crime
ಪುತ್ತೂರು: ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ; ಹಳೇ ದ್ವೇಷದ ಹಿನ್ನೆಲೆಯಲ್ಲಿ ಐದಾರು ಮಂದಿ ಕಿಡಿಗೇಡಿಗಳಿಂದ ಹಲ್ಲೆ
ಪುತ್ತೂರು: ನಗರದ ಹೃದಯಭಾಗದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ, ಪುತ್ತೂರಿನ ಕಾಲೇಜೊಂದರ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಆದಿಲ್ ಹುಸೇನ್ (21) ಹಲ್ಲೆಗೊಳಗಾದವರು.

ಘಟನೆಯ ಹಿನ್ನೆಲೆ:
ದೂರಿನಲ್ಲಿ ತಿಳಿಸಿರುವಂತೆ, ಆದಿಲ್ ಹುಸೇನ್ ಅವರು ಏಪ್ರಿಲ್ 22ರಂದು ಕಾಲೇಜು ಮುಗಿಸಿ ಸಂಜೆ ಸುಮಾರು 5:00 ಗಂಟೆಯ ವೇಳೆಗೆ ತನ್ನ ಗೆಳೆಯರಾದ ಸುಹೇಲ್ ಮತ್ತು ಅಝಾರ್ ಅವರೊಂದಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಚಹಾ ಅಂಗಡಿಗೆ ತೆರಳಿದ್ದರು. ಸಂಜೆ 6:20ರ ಸುಮಾರಿಗೆ ಚಹಾ ಕುಡಿಯುತ್ತಿದ್ದಾಗ ಏಕಾಏಕಿ ಬಂದ ತಂಡವು ಹಲ್ಲೆ ನಡೆಸಿದೆ.

ಸವಿವರವಾದ ದೂರು:
ಆದಿಲ್ ಅವರು ಚಹಾ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದ ತಂಡವು ಏಕಾಏಕಿ ದಾಳಿ ನಡೆಸಿದೆ. ದೂರಿನಲ್ಲಿ ಹೆಸರಿಸಲಾದ ಬಿ.ಕೆ. ಮೊಹಿನುದ್ದೀನ್, ಮೋಹದ್ ಹಾಗೂ ಇತರ ಸುಮಾರು 5 ಮಂದಿ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೆದರಿಸಿ, ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ಸ್ವರೂಪ: ಆರೋಪಿಗಳು ಆದಿಲ್ನ ಮೇಲೆ ಕಲ್ಲಿನಿಂದ ಬಲಗೈ, ಮುಖ, ಬಲಕಾಲು, ಮೊಣಗಂಟಿಗೆ ಮಾರಣಾಂತಿಕವಾಗಿ ಗುದ್ದಿದ್ದಾರೆ. ಈ ವೇಳೆ ಆದಿಲ್ನ ಕಣ್ಣಿನ ಮೇಲ್ಬಾಗ ಹಾಗೂ ಮೂಗಿಗೆ ತೀವ್ರ ಏಟು ಬಿದ್ದಿದ್ದು, ರಕ್ತಸ್ರಾವವಾಗಿದೆ.
ಪ್ರಾಣ ಬೆದರಿಕೆ: “ನೀನು ಇವತ್ತು ಮಿಸ್ ಆಗಿದ್ದೀಯಾ, ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಆರೋಪಿಗಳು ಈ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಹಳೇ ದ್ವೇಷವೇ ಕಾರಣ?
ಕಳೆದ ಆರು ತಿಂಗಳ ಹಿಂದೆ ಕಾಲೇಜಿನ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಆದಿಲ್ ಮತ್ತು ಈ ತಂಡದ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ತಂಡವು ಹೊಂಚು ಹಾಕಿ ಪುತ್ತೂರು ಪೇಟೆಯಲ್ಲಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಚಿಕಿತ್ಸೆ ಮತ್ತು ಮುಂದಿನ ಕ್ರಮ:
ಹಲ್ಲೆಯಿಂದ ಗಾಯಗೊಂಡ ಆದಿಲ್ ಅವರನ್ನು ಕೂಡಲೇ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತಲೆಗೆ ಬಲವಾದ ಏಟು ಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸೂಚನೆಯಂತೆ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ನೀಡಿದ ಹೇಳಿಕೆಯಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬಿ.ಕೆ. ಮೊಹಿನುದ್ದೀನ್, ಮೋಹದ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 49/2026, ಕಲಂ: 189(2), 191(2), 191(3), 352,115(2), 118(1),351(2), ಜೊತೆಗೆ 190 ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

crime
ಪುತ್ತೂರು: ಯುವತಿ ವಂಚನೆ ಪ್ರಕರಣ – ಬಿಜೆಪಿ ಮುಖಂಡನ ಪುತ್ರನೇ ಮಗುವಿನ ತಂದೆ ಎಂದು ಡಿಎನ್ಎ ದೃಢ; ಮದುವೆಯಾಗುವುದು ಉತ್ತಮ ಎಂದ ಹೈಕೋರ್ಟ್
ಪುತ್ತೂರು: ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೃಷ್ಣ ಜೆ.ರಾವ್ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, “ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. “ಇಲ್ಲದಿದ್ದರೆ ಯುವತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಸಿದ್ಧರಿದ್ದೀರಾ?” ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯನ್ನಾಗಿಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಪುತ್ತೂರು ಬಿಜೆಪಿ ಮುಖಂಡ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರೇ ಮಗುವಿನ ತಂದೆ ಎಂದು ಡಿಎನ್ಎ ವರದಿಯಿಂದ ದೃಢಪಟ್ಟಿದೆ.
ಪ್ರಕರಣದ ಹಿನ್ನೆಲೆ: ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಕೃಷ್ಣ ರಾವ್ ತನ್ನ ಮಾಜಿ ಸಹಪಾಠಿಯೊಂದಿಗೆ ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಕಳೆದ ವರ್ಷ ಜೂನ್ 28ರಂದು ಮಗುವಿಗೆ ಜನ್ಮ ನೀಡಿದ್ದಾಳೆ.
ಆರಂಭದಲ್ಲಿ ಮದುವೆಗೆ ನಿರಾಕರಿಸಿದ್ದ ಕೃಷ್ಣ, ಒತ್ತಾಯದ ಮೇರೆಗೆ ಒಪ್ಪಿದ್ದ. ಆದರೆ ತನಗೆ 21 ವರ್ಷ ತುಂಬಿಲ್ಲ ಎಂಬ ಕಾರಣ ನೀಡಿ, ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಭರವಸೆ ನೀಡಿದ್ದರು. 21 ವರ್ಷ ತುಂಬಿದ ಬಳಿಕವೂ ಕೃಷ್ಣ ಮದುವೆಗೆ ನಿರಾಕರಿಸಿ ‘ಮಗು ನನ್ನದಲ್ಲ’ ಎಂದು ವಾದಿಸಿದ್ದ. ಇದರಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಂಧನಕ್ಕೊಳಗಾಗಿದ್ದ ಕೃಷ್ಣ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಡಿಎನ್ಎಯಲ್ಲಿ ಸತ್ಯ ಬಹಿರಂಗ: ನ್ಯಾಯಾಲಯದ ಆದೇಶದಂತೆ ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಕೃಷ್ಣ ಜೆ. ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿದೆ. ಆದರೂ ಆರೋಪಿ ಮದುವೆಗೆ ಒಪ್ಪುತ್ತಿಲ್ಲ. ಬಿಜೆಪಿ ನಾಯಕರ ಸಂಧಾನ ಪ್ರಯತ್ನವೂ ವಿಫಲವಾಗಿದೆ.
ಹೈಕೋರ್ಟ್ ಹೇಳಿದ್ದೇನು? ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, “ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟಿದೆ.
“ಇಲ್ಲದಿದ್ದರೆ ಯುವತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಸಿದ್ಧರಿದ್ದೀರಾ?” ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಪ್ರಶ್ನಿಸಿ, ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.
ಆರೋಪಿ ಪರ ವಾದ: ಕೃಷ್ಣ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, “7 ವರ್ಷಗಳ ಹಿಂದೆ ಪ್ರೀತಿ ಇತ್ತು. ಕ್ರಿಮಿನಲ್ ಕೇಸ್ನಿಂದಾಗಿ ರಾಜಿಯಾಗಿಲ್ಲ. ರಾಜಕೀಯ ವಿರೋಧಿಗಳು ಆರೋಪಿಯ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್ನಲ್ಲೂ ಆರೋಪಿಗಳನ್ನಾಗಿಸಿದ್ದಾರೆ” ಎಂದು ಹೇಳಿದ್ದಾರೆ.
ಪ್ರಕರಣ ರಾಜಕೀಯ ವಲಯ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

crime
ಬೇಲಿಯೇ ಎದ್ದು ಹೊಲ ಮೇಯ್ದ ಕತೆ: ಇಂದೋರ್ನಲ್ಲಿ ರಕ್ಷಕರೇ ಭಕ್ಷಕರಾದ ಪೊಲೀಸರು, 5 ಮಂದಿ ಅಮಾನತು
ಇಂದೋರ್: ಕಳ್ಳರಿಂದ ಜನರನ್ನು ಕಾಪಾಡಬೇಕಾದ ಖಾಕಿ ಪಡೆಯೇ ಕಳ್ಳತನಕ್ಕಿಳಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ಬೆಳಕಿಗೆ ಬಂದಿದೆ. ಆಸ್ತಿ ವಿವಾದ ಬಗೆಹರಿಸುವ ನೆಪದಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿ 220 ಗ್ರಾಂ ಚಿನ್ನ ದೋಚಿ, 27 ಸಾವಿರ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಘಟನೆಯ ವಿವರ: ಇಂದೋರ್ನ ಉದ್ಯಮಿ ಗೌರವ್ ಜೈನ್ ಅವರು ಈ ಗಂಭೀರ ಆರೋಪ ಮಾಡಿದ್ದಾರೆ. ನಿವೃತ್ತ ಎಸಿಪಿಯೊಬ್ಬರನ್ನು ಒಳಗೊಂಡ ಆಸ್ತಿ ವಿವಾದ ಪರಿಹರಿಸುವ ನೆಪ ಹೇಳಿ ಎಸ್ಐ ಸಂಜಯ್ ವಿಷ್ಣೋಯ್, ರಣವೀರ್ ಕುಶ್ವಾ, ಪ್ರಣೀತ್ ಭಡೋರಿಯಾ, ದಿನೇಶ್ ಗುರ್ಜರ್ ಮತ್ತು ದೀಪೇಂದ್ರ ಮಿಶ್ರಾ ಎಂಬ ಐವರು ಪೊಲೀಸರು ತಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಜೈನ್ ದೂರಿದ್ದಾರೆ.
ಚಿನ್ನ-ಹಣ ದೋಚಿದ ಆರೋಪ: ರೇಡ್ ಮಾಡುವ ನೆಪದಲ್ಲಿ ಮನೆಗೆ ನುಗ್ಗಿದ ಪೊಲೀಸರು ಮೊದಲು ಮನೆಯ ಹೊರಗಿನ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ, ಮಾಸ್ಟರ್ ಕೀ ಬಳಸಿ ಮುಖ್ಯ ಬಾಗಿಲು ತೆರೆದಿದ್ದಾರೆ. ಬಳಿಕ ಮನೆಯಿಂದ ಸುಮಾರು 220 ಗ್ರಾಂ ಚಿನ್ನವನ್ನು ಕದ್ದಿದ್ದಾರೆ ಎಂದು ಗೌರವ್ ಜೈನ್ ಆರೋಪಿಸಿದ್ದಾರೆ.
ಹಲ್ಲೆ, ಸುಲಿಗೆ: ಅಷ್ಟೇ ಅಲ್ಲ, ಈ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿ ನಂತರ ಗ್ವಾಲಿಯರ್ನ ಅತಿಥಿ ಗೃಹದಲ್ಲಿ ನಿವೃತ್ತ ಎಸಿಪಿಗೆ ಸಂಬಂಧಿಸಿದ ಜನರಿಗೆ ಹಸ್ತಾಂತರಿಸಿದ್ದಾರೆ ಎಂದು ಜೈನ್ ತಿಳಿಸಿದ್ದಾರೆ. ಇದಲ್ಲದೆ, ಪೊಲೀಸರು ಒಟ್ಟು 27,000 ರೂ. ಹಣವನ್ನು ಸುಲಿಗೆ ಮಾಡಿದ್ದಾರೆ. ಕ್ಯೂಆರ್ ಕೋಡ್ ಮೂಲಕ ತಾವು ಇದ್ದ ಹೋಟೆಲ್ಗೆ 10,000 ರೂ. ಹಾಗೂ 17,000 ರೂ.ಗಳನ್ನು ಎಸ್ಐ ಮಗನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಐವರೂ ಅಮಾನತು: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ತಕ್ಷಣ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ಡಿಸಿಪಿ ಅಮರೇಂದ್ರ ಸಿಂಗ್ ಅವರು ಆರೋಪಿತ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
ರಕ್ಷಿಸಬೇಕಾದ ಪೊಲೀಸರೇ ಹೀಗೆ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

crime
ಶಿಕಾರಿಪುರ: ಜಾಗದ ವಿಚಾರಕ್ಕೆ ಗಲಾಟೆ; ಪತ್ನಿ, ಮಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ
ಶಿಕಾರಿಪುರ ತಾಲೂಕಿನ ಚುಂಚಿನಕೊಪ್ಪ ಗ್ರಾಮದಲ್ಲಿ ಜಾಗದ ವಿಚಾರವಾಗಿ ನಡೆದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ತಿರುಗಿ, ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಮೂರ್ತಿ ನಾಯ್ಕ್ ಎಂಬುವವರು ಏಪ್ರಿಲ್ 18ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ, ಅವರ ಮನೆಯ ಪಕ್ಕದಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿದ್ದ ಮೇಘರಾಜ ನಾಯ್ಕ್ ಅವರಿಗೆ ಓಡಾಡಲು ಮೂರು ಅಡಿ ಜಾಗ ಬಿಡುವಂತೆ ಕೋರಿದ್ದರು. ಈ ವೇಳೆ ವಾಗ್ವಾದ ಆರಂಭವಾಗಿದ್ದು, ಮೇಘರಾಜ ನಾಯ್ಕ್ ಅವರ ಮಗ ಲೋಹಿತ್ ಎಂಬಾತ ಕಬ್ಬಿಣದ ರಾಡ್ನಿಂದ ಮೂರ್ತಿ ನಾಯ್ಕ್ ಅವರ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ.
ಗಲಾಟೆಯನ್ನು ತಡೆಯಲು ಬಂದ ಮೂರ್ತಿ ನಾಯ್ಕ್ ಅವರ ಪತ್ನಿ ಸವಿತಾಬಾಯಿ ಅವರ ತಲೆಗೂ ಲೋಹಿತ್ ಅದೇ ರಾಡ್ನಿಂದ ಹೊಡೆದು ರಕ್ತಗಾಯ ಮಾಡಿದ್ದು, ಸೀತೀಬಾಯಿ ಎಂಬುವವರು ಕಲ್ಲಿನಿಂದ ಅವರ ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಜಗಳ ಬಿಡಿಸಲು ಹೋದ ಮಗಳು ಪವಿತ್ರಾಳ ಕೂದಲು ಹಿಡಿದು ಗಣೇಶ್ ಎಂಬಾತ ಕೆಳಕ್ಕೆ ತಳ್ಳಿದ್ದು, ಆರೋಪಿ ಮೇಘರಾಜ ನಾಯ್ಕ್ ಅವರು ಮಚ್ಚು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಮೂರ್ತಿ ನಾಯ್ಕ್, ಸವಿತಾಬಾಯಿ ಮತ್ತು ಪವಿತ್ರಾ ಅವರಿಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಲೋಹಿತ್, ಸೀತೀಬಾಯಿ, ಗಣೇಶ್ ಮತ್ತು ಮೇಘರಾಜ ನಾಯ್ಕ್ ಎಂಬ ನಾಲ್ವರ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಅಡಿಯಲ್ಲಿ ಕಲಂ 118(1), 74, 329(4), 351(3), ಮತ್ತು 3(5) ರ ಪ್ರಕಾರ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

-
crime4 weeks agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime3 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 weeks agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada4 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala4 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala2 months agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
