Connect with us

INCIDENT

ಗುರುಪುರ ಸೇತುವೆಯಿಂದ ನದಿಗೆ ಹಾರಿದ ಯುವಕ: ಕಜೆಪದವಿನ ಕೌಶಿಕ್ ನಾಪತ್ತೆ

Published

on

ಮಂಗಳೂರು: ಗುರುಪುರ ಸೇತುವೆಯಿಂದ ಯುವಕನೊಬ್ಬ ನದಿಗೆ ಹಾರಿದ ಆಘಾತಕಾರಿ ಘಟನೆ ಬುಧವಾರ ಸಂಜೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ಕಜೆಪದವು ನಿವಾಸಿ ಕೌಶಿಕ್ ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ಸುಮಾರು 6:30ರ ವೇಳೆಗೆ ಕೌಶಿಕ್ ತನ್ನ ಡಿಯೋ ಸ್ಕೂಟರ್‌ನಲ್ಲಿ ಗುರುಪುರ ಸೇತುವೆ ಬಳಿ ಬಂದಿದ್ದಾರೆ. ಸೇತುವೆಯ ಮೇಲೆ ವಾಹನ ನಿಲ್ಲಿಸಿದ ಅವರು, ಏಕಾಏಕಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಸ್ಥಳದಲ್ಲಿ ಸಿಕ್ಕ ಪುರಾವೆಗಳು:

ಸಾರ್ವಜನಿಕರು ಸೇತುವೆಯ ಮೇಲಿದ್ದ ಸ್ಕೂಟರ್ ಅನ್ನು ಪರಿಶೀಲಿಸಿದಾಗ, ಒಂದು ಮೊಬೈಲ್ ಫೋನ್, ಸ್ವಲ್ಪ ನಗದು ಮತ್ತು ವೈದ್ಯರು ನೀಡಿದ ಔಷಧಿ ಚೀಟಿ (Prescription) ಅದರ ಸೀಟಿನ ಅಡಿಯಲ್ಲಿ ಪತ್ತೆಯಾಗಿವೆ: ಔಷಧಿ ಚೀಟಿಯಲ್ಲಿ “ಕೌಶಿಕ್, ಕಜೆಪದವು” ಎಂಬ ಹೆಸರಿರುವುದು ಕಂಡುಬಂದಿದ್ದು, ಇದರ ಆಧಾರದ ಮೇಲೆ ಯುವಕನ ಗುರುತು ಪತ್ತೆಹಚ್ಚಲಾಗಿದೆ.

ಪೊಲೀಸ್ ತನಿಖೆ ಮತ್ತು ಶೋಧ ಕಾರ್ಯ:

ಮಾಹಿತಿ ತಿಳಿಯುತ್ತಿದ್ದಂತೆ ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರು ಮತ್ತು ರಕ್ಷಣಾ ತಂಡದ ನೆರವಿನೊಂದಿಗೆ ನದಿಯಲ್ಲಿ ಯುವಕನಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಕೌಶಿಕ್ ಅವರು ಈ ನಿರ್ಧಾರ ತೆಗೆದುಕೊಳ್ಳಲು ನಿಖರವಾದ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

Continue Reading
Advertisement

Bantawala

ವಿಟ್ಲ: ಸಿಡಿಪಿಒ ಕಚೇರಿಯಲ್ಲಿ ದಾಂಧಲೆ; ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಪೀಠೋಪಕರಣ ಧ್ವಂಸ

Published

on

ವಿಟ್ಲ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯಲ್ಲಿ ದಂಪತಿಗಳ ನಡುವಿನ ಮನಸ್ತಾಪದ ಕುರಿತು ಆಪ್ತ ಸಮಾಲೋಚನೆ (COUNSELING) ನಡೆಯುತ್ತಿದ್ದ ವೇಳೆ, ಪತಿಯ ಕಡೆಯವರು ಏಕಾಏಕಿ ದಾಂಧಲೆ ನಡೆಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ವಿಟ್ಲದ ಬಸವನಗುಡಿ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ: ವಿಟ್ಲದ ಬಸವನಗುಡಿ ರಸ್ತೆಯಲ್ಲಿರುವ ಕುಲಾಲ ಭವನದಲ್ಲಿ ಕಾರ್ಯಾಚರಿಸುತ್ತಿರುವ ಸಿಡಿಪಿಒ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಇರಾ ಮೂಲದ ಪತ್ನಿ ಹಾಗೂ ಉಳ್ಳಾಲ ಮೂಲದ ಪತಿಯ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತ್ನಿಯ ಕಡೆಯವರು ನೀಡಿದ ದೂರಿನ ಮೇರೆಗೆ ಇಲಾಖೆಯು ಎರಡೂ ತಂಡಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಮಧ್ಯಾಹ್ನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಆಪ್ತ ಸಮಾಲೋಚನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಈ ವೇಳೆ ರೊಚ್ಚಿಗೆದ್ದ ಪತಿಯ ಕಡೆಯವರು ಪತ್ನಿಯ ಕಡೆಯವರ ಮೇಲೆ ನೂಕಾಟ-ತಳ್ಳಾಟ ನಡೆಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಚೇರಿ ಆಸ್ತಿ ಪಾಸ್ತಿ ಧ್ವಂಸ: ಗಲಾಟೆ ನಿಯಂತ್ರಿಸಲು ಕಚೇರಿಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಯತ್ನಿಸಿದರಾದರೂ, ಉದ್ರಿಕ್ತ ಗುಂಪು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಬಡಿದು ಧ್ವಂಸಗೊಳಿಸಿದೆ. ಇಷ್ಟಕ್ಕೇ ಸುಮ್ಮನಾಗದ ಗುಂಪು, ಕೌನ್ಸಿಲಿಂಗ್ ಕೇಂದ್ರದಿಂದ ಹೊರಗೆ ಬಂದು ಕೇಕೆ ಹಾಕುತ್ತಾ ಆರ್ಭಟಿಸಿದೆ. ಅಲ್ಲದೆ, ಕಚೇರಿಯ ಶಟರ್ ಎಳೆದು ಬೆದರಿಕೆ ಹಾಕಿದ್ದರಿಂದ ಕಚೇರಿ ಸಿಬ್ಬಂದಿಗಳು ತೀವ್ರ ಭಯಭೀತರಾಗಿ ಬೊಬ್ಬೆ ಹೊಡೆದಿದ್ದಾರೆ.

“ಪತಿ-ಪತ್ನಿಯರ ನಡುವಿನ ಸಣ್ಣ ವಿಚಾರದ ಮನಸ್ತಾಪವನ್ನು ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಬಹುದಾಗಿತ್ತು. ಆದರೆ, ಕೌನ್ಸಿಲಿಂಗ್‌ಗೆ ಎರಡೂ ಕಡೆಯಿಂದ ಸಂಬಂಧವಿಲ್ಲದ ಅನಗತ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದೇ ಈ ಗಲಾಟೆಗೆ ಮುಖ್ಯ ಕಾರಣ” ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ

ಸರ್ಕಾರಿ ಕಚೇರಿಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಈ ಘಟನೆ ವಿಟ್ಲ ಪರಿಸರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.


Continue Reading

INCIDENT

ಕೊಡಗಿನಲ್ಲಿ ಶರಣ್ಯ ನಾಪತ್ತೆ ಪ್ರಕರಣ: ಕೊಡಗಿನ ತಡಿಯಂಡಮೋಳ್ ಚಾರಣ ಹೈಡ್ರಾಮ: ಕೇರಳದ ಟೆಕ್ಕಿ ಶರಣ್ಯ ಕಥೆ ಅಸಲಿಯೇ? ನಕಲಿಯೇ? ತನಿಖೆಗೆ ಬಿಜೆಪಿ ಆಗ್ರಹ

Published

on

ಮಡಿಕೇರಿ: ಕೊಡಗಿನ ಪ್ರಸಿದ್ಧ ಚಾರಣ ತಾಣವಾದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಮಹಿಳೆ ಜಿ.ಎಸ್. ಶರಣ್ಯ (36) ನಾಪತ್ತೆಯಾಗಿ, ನಂತರ ಪತ್ತೆಯಾದ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿರುವ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಮುಖರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಡಗಿನ ಅತ್ಯುನ್ನತ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಲ್ಕು ದಿನಗಳ ಕಾಲ ನಾಪತ್ತೆಯಾಗಿದ್ದ ಕೇರಳದ ಸಾಫ್ಟ್‌ವೇರ್ ಎಂಜಿನಿಯರ್ ಜಿ.ಎಸ್. ಶರಣ್ಯ (36) ಅವರ ‘ಬದುಕುಳಿಯುವಿಕೆಯ ಕಥೆ’ (Survival Story) ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ಇಡೀ ಪ್ರಕರಣವು ಪೂರ್ವನಿಯೋಜಿತ ನಾಟಕವಿರಬಹುದು ಎಂಬ ಸಂಶಯ ವ್ಯಕ್ತಪಡಿಸಿರುವ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದೆ.

ಏನಿದು ಪ್ರಕರಣ?

ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾಡಪುರಂ ಮೂಲದ ಶರಣ್ಯ ಅವರು ಏಪ್ರಿಲ್ 2 ರಂದು 12 ಜನರ ತಂಡದೊಂದಿಗೆ ಚಾರಣ ಆರಂಭಿಸಿದ್ದರು. ಬೆಟ್ಟ ಇಳಿಯುವಾಗ ದಾರಿ ತಪ್ಪಿ ತಂಡದಿಂದ ಬೇರ್ಪಟ್ಟಿದ್ದರು. ನಂತರ ಸತತ ನಾಲ್ಕು ದಿನಗಳ ಕಾಲ ದಟ್ಟ ಅರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಹಳ್ಳದ ನೀರು ಕುಡಿದು ಬದುಕಿರುವುದಾಗಿ ಅವರು ಹೇಳಿಕೊಂಡಿದ್ದರು. ಏಪ್ರಿಲ್ 5 ರಂದು ಅವರು ಸ್ಥಳೀಯರಿಗೆ ಪತ್ತೆಯಾಗಿದ್ದರು.

ಬಿಜೆಪಿ ನಾಯಕರ ಸಂಶಯಕ್ಕೆ ಕಾರಣಗಳೇನು?

ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪೊಕ್ಕುಳಂಡ ಧನೋಜ್ (ದಿವ್ಯ) ಮತ್ತು ಇತರ ಮುಖಂಡರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ:

ದೈಹಿಕ ಕ್ಷಮತೆ: ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಆಹಾರವಿಲ್ಲದೆ ಕಳೆದಿದ್ದರೂ, ಶರಣ್ಯ ಅವರು ಪತ್ತೆಯಾದಾಗ ಅತಿ ಉತ್ಸಾಹದಿಂದ ಮತ್ತು ಯಾವುದೇ ಆಯಾಸವಿಲ್ಲದಂತೆ ಕಂಡುಬಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ವನ್ಯಮೃಗಗಳ ಭಯ: ಆನೆ ಮತ್ತು ಇತರ ಕ್ರೂರ ಪ್ರಾಣಿಗಳು ಓಡಾಡುವ ದಟ್ಟ ಅರಣ್ಯದಲ್ಲಿ ಒಬ್ಬಂಟಿಯಾಗಿ ನಾಲ್ಕು ದಿನ ಕಳೆದರೂ ತನಗೆ “ಭಯವಾಗಲಿಲ್ಲ” ಎಂದು ಅವರು ನೀಡಿರುವ ಹೇಳಿಕೆ ಅಸಹಜವಾಗಿ ಕಾಣುತ್ತಿದೆ.

ಸಾರ್ವಜನಿಕ ಹಣದ ವ್ಯರ್ಥ: ಅವರನ್ನು ಹುಡುಕಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದರು. ಇದು ಕೇವಲ ಪ್ರಚಾರಕ್ಕಾಗಿ (Fake Publicity) ಮಾಡಿರುವ ನಾಟಕವಾಗಿದ್ದರೆ, ಸರ್ಕಾರದ ಸಂಪನ್ಮೂಲ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

    ‘ಕಾಣದ ಕೈಗಳ’ ಕೈವಾಡ?

    “ಈ ಪ್ರಕರಣದ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಜನರು ಇದನ್ನು ನಂಬಲು ಸಿದ್ಧರಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು,” ಎಂದು ಪೊಕ್ಕುಳಂಡ ಧನೋಜ್ ಒತ್ತಾಯಿಸಿದ್ದಾರೆ.

    ಪೊಲೀಸ್ ಮತ್ತು ಶರಣ್ಯ ಅವರ ಪ್ರತಿಕ್ರಿಯೆ:

    ಪೊಲೀಸರು ಸದ್ಯಕ್ಕೆ ಎಫ್‌ಐಆರ್ ದಾಖಲಿಸದಿದ್ದರೂ, ಸಲ್ಲಿಕೆಯಾಗಿರುವ ಅರ್ಜಿಯನ್ನು ಆಧರಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇತ್ತ ಶರಣ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು, 500 ಮಿಲಿ ನೀರಿನ ಬಾಟಲಿಯನ್ನೇ ಹಳ್ಳದ ನೀರಿನಿಂದ ತುಂಬಿಸಿಕೊಂಡು ಕುಡಿದು ಬದುಕಿದ್ದೆ,” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ನಿಯೋಗದಲ್ಲಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಲಿಯಂಡ ಅಂಬಿ ಕಾರ್ಯಪ್ಪ, ಬಿಜೆಪಿ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷ ಪಾಡಿಯಂಡ ಕಟ್ಟಿ ಕುಶಾಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೋಳಿಯಾಡಿರ ಸಂತು ಸುಬ್ರಮಣಿ ಮತ್ತಿತರರು ಉಪಸ್ಥಿತರಿದ್ದು, ತನಿಖೆಗೆ ಒತ್ತಾಯಿಸಿದರು.

    Continue Reading

    INCIDENT

    ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ಅನಧಿಕೃತ ವ್ಯಕ್ತಿಗಳಿಂದ ಧ್ವಜಾರೋಹಣ ನಡೆದರೆ ಇತಿಹಾಸಕ್ಕೆ ಕಪ್ಪು ಚುಕ್ಕೆ – ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಎಚ್ಚರಿಕೆ

    Published

    on

    ಪುತ್ತೂರು: ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಯಾವುದೇ ಅಧಿಕೃತ ಅನುಮತಿ ಇಲ್ಲದ ವ್ಯಕ್ತಿಗಳು ಧ್ವಜಾರೋಹಣ ನೆರವೇರಿಸುವುದು ದೇವಳದ ಪವಿತ್ರತೆಗೆ ಧಕ್ಕೆ ತರಲಿದೆ. ಕ್ರಿಮಿನಲ್ ಆರೋಪಿಯ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರು ಈ ಬಾರಿ ಧ್ವಜಾರೋಹಣ ಮಾಡಿದರೆ ಅದು ದೇವಸ್ಥಾನದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಲಿದೆ ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್. ಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸಿದ್ದಾರೆ.

    ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.

    ನಿಯಮ ಬಾಹಿರ ಧ್ವಜಾರೋಹಣದ ಆರೋಪ

    ದೇವಸ್ಥಾನದ ನಿಯಮಾವಳಿಗಳ ಪ್ರಕಾರ, ಜಾತ್ರೋತ್ಸವದ ಧ್ವಜಾರೋಹಣ ಮತ್ತು ಅವರೋಹಣ ಮಾಡುವ ಜವಾಬ್ದಾರಿ ಕೇವಲ ದೇವಸ್ಥಾನದ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಗೆ ಮಾತ್ರ ಇರುತ್ತದೆ. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರೇ ಲಿಖಿತ ಮಾಹಿತಿ ನೀಡಿದ್ದು, ಪ್ರಸ್ತುತ ನಾಗೇಶ್ ಮತ್ತು ಬಾಲಕೃಷ್ಣ ಎಂಬುವವರು ಮಾತ್ರ ಈ ಹುದ್ದೆಯಲ್ಲಿದ್ದಾರೆ.

    ಪಿ.ಜಿ. ಜಗನ್ನಿವಾಸ ರಾವ್ ಅವರು ದೇವಸ್ಥಾನದ ನೌಕರರಲ್ಲ, ಅವರಿಗೆ ಯಾವುದೇ ಅನುವಂಶಿಕ ಹಕ್ಕೂ ಇಲ್ಲ. ಧಾರ್ಮಿಕ ದತ್ತಿ ಇಲಾಖೆ ಅಥವಾ ತಂತ್ರಿಗಳಿಂದ ಯಾವುದೇ ಲಿಖಿತ ಅನುಮತಿ ಇಲ್ಲದಿದ್ದರೂ ಅವರು ಅಕ್ರಮವಾಗಿ ಧ್ವಜಾರೋಹಣ ಮಾಡುತ್ತಿದ್ದಾರೆ,” ಎಂದು ಶ್ರೀನಾಥ್ ಆರೋಪಿಸಿದರು.

    ಗರ್ಭಗುಡಿ ಪ್ರವೇಶ ಮತ್ತು ಅಕ್ರಮ ಚಟುವಟಿಕೆಗಳು

    ದೇವಸ್ಥಾನದ ಗರ್ಭಗುಡಿಯ ಎಡನಾಳಿಗೆ ಪ್ರವೇಶಿಸಲು ಕೇವಲ ತಂತ್ರಿಗಳಿಗೆ, ಅರ್ಚಕರಿಗೆ ಮತ್ತು ಸಂಬಂಧಪಟ್ಟ ನೌಕರರಿಗೆ ಮಾತ್ರ ಅವಕಾಶವಿದೆ. ಆದರೆ, ಪಿ.ಜಿ. ಜಗನ್ನಿವಾಸ ರಾವ್, ಅವರ ಸಹೋದರ ಚಂದ್ರಶೇಖರ ರಾವ್ ಮತ್ತು ಪುತ್ರ ಕೃಷ್ಣ ಜೆ. ರಾವ್ ಅವರು ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಎಡನಾಳಿ ಪ್ರವೇಶಿಸುತ್ತಿದ್ದಾರೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

    ಕಳೆದ ವರ್ಷದ ಘಟನೆಗಳ ಉಲ್ಲೇಖ:

    ಕಳೆದ ವರ್ಷ ರಥೋತ್ಸವದ ವೇಳೆ ದೇವರು ರಥಾರೋಹಣ ಮಾಡುವ ಮುನ್ನವೇ ಜಗನ್ನಿವಾಸ ರಾವ್ ಅವರು ಯಾವುದೇ ಅರ್ಹತೆ ಇಲ್ಲದೆ ಪವಿತ್ರ ಬ್ರಹ್ಮರಥವನ್ನು ಏರಿ ನಿಂತಿದ್ದರು. ವೀರಮಂಗಲದಲ್ಲಿ ಶ್ರೀದೇವರ ಪವಿತ್ರ ಅವಭೃತ ಸ್ನಾನ ನಡೆಯುವ ಸಂದರ್ಭದಲ್ಲಿ ಜಗನ್ನಿವಾಸ ರಾವ್ ಮತ್ತು ಕೃಷ್ಣ ಜೆ. ರಾವ್ ಅವರು ನಿಯಮ ಮೀರಿ ದೇವರ ಅತೀ ಸಮೀಪಕ್ಕೆ ಹೋಗಿದ್ದರು.

    ಕಾನೂನು ಹೋರಾಟದ ಎಚ್ಚರಿಕೆ

    ದೇವಸ್ಥಾನದ ಪವಿತ್ರತೆ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳಲು ದೇವಳದ ಅಧಿಕೃತ ಪದಾರ್ಥಿಗಳೇ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಬೇಕು ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ. ಒಂದು ವೇಳೆ ಈ ಬಾರಿಯೂ ಪಿ.ಜಿ. ಜಗನ್ನಿವಾಸ ರಾವ್ ಅವರು ಧ್ವಜಾರೋಹಣದಲ್ಲಿ ಭಾಗಿಯಾದರೆ ಅಥವಾ ಬ್ರಹ್ಮರಥ ಏರಿದರೆ ಅವರ ವಿರುದ್ಧ ಕಟು ಕಾನೂನು ಹೋರಾಟ ಸಂಘಟಿಸಲಾಗುವುದು ಎಂದು ವೇದಿಕೆಯು ಎಚ್ಚರಿಸಿದೆ.

    ಜಾತಿ ಮರೆಮಾಚಿ ವಂಚಿಸಿದ ಆರೋಪ: ಭಕ್ತರ ಆಕ್ರೋಶ

    ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯಂತೆ, ಪಿ.ಜಿ. ಜಗನ್ನಿವಾಸ ರಾವ್ ಅವರು ಯಾವುದೇ ಬ್ರಾಹ್ಮಣ ಪಂಗಡಕ್ಕೆ ಸೇರಿದವರಲ್ಲ. ಆದರೂ ಅವರು ತಾವು ಬ್ರಾಹ್ಮಣ ಎಂದು ಸುಳ್ಳು ಹೇಳಿ, ‘ವೇದ ಸಂವರ್ಧನಾ ಪ್ರತಿಷ್ಠಾನ’ದ ಮೂಲಕ ದೇವಸ್ಥಾನದಲ್ಲಿ ರುದ್ರಪಾರಾಯಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಬ್ರಾಹ್ಮಣ ಪಂಕ್ತಿಯಲ್ಲಿ ಕುಳಿತು ಭೋಜನ ಮಾಡುವ ಮೂಲಕ ದೇವಸ್ಥಾನದ ಸಂಪ್ರದಾಯ ಮತ್ತು ಶುದ್ಧ ಪಾವಿತ್ರ್ಯತೆಗೆ ಭಂಗ ತರುತ್ತಿದ್ದಾರೆ ಎಂಬ ಮಾತುಗಳು ಭಕ್ತವಲಯದಲ್ಲಿ ಜನಜನಿತವಾಗಿದೆ. ಬ್ರಾಹ್ಮಣ ಪಂಗಡಕ್ಕೆ ಸೇರದ ಇವರು ರಥೋತ್ಸವದ ಪೂರ್ವದಲ್ಲಿ ಪವಿತ್ರ ಬ್ರಹ್ಮರಥ ಏರಿದ್ದು ಹೇಗೆ? ಅವಭೃತ ಸ್ನಾನದ ವೇಳೆ ಮಗನ ಜೊತೆ ದೇವರ ಅತೀ ಸಮೀಪಕ್ಕೆ ಹೋಗಲು ಅನುಮತಿ ನೀಡಿದವರು ಯಾರು? ಇದು ದೇವಳದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಪ್ರಮಾದ,” ಎಂದು ಶ್ರೀನಾಥ್ ಪ್ರಶ್ನಿಸಿದ್ದಾರೆ.

    ಪುತ್ರನ ವಿರುದ್ಧ ಕ್ರಿಮಿನಲ್ ಕೇಸ್: ವಚನಭ್ರಷ್ಟರಾದ ಜಗನ್ನಿವಾಸ ರಾವ್

    ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪವಿದ್ದು, ಪ್ರಕರಣ ಸದ್ಯ ತನಿಖಾ ಹಂತದಲ್ಲಿದೆ. ತನ್ನ ಸಹಪಾಠಿಯಾದ ಹಿಂದೂ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಮಗು ಜನಿಸಿದ ನಂತರ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾರೆ ಎಂಬ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಪಿ.ಜಿ. ಜಗನ್ನಿವಾಸ ರಾವ್ ಅವರು ಪೊಲೀಸ್ ಠಾಣೆಯಲ್ಲೇ ತನ್ನ ಮಗನನ್ನು ಅದೇ ಯುವತಿಯೊಂದಿಗೆ ಮದುವೆ ಮಾಡಿಸುವುದಾಗಿ ದೃಢಪತ್ರ ಬರೆದುಕೊಟ್ಟಿದ್ದರು. ಆದರೆ, ನಂತರ ಮದುವೆ ಮಾಡಿಸದೆ ವಚನಭ್ರಷ್ಟರಾಗಿ ಸಂತ್ರಸ್ತೆಗೆ ಮೋಸ ಮಾಡಿದ್ದಾರೆ ಎಂದು ಯುವತಿಯ ತಾಯಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಆಪಾದಿಸಿದ್ದಾರೆ.

    ಧಾರ್ಮಿಕ ಕಾರ್ಯಗಳಿಂದ ದೂರವಿಡಲು ಆಗ್ರಹ

    ಒಂದೆಡೆ ಕ್ರಿಮಿನಲ್ ಹಿನ್ನೆಲೆ ಹಾಗೂ ಇನ್ನೊಂದೆಡೆ ದೇವಸ್ಥಾನದ ಸಂಪ್ರದಾಯಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಈ ವ್ಯಕ್ತಿಗಳು ಜಾತ್ರೋತ್ಸವದ ಧ್ವಜಾರೋಹಣ ಅಥವಾ ಯಾವುದೇ ಪವಿತ್ರ ಕೈಂಕರ್ಯಗಳಲ್ಲಿ ಭಾಗಿಯಾಗಬಾರದು ಎಂದು ವೇದಿಕೆ ಒತ್ತಾಯಿಸಿದೆ. “ದೇವಸ್ಥಾನದ ಖಾಯಂ ಪದಾರ್ಥಿಗಳೇ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕು. ನಿಯಮ ಮೀರಿ ಅಕ್ರಮವಾಗಿ ಗರ್ಭಗುಡಿಯ ಎಡನಾಳಿ ಪ್ರವೇಶಿಸುವ ಅಥವಾ ರಥ ಏರುವ ಪ್ರಯತ್ನ ನಡೆಸಿದರೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಾನೂನುಬದ್ಧವಾಗಿ ಕಟು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದು, ಈ ಬಗ್ಗೆ “ದೇವಳದ ತಂತ್ರಿಗಳಲ್ಲಿ, ಆಡಳಿತ ವರ್ಗದವರಲ್ಲಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಲ್ಲಿ ಮಾಧ್ಯಮಗಳ ಮುಖಾಂತರ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.


    Continue Reading

    Trending

    Copyright © 2025 Deevatige