Connect with us

INCIDENT

ಬಾವಿಗೆ ಇಳಿದು ಉಸಿರುಗಟ್ಟಿ ಕುಸಿದ ವ್ಯಕ್ತಿ: ಪತ್ನಿಯ ಸಮಯಪ್ರಜ್ಞೆ, ಅಗ್ನಿಶಾಮಕ ದಳದ ಸಾಹಸದಿಂದ ಬದುಕುಳಿದ ನವೀನ್!

Published

on

ಸುಳ್ಯ: ಮುಂಗಾರು ಮಳೆ ಆರಂಭಕ್ಕೂ ಮುನ್ನ ಸ್ವಂತ ಮನೆಯ ಬಾವಿ ಸ್ವಚ್ಛಗೊಳಿಸಲು ಇಳಿದ ವ್ಯಕ್ತಿಯೊಬ್ಬರು ಆಮ್ಲಜನಕದ ಕೊರತೆಯಿಂದ ಬಾವಿಯೊಳಗೇ ಉಸಿರುಗಟ್ಟಿ ಕುಸಿದು ಬಿದ್ದು, ತದನಂತರ ಪತ್ನಿಯ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಸಾಹಸದಿಂದ ಪ್ರಾಣಾಪಾಯದಿಂದ ಪಾರಾದ ರೋಮಾಂಚನಕಾರಿ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಸಮೀಪದ ಕಂದಡ್ಕ ಎಂಬಲ್ಲಿ ನಡೆದಿದೆ.

ಕಂದಡ್ಕ ನಿವಾಸಿ ನವೀನ್ ಫೆರಾವೋ ಬದುಕುಳಿದ ಅದೃಷ್ಟವಂತ. ಅವರ ಪತ್ನಿ, ಸುಳ್ಯ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ರೂತ್ ಮೇರಿ ಅವರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆಯ ವಿವರ:

ಮಳೆಗಾಲ ಆರಂಭವಾಗುವ ಮುನ್ನ ಬಾವಿ ಕ್ಲೀನ್ ಮಾಡೋಣ ಎಂದು ನವೀನ್ ಅವರು ತಮ್ಮ ಮನೆಯ ಸುಮಾರು 40 ಅಡಿ ಆಳದ ಬಾವಿಗೆ ಹಗ್ಗದ ಸಹಾಯದಿಂದ ಇಳಿದಿದ್ದಾರೆ. ಬಾವಿಯ ತಳಭಾಗದ ಕೊನೆಯ ಎರಡು ರಿಂಗ್‌ಗಳು ಬಾಕಿ ಇರುವಾಗ ಅವರಿಗೆ ತೀವ್ರ ಆಮ್ಲಜನಕದ (Oxygen) ಕೊರತೆ ಉಂಟಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ನವೀನ್ ತಕ್ಷಣವೇ ವಾಪಸ್ ಮೇಲೆ ಬರಲು ಪ್ರಯತ್ನಿಸಿದರಾದರೂ, ಅಷ್ಟರಲ್ಲೇ ಪ್ರಜ್ಞೆ ತಪ್ಪಿ ಬಾವಿಯೊಳಗೆ ಕುಸಿದು ಬಿದ್ದಿದ್ದಾರೆ.

ಪತ್ನಿಯ ಸಮಯಪ್ರಜ್ಞೆ – ದೇವತೆಯಂತೆ ಬಂದ ಅಗ್ನಿಶಾಮಕ ದಳ:

ಬಾವಿಯ ಮೇಲಿದ್ದ ಮೌರಿಸ್ ಡಿಸೋಜಾ ಹಾಗೂ ನವೀನ್ ಅವರ ಮಾವ ಮಾರ್ಕ್ ಅವರು ತಕ್ಷಣವೇ ನವೀನ್ ಪತ್ನಿ ರೂತ್ ಮೇರಿ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೂತ್ ಮೇರಿ, ನೆರೆಹೊರೆಯವರನ್ನು ಕರೆಯುವುದರ ಜೊತೆಗೆ ಅತ್ಯಂತ ಜಾಣ್ಮೆಯಿಂದ ಅಗ್ನಿಶಾಮಕ ದಳಕ್ಕೆ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿ ಲೀಲಾಧರ್ ಅವರಿಗೆ ಕರೆ ಮಾಡಿ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಮಿಂಚಿನ ವೇಗದಲ್ಲಿ ಸ್ಥಳಕ್ಕೆ ಧಾವಿಸಿದ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಆಮ್ಲಜನಕದ ಕವಚ ಧರಿಸಿ ಬಾವಿಯೊಳಗೆ ಇಳಿದು ಅತ್ಯಂತ ಸಾಹಸದಿಂದ ನವೀನ್ ಅವರನ್ನು ಮೇಲಕ್ಕೆ ಎತ್ತಿದ್ದಾರೆ.

ಜೀವರಕ್ಷಕವಾದ ಸಿಪಿಆ‌ರ್ (CPR) ಚಿಕಿತ್ಸೆ:

ಬಾವಿಯಿಂದ ಮೇಲಕ್ಕೆ ಎತ್ತಿದಾಗ ನವೀನ್ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೆ ವೃತ್ತಿಯಿಂದ ನರ್ಸ್ ಆಗಿರುವ ಪತ್ನಿ ರೂತ್ ಮೇರಿ ಅವರು ಧೃತಿಗೆಡದೆ, ತಕ್ಷಣವೇ ಪತಿಗೆ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ (CPR) ನೀಡಿದ್ದಾರೆ. ಇವರ ಸಕಾಲಿಕ ಸಿಪಿಆರ್ ಚಿಕಿತ್ಸೆಯ ಫಲವಾಗಿ ನವೀನ್ ತಕ್ಷಣವೇ ಉಸಿರಾಡಲು ಆರಂಭಿಸಿದ್ದಾರೆ.

ಆಸ್ಪತ್ರೆಯಲ್ಲಿ ಚುರುಕಿನ ಚಿಕಿತ್ಸೆ – ನವೀನ್ ಚೇತರಿಕೆ:

ಅಷ್ಟರಲ್ಲೇ ಸ್ಥಳಕ್ಕೆ ಆಗಮಿಸಿದ ‘ಶಿವ ಆಂಬುಲೆನ್ಸ್’ ಮೂಲಕ ನವೀನ್ ಅವರನ್ನು ತಕ್ಷಣವೇ ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ರೂತ್ ಮೇರಿ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಅಲ್ಲಿನ ಸಿಬ್ಬಂದಿ ಪ್ರೇಮಾವತಿ ಸಿಸ್ಟರ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ವೇಗವಾಗಿ ತುರ್ತು ಚಿಕಿತ್ಸೆ ನೀಡಿದ್ದರಿಂದ ನವೀನ್ ಅವರು ಪ್ರಾಣಾಪಾಯದಿಂದ ಪಾರಾಗಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಸಿಬ್ಬಂದಿಯವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃತಜ್ಞತೆ ಸಲ್ಲಿಕೆ: ಕರೆ ಮಾಡಿದ ತಕ್ಷಣವೇ ಓಡೋಡಿ ಬಂದು ಜೀವರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಆಂಬುಲೆನ್ಸ್ ಚಾಲಕ ಹಾಗೂ ಮಾಲೀಕರ ಸಂಘದವರಿಗೆ, ಸುಳ್ಯ ತಾಲೂಕು ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಸಿಬ್ಬಂದಿಗೆ ಮತ್ತು ಸಂಕಷ್ಟದ ಸಮಯದಲ್ಲಿ ಹೆಗಲಿಗೆ ನಿಂತ ನೆರೆಹೊರೆಯ ಸಾರ್ವಜನಿಕರಿಗೆ ನವೀನ್ ಫೆರಾವೋ ಕುಟುಂಬಸ್ಥರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Dakshina Kannada

ಕಡಬದಲ್ಲಿ ಭಾರಿ ಗಾಳಿ-ಮಳೆಗೆ ದುರಂತ: ಕೃಷಿಕ ಸಾವು, ಮನೆಗೆ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ! ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ

Published

on

ಅಪಾಯಕಾರಿ ಮರ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ | ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿ ಜೊತೆ ಚರ್ಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮತ್ತು ಮಳೆಗೆ ಕಡಬ ತಾಲೂಕಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ. ಅಡಿಕೆ ಮರ ಮುರಿದು ಬಿದ್ದು ಕೃಷಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮನೆಗೆ ಮರ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ರಸ್ತೆಗೆ ಮರ ಬಿದ್ದು ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಧರೆಗುರುಳಿದ ಅಡಿಕೆ ಮರ!

ಕಡಬ ತಾಲೂಕಿನ ಕುಂತೂರು ಗ್ರಾಮದ ‘ಗುತ್ತುಪಾಲು’ ಎಂಬಲ್ಲಿ ಶುಕ್ರವಾರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ದಿಢೀರ್ ಬೀಸಿದ ಭಾರಿ ಬಿರುಗಾಳಿಗೆ ಅಡಿಕೆ ಮರವೊಂದು ಮುರಿದುಬಿದ್ದಿದೆ. ತೋಟದಲ್ಲಿದ್ದ ಕೃಷಿ ಕಾರ್ಮಿಕ ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (೬೬) ಅವರ ಮೈಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಮೂವರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮನೆ ಮೇಲೆ ಬಿದ್ದ ಬೃಹತ್ ಮರ: ಸೀತಮ್ಮ ಗಂಭೀರ

ಇನ್ನೊಂದೆಡೆ ಬಳ್ಪ ಗ್ರಾಮದ ನೇರ್ಪು ಎಂಬಲ್ಲಿ ಪರಮೇಶ್ವರ ಗೌಡ ಎಂಬವರ ಮನೆ ಮೇಲೆ ಶುಕ್ರವಾರ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಅವರ ಪತ್ನಿ ಸೀತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೈಕ್ ಸವಾರನಿಗೆ ಗಾಯ: ಜೀವಭಯದಲ್ಲೇ ಸಾರ್ವಜನಿಕರ ಸಂಚಾರ!

ಶುಕ್ರವಾರ ಸಂಜೆ ವೇಳೆ ಪೆರಾಬೆ ಗ್ರಾಮದ ಸುರುಳಿ ಕಲ್ಲಡ್ಕ (ಮಾಪಲ) ಬಳಿ ರಸ್ತೆಗೆ ಬೃಹತ್ ಮರ ಬಿದ್ದು, ಆ ಹಾದಿಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಚ್ಚೂರು ನಿವಾಸಿ ಗೀತೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಾರ್ವಜನಿಕರ ಆಕ್ರೋಶ:

ಸುರುಳಿ ಮಾಪಲ ಮೂಲಕ ನೆಲ್ಯಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಅಪಾಯಕಾರಿ ಮರಗಳು ರಸ್ತೆಯತ್ತ ಬಾಗಿವೆ. ಈ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

‘ಎಕ್ಸ್’ನಲ್ಲಿ ಸಾಂತ್ವನ: ಶೀಘ್ರ ಪರಿಹಾರಕ್ಕೆ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ ತಾಲೂಕಿನಲ್ಲಿ ಸಂಭವಿಸಿದ ಈ ಸಾಲು ಸಾಲು ಅವಘಡಗಳ ಕುರಿತು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆತಂಕ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ.

ಶೀಘ್ರ ಪರಿಹಾರಕ್ಕೆ ಆದೇಶ: ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ ಸಚಿವರು, ನೊಂದ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ತಕ್ಷಣವೇ ಸಿಗಬೇಕಾದ ಸೂಕ್ತ ಪರಿಹಾರ ಧನವನ್ನು ಆದಷ್ಟು ಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮರಗಳ ತೆರವುಗೊಳಿಸಿ – ಸಚಿವರ ಕರೆ: ಮಳೆ-ಬಿರುಗಾಳಿ ತೀವ್ರವಾಗಿರುವ ಈ ಸಮಯದಲ್ಲಿ ಮನೆಯ ಸುತ್ತಮುತ್ತ ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಗಾಳಿ ಜೋರಾಗಿ ಬೀಸುವಾಗ ಮರದ ಕೆಳಗೆ ನಿಲ್ಲದೆ ಸಾರ್ವಜನಿಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಡಬ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಶೀಘ್ರ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.

Continue Reading

Bantawala

3 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ತೋಟದ ಚರಂಡಿಯಲ್ಲಿ ಪತ್ತೆ: ಆಸ್ಪತ್ರೆಗೆ ದಾಖಲು

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ವೃದ್ಧ ಕಾಣೆಯಾಗಿದ್ದರಿಂದ ಅವರ ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಂದು ಬೆಳಿಗ್ಗೆ ಕುಕ್ಕಿಲದ ಪುರಂದರ ಭಟ್‌ ಎಂಬವರ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಶುಶ್ರೂಷೆ ನೀಡಿ, ವಿಟ್ಲದ ಆಪದ್ಬಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ಅಂಬ್ಯುಲೆನ್ಸ್‌ ಮೂಲಕ ಅವರನ್ನು ವಿಟ್ಲಕ್ಕೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ವೃದ್ಧರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಲ್ಲಿ ಮೂಡಿದ ಹಲವು ಅನುಮಾನಗಳು: ಆರ್ಥಿಕವಾಗಿ ಸದೃಢವಾಗಿದ್ದ ಗಿರಿಯಪ್ಪ ಸಪಲ್ಯ ಅವರು ಈ ಭಾರಿ ಮಳೆಯ ನಡುವೆ ಬೇರೆಯವರ ತೋಟಕ್ಕೆ ಯಾಕೆ ಹೋದರು? ಅವರನ್ನು ಯಾರಾದರೂ ಅಲ್ಲಿಗೆ ಕರೆದುಕೊಂಡು ಹೋದರೇ? ಅಥವಾ ದಾರಿ ತಪ್ಪಿ ಬಿದ್ದರಾ? ಎಂಬ ಹಲವಾರು ಪ್ರಶ್ನೆಗಳು ಸ್ಥಳೀಯವಾಗಿ ಕಾಡುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರು ಚೇತರಿಸಿಕೊಂಡ ನಂತರವಷ್ಟೇ ಈ ಎಲ್ಲಾ ಅನುಮಾನಗಳಿಗೆ ಹಾಗೂ ಘಟನೆಯ ನೈಜತೆಗೆ ಸ್ಪಷ್ಟ ಉತ್ತರ ಸಿಗಬೇಕಿದೆ.

Continue Reading

Bantawala

ಖಾಸಗಿ ಬಸ್ಸಿನಲ್ಲಿ ಮಹಿಳೆಯರಿಗೆ ಗುಪ್ತಾಂಗ ಪ್ರದರ್ಶನ: ಅರ್ಚಕನ ವಿಕೃತಿ ಕ್ಯಾಮೆರಾದಲ್ಲಿ ಸೆರೆ, ವೀಡಿಯೋ ವೈರಲ್!

Published

on

ಬಂಟ್ವಾಳ/ಮಂಗಳೂರು: ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಬೇಕಾದ ವ್ಯಕ್ತಿಯೊಬ್ಬ ಸಾರ್ವಜನಿಕ ಸಾರಿಗೆಯಲ್ಲಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರು ತಲೆತಗ್ಗಿಸುವಂತೆ ಮಾಡಿರುವ ಘಟನೆ ಮಂಗಳೂರು-ಉಪ್ಪಿನಂಗಡಿ ಮಾರ್ಗದ ಖಾಸಗಿ ಬಸ್ಸಿನಲ್ಲಿ ನಡೆದಿದೆ. ಚಲಿಸುವ ಬಸ್ಸಿನಲ್ಲಿ ಮಹಿಳೆಯರ ಎದುರಲ್ಲೇ ಗುಪ್ತಾಂಗ ಪ್ರದರ್ಶಿಸಿ ವಿಕೃತ ಕಾಮ ಮೆರೆದ ದೃಶ್ಯಗಳು ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿವೆ.

ಘಟನೆಯ ವಿವರ: ಅರ್ಚಕ ವೃತ್ತಿ ಮಾಡುತ್ತಿದ್ದ ವೃದ್ಧ ವ್ಯಕ್ತಿಯೊಬ್ಬ ಬಿಸಿರೋಡಿನಲ್ಲಿ ಮಂಗಳೂರು – ಉಪ್ಪಿನಂಗಡಿ ಮಾರ್ಗದ ಖಾಸಗಿ ಬಸ್ಸನ್ನೇರಿದ್ದಾನೆ. ಚಾಲಕನ ಎಡಬದಿಯಲ್ಲಿದ್ದ ಉದ್ದನೆಯ ಸೀಟಿನಲ್ಲಿ ಕುಳಿತಿದ್ದ ಈತ, ಲುಂಗಿಯನ್ನು ಮಡಚಿಕೊಂಡು ಎದುರಿನ ಸೀಟಿನಲ್ಲಿದ್ದ ಮಹಿಳಾ ಪ್ರಯಾಣಿಕರ ಕಡೆಗೆ ಅಸಹ್ಯಕರ ಹಾಗೂ ವಿಕೃತ ರೀತಿಯಲ್ಲಿ ಗುಪ್ತಾಂಗ ಪ್ರದರ್ಶಿಸಿದ್ದಾನೆ.

ಕ್ಯಾಮೆರಾದಲ್ಲಿ ಸೆರೆಯಾಯ್ತು ವಿಕೃತಿ: ಬಸ್ಸಿನಲ್ಲಿದ್ದ ಈತನ ನೀಚ ಕೃತ್ಯವನ್ನು ಕಂಡು ರೊಚ್ಚಿಗೆದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಮಹಿಳೆ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆ ವೃದ್ಧ ಅರ್ಚಕ ತಕ್ಷಣ ಭಯಗೊಂಡು, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ.

ಆರೋಪಿಯ ಗುರುತು ಪತ್ತೆ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ. ವಿಕೃತವಾಗಿ ವರ್ತಿಸಿದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ, ವೃತ್ತಿಯಲ್ಲಿ ಅರ್ಚಕ ಎಂದು ಗುರುತಿಸಲಾಗಿದೆ.

ಇತ್ತೀಚೆಗಷ್ಟೇ ಖಾಸಗಿ ಬಸ್ ಕಂಡಕ್ಟರ್‌ ಒಬ್ಬ ಬಸ್ಸಿನೊಳಗೆ ಇದೇ ರೀತಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕ ಆಕ್ರೋಶಕ್ಕೆ ಈಡಾಗಿದ್ದ. ಇದೀಗ ಪೂಜೆ-ಪುನಸ್ಕಾರಗಳನ್ನು ಮಾಡುವ ಧಾರ್ಮಿಕ ವೃತ್ತಿಯಲ್ಲಿದ್ದುಕೊಂಡು, ಸಮಾಜದಲ್ಲಿ ಗೌರವ ಪಡೆಯುತ್ತಿದ್ದ ವಯೋವೃದ್ಧ ಅರ್ಚಕನೇ ಇಂತಹ ವಿಕೃತ ಕೃತ್ಯಕ್ಕೆ ಕೈಹಾಕಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಧೈರ್ಯದಿಂದ ವೀಡಿಯೋ ಮಾಡಿ ಈತನ ನಿಜ ಬಣ್ಣ ಬಯಲು ಮಾಡಿದ ಮಹಿಳೆಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ವಿಕೃತಕಾಮಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Continue Reading

Trending

Copyright © 2025 Deevatige

error: Content is protected !!