Connect with us

accident

ಶಿವಮೊಗ್ಗ ಬಳಿ ಖಾಸಗಿ ಸ್ಲೀಪರ್ ಕೋಚ್ ಬಸ್ ಬೆಂಕಿಗಾಹುತಿ..ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ..

Published

on

ಶಿವಮೊಗ್ಗ ಸಮೀಪ ಖಾಸಗಿ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಮಂಗಳವಾರ ತಡರಾತ್ರಿ ರಿಪ್ಪನ್‌ಪೇಟೆಯಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸಿನಲ್ಲಿ ದುರಂತ ಸಂಭವಿಸಿದೆ. ಸೂಡುರು ಗ್ರಾಮದ 9ನೇ ಮೈಲುಗಲ್ಲಿನ ಬಳಿ ಬಸ್ ಸಂಚರಿಸುತ್ತಿದ್ದಂತೆ ಇಂಜಿನ್‌ನಲ್ಲಿ ದಿಢೀರನೆ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬಸ್ಸನ್ನೇ ಆವರಿಸಿಕೊಂಡಿದೆ.
ಬಸ್ಸಿನಲ್ಲಿ ಚಾಲಕ ಸೇರಿದಂತೆ ಒಟ್ಟು 40 ಪ್ರಯಾಣಿಕರಿದ್ದರೂ ಚಾಲಕನ ಸಮಯಪ್ರಜ್ಞೆಯಿಂದ ಅದೃಷ್ಟವಶಾತ್ ಪ್ರಯಾಣಿಕರು ಬಚಾವಾಗಿದ್ದಾರೆ.
ಪ್ರಯಾಣಿಕರೆಲ್ಲರನ್ನೂ ತಕ್ಷಣವೇ ಕೆಳಗಿಳಿಸಿದ ಕಾರಣ ಭಾರಿ ಪ್ರಾಣಾಪಾಯ ತಪ್ಪಿದಂತಾಗಿದೆ.

ಘಟನೆಯಲ್ಲಿ ಸುಮಾರು 7 ರಿಂದ 8 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ತಕ್ಷಣವೇ ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಘಟನಾಸ್ಥಳಕ್ಕೆ ರಿಪ್ಪನ್ ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಸಜಿಪದಲ್ಲಿ ಭೀಕರ ರಸ್ತೆ ಅಪಘಾತ: ಸಾಮಾಜಿಕ ಕಾರ್ಯಕರ್ತ, ಯುವ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

Published

on

ಬಂಟ್ವಾಳ: ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಇಂದು ಸಂಜೆ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸಜಿಪ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಹಮದ್ ಆಸೀರ್ (22) ಮೃತಪಟ್ಟ ದುರ್ದೈವಿ ಆಕ್ಟಿವಾ ಸವಾರರಾಗಿದ್ದಾರೆ.

ಘಟನೆಯ ವಿವರ:

ಅಹಮದ್ ಆಸೀರ್ ಅವರು ಇಂದು ಸಂಜೆ ತನ್ನ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಸಜಿಪ ಬೇಂಕೆ ಎಂಬ ಪ್ರದೇಶಕ್ಕೆ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮಾರುತಿ ಕಾರು ಇವರ ದ್ವಿಚಕ್ರ ವಾಹನಕ್ಕೆ ನೇರವಾಗಿ ಮತ್ತು ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಆಕ್ಟಿವಾ ವಾಹನವು ಗುರುತು ಸಿಗದಷ್ಟು ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ತಕ್ಷಣವೇ ತಲೆ ಮತ್ತು ದೇಹಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಆಸೀರ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಂಬನಿ ಮಿಡಿದ ಸಜಿಪ ಪರಿಸರದ ಜನತೆ:

ಮೃತ ಅಹಮದ್ ಆಸೀರ್ ಅವರು ಸಣ್ಣ ವಯಸ್ಸಿನಲ್ಲೇ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು SKSSF ಸಜೀಪನಡು ಶಾಖೆಯ ಸಕ್ರಿಯ ಸದಸ್ಯರಾಗಿದ್ದರಲ್ಲದೆ, ತುರ್ತು ಮತ್ತು ಆಪತ್ಕಾಲೀನ ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸುವ ಹೆಸರಾಂತ “ವಿಖಾಯ ACTIVE WING” ತಂಡದ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಸದಾ ಪರರ ಸೇವೆಗೆ ಸಿದ್ಧರಿರುತ್ತಿದ್ದ ಎಳೆಯ ಪ್ರಾಯದ ಯುವಕನ ಅಕಾಲಿಕ ಮರಣದ ಸುದ್ದಿ ಸಜಿಪ ಸುತ್ತಮುತ್ತಲಿನ ನಾಗರಿಕರಲ್ಲಿ ಮತ್ತು ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ.

ಪೊಲೀಸ್ ತನಿಖೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.




Continue Reading

accident

ಕನ್ಯಾನ: ಬಾಕ್ಸೈಟ್ ಗಣಿಗಾರಿಕೆ ಸ್ಥಳದಲ್ಲಿ ಭೀಕರ ದುರಂತ; ಟಿಪ್ಪರ್ ಲಾರಿ ಚಲಿಸಿ ಚಾಲಕ ಸ್ಥಳದಲ್ಲೇ ಸಾವು

Published

on

ವಿಟ್ಲ: ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಟಿಪ್ಪರ್ ಲಾರಿಯ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಧರ್ಮಸ್ಥಳ ಪರಿಸರದ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಅಕ್ರಮ ಎನ್ನಲಾದ ಬಾಕ್ಸೈಟ್ ದಂಧೆ ನಡೆಯುವ ಸ್ಥಳಕ್ಕೆ ತೆರಳಿದ್ದ ಲಾರಿಯಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಚಾಲಕ ಮಹೇಶ್ ಅವರು ಲಾರಿಯ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಲಾರಿ ಮುನ್ನಡೆದಿದ್ದರಿಂದ, ಅವರು ಲಾರಿಯ ಚಕ್ರಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸಾರ್ವಜನಿಕರ ಆಕ್ರೋಶ: ಪ್ರದೇಶದಲ್ಲಿ ರಾಜಕೀಯ ನಾಯಕರು ಪಕ್ಷಬೇಧ ಮರೆತು ನಡೆಸುತ್ತಿದ್ದಾರೆ ಎನ್ನಲಾದ ಈ ಬಾಕ್ಸೈಟ್ ದಂಧೆಯ ವಿರುದ್ಧ ಸ್ಥಳೀಯ ನಾಗರಿಕರು ನಿರಂತರವಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ಬಾಕ್ಸೈಟ್ ಲಾರಿಗಳ ಅಟ್ಟಹಾಸ ಹಾಗೂ ದಬ್ಬಾಳಿಕೆಯಿಂದಾಗಿ ವಿಟ್ಲ ಸೇರಿದಂತೆ ಸುತ್ತಮುತ್ತಲಿನ ವಾಹನ ಚಾಲಕರು ಮತ್ತು ಸಾರ್ವಜನಿಕರು ತೀವ್ರ ಹೈರಾಣಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಈ ದಂಧೆಯು, ಇಂದು ಸ್ವತಃ ತನ್ನದೇ ಲಾರಿಯ ಚಾಲಕನ ಬಲಿ ಪಡೆದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ





Continue Reading

accident

ದಾಬಸ್‌ಪೇಟೆ ಬಳಿ ಭೀಕರ ಅಪಘಾತ: ಲಾರಿ ಡಿಕ್ಕಿಗೆ ಕಾರು ಸಂಪೂರ್ಣ ನಜ್ಜುಗುಜ್ಜು, ಸಿದ್ದೀಕ್ ಸೂರ್ಯ ಸೇರಿ ಮೂವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರು!

Published

on

ದಾಬಸ್‌ಪೇಟೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-48ರ ದಾಬಸ್‌ಪೇಟೆ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ, ನಿಯಂತ್ರಣ ತಪ್ಪಿದ ಕಾರು ಪಾದಾಚಾರಿಯೊಬ್ಬರಿಗೆ ಗುದ್ದಿದೆ. ಈ ಘಟನೆಯಲ್ಲಿ ಒಟ್ಟು ಮೂವರು ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂವರು ಅದೃಷ್ಟವಶಾತ್ ಪಾರು: ಅಪಘಾತಕ್ಕೊಳಗಾದ ಕಾರಿನಲ್ಲಿ ರಾಜೀವ್ ಗಾಂಧಿ ಯಾತ್ರಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸಿದ್ದೀಕ್ ಸೂರ್ಯ ಸೇರಿದಂತೆ ಕೇವಲ ಇಬ್ಬರು ಪ್ರಯಾಣಿಸುತ್ತಿದ್ದರು. ಲಾರಿ ಡಿಕ್ಕಿ ಹೊಡೆದ ತಕ್ಷಣ ಕಾರಿನ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ತೆರೆದುಕೊಂಡಿದ್ದರಿಂದ ಹಾಗೂ ಕಾರಿನಲ್ಲಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿದ್ದರಿಂದ ಭೀಕರ ಅಪಘಾತದಲ್ಲೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಹಾಗೂ ಪಾದಾಚಾರಿ ಗಿರೀಶ್ ಸೇರಿದಂತೆ ಒಟ್ಟು ಮೂವರು ಈ ಭೀಕರ ಘಟನೆಯಲ್ಲಿ ಪ್ರಾಣಾಪಾಯದಿಂದ ಮುಕ್ತರಾಗಿದ್ದಾರೆ.

ಘಟನೆಯ ವಿವರ: ದಿನಾಂಕ 17/06/2026ರ ಬುಧವಾರ ಮಧ್ಯಾಹ್ನ ಸುಮಾರು 12:00 ಗಂಟೆಯ ವೇಳೆಗೆ ದಾಬಸ್‌ಪೇಟೆಯ ಕೆ.ಐ.ಎ.ಡಿ.ಬಿ (KIADB) ಕೈಗಾರಿಕಾ ಪ್ರದೇಶದ 4ನೇ ಹಂತದ ಮಣಿಪಾಲ್ ಕಂಪನಿ ರಸ್ತೆಯ ತಿರುವಿನ ಬಳಿ ಈ ಘಟನೆ ನಡೆದಿದೆ. ಹೊನ್ನೇನಹಳ್ಳಿ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಲಾರಿ (ನೊಂದಣಿ ಸಂಖ್ಯೆ: KA 01 AT 8889) ಚಾಲಕ, ಮುಂಭಾಗದಿಂದ ಬರುತ್ತಿದ್ದ ಮಾರುತಿ ಸುಜುಕಿ ಡಿಸೈರ್ ಕಾರಿಗೆ (ನೊಂದಣಿ ಸಂಖ್ಯೆ: KA 19 MJ 4018) ಜೋರಾಗಿ ಡಿಕ್ಕಿ ಹೊಡೆದಿದ್ದಾನೆ.

ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ಕಾರು ನಿಯಂತ್ರಣ ತಪ್ಪಿ, ಅದೇ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ, ಸ್ಥಳೀಯ ಕೈಗಾರಿಕಾ ಪ್ರದೇಶದ ಕೂಲಿ ಕಾರ್ಮಿಕರಾದ ಗಿರೀಶ್ (54 ವರ್ಷ) ಅವರಿಗೆ ಬಲವಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಗಿರೀಶ್ ಅವರು ರಸ್ತೆಗೆ ಬಿದ್ದು ತಲೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಲ್ಲದೆ ಅಪಘಾತದ ತೀವ್ರತೆಗೆ ಕಾರು ರಸ್ತೆ ಪಕ್ಕದ ಡಿವೈಡರ್ ಮೇಲೇರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದ ಭೀಕರ ಶಬ್ದ ಕೇಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ದಾಬಸ್‌ಪೇಟೆಯ ‘ಮೆಡಿಟ್ರೀಟ್ ಆಸ್ಪತ್ರೆ’ಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಲಾರಿ ಚಾಲಕನು ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸ್ ದೂರು ದಾಖಲು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾದಾಚಾರಿ ಗಿರೀಶ್ ಅವರು ನೀಡಿದ ಹೇಳಿಕೆಯ ಮೇರೆಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಅಪರಾಧ ಸಂಖ್ಯೆ: 114/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 125(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ದಾಬಸ್‌ಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಖಂಗೊಂಡಿದ್ದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಲಾರಿ ಚಾಲಕನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ಸಿದ್ದಾರೆ.





Continue Reading

Trending

Copyright © 2025 Deevatige

error: Content is protected !!