರೂಪದಲ್ಲಿ ನಿಮ್ಮ ಕುಟುಂಬದ ಮನೆಗೆ ಕೊಡಬೇಡಿ. ಯಾಕೆಂದರೆ ನಮ್ಮ ದೈವಗಳು ಘಂಟೆ, ಶಂಖನಾದಕ್ಕೆ, ತಟ್ಟೆ ಅರತಿಗೆ ತಲೆತೂಗುವ ಶಕ್ತಿಗಳು ಅಲ್ಲ. ಅವುಗಳು ನಮ್ಮ ನಿರ್ಮಲವಾದ ಭಕ್ತಿಗೆ ಮತ್ತು ನಡೆಯಲ್ಲಿ ಮಾಡುವ ಮದಿಪಿಗೆ ( ಪ್ರಾರ್ಥನೆಗೆ ), ನಾವು ಅಲ್ಲಿ ಮಾಡುವ ಕೆಲಸ ಕಾರ‍್ಯದ ಸೇವೆಗೆ ತಲೆತೂಗುವ ದೈವಗಳು. ಹಾಗೆ ನಿಮಗೆ ಕೊಡಲು ಮನಸ್ಸಿದ್ದರೆ ದೈವ ದೇವರಿಗೆ ಕಾಲ ಕಾಲಕ್ಕೆ ಆಗಬೇಕಾದ ನೇಮನಡಾವಳಿಗಳಿಗೆ ತಂಬಿಲಗಳಿಗೆ ಕುಂದು ಬಾರದಂತೆ ಸಹಕರಿಸಿ, ಕುಟುಂಬದ ಮನೆಯಲ್ಲಿ ಕುಟುಂಬದ ಕಾರ‍್ಯಕ್ರಮದಲ್ಲಿ ಉಪಯೋಗ ಮತ್ತು ಉಪಕಾರ ಆಗುವಂತಹ ವಸ್ತುಗಳನ್ನು (ಪಾತ್ರೆಗಳು,ಅಡುಗೆ ಸಾಮಾಗ್ರಿಗಳು, ಮುಂತಾದ) ನೀಡಿರಿ. ಹಾಗೆಯೇ ವರ್ಷದ ಒಂದು ಭಾರಿ ನಮ್ಮ ಹೆಸರಲ್ಲಿ ಕುಟುಂಬದ ನಾಗ ಬ್ರಹ್ಮರಿಗೆ ತನು ಎರೆಯುವುದು, ತಂಬಿಲ ಕಟ್ಟುವುದು ಮಾಡಿ
ಕುಟುಂಬದ ಹೆಚ್ಚಿನ ಮನೆಯಲ್ಲಿ ಕಲ್ಲುರ್ಟಿ ಮತ್ತು ಕೊರತಿ ಕುಟುಂಬದ ಮನೆ ದೈವಗಳಾಗಿ ನಮಗೆ ಕಾಣ ಸಿಗುತ್ತವೆ. ಹಾಗಿದ್ದರೆ ಕೊರತಿಗೆ ಒಂದು ಹೆಂಟೆ ಕೋಳಿ, ಕಲ್ಲುರ್ಟಿಗೆ ಹೆಣ್ಣು ಹೆಂಟೆ ಕೋಳಿ (ಲಾಕಿ ಪೆರಡೆ) ಕುಟುಂಬದ ಪಂಜರ‍್ಲಿಗೆ ಹುಂಜ ಕೋಳಿ. ರಾವು ಕುಲೆಗೆ (ಈಗ ರಾವುಗುಳಿಗ ಸಂಭೊದಿಸುತ್ತಾರೆ) ಒಂದು ಹುಂಜ ಕೋಳಿ. ಹಿರಿಯರಿಗೆ ಅಗೆಲು ಸಮ್ಮನಕ್ಕೆ ಒಂದು ಕೋಳಿ. ಉಳಿದಂತೆ ಇತರ ದೈವಗಳಿಗೆ ನಿಮ್ಮ ನಿಮ್ಮ ಕುಟುಂಬದಲ್ಲಿ ಪದ್ದತಿಯಂತೆ ನಡೆದು ಬಂದ ರೀತಿಯಲ್ಲಿ ಕೋಳಿ ಅಕ್ಕಿ ತೆಂಗಿನಕಾಯಿ ಕೊಡುವ ಸೇವೆ ನೀಡುವುದು. ( ಕುಟುಂಬದ ಪ್ರತಿಯೊಬ್ಬ ಹೆಣ್ಣು ಸಂಸಾರ ವರ್ಷಕ್ಕೊಮ್ಮೆ ದೈವದ ನೇಮೋತ್ಸವಕ್ಕೆ ಸಮಯ ಮುಂಚಿತವಾಗಿಯೇ ಅಕ್ಕಿ ತೆಂಗಿನ ಕಾಯಿ ಸಹಿತ ಕೋಳಿಗಳನ್ನು ತರಬೇಕು)
ಉಳಿದಂತೆ ಜಾಗದ ಧರ್ಮಚಾವಡಿಯಲ್ಲಿರುವ ದೈವಗಳಿಗೆ ಇಷ್ಟನು ಭಕ್ತಿಯ ಸೇವೆ ಕಡ್ಡಾಯವಾಗಿ ಕೊಡಬೇಕು. ವರ್ಷದಲ್ಲಿ ಒಂದು ಸಾರಿ ಚೌತಿ ಹಬ್ಬ, ದೀಪಾವಳಿಗೆ ಬಳೆಕ್ಕಿ ಮರ ಹಾಕುವ ಹಬ್ಬ, ನವರಾತ್ರಿ, ನಾಗ ತಂಬಿಲ ಇದ್ದರೆ ಇವಕ್ಕೆ ನಿಮ್ಮಿಂದ ಆಗುವ ಸೇವೆ ನೀಡಿರಿ. ದೈವ ದೇವರ ಕೆಲಸ ಮಾಡುವವರಿಗೆ ಗೌರವ ಸಹಕಾರ ನೀಡುವ ಮೂಲಕ ಅವರಲ್ಲಿ ನಿಮ್ಮ ದೈವ ದೇವರನ್ನು ಕಾಣಬೇಕು. ಕುಟುಂಬದ ಕಿರಿಯರು, ಎಲ್ಲಾ ಹಿರಿಯರಿಗೆ ಗೌರವಿಸುವುದು ಮತ್ತು ಬಡ ಜೀವಗಳಿಗೆ ನಮ್ಮ ಕೈಯಲ್ಲಿ ಆಗುವಷ್ಟು ಸಣ್ಣ ಮಟ್ಟಿನ ಧನಸಹಾಯ ನೀಡುವುದು, ಅವರ ಆಶೀರ್ವಾದ ಪಡೆಯುವುದು ಒಳ್ಳೆಯದು.
ಕುಟುಂಬದ ಮನೆಯ ನಾಯಕತ್ವ ವಹಿಸಿಕೊಂಡ ವ್ಯಕ್ತಿ ದೈವದ ನಡೆಗೆ ನೇರ ಆಗಿರಬೇಕು
ಇದೊಂದು ಕುಟುಂಬದ ಮನೆಯಲ್ಲಿ ನಡೆದುಕೊಂಡು ಬಂದ ಹಳೆಯ ಸಂಪ್ರದಾಯ.
ಕುಟುಂಬದ ಮನೆ ಹೇಗಿರಬೇಕು ಎಂದರೆ ಕುಟುಂಬದ ಮನೆ ಎಂಬುವುದು ನಮಗೆ ಸಂಸ್ಕಾರ, ಸಂಸ್ಕೃತಿ, ಶಿಸ್ತು, ಸಂಪ್ರದಾಯ ಕಳಿಸುವ ಕೇಂದ್ರವಾಗಬೇಕು. ಆಳಿದು ಹೋದ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು ಅಚಾರ ವಿಚಾರವನ್ನು ಮತ್ತೆ ನೆನಪಿಸುವ ತಾಣವಾಗಬೇಕು. ಹಿಂದಿನ ಯಜಮಾನ ಪದ್ದತಿ ಈಗ ಇಲ್ಲದೇ ಇರುವುದರಿಂದ ಕುಟುಂಬದ ಮನೆಯ ನಾಯಕತ್ವ ವಹಿಸಿಕೊಂಡ ವ್ಯಕ್ತಿ ದೈವದ ನಡೆಗೆ ನೇರ ಆಗಿರಬೇಕು. ಎಲ್ಲರನ್ನು ಜತೆಯಾಗಿ ಒಗ್ಗೂಡಿಸಿಕೊಂಡು ಹೋಗುವ ಮನೊಧರ್ಮ ಇರಬೇಕು. ಎಲ್ಲರೊಂದಿಗೆ ಪ್ರೀತಿ ಪಾತ್ರದಿಂದ ಇದ್ದರೆ ತುಂಬಾ ಉತ್ತಮ. ಸಹಬಾಳ್ವೆ ಅವನಿಗೆ ತಿಳಿದಿರಬೇಕು. ಒಂದು ಕುಟುಂಬದ ಮನೆಯಲ್ಲಿ ಬಡವ ಶ್ರೀಮಂತ ಎರಡು ವರ್ಗದ ಜನರೂ ಇರುತ್ತಾರೆ. ಹಾಗೆ ಇರುವಾಗ ಯಾರಿಗೂ ತಾರತಮ್ಯ ಮಾಡದೇ, ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡಿದರೆ ತುಂಬಾ ಉತ್ತಮ. ವಂತಿಗೆ ವಿಚಾರದಲ್ಲಿ ಈ ಇಬ್ಬರನ್ನು ಯಾವತ್ತಿಗೂ ಒಂದೇ ತಕ್ಕಡಿಯಲ್ಲಿ ತೂಗಬಾರದು. ಅವನ ಅನುಕೂಲ ನೋಡಿ ವಂತಿಗೆ ಬರೆಯಬೇಕು. ಇಂತಿಷ್ಟೇ ವಂತಿಗೆ ನೀಡಲೇ ಬೇಕು ಎಂದು ಬಡವರ ಮನ ನೋಯಿಸುವ ಬದಲಾಗಿ ಶ್ರೀಮಂತರ ಮನವೊಲಿಸಿ ಆರ್ಥಿಕ ಕ್ರೋಢೀಕರಣ ಮಾಡಬೇಕು. ನಮ್ಮ ಕುಟುಂಬದ ಮನೆಗೆ, ಮನೆಯ ಶ್ರೇಯೋಭಿವೃದ್ಧಿಗಾಗಿ ನಮ್ಮ ನೆಂಟರಿಷ್ಟರು ನೀಡುವ ಸಹಕಾರಕ್ಕೆ ಹೆಚ್ಚಿನ ಗೌರವ ನೀಡಬೇಕು. ಯಾಕೆಂದರೆ ಅವರಿಗೂ ಒಂದು ಕುಟುಂಬದ ಮನೆ ಎಂದು ಇದ್ದಾಗಲೂ ತನ್ನ ಪತ್ನಿಯ ಮಕ್ಕಳ ಹಿತಚಿಂತನೆಯಲ್ಲಿ ನೀಡುವ ಸಹಕಾರದಿಂದ ಅವರು ದೈವದೇವರಿಂದಲೂ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಅವರಿಗೆ ಕುಟುಂಬಸ್ತರು ಸ್ಥಾನ ಮಾನ ಗೌರವವನ್ನು ನೀಡಲೇ ಬೇಕು. ಯಾವುದೇ ದೈವೀ ಕಾರ್ಯಕ್ರಮಗಳು ನಡೆದಾಗ ನೂಲು ಹಾಕಿದವರಿಗೆ ( ಬ್ರಾಹ್ಮಣರಿಗೆ ) ಪ್ರಥಮ ಗೌರವ ನಂತರ ಊರಿನ ಮನೆತನದವರಿಗೆ, ಅನ್ಯಜಾತಿಯವರಿಗೆ, ನಂತರ ನೆಂಟರಿಷ್ಟರಿಗೆ ನೀಡಿದ ಬಳಿಕವೇ ಕುಟುಂಬಸ್ತರು ಪ್ರಸಾದ ಸ್ವೀಕರಿಸಬೇಕು
ಕುಟುಂಬದ ಮನೆ ಮೊಬೈಲ್ ವಿಡಿಯೋ ತೆಗೆದು ಸ್ಟೆಟಸ್ ಹಾಕುವ ತಾಣ ಅಗಬಾರದು.
ಕುಟುಂಬಿಕರ ಕೈಯಿಂದ ಕೇವಲ ಹಣವಂತಿಗೆ ಪಡೆದು ದೈವ ದೇವರ ಕಾರ‍್ಯವನ್ನು ಗಮ್ಜಾಲ್ ಮಾಡಿ, ಕೈತೊಳೆದುಕೊಂಡು ಕುಳಿತು ಮತ್ತೆ ಬರುವ ಕಾಲಾವಧಿ ಉತ್ಸವಕ್ಕೆ ವಂತಿಗೆ ಸಂಗ್ರಹಕ್ಕೆ ಕಾದು ಕುಳಿತರೆ ಕುಟುಂಬದ ಮನೆಗೆ ಬರುವ ಕುಟುಂಬಿಕನ ಆಸಕ್ತಿಯೂ ಕುಂಟಿತ ಅಗುತ್ತದೆ. ವರ್ಷ ಇಡೀ ಕುಟುಂಬದ ಯುವ ಸದಸ್ಯರನ್ನು ಒಗ್ಗೂಡಿಸಿ ಬೇರೆ ಬೇರೆ ರೀತಿಯ ಕಾರ‍್ಯಕ್ರಮಗಳನ್ನು ಮಾಡುತ್ತಾ, ಕ್ರೀಯಾ ಶೀಲವಾಗಿದ್ದರೆ ತುಂಬಾ ಉತ್ತಮ.ಕುಟುಂಬದ ಮನೆಯನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು. ಹಾಗೆಯೇ ಬಂಧುಗಳಲ್ಲಿ ಒಂದು ವಿನಂತಿ ಏನೆಂದರೆ ಕುಟುಂಬದ ಮನೆ ಎಂಬುವುದು ಪ್ರತಿಯೊಬ್ಬ ಕುಟುಂಬಿಕನು ಒಂದು ದಿನ ಕುಟುಂಬದ ಮನೆಗೆ ಬಂದು ಕೈಮುಗಿದು ಅಲ್ಲಿನ ದೃಶ್ಯಗಳನ್ನು ಮೊಬೈಲ್ ವಿಡಿಯೋ ತೆಗೆದುಕೊಂಡು ಸ್ಟೆಟಸ್ ಹಾಕುವ ತಾಣ ಅಗಬಾರದು. ಅದು ನಮ್ಮ ಹಿರಿತನವನ್ನು ಉಳಿಸಿಕೊಂಡು ನಮ್ಮ ಕುಟುಂಬದ ಮನೆತನದ ಗೌರವ ಇತಿಹಾಸ ಹಿನ್ನಲೆಯನ್ನು ಉಳಿಸಿಕೊಂಡು ಬಂದ ದೇಗುಲವಾಗಬೇಕು. ನಾವು ಈಗಲೂ ಗಮನಿಸಿದ ಬಹುದಾದ ಸಂಗತಿ ಏನೆಂದರೆ, ಕೆಲವೊಬ್ಬರಿಗೆ ಕುಟುಂಬ ಸಿಗದೇ ಹುಡುಕಾಟದಲ್ಲಿ ಇರುವವರನ್ನು ಕಂಡಾಗ ಕುಟುಂಬವನ್ನು ಹೊಂದಿರುವ ನಾವು ತರವಾಡಿನ ಮನೆಯ ಮಹತ್ವವನ್ನು ತಿಳಿದಿರಬೇಕು. ನಮ್ಮ ಕುಟುಂಬವನ್ನು ಸೇರ್ಪಡೆಯಾಗಿರುವ ಬಂಧುಗಳನ್ನು ವಂತಿಗೆ ಪಡೆಯುವುದಕ್ಕೆ ಮಾತ್ರ ಮೀಸಲಿರಿಸದೆ, ನಮ್ಮ ಕುಟುಂಬದೊಂದಿಗೆ ಬೆರೆಯಲು ಪೂರ್ಣಪ್ರಮಾಣದ ಅವಕಾಶಗಳನ್ನು ಕೊಡಬೇಕು, ಸಮಿತಿ ಸಭೆಗಳಲ್ಲಿ ಸ್ಥಾನಮಾನಗಳನ್ನು ಕೊಟ್ಟಾಗಲೇ ಅವರನ್ನು ನಮ್ಮ ತರವಾಡಿಗೆ ಕರೆದುಕೊಂಡು ಬಂದ ದೈವೀ ಶಕ್ತಿಗಳಿಗೆ ಇಷ್ಟವಾಗಬಹುದು.
ಕುಟುಂಬಕ್ಕೆ ಬಾರದಿದ್ದವರ ಅನುಕರಣೆ ನಮಗೆ ಖಂಡಿತಾ ಬೇಡ.
ಕೆಲವೊಬ್ಬರಿಗೆ ಕುಟುಂಬದ ಮನೆ ಇದ್ದರೂ ಅಸ್ತಿ ಕಲಹದಲ್ಲಿ ಅ ಮನೆ ಅಜೀರ್ಣಸ್ಥಿತಿಯನ್ನು ಹೊಂದಿರುವುದನ್ನು ನೋಡಿದ್ದೇವೆ. ಕುಟುಂಬದ ಮನೆ ಇದ್ದು ಕುಟುಂಬಿಕರು ಇಲ್ಲದೇ ಅನಾಥವಾದ ಕುಟುಂಬದ ಮನೆಯನ್ನು ಕಂಡಿದ್ದೆವೆ. ಕುಟುಂಬದ ಮನೆ ಮತ್ತು ಕುಟುಂಬಿಕರು ಎರಡು ಇದ್ದು ಅವರು ಬಡವರಾಗಿ, ಅನಾನುಕೂಲವಂತರಾಗಿ ಇದ್ದೂ, ಯಾವುದೊ ಕಾರಣದಿಂದ ಅಲ್ಲಿ ದೈವಗಳು ಅಸ್ತವ್ಯಸ್ತತೆ ಇರುವುದನ್ನು ಕಾಣುತ್ತೇವೆ.ಕುಟುಂಬದ ಮನೆ ಇದ್ದು ಅಲ್ಲಿ ಎಲ್ಲಾ ಕಾರ‍್ಯಕ್ರಮಗಳು ಸುಲಲಿತವಾಗಿ ನಡೆಯುವಾಗ ನಾನು ಹೋಗದಿದ್ದರೂ, ನಾನಗ್ಯಾವ ದೈವ ಭಾದೆಯೂ ಇಲ್ಲ ಎಂದು ಮನೆಯಲ್ಲಿ ಕುಳಿತ ಕುಟುಂಬಿಕರನ್ನು ಕಾಣುತ್ತೇವೆ. ಕುಟುಂಬದ ಮನೆ ಇದ್ದು, ಹಣವಂತರಿದ್ದೂ,ಅಗರ್ಭ ಶ್ರೀಮಂತರಿದ್ದೂ ಅ ಕಡೆ ತಲೆ ತಿರುಗಿಸಿ ನೋಡದವರನ್ನು ಕೂಡ ನಾವು ಕಾಣಬಹುದು. ಅವರ ಅನುಕರಣೆ ನಮಗೆ ಖಂಡಿತಾ ಬೇಡ. ಅವರ ಪಾಪದ ಕೊಡ ತುಂಬಲು ಅವರು ಕಾಯುತ್ತಿರಬಹುದು…ಪ್ರಾಯಶ್ಚಿತವನ್ನು ಅನುಭವಿಸಲೇ ಬೇಕಾಗುತ್ತದೆ ಎಂಬುವುದಂತೂ ಬೆಳಕಿನಷ್ಟು ಸತ್ಯ.
ಅದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ಇರುವವರ ನಡುವೆ ನಮಗೆ ಇರುವ ಕುಟುಂಬದ ಮನೆಗೆ ತಪ್ಪದೆ ಬನ್ನಿ, ದೈವ ದೇವರ ಎಲ್ಲಾ ಸೇವೆಯಲ್ಲಿ ಪಾಲ್ಗೊಂಡು, ಎಲ್ಲಾ ಕಾರ್ಯಗಳಲ್ಲಿ ಭಾಗಿಯಾಗಿ ಪುಣ್ಯ ಸಂಪಾದಿಸಿಕೊಳ್ಳಿ ದೈವಗಳ ಬಗ್ಗೆಯೂ,ತಮ್ಮ ಕುಟುಂಬದ ಹಿನ್ನಲೆಯ ಬಗ್ಗೆಯೂ ಹಿರಿಯರಲ್ಲಿ ಚೆನ್ನಾಗಿ ತಿಳಿದು ಕೊಂಡು ದೈವ ದೇವರ ಮತ್ತು ಕುಟುಂಬದ ಗುರುಕರ‍್ನವರ ಅನುಗ್ರಹಕ್ಕೆ ಪಾತ್ರರಾದ್ರೆ ಮಾತ್ರ ಕುಟುಂಬದ ಮನೆ ಹಳೆಯ ಕಾಲದಲ್ಲಿದ್ದ ಘನತೆ,ಗೌರವದಿಂದ ಮತ್ತು ಕುಟುಂಬದ ಕಾರ‍್ಯಕ್ರಮ ಸಹಬಾಳ್ವೆಯಿಂದ ಮುನ್ನಡೆಯುತ್ತದೆ.



ಸಂಪಾದಿತ ಬರಹ
DEATH
ಕರಾವಳಿಯ ಪ್ರಸಿದ್ಧ ‘ಮಹೇಶ್ ಮೋಟಾರ್ಸ್’ ಮಾಲೀಕ ಮಹೇಶ್ ಶೇಖ ನಿಧನ
ಮಂಗಳೂರು / ಬೆಂಗಳೂರು: ಕರಾವಳಿ ಭಾಗದ ಪ್ರಸಿದ್ಧ ಖಾಸಗಿ ಸಾರಿಗೆ ಸಂಸ್ಥೆಯಾದ ‘ಮಹೇಶ್ ಮೋಟಾರ್ಸ್’ನ ಮಾಲೀಕರಾದ ಮಹೇಶ್ ಶೇಖ (49) ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪ್ರಸಿದ್ಧ ಉದ್ಯಮಿ ಹಾಗೂ ‘ಮಹೇಶ್ ಮೋಟಾರ್ಸ್’ ಸಂಸ್ಥಾಪಕರಾದ ಎ.ಕೆ. ಜಯರಾಮ್ ಶೇಖ ಅವರ ಪುತ್ರ. ತಮ್ಮ ಆತ್ಮೀಯ ನಗು, ಸರಳ ವ್ಯಕ್ತಿತ್ವ ಹಾಗೂ ಪ್ರೀತಿಯ ನಡವಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಮಹೇಶ್ ಶೇಖ ಅವರ ಅಕಾಲಿಕ ಅಗಲಿಕೆ ಕರಾವಳಿಯ ಸಾರಿಗೆ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವನ್ನುಂಟುಮಾಡಿದೆ.
ಮೃತರು ತಂದೆ, ತಾಯಿ, ಪತ್ನಿ, ಮಗಳು, ಅಣ್ಣ, ಅಕ್ಕ ಹಾಗೂ ತಂಗಿಯನ್ನು ಅಗಲಿದ್ದಾರೆ. 2023ರ ಅಕ್ಟೋಬರ್ನಲ್ಲಿ ಮಹೇಶ್ ಶೇಖ ಅವರ ಸಹೋದರ, ಸಂಸ್ಥೆಯ ಇನ್ನೊಬ್ಬ ಮಾಲೀಕರಾಗಿದ್ದ ಪ್ರಕಾಶ್ ಶೇಖ ಅವರು ಮಂಗಳೂರಿನ ಕದ್ರಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ನಿಧನರಾಗಿದ್ದರು. ಇದೀಗ ಸಹೋದರ ಮಹೇಶ್ ಶೇಖ ಅವರೂ ದೈವಾಧೀನರಾಗಿರುವುದು ಕುಟುಂಬಸ್ಥರು ಹಾಗೂ ಹಿತೈಷಿಗಳಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.
ನಾಳೆ ಅಂತಿಮ ಸಂಸ್ಕಾರ: ಮೃತರ ಅಂತಿಮ ವಿಧಿವಿಧಾನಗಳು ಜುಲೈ 30ರ ಗುರುವಾರ ಬೆಳಿಗ್ಗೆ 10.00 ಗಂಟೆಗೆ ಮಂಗಳೂರಿನ ಕುಲಶೇಖರದಲ್ಲಿರುವ ‘ಜ್ಯೋತಿ ಪ್ರಕಾಶ’ ನಿವಾಸದಲ್ಲಿ (ಸೇಕ್ರೆಡ್ ಹಾರ್ಟ್ ಶಾಲೆಯ ಬಳಿ) ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿದಿನ ಸುಮಾರು 60ಕ್ಕೂ ಹೆಚ್ಚು ‘ಮಹೇಶ್’ ಬಸ್ಗಳು ಸಂಚರಿಸುತ್ತಿದ್ದು, ಕರಾವಳಿ ಭಾಗದ ಅತ್ಯಂತ ಜನಪ್ರಿಯ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಮೃತ ಮಹೇಶ್ ಶೇಖ್ ಅವರು ‘ಪುತ್ತೂರು ಸುದ್ದಿ ಬಿಡುಗಡೆ’ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದ ಡಾ. ಯು.ಪಿ. ಶಿವಾನಂದ ಅವರ ಕುಟುಂಬದ ಆತ್ಮೀಯ ನಿಕಟವರ್ತಿಯಾಗಿದ್ದರು ಎಂದು ‘ಬೆಳ್ತಂಗಡಿ ಸುದ್ದಿ ಬಿಡುಗಡೆ’ಯ ಸಿಇಓ ಸಿಂಚನಾ ಉರುಬೈಲು ತಿಳಿಸಿದ್ದಾರೆ. ಅಗಲಿದ ಮಹೇಶ್ ಶೇಖ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ, ಡಾ. ಯು.ಪಿ. ಶಿವಾನಂದ ಮತ್ತು ಅವರ ಕುಟುಂಬದವರು ತೀವ್ರ ಕಂಬನಿ ಮಿಡಿಯುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Agriculture
ಕರಾವಳಿಯಲ್ಲಿ ಮತ್ತೆ ಚಿಗುರಿದ ರೇಷ್ಮೆ ಕೃಷಿ: ಸಣ್ಣ ಹಿಡುವಳಿದಾರರಿಗೆ ಮಾಸಿಕ ₹40,000 ಗಳಿಸುವ ಬಂಪರ್ ಅವಕಾಶ!
ವಿಟ್ಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಪ್ರಸಿದ್ದಿ ಪಡೆದಿದ್ದ ರೇಷ್ಮೆ ಕೃಷಿಗೆ ಈಗ ಮತ್ತೆ ಮರುಜೀವ ಸಿಗುತ್ತಿದೆ. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (ವಿಟ್ಲ) ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರೇಷ್ಮೆ ಸಹಕಾರಿ ಇಲಾಖೆಯ ಜಂಟಿ ಸಹಯೋಗದೊಂದಿಗೆ ರೇಷ್ಮೆ ಕೃಷಿಯನ್ನು ಸಕ್ರಿಯವಾಗಿ ಪುನಶ್ಚೇತನಗೊಳಿಸಲು ಬೃಹತ್ ಯೋಜನೆ ರೂಪಿಸಲಾಗಿದೆ.
ಕರಾವಳಿಯ ಹವಾಮಾನಕ್ಕೆ ಸೂಕ್ತವಾದ ಹಿಪ್ಪುನೇರಳೆ (ಮಲ್ಬೆರಿ) ತಳಿಗಳನ್ನು ಪರಿಚಯಿಸಲಾಗುತ್ತಿದ್ದು, ಬಂಟ್ವಾಳ ಸೇರಿದಂತೆ ಜಿಲ್ಲೆಯ ಸಣ್ಣ ಹಿಡುವಳಿದಾರ ರೈತರಿಗೆ ಇದೊಂದು ಅತ್ಯುತ್ತಮ ಪರ್ಯಾಯ ಆದಾಯದ ಮೂಲವಾಗುವ ಲಕ್ಷಣಗಳು ಕಾಣಿಸುತ್ತಿವೆ.

28 ದಿನಗಳ ಬೆಳೆ, ನಿರಂತರ ಆದಾಯ
ಸಾಮಾನ್ಯ ಕೃಷಿಗೆ ಹೋಲಿಸಿದರೆ ರೇಷ್ಮೆ ಅತ್ಯಂತ ಕಡಿಮೆ ಅವಧಿಯ ಬೆಳೆಯಾಗಿದೆ. ಕೇವಲ 28 ದಿನಗಳ ಅವಧಿಯಲ್ಲಿ ಉತ್ತಮ ಲಾಭ ಗಳಿಸಲು ಇಲ್ಲಿ ಅವಕಾಶವಿದೆ. ಒಂದು ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುವ ಮೂಲಕ ಒಬ್ಬ ರೈತ ಅಥವಾ ಮಹಿಳೆ ತಿಂಗಳಿಗೆ ರೂ. 40,000 ಕ್ಕಿಂತಲೂ ಹೆಚ್ಚು ಆದಾಯ ಗಳಿಸಬಹುದು. ಮಾರುಕಟ್ಟೆಯಲ್ಲಿ ಪ್ರಸ್ತುತ ರೇಷ್ಮೆ ಗೂಡಿಗೆ ಪ್ರತಿ ಕೆಜಿಗೆ ರೂ. 650 ರಿಂದ 950 ರವರೆಗೆ ಸ್ಥಿರವಾದ ಬೆಲೆ ಸಿಗುತ್ತಿರುವುದು ರೈತರಿಗೆ ದೊಡ್ಡ ವರವಾಗಿದೆ.
ಶೇ. 70ಕ್ಕೂ ಹೆಚ್ಚು ಸರ್ಕಾರಿ ಸಹಾಯಧನ (ಸಬ್ಸಿಡಿ)
ಕೇಂದ್ರೀಯ ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿಯ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಶೇಕಡಾ 70 ಕ್ಕಿಂತಲೂ ಹೆಚ್ಚಿನ ಸಬ್ಸಿಡಿ ಸೌಲಭ್ಯ ಲಭ್ಯವಿದೆ:
ನಾಟಿಗೆ ಪ್ರೋತ್ಸಾಹ: ಒಂದು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಗಿಡ ನಾಟಿ ಮಾಡಲು ಆರಂಭಿಕವಾಗಿ ರೂ. 40,000 ಸಹಾಯಧನ.
ಶೆಡ್ ನಿರ್ಮಾಣಕ್ಕೆ ಸಬ್ಸಿಡಿ: 650 ಚದರ ಅಡಿಯಲ್ಲಿ ರೇಷ್ಮೆ ಹುಳು ಸಾChron/ ಸಾಕಾಣಿಕೆ ಶೆಡ್ ನಿರ್ಮಿಸುವ ರೈತರಿಗೆ 2 ಲಕ್ಷ ರೂಪಾಯಿಗೂ ಅಧಿಕ ಸರ್ಕಾರಿ ಸಹಾಯಧನ ದೊರೆಯಲಿದೆ.

ನೂತನ ತಂತ್ರಜ್ಞಾನ: ಶ್ರಮ ಕಡಿಮೆ, ಲಾಭ ಹೆಚ್ಚು!
ಹಿಂದೆ ರೈತರು ಮೊಟ್ಟೆ ತಂದು ಹುಳು ಸಾಕಬೇಕಾಗಿದ್ದರಿಂದ ಶ್ರಮ ಹೆಚ್ಚಾಗಿತ್ತು. ಆದರೆ ಈಗಿನ ಆಧುನಿಕ ತಂತ್ರಜ್ಞಾನದಡಿ ರೈತರಿಗೆ ನೇರವಾಗಿ 8 ದಿನ ಬೆಳೆದ ಚಾಕಿ (ರೇಷ್ಮೆ ಹುಳು)ಗಳನ್ನು ನೀಡಲಾಗುತ್ತದೆ. ಇದರಿಂದ ರೈತರು ಕೇವಲ 15 ರಿಂದ 18 ದಿನಗಳ ಕಾಲ ಹಿಪ್ಪುನೇರಳೆ ಎಲೆಗಳನ್ನು ಹಾಕಿ ಮೇಯಿಸಿದರೆ ಸಾಕು, ಅತ್ಯುತ್ತಮ ದರ್ಜೆಯ ರೇಷ್ಮೆ ಗೂಡುಗಳನ್ನು ಪಡೆಯಬಹುದಾಗಿದೆ.
ಗ್ರಾಮ ಪಂಚಾಯತ್ ಮಟ್ಟದಲ್ಲೇ ಖಾತರಿ ಖರೀದಿ
ರೈತರು ಬೆಳೆದ ರೇಷ್ಮೆ ಗೂಡಿನ ಮಾರಾಟಕ್ಕೆ ಯಾವುದೇ ತೊಂದರೆಯಾಗದಂತೆ ‘ಒಪ್ಪಂದ ಕರಾರು ಪತ್ರ’ದ (Buyback Agreement) ಮೂಲಕ ಸ್ಥಳೀಯವಾಗಿಯೇ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗೂಡು ಖರೀದಿ ಕೇಂದ್ರಗಳನ್ನು ತೆರೆದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರೇಷ್ಮೆ ಸಹಕಾರಿ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಮೂಲಕ ರೈತರಿಗೆ ಆರ್ಥಿಕ ಬೆಂಬಲ ನೀಡಲು ತೀರ್ಮಾನಿಸಲಾಗಿದೆ.
ಕಡಿಮೆ ಜಾಗ, ಕಡಿಮೆ ಸಮಯ ಮತ್ತು ಸರ್ಕಾರಿ ಬೆಂಬಲದೊಂದಿಗೆ ಕರಾವಳಿಯ ರೈತರಿಗೆ ರೇಷ್ಮೆ ಕೃಷಿ ಈಗ ಲಾಭದಾಯಕ ಆರ್ಥಿಕ ಹಾದಿಯಾಗಿ ಹೊರಹೊಮ್ಮುತ್ತಿದೆ
Bantawala
ಅಪರಾಧಕ್ಕೂ ಧರ್ಮದ ಬಣ್ಣ: ಕರಾವಳಿಯ ‘ದ್ವಂದ್ವ ಆಕ್ರೋಶ’ ಮತ್ತು ಸೌಹಾರ್ಧತೆಯ ತುರ್ತು ಅಗತ್ಯ
ಬಿಸಿ ರೋಡ್ನಲ್ಲಿ ಇತ್ತೀಚೆಗೆ ನಡೆದ ಯುವತಿ ಲಾವಣ್ಯಾಳ ಬರ್ಬರ ಹತ್ಯೆಯ ಘಟನೆ ಇಡೀ ಕರಾವಳಿ ಜಿಲ್ಲೆಗಳನ್ನು ಮತ್ತೊಮ್ಮೆ ನಡುಗಿಸಿದೆ. ಆದರೆ, ಇಂತಹ ಭೀಕರ ಘಟನೆಗಳು ನಡೆದಾಗ ಇಂದಿನ ಸಮಾಜದ ಮೊದಲ ಪ್ರತಿಕ್ರಿಯೆ ಏನಾಗಿರುತ್ತದೆ ಗೊತ್ತೇ? “ಕೊಲೆ ಮಾಡಿದವನು ಯಾರು? ಕೊಲೆಯಾದವಳು ಯಾರು? ಇಬ್ಬರೂ ಯಾವ ಧರ್ಮದವರು?”
ನ್ಯಾಯದ ಪರಿಕಲ್ಪನೆ ಎಷ್ಟು ವಿಕೃತಗೊಂಡಿದೆ ಎಂದರೆ, ಅಪರಾಧ ನಡೆದಾಗ ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂಬ ಆಕ್ರೋಶಕ್ಕಿಂತ ಹೆಚ್ಚಾಗಿ, ಅಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ಧರ್ಮ ಹುಡುಕುವ ಹಪಾಹಪಿ ಎದ್ದು ಕಾಣುತ್ತಿದೆ. ಇಬ್ಬರೂ ಒಂದೇ ಧರ್ಮದವರಾಗಿದ್ದರೆ ಸಮಾಜ ಮೌನಕ್ಕೆ ಶರಣಾಗುತ್ತದೆ; ಅದೇ ಧರ್ಮಗಳು ಬೇರೆ ಬೇರೆಯಾಗಿದ್ದರೆ ಬೀದಿಗಿಳಿದು ಆಕ್ರೋಶದ ದೊಂದಿಗಳನ್ನು ಹೊತ್ತಿಸಲು ಸಮಾಜ ಸನ್ನದ್ಧವಾಗುತ್ತದೆ. ಈ ದ್ವಂದ್ವ ನಿಲುವು ಕರಾವಳಿಯ ಅತಿ ದೊಡ್ಡ ದುರಂತವಾಗಿದೆ.
ಧರ್ಮದ ಹಂಗಿಲ್ಲದ ಕ್ರೌರ್ಯ: ಇತಿಹಾಸದ ಕಟು ಸತ್ಯಗಳು
ನಾವು ಇತಿಹಾಸ ಮತ್ತು ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ, ಕ್ರೌರ್ಯಕ್ಕೆ ಯಾವುದೇ ಧರ್ಮದ ಹಂಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ:
ಆಗಸ್ಟ್ 2023ರ ಪುತ್ತೂರು ಘಟನೆ: ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ 18 ವರ್ಷದ ಯುವತಿ ಗೌರಿ ಎಂಬಾಕೆಯನ್ನು ಆಕೆಯದ್ದೇ ಆತ್ಮರಕ್ಷಣೆಯ ಚೂರಿಯಿಂದ ಪದ್ಮರಾಜ್ ಎಂಬಾತ ಕುತ್ತಿಗೆ ಸೀಳಿ ಕೊಂದಿದ್ದನು.
ಜುಲೈ 6, 2026ರ ಮಂಚಿ ಮೋಂತಿಮಾರು ಘಟನೆ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸು ತಂಗುದಾಣದಲ್ಲಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳ ಮೇಲೆ ಭಗ್ನ ಪ್ರೇಮಿಯೊಬ್ಬ ಕತ್ತಿಯಿಂದ ಮನಬಂದಂತೆ ಕಡಿದು ಕೊಲೆಗೆ ಯತ್ನಿಸಿದ್ದನು.
ಈ ಎರಡೂ ಘಟನೆಗಳಲ್ಲಿ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಧರ್ಮಕ್ಕೆ ಸೇರಿದ್ದ ಕಾರಣ ಕರಾವಳಿಯಲ್ಲಿ ಯಾವುದೇ ಗಲಭೆಗಳು ಆಗಲಿಲ್ಲ, ಯಾರೂ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡಲಿಲ್ಲ. ಒಂದೇ ಧರ್ಮದವರಾಗಿದ್ದರೆ ಯುವತಿಯರ ರಕ್ತಕ್ಕೆ ಬೆಲೆ ಇಲ್ಲವೇ? ಅತ್ಯಾಚಾರ, ಕೊಲೆಗಳ ವಿರುದ್ಧದ ನಮ್ಮ ಆಕ್ರೋಶ ಕೇವಲ ‘ಕೋಮು ಸಂಕೇತ ಪ್ರದರ್ಶನ’ದ (Communal Signaling) ಸಾಧನ ಮಾತ್ರವೇ ಎಂಬ ಪ್ರಶ್ನೆ ಮೂಡುತ್ತದೆ.
ಸುರತ್ಕಲ್ ಪ್ರಕರಣ: ಕಣ್ಣು ತೆರೆಸಿದ ಕಮಿಷನರ್ ಮಾತುಗಳು
ಇತ್ತೀಚೆಗೆ ಸುರತ್ಕಲ್ನಲ್ಲಿ ನಡೆದ 17 ವರ್ಷದ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣವು ಸಮಾಜದ ಹೈಪೋಕ್ರಸಿಯನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದೆ. ಈ ಪ್ರಕರಣದ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅವರು ಹಂಚಿಕೊಂಡಿರುವ ವಿಚಾರಗಳು ಕಟು ಸತ್ಯದಿಂದ ಕೂಡಿವೆ:
ಆಘಾತಕಾರಿ ಡೆತ್ ನೋಟ್: ಆಕೆ ಬರೆದಿಟ್ಟಿರುವ ಮರಣ ಪತ್ರದಲ್ಲಿ, “ಅವನು ಹಿಂದೂ ಸಂಘಟನೆಗಳೊಂದಿಗೆ ಇದ್ದರೂ, ಆ ಸಂಘಟನೆಗಳು ತನಗೆ ಯಾವುದೇ ಸಹಾಯ ಮಾಡಲಿಲ್ಲ” ಎಂದು ಅತ್ಯಂತ ನೊಂದು ಬರೆದಿದ್ದಳು. ಸುರತ್ಕಲ್ ಪೊಲೀಸರು ಘಟನೆ ನಡೆದ ದಿನವೇ ಆರೋಪಿ ಅನೀಶ್ ಪೂಜಾರಿಯನ್ನು ಬಂಧಿಸಿ, ಆತನ ವಿರುದ್ಧ ಪೋಕ್ಸೊ (POCSO) ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಇಷ್ಟೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಮಾಜದ ಕೆಲವು ವರ್ಗಗಳು ಮಾತ್ರ ಈ ಬಾಲಕಿಗೆ ನ್ಯಾಯ ಸಿಗಬೇಕು ಎಂದು ಧ್ವನಿಯೆತ್ತುತ್ತಿವೆ. ಪುತ್ತೂರಿನ ಪುರುಷರ ಕಟ್ಟೆಯಲ್ಲಿ ಕೇವಲ ಚೂರಿ ತೋರಿಸಿದ ಘಟನೆಗೆ ಕರಾವಳಿಯೇ ಮೈಕೊಡವಿ ನಿಲ್ಲುತ್ತದೆ; ಆದರೆ ಅಪ್ರಾಪ್ತ ಹುಡುಗಿಯ ಸಾವಿಗೆ ನ್ಯಾಯ ಕೇಳಲು ಹೋರಾಟ ಮಾಡುವವರು ಮೌನಕ್ಕೆ ಶರಣಾಗುತ್ತಾರೆ. ಆರೋಪಿ ಬೇರೆ ಸಮುದಾಯಕ್ಕೆ ಸೇರಿದವನಾಗಿದ್ದರೆ ನಾವು ತಕ್ಷಣವೇ ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ; ಆದರೆ ಅದೇ ಆರೋಪಿ ನಮ್ಮದೇ ಸಮುದಾಯಕ್ಕೆ ಸೇರಿದವನಾಗಿದ್ದರೆ ನಾವು ಮೌನವಾಗುತ್ತೇವೆ ಏಕೆ ? ಎಂಬುವುದೇ ನಾವು ಕೇಳಿಕೊಳ್ಳಬೇಕಾದ ಆತ್ಮಸಾಕ್ಷಿಯ ಪ್ರಶ್ನೆ
ರಾಜಕೀಯ ಭೇದ ಮರೆತ ನಾಯಕರು: ಸೌಹಾರ್ಧತೆಯ ಹೊಸ ಆಶಾಕಿರಣ
ಈ ಎಲ್ಲಾ ದ್ವಂದ್ವಗಳ ನಡುವೆ, ನಿನ್ನೆ ಬರ್ಬರವಾಗಿ ಕೊಲೆಯಾದ ಲಾವಣ್ಯಾಳ ಮನೆಗೆ ಮೃತದೇಹ ಆಗಮಿಸುತ್ತಿದ್ದಂತೆ ಕರಾವಳಿಯಲ್ಲಿ ಸೌಹಾರ್ಧತೆಯ ಒಂದು ಅಪರೂಪದ ಮತ್ತು ಶ್ಲಾಘನೀಯ ಚಿತ್ರಣ ಕಂಡುಬಂತು.
ಮಾಜಿ ಸಚಿವ ರಮಾನಾಥ ರೈ, ಉಸ್ತುವಾರಿ ಸಚಿವ ಯು. ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶ್ರೀಮತಿ ಮಮತಾ ಗಟ್ಟಿ, ಹಿಂದೂ ಸಂಘಟನೆಯ ಶರಣ್ ಪಂಪ್ವೆಲ್, ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಅರುಣ್ ಪುತ್ತಿಲ ಸೇರಿದಂತೆ ಹಲವಾರು ಮುಖಂಡರು ಪಕ್ಷ ಮತ್ತು ಸಿದ್ದಾಂತದ ಭೇದ ಮರೆತು ಒಟ್ಟಾಗಿ ಆಗಮಿಸಿ ಮೃತಳ ಅಂತಿಮ ದರ್ಶನ ಪಡೆದರು. ಸಾಂತ್ವಾನ ನೀಡಿದರು. ಕುಟುಂಬಕ್ಕೆ ದೈರ್ಯವನ್ನು ತುಂಬಿದರು.
ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇಂತಹ ದುಃಖದ ಸಮಯದಲ್ಲಿ ಒಟ್ಟಾಗಿ ನಿಂತಿರುವುದು ಕರಾವಳಿಯ ಭವಿಷ್ಯದ ಸೌಹಾರ್ಧತೆಗೆ ದಾರಿದೀಪವಾಗಿದೆ. ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಾಗ ರಾಜಕೀಯ ಮಾಡುವುದನ್ನು ಬಿಟ್ಟು, ನಾವೆಲ್ಲರೂ ಒಂದಾಗಿ ಅಪರಾಧಿಗಳ ವಿರುದ್ಧ ಧ್ವನಿ ಎತ್ತಬಲ್ಲೆವು ಎಂಬುದಕ್ಕೆ ಈ ನಡೆ ಸಾಕ್ಷಿಯಾಗಿದೆ. ಅಪರಾಧ ನಡೆದಾಗ ಅಪರಾಧಿಯ ಮುಖವಾಡ ಕಳಚಿ ಆತನ ಧರ್ಮ ಹುಡುಕುವ ನಮ್ಮ ಸಮಾಜದ ವಿಕೃತ ಹೈಪೋಕ್ರಸಿಗೂ ತುರ್ತಾಗಿ ಚಿಕಿತ್ಸೆಯಾದಾಗ ಸೌಹಾರ್ದತೆ ವಿಜೃಂಬಿಸುತ್ತದೆ.
ಸೌಹಾರ್ಧತೆಯ ಕರಾವಳಿ ನಮ್ಮದಾಗಲಿ
ನಾವು ನಿಜವಾಗಿಯೂ ನ್ಯಾಯ ಮತ್ತು ಮಾನವೀಯತೆಗೆ ಬದ್ಧರಾಗಿದ್ದರೆ, ಎಲ್ಲಾ ಅಪರಾಧಿಗಳನ್ನು ಒಂದೇ ಮಾನದಂಡದಲ್ಲಿ ನೋಡಬೇಕು. ಅಪರಾಧವು ಒಂದು ಜಾಗತಿಕ ಮತ್ತು ಮಾನಸಿಕ ಸಮಸ್ಯೆಯಾಗಿದೆ. ಯಾವುದೇ ಧರ್ಮ ಅಥವಾ ಸಮುದಾಯವೂ ಅಪರಾಧಿಗಳ ಅಸ್ತಿತ್ವದಿಂದ ಮುಕ್ತವಾಗಿಲ್ಲ; ಅಪರಾಧಿಗಳು ಎಲ್ಲಾ ಧರ್ಮ, ಜಾತಿ ಮತ್ತು ವರ್ಗಗಳಲ್ಲೂ ಇದ್ದಾರೆ.
ಸುರತ್ಕಲ್ನ ಮೃತ ಬಾಲಕಿಗೆ, ಮಂಚಿ ಮೋಂತಿಮಾರ್ನ ವಿದ್ಯಾರ್ಥಿನಿಗೆ, ಬಿಸಿ ರೋಡ್ನ ಲಾವಣ್ಯಾಳಿಗೆ ನ್ಯಾಯ ಸಿಗಬೇಕಿದೆ. ‘ಅಪರಾಧಿ ಅಪರಾಧಿಯೇ, ನ್ಯಾಯ ಎಲ್ಲರಿಗೂ ಒಂದೇ’. ಧರ್ಮದ ಹೆಸರಿನಲ್ಲಿ ವಿಕೃತ ಆಕ್ರೋಶ ವ್ಯಕ್ತಪಡಿಸುವ ಸಮಾಜಕ್ಕೆ ಪೊಲೀಸ್ ಕಮಿಷನರ್ ಅವರು ಬಿಚ್ಚಿಟ್ಟ ಸತ್ಯಗಳು ಕಣ್ಣು ತೆರೆಸುವಂತಾಗಲಿ. ಅಪರಾಧಿಗೆ ಜಾತಿಯ ಅಥವಾ ಧರ್ಮದ ಬಣ್ಣ ಹಚ್ಚಿ ರಾಜಕೀಯ ಮಾಡುವುದನ್ನು ನಿಲ್ಲಿಸಿ, ಮುಂದಿನ ದಿನಗಳಲ್ಲಿ ಕರಾವಳಿಯು ಸೌಹಾರ್ಧತೆ, ಶಾಂತಿ ಮತ್ತು ಸುರಕ್ಷತೆಯ ನೆಲೆವೀಡಾಗಿ ಬೆಳಗಲಿ ಎಂಬುವುದೇ ಎಲ್ಲರ ಆಶಯವಾಗಬೇಕು.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
