Connect with us

crime

ತಟ್ಟೆ ಹಣಕ್ಕಾಗಿ ಭಕ್ತರ ಮುಂದೆಯೇ ಕಿತ್ತಾಟ ನಡೆಸಿದ ಮಹಾ ಅರ್ಚಕರು ; ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಘಟನೆ; ವೈರಲ್ ಆದ ವಿಡಿಯೋ‌

Published

on

ಹೊನ್ನಾವರ: ರಾಜ್ಯದ ಪ್ರಸಿದ್ಧ ಹಾಗೂ ಪವಿತ್ರ ಧಾರ್ಮಿಕ ಕೇಂದ್ರಗಳಲ್ಲೊಂದಾದ ಹೊನ್ನಾವರ ತಾಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ದೇವರಿಗೆ ಭಕ್ತರು ಅರ್ಪಿಸಿದ ತಟ್ಟೆ ಹಣಕ್ಕಾಗಿ ಅರ್ಚಕರಿಬ್ಬರು ಕಾಣಿಕೆ ಹಣವನ್ನು ಭಕ್ತರ ಮುಂದೆಯೇ ಎಳೆದಾಡಿಕೊಂಡ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಮಹಾ ಅರ್ಚಕರ ಹಣದಾಹಿ ಮನಸ್ಸು ಬಯಲಾಗಿದೆ. ದೇವಾಲಯ ಎಂದರೆ ಶಾಂತಿ, ಭಕ್ತಿ ಮತ್ತು ಶ್ರದ್ಧೆಯ ಪ್ರತೀಕ. ಆದರೆ, ಇಡಗುಂಜಿಯಲ್ಲಿ ನಡೆದ ಈ ಅಸಹ್ಯ ಘಟನೆ ದೇವಾಲಯದ ಘನತೆಗೆ ಕಳಂಕ ತಂದಿದ್ದು, ಭಕ್ತರಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ಮೂಡಿಸಿದೆ.
ನರಸಿಂಹ ಭಟ್ vs ರಮಾನಂದ ಭಟ್ ಕಾಣಿಕೆ ಹಣಕ್ಕಾಗಿ ಪರಸ್ಪರ ವಾಗ್ವಾದ ಮತ್ತು ತಳ್ಳಾಟ ನಡೆಸಿಕೊಂಡು ಎಳೆದಾಡಿಕೊಳ್ಳುತ್ತಿರುವ ಸೆರೆಯಾದ ದೃಶ್ಯ

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಾಗೂ ಟೀಕೆ ಆರಂಭವಾಗಿದೆ.. ಕೆಲವರು ಇಡೀ ಅರ್ಚಕ ವೃತ್ತಿಯನ್ನೇ ಟೀಕಿಸುವ ಪ್ರಯತ್ನ ನಡೆಸುತ್ತಿರುವುದರಿಂದ, ಬ್ರಾಹ್ಮಣ ಸಮುದಾಯ ಮತ್ತು ಅರ್ಚಕರ ವೃತ್ತಿಗೆ ಅಪಮಾನವಾಗುತ್ತಿದೆ ಎಂಬ ಬೇಸರವೂ ವ್ಯಕ್ತವಾಗಿದೆ.

ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ಹಾಗೂ ರಮಾನಂದ ಭಟ್ ನಡುವೆ ಈ ವಿವಾದ ನಡೆದಿದೆ. ಪೂಜೆ ಸಂದರ್ಭದಲ್ಲಿ ಭಕ್ತರು ತಟ್ಟೆಯಲ್ಲಿ ಹಾಕಿದ ಹಣದ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಆರಂಭವಾಗಿ, ಕ್ಷಣಾರ್ಧದಲ್ಲಿ ಅದು ತೀವ್ರ ನೂಕಾಟ-ತಳ್ಳಾಟಕ್ಕೆ ತಿರುಗಿದೆ. ಪರಸ್ಪರ ಕೈ ಹಿಡಿದು ತಳ್ಳಾಡುವ ದೃಶ್ಯಗಳು ದೇವಸ್ಥಾನದಲ್ಲಿದ್ದ ಭಕ್ತರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆಯ ವೇಳೆ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರು ಒಂದು ಕ್ಷಣ ದಂಗಾಗಿ ನಿಂತುಬಿಟ್ಟಿದ್ದಾರೆ. ದೈವ ಸನ್ನಿಧಿಯಲ್ಲಿ ಇಂತಹ ಅಸಭ್ಯ ವರ್ತನೆ ನಡೆಯುವುದನ್ನು ಯಾರೂ ಊಹಿಸಿರಲಿಲ್ಲ. ಕೆಲವರು ಮಧ್ಯ ಪ್ರವೇಶಿಸಿ ಜಗಳವನ್ನು ಶಮನಗೊಳಿಸಲು ಯತ್ನಿಸಿದರೂ, ಪರಿಸ್ಥಿತಿ ಕೆಲಕಾಲ ಉದ್ವಿಗ್ನವಾಗಿಯೇ ಮುಂದುವರಿದಿದೆ. ಇಡಗುಂಜಿ ದೇವಸ್ಥಾನದ ಪೂಜಾ ಹಕ್ಕು, ಆಡಳಿತ ಹಾಗೂ ಹಣಕಾಸು ನಿರ್ವಹಣೆ ಕುರಿತಾಗಿ ಈ ಕುಟುಂಬದ ಸದಸ್ಯರ ನಡುವೆ ಬಹುಕಾಲದಿಂದಲೇ ಸಂಘರ್ಷ ನಡೆಯುತ್ತಿದೆ. ಈ ವಿವಾದ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾನೂನು ಹೋರಾಟ ಮುಂದುವರಿದಿದೆ.

ಘಟನೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಪೊಲೀಸರು ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ದೇವಸ್ಥಾನದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Continue Reading
Advertisement

crime

ಕಂಟೇನರ್‌ನಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ 18ಕ್ಕೂ ಹೆಚ್ಚು ಗೋವುಗಳ ರಕ್ಷಣೆ; ಕಡಬ ಪೊಲೀಸರ ಮಿಂಚಿನ ಕಾರ್ಯಾಚರಣೆ

Published

on

ಕಡಬ: ಹಾಸನ ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಕಡಬ ಪೊಲೀಸರು ಭೇದಿಸಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಂಟೇನರ್ ಲಾರಿಯಲ್ಲಿ ಅತೀ ಕ್ರೂರವಾಗಿ ತುಂಬಿದ್ದ 18ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಹಾಸನ ಮಾರ್ಗವಾಗಿ ಕೇರಳಕ್ಕೆ ಕಂಟೇನರ್ ಲಾರಿಯೊಂದರಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು, ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲದ ಕಣ್ಣಾರೆ ಎಂಬಲ್ಲಿ ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದರು. ಈ ವೇಳೆ ಕಂಟೇನರ್ ಒಳಗೆ ಗೋವುಗಳನ್ನು ಅತೀ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಕಂಡುಬಂದಿದೆ.

ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯ ವೇಳೆ ಹೊಸೂರು ಮೂಲದ ಅಕ್ರಮ್ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಾರಿಯಲ್ಲಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪೊಲೀಸರು ಅಕ್ರಮ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡ ಗೋವುಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Continue Reading

Bantawala

ಕಬಕ: ಅಕ್ರಮ ಕೇರಳ ಲಾಟರಿ ಮಾರಾಟ ಜಾಲಕ್ಕೆ ಪೊಲೀಸರ ಲಗ್ಗೆ – ಮಂಗಳೂರು ತಂಡದಿಂದ ಮಿಂಚಿನ ದಾಳಿ

Published

on

ಪುತ್ತೂರು: ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿತವಾಗಿರುವ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರ ವಿಶೇಷ ತಂಡ ಭೇದಿಸಿದೆ. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಜಂಕ್ಷನ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಪಾನ್ ಬೀಡಾ ಅಂಗಡಿಯ ಮೇಲೆ ದಾಳಿ ನಡೆಸಿದ ಪೊಲೀಸರು, ಮಾಲೀಕ ಸೇರಿದಂತೆ ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.

ಕಬಕ ಜಂಕ್ಷನ್‌ನಲ್ಲಿರುವ ಪಾನ್ ಬೀಡಾ ಅಂಗಡಿಯೊಂದರಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ, ಗುಪ್ತವಾಗಿ ಕೇರಳ ಲಾಟರಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಗಡಿ ಭಾಗಗಳಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮಂಗಳೂರಿನಿಂದ ಆಗಮಿಸಿದ ವಿಶೇಷ ತಂಡವು ಕಾರ್ಯಾಚರಣೆ ರೂಪಿಸಿತ್ತು.

ಕಾರ್ಯಾಚರಣೆ ನಡೆದ ರೀತಿ:
ನಿಗಾ ಇರಿಸಿದ ತಂಡ: ಮಂಗಳೂರಿನಿಂದ ಬಂದ ವಿಶೇಷ ತಂಡದ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಮಾನ್ಯ ನಾಗರಿಕರಂತೆ ಪಾನ್ ಬೀಡಾ ಅಂಗಡಿಯ ಮಾಲೀಕನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ಯುವಕರು ಲಾಟರಿ ಖರೀದಿಸಲು ಬಂದಾಗ, ಪೊಲೀಸರು ಹಠಾತ್ ದಾಳಿ ನಡೆಸಿ ಲಾಟರಿ ಟಿಕೆಟ್‌ಗಳ ಸಮೇತ ಮಾಲೀಕ ಮತ್ತು ಗ್ರಾಹಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ಕಬಕ ವಿದ್ಯಾಪುರ ನಿವಾಸಿ ಜಗದೀಶ ಯಾನೆ ಜಗ್ಗ ಎಂದು ಗುರುತಿಸಲಾಗಿದೆ. ಈತ ತನ್ನ ಅಂಗಡಿಯಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಸ್ಥಳೀಯರು ಹಿರಿಯ ಅಧಿಕಾರಿಗಳಿಗೆ ನೀಡಿದ ದೂರು ಕಾರ್ಯಾಚರಣೆಗೆ ಪ್ರಮುಖ ಕಾರಣವಾಗಿದೆ.

ಕಾನೂನು ಕ್ರಮ ಮತ್ತು ತನಿಖೆ:
ದಾಳಿಯ ವೇಳೆ ಅಂಗಡಿಯಲ್ಲಿದ್ದ ಅಕ್ರಮ ಕೇರಳ ಲಾಟರಿ ಟಿಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಲಾಟರಿ ಮಾರಾಟ ಮಾಡುವುದು ಕಾನೂನುಬಾಹಿರ. ಗಡಿ ಭಾಗದ ಮೂಲಕ ಅಕ್ರಮವಾಗಿ ಲಾಟರಿ ತಂದು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿಗಳು ಅಥವಾ ದೊಡ್ಡ ವಿತರಕರು ಇದ್ದಾರೆಯೇ ಎಂಬ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯು ಗಡಿ ಭಾಗದ ಅಕ್ರಮ ದಂಧೆಕೋರರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

Continue Reading

crime

ದೈವಕ್ಕೆ ಅವಮಾನ: ಎಮ್ಮೆಮಾಡು ಜಮಾಅತ್‌ನಿಂದ ತಪ್ಪಿತಸ್ಥರಿಗೆ ಎಚ್ಚರಿಕೆ ಹಾಗೂ ಕ್ಷಮಾಪಣೆ

Published

on

ಮಡಿಕೇರಿ: ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭವೊಂದರಲ್ಲಿ ಸ್ಥಳೀಯ ದೈವವೊಂದಕ್ಕೆ ಅವಮಾನ ಮಾಡಿದ ಘಟನೆ ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಎಮ್ಮೆಮಾಡುವಿನ ತಾಜೂಲ್ ಇಸ್ಲಾಂ ಮುಸ್ಲಿಂ ಜಮಾಅತ್, ಘಟನೆಯಲ್ಲಿ ಭಾಗಿಯಾದವರಿಗೆ ಕಠಿಣ ಎಚ್ಚರಿಕೆ ನೀಡಿದೆ.

ಘಟನೆಯ ಹಿನ್ನೆಲೆ ಮತ್ತು ಜಮಾಅತ್ ಕ್ರಮ

ಮದುವೆ ಸಮಾರಂಭ ಮುಗಿದ ನಂತರ ಕೆಲವು ಯುವಕರು ದೈವದ ಆಚರಣೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಎಮ್ಮೆಮಾಡು ಜಮಾಅತ್ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು. ಈ ಕುರಿತು ಪ್ರಧಾನ ಕಾರ್ಯದರ್ಶಿ ಸೈಯದ್ ಝಕರಿಯ ಸಅದಿ ಅಲ್ ಐದರೂಸಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ:

ಸಭೆಯ ಬಳಿಕ ಜಮಾಅತ್ ಪ್ರಧಾನ ಕಾರ್ಯದರ್ಶಿ ಸೈಯದ್ ಝಕರಿಯ ಸಅದಿ ಅಲ್ ಐದರೂಸಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ “ಮದುವೆ ಸಮಾರಂಭ ಮುಗಿದ ಬಳಿಕ ಸ್ನೇಹಿತರೆಲ್ಲರೂ ಒಗ್ಗೂಡಿದಾಗ ಕೇವಲ ತಮಾಷೆಗಾಗಿ ಈ ರೀತಿ ವರ್ತಿಸಿದ್ದೇವೆ ಎಂದು ಯುವಕರು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಯಾವುದೇ ಜಾತಿ, ಧರ್ಮ ಅಥವಾ ಧಾರ್ಮಿಕ ಆಚರಣೆಗಳನ್ನು ನಿಂದಿಸುವ ಉದ್ದೇಶ ತಮಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ನಡವಳಿಕೆಯಿಂದ ತಪ್ಪಾಗಿರುವುದನ್ನು ಅರಿತ ಯುವಕರು ಜಮಾಅತ್ ಮುಂದೆ ಸಭೆಯಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಇದರಿಂದ ಯಾರ ಮನಸ್ಸಾದರೂ ನೊಂದಿದ್ದರೆ ಅವರೆಲ್ಲರಲ್ಲೂ ಯುವಕರು ಕ್ಷಮೆಯನ್ನ ಕೋರಿದ್ದಾರೆ. ಎಂದು ತಿಳಿಸಿದ್ದು, ಯುವಕರು ಈಗಾಗಲೇ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿರುವುದರಿಂದ, ಸಾರ್ವಜನಿಕರು ಕೂಡ ಅವರಿಗೆ ಕ್ಷಮೆಯನ್ನು ನೀಡಿ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕೆಂದು ಸೈಯದ್ ಝಕರಿಯ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಜಮಾಅತ್ ನೀಡಿದ ಕಠಿಣ ಎಚ್ಚರಿಕೆ

ಈ ಪ್ರಕರಣವನ್ನು ಇಲ್ಲಿಗೆ ಅಂತ್ಯಗೊಳಿಸದ ಜಮಾಅತ್ ಮಂಡಳಿಯು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

“ಯಾವುದೇ ಧರ್ಮ ಅಥವಾ ದೈವದ ಬಗ್ಗೆ ಅವಹೇಳನ ಮಾಡುವುದು ಜಮಾಅತ್‌ನ ಆಶಯಕ್ಕೆ ವಿರುದ್ಧವಾಗಿದೆ. ಇನ್ನು ಮುಂದೆ ಎಮ್ಮೆಮಾಡು ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ನಡೆದರೆ, ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಜಮಾಅತ್ ನಿಯಮಾವಳಿಗಳ ಪ್ರಕಾರ ಕಠಿಣ ನಿಯಮಗಳನ್ನು ಎದುರಿಸಬೇಕಾಗುತ್ತದೆ.”

ಸೈಯದ್ ಝಕರಿಯ ಸಅದಿ ಅಲ್ ಐದರೂಸಿ,

ಪ್ರಧಾನ ಕಾರ್ಯದರ್ಶಿ.

ಕೋಮು ಸೌಹಾರ್ದತೆಗೆ ಆದ್ಯತೆ

ಜಿಲ್ಲೆಯಲ್ಲಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಜಮಾಅತ್ ತೆಗೆದುಕೊಂಡ ಈ ತ್ವರಿತ ನಿರ್ಧಾರವು ಮಹತ್ವದ್ದಾಗಿದೆ. ಈ ಮಹತ್ವದ ಸಭೆಯಲ್ಲಿ ಜಮಾಅತ್ ಅಧ್ಯಕ್ಷರಾದ ಹುಸೈನ್ ಸಖಾಫಿ, ಸಹ ಕಾರ್ಯದರ್ಶಿ ಹನೀಫಾ ಸೇರಿದಂತೆ ಜಮಾಅತ್‌ನ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು., ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವಂತೆ ಸಮುದಾಯದ ಯುವಕರಿಗೆ ಕರೆ ನೀಡಿದರು.

Continue Reading

Trending

Copyright © 2025 Deevatige