Connect with us

DEATH

ಪತ್ನಿಯ ಕಿರುಕುಳಕ್ಕೆ ಮಗ ಬಲಿ: ಸುದೀಪ್ ರೈ ತಂದೆ ದಾಮೋದರ ರೈ ಗಂಭೀರ ಆರೋಪ

Published

on

ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ರೈ ಅವರ ಸಾವಿಗೆ ಅವರ ಪತ್ನಿಯೇ ಕಾರಣ ಎಂದು ಸುದೀಪ್ ಅವರ ತಂದೆ ದಾಮೋದರ ರೈ ನೆಲ್ಯಾಡಿ ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯಾ ಶೆಟ್ಟಿ ಎಂಬಾಕೆ ನೀಡಿದ ಮಾನಸಿಕ ಕಿರುಕುಳವೇ ತನ್ನ ಮಗನ ಸಾವಿಗೆ ನೇರ ಕಾರಣವಾಗಿದ್ದು, ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಫೇಸ್‌ಬುಕ್ ಪರಿಚಯ, ರಿಜಿಸ್ಟರ್ ಮದುವೆ:
ದಾಮೋದರ ರೈ ಅವರು ಘಟನೆಯ ಹಿನ್ನೆಲೆಯನ್ನು ವಿವರಿಸುತ್ತಾ, “ನನ್ನ ಮಗ ಸುದೀಪ್ ರಿಯಲ್ ಎಸ್ಟೇಟ್ ಮತ್ತು ಸೋಲಾರ್ ಪ್ಯಾನಲ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಆತನಿಗೆ ಸೌಮ್ಯಾ ಶೆಟ್ಟಿ ಎಂಬಾಕೆಯ ಪರಿಚಯ ಫೇಸ್‌ಬುಕ್ ಮೂಲಕವಾಗಿತ್ತು. ಮದುವೆ ಪ್ರಸ್ತಾಪ ಬಂದಾಗ ನಾವು ಅವರ ಮನೆಗೆ ಹೋಗಿದ್ದೆವು ಮತ್ತು ಅವರು ನಮ್ಮ ಮನೆಗೆ ಬಂದಿದ್ದರು. ಫೆಬ್ರವರಿ 16ರಂದು ನಾವು ಅವರ ಮನೆಗೆ ಭೇಟಿ ನೀಡಿ ಬಂದ ಬಳಿಕ, ‘ಸದ್ಯಕ್ಕೆ ಮದುವೆ ಅರ್ಜೆಂಟ್ ಬೇಡ, ಯೋಚಿಸಿ ನಿರ್ಧಾರ ಮಾಡೋಣ’ ಎಂದು ಹೇಳಿದ್ದೆವು. ಆದರೆ ನಮಗೆ ತಿಳಿಯದಂತೆ ಮರುದಿನವೇ ಅಂದರೆ ಫೆಬ್ರವರಿ 17ರಂದು ಅವರಿಬ್ಬರು ಪುತ್ತೂರಿನ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂಬ ವಿಷಯ ಈಗ ತಿಳಿದುಬಂದಿದೆ,” ಎಂದು ತಿಳಿಸಿದರು.

ಸಾರ್ವಜನಿಕವಾಗಿ ಅವಮಾನ ಮತ್ತು ಕಿರುಕುಳ:
ಮದುವೆಯ ನಂತರ ಸುದೀಪ್ ಉಜಿರೆಯಲ್ಲಿರುವ ಮಾವನ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಮಾರ್ಚ್ 16ರಂದು ನೆಲ್ಯಾಡಿಗೆ ಬಂದಿದ್ದ ಸೌಮ್ಯಾ, ಸುದೀಪ್ ಮತ್ತು ಅವರ ಪೋಷಕರ ಎದುರೇ ರಂಪಾಟ ಮಾಡಿದ್ದಾಳೆ. “ಫೋನ್ ತೆಗೆದಿಲ್ಲ ಎಂಬ ಕಾರಣಕ್ಕೆ ನೆಲ್ಯಾಡಿ ಪೇಟೆಯಲ್ಲಿ ಎಲ್ಲರ ಎದುರೇ ಅಸಭ್ಯವಾಗಿ ಬೈದು ನಮಗೆ ತೀವ್ರ ಅವಮಾನ ಮಾಡಿದ್ದಾಳೆ. ಆನಂತರ ಸುದೀಪ್ ಆಕೆಯ ಜೊತೆಗೇ ಹೋಗಿದ್ದ,” ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.

ಸಾವಿನ ಬಗ್ಗೆ ಅನುಮಾನ:
ಸೌಮ್ಯಾ ಜೊತೆಗೆ ಹೋದ ಎರಡು ದಿನಗಳಲ್ಲೇ ಸುದೀಪ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಕಾರ್ಕಳದ ನಿಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಇದು ಡೆಂಗ್ಯೂ ಜ್ವರ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಾವಿನ ಹಿಂದೆ ಪತ್ನಿಯ ಕಿರುಕುಳ ಮತ್ತು ಸಂಚಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ನೆಲ್ಯಾಡಿಯ ಸುದೀಪ್ ರೈ ಸಾವಿನ ಪ್ರಕರಣವು ಈಗ ಹನಿಟ್ರಾಪ್ ಮತ್ತು ಸರಣಿ ಮದುವೆ ವಂಚನೆಯ ಆಯಾಮವನ್ನು ಪಡೆದುಕೊಂಡಿದೆ. ಆರೋಪಿ ಸೌಮ್ಯಾ ಶೆಟ್ಟಿ ಕೇವಲ ಸುದೀಪ್‌ಗೆ ಮಾತ್ರವಲ್ಲದೆ, ಈ ಹಿಂದೆ ಹಲವು ಪುರುಷರಿಗೆ ಮದುವೆಯ ಆಮಿಷವೊಡ್ಡಿ ವಂಚಿಸಿರುವ ಗಂಭೀರ ವಿಚಾರಗಳು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿವೆ.

ಹನಿಟ್ರಾಪ್ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆಯೇ?
ಸುದೀಪ್ ಅವರ ಪೋಷಕರು ಸೌಮ್ಯಾ ಶೆಟ್ಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, “ಆಕೆ ನಾಟಕ ತಂಡದಲ್ಲಿ ಕಲಾವಿದೆಯಾಗಿದ್ದು, ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಾಳೆ. ಹಣಕ್ಕಾಗಿ ಮದುವೆಯಾಗುವ ಭರವಸೆ ನೀಡಿ ಹಲವರನ್ನು ನಂಬಿಸಿ ಮೋಸ ಮಾಡಿದ್ದಾಳೆ. ಈಕೆಯ ಹಿಂದೆ ಹನಿಟ್ರಾಪ್ ಗ್ಯಾಂಗ್ ಇರುವ ಶಂಕೆ ಇದೆ,” ಎಂದು ಕಣ್ಣೀರು ಹಾಕಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಮತ್ತೊಬ್ಬ ಸಂತ್ರಸ್ತ ಕಲಾವಿದನ ಅಳಲು:
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಟಕ ಕಲಾವಿದ ಮೂಲ್ಕಿಯ ವೇಣುಗೋಪಾಲ ಶೆಟ್ಟಿ ಅವರು ಸೌಮ್ಯಾ ಶೆಟ್ಟಿಯಿಂದ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. “ಆಕೆ ನನ್ನನ್ನೂ ಮದುವೆಯಾಗುತ್ತೇನೆಂದು ಹೇಳಿ ವಿಚಿತ್ರವಾಗಿ ಹಿಂಸೆ ಕೊಟ್ಟಿದ್ದಾಳೆ. ಮದುವೆ ಫಿಕ್ಸ್ ಆಗಿದ್ದನ್ನು ನಾನು ಸ್ಟೇಟಸ್ ಹಾಕಿದಾಗ ಹಲವರು ಫೋನ್ ಮಾಡಿ ಆಕೆ ಸರಿಯಿಲ್ಲ ಎಂದು ಎಚ್ಚರಿಸಿದ್ದರು. ಸ್ವತಃ ಆಕೆಯ ಮನೆಯವರೇ ಆಕೆಯನ್ನು ಹೊರಗೆ ಹಾಕಿದ್ದರು,” ಎಂದು ತಿಳಿಸಿದರು.

ವೇಣುಗೋಪಾಲ ಶೆಟ್ಟಿ ಅವರು ಹೇಳುವಂತೆ, ಸೌಮ್ಯಾ ಈ ಹಿಂದೆ ಕನಿಷ್ಠ ಇಬ್ಬರನ್ನು ಮದುವೆಯಾಗಿ ವಂಚಿಸಿದ್ದಾಳೆ. “2024ರ ಡಿಸೆಂಬರ್ ಬಳಿಕ ಆಕೆಯ ಚರಿತ್ರೆ ತಿಳಿದು ನಾನು ಮದುವೆ ಪ್ರಸ್ತಾಪ ಕೈಬಿಟ್ಟಿದ್ದೆ. ಕೊನೆಗೆ ಆಕೆ ನನ್ನ ವಿರುದ್ಧವೇ ಪೊಲೀಸ್ ದೂರು ನೀಡಿದ್ದಳು. ಈಗ ಸುದೀಪ್ ರೈ ಅವರಂತಹ ಅಮಾಯಕ ಆಕೆಯ ಕಿರುಕುಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪುರುಷರಿಗೂ ಇರಲಿ ಸಾಂತ್ವನ ಕೇಂದ್ರ:
ಸೌಮ್ಯಾ ಶೆಟ್ಟಿಯ ವಂಚನಾ ಜಾಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವೇಣು ಶೆಟ್ಟಿ, ಕಾನೂನಿನ ದುರುಪಯೋಗದ ಬಗ್ಗೆ ಮಾತನಾಡಿದರು. “ಕಾನೂನು ಮಹಿಳೆಯರ ಪರವಾಗಿದೆ, ಅವರು ಸುಳ್ಳು ದೂರು ಕೊಟ್ಟರೂ ಪೊಲೀಸರು ನಮ್ಮನ್ನು ಎಳೆದೊಯ್ಯುತ್ತಾರೆ. ಆದರೆ ಅನ್ಯಾಯಕ್ಕೊಳಗಾದ ಪುರುಷರಿಗಾಗಿ ಯಾವುದೇ ಕಾನೂನಿಲ್ಲ. ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಸಾಂತ್ವನ ಕೇಂದ್ರಗಳು ಇರಬೇಕು. ಈ ರೀತಿ ಅನ್ಯಾಯಕ್ಕೊಳಗಾದ ನಮಗೆ ನ್ಯಾಯ ಕೊಡುವವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸ್ ತನಿಖೆಗೆ ಆಗ್ರಹ:
ಸೌಮ್ಯಾ ಶೆಟ್ಟಿ ಮದುವೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ಉದ್ದೇಶ ಹೊಂದಿದ್ದಳೇ? ಈಕೆಯ ಹಿಂದೆ ಯಾರಿದ್ದಾರೆ? ಮತ್ತು ಸುದೀಪ್ ರೈ ಸಾವಿನಲ್ಲಿ ಈಕೆಯ ಪಾತ್ರವೇನು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಮತ್ತು ಸಂತ್ರಸ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಸ್ನಾನಕ್ಕಿಳಿದ ಹೈದರಾಬಾದ್ ಮೂಲದ ತಂದೆ-ಮಗ ಸೇರಿ ಐವರು ನೀರುಪಾಲು!

Published

on

ರಾಯಚೂರು/ಮಂತ್ರಾಲಯ: ರಾಯಚೂರು ಜಿಲ್ಲೆಯ ಗಡಿಭಾಗದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಒಂದೇ ಕುಟುಂಬದ ಐವರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತರನ್ನು ಹೈದರಾಬಾದ್ ಮೂಲದ ಸತೀಶ್ (35) ಮತ್ತು ಅವರ 5 ವರ್ಷದ ಪುತ್ರ ಯುವನ ಚಂದ್ರ, ಮಂತ್ರಾಲಯ ಗ್ರಾಮದ ರಾಘವೇಂದ್ರ (25) ಹಾಗೂ ಧನುಷ್ (23) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸತ್ಯನಾರಾಯಣ ಪೂಜೆಗೆ ಬಂದಿದ್ದಾಗ ದುರಂತ: ಪೊಲೀಸ್ ಮೂಲಗಳ ಪ್ರಕಾರ, ಸುಮಾರು 10 ಜನರಿದ್ದ ಸಂಬಂಧಿಕರ ಗುಂಪೊಂದು ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಕೌಟುಂಬಿಕ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಬಂದಿತ್ತು. ಪೂಜೆಯ ಬಳಿಕ ನದಿಯ ದಂಡೆಗೆ ತೆರಳಿದ್ದ ಇವರಲ್ಲಿ ಆರು ಜನರು ತುಂಗಭದ್ರಾ ನದಿಗೆ ಈಜಲು ಮತ್ತು ಸ್ನಾನ ಮಾಡಲು ಇಳಿದಿದ್ದಾರೆ. ಆದರೆ, ನೀರಿನ ಆಳದ ಅಂದಾಜು ಸಿಗದೆ ತೀವ್ರ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ನದಿ ದಂಡೆಯಲ್ಲಿದ್ದ ಇತರ ಸಂಬಂಧಿಕರು ತಕ್ಷಣವೇ ಕೂಗಾಡಲು ಆರಂಭಿಸಿದಾಗ, ಸ್ಥಳೀಯ ಮೀನುಗಾರರು ಮತ್ತು ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ತಂದೆ ಸತೀಶ್ ಹಾಗೂ ಮಗ ಯುವನ ಚಂದ್ರ ಸೇರಿದಂತೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡದ (SDRF) ಸಹಾಯದೊಂದಿಗೆ ತೀವ್ರ ಶೋಕ ಕಾರ್ಯ ಮುಂದುವರಿದಿದೆ.

ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ನದಿಯಲ್ಲಿ ನೀರುಪಾಲಾದವರ ಹುಡುಕಾಟ ವೇಳೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

ಪವಿತ್ರ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಹಾಗೂ ಪೂಜೆ ಮುಗಿಸಿದ ತಕ್ಷಣವೇ ಇಡೀ ಕುಟುಂಬ ದುರಂತಕ್ಕೀಡಾಗಿರುವುದು ಸ್ಥಳದಲ್ಲಿ ಜಮಾಯಿಸಿರುವ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ




Continue Reading

DEATH

ವಿದ್ಯುತ್ ಶಾಕ್ ತಗುಲಿ ಯುವಕ ದಾರುಣ ಸಾವು

Published

on

ಪುತ್ತೂರು: ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರಜೆಯ ನಿಮಿತ್ತ ಊರಿಗೆ ಬಂದಿದ್ದ ಯುವಕನೊಬ್ಬ ವಿದ್ಯುತ್ ಶಾಕ್ ತಗುಲಿ ದಾರುಣವಾಗಿ ಮೃತಪಟ್ಟ ಘಟನೆ ನಿಡ್ಪಳ್ಳಿ ಗ್ರಾಮದ ಬೋಳುಂಬುಡೆಯಲ್ಲಿ ಮೇ 24ರಂದು ರಾತ್ರಿ ಸಂಭವಿಸಿದೆ.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಕಿಹಳ್ಳಿ ನಿವಾಸಿ ಜೋಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29 ವರ್ಷ) ಮೃತಪಟ್ಟ ದುರ್ದೈವಿ.

ರೋಶನ್ ಪಿಂಟೋ ಅವರು ತಮ್ಮ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ನಿಡ್ಪಳ್ಳಿಯಲ್ಲಿರುವ ಮಾವನ ಮನೆಗೆ ಬಂದಿದ್ದರು. ಮೇ 24ರಂದು ರಾತ್ರಿ ಸ್ನಾನ ಮುಗಿಸಿದ ರೋಶನ್, ಬಟ್ಟೆ ಒಗೆಯುವ ಜಾಗಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಆಕಸ್ಮಿಕವಾಗಿ ಲೈವ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಜೋರಾಗಿ ಶಾಕ್ ಹೊಡೆದು ನೆಲಕ್ಕೆ ಬಿದ್ದಿದ್ದಾರೆ.

ತಕ್ಷಣವೇ ಮನೆಯವರು ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ರೋಶನ್ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Continue Reading

accident

ಮಾಣಿ: ಮೀನಿನ ಲಾರಿ–ಸ್ಕೂಟಿ ಭೀಕರ ಅಪಘಾತ; ಪುತ್ತೂರಿನ ಖಲಂದರ್ ಶಾ ದುರ್ಮರಣ

Published

on

ಮಾಣಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಮೇ 25 ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರರೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಸುಳ್ಯ ಗಾಂಧಿನಗರದ ಮೋಹಿದೀನ್ ಎಂಬವರ ಪುತ್ರ ಖಲಂದರ್ ಶಾ (ಖಲಂದರ್) ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ವರ್ಷಗಳಿಂದ ಪುತ್ತೂರಿನಲ್ಲಿ ವಾಸವಾಗಿದ್ದರು.

ಘಟನೆಯ ವಿವರ:

ಮುಖಾಮುಖಿ ಢಿಕ್ಕಿ: ಖಲಂದರ್ ಶಾ ಅವರು ತಮ್ಮ ಹೋಂಡಾ ಡಿಯೋ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದಾಗ, ಮಾಣಿ ಜಂಕ್ಷನ್ ಸಮೀಪ ವೇಗವಾಗಿ ಬಂದ ಮೀನಿನ ಲಾರಿಯೊಂದು ಮುಖಾಮುಖಿ ಢಿಕ್ಕಿ ಹೊಡೆದಿದೆ.

ತೀವ್ರ ರಕ್ತಸ್ರಾವ: ಢಿಕ್ಕಿಯ ಭೀಕರತೆಗೆ ಸ್ಕೂಟಿ ಸವಾರ ರಸ್ತೆಗೆ ಬಿದ್ದು ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಆಸ್ಪತ್ರೆಗೆ ಸಾಗಿಸುವಾಗ ಸಾವು:

ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದರು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಅವರು ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ.

ಸ್ಥಳಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅವರು ಮೂಲತಃ ಸುಳ್ಯ ನಿವಾಸಿಯಾಗಿದ್ದು, ಪ್ರಸ್ತುತ ಪುತ್ತೂರಿನ ಕಲ್ಲರ್ಪೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮಂಗಳೂರು ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.





Continue Reading

Trending

Copyright © 2025 Deevatige

error: Content is protected !!