Connect with us

national

ಕೇಂದ್ರಕ್ಕೆ ಅಭಿಜೀತ್ ದೀಪ್ಕೆ ಎಚ್ಚರಿಕೆ; NEET ಅಕ್ರಮ ವಿರೋಧಿಸಿ ದೆಹಲಿಯಲ್ಲಿ ‘ಕಾಕ್‌ರೋಚ್ ಜನತಾ ಪಾರ್ಟಿ’ ಬೃಹತ್ ಪ್ರತಿಭಟನೆ

Published

on

ನವದೆಹಲಿ: “ನೀವು ನಮ್ಮ ಆನ್‌ಲೈನ್ ಪೋಸ್ಟ್‌ಗಳನ್ನು ಅಳಿಸಬಹುದು, ಆದರೆ ನಮ್ಮನ್ನು ಅಳಿಸಲು ಸಾಧ್ಯವಿಲ್ಲ” ಎಂದು ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕೇಂದ್ರ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

NEET 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ CBSE ಪರೀಕ್ಷಾ ಮಂಡಳಿಯ ಅಕ್ರಮಗಳನ್ನು ವಿರೋಧಿಸಿ ಕಾಕ್‌ರೋಚ್ ಜನತಾ ಪಕ್ಷವು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಆರಂಭಿಸಿದೆ. ಸಂಘಟನೆಯ ಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಯುವಕರು ಜಿರಳೆಯ ಮಾಸ್ಕ್ ಧರಿಸಿ ಭಾಗವಹಿಸುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ತೀವ್ರವಾಗಿ ಆಗ್ರಹಿಸಿದರು.

ಪೋಸ್ಟ್‌ಗಳನ್ನು ಅಳಿಸಬಹುದು, ನಮ್ಮನ್ನಲ್ಲ: ಅಭಿಜೀತ್ ದೀಪ್ಕೆ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, “ಸರ್ಕಾರವು ವಿದ್ಯಾರ್ಥಿಗಳ ಮತ್ತು ಯುವಕರ ಬೇಡಿಕೆಗಳನ್ನು ಪರಿಗಣಿಸುವ ಬದಲು, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕಲು ಮುಂದಾಗಿದೆ” ಎಂದು ಗಂಭೀರ ಆರೋಪ ಮಾಡಿದರು.

“ನನ್ನ ಸ್ನೇಹಿತರೇ, ಇದು ದೀರ್ಘ ಹೋರಾಟ. ನಾವು ಸಾಮಾಜಿಕ ಮಾಧ್ಯಮದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ. ಆದರೆ ಈ ಸರ್ಕಾರ ಎಷ್ಟು ನಾಚಿಕೆಯಿಲ್ಲದ ಸ್ಥಿತಿಯಲ್ಲಿದೆಯೆಂದರೆ, ತಪ್ಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ನಮ್ಮ ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಪೋಸ್ಟ್‌ಗಳನ್ನು ಅಳಿಸಲು ಯತ್ನಿಸುತ್ತಿದೆ. ನೀವು ನಮ್ಮ ಪೋಸ್ಟ್‌ಗಳನ್ನು ಅಳಿಸಬಹುದು, ಆದರೆ ಈ ಹೋರಾಟದಿಂದ ನಮ್ಮನ್ನು ಅಳಿಸಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ದೀಪ್ಕೆ ಗುಡುಗಿದರು.

ಹೋರಾಟಕ್ಕಾಗಿ ಸ್ವಾತಂತ್ರ್ಯ ತ್ಯಾಗಕ್ಕೂ ಸಿದ್ಧ

ಇದೇ ಸಂದರ್ಭದಲ್ಲಿ ತಾವು ಅಮೆರಿಕದಿಂದ ಭಾರತಕ್ಕೆ ಮರಳಿದ ದಿನವನ್ನು ಸ್ಮರಿಸಿದ ದೀಪ್ಕೆ, “ನನ್ನ ವಿಮಾನ ದೆಹಲಿಯಲ್ಲಿ ಇಳಿಯುವ ಮುನ್ನ, ನಾನು ಸ್ವಾತಂತ್ರ್ಯದ ಕೊನೆಯ ಕ್ಷಣಗಳನ್ನು ಅನುಭವಿಸುತ್ತಿರುವಂತೆ ಭಾಸವಾಯಿತು. ಆದರೆ ಈ ದೇಶದ ಯುವಕರ ಭವಿಷ್ಯಕ್ಕಾಗಿ ಮತ್ತು ಈ ಹೋರಾಟಕ್ಕಾಗಿ ನನ್ನ ವೈಯಕ್ತಿಕ ಸ್ವಾತಂತ್ರ್ಯವನ್ನೇ ತ್ಯಾಗ ಮಾಡಲು ನಾನು ಸಿದ್ಧನಾಗಿದ್ದೆ” ಎಂದು ಭಾವುಕರಾಗಿ ನುಡಿದರು.

ಜಂತರ್ ಮಂತರ್‌ನಲ್ಲಿ ಧರಣಿ ಕುಳಿತಿರುವ ಪ್ರತಿಭಟನಾಕಾರರು, ಪರೀಕ್ಷಾ ಅಕ್ರಮಗಳ ವಿರುದ್ಧ ಸೂಕ್ತ ತನಿಖೆಯಾಗಿ ಅಭ್ಯರ್ಥಿಗಳಿಗೆ ನ್ಯಾಯ ಸಿಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

national

ದೇಶಿ ರಾಜಕೀಯದಲ್ಲಿ ಮಹಾ ಭೂಕಂಪ: ಕಾಂಗ್ರೆಸ್ ತೆಕ್ಕೆಗೆ ಪ್ರಾದೇಶಿಕ ಪಕ್ಷಗಳು? ದೀದಿ, ಜಗನ್‌ಗೆ ‘ಬಿಗ್ ಆಫರ್’!

Published

on

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದು ಹೊಸ ಹುರುಪಿನಲ್ಲಿರುವ ಕಾಂಗ್ರೆಸ್ ಪಕ್ಷ, ಈಗ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸಬಲ್ಲ ಮಹಾ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸುತ್ತಿದೆಯೇ? ಇಂಡಿಯಾ (INDIA) ಮೈತ್ರಿಕೂಟದ ಮಹತ್ವದ ಸಭೆಯ ಬೆನ್ನಲ್ಲೇ ತೆರೆಮರೆಯಲ್ಲಿ ಸಾಗುತ್ತಿರುವ ರಾಜಕೀಯ ಬೆಳವಣಿಗೆಗಳು ಇಂತಹದ್ದೊಂದು ದಟ್ಟ ಅನುಮಾನವನ್ನು ಹುಟ್ಟುಹಾಕಿವೆ.

ವಿಶ್ವಾಸಾರ್ಹ ಮೂಲಗಳ ಪ್ರಕಾರ, ಪ್ರಾದೇಶಿಕ ಪಕ್ಷಗಳನ್ನು ತನ್ನೊಳಗೆ ವಿಲೀನಗೊಳಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಬಲಿಷ್ಠವಾಗಲು ಕಾಂಗ್ರೆಸ್ ಹೈಕಮಾಂಡ್ ತೆರೆಮರೆಯ ‘ಆಪರೇಷನ್’ ಆರಂಭಿಸಿದೆ ಎನ್ನಲಾಗುತ್ತಿದೆ.

1. ರಾಹುಲ್ ಗಾಂಧಿ ಕೊಟ್ಟ ಆ ‘ಒಂದು’ ಬಿಗ್ ಆಫರ್ ಏನು?

ಕಾಂಗ್ರೆಸ್‌ನ ಉನ್ನತ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬರೋಬ್ಬರಿ ‘ಒನ್-ಟೈಮ್ ಆಫರ್’ ನೀಡಲಾಗಿದೆ ಎಂಬ ಸುದ್ದಿ ದೆಹಲಿ ವಲಯದಲ್ಲಿ ದಟ್ಟವಾಗಿ ಹರಿದಾಡುತ್ತಿದೆ. ಅದೇನಪ್ಪಾ ಎಂದ್ರೆ, ತಮ್ಮ ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವುದು!

ದೀದಿಗೆ ಎದುರಾಗಿದೆಯೇ ಅಸ್ತಿತ್ವದ ಭಯ?

ಯಾವ ಮಮತಾ ಬ್ಯಾನರ್ಜಿ ಅವರು ಹಿಂದೆ ಕಾಂಗ್ರೆಸ್ ತೊರೆದು ಟಿಎಂಸಿ ಕಟ್ಟಿದ್ದರೋ, ಇಂದು ಮತ್ತೆ ಅದೇ ಹಳೇ ಮನೆಗೆ ಮರಳುವ ಅನಿವಾರ್ಯತೆ ಸೃಷ್ಟಿಯಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಸದ್ಯ ಬಂಗಾಳದಲ್ಲಿ ದೀದಿ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ಬಂಡಾಯದ ಭೀತಿ: ಟಿಎಂಸಿಯ ಒಟ್ಟು 28 ಲೋಕಸಭಾ ಸಂಸದರಲ್ಲಿ ಸುಮಾರು 20 ಸಂಸದರು ಮತ್ತು ಹಲವು ಶಾಸಕರು ಪಕ್ಷ ತೊರೆಯಲು ರೆಡಿಯಾಗಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಕುಟುಂಬದ ಮೇಲಿನ ದಾಳಿ: ಇತ್ತೀಚೆಗಷ್ಟೇ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ನಡೆದ ಹಲ್ಲೆ ಮತ್ತು ಬಂಗಾಳದ ಸದ್ಯದ ರಾಜಕೀಯ ಕಾನೂನು ಸುವ್ಯವಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಚಿಂತೆಗೀಡು ಮಾಡಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ದೊಡ್ಡ ರಕ್ಷಣೆ ಪಡೆಯುವುದು ದೀದಿಗೆ ಅನಿವಾರ್ಯವಾಗಬಹುದು ಎನ್ನಲಾಗುತ್ತಿದೆ.

2. ವೈಎಸ್ಆರ್ ಕಾಂಗ್ರೆಸ್ ಕೂಡ ವಿಲೀನ ಹಾದಿಯಲ್ಲಿ?!

ಟ್ವಿಸ್ಟ್ ಅಂದ್ರೆ ಕೇವಲ ಮಮತಾ ಬ್ಯಾನರ್ಜಿ ಮಾತ್ರವಲ್ಲ, ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ (YSRCP) ಪಕ್ಷವನ್ನೂ ಕೂಡ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲು ತೆರೆಮರೆಯ ಕಸರತ್ತುಗಳು ಭರದಿಂದ ಸಾಗಿವೆ!

ಕೈ ಹಿಡಿಯಲಿದೆಯೇ ವೈಎಸ್ಆರ್ ಕುಟುಂಬ?

ಜಗನ್ ತಂದೆ ವೈ.ಎಸ್. ರಾಜಶೇಖರ್ ರೆಡ್ಡಿ ಅವರು ಕಾಂಗ್ರೆಸ್‌ನ ನಿಷ್ಠಾವಂತರಾಗಿದ್ದರು. ಈಗ ಜಗನ್ ಅವರ ಸಹೋದರಿ ವೈ.ಎಸ್. ಶರ್ಮಿಳಾ ಈಗಾಗಲೇ ಆಂಧ್ರಪ್ರದೇಶ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡಿದ್ದಾರೆ. ಹೀಗಾಗಿ, ಜಗನ್ ರೆಡ್ಡಿ ಅವರನ್ನೂ ಮರಳಿ ಮಾತೃ ಸಂಸ್ಥೆಗೆ ಕರೆತರಲು ಹೈಕಮಾಂಡ್ ಸಂಧಾನ ಸೂತ್ರಗಳನ್ನು ಹೆಣೆಯುತ್ತಿದೆ ಎನ್ನಲಾಗಿದೆ.

3. ಮತ್ತೆ ‘ಕೈ’ ಹಿಡಿಯಲಿದ್ದಾರಾ ಪಂಜಾಬ್ ಸಿಂಹ ಕ್ಯಾಪ್ಟನ್?

ಇದೇ ವೇಳೆ ಪಂಜಾಬ್‌ನ ರಾಜಕೀಯ ಸಿಂಹ ಎಂದೇ ಹೆಸರಾಗಿದ್ದ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಬರುವ ಸಾಧ್ಯತೆಗಳು ದಟ್ಟವಾಗಿವೆ. ಇತ್ತೀಚಿನ ದಿನಗಳಲ್ಲಿ ಅವರು ಗಾಂಧಿ ಕುಟುಂಬದ ಪರವಾಗಿ ಸಾಫ್ಟ್ ಕಾರ್ನರ್ ಹೊಂದಿರುವ ಹೇಳಿಕೆಗಳನ್ನು ನೀಡುತ್ತಿರುವುದು ರಾಜಕೀಯ ಪಡಸಾಲೆಯಲ್ಲಿ ಈ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಮುಂದೇನು? ರಾಜಕೀಯ ದಿಕ್ಸೂಚಿ ಬದಲಾಗಲಿದೆಯೇ?

ವಿಲೀನದ ಸಾಧ್ಯತೆಯಿರುವ ಪಕ್ಷಗಳುಪ್ರಮುಖ ನಾಯಕರುರಾಜಕೀಯ ಹಿನ್ನೆಲೆ
ತೃಣಮೂಲ ಕಾಂಗ್ರೆಸ್ (TMC)ಮಮತಾ ಬ್ಯಾನರ್ಜಿಬಂಗಾಳದಲ್ಲಿ ಆಂತರಿಕ ಅಸಮಾಧಾನ ಮತ್ತು ಬಂಡಾಯದ ಭೀತಿ.
ವೈಎಸ್ಆರ್ ಕಾಂಗ್ರೆಸ್ (YSRCP)ಜಗನ್ ಮೋಹನ್ ರೆಡ್ಡಿಸಹೋದರಿ ಶರ್ಮಿಳಾ ಮೂಲಕ ಹೈಕಮಾಂಡ್ ಸಂಧಾನ ಕಸರತ್ತು.
ಪಂಜಾಬ್ (ಮಾಜಿ ನಾಯಕರು)ಕ್ಯಾಪ್ಟನ್ ಅಮರಿಂದರ್ ಸಿಂಗ್ಗಾಂಧಿ ಕುಟುಂಬದ ಮೇಲಿನ ಸಾಫ್ಟ್ ಕಾರ್ನರ್, ವಾಪಸಾತಿ ಸಾಧ್ಯತೆ.

ಒಂದು ವೇಳೆ ಮಮತಾ ಬ್ಯಾನರ್ಜಿ ಮತ್ತು ಜಗನ್ ಮೋಹನ್ ರೆಡ್ಡಿ ತಮ್ಮ ಪಕ್ಷಗಳನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರೆ, ದೇಶದ ಇನ್ನೂ ಮೂರು ನಾಲ್ಕು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನತ್ತ ಮುಖ ಮಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಲೋಕಸಭೆಯಲ್ಲಿ ಅತಿ ದೊಡ್ಡ ಎರಡನೇ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್, ಈ ಮಹಾ ವಿಲೀನದ ಮೂಲಕ ಬಿಜೆಪಿಗೆ ನೇರ ಟಕ್ಕರ್ ಕೊಡಲು ತಂತ್ರ ಹೂಡಿದೆ.

ತೆರೆಮರೆಯಲ್ಲಿ ಸಾಗುತ್ತಿರುವ ಈ ಮಹಾ ಬೆಳವಣಿಗೆಗಳು ನಿಜ ರೂಪ ಪಡೆದುಕೊಂಡರೆ, ಭಾರತೀಯ ರಾಜಕೀಯ ಇತಿಹಾಸದಲ್ಲೇ ಇದೊಂದು ಅತಿ ದೊಡ್ಡ ರಾಜಕೀಯ ಧ್ರುವೀಕರಣವಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ!




Continue Reading

national

ಅಣ್ಣಾಮಲೈ ಪಕ್ಷದಲ್ಲಿ ಸ್ಥಾನ ಬೇಕೆಂದರೆ ಈ ‘ವಿಶೇಷ’ ತರಬೇತಿಯಲ್ಲಿ ಪಾಸ್ ಆಗಬೇಕು!

Published

on

ಚೆನ್ನೈ: ಭಾರತೀಯ ಜನತಾ ಪಕ್ಷ (ಬಿಜೆಪಿ) ತೊರೆದು ಹೊಸ ರಾಜಕೀಯ ಆಂದೋಲನ ಆರಂಭಿಸಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ತಮ್ಮ ಮುಂಬರುವ ರಾಜಕೀಯ ಪಕ್ಷದಲ್ಲಿ ಪದಾಧಿಕಾರಿಗಳಾಗಲು ಬಯಸುವವರಿಗೆ ಹೈಟೆಕ್ ಷರತ್ತೊಂದನ್ನು ವಿಧಿಸಿದ್ದಾರೆ. ಸಾಂಪ್ರದಾಯಿಕ ರಾಜಕೀಯ ಶೈಲಿಗೆ ಬ್ರೇಕ್ ಹಾಕಿ, ಕೌಶಲ್ಯ ತರಬೇತಿಯಲ್ಲಿ ಉತ್ತೀರ್ಣರಾದವರಿಗಷ್ಟೇ ಪಕ್ಷದಲ್ಲಿ ಸ್ಥಾನ ನೀಡಲು ನಿರ್ಧರಿಸಿದ್ದಾರೆ.

12 ಲಕ್ಷಕ್ಕೂ ಅಧಿಕ ಮಂದಿ ಸೇರ್ಪಡೆ: ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಣ್ಣಾಮಲೈ ಹೊಸ ರಾಜಕೀಯ ಆಂದೋಲನ ಘೋಷಿಸಿದ್ದರು. ಈ ಆಂದೋಲನ ಆರಂಭವಾದ ಕೆಲವೇ ದಿನಗಳಲ್ಲಿ ತಮಿಳುನಾಡು ಸೇರಿದಂತೆ ದೇಶಾದ್ಯಂತ ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ಜನರು ಕೈಜೋಡಿಸಿದ್ದಾರೆ. ಮುಂದಿನ 3-4 ತಿಂಗಳಲ್ಲಿ ಈ ಆಂದೋಲನವನ್ನು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ಪರಿವರ್ತಿಸುವುದಾಗಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ರಾಜಕೀಯ ಸೇರಲು ಕಡ್ಡಾಯ ತರಬೇತಿ: ಅಣ್ಣಾಮಲೈ ಅವರ ಹೊಸ ಪಕ್ಷದಲ್ಲಿ ಸ್ಥಾನ ಪಡೆಯಬೇಕಾದರೆ ಕೇವಲ ಪ್ರಭಾವ ಇದ್ದರೆ ಸಾಲದು, ‘ಕೌಶಲ್ಯ ತರಬೇತಿ’ ಪಡೆದು ಅದರಲ್ಲಿ ಪಾಸ್ ಆಗುವುದು ಕಡ್ಡಾಯವಾಗಿದೆ. ಇದಕ್ಕಾಗಿ ಕೊಯಮತ್ತೂರಿನಲ್ಲಿ “ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಆ್ಯಂಡ್ ಪಾಲಿಟಿಕ್ಸ್” ಎಂಬ ವಿಶೇಷ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದ್ದು, ಇದು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ.

ಯಾರೆಲ್ಲಾ ತರಬೇತಿ ಪಡೆಯಬೇಕು?

ಪಕ್ಷದ ಸಾಮಾನ್ಯ ಶಾಖೆಯ ಉಸ್ತುವಾರಿಗಳಿಂದ ಹಿಡಿದು ರಾಜ್ಯ ಮಟ್ಟದ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಪ್ರತಿಯೊಬ್ಬರೂ ಈ ಸಂಸ್ಥೆಯಲ್ಲಿ ಕಡ್ಡಾಯವಾಗಿ ತರಬೇತಿ ಪಡೆಯಬೇಕು.

ಅಣ್ಣಾಮಲೈ ಅವರ ರಾಜಕೀಯ ದೂರದೃಷ್ಟಿ, ತಮಿಳುನಾಡಿನಲ್ಲಿ ಅವರು ತರಬಯಸಿರುವ ಬದಲಾವಣೆಗಳು ಮತ್ತು ಅವರೊಂದಿಗೆ ಗುರುತಿಸಿಕೊಳ್ಳುವ ಕಾರ್ಯಕರ್ತರು ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ಈ ತರಬೇತಿಯಲ್ಲಿ ವಿವರಿಸಲಾಗುತ್ತದೆ.

ಈ ತರಬೇತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅರ್ಹತೆ ಸಾಬೀತುಪಡಿಸಿ ಉತ್ತೀರ್ಣರಾದವರಿಗೆ ಮಾತ್ರ ಪಕ್ಷದ ಜವಾಬ್ದಾರಿಗಳನ್ನು ನೀಡಲಾಗುತ್ತದೆ.

ಉಪಚುನಾವಣೆಯಿಂದ ದೂರ, ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ: ತಮಿಳುನಾಡಿನ 5 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮುಂಬರುವ ಉಪಚುನಾವಣೆಗಳಲ್ಲಿ ಅಣ್ಣಾಮಲೈ ಅವರ ಹೊಸ ಆಂದೋಲನ ಸ್ಪರ್ಧಿಸುತ್ತಿಲ್ಲ. ಸದ್ಯಕ್ಕೆ ಚುನಾವಣಾ ರಾಜಕೀಯದಿಂದ ದೂರ ಉಳಿದು, ಮುಂದಿನ ಕೆಲವು ತಿಂಗಳುಗಳ ಕಾಲ ಸಂಘಟನೆಯನ್ನು ಬಲಪಡಿಸುವುದು, ಕೌಶಲ್ಯ ತರಬೇತಿಯ ಮೂಲಕ ಅರ್ಹ ನಾಯಕರನ್ನು ಸಿದ್ಧಪಡಿಸುವುದು ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಲಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಅಣ್ಣಾಮಲೈ ಅವರ ತಂತ್ರಗಾರಿಕೆಯಾಗಿದೆ.

ತಮಿಳುನಾಡು ಬಿಜೆಪಿ ಮುಖ್ಯಸ್ಥರ ಲೇವಡಿ ಮತ್ತು ಆರೋಪ: ಇನ್ನೊಂದೆಡೆ, ಅಣ್ಣಾಮಲೈ ಅವರ ಈ ನಡೆಗೆ ತಮಿಳುನಾಡು ಬಿಜೆಪಿ ಮುಖ್ಯಸ್ಥರು ಲೇವಡಿ ಮಾಡಿದ್ದು, “ಅಣ್ಣಾಮಲೈ ರಾಜೀನಾಮೆಯಿಂದ ನಮ್ಮ ಪಕ್ಷಕ್ಕೇನೂ ನಷ್ಟವಿಲ್ಲ” ಎಂದಿದ್ದಾರೆ. ಅಷ್ಟೇ ಅಲ್ಲದೆ, “ಅಣ್ಣಾಮಲೈ ಅವರು ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ” ಎಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ.





Continue Reading

national

ದೆಹಲಿಗೆ ಬಂದಿಳಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ; ನೀಟ್ ಹಗರಣ: ಜಂತರ್ ಮಂತರ್ ಪ್ರತಿಭಟನೆಗೆ ದೆಹಲಿ ಪೊಲೀಸರ ಅನುಮತಿ

Published

on

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಇಂದು (ಶನಿವಾರ, ಜೂನ್ 6) ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ಬೆಳಿಗ್ಗೆ ಅಮೆರಿಕದಿಂದ ನೇರವಾಗಿ ದೆಹಲಿಗೆ ಬಂದಿಳಿದಿದ್ದು, ಪ್ರತಿಭಟನೆಗೆ ದೆಹಲಿ ಪೊಲೀಸರು ಅಧಿಕೃತ ಅನುಮತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಬದಲಾದ ಯೋಜನೆ: ನೇರವಾಗಿ ಜಂತರ್ ಮಂತರ್‌ಗೆ ಜಮಾಯಿಸಲು ಕರೆ

ಈ ಮೊದಲು ಪ್ರತಿಭಟನೆಯ ಜಂಟಿ ಅನುಮತಿಗಾಗಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಬರುವಂತೆ ಬೆಂಬಲಿಗರಿಗೆ ಸೂಚಿಸಲಾಗಿತ್ತು. ಆದರೆ, ಪೊಲೀಸರಿಂದ ಅನುಮತಿ ಸಿಕ್ಕ ಬೆನ್ನಲ್ಲೇ ಸಿಜೆಪಿ ತನ್ನ ಯೋಜನೆಯನ್ನು ಬದಲಾಯಿಸಿದೆ.

“ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾರೆ. ಹಾಗಾಗಿ ನಾವು ಈಗ ನೇರವಾಗಿ ಜಂತರ್ ಮಂತರ್‌ನಲ್ಲಿಯೇ ಜಮಾಯಿಸಬಹುದು. ಈ ಮೊದಲು ಯೋಜಿಸಿದಂತೆ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿಲ್ಲ. ಕಾಕ್ರೋಚ್‌ಗಳು ಬರುತ್ತಿದ್ದಾರೆ, ಧರ್ಮೇಂದ್ರ ಪ್ರಧಾನ್ ಹೋಗುತ್ತಿದ್ದಾರೆ,” ಎಂದು ಸಿಜೆಪಿ ತನ್ನ ‘ಎಕ್ಸ್’ (ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದೆ.

ಪುಸ್ತಕ, ತ್ರಿವರ್ಣ ಧ್ವಜ ಮತ್ತು ಹೂವುಗಳೊಂದಿಗೆ ಶಾಂತಿಯುತ ಹೋರಾಟ

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಅಭಿಜೀತ್ ದೀಪ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಮತ್ತು ಶಾಂತಿಯುತ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಸಂವಿಧಾನಕ್ಕೆ ಶರಣು: “ಭಾರತಕ್ಕೆ ಬರುತ್ತಿದ್ದೇನೆ… ನನ್ನ ಭವಿಷ್ಯವನ್ನು ಸಂವಿಧಾನದ ಕೈಗೆ ಒಪ್ಪಿಸುತ್ತಿದ್ದೇನೆ. #ಜೈಭೀಮ್,” ಎಂದು ಅವರು ಭಾರತಕ್ಕೆ ಬರುವ ಮುನ್ನ ಬರೆದುಕೊಂಡಿದ್ದರು.

ಶಾಂತಿಯ ಕರೆ: ಬಂದಿಳಿದ ನಂತರ ಪೋಸ್ಟ್ ಮಾಡಿ, “ಜಂತರ್ ಮಂತರ್‌ನಲ್ಲಿ ನಿಮ್ಮನ್ನೆಲ್ಲಾ ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಪ್ರತಿಭಟನೆಗೆ ಬರುವಾಗ ಒಂದು ಪುಸ್ತಕ ಮತ್ತು ನಮ್ಮ ತಿರಂಗಾವನ್ನು (ತ್ರಿವರ್ಣ ಧ್ವಜ) ಕೊಂಡೊಯ್ಯುವುದನ್ನು ಮರೆಯಬೇಡಿ. ಕರುಣೆ ಮತ್ತು ಕೃತಜ್ಞತೆಯ ಸಂಕೇತವಾಗಿ ಪೊಲೀಸ್ ಸಿಬ್ಬಂದಿಗೆ ಹೂವುಗಳನ್ನು ನೀಡಿ. ಈ ಚಳವಳಿಯನ್ನು ನಾವು ಪ್ರೀತಿ ಮತ್ತು ಶಾಂತಿಯಿಂದ ಮುನ್ನಡೆಸಬೇಕಾಗಿದೆ,” ಎಂದು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.

ಆನ್‌ಲೈನ್ ವೇದಿಕೆಯಿಂದ ಆಂದೋಲನದವರೆಗೆ ಸಿಜೆಪಿ ಪಯಣ

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಬೆನ್ನಲ್ಲೇ ಯುವಜನತೆಯನ್ನು ಒಟ್ಟುಗೂಡಿಸಲು ದೀಪ್ಕೆ ಪ್ರಾರಂಭಿಸಿದ ಡಿಜಿಟಲ್ ವೇದಿಕೆಯೇ ಈ ‘ಕಾಕ್ರೋಚ್ ಜನತಾ ಪಾರ್ಟಿ’ (CJP). ಆರಂಭದಲ್ಲಿ ವ್ಯಂಗ್ಯಭರಿತ ಆನ್‌ಲೈನ್ ವೇದಿಕೆಯಾಗಿದ್ದ ಸಿಜೆಪಿ, ದೇಶದ ಯುವ ಸಮೂಹ ಮತ್ತು ವಿದ್ಯಾರ್ಥಿಗಳಿಂದ ಅಭೂತಪೂರ್ವ ಬೆಂಬಲ ಗಳಿಸಿದೆ. ನೀಟ್ ಮಾತ್ರವಲ್ಲದೆ ಸಿಬಿಎಸ್ಇ, ಸಿಯುಇಟಿ ಮತ್ತು ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಇದೀಗ ಒಂದು ಸಂಘಟಿತ ಆಂದೋಲನವಾಗಿ ಜಂತರ್ ಮಂತರ್‌ನಲ್ಲಿ ಬೀದಿಗಿಳಿಯುತ್ತಿದೆ.

ಸೋನಮ್ ವಾಂಗ್ಚುಕ್ ಬೆಂಬಲ: 6 ವಾರಗಳ ಉಪವಾಸದ ಎಚ್ಚರಿಕೆ

ಈ ಪ್ರತಿಭಟನೆಗೆ ಪ್ರಮುಖ ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಒಂದು ವೇಳೆ ದೆಹಲಿ ಪೊಲೀಸರು ಅಥವಾ ಕೇಂದ್ರ ಸರ್ಕಾರ ಅಭಿಜೀತ್ ದೀಪ್ಕೆ ಅವರನ್ನು ಬಂಧಿಸಿದರೆ, ತಾವು ಆರು ವಾರಗಳ ಕಾಲ ಸರಣಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ವಾಂಗ್ಚುಕ್ ಎಚ್ಚರಿಕೆ ನೀಡಿದ್ದಾರೆ. ಇದು ಹೋರಾಟಕ್ಕೆ ಮತ್ತಷ್ಟು ತೀವ್ರತೆ ತಂದಿದೆ.

ದೆಹಲಿಯಲ್ಲಿ ಹೈ ಅಲರ್ಟ್: ಕೋಟೆಂತಾದ ರಾಜಧಾನಿ

ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಡೀ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ದೆಹಲಿ ಪೊಲೀಸರು ಸರ್ವಸನ್ನದ್ಧರಾಗಿದ್ದಾರೆ.

ಪ್ರಮುಖ ಭದ್ರತಾ ಕ್ರಮಗಳು:

ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ: ಮುನ್ನೆಚ್ಚರಿಕೆ ಕ್ರಮವಾಗಿ ನವದೆಹಲಿ ಜಿಲ್ಲೆ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲು 1,000ಕ್ಕೂ ಹೆಚ್ಚು ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಮೀಸಲಿಡಲಾಗಿದೆ.

ಗಡಿ ಮತ್ತು ನಿಲ್ದಾಣಗಳಲ್ಲಿ ತಪಾಸಣೆ: ದೆಹಲಿ ವಿಮಾನ ನಿಲ್ದಾಣ, ಪ್ರಮುಖ ರೈಲ್ವೆ ನಿಲ್ದಾಣಗಳು, ಅಂತಾರಾಜ್ಯ ಬಸ್ ನಿಲ್ದಾಣಗಳು (ISBT) ಮತ್ತು ನೆರೆಹೊರೆಯ ರಾಜ್ಯಗಳಿಂದ ದೆಹಲಿ ಪ್ರವೇಶಿಸುವ ಗಡಿ ಪ್ರದೇಶಗಳಲ್ಲಿ ಕಠಿಣ ವಾಹನ ತಪಾಸಣೆ ನಡೆಸಲಾಗುತ್ತಿದೆ.

ವಿಮಾನ ನಿಲ್ದಾಣದ ಸುತ್ತ ಕಾವಲು: ಶುಕ್ರವಾರದಿಂದಲೇ ದೆಹಲಿ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದ ಹೊರಗೆ ಹಲವಾರು ಪದರಗಳ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ: ಮಧ್ಯ ದೆಹಲಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳು, ಪ್ರಮುಖ ಜಂಕ್ಷನ್‌ಗಳು, ಮಾರುಕಟ್ಟೆ ಪ್ರದೇಶಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಪಡೆಗಳು ನಿರಂತರ ನಿಗಾ ವಹಿಸಿವೆ.

ಒಟ್ಟಾರೆಯಾಗಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಪರೀಕ್ಷಾ ಹಗರಣಗಳ ವಿರುದ್ಧ ಸಿಜೆಪಿ ಹೂಡಿರುವ ಈ ‘ಶಾಂತಿಯುತ ಸಮರ’ ರಾಜಧಾನಿ ದೆಹಲಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ.




Continue Reading

Trending

Copyright © 2025 Deevatige

error: Content is protected !!