Connect with us

judgement

ಕಾಂಗ್ರೆಸ್‌ ಶಾಸಕ ಕೊಲೆ ಅಪರಾಧಿ; ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು

Published

on

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರ ಭೀಕರ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಈ ತೀರ್ಪಿನಿಂದಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ದೊಡ್ಡ ಹಿನ್ನಡೆಯಾಗಿದ್ದು, ನ್ಯಾಯಾಲಯವು ಎಲ್ಲಾ ಅಪರಾಧಿಗಳನ್ನು ತಕ್ಷಣವೇ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಸಿಬಿಐಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಈ ಆದೇಶವನ್ನು ಹೊರಡಿಸಿದ್ದು, ಕೊಲೆ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಅಡಿಯಲ್ಲಿ ಐಪಿಸಿ ಸೆಕ್ಷನ್ 302, 120ಬಿ ಹಾಗೂ201 ಅನ್ವಯ ದೋಷಿಗಳು ಎಂದು ತೀರ್ಮಾನಿಸಿದ್ದಾರೆ. ವಿನಯ್ ಕುಲಕರ್ಣಿ ಮತ್ತು ಇತರರು ಯೋಗೀಶ್ ಗೌಡ ಅವರ ಕೊಲೆಗೆ ಸಂಚು ರೂಪಿಸಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2016ರ ಜೂನ್ 15ರಂದು ಧಾರವಾಡದ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ, ರಾಜಕೀಯ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಆರೋಪಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸಾಕ್ಷಿ ನುಡಿಯುವಾಗ ಸುಳ್ಳು ಮಾಹಿತಿ ನೀಡಿದ ಮತ್ತು ತನಿಖೆಯ ಹಾದಿ ತಪ್ಪಿಸಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಇತರ ಸ್ವತಂತ್ರ ಸಾಕ್ಷಿಗಳ ವಿರುದ್ಧವೂ ಪ್ರಕರಣ ದಾಖಲಿಸಲು ನ್ಯಾಯಾಲಯವು ರಿಜಿಸ್ಟಾರ್‌ಗೆ ಸೂಚಿಸಿದೆ. ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎಂಬುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ. ಅಪರಾಧಿಗಳಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ನಿಗದಿಪಡಿಸಲು ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದ್ದು, ಸಾರ್ವಜನಿಕ ಜೀವನದಲ್ಲಿರುವವರ ನೈತಿಕತೆಗೆ ಸಂಬಂಧಿಸಿದಂತೆ ದೊಡ್ಡ ಸಂದೇಶವನ್ನು ರವಾನಿಸಿದೆ. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಎತ್ತಿ ಹಿಡಿದಿದೆ. ಅಂತಿಮವಾಗಿ ಸುದೀರ್ಘ ಕಾನೂನು ಹೋರಾಟದ ನಂತರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.

ವಿನಯ್​ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ ಬೆನ್ನಲ್ಲೇ ನ್ಯಾಯಾಲಯದ ಸೂಚನೆ ಮೇರೆಗೆ ಅಪರಾಧಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ತಂಡ, ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಜೈಲಿಗೆ ಹೋಗುವ ಮುನ್ನ, ಬೌರಿಂಗ್ ಆಸ್ಪತ್ರೆಯಲ್ಲಿ ವಿನಯ್ ಕುಲಕರ್ಣಿ ಸೇರಿ 17 ಮಂದಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇನ್ನು ಇದೇ ವೇಳೆ ಕೋರ್ಟ್​ ತೀರ್ಪಿನ ಬಗ್ಗೆ ದೋಷಿ ವಿನಯ್​ ಕುಲಕರ್ಣಿ ರಿಯಾಕ್ಟ್ ಮಾಡಿದ್ದಾರೆ.

ವಿನಯ್​ ಕುಲಕರ್ಣಿ ಹೇಳಿದ್ದೇನು?
ಒಂದು ಕೈಯಿಂದ ಸೆಲ್ಯುಟ್ ಹೊಡೆದು ಮಾತನಾಡಿದ ವಿನಯ್​ ಕುಲಕರ್ಣಿ, ಕೋರ್ಟ್ ತೀರ್ಪು ಕೊಟ್ಟಿದೆ. ಈಗ ನಾನೇನು ಹೇಳಲ್ಲ, ವಕೀಲರ ಬರುತ್ತಿದ್ದಾರೆ. ಅವರ ಬಳಿ ಈ ಬಗ್ಗೆ ಮಾತನಾಡುತ್ತೇನೆ. ಉಚ್ಚ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ದೋಷಿಯಾಗಿರೋ ವಿನಯ್​ ಕುಲಕರ್ಣಿ ಮುಂದಿನ ಹಾದಿ ಏನು?
ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿ ಹಿನ್ನೆಲೆ ಅವರ ಮುಂದಿನ ಹಾದಿ ಏನು ಅನ್ನೋದರ ಚರ್ಚೆ ಜೋರಾಗಿದೆ. ಶಾಸಕ ವಿನಯ್ ಕುಲಕರ್ಣಿ ಕಾನೂನು ಹೋರಾಟ ನಡೆಸಲು ಅವಕಾಶವಿದೆ. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ. ಸೆಷನ್ಸ್ ಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಮನವಿ ಮಾಡಲು ಅವಕಾಶವಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ವೃದ್ದೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Published

on

ಚಿನ್ನಾಭರಣ ದೋಚಲು ಉಸಿರುಗಟ್ಟಿಸಿ ಹತ್ಯೆ; ಐದು ವರ್ಷಗಳ ಬಳಿಕ ನ್ಯಾಯಾಲಯದ ತೀರ್ಪು

ಬಂಟ್ವಾಳ, ಜು. 29: ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ವೃದ್ದೆ ಬೆನಡಿಕ್ಟ್ ಕಾರ್ಲೋ (73) ಅವರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ಪ್ರಕಾರ, ವೃದ್ದೆಯ ಆರೈಕೆ ಮಾಡುತ್ತಿದ್ದ ಅಮ್ಟಾಡಿ ನಿವಾಸಿ ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23), ವೃದ್ದೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ತನ್ನ ಸ್ನೇಹಿತ ನರಿಕೊಂಬು ನಿವಾಸಿ ಸತೀಶ್ ನಾಯಕ್ (28) ಸಹಾಯದಿಂದ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದಳು. ಆ ಯತ್ನ ವಿಫಲವಾದ ಬಳಿಕ ಮತ್ತೋರ್ವ ಆರೋಪಿ ಚರಣ್ ಕುಮಾರ್ (31) ಸಹಾಯದಿಂದ 2021ರ ಜನವರಿ 25ರಂದು ರಾತ್ರಿ ಬೆನಡಿಕ್ಟ್ ಕಾರ್ಲೋರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದರು.

ಬಳಿಕ ಆರೋಪಿಗಳು ಒಟ್ಟು 61.070 ಗ್ರಾಂ ತೂಕದ (ಅಂದಿನ ಮೌಲ್ಯ ಸುಮಾರು ₹3 ಲಕ್ಷ) ಚಿನ್ನಾಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2021ರಡಿ ಭಾರತೀಯ ದಂಡ ಸಂಹಿತೆಯ 302, 392, 120(ಬಿ), 201 ಹಾಗೂ 34 ಕಲಂಗಳಡಿ ಪ್ರಕರಣ ದಾಖಲಾಗಿತ್ತು.

ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾಗಿದ್ದ ಪ್ರಸನ್ನ ಎಂ.ಎಸ್. ಅವರು ಆರೋಪಿಗಳನ್ನು ಬಂಧಿಸಿದ್ದರು. ನಂತರ ಆಗಿನ ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Continue Reading

judgement

12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ!

Published

on

ಮಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ದೋಷಿಗಳಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ಅವರು ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ!

2014ರ ಮೇ 15 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿಯ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿ ಬಂದ ಬೊಲೆರೋ ವಾಹನವೊಂದು ಅವರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಗಂಗಾಧರ ಪಾಂಗಾಳ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಬಿಂಬಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಅಪಘಾತವಲ್ಲ, ಬದಲಿಗೆ ಕೃತ್ಯ ಎಸಗಲು ರೂಪಿಸಿದ ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿತ್ತು.

ಕೊಲೆಗೆ ಕಾರಣವೇನು?

1ನೇ ಆರೋಪಿ ಸತೀಶ್ ಬೈಕಂಪಾಡಿಯನ್ನು ‘ಬೈಕಂಪಾಡಿ ಮೊಗವೀರ ಮಹಾಸಭಾ’ದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಈ ಅಮಾನತಿಗೆ ಮೃತ ಗಂಗಾಧರ ಪಾಂಗಾಳ ಅವರೇ ಮೂಲ ಕಾರಣವೆಂದು ಭಾವಿಸಿದ ಆರೋಪಿಗಳು, ಅವರ ಮೇಲೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದರು. ಈ ಹಳೆ ದ್ವೇಷ ತೀರಿಸಿಕೊಳ್ಳಲು ಒಳಸಂಚು ರೂಪಿಸಿದ ಆರೋಪಿಗಳು, ಗಂಗಾಧರ ಅವರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿ ಬಂದು ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿದ್ದರು. ಗಂಗಾಧರ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ನಂತರ ಆರೋಪಿಗಳು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದರು.

ಶಿಕ್ಷೆಗೆ ಗುರಿಯಾದ ದೋಷಿಗಳು:

ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ನಾಲ್ವರು ಆರೋಪಿಗಳ ವಿವರ ಹೀಗಿದೆ:

  1. ಸತೀಶ್ ಬೈಕಂಪಾಡಿ (57 ವರ್ಷ) – ಎ-1 ಆರೋಪಿ (ಮೀನಕಳಿಯ ನಿವಾಸಿ)
  2. ಪುಷ್ಪರಾಜ್ (47 ವರ್ಷ) – ಎ-2 ಆರೋಪಿ (ಶಿವಳ್ಳಿ ಗ್ರಾಮ, ಉಡುಪಿ)
  3. ಹರೀಶ್ ಬೈಕಂಪಾಡಿ (61 ವರ್ಷ) – ಎ-3 ಆರೋಪಿ (ಮೀನಕಳಿಯ ನಿವಾಸಿ)
  4. ಭಾಸ್ಕರ್ ಬೈಕಂಪಾಡಿ (63 ವರ್ಷ) – ಎ-4 ಆರೋಪಿ (ಮೀನಕಳಿಯ ನಿವಾಸಿ)

(ಟಿಪ್ಪಣಿ: ಆರೋಪಿಗಳಾದ ಸತೀಶ್, ಹರೀಶ್ ಮತ್ತು ಭಾಸ್ಕರ್ ಬೈಕಂಪಾಡಿ ಅವರು ಸ್ವಂತ ಸಹೋದರರಾಗಿದ್ದಾರೆ.)

ನ್ಯಾಯಾಲಯ ವಿಧಿಸಿದ ಶಿಕ್ಷೆ ಮತ್ತು ದಂಡದ ವಿವರ:

ಐಪಿಸಿ ಕಲಂ 302, 120, 109 r/w 34 ಅಡಿ: ನಾಲ್ಕೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾ ಶಿಕ್ಷೆ).

ಐಪಿಸಿ ಕಲಂ 201 (ಸಾಕ್ಷ್ಯ ನಾಶ) r/w 34 ಅಡಿ: ಎಲ್ಲಾ ಆರೋಪಿಗಳಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು ತಲಾ ₹1,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ).

ಮೃತನ ಮಗಳಿಗೆ ಪರಿಹಾರ: ಆರೋಪಿಗಳಿಂದ ವಸೂಲಿ ಮಾಡಲಾಗುವ ಒಟ್ಟು ₹66,000 ದಂಡದ ಮೊತ್ತದಲ್ಲಿ, ₹50,000 ಹಣವನ್ನು ಮೃತ ಗಂಗಾಧರ ಪಾಂಗಾಳ ಅವರ ಮಗಳಿಗೆ ಪರಿಹಾರವಾಗಿ ನೀಡಲು ಹಾಗೂ ಉಳಿದ ₹16,000 ಹಣವನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.

ವಾಹನಗಳು ಜಪ್ತಿ – ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಕೃತ್ಯ ಎಸಗಲು ಮತ್ತು ಸಂಚು ರೂಪಿಸಲು ಬಳಸಲಾಗಿದ್ದ ಆರೋಪಿಗಳಿಗೆ ಸೇರಿದ ಬೊಲೆರೋ, ರೀಡ್ಝ್ ಹಾಗೂ ಮಾರುತಿ ಕಾರುಗಳನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶದಂತೆ ನಾಲ್ಕೂ ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತನಿಖಾ ತಂಡ ಮತ್ತು ಸರ್ಕಾರಿ ಅಭಿಯೋಜಕರು:

ಪಣಂಬೂರು ಪೊಲೀಸ್ ಠಾಣೆಯ അന്നಿನ ಇನ್‌ಸ್ಪೆಕ್ಟರ್‌ಗಳಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ ಹಾಗೂ ರವೀಶ್ ನಾಯಕ್ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿದ್ದರು. ತನಿಖಾಧಿಕಾರಿ ಲೋಕೇಶ್ ಎ.ಸಿ. ಅವರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ಪ್ರಬಲವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ

Continue Reading

court

ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ: ಮನೀಷ್‌ಗೆ ಹೈಕೋರ್ಟ್‌ನಿಂದ ಬೇಲ್

Published

on

ಪುತ್ತೂರು, ಜು. 26: ಬಹುಚರ್ಚಿತ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮನೀಷ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಜಸ್ಟಿಸ್ ವಿಶ್ವಜಿತ್ ಶೆಟ್ಟಿ ಅವರು ಎರಡೂ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ಬಳಿಕ, ನಿಗದಿತ ಷರತ್ತುಗಳೊಂದಿಗೆ ಜಾಮೀನು ನೀಡುವಂತೆ ಆದೇಶಿಸಿದ್ದಾರೆ.

ನ್ಯಾಯಾಲಯದ ಆದೇಶದಲ್ಲಿ ಜಾಮೀನು ಮಂಜೂರು ಮಾಡಿರುವುದು ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿದಂತಲ್ಲ. ಪ್ರಕರಣದ ಅಂತಿಮ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿಗೆ ಕಾನೂನುಬದ್ಧ ಹಕ್ಕುಗಳ ಅನ್ವಯ ನ್ಯಾಯಯುತ ಅವಕಾಶ ದೊರಕಬೇಕು ಎಂಬ ಸಂವಿಧಾನಾತ್ಮಕ ತತ್ವದ ಆಧಾರದ ಮೇಲೆ ಜಾಮೀನು ನೀಡಲಾಗಿದೆ.

ಹೈಕೋರ್ಟ್‌ನ ಆದೇಶವನ್ನು ಮನೀಷ್ ಕುಟುಂಬಸ್ಥರು ಹಾಗೂ ಆಪ್ತರು ಸ್ವಾಗತಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯ ನ್ಯಾಯಾಲಯದ ಮುಂದೆ ಹೊರಬಂದು ಅಂತಿಮವಾಗಿ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ನ್ಯಾಯಾಲಯ ವಿಧಿಸಿರುವ ಎಲ್ಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಗಮನ ಸೆಳೆದಿರುವ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಈ ಜಾಮೀನು ಆದೇಶವು ಮುಂದಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯದ ವಿಚಾರಣೆ ಬಳಿಕವೇ ಹೊರಬರಲಿದ್ದು, ಅದರತ್ತ ಎಲ್ಲರ ಗಮನ ನೆಟ್ಟಿದೆ.

2023 ನವೆಂಬರ್‌ 6ರಂದು ಅಕ್ಷಯ್‌ ಕಲ್ಲೇಗ ಅವರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಕೊಲೆಯಾದ ಅಕ್ಷಯ್‌ ಕಲ್ಲೇಗ ಅವರ ಗೆಳೆಯರೇ ಈ ಕೃತ್ಯ ಎಸಗಿದ್ದಾರೆಂದು ಈ ಪ್ರಕರಣದಲ್ಲಿ ಮನೀಷ್‌, ಚೇತನ್‌, ಮಂಜುನಾಥ್‌ ಮತ್ತು ಕೇಶವ ಎಂಬವರನ್ನು ಪೊಲೀಸರು ಬಂಧಿಸಿದ್ದರು.

Continue Reading

Trending

Copyright © 2025 Deevatige

error: Content is protected !!