Connect with us

karavali

ಪುತ್ತೂರು ಸರ್ಕಾರಿ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಸಸ್ಪೆಂಡ್.. ವಿದ್ಯಾರ್ಥಿಗಳ ಛೂ ಬಿಟ್ಟು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟನೆ..

Published

on

ಫೆಬ್ರವರಿ 16ರಂದು ಕಾಲೇಜು ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ, ಜವಾಬ್ದಾರಿಯಲ್ಲಿ ನುಣುಚಿಕೊಂಡ ಆರೋಪದಲ್ಲಿ ಪ್ರಭಾರ ಪ್ರಾಂಶುಪಾಲೆ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ವೇದಶ್ರೀ ನಿಡ್ಯಾ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ / ರಸ್ತೆ ತಡೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳದೆ ಸಾರ್ವಜನಿಕ ಪ್ರತಿಭಟನೆ ತಡೆಯಲು ಅಗತ್ಯ ಕ್ರಮ ವಹಿಸದೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಆರೋಪದಲ್ಲಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿನ ಪ್ರಭಾರ ಪ್ರಾಂಶುಪಾಲರು ಹಾಗೂ ಸಹಪ್ರಾಧ್ಯಾಪಕರಾದ ಶ್ರೀಮತಿ ವೇದಶ್ರೀ ನಿಡ್ಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10(1)(ಡಿ)ರನ್ವಯ ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಮತ್ತು ಸಮನ್ವಯ ಇದರ ಸರಕಾರದ ಅಧೀನ ಕಾರ್ಯದರ್ಶಿಯಾದ ಜಬಿನ್ ತಾಜ್ ಜಿ..ಎಂ. ಅವರು ಆದೇಶಿಸಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿ ದಿನಾಂಕ 16.02.2026ರಂದು ವಿದ್ಯಾರ್ಥಿನಿಯರು ಪ್ರತಿಭಟನೆ /ಧರಣಿ ನಡೆಸಿರುವ ಕುರಿತು ದಿನಾಂಕ 17.02.2026ರಂದು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರು ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿ, ಮಾಹಿತಿಯನ್ನು ಸಂಗ್ರಹಿಸಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಸಲ್ಲಿಸಿರುವ ವರದಿಯ ಸಂಕ್ಷಿಪ್ತ ವರದಿಯಂತೆ ಪ್ರಸ್ತುತ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ವೇದಶ್ರೀ ನಿಡ್ಯ ಸಹಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ ಇವರು ತಮ್ಮ ಹೇಳಿಕೆಯಲ್ಲಿ ನೂತನ ಕಟ್ಟಡಕ್ಕಾಗಿ ಮಾನ್ಯ ಶಾಸಕರಿಗೆ ಮನವಿ ನೀಡಿದ್ದು ದಿನಾಂಕ 16.02.2026ರಂದು ತರಗತಿಗೆ ಬಂದ ಸಂದರ್ಭದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದ ಕಾರಣ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವವುದಾಗಿ ತಿಳಿಸಿದ್ದರು.


ಪುತ್ತೂರು ನಗರ ಪೊಲೀಸ್ ಠಾಣೆಯವರು ಪೋಲಿಸ್ ನಿರೀಕ್ಷಕರು ಪುತ್ತೂರು ನಗರ ಪೊಲೀಸ್ ಠಾಣೆ ಅವರು ತಮ್ಮ ಪತ್ರದಲ್ಲಿ ದಿನಾಂಕ 16.02.2026ರಂದು ಬೆಳಿಗ್ಗೆ ಸುಮಾರು 9:30ಕ್ಕೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ರಸ್ತೆ ತಡೆಯನ್ನು ಯಾವುದೇ ಪೂರ್ವಾನುಮತಿ ಪಡೆಯದೆ ನಡೆಸಿರುವುದಲ್ಲದೆ ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವುದಾಗಿ ತಿಳಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ವೇದಶ್ರೀ ನಿಡ್ಯ ಮತ್ತು ಪ್ರಾಧ್ಯಾಪಕರಾದ ಐವನ್ ಫ್ರಾನ್ಸಿಸ್ ಲೋಬೋರವರು ಉಪಸ್ಥಿತರಿದ್ದು ಮತ್ತು ಈ ಪ್ರತಿಭಟನೆಗೆ ಪ್ರೇರೇಪಿಸಿರುವ ಬಗ್ಗೆ ಇಲಾಖೆಗೆ ಗುಪ್ತ ಮಾಹಿತಿ ಬಂದಿರುವುದಾಗಿ ತಿಳಿಸಿರುತ್ತಾರೆ.


ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಆಶೋಕ್‌ ಕುಮಾರ್‌ ರೈಯವರು ತಮ್ಮ ಪತ್ರದಲ್ಲಿ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಶ್ರೀ ನಿಡ್ಯ ಇವರು ವಿದ್ಯಾರ್ಥಿಗಳು ಡಯಾಲಿಸಿಸ್ ಕೇಂದ್ರದ ನಿರ್ಮಾಣ ಕಾಮಗಾರಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಆರೋಗ್ಯದ ಸಮಸ್ಯೆಗಳಾಗಲಿ, ತೊಂದರೆಗಳಾಗಲಿ, ಯಾವುದೇ ಮಾಹಿತಿಯನ್ನು ನನಗೆ ಅಥವಾ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿರುವುದಿಲ್ಲ, ಮತ್ತು ಈ ವಿಚಾರವಾಗಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಸರ್ಕಾರದ ವಿರುದ್ಧ/ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿರುತ್ತಾರೆ. ಸದರಿ ಕಾಲೇಜಿನ ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸಿರುವ ಬಗ್ಗೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಈ ರೀತಿ ವಿದ್ಯಾರ್ಥಿನಿಯರು ಪ್ರತಿಭಟಿಸುವ ಸಂದರ್ಭದಲ್ಲಿ ಯಾವುದೇ ಅನಾಹುತಗಳು ನಡೆದರೆ ಅಥವಾ ಕಾನೂನಾತ್ಮಕ ಕ್ರಮಗಳು ಜಾರಿಯಾದಲ್ಲಿ ವಿದ್ಯಾರ್ಥಿನಿಯರ ಜವಾಬ್ದಾರಿ ಸಂಪೂರ್ಣವಾಗಿ ಪ್ರಾಂಶುಪಾಲರು ಮತ್ತು ಕಾಲೇಜಿನ ಸಿಬ್ಬಂದಿಗಳದಾಗಿರುತ್ತದೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಬಗ್ಗೆ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ಅಥವಾ ಉಪನ್ಯಾಸಕರಿಗೆ ಮನವಿಯನ್ನು ಸಲ್ಲಿಸಲು ಅವಕಾಶವಿದ್ದು, ಆದರೆ ಸದರಿ ಸಮಸ್ಯೆಗಳ ಬಗ್ಗೆ ತರಗತಿ ಪ್ರಾರಂಭಗೊಂಡ ನಂತರ ಇಂಥ ಯಾವುದೇ ಮಾಹಿತಿ ನೀಡಿರುವ ಬಗ್ಗೆ ದಾಖಲೆ ಇರುವುದಿಲ್ಲ ಮುಂದುವರಿದು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಂಸ್ಥೆಗಳ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಆಶೋಕ್‌ ಕುಮಾರ್‌ ರೈ ಇವರೊಂದಿಗೆ ಸಭೆ ನಡೆಸಿರುವ ಬಗ್ಗೆ ಸಭಾ ನಡವಳಿಯ ಯಾವುದೇ ದಾಖಲೆ ಅಥವಾ ಲಿಖಿತವಾಗಿ ಈ ಬಗ್ಗೆ ಅಧ್ಯಕ್ಷರಿಗೆ ಸಲ್ಲಿಸಿರುವ ಯಾವುದೇ ಪತ್ರ ವ್ಯವಹಾರ ದಾಖಲೆಗಳನ್ನು ಪ್ರಾಂಶುಪಾಲರು ನೀಡಿರುವುದಿಲ್ಲ, ಮತ್ತು ಈ ಸಭೆ ನಡೆಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ, ಕಾಲೇಜಿನ ಅಭಿವೃದ್ಧಿಗೆ ಸಂಬಂಧಪಟ್ಟಂತ ವಿಷಯಗಳಲ್ಲಿ ಪ್ರಾಂಶುಪಾಲರು ಮಾನ್ಯ ಶಾಸಕರ / ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾಗಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾಲೇಜಿನ ಮತ್ತು ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತ ದೃಷ್ಟಿಯಿಂದ ಪ್ರಸ್ತುತ ಪ್ರಧಾನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಶ್ರೀ ನಡ್ಯಾರವರ ಪ್ರಭಾರವನ್ನು ರದ್ದುಗೊಳಿಸಿ ಕಾಲೇಜಿನ ಹಿರಿಯ ಉಪನ್ಯಾಸಗಳಿಗೆ ಪ್ರಾಂಶುಪಾಲರ ಪ್ರಭಾರವನ್ನು ನೀಡಬಹುದೆಂದು ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ವರದಿ ನೀಡಿದ್ದರು.


ದಿನಾಂಕ 16.02.2026ರಂದು ಸರಕಾರಿ ಪ್ರಥಮ ದರ್ಜೆಕ ಮಹಿಳಾ ಕಾಲೇಜು ಪುತ್ತೂರಿನಲ್ಲಿ ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ/ ರಸ್ತೆ ತಡೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಜಂಟಿ ನಿರ್ದೇಶಕ ವರದಿ, ಪೊಲೀಸ್‌ ವರದಿ ಹಾಗೂ ಮಾನ್ಯ ಶಾಸಕರ ಪತ್ರಗಳನ್ನು ಪರಿಶೀಲಿಸಿದ್ದು, ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳದೆ ಸಾರ್ವಜನಿಕ ಪ್ರತಿಭಟನೆ ತಡೆಯಲು ಅಗತ್ಯ ಕ್ರಮ ವಹಿಸದೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ಘಟನೆಯಿಂದಾಗಿ ಕಾಲೇಜಿನ ಪ್ರಾಂಶುಪಾಲರು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಜವಾಬ್ದಾರಿಯನ್ನು ಸಮರ್ಥಕವಾಗಿ ನೆರವೇರಿಸಲು ವಿಫಲರಾಗಿರುವುದು ಸ್ಪಷ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ವೇದಶ್ರೀ ನಿಡ್ಯ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮಾವಳಿಗಳಲ್ಲಿ ಶಿಸ್ತು ಕ್ರಮ ಜರಗಿಸಲು ಉದ್ದೇಶಿಸಿ ಪ್ರಕರಣದ ಗಂಭೀರತೆಯನ್ನು ಹಾಗೂ ಇಲಾಖೆ ತನಿಖೆಯ ನಿಷ್ಪಕ್ಷಪಾತ ನಿರ್ವಹಣೆಯನ್ನು ಮನಗಂಡು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ವೇದಶ್ರೀ ನಡ್ಯ ಇವರನ್ನು ವಿಚಾರಣೆ ಕಾಯ್ದಿರಿಸಿ ಮೇಲ್ಕಂಡ ನಿಯಮಗಳ ನಿಯಮ 10ರಡಿಯಲ್ಲಿ ಅಮಾನತುಗೊಳಿಸಲು ಸರಕಾರದ ಅನುಮೋದನೆಗಾಗಿ ಆಯುಕ್ತರು (ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ) ಇವರು ಪ್ರಸ್ತಾವನೆ ಸಲ್ಲಿಸಿದ್ದರು.
ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿನ ಪ್ರಭಾರ ಪ್ರಾಂಶುಪಾಲರು ಹಾಗೂ ಸಹಪ್ರಾಧ್ಯಾಪಕರಾದ ಶ್ರೀಮತಿ ವೇದಶ್ರೀ ನಿಡ್ಯ ಇವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿನಲ್ಲಿ ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ / ರಸ್ತೆತಡೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಪ್ರಕರಣದಲ್ಲಿ ಸದರಿಯವರ ವಿರುದ್ಧ ಇಲಾಖೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಿ ಆದೇಶಿಸಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ವರದಿಯ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಫೆ.17ರಂದು ಕಾಲೇಜಿಗೆ ಭೇಟಿ ನೀಡಿದ ಪ್ರಾದೇಶಿಕ ಜಂಟಿ ನಿರ್ದೇಶಕರು ವಿದ್ಯಾರ್ಥಿನಿಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದ ಜೊತೆ ಚರ್ಚಿಸಿ ವರದಿ ನೀಡಿದ್ದರು.

Watch the video

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

DEATH

ಕರಾವಳಿಯ ಪ್ರಸಿದ್ಧ ‘ಮಹೇಶ್ ಮೋಟಾರ್ಸ್’ ಮಾಲೀಕ ಮಹೇಶ್ ಶೇಖ ನಿಧನ

Published

on

ಮಂಗಳೂರು / ಬೆಂಗಳೂರು: ಕರಾವಳಿ ಭಾಗದ ಪ್ರಸಿದ್ಧ ಖಾಸಗಿ ಸಾರಿಗೆ ಸಂಸ್ಥೆಯಾದ ‘ಮಹೇಶ್ ಮೋಟಾರ್ಸ್’ನ ಮಾಲೀಕರಾದ ಮಹೇಶ್ ಶೇಖ (49) ಅವರು ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪ್ರಸಿದ್ಧ ಉದ್ಯಮಿ ಹಾಗೂ ‘ಮಹೇಶ್ ಮೋಟಾರ್ಸ್’ ಸಂಸ್ಥಾಪಕರಾದ ಎ.ಕೆ. ಜಯರಾಮ್ ಶೇಖ ಅವರ ಪುತ್ರ. ತಮ್ಮ ಆತ್ಮೀಯ ನಗು, ಸರಳ ವ್ಯಕ್ತಿತ್ವ ಹಾಗೂ ಪ್ರೀತಿಯ ನಡವಳಿಕೆಯಿಂದ ಸಾರ್ವಜನಿಕ ವಲಯದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಮಹೇಶ್ ಶೇಖ ಅವರ ಅಕಾಲಿಕ ಅಗಲಿಕೆ ಕರಾವಳಿಯ ಸಾರಿಗೆ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವನ್ನುಂಟುಮಾಡಿದೆ.

ಮೃತರು ತಂದೆ, ತಾಯಿ, ಪತ್ನಿ, ಮಗಳು, ಅಣ್ಣ, ಅಕ್ಕ ಹಾಗೂ ತಂಗಿಯನ್ನು ಅಗಲಿದ್ದಾರೆ. 2023ರ ಅಕ್ಟೋಬರ್‌ನಲ್ಲಿ ಮಹೇಶ್ ಶೇಖ ಅವರ ಸಹೋದರ, ಸಂಸ್ಥೆಯ ಇನ್ನೊಬ್ಬ ಮಾಲೀಕರಾಗಿದ್ದ ಪ್ರಕಾಶ್ ಶೇಖ ಅವರು ಮಂಗಳೂರಿನ ಕದ್ರಿಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಿಧನರಾಗಿದ್ದರು. ಇದೀಗ ಸಹೋದರ ಮಹೇಶ್ ಶೇಖ ಅವರೂ ದೈವಾಧೀನರಾಗಿರುವುದು ಕುಟುಂಬಸ್ಥರು ಹಾಗೂ ಹಿತೈಷಿಗಳಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ನಾಳೆ ಅಂತಿಮ ಸಂಸ್ಕಾರ: ಮೃತರ ಅಂತಿಮ ವಿಧಿವಿಧಾನಗಳು ಜುಲೈ 30ರ ಗುರುವಾರ ಬೆಳಿಗ್ಗೆ 10.00 ಗಂಟೆಗೆ ಮಂಗಳೂರಿನ ಕುಲಶೇಖರದಲ್ಲಿರುವ ‘ಜ್ಯೋತಿ ಪ್ರಕಾಶ’ ನಿವಾಸದಲ್ಲಿ (ಸೇಕ್ರೆಡ್ ಹಾರ್ಟ್ ಶಾಲೆಯ ಬಳಿ) ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರತಿದಿನ ಸುಮಾರು 60ಕ್ಕೂ ಹೆಚ್ಚು ‘ಮಹೇಶ್’ ಬಸ್‌ಗಳು ಸಂಚರಿಸುತ್ತಿದ್ದು, ಕರಾವಳಿ ಭಾಗದ ಅತ್ಯಂತ ಜನಪ್ರಿಯ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಮೃತ ಮಹೇಶ್‌ ಶೇಖ್ ಅವರು ‘ಪುತ್ತೂರು ಸುದ್ದಿ ಬಿಡುಗಡೆ’ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾದ ಡಾ. ಯು.ಪಿ. ಶಿವಾನಂದ ಅವರ ಕುಟುಂಬದ ಆತ್ಮೀಯ ನಿಕಟವರ್ತಿಯಾಗಿದ್ದರು ಎಂದು ‘ಬೆಳ್ತಂಗಡಿ ಸುದ್ದಿ ಬಿಡುಗಡೆ’ಯ ಸಿಇಓ ಸಿಂಚನಾ ಉರುಬೈಲು ತಿಳಿಸಿದ್ದಾರೆ. ಅಗಲಿದ ಮಹೇಶ್‌ ಶೇಖ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ, ಡಾ. ಯು.ಪಿ. ಶಿವಾನಂದ ಮತ್ತು ಅವರ ಕುಟುಂಬದವರು ತೀವ್ರ ಕಂಬನಿ ಮಿಡಿಯುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Continue Reading

Agriculture

ಕರಾವಳಿಯಲ್ಲಿ ಮತ್ತೆ ಚಿಗುರಿದ ರೇಷ್ಮೆ ಕೃಷಿ: ಸಣ್ಣ ಹಿಡುವಳಿದಾರರಿಗೆ ಮಾಸಿಕ ₹40,000 ಗಳಿಸುವ ಬಂಪರ್ ಅವಕಾಶ!

Published

on

ವಿಟ್ಲ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ಮೂರ್ನಾಲ್ಕು ದಶಕಗಳ ಹಿಂದೆ ಪ್ರಸಿದ್ದಿ ಪಡೆದಿದ್ದ ರೇಷ್ಮೆ ಕೃಷಿಗೆ ಈಗ ಮತ್ತೆ ಮರುಜೀವ ಸಿಗುತ್ತಿದೆ. ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (ವಿಟ್ಲ) ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರೇಷ್ಮೆ ಸಹಕಾರಿ ಇಲಾಖೆಯ ಜಂಟಿ ಸಹಯೋಗದೊಂದಿಗೆ ರೇಷ್ಮೆ ಕೃಷಿಯನ್ನು ಸಕ್ರಿಯವಾಗಿ ಪುನಶ್ಚೇತನಗೊಳಿಸಲು ಬೃಹತ್ ಯೋಜನೆ ರೂಪಿಸಲಾಗಿದೆ.

ಕರಾವಳಿಯ ಹವಾಮಾನಕ್ಕೆ ಸೂಕ್ತವಾದ ಹಿಪ್ಪುನೇರಳೆ (ಮಲ್ಬೆರಿ) ತಳಿಗಳನ್ನು ಪರಿಚಯಿಸಲಾಗುತ್ತಿದ್ದು, ಬಂಟ್ವಾಳ ಸೇರಿದಂತೆ ಜಿಲ್ಲೆಯ ಸಣ್ಣ ಹಿಡುವಳಿದಾರ ರೈತರಿಗೆ ಇದೊಂದು ಅತ್ಯುತ್ತಮ ಪರ್ಯಾಯ ಆದಾಯದ ಮೂಲವಾಗುವ ಲಕ್ಷಣಗಳು ಕಾಣಿಸುತ್ತಿವೆ.

28 ದಿನಗಳ ಬೆಳೆ, ನಿರಂತರ ಆದಾಯ

ಸಾಮಾನ್ಯ ಕೃಷಿಗೆ ಹೋಲಿಸಿದರೆ ರೇಷ್ಮೆ ಅತ್ಯಂತ ಕಡಿಮೆ ಅವಧಿಯ ಬೆಳೆಯಾಗಿದೆ. ಕೇವಲ 28 ದಿನಗಳ ಅವಧಿಯಲ್ಲಿ ಉತ್ತಮ ಲಾಭ ಗಳಿಸಲು ಇಲ್ಲಿ ಅವಕಾಶವಿದೆ. ಒಂದು ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುವ ಮೂಲಕ ಒಬ್ಬ ರೈತ ಅಥವಾ ಮಹಿಳೆ ತಿಂಗಳಿಗೆ ರೂ. 40,000 ಕ್ಕಿಂತಲೂ ಹೆಚ್ಚು ಆದಾಯ ಗಳಿಸಬಹುದು. ಮಾರುಕಟ್ಟೆಯಲ್ಲಿ ಪ್ರಸ್ತುತ ರೇಷ್ಮೆ ಗೂಡಿಗೆ ಪ್ರತಿ ಕೆಜಿಗೆ ರೂ. 650 ರಿಂದ 950 ರವರೆಗೆ ಸ್ಥಿರವಾದ ಬೆಲೆ ಸಿಗುತ್ತಿರುವುದು ರೈತರಿಗೆ ದೊಡ್ಡ ವರವಾಗಿದೆ.

ಶೇ. 70ಕ್ಕೂ ಹೆಚ್ಚು ಸರ್ಕಾರಿ ಸಹಾಯಧನ (ಸಬ್ಸಿಡಿ)

ಕೇಂದ್ರೀಯ ಹಾಗೂ ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿಯ ವತಿಯಿಂದ ರೇಷ್ಮೆ ಬೆಳೆಗಾರರಿಗೆ ಶೇಕಡಾ 70 ಕ್ಕಿಂತಲೂ ಹೆಚ್ಚಿನ ಸಬ್ಸಿಡಿ ಸೌಲಭ್ಯ ಲಭ್ಯವಿದೆ:

ನಾಟಿಗೆ ಪ್ರೋತ್ಸಾಹ: ಒಂದು ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಗಿಡ ನಾಟಿ ಮಾಡಲು ಆರಂಭಿಕವಾಗಿ ರೂ. 40,000 ಸಹಾಯಧನ.

ಶೆಡ್ ನಿರ್ಮಾಣಕ್ಕೆ ಸಬ್ಸಿಡಿ: 650 ಚದರ ಅಡಿಯಲ್ಲಿ ರೇಷ್ಮೆ ಹುಳು ಸಾChron/ ಸಾಕಾಣಿಕೆ ಶೆಡ್ ನಿರ್ಮಿಸುವ ರೈತರಿಗೆ 2 ಲಕ್ಷ ರೂಪಾಯಿಗೂ ಅಧಿಕ ಸರ್ಕಾರಿ ಸಹಾಯಧನ ದೊರೆಯಲಿದೆ.

ನೂತನ ತಂತ್ರಜ್ಞಾನ: ಶ್ರಮ ಕಡಿಮೆ, ಲಾಭ ಹೆಚ್ಚು!

ಹಿಂದೆ ರೈತರು ಮೊಟ್ಟೆ ತಂದು ಹುಳು ಸಾಕಬೇಕಾಗಿದ್ದರಿಂದ ಶ್ರಮ ಹೆಚ್ಚಾಗಿತ್ತು. ಆದರೆ ಈಗಿನ ಆಧುನಿಕ ತಂತ್ರಜ್ಞಾನದಡಿ ರೈತರಿಗೆ ನೇರವಾಗಿ 8 ದಿನ ಬೆಳೆದ ಚಾಕಿ (ರೇಷ್ಮೆ ಹುಳು)ಗಳನ್ನು ನೀಡಲಾಗುತ್ತದೆ. ಇದರಿಂದ ರೈತರು ಕೇವಲ 15 ರಿಂದ 18 ದಿನಗಳ ಕಾಲ ಹಿಪ್ಪುನೇರಳೆ ಎಲೆಗಳನ್ನು ಹಾಕಿ ಮೇಯಿಸಿದರೆ ಸಾಕು, ಅತ್ಯುತ್ತಮ ದರ್ಜೆಯ ರೇಷ್ಮೆ ಗೂಡುಗಳನ್ನು ಪಡೆಯಬಹುದಾಗಿದೆ.

ಗ್ರಾಮ ಪಂಚಾಯತ್ ಮಟ್ಟದಲ್ಲೇ ಖಾತರಿ ಖರೀದಿ

ರೈತರು ಬೆಳೆದ ರೇಷ್ಮೆ ಗೂಡಿನ ಮಾರಾಟಕ್ಕೆ ಯಾವುದೇ ತೊಂದರೆಯಾಗದಂತೆ ‘ಒಪ್ಪಂದ ಕರಾರು ಪತ್ರ’ದ (Buyback Agreement) ಮೂಲಕ ಸ್ಥಳೀಯವಾಗಿಯೇ ಖರೀದಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗೂಡು ಖರೀದಿ ಕೇಂದ್ರಗಳನ್ನು ತೆರೆದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರೇಷ್ಮೆ ಸಹಕಾರಿ ಇಲಾಖೆ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ಮೂಲಕ ರೈತರಿಗೆ ಆರ್ಥಿಕ ಬೆಂಬಲ ನೀಡಲು ತೀರ್ಮಾನಿಸಲಾಗಿದೆ.

ಕಡಿಮೆ ಜಾಗ, ಕಡಿಮೆ ಸಮಯ ಮತ್ತು ಸರ್ಕಾರಿ ಬೆಂಬಲದೊಂದಿಗೆ ಕರಾವಳಿಯ ರೈತರಿಗೆ ರೇಷ್ಮೆ ಕೃಷಿ ಈಗ ಲಾಭದಾಯಕ ಆರ್ಥಿಕ ಹಾದಿಯಾಗಿ ಹೊರಹೊಮ್ಮುತ್ತಿದೆ

Continue Reading

Bantawala

ಅಪರಾಧಕ್ಕೂ ಧರ್ಮದ ಬಣ್ಣ: ಕರಾವಳಿಯ ‘ದ್ವಂದ್ವ ಆಕ್ರೋಶ’ ಮತ್ತು ಸೌಹಾರ್ಧತೆಯ ತುರ್ತು ಅಗತ್ಯ

Published

on

ಬಿಸಿ ರೋಡ್‌ನಲ್ಲಿ ಇತ್ತೀಚೆಗೆ ನಡೆದ ಯುವತಿ ಲಾವಣ್ಯಾಳ ಬರ್ಬರ ಹತ್ಯೆಯ ಘಟನೆ ಇಡೀ ಕರಾವಳಿ ಜಿಲ್ಲೆಗಳನ್ನು ಮತ್ತೊಮ್ಮೆ ನಡುಗಿಸಿದೆ. ಆದರೆ, ಇಂತಹ ಭೀಕರ ಘಟನೆಗಳು ನಡೆದಾಗ ಇಂದಿನ ಸಮಾಜದ ಮೊದಲ ಪ್ರತಿಕ್ರಿಯೆ ಏನಾಗಿರುತ್ತದೆ ಗೊತ್ತೇ? “ಕೊಲೆ ಮಾಡಿದವನು ಯಾರು? ಕೊಲೆಯಾದವಳು ಯಾರು? ಇಬ್ಬರೂ ಯಾವ ಧರ್ಮದವರು?”

ನ್ಯಾಯದ ಪರಿಕಲ್ಪನೆ ಎಷ್ಟು ವಿಕೃತಗೊಂಡಿದೆ ಎಂದರೆ, ಅಪರಾಧ ನಡೆದಾಗ ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂಬ ಆಕ್ರೋಶಕ್ಕಿಂತ ಹೆಚ್ಚಾಗಿ, ಅಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ಧರ್ಮ ಹುಡುಕುವ ಹಪಾಹಪಿ ಎದ್ದು ಕಾಣುತ್ತಿದೆ. ಇಬ್ಬರೂ ಒಂದೇ ಧರ್ಮದವರಾಗಿದ್ದರೆ ಸಮಾಜ ಮೌನಕ್ಕೆ ಶರಣಾಗುತ್ತದೆ; ಅದೇ ಧರ್ಮಗಳು ಬೇರೆ ಬೇರೆಯಾಗಿದ್ದರೆ ಬೀದಿಗಿಳಿದು ಆಕ್ರೋಶದ ದೊಂದಿಗಳನ್ನು ಹೊತ್ತಿಸಲು ಸಮಾಜ ಸನ್ನದ್ಧವಾಗುತ್ತದೆ. ಈ ದ್ವಂದ್ವ ನಿಲುವು ಕರಾವಳಿಯ ಅತಿ ದೊಡ್ಡ ದುರಂತವಾಗಿದೆ.

ಧರ್ಮದ ಹಂಗಿಲ್ಲದ ಕ್ರೌರ್ಯ: ಇತಿಹಾಸದ ಕಟು ಸತ್ಯಗಳು

ನಾವು ಇತಿಹಾಸ ಮತ್ತು ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ, ಕ್ರೌರ್ಯಕ್ಕೆ ಯಾವುದೇ ಧರ್ಮದ ಹಂಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ:

ಆಗಸ್ಟ್ 2023ರ ಪುತ್ತೂರು ಘಟನೆ: ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ 18 ವರ್ಷದ ಯುವತಿ ಗೌರಿ ಎಂಬಾಕೆಯನ್ನು ಆಕೆಯದ್ದೇ ಆತ್ಮರಕ್ಷಣೆಯ ಚೂರಿಯಿಂದ ಪದ್ಮರಾಜ್ ಎಂಬಾತ ಕುತ್ತಿಗೆ ಸೀಳಿ ಕೊಂದಿದ್ದನು.

ಜುಲೈ 6, 2026ರ ಮಂಚಿ ಮೋಂತಿಮಾರು ಘಟನೆ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸು ತಂಗುದಾಣದಲ್ಲಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳ ಮೇಲೆ ಭಗ್ನ ಪ್ರೇಮಿಯೊಬ್ಬ ಕತ್ತಿಯಿಂದ ಮನಬಂದಂತೆ ಕಡಿದು ಕೊಲೆಗೆ ಯತ್ನಿಸಿದ್ದನು.

ಈ ಎರಡೂ ಘಟನೆಗಳಲ್ಲಿ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಧರ್ಮಕ್ಕೆ ಸೇರಿದ್ದ ಕಾರಣ ಕರಾವಳಿಯಲ್ಲಿ ಯಾವುದೇ ಗಲಭೆಗಳು ಆಗಲಿಲ್ಲ, ಯಾರೂ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡಲಿಲ್ಲ. ಒಂದೇ ಧರ್ಮದವರಾಗಿದ್ದರೆ ಯುವತಿಯರ ರಕ್ತಕ್ಕೆ ಬೆಲೆ ಇಲ್ಲವೇ? ಅತ್ಯಾಚಾರ, ಕೊಲೆಗಳ ವಿರುದ್ಧದ ನಮ್ಮ ಆಕ್ರೋಶ ಕೇವಲ ‘ಕೋಮು ಸಂಕೇತ ಪ್ರದರ್ಶನ’ದ (Communal Signaling) ಸಾಧನ ಮಾತ್ರವೇ ಎಂಬ ಪ್ರಶ್ನೆ ಮೂಡುತ್ತದೆ.

ಸುರತ್ಕಲ್ ಪ್ರಕರಣ: ಕಣ್ಣು ತೆರೆಸಿದ ಕಮಿಷನರ್ ಮಾತುಗಳು

ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ 17 ವರ್ಷದ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣವು ಸಮಾಜದ ಹೈಪೋಕ್ರಸಿಯನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದೆ. ಈ ಪ್ರಕರಣದ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅವರು ಹಂಚಿಕೊಂಡಿರುವ ವಿಚಾರಗಳು ಕಟು ಸತ್ಯದಿಂದ ಕೂಡಿವೆ:

ಆಘಾತಕಾರಿ ಡೆತ್ ನೋಟ್: ಆಕೆ ಬರೆದಿಟ್ಟಿರುವ ಮರಣ ಪತ್ರದಲ್ಲಿ, “ಅವನು ಹಿಂದೂ ಸಂಘಟನೆಗಳೊಂದಿಗೆ ಇದ್ದರೂ, ಆ ಸಂಘಟನೆಗಳು ತನಗೆ ಯಾವುದೇ ಸಹಾಯ ಮಾಡಲಿಲ್ಲ” ಎಂದು ಅತ್ಯಂತ ನೊಂದು ಬರೆದಿದ್ದಳು. ಸುರತ್ಕಲ್ ಪೊಲೀಸರು ಘಟನೆ ನಡೆದ ದಿನವೇ ಆರೋಪಿ ಅನೀಶ್ ಪೂಜಾರಿಯನ್ನು ಬಂಧಿಸಿ, ಆತನ ವಿರುದ್ಧ ಪೋಕ್ಸೊ (POCSO) ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಇಷ್ಟೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಮಾಜದ ಕೆಲವು ವರ್ಗಗಳು ಮಾತ್ರ ಈ ಬಾಲಕಿಗೆ ನ್ಯಾಯ ಸಿಗಬೇಕು ಎಂದು ಧ್ವನಿಯೆತ್ತುತ್ತಿವೆ. ಪುತ್ತೂರಿನ ಪುರುಷರ ಕಟ್ಟೆಯಲ್ಲಿ ಕೇವಲ ಚೂರಿ ತೋರಿಸಿದ ಘಟನೆಗೆ ಕರಾವಳಿಯೇ ಮೈಕೊಡವಿ ನಿಲ್ಲುತ್ತದೆ; ಆದರೆ ಅಪ್ರಾಪ್ತ ಹುಡುಗಿಯ ಸಾವಿಗೆ ನ್ಯಾಯ ಕೇಳಲು ಹೋರಾಟ ಮಾಡುವವರು ಮೌನಕ್ಕೆ ಶರಣಾಗುತ್ತಾರೆ. ಆರೋಪಿ ಬೇರೆ ಸಮುದಾಯಕ್ಕೆ ಸೇರಿದವನಾಗಿದ್ದರೆ ನಾವು ತಕ್ಷಣವೇ ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ; ಆದರೆ ಅದೇ ಆರೋಪಿ ನಮ್ಮದೇ ಸಮುದಾಯಕ್ಕೆ ಸೇರಿದವನಾಗಿದ್ದರೆ ನಾವು ಮೌನವಾಗುತ್ತೇವೆ ಏಕೆ ? ಎಂಬುವುದೇ ನಾವು ಕೇಳಿಕೊಳ್ಳಬೇಕಾದ ಆತ್ಮಸಾಕ್ಷಿಯ ಪ್ರಶ್ನೆ

ರಾಜಕೀಯ ಭೇದ ಮರೆತ ನಾಯಕರು: ಸೌಹಾರ್ಧತೆಯ ಹೊಸ ಆಶಾಕಿರಣ

ಈ ಎಲ್ಲಾ ದ್ವಂದ್ವಗಳ ನಡುವೆ, ನಿನ್ನೆ ಬರ್ಬರವಾಗಿ ಕೊಲೆಯಾದ ಲಾವಣ್ಯಾಳ ಮನೆಗೆ ಮೃತದೇಹ ಆಗಮಿಸುತ್ತಿದ್ದಂತೆ ಕರಾವಳಿಯಲ್ಲಿ ಸೌಹಾರ್ಧತೆಯ ಒಂದು ಅಪರೂಪದ ಮತ್ತು ಶ್ಲಾಘನೀಯ ಚಿತ್ರಣ ಕಂಡುಬಂತು.

ಮಾಜಿ ಸಚಿವ ರಮಾನಾಥ ರೈ, ಉಸ್ತುವಾರಿ ಸಚಿವ ಯು. ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶ್ರೀಮತಿ ಮಮತಾ ಗಟ್ಟಿ, ಹಿಂದೂ ಸಂಘಟನೆಯ ಶರಣ್ ಪಂಪ್ವೆಲ್, ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಅರುಣ್ ಪುತ್ತಿಲ ಸೇರಿದಂತೆ ಹಲವಾರು ಮುಖಂಡರು ಪಕ್ಷ ಮತ್ತು ಸಿದ್ದಾಂತದ ಭೇದ ಮರೆತು ಒಟ್ಟಾಗಿ ಆಗಮಿಸಿ ಮೃತಳ ಅಂತಿಮ ದರ್ಶನ ಪಡೆದರು. ಸಾಂತ್ವಾನ ನೀಡಿದರು. ಕುಟುಂಬಕ್ಕೆ ದೈರ್ಯವನ್ನು ತುಂಬಿದರು.

ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇಂತಹ ದುಃಖದ ಸಮಯದಲ್ಲಿ ಒಟ್ಟಾಗಿ ನಿಂತಿರುವುದು ಕರಾವಳಿಯ ಭವಿಷ್ಯದ ಸೌಹಾರ್ಧತೆಗೆ ದಾರಿದೀಪವಾಗಿದೆ. ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಾಗ ರಾಜಕೀಯ ಮಾಡುವುದನ್ನು ಬಿಟ್ಟು, ನಾವೆಲ್ಲರೂ ಒಂದಾಗಿ ಅಪರಾಧಿಗಳ ವಿರುದ್ಧ ಧ್ವನಿ ಎತ್ತಬಲ್ಲೆವು ಎಂಬುದಕ್ಕೆ ಈ ನಡೆ ಸಾಕ್ಷಿಯಾಗಿದೆ. ಅಪರಾಧ ನಡೆದಾಗ ಅಪರಾಧಿಯ ಮುಖವಾಡ ಕಳಚಿ ಆತನ ಧರ್ಮ ಹುಡುಕುವ ನಮ್ಮ ಸಮಾಜದ ವಿಕೃತ ಹೈಪೋಕ್ರಸಿಗೂ ತುರ್ತಾಗಿ ಚಿಕಿತ್ಸೆಯಾದಾಗ ಸೌಹಾರ್ದತೆ ವಿಜೃಂಬಿಸುತ್ತದೆ.

ಸೌಹಾರ್ಧತೆಯ ಕರಾವಳಿ ನಮ್ಮದಾಗಲಿ

ನಾವು ನಿಜವಾಗಿಯೂ ನ್ಯಾಯ ಮತ್ತು ಮಾನವೀಯತೆಗೆ ಬದ್ಧರಾಗಿದ್ದರೆ, ಎಲ್ಲಾ ಅಪರಾಧಿಗಳನ್ನು ಒಂದೇ ಮಾನದಂಡದಲ್ಲಿ ನೋಡಬೇಕು. ಅಪರಾಧವು ಒಂದು ಜಾಗತಿಕ ಮತ್ತು ಮಾನಸಿಕ ಸಮಸ್ಯೆಯಾಗಿದೆ. ಯಾವುದೇ ಧರ್ಮ ಅಥವಾ ಸಮುದಾಯವೂ ಅಪರಾಧಿಗಳ ಅಸ್ತಿತ್ವದಿಂದ ಮುಕ್ತವಾಗಿಲ್ಲ; ಅಪರಾಧಿಗಳು ಎಲ್ಲಾ ಧರ್ಮ, ಜಾತಿ ಮತ್ತು ವರ್ಗಗಳಲ್ಲೂ ಇದ್ದಾರೆ.

ಸುರತ್ಕಲ್‌ನ ಮೃತ ಬಾಲಕಿಗೆ, ಮಂಚಿ ಮೋಂತಿಮಾರ್‌ನ ವಿದ್ಯಾರ್ಥಿನಿಗೆ, ಬಿಸಿ ರೋಡ್‌ನ ಲಾವಣ್ಯಾಳಿಗೆ ನ್ಯಾಯ ಸಿಗಬೇಕಿದೆ. ‘ಅಪರಾಧಿ ಅಪರಾಧಿಯೇ, ನ್ಯಾಯ ಎಲ್ಲರಿಗೂ ಒಂದೇ’. ಧರ್ಮದ ಹೆಸರಿನಲ್ಲಿ ವಿಕೃತ ಆಕ್ರೋಶ ವ್ಯಕ್ತಪಡಿಸುವ ಸಮಾಜಕ್ಕೆ ಪೊಲೀಸ್ ಕಮಿಷನರ್ ಅವರು ಬಿಚ್ಚಿಟ್ಟ ಸತ್ಯಗಳು ಕಣ್ಣು ತೆರೆಸುವಂತಾಗಲಿ. ಅಪರಾಧಿಗೆ ಜಾತಿಯ ಅಥವಾ ಧರ್ಮದ ಬಣ್ಣ ಹಚ್ಚಿ ರಾಜಕೀಯ ಮಾಡುವುದನ್ನು ನಿಲ್ಲಿಸಿ, ಮುಂದಿನ ದಿನಗಳಲ್ಲಿ ಕರಾವಳಿಯು ಸೌಹಾರ್ಧತೆ, ಶಾಂತಿ ಮತ್ತು ಸುರಕ್ಷತೆಯ ನೆಲೆವೀಡಾಗಿ ಬೆಳಗಲಿ ಎಂಬುವುದೇ ಎಲ್ಲರ ಆಶಯವಾಗಬೇಕು.

Continue Reading

Trending

Copyright © 2025 Deevatige

error: Content is protected !!