Politics
ವಿಟ್ಲ ರಸ್ತೆ ಅಗಲೀಕರಣಕ್ಕೆ ತಾತ್ಕಾಲಿಕ ಬ್ರೇಕ್? ವರ್ತಕರ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ – ರಿಂಗ್ ರೋಡ್ಗೆ ಆದ್ಯತೆ ನೀಡುವ ಭರವಸೆ
ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಗಲೀಕರಣ ಪ್ರಸ್ತಾಪಕ್ಕೆ ಸ್ಥಳೀಯ ವ್ಯಾಪಾರಸ್ಥರು, ಕಟ್ಟಡ ಮಾಲಕರು ಹಾಗೂ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ನೇತೃತ್ವದಲ್ಲಿ 27 ಸದಸ್ಯರ ನಿಯೋಗವು ಸೋಮವಾರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ತಮ್ಮ ಆತಂಕ ಮತ್ತು ಬೇಡಿಕೆಗಳನ್ನು ಮನವರಿಕೆ ಮಾಡಿಕೊಟ್ಟಿತು.
ವಿಟ್ಲ ಪೇಟೆ ನಾಶದ ಭೀತಿಯಲ್ಲಿ ವರ್ತಕರು
ಪೇಟೆಯೊಳಗಿನ ಕಟ್ಟಡಗಳನ್ನು ಕೆಡವಿ ರಸ್ತೆ ಅಗಲೀಕರಣ ಮಾಡುವುದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ನಷ್ಟವಾಗಲಿದೆ. ರಸ್ತೆಯ ಎದುರಿನ ಅಂಗಡಿಗಳ ಹಿಂಭಾಗದಲ್ಲಿ ಮನೆಗಳು, ದೈವ-ದೇವರ ಆರಾಧನಾ ಮಂದಿರಗಳು, ನಾಗಬನಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಟ್ರಸ್ಟ್ ಕಚೇರಿಗಳಿವೆ. ಒಂದು ವೇಳೆ ರಸ್ತೆ ಅಗಲೀಕರಣ ನಡೆದರೆ ನೂರಾರು ಕುಟುಂಬಗಳು ಬೀದಿಗೆ ಬೀಳಲಿವೆ.
೨೦೧೬ರಲ್ಲಿಯೇ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮನವಿಯಂತೆ ವರ್ತಕರು ತಲಾ ೮ ಅಡಿ ಜಾಗ ಬಿಟ್ಟುಕೊಟ್ಟು ಸಹಕರಿಸಿದ್ದರು. ಆ ಸಮಯದಲ್ಲಿ ಮುಂದೆ ಅಗಲೀಕರಣ ಮಾಡುವುದಿಲ್ಲ, ಬೈಪಾಸ್ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಈಗ ಮತ್ತೆ ಅಗಲೀಕರಣಕ್ಕೆ ಮುಂದಾಗಿರುವುದು ವರ್ತಕರಲ್ಲಿ ಆತಂಕ ಮೂಡಿಸಿದೆ.
ಶಾಸಕರ ಸ್ಪಂದನೆ ಮತ್ತು ‘ರಿಂಗ್ ರೋಡ್’ ಯೋಜನೆ
ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ಆತಂಕವನ್ನು ಆಲಿಸಿದ ಶಾಸಕ ಅಶೋಕ್ ಕುಮಾರ್ ರೈ, “ಜನರಿಗೆ ಮತ್ತು ವ್ಯಾಪಾರಿಗಳಿಗೆ ತುಂಬಲಾರದ ಸಂಕಷ್ಟ ಬರುವುದಾದರೆ ನಾನು ಈ ರಸ್ತೆ ಅಗಲೀಕರಣ ಪ್ರಸ್ತಾವನೆಯನ್ನು ಇಲ್ಲೇ ಕೈಬಿಡುತ್ತೇನೆ. ನಮ್ಮ ಆಡಳಿತ ಇರುವುದು ಜನರಿಗಾಗಿ” ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ.
ಅಗಲೀಕರಣದ ಬದಲಿಗೆ ರಿಂಗ್ ರೋಡ್ (ಬೈಪಾಸ್) ನಿರ್ಮಿಸುವುದೇ ಶಾಶ್ವತ ಪರಿಹಾರ ಎಂದು ನಿಯೋಗವು ಶಾಸಕರಲ್ಲಿ ವಿನಂತಿಸಿತು. ಸರಕಾರಿ ಜಾಗ ಲಭ್ಯವಿರುವುದರಿಂದ ಮತ್ತು ಖಾಸಗಿ ಜಾಗ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ಧನ ಸಿಗುವುದರಿಂದ ರಿಂಗ್ ರೋಡ್ ನಿರ್ಮಾಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಿಯೋಗವು ಮನವರಿಕೆ ಮಾಡಿಕೊಟ್ಟಾಗ, ಈ ಮನವಿಯನ್ನು ಆದ್ಯತೆಯಾಗಿ ಪರಿಗಣಿಸುವುದಾಗಿ ಶಾಸಕರು ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಗೆ ಹೊಸ ಕಟ್ಟಡದ ಬೇಡಿಕೆ
ವಿಟ್ಲದಲ್ಲಿ ಸಮರ್ಪಕ ಪಟ್ಟಣ ಪಂಚಾಯಿತಿ ಕಚೇರಿ ಇಲ್ಲದಿರುವುದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಲಿ ಕಚೇರಿಯಲ್ಲಿ ಪಾರ್ಕಿಂಗ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ನಿಯೋಗ ಗಮನ ಸೆಳೆಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಹೋನೆಸ್ಟ್ ಇಕ್ಬಾಲ್, ಹಳೆಯ ಕೆಇಬಿ ಸಮೀಪ ತಾಲೂಕು ಪಂಚಾಯಿತಿಗೆ ಸೇರಿದ ಸುಮಾರು ಎರಡು ಎಕರೆ ಸರ್ಕಾರಿ ಜಾಗದಲ್ಲಿ ಹೊಸ ಪಟ್ಟಣ ಪಂಚಾಯಿತಿ ಕಚೇರಿ ನಿರ್ಮಿಸಬಹುದು ಎಂದು ಶಾಸಕರಿಗೆ ಮಾಹಿತಿ ನೀಡಿದರು. ಭವಿಷ್ಯದಲ್ಲಿ ವಿಟ್ಲ ತಾಲೂಕು ಕೇಂದ್ರವಾದರೂ ಇದೇ ಜಾಗ ಆಡಳಿತಾತ್ಮಕ ಕೇಂದ್ರಕ್ಕೆ ಸೂಕ್ತವಾಗಲಿದೆ ಎಂದರು.
ವಿಟ್ಲ ತಾಲೂಕು ಕೇಂದ್ರಕ್ಕೆ ಸಹಕಾರ
ವಿಟ್ಲವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವಂತೆ ನಿಯೋಗ ಮನವಿ ಮಾಡಿತು. ಈ ಕುರಿತು ಪ್ರಯತ್ನಿಸುವುದಾಗಿ ಶಾಸಕ ಭರವಸೆ ನೀಡಿದರು.
ಪಾರ್ಕಿಂಗ್ ವ್ಯವಸ್ಥೆಗೂ ಆದ್ಯತೆ
ಪಟ್ಟಣದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನಿಯೋಗ ವಿವರಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಪಾರ್ಕಿಂಗ್ ವ್ಯವಸ್ಥೆ ಅಗತ್ಯವಾಗಿದ್ದು, ಸೂಕ್ತ ಜಾಗವನ್ನು ಗುರುತಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

2016ರ ಭರವಸೆ ನೆನಪಿಸಿದ ವರ್ತಕರು
ನಿಯೋಗವು 2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಜಗನ್ನಾಥ ಸಾಲಿಯಾನ್ ಹಾಗೂ ವಿಟ್ಲ ಕಸಬಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರಮಾನಾಥ್ ಅವರ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿಗಾಗಿ ವರ್ತಕರು ತಲಾ 8 ಅಡಿ ಜಾಗ ಬಿಟ್ಟುಕೊಟ್ಟಿದ್ದನ್ನು ನೆನಪಿಸಿತು. ಆ ವೇಳೆ ಮುಂದೆ ರಸ್ತೆ ಅಗಲೀಕರಣ ಮಾಡುವುದಿಲ್ಲ, ಬದಲಾಗಿ ಬೈಪಾಸ್ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು ಎಂಬ ವಿಚಾರವನ್ನೂ ತಿಳಿಸಿತು.
ಆದರೆ ಇದುವರೆಗೆ ಬೈಪಾಸ್ ನಿರ್ಮಾಣವಾಗದೆ ಮತ್ತೆ ರಸ್ತೆ ಅಗಲೀಕರಣ ಪ್ರಸ್ತಾಪ ಮುಂದಿಟ್ಟಿರುವುದು ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ. ರಸ್ತೆ ಅಗಲೀಕರಣ ನಡೆದರೆ ವಿಟ್ಲ ಪೇಟೆಯ ಅಸ್ತಿತ್ವವೇ ಅಪಾಯಕ್ಕೆ ಸಿಲುಕಲಿದ್ದು, ವ್ಯಾಪಾರ ಹಾಗೂ ಜೀವನೋಪಾಯ ಸಂಪೂರ್ಣ ಕುಸಿಯಲಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದರು.

ಹಿಂದಿನ ಸಭೆಯಲ್ಲಿ ಏನಾಗಿತ್ತು?
ಕೆಲವು ದಿನಗಳ ಹಿಂದೆ ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮೂಲ ಯೋಜನೆಯಲ್ಲಿ 22 ಮೀಟರ್ ರಸ್ತೆ ಅಗಲೀಕರಣ ಪ್ರಸ್ತಾಪ ಇದ್ದರೂ, ವರ್ತಕರ ಹಿತದೃಷ್ಟಿಯಿಂದ ಅದನ್ನು 15 ಮೀಟರ್ಗೆ ಇಳಿಸಿ ಫುಟ್ಪಾತ್ ಸಹಿತ ಅಭಿವೃದ್ಧಿಪಡಿಸುವ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದ್ದರು. “ನಾನು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವವನಲ್ಲ. ನಿಮ್ಮೆಲ್ಲರ ವಿಶ್ವಾಸ ಪಡೆದೇ ಮುಂದುವರಿಯುತ್ತೇನೆ. ನಿಮ್ಮ ತೀವ್ರ ವಿರೋಧದ ನಡುವೆ ಕೆಲಸ ಮಾಡುವ ಹಠ ನನಗಿಲ್ಲ” ಎಂದು ಶಾಸಕರು ತಿಳಿಸಿದ್ದರು. ಆದರೆ ಜಿಲ್ಲಾಧಿಕಾರಿಗಳವರ ನೇತೃತ್ವದಲ್ಲಿ ಮುಂದೆ ಯಾವತ್ತೂ ಅಗಲೀಕರಣ ಮಾಡುವುದಿಲ್ಲ ಎಂದು ಮನವೊಲಿಸಿ ಇಲ್ಲಿ ಕೊನೆಯ ಅಗಲೀಕರಣ 2016ರಲ್ಲಿ ನಡೆದಿತ್ತು. ಆಗಲೂ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳಿಗೆ ಪರಿಹಾರ ದೊರೆತಿಲ್ಲ.
ನಿಯೋಗದಲ್ಲಿ ಭಾಗವಹಿಸಿದವರು
ನಿಯೋಗದಲ್ಲಿ ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ., ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಉದ್ಯಮಿ ಜಗನ್ನಾಥ ಸಾಲಿಯಾನ್, ವಿಟ್ಲ ಅರಮನೆಯ ಕೃಷ್ಣಯ್ಯ ಬಳ್ಳಾಲ್, ಉದ್ಯಮಿಗಳು ಮತ್ತು ಕಟ್ಟಡ ಮಾಲೀಕರಾದ ಸತೀಶ್ ಆಳ್ವ ಇರಾಗುತ್ತು, ಹೋನೆಸ್ಟ್ ಇಕ್ಬಾಲ್, ಸುದರ್ಶನ್ ಪಡಿಯಾರ್, ಸುಭಾಷ್ಚಂದ್ರ ನಾಯಕ್, ವಿ.ಎ. ರಶೀದ್, ರಾಮದಾಸ್ ಶೆಣೈ, ಆರ್.ಕೆ. ಅಬ್ದುಲ್ಲಾ, ಪ್ರಭಾಕರ ಶೆಟ್ಟಿ, ದಿನೇಶ್ ಆಳ್ವ, ಇಬ್ರಾಹಿಂ ಸೇರಿದಂತೆ ಒಟ್ಟು 27 ಮಂದಿ ಭಾಗವಹಿಸಿ ಶಾಸಕರಿಗೆ ಮನವಿ ಸಲ್ಲಿಸಿದರು.
ನಿಯೋಗದ ಬೇಡಿಕೆಗಳಿಗೆ ಶಾಸಕರು ಧನಾತ್ಮಕವಾಗಿ ಸ್ಪಂದಿಸಿದ್ದು, ಮಾತಿನಂತೆ ನಡೆದುಕೊಳ್ಳುವ ಶಾಸಕರ ಭರವಸೆಯಿಂದಾಗಿ ವಿಟ್ಲದ ಅಭಿವೃದ್ಧಿಗೆ ಮತ್ತು ಪೇಟೆಯ ಉಳಿವಿಗೆ ಹೊಸ ಭರವಸೆ ಮೂಡಿದೆ ಎಂದು ವರ್ತಕರ ಸಂಘದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ರಸ್ತೆ ಅಗಲೀಕರಣದ ಬದಲು ರಿಂಗ್ ರೋಡ್ ನಿರ್ಮಾಣ, ಹೊಸ ಪಟ್ಟಣ ಪಂಚಾಯಿತಿ ಕಚೇರಿ, ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಟ್ಲವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಮೂರು ಪ್ರಮುಖ ಬೇಡಿಕೆಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಸಕಾರಾತ್ಮಕ ಸ್ಪಂದನೆ ನೀಡಿರುವುದು ವಿಟ್ಲದ ಅಭಿವೃದ್ಧಿಗೆ ಹೊಸ ಭರವಸೆ ಮೂಡಿಸಿದೆ ಎಂದು ನಿಯೋಗವು ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
Kadaba
ನೂಜಿಬಾಳ್ತಿಲ: ಬಾಲೆಮಾರು-ಕುರ್ನೂಜಿಯಲ್ಲಿ ಮಳೆಗಾಲದಲ್ಲಿ ಹೊಳೆದಾಟಲು ಪರದಾಟ; ಸೇತುವೆ ನಿರ್ಮಾಣಕ್ಕೆ ಭರವಸೆ ನೀಡಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ
ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ಇಚ್ಲಂಪಾಡಿ ಸಂಪರ್ಕಿಸುವ ರಸ್ತೆಯ ಬಾಲೆಮಾರು-ಕುರ್ನೂಜಿ ಎಂಬಲ್ಲಿ ಹರಿಯುವ ಹೊಳೆ ದಾಟಲು ಗ್ರಾಮಸ್ಥರು ಮಳೆಗಾಲದಲ್ಲಿ ತೀವ್ರ ಪರದಾಟ ನಡೆಸುತ್ತಿದ್ದಾರೆ. ಇಲ್ಲಿನ ಗ್ರಾಮಸ್ಥರ ದಶಕಗಳ ಸಂಕಷ್ಟವನ್ನು ಆಲಿಸಿದ ಕಾಂಗ್ರೆಸ್ ಮುಖಂಡ ಜಿ.ಕೃಷ್ಣಪ್ಪ ರಾಮಕುಂಜ ಅವರು ಆಃ 2ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೇತುವೆ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ತೆಪ್ಪವೇ ಆಸರೆ: ಗ್ರಾಮಸ್ಥರ ಮುಗಿಯದ ಸಂಕಷ್ಟ!
ಬೇಸಿಗೆ ಕಾಲದಲ್ಲಿ ಗ್ರಾಮಸ್ಥರೇ ಸ್ವತಃ ಪಾಲ (ಕಾಲುಸಂಕ) ರಚಿಸಿಕೊಂಡು ಹೊಳೆ ದಾಟುತ್ತಾರೆ. ಆದರೆ ಮಳೆಗಾಲದಲ್ಲಿ ಗುಂಡ್ಯ ಹೊಳೆಯು ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾದಾಗ, ಈ ಹೊಳೆಯಲ್ಲೂ ನೀರು ಆವರಿಸಿ ಪಾಲ ಮುಳುಗಡೆಯಾಗುತ್ತದೆ. ಇದರಿಂದ ಸುತ್ತಮುತ್ತಲಿನ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ.
ತೆಪ್ಪವೇ ಆಸರೆ: ಪಾಲ ಮುಳುಗಡೆಯಾದಾಗ ಅಪಾಯಕಾರಿ ರೀತಿಯಲ್ಲಿ ತೆಪ್ಪವನ್ನೇ ಬಳಸಿಕೊಂಡು ಗ್ರಾಮಸ್ಥರು ಹೊಳೆ ದಾಟಬೇಕಾದ ದುಸ್ಥಿತಿ ಇದೆ.

ಸಾಕಷ್ಟು ಕುಟುಂಬಗಳಿಗೆ ತೊಂದರೆ: ಈ ಭಾಗದಲ್ಲಿ 25ಕ್ಕೂ ಹೆಚ್ಚು ಮನೆಗಳಿದ್ದು, ದಿನನಿತ್ಯ ಶಾಲಾ-ಕಾಲೇಜು ಮಕ್ಕಳು ಹಾಗೂ ಗ್ರಾಮಸ್ಥರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಈ ಹೊಳೆ ದಾಟಿಯೇ ತಮ್ಮ ದೈನಂದಿನ ಕೆಲಸಗಳಿಗೆ ತೆರಳಬೇಕಾಗಿದೆ.
ಹಲವು ವರ್ಷಗಳ ಬೇಡಿಕೆ: ಇಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಭರವಸೆಗಳು ಸಿಕ್ಕಿವೆಯೇ ಹೊರತು ಸೇತುವೆ ಭಾಗ್ಯ ಮಾತ್ರ ಇಂದಿಗೂ ಸಿಕ್ಕಿಲ್ಲ ಎಂಬುದು ಸ್ಥಳೀಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸ್ಥಳಕ್ಕೆ ಜಿ.ಕೃಷ್ಣಪ್ಪ ಭೇಟಿ, ಪರಿಶೀಲನೆ
ಇಲ್ಲಿನ ಪರಿಸ್ಥಿತಿಯ ಬಗ್ಗೆ ಸ್ಥಳೀಯರು ಕಾಂಗ್ರೆಸ್ ಮುಖಂಡ ಕರುಣಾಕರ ಗೌಡ ದೊಡ್ಡಉರ್ಕ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಜಿ.ಕೃಷ್ಣಪ್ಪ ರಾಮಕುಂಜ ಅವರು ಕರುಣಾಕರ ಗೌಡ ಅವರೊಂದಿಗೆ ಬಾಲೆಮಾರು-ಕುರ್ನೂಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಿಡಬ್ಲ್ಯುಡಿ ಇಂಜಿನಿಯರ್ಗೆ ಸೂಚನೆ:
ಸ್ಥಳೀಯರೊಂದಿಗೆ ಸಂಕಷ್ಟ ಆಲಿಸಿದ ಜಿ.ಕೃಷ್ಣಪ್ಪ ಅವರು, ಸೇತುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಅಲ್ಲದೆ, ಸ್ಥಳದಿಂದಲೇ ಲೋಕೋಪಯೋಗಿ ಇಲಾಖೆಯ (PWD) ಇಂಜಿನಿಯರ್ ಅವರಿಗೆ ದೂರವಾಣಿ ಕರೆ ಮಾಡಿ, ತಕ್ಷಣವೇ ಸೇತುವೆ ನಿರ್ಮಾಣಕ್ಕೆ ಅಂದಾಜುಪಟ್ಟಿ (Estimate) ತಯಾರಿಸುವಂತೆ ಸೂಚನೆ ನೀಡಿದರು.
ಭೇಟಿ ವೇಳೆಯಲ್ಲಿದ್ದ ಪ್ರಮುಖರು
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶೀನಪ್ಪ ಗೌಡ ಕುರ್ನೂಜಿ, ಶೇಖರ ಗೌಡ ಬಾಲೆಮಾರು, ಧನಂಜಯ ಗೌಡ ಬಳ್ಳೇರಿ, ಪ್ರಮೋದ್ ಗೌಡ ಬಳ್ಳೇರಿ, ಚಂದ್ರಶೇಖರ ಗೌಡ ಬಳ್ಳೇರಿ, ಚೇತನ್ ಬಳ್ಳೇರಿ, ಬಾಲಕೃಷ್ಣ ಬಳ್ಳೇರಿ, ಬಾಲಕ್ಕ ಕುರ್ನೂಜಿ, ನಳಿನಿ ಕುರ್ನೂಜಿ, ರಾಮಕ್ಕ ಬಾಲೆಮಾರು, ದೇಜಪ್ಪ ಗೌಡ ಬಾಲೆಮಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Politics
ನರಿಮೊಗರು ಗ್ರಾ.ಪಂ ಎದುರು ‘ಪುತ್ತಿಲ ಪರಿವಾರ’ ಬೃಹತ್ ಪ್ರತಿಭಟನೆ: 15 ದಿನಗಳಲ್ಲಿ ರಸ್ತೆ ದುರಸ್ತಿ ಭರವಸೆ
ಪುತ್ತೂರು: ಪುರಷರಕಟ್ಟೆ–ಶಾಂತಿಗೋಡು ಸಂಪರ್ಕ ರಸ್ತೆಯ ದುಸ್ಥಿತಿಯನ್ನು ಖಂಡಿಸಿ ಹಾಗೂ ತಕ್ಷಣ ರಸ್ತೆ ದುರಸ್ತಿಗೆ ಆಗ್ರಹಿಸಿ ನರಿಮೊಗರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗುರುವಾರ ‘ಪುತ್ತಿಲ ಪರಿವಾರ’ದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅಧಿಕಾರಿಗಳು 15 ದಿನಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಲಿಖಿತ/ಮೌಖಿಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಪುರಷರಕಟ್ಟೆ–ಶಾಂತಿಗೋಡು ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ತೀವ್ರ ದುಸ್ತರವಾಗಿದೆ. ಇದರಿಂದಾಗಿ ಸ್ಥಳೀಯರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದಿನನಿತ್ಯ ಪರದಾಡುವಂತಾಗಿದೆ. ರಸ್ತೆ ಸರಿಪಡಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ಗ್ರಾ.ಪಂ ಕಾರ್ಯದರ್ಶಿ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ನೀಡಿದ್ದ ಭರವಸೆಯೂ ಹುಸಿಯಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪುತ್ತಿಲ ಪರಿವಾರದ ಕಾರ್ಯಕರ್ತರು ಮತ್ತೆ ಬೀದಿಗಿಳಿದು ಧರಣಿ ನಡೆಸಿದರು.
ಅಧಿಕಾರಿಗಳು ನೆಪ ಹೇಳುವುದು ಬಿಡಲಿ: ಅರುಣ್ ಕುಮಾರ್ ಪುತ್ತಿಲ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, “ಅಧಿಕಾರಿಗಳು ಅನುದಾನದ ಕೊರತೆಯನ್ನು ನೆಪವಾಗಿ ಹೇಳಿ ಜಾರಿಕೊಳ್ಳುವುದು ಸರಿಯಲ್ಲ. ಸಾರ್ವಜನಿಕರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಅಗತ್ಯ ಕಾಮಗಾರಿ ನಡೆಸುವುದು ಅಧಿಕಾರಿಗಳ ಪ್ರಥಮ ಕರ್ತವ್ಯ” ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ನಾರಾಯಣ ಪ್ರಕಾಶ್ ಮಾತನಾಡಿ, “ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಭಾಗಕ್ಕೆ ಸಮರ್ಪಕ ರಸ್ತೆ ಹಾಗೂ ಬಸ್ ಸೌಲಭ್ಯ ಸಿಕ್ಕಿಲ್ಲದಿರುವುದು ದುರಂತ. ಅಧಿಕಾರಿಗಳು ಅಹಂಕಾರ ಬಿಟ್ಟು ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಬೇಕು. ಕೊಟ್ಟ ಭರವಸೆಯಂತೆ 15 ದಿನಗಳೊಳಗೆ ಕಾಮಗಾರಿ ಆರಂಭವಾಗದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಉಗ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
15 ದಿನಗಳಲ್ಲಿ ಕಾಮಗಾರಿ ಪೂರ್ಣ: ತಾಪಂ ಇಒ ಭರವಸೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಇಒ ನವೀನ್ ಭಂಡಾರಿ, “ಚರಂಡಿ ದುರಸ್ತಿ ಕಾಮಗಾರಿಯನ್ನು ತಕ್ಷಣವೇ ಆರಂಭಿಸಲಾಗುವುದು. ರಸ್ತೆ ದುರಸ್ತಿಯನ್ನು ಮುಂದಿನ 15 ದಿನಗಳ ಒಳಗೆ ಪೂರ್ಣಗೊಳಿಸಲಾಗುವುದು. ಸದ್ಯ ಚರಂಡಿ ಕಾಮಗಾರಿಗಾಗಿ ಗ್ರಾಮ ಪಂಚಾಯಿತಿ ಅನುದಾನದಿಂದ ₹20 ಸಾವಿರ ಮೀಸಲಿರಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದರು. ಅಧಿಕಾರಿಗಳ ಸ್ಪಂದನೆಯ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಪುತ್ತಿಲ ಪರಿವಾರದ ನೂರಾರು ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
cyber crime
ಶಾಸಕ ಅಶೋಕ್ ರೈ ಹೆಸರು ಹೇಳಿ ಮಹಿಳೆಗೆ ವಂಚನೆ; ಕಳೆದುಕೊಂಡ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕರು
₹22,500 ಕಳೆದುಕೊಂಡ ಮಹಿಳೆಗೆ ಹೆಚ್ಚುವರಿಯಾಗಿ ₹7,500 ಸೇರಿಸಿ ಒಟ್ಟು ₹30 ಸಾವಿರ ನೆರವು • “ನನ್ನ ಹೆಸರು ಹೇಳಿ ವಂಚಿಸಿದ್ದು ನೋವಿನ ಸಂಗತಿ” ಎಂದ ಶಾಸಕ
ಪುತ್ತೂರು, ಜು. 29: ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸುಳ್ಯ ತಾಲೂಕಿನ ಮಹಿಳೆಯೊಬ್ಬರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ, ಮಹಿಳೆ ಕಳೆದುಕೊಂಡ ಹಣವನ್ನು ಸ್ವತಃ ಭರಿಸುವ ಮೂಲಕ ಶಾಸಕ ಅಶೋಕ್ ರೈ ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ, ಗಣೇಶ್ ಅವರ ಪತ್ನಿ ಪುಷ್ಪಾವತಿ ವಂಚನೆಗೆ ಒಳಗಾದ ಮಹಿಳೆ. ಪುಷ್ಪಾವತಿಯವರ ಪತಿ ಗಣೇಶ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ದಾನಿಗಳು ಒಟ್ಟು ₹22,500 ಹಣವನ್ನು ಪುಷ್ಪಾವತಿಯವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.
ಜು. 27ರಂದು ಸಂಜೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ, “ಪುತ್ತೂರು ಶಾಸಕ ಅಶೋಕ್ ರೈ ಅವರು ನಿಮಗೆ ₹3 ಲಕ್ಷ ಆರ್ಥಿಕ ನೆರವು ನೀಡಲು ಒಪ್ಪಿದ್ದಾರೆ. ಆದರೆ ಹಣ ಬಿಡುಗಡೆ ಮಾಡಲು ಮೊದಲು ₹25 ಸಾವಿರ ತೆರಿಗೆ ಪಾವತಿಸಬೇಕು” ಎಂದು ನಂಬಿಸಿದ್ದಾನೆ.
ಶಾಸಕರ ಹೆಸರಿನ ಮೇಲಿನ ವಿಶ್ವಾಸದಿಂದ ಪುಷ್ಪಾವತಿ ತಮ್ಮ ಖಾತೆಯಲ್ಲಿದ್ದ ₹22,500 ಅನ್ನು ಫೋನ್ಪೇ ಮೂಲಕ ಆರೋಪಿಗೆ ವರ್ಗಾಯಿಸಿದ್ದಾರೆ. ಬಳಿಕ ಆರೋಪಿಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದ್ದು, ತಾವು ವಂಚನೆಗೆ ಒಳಗಾಗಿರುವುದು ತಿಳಿದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಷಯ ತಿಳಿದು ಸ್ಪಂದಿಸಿದ ಶಾಸಕ
ಈ ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕ ಅಶೋಕ್ ರೈ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರು ಬಳಸಿಕೊಂಡು ಸಂಕಷ್ಟದಲ್ಲಿದ್ದ ಮಹಿಳೆಯನ್ನು ವಂಚಿಸಿರುವುದು ಅಮಾನವೀಯ ಕೃತ್ಯ ಎಂದು ಅವರು ಹೇಳಿದ್ದಾರೆ.
ಪತ್ರಕರ್ತರ ಮೂಲಕ ವಿಷಯ ತಿಳಿದ ಬಳಿಕ, “ನನ್ನ ಹೆಸರಿನ ಮೇಲಿನ ನಂಬಿಕೆಯಿಂದ ಮಹಿಳೆ ಹಣ ಕಳುಹಿಸಿದ್ದಾರೆ. ಅವರು ಕಳೆದುಕೊಂಡ ಹಣವನ್ನು ನಾನು ಭರಿಸುತ್ತೇನೆ” ಎಂದು ಭರವಸೆ ನೀಡಿದರು.
ಅದರಂತೆ ಮಹಿಳೆ ಕಳೆದುಕೊಂಡ ₹22,500 ಜೊತೆಗೆ ಹೆಚ್ಚುವರಿಯಾಗಿ ₹7,500 ಸೇರಿಸಿ ಒಟ್ಟು ₹30,000 ಅನ್ನು ಅವರ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಶಾಸಕರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಮಯೋಚಿತ ನೆರವು ನೀಡಿದ ಕಾರ್ಯ ಶ್ಲಾಘನೀಯವಾಗಿದೆ.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
