Connect with us

Bantawala

ಕೋಳಿ ಅಂಕ ಜೂಜಾಟಕ್ಕೆ ವಿಟ್ಲ ಪೊಲೀಸರ ದಾಳಿ ; 8 ಕೋಳಿಗಳ ಸಹಿತ 4 ಜನರ ಬಂಧನ ; ಪ್ರಕರಣ ದಾಖಲು

Published

on

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗ್ರಾಮ ಪಂ.ಸದಸ್ಯನ ನೆರಳಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ನಗದು ಹಣ, ಕೋಳಿಗಳು ಹಾಗೂ ಕೋಳಿ ಬಾಳುಗಳ ವಶಕ್ಕೆ ಪಡೆದಿದ್ದಾರೆ.

ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ರವರು ಇಂದು ಮಧ್ಯಾಹ್ನ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಎಲ್ಯಣ್ಣ ಪೂಜಾರಿಯವರ ತೋಟದ ಬಳಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ತಕ್ಷಣವೇ ಸ್ಥಳಕ್ಕೆ ದಾಳಿ ನಡೆಸಿದಾಗ ಕೋಳಿ ಅಂಕ ಜೂಜಾಟ ನಡೆಯುತ್ತಿರುವುದು ಕಂಡುಬಂದಿದ್ದು ಪೊಲೀಸರು ಬಂದಿರುವುದನ್ನು ಕಂಡು ಸ್ಥಳದಲ್ಲಿದ್ದ ಕೆಲವು ಜೂಜುಕೋರರು ಓಡಿ ಹೋಗಿದ್ದರೂ ಮಹೇಶ್, ಬಾಬು, ಆನಂದ ಹಾಗೂ ಅಣ್ಣು ಎಂಬ ನಾಲ್ವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಅಲ್ಲಿ ಸಿಕ್ಕಿರುವ ನಗದು ರೂಪಾಯಿ 4390 ಮತ್ತು 8 ಹುಂಜಗಳ ಅಂದಾಜು ಮೌಲ್ಯ ಒಟ್ಟು 4550/- ರೂ, 10 ಕೋಳಿ ಬಾಳುಗಳ ಅಂದಾಜು ಮೌಲ್ಯ ಒಟ್ಟು 500/- ರೂ ಆಗಬಹುದು, ಇವುಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಸ್ವಾಧೀನಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 15/2026 Sec.87, 93 KP Act, 3, 11 Cruelty to Animal Act ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿಯವರು ತಿಳಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪೆರುವಾಯಿ: ಅಪಾಯಕಾರಿ ಕಿರಿದಾದ ಸೇತುವೆಗಳು; ಜೂನ್ 20ರೊಳಗೆ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಜೂನ್ 22ಕ್ಕೆ ರಸ್ತೆ ತಡೆದು ಬೃಹತ್ ಪ್ರತಿಭಟನೆ!

Published

on

ವಿಟ್ಲ/ಪೆರುವಾಯಿ: ಪೆರುವಾಯಿ ಗ್ರಾಮದ ವ್ಯಾಪ್ತಿಯಲ್ಲಿರುವ ಅತ್ಯಂತ ಹಳೆಯ ಹಾಗೂ ಅಪಾಯಕಾರಿ ಸ್ಥಿತಿಯಲ್ಲಿರುವ ಎರಡು ಸೇತುವೆಗಳಿಗೆ ತಕ್ಷಣವೇ ನೂತನ ಸೇತುವೆ ನಿರ್ಮಿಸಬೇಕು ಹಾಗೂ ತಾತ್ಕಾಲಿಕವಾಗಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಯತೀಶ್ ಪೆರುವಾಯಿ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದ್ದು, ಗಡುವು ನೀಡಲಾಗಿದೆ. ನಿಗದಿತ ಅವಧಿಯೊಳಗೆ ಬೇಡಿಕೆ ಈಡೇರದಿದ್ದರೆ ಜೂನ್ 22 ರಂದು ಸಾರ್ವಜನಿಕರ ಸಹಭಾಗಿತ್ವದಲ್ಲಿ ರಸ್ತೆ ತಡೆದು ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಸಮಸ್ಯೆಯ ಹಿನ್ನೆಲೆ:

ಪೆರುವಾಯಿ ಜಂಕ್ಷನ್‌ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಪೇರಡ್ಕ ಬಳಿಯ ಕರ್ನಾಟಕ–ಕೇರಳ ಸಂಪರ್ಕ ಸೇತುವೆ ಹಾಗೂ ಪೆರುವಾಯಿ ಜಂಕ್ಷನ್‌ನಿಂದ ಸುಮಾರು 150 ಮೀಟರ್ ದೂರದಲ್ಲಿರುವ ಮಾಣಿಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಸುಮಾರು ನೂರು ವರ್ಷಗಳಷ್ಟು ಹಳೆಯದಾಗಿದ್ದು, ತೀರಾ ಕಿರಿದಾಗಿವೆ.

ಇತ್ತೀಚಿನ ದಿನಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಸೇತುವೆಯ ಅಡಿಭಾಗದ ಕಾಂಕ್ರೀಟ್ ಹಾನಿಗೊಳಗಾಗಿ ಕಬ್ಬಿಣದ ರಾಡುಗಳು ಹೊರಬಂದಿವೆ. ಕಳೆದ ಮೂರು ವರ್ಷಗಳಲ್ಲಿ ಇಲ್ಲಿ 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಇತ್ತೀಚೆಗೆ ಕೇವಲ 10 ದಿನಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಎರಡು ವಾಹನಗಳು ಸೇತುವೆಯಿಂದ ಕೆಳಗೆ ಬಿದ್ದಿವೆ. ಜೂನ್ 14ರಂದು ರಾತ್ರಿ ಕೂಡ ಆಲ್ಟೋ ಕಾರೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಕೆ:

ನೂತನ ಮತ್ತು ವಿಶಾಲವಾದ ಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿವಿಧ ಇಲಾಖೆಗಳಿಗೆ ಅಧಿಕೃತ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ:

ದಿನಾಂಕ 15/06/2026 ರಂದು: ಪೆರುವಾಯಿ ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕು ಪಂಚಾಯತ್‌ಗೆ ಮನವಿ ಸಲ್ಲಿಕೆ.

ದಿನಾಂಕ 16/06/2026 ರಂದು: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ (ಬಂಟ್ವಾಳ) ಹಾಗೂ ಲೋಕೋಪಯೋಗಿ ಇಲಾಖೆ (PWD ಬಂಟ್ವಾಳ) ಇವರಿಗೂ ಪತ್ರದ ಮೂಲಕ ಮುಖಾಮುಖಿ ಒತ್ತಾಯಿಸಲಾಗಿದೆ.

ಪ್ರಮುಖ ಬೇಡಿಕೆಗಳು:

ಸೇತುವೆಗಳ ಎರಡು ಬದಿಗಳಲ್ಲಿ ತಕ್ಷಣವೇ ಬಲಿಷ್ಠ ತಡೆಬೇಲಿ (Crash Barrier) ಅಳವಡಿಸಬೇಕು.

“ಅಪಾಯಕಾರಿ ಕಿರಿದಾದ ಸೇತುವೆ”, “ವೇಗ ಮಿತಿ” ಮುಂತಾದ ಎಚ್ಚರಿಕೆ ಫಲಕಗಳನ್ನು ಹಾಕಬೇಕು.

ರಾತ್ರಿ ವೇಳೆ ವಾಹನ ಸವಾರರಿಗೆ ಸ್ಪಷ್ಟವಾಗಿ ಕಾಣಿಸುವಂತೆ ರಿಫ್ಲೆಕ್ಟರ್ (Reflector) ವ್ಯವಸ್ಥೆ ಮಾಡಬೇಕು.

ಸೇತುವೆಗಳ ತಾಂತ್ರಿಕ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಬೇಕು ಹಾಗೂ ನೂತನ ವಿಶಾಲ ಸೇತುವೆ ನಿರ್ಮಾಣಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸಬೇಕು.

    ಜೂನ್ 22ಕ್ಕೆ ರಸ್ತೆ ತಡೆದು ಪ್ರತಿಭಟನೆಯ ಎಚ್ಚರಿಕೆ:

    ದಿನಾಂಕ 20/06/2026ರ ಶನಿವಾರದೊಳಗೆ ಇಲಾಖೆಯು ಈ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ಸಾರ್ವಜನಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ದಿನಾಂಕ 22/06/2026ರ ಸೋಮವಾರದಂದು ಪೆರುವಾಯಿ ಪೇರಡ್ಕ ಜಂಕ್ಷನ್ ಸಮೀಪ ರಸ್ತೆ ತಡೆದು ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

    ಪೊಲೀಸ್ ಇಲಾಖೆಗೆ ಅನುಮತಿ ಕೋರಿ ಅರ್ಜಿ:

    ಈ ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಶಾಂತಿಯುತವಾಗಿ ರಸ್ತೆ ತಡೆ ನಡೆಸಲು ಅಗತ್ಯ ರಕ್ಷಣೆ ಹಾಗೂ ಅನುಮತಿ ಕೋರಿ ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕರಿಗೂ (Inspector) ದಿನಾಂಕ 16/06/2026 ರಂದು ಅಧಿಕೃತವಾಗಿ ಅರ್ಜಿ ಸಲ್ಲಿಸಲಾಗಿದೆ.

    ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಯ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ತೀವ್ರವಾಗಿ ಒತ್ತಾಯಿಸಿದ್ದಾರೆ.





    Continue Reading

    Bantawala

    ಕಾಲುಸಂಕದ ತಡೆಗೋಡೆ ಕುಸಿದು ವರ್ಷ ಕಳೆದರೂ ಆಗದ ದುರಸ್ತಿ; ಸಂಪರ್ಕ ಕಡಿತಗೊಂಡು ಕೇಪುವಿನ 80ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಬದುಕು ದುಸ್ತರ!

    Published

    on

    ದೀವಟಿಗೆ ಡಿಜಿಟಲ್ ಮೀಡಿಯಾ ವಿಶೇಷ ವರದಿ

    ಬಂಟ್ವಾಳ: ತಾಲೂಕಿನ ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟೆ-ಮಣಿಯಾರಪಾದೆ ರಸ್ತೆಯ ಕಟ್ಟೆ ಎಂಬಲ್ಲಿ ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಕಾಲುಸಂಕದ ತಡೆಗೋಡೆ ಮತ್ತು ರಸ್ತೆ ಸಂಪೂರ್ಣವಾಗಿ ಕುಸಿದು ಬಿದ್ದು ವರ್ಷವೊಂದು ಕಳೆದರೂ, ಈವರೆಗೆ ಯಾವುದೇ ದುರಸ್ತಿ ಕಾಮಗಾರಿ ನಡೆಯದೆ ಇರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪರಿಣಾಮವಾಗಿ, ಈ ಭಾಗದ ಪರಿಶಿಷ್ಟ ಪಂಗಡದ (ST) ಕಾಲೋನಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕಡಿತಗೊಂಡಿದ್ದು, ಸ್ಥಳೀಯ ಬಡ ಕುಟುಂಬಗಳ ದೈನಂದಿನ ಬದುಕೇ ಸ್ಥಗಿತಗೊಂಡಿದೆ.

    ನಡೆಯಲೂ ಸಾಧ್ಯವಿಲ್ಲದ ಬರ್ಬರ ಸ್ಥಿತಿ: ವೃದ್ಧರು, ಗರ್ಭಿಣಿಯರ ಪರದಾಟ:

    ಕಟ್ಟೆ ಭಾಗದಿಂದ ಕಾಲೋನಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಾಹನ ಸಂಚಾರ ಹಾಗಿರಲಿ, ಮಳೆಗಾಲದಲ್ಲಿ ಶಾಲಾ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಗರ್ಭಿಣಿಯರು ನಡೆದುಕೊಂಡು ಹೋಗುವುದೂ ಈಗ ಸಾವು-ಬದುಕಿನ ಹೋರಾಟದಂತಾಗಿದೆ. ಸುಮಾರು 80ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಬಡ ಕುಟುಂಬಗಳು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ, ರೇಷನ್, ಆಸ್ಪತ್ರೆ ಹಾಗೂ ಉದ್ಯೋಗಕ್ಕಾಗಿ ಇದೇ ಏಕೈಕ ರಸ್ತೆಯನ್ನು ಅವಲಂಬಿಸಿದ್ದು, ಸಂಕದ ತಡೆಗೋಡೆ ಕುಸಿದ ಬಳಿಕ ಇವರಿಗೆ ಆತಂಕ ಎದುರಾಗಿದೆ.

    ಅಧಿಕಾರಿಗಳ ಭೇಟಿ ಬರೀ ಪ್ರದರ್ಶನವೇ? ವರ್ಷ ಕಳೆದರೂ ಮೌನ!

    ಕಳೆದ ಮಳೆಗಾಲದಲ್ಲಿ ಭೀಕರ ಮಳೆಹಾನಿ ಸಂಭವಿಸಿದ ಸಂದರ್ಭದಲ್ಲಿ ಕಂದಾಯ, ಮಳೆಹಾನಿ ವಿಭಾಗ ಹಾಗೂ ಇತರೆ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗೃತ ಪರಿಶೀಲನೆ ನಡೆಸಿದ್ದರು. ತದನಂತರ ಇಂಜಿನಿಯರ್ ಸ್ಥಳ ಪರಿಶೀಲಿಸಿ, ವೈಜ್ಞಾನಿಕವಾಗಿ ತಡೆಗೋಡೆ ಹಾಗೂ ರಸ್ತೆ ಪುನರ್ ನಿರ್ಮಾಣಕ್ಕಾಗಿ ಸುಮಾರು 15 ಲಕ್ಷ ರೂಪಾಯಿಗಳ ಬೃಹತ್ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಿದ್ದರು. ಆದರೆ, ಇಷ್ಟೊಂದು ದೊಡ್ಡದಾದ ಮೊತ್ತದ ಕಾಮಗಾರಿಯನ್ನು ಗ್ರಾಮ ಪಂಚಾಯತ್‌ನ ಸೀಮಿತ ಅನುದಾನದಲ್ಲಿ ಮಾಡಲು ಸಾಧ್ಯವಾಗದ ಕಾರಣ, ಪಂಚಾಯತ್ ಮುಖಾಂತರ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಮನವಿ ಸಲ್ಲಿಕೆಯಾಗಿ ವರ್ಷ ಕಳೆದರೂ ದುರಸ್ತಿ ಕಾರ್ಯ ಮಾತ್ರ ಮರೀಚಿಕೆಯಾಗಿದೆ.

    ಕೇಪು ಪಂಚಾಯತ್‌ನಿಂದ ಶಾಸಕರಿಗೆ ಸಲ್ಲಿಕೆಯಾಗಿತ್ತು ಅಧಿಕೃತ ಮನವಿ

    ಕೇಪು ಗ್ರಾಮ ಪಂಚಾಯತ್ ವತಿಯಿಂದ 29-08-2025 ರಂದೇ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಿಗೆ ಅಧಿಕೃತವಾಗಿ ಪತ್ರ ಬರೆಯಲಾಗಿದ್ದು, ಅದರಲ್ಲಿ “ಕಟ್ಟೆ-ಮಣಿಯಾರಪಾದೆ ರಸ್ತೆಯ ಕಟ್ಟೆ ಎಂಬಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಪರ್ಕ ರಸ್ತೆಯ ಸೇತುವು ಬಳಿ ರಸ್ತೆಯು ಪೂರ್ಣ ಜರಿದು ಹೋಗಿರುತ್ತದೆ. ಈ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು (ಪ್ರಸ್ತುತ 80ಕ್ಕೂ ಅಧಿಕ) ಜನರು ಸಂಚರಿಸುವ ರಸ್ತೆಯಾಗಿದ್ದು, ಬಡ ಜನರು ತುಂಬಾ ಕಷ್ಟದಲ್ಲಿ ಜೀವಿಸುತ್ತಿದ್ದಾರೆ. ಆದುದರಿಂದ ಪ್ರಾಕೃತಿಕ ವಿಕೋಪ ಅಡಿಯಲ್ಲಿ ಸರ್ಕಾರದ ಅನುದಾನ ಮಂಜೂರು ಮಾಡಬೇಕು” ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯದರ್ಶಿಗಳು ಜಂಟಿ ಸಹಿಯೊಂದಿಗೆ ಅಂದಾಜು ಪಟ್ಟಿಯನ್ನು ಲಗತ್ತಿಸಿ ವಿನಂತಿಸಿದ್ದರು. ಆದಾಗ್ಯೂ ಇಲಾಖೆಯ ಮಟ್ಟದಲ್ಲಿ ಫೈಲ್‌ಗಳು ಧೂಳು ಹಿಡಿಯುತ್ತಿರುವುದು ದುರದೃಷ್ಟಕರ.

    ಸ್ಥಳೀಯರ ತೀವ್ರ ಆಕ್ರೋಶ: “ಮಳೆ ಬಂದರೆ ಕಾಲೋನಿ ಸಂಪೂರ್ಣ ಪ್ರತ್ಯೇಕ!”

    “ಚುನಾವಣೆ ಸಂದರ್ಭದಲ್ಲಿ ವೋಟ್ ಕೇಳಲು ಬರುವ ಜನಪ್ರತಿನಿಧಿಗಳು ಮತ್ತು ಭರವಸೆ ನೀಡುವ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ವರ್ಷವೊಂದು ಕಳೆದರೂ ನಮಗೆ ಸಿಕ್ಕಿರುವುದು ಬರೀ ಆಶ್ವಾಸನೆ ಮಾತ್ರ, ದುರಸ್ತಿ ಮಾತ್ರ ಆಗಿಲ್ಲ. ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು, ಮಳೆ ಜೋರಾದರೆ ನಮ್ಮ ಕಾಲೋನಿಯವರ ಗತಿ ಅಧೋಗತಿ! ನಮಗೇನಾದರೂ ತುರ್ತು ಆರೋಗ್ಯ ಸಮಸ್ಯೆಯಾದರೆ ಹೊತ್ತುಕೊಂಡು ಹೋಗಲೂ ದಾರಿಯಿಲ್ಲ” ಎಂದು ಕಾಲೋನಿಯ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹ

    ಈಗಲಾದರೂ ಮಾನ್ಯ ಶಾಸಕರು, ಮಳೆಹಾನಿ ನಿರ್ವಹಣಾ ವಿಭಾಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಈ ಗಂಭೀರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕಿದೆ. ತಕ್ಷಣವೇ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಸಂಪರ್ಕ ಕಡಿತಗೊಂಡಿರುವ ಈ ಕಾಲುಸಂಕ ಮತ್ತು ರಸ್ತೆಯ ತಡೆಗೋಡೆಯನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಬೇಕೆಂದು ಕೇಪು ಗ್ರಾಮಸ್ಥರು ಹಾಗೂ ಕಾಲೋನಿಯ ಬಡ ಕುಟುಂಬಗಳು ಅತ್ಯಂತ ಕಟುವಾಗಿ ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

    Continue Reading

    accident

    ಪೆರುವಾಯಿ ಪೇರಡ್ಕ ಸೇತುವೆಯಿಂದ ತೋಡಿಗೆ ಬಿದ್ದ ಆಲ್ಟೋ ಕಾರು: ಐವರು ಪ್ರಯಾಣಿಕರು ಪವಾಡಸದೃಶ ಪಾರು!

    Published

    on

    ವಿಟ್ಲ: ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳಗಿನ ತೋಡಿಗೆ ಬಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಪೆರುವಾಯಿ ಗ್ರಾಮದ ಪೇರಡ್ಕ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

    ಘಟನೆಯ ವಿವರ: ಪೆರುವಾಯಿ ಕಡೆಯಿಂದ ಬೆರಿಪದವು ಕಡೆಗೆ ಐವರು ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಆಲ್ಟೋ ಕಾರು ಪೇರಡ್ಕ ಸೇತುವೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನೇರ ತೋಡಿಗೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಆಲ್ಟೋ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

    ರಕ್ಷಿಸಿದ ಮಳೆ ಅಭಾವ! ಸಾಮಾನ್ಯವಾಗಿ ಮುಂಗಾರು ಮಳೆಗಾಲದಲ್ಲಿ ಈ ತೋಡಿನಲ್ಲಿ ನೀರು ತುಂಬಿ ಭೋರ್ಗರೆದು ಹರಿಯುತ್ತಿರುತ್ತದೆ. ಆದರೆ ಈ ಬಾರಿ ಸಕಾಲದಲ್ಲಿ ಸರಿಯಾದ ಮಳೆ ಬಾರದ ಕಾರಣ ಹೊಳೆಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಿತ್ತು. ಇದೇ ಕಾರಣಕ್ಕೆ ಕಾರು ತಲೆಕೆಳಗಾಗಿ ಬಿದ್ದರೂ ನೀರಿನಲ್ಲಿ ಮುಳುಗದೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ತಡೆಗೋಡೆ ಇಲ್ಲದ ಸೇತುವೆ: ನಿರಂತರ ಅಪಘಾತಗಳ ತಾಣ!

    ಈ ಸೇತುವೆಗೆ ಯಾವುದೇ ಸುರಕ್ಷಿತ ತಡೆಗೋಡೆ (ಬ್ಯಾರಿಕೇಡ್) ಇಲ್ಲದಿರುವುದೇ ಸರಣಿ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ಕೇವಲ ಕೆಲವು ದಿನಗಳ ಹಿಂದಷ್ಟೇ (ಮೇ 31 ರಂದು) ಇದೇ ಸೇತುವೆಯಿಂದ ಕೋಳಿ ಸಾಗಾಟ ಮಾಡುತ್ತಿದ್ದ ಪಿಕ್‌ಅಪ್‌ ವಾಹನವೊಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಭೀಕರ ಅಪಘಾತ ನಡೆದಿತ್ತು. ಆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

    ಸಾರ್ವಜನಿಕರ ಆಕ್ರೋಶ: “ಕಳೆದ ಹಲವಾರು ವರ್ಷಗಳಿಂದ ಈ ಅಪಾಯಕಾರಿ ಸೇತುವೆಗೆ ಬಲವಾದ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಹಾಗೂ ಸ್ಥಳೀಯರು ನಿರಂತರವಾಗಿ ಒತ್ತಾಯಿಸುತ್ತಾ ಬರುತ್ತಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ ಕ್ರಮ ಜರಗಿಸುತ್ತಿಲ್ಲ. ಅಧಿಕಾರಿಗಳ ಈ ಉದಾಸೀನತೆಯೇ ಸರಣಿ ಅಪಘಾತಗಳಿಗೆ ಪ್ರೇರಣೆ ನೀಡುವಂತಿದೆ” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಮಟ್ಟದ ಜೀವಹಾನಿಯನ್ನು ತಪ್ಪಿಸಲು ತಕ್ಷಣವೇ ಪೇರಡ್ಕ ಸೇತುವೆಗೆ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಗಂಭೀರವಾಗಿ ಆಗ್ರಹಿಸಿದ್ದಾರೆ

    Continue Reading

    Trending

    Copyright © 2025 Deevatige

    error: Content is protected !!