Connect with us

DEATH

ಸುಳ್ಯ: ಆಟವಾಡುತ್ತಿದ್ದ ಅವಳಿ ಮಕ್ಕಳು ಕೆರೆಗೆ ಬಿದ್ದು ದಾರುಣ ಸಾವು

Published

on

ಸುಳ್ಯ, ಜೂನ್ 20: ಆಟವಾಡುತ್ತಿದ್ದ ಅವಳಿ ಮಕ್ಕಳಿಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರದಲ್ಲಿ ಇಂದು ಸಂಜೆ ನಡೆದಿದೆ.

ಮೃತ ಮಕ್ಕಳನ್ನು ಮುರುಳ್ಯ ಶಾಂತಿನಗರ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿಗಳಾದ 5 ವರ್ಷದ ಜಶ್ವೀನ್ ಮತ್ತು ಜಶ್ವಿತ್ ಎಂದು ಗುರುತಿಸಲಾಗಿದೆ. ಇವರು ಮುರುಳ್ಯ ಗ್ರಾಮದ ಕಡೀರ ನಿವಾಸಿಗಳಾದ ವಸಂತ ಹಾಗೂ ದಿವ್ಯ ದಂಪತಿಯ ಮಕ್ಕಳಾಗಿದ್ದರು.

ಘಟನೆ ವಿವರ:

ತಂದೆ ವಸಂತ ಅವರು ವೆಲ್ಡಿಂಗ್ ಕೆಲಸಕ್ಕೆ ಮತ್ತು ತಾಯಿ ದಿವ್ಯ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ( ದೂರಿನಲ್ಲಿ ತಂದೆ ತಾಯಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು, ಮನೆಯ ಸಮೀಪದ ತೋಟದಲ್ಲಿ ಕೆಲಸ ಮಾಡಲು ತೆರಳಿರುತ್ತಾರೆ ಎಂಬುವುದಾಗಿದೆ ) ಮನೆಯಲ್ಲಿ ಮಕ್ಕಳು ಮತ್ತು ಅಜ್ಜ-ಅಜ್ಜಿ ಮಾತ್ರ ಇದ್ದರು. ಇಂದು ಸಂಜೆ ಮಕ್ಕಳು ಮನೆಯ ಸಮೀಪ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಸುಮಾರು 15ಅಡಿ ಆಳದ ಕೆರೆಗೆ ಜಾರಿ ಬಿದ್ದಿದ್ದಾರೆ. ನಂತರ ಮನೆಯಲ್ಲಿ ಮಕ್ಕಳು ಕಾಣದಿದ್ದಾಗ ಹುಡುಕಾಟ ನಡೆಸಿದಾಗ ಕೆರೆಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ.

ಮುರುಳ್ಯ ಗ್ರಾಮದ ಕಡೀರದಲ್ಲಿ ಮಕ್ಕಳ ಶವಗಳನ್ನು ಕೆರೆಯಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದ್ದಾಗ ಗ್ರಾಮಸ್ಥರು ಜಮಾಯಿಸಿದ್ದರು. ಈ ದೃಶ್ಯ ಚಿತ್ರದಲ್ಲಿ ಕಾಣಬಹುದು. ಮತ್ತೊಂದು ಚಿತ್ರ ದಲ್ಲಿ, ಮಕ್ಕಳ ಶವಗಳನ್ನು ಕೆರೆಯಿಂದ ಮೇಲೆತ್ತಿ ಮ್ಯಾಟ್ ಮೇಲೆ ಮಲಗಿಸಿರುವುದನ್ನು ಕಾಣಬಹುದು.

ಸುಳ್ಯ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಕ್ಕಳ ಶವಗಳನ್ನು ಕೆರೆಯಿಂದ ಮೇಲೆತ್ತಿದರು. ಮಕ್ಕಳ ಸಾವಿನ ಸುದ್ದಿ ತಿಳಿದ ಪೋಷಕರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನಾ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಆಗಮಿಸಿದ್ದು, ಪಿರ್ಯಾದಿದಾರನಾಗಿರುವ ಮೃತ ಮಕ್ಕಳ ತಂದೆ ವಸಂತ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:22/2026 ಕಲಂ:194 BNSS ರಂತೆ‌ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕೇವಲ 5 ವರ್ಷದ ಅವಳಿ ಮಕ್ಕಳ ಸಾವಿನಿಂದಾಗಿ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಆಲಂಕಾರು: ಬಾಡಿಗೆ ಮನೆಯಲ್ಲಿ ದಂಪತಿ ಶವವಾಗಿ ಪತ್ತೆ; ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ!

Published

on

ಆಲಂಕಾರು: ಇಲ್ಲಿನ ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ದಂಪತಿಯು ಜೂನ್ 20ರಂದು ಕಜೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಜಗೋಳಿ ಮೂಲದ ದಿನೇಶ್ ಹಾಗೂ ಸಿದ್ದಕಟ್ಟೆ ಮೂಲದ ಸಂಗೀತ ಮೃತಪಟ್ಟ ದಂಪತಿ ಎಂದು ಗುರುತಿಸಲಾಗಿದೆ.

ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ? ಪತ್ನಿ ಸಂಗೀತರನ್ನು ಕೊಲೆ ಮಾಡಿ, ಬಳಿಕ ಪತಿ ದಿನೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಈ ದಂಪತಿ ತಮಗೆ ಸೇರಿದ ಎರಡು ವರ್ಷದ ಹೆಣ್ಣು ಮಗು ‘ದ್ವಿತಿ’ಯೊಂದಿಗೆ ಇಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಒಂದು ತಿಂಗಳ ಬಳಿಕ ಮರಳಿದ್ದ ದಂಪತಿ: ಸ್ಥಳೀಯರ ಮಾಹಿತಿಯ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಆಲಂಕಾರು ಪೇಟೆಯಲ್ಲಿದ್ದ ಹೋಟೆಲ್ ವ್ಯವಹಾರವನ್ನು ಬಿಟ್ಟು ತೆರಳಿದ್ದ ಈ ದಂಪತಿ, ಜೂನ್ 19ರ ಸಂಜೆ ಆಲಂಕಾರು ಕಜೆಯಲ್ಲಿದ್ದ ತಮ್ಮ ಹಳೆಯ ಬಾಡಿಗೆ ಮನೆಗೆ ಪುನಃ ಬಂದಿದ್ದರು. ಆದರೆ ಜೂನ್ 20ರಂದು ಈ ದುರಂತ ಘಟನೆ ನಡೆದಿದೆ.

ಘಟನೆ ಸಂಭವಿಸಿದ ವೇಳೆ ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎರಡು ವರ್ಷದ ಮಗು ಅತ್ತು ಅತ್ತು ಮತ್ತೆ ನಿದ್ರೆಗೆ ಜಾರಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಗುವಿನ ಅಳು ಕೇಳಿ ಬಂದ ಹಿನ್ನೆಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪೊಲೀಸ್ ಭೇಟಿ, ಪರಿಶೀಲನೆ: ಘಟನಾ ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕರಾದ ಜಂಬುರಾಜ್ ಹಾಗೂ ಸಿಬ್ಬಂದಿಗಳು ಧಾವಿಸಿದ್ದು, ಮೃತದೇಹಗಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.




Continue Reading

accident

ಸಜಿಪದಲ್ಲಿ ಭೀಕರ ರಸ್ತೆ ಅಪಘಾತ: ಸಾಮಾಜಿಕ ಕಾರ್ಯಕರ್ತ, ಯುವ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

Published

on

ಬಂಟ್ವಾಳ: ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಇಂದು ಸಂಜೆ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸಜಿಪ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಹಮದ್ ಆಸೀರ್ (22) ಮೃತಪಟ್ಟ ದುರ್ದೈವಿ ಆಕ್ಟಿವಾ ಸವಾರರಾಗಿದ್ದಾರೆ.

ಘಟನೆಯ ವಿವರ:

ಅಹಮದ್ ಆಸೀರ್ ಅವರು ಇಂದು ಸಂಜೆ ತನ್ನ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಸಜಿಪ ಬೇಂಕೆ ಎಂಬ ಪ್ರದೇಶಕ್ಕೆ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮಾರುತಿ ಕಾರು ಇವರ ದ್ವಿಚಕ್ರ ವಾಹನಕ್ಕೆ ನೇರವಾಗಿ ಮತ್ತು ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಆಕ್ಟಿವಾ ವಾಹನವು ಗುರುತು ಸಿಗದಷ್ಟು ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ತಕ್ಷಣವೇ ತಲೆ ಮತ್ತು ದೇಹಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಆಸೀರ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಂಬನಿ ಮಿಡಿದ ಸಜಿಪ ಪರಿಸರದ ಜನತೆ:

ಮೃತ ಅಹಮದ್ ಆಸೀರ್ ಅವರು ಸಣ್ಣ ವಯಸ್ಸಿನಲ್ಲೇ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು SKSSF ಸಜೀಪನಡು ಶಾಖೆಯ ಸಕ್ರಿಯ ಸದಸ್ಯರಾಗಿದ್ದರಲ್ಲದೆ, ತುರ್ತು ಮತ್ತು ಆಪತ್ಕಾಲೀನ ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸುವ ಹೆಸರಾಂತ “ವಿಖಾಯ ACTIVE WING” ತಂಡದ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಸದಾ ಪರರ ಸೇವೆಗೆ ಸಿದ್ಧರಿರುತ್ತಿದ್ದ ಎಳೆಯ ಪ್ರಾಯದ ಯುವಕನ ಅಕಾಲಿಕ ಮರಣದ ಸುದ್ದಿ ಸಜಿಪ ಸುತ್ತಮುತ್ತಲಿನ ನಾಗರಿಕರಲ್ಲಿ ಮತ್ತು ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ.

ಪೊಲೀಸ್ ತನಿಖೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.




Continue Reading

accident

ಕನ್ಯಾನ: ಬಾಕ್ಸೈಟ್ ಗಣಿಗಾರಿಕೆ ಸ್ಥಳದಲ್ಲಿ ಭೀಕರ ದುರಂತ; ಟಿಪ್ಪರ್ ಲಾರಿ ಚಲಿಸಿ ಚಾಲಕ ಸ್ಥಳದಲ್ಲೇ ಸಾವು

Published

on

ವಿಟ್ಲ: ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಟಿಪ್ಪರ್ ಲಾರಿಯ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಅಕ್ರಮ ಎನ್ನಲಾದ ಬಾಕ್ಸೈಟ್ ದಂಧೆ ನಡೆಯುವ ಸ್ಥಳಕ್ಕೆ ತೆರಳಿದ್ದ ಲಾರಿಯಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಚಾಲಕ ಮಹೇಶ್ ಅವರು ಲಾರಿಯ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಲಾರಿ ಮುನ್ನಡೆದಿದ್ದರಿಂದ, ಅವರು ಲಾರಿಯ ಚಕ್ರಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಅಕ್ರ 132/2026 ಕಲಂ: 106(1) BNS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕರ ಆಕ್ರೋಶ: ಪ್ರದೇಶದಲ್ಲಿ ರಾಜಕೀಯ ನಾಯಕರು ಪಕ್ಷಬೇಧ ಮರೆತು ನಡೆಸುತ್ತಿದ್ದಾರೆ ಎನ್ನಲಾದ ಈ ಬಾಕ್ಸೈಟ್ ದಂಧೆಯ ವಿರುದ್ಧ ಸ್ಥಳೀಯ ನಾಗರಿಕರು ನಿರಂತರವಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ಬಾಕ್ಸೈಟ್ ಲಾರಿಗಳ ಅಟ್ಟಹಾಸ ಹಾಗೂ ದಬ್ಬಾಳಿಕೆಯಿಂದಾಗಿ ವಿಟ್ಲ ಸೇರಿದಂತೆ ಸುತ್ತಮುತ್ತಲಿನ ವಾಹನ ಚಾಲಕರು ಮತ್ತು ಸಾರ್ವಜನಿಕರು ತೀವ್ರ ಹೈರಾಣಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಈ ದಂಧೆಯು, ಇಂದು ಸ್ವತಃ ತನ್ನದೇ ಲಾರಿಯ ಚಾಲಕನ ಬಲಿ ಪಡೆದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ





Continue Reading

Trending

Copyright © 2025 Deevatige

error: Content is protected !!