Connect with us

PRESS MEET

ಪುತ್ತೂರು ಜಾತ್ರೆ ಅಂಗಡಿ ಹರಾಜು: ಅವ್ಯವಹಾರದ ಆರೋಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

Published

on

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯು ಇದೀಗ ಪರ-ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಸಂತೆ ವ್ಯಾಪಾರಸ್ಥರೊಬ್ಬರು ಆರೋಪಿಸಿದ್ದರೆ, ದೇವಸ್ಥಾನದ ಆಡಳಿತ ಮಂಡಳಿಯು ಈ ಆರೋಪಗಳನ್ನು ತಳ್ಳಿಹಾಕಿದ್ದು, ವ್ಯಾಪಾರಿಗಳ ಹಿತದೃಷ್ಟಿಯಿಂದಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರ ನಡೆದಿದೆ: ಮಹೇಶ್ ದಾಸ್ ಆರೋಪ

ಸಂತೆ ವ್ಯಾಪಾರಸ್ಥ ಮಹೇಶ್ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾ ಗದ್ದೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದರೂ ಕೇವಲ 320 ಅಂಗಡಿಗಳನ್ನು ಮಾತ್ರ ಹರಾಜು ಮಾಡಲಾಗಿದೆ. ಉಳಿದ ಅಂಗಡಿಗಳನ್ನು ಹರಾಜು ಮಾಡದೆ ಅಕ್ರಮವಾಗಿ ಹಣ ಪಡೆಯಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಒಂದು ಸ್ಟಾಲ್‌ನಿಂದ ಕಸ ವಿಲೇವಾರಿ ಹೆಸರಿನಲ್ಲಿ 1,000 ರೂ.ನಂತೆ ಸುಮಾರು 3.20 ಲಕ್ಷ ರೂ. ವಸೂಲಿ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಕಾನೂನು ಇಲ್ಲಿ ಪಾಲನೆಯಾಗಿಲ್ಲ ಎಂದೂ ಅವರು ದೂರಿದ್ದಾರೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.

ಈಶ್ವರ ಭಟ್ ಪಂಜಿಗುಡ್ಡೆ ತೀಕ್ಷ್ಣ ಪ್ರತಿಕ್ರಿಯೆ

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಅವರು ತಳ್ಳಿಹಾಕಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಯ ಪ್ರತಿ ಪೈಸೆಗೂ ಪಾರದರ್ಶಕವಾದ ಲೆಕ್ಕವಿದೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿ ಮಾಡಿದವರು ಮಂಗಳಾದೇವಿಯಲ್ಲಿ, ವಿಟ್ಲದಲ್ಲಿ, ಕುದ್ರೋಳಿಯಲ್ಲಿ ಮತ್ತು ಪುತ್ತೂರಿನಲ್ಲೂ ಗಲಾಟೆ ಮಾಡಿದ್ದಾರೆ. ವ್ಯಾಪಾರಸ್ಥರ ಮದ್ಯೆ ಅವರಿಗೆ ಹೊಂದಾಣಿಕೆ ಇಲ್ಲದೆ ಅವರ ವೈಯುಕ್ತಿಕ ವಿಷಯವನ್ನು ದೇವಸ್ಥಾನಕ್ಕೆ ತರುವುದು ಸರಿಯಲ್ಲ.

ನಿಯಮ ಮೀರಿ ಅಂಗಡಿ ನೀಡಲಾಗಿಲ್ಲ: ಸ್ಪಷ್ಟನೆ

ಜಾತ್ರಾ ಗದ್ದೆಯ ಹರಾಜಿನಲ್ಲಿ ಒಬ್ಬರಿಗೆ ಕೇವಲ ಒಂದು ಅಂಗಡಿ ನೀಡಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ದೊಡ್ಡ ವ್ಯಾಪಾರಸ್ಥರಿಗೆ ಕೇವಲ 10×10ಅಳತೆಯ ಒಂದು ಸಣ್ಣ ಅಂಗಡಿಯಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಒಂದಕ್ಕಿಂತ ಹೆಚ್ಚು ಅಂಗಡಿಯನ್ನು ನೀಡಲಾಗಿದೆಯೇ ಹೊರತು ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ,” ಎಂದರು.

ಕಸ ವಿಲೇವಾರಿ ಮತ್ತು ಭಂಡಾರಕ್ಕೆ ಸೇರಿದ ಹಣ

ಅಂಗಡಿಗಳಿಂದ ಕಸ ವಿಲೇವಾರಿ ಹೆಸರಿನಲ್ಲಿ ತಲಾ 1,000 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಮೊತ್ತವನ್ನು ಪ್ರತಿ ದಿನದ ಸ್ವಚ್ಛತೆ ಮತ್ತು ಕಸ ವಿಲೇವಾರಿ ವಾಹನಗಳ ನಿರ್ವಹಣೆಗಾಗಿ ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 50,000 ರೂ. ಉಳಿತಾಯವಾಗಿದ್ದು, ಅದು ನೇರವಾಗಿ ದೇವಸ್ಥಾನದ ಭಂಡಾರಕ್ಕೆ ಸೇರಿದೆ. ಈ ಹಣ ಈಶ್ವರ ಭಟ್ ಅವರ ವೈಯಕ್ತಿಕ ಕಿಸೆಗೆ ಹೋಗುವುದಿಲ್ಲ, ಇದನ್ನು ಟೀಕಿಸುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾಖಲೆ ಪ್ರಮಾಣದ ಆದಾಯ ಸಂಗ್ರಹ

ದೇವಸ್ಥಾನದ ಆದಾಯದ ಕುರಿತು ಅಂಕಿಅಂಶಗಳನ್ನು ನೀಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಗಣನೀಯ ಪ್ರಗತಿಯಾಗಿದೆ ಎಂದರು:

ಅಮ್ಯೂಸ್‌ಮೆಂಟ್ ಪಾರ್ಕ್: ಈ ಹಿಂದೆ 50 ಲಕ್ಷ ರೂ.ಗೆ ಹರಾಜಾಗಿದ್ದರೂ ಬಿಡ್‌ದಾರರು ಪಾವತಿಸಿದ್ದು ಕೇವಲ 35 ಲಕ್ಷ ರೂ. ಮಾತ್ರ. ಉಳಿದ ಹಣಕ್ಕಾಗಿ ದೇವಸ್ಥಾನದಿಂದ ಕೇಸ್ ದಾಖಲಿಸಲಾಗಿದೆ.

ಪ್ರಸಕ್ತ ಸಾಲಿನ ಆದಾಯ: ಈ ಬಾರಿ ಕೇವಲ 35 ಲಕ್ಷ ರೂ.ನಿಂದ ಬಿಡ್ಡಿಂಗ್ ಆರಂಭಿಸಿ, ದಾಖಲೆಯ 66 ಲಕ್ಷ ರೂ. ಗೆ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಒಟ್ಟು ಜಮೆ: ಈ ಬಾರಿ ಜಾಯಿಂಟ್ ವೀಲ್‌ನಿಂದ 66 ಲಕ್ಷ ರೂ. ಹಾಗೂ ವಿವಿಧ ಸ್ಟಾಲ್‌ಗಳಿಂದ 69.28 ಲಕ್ಷ ರೂ. ಸೇರಿ ಒಟ್ಟು 1.36 ಕೋಟಿ ರೂ. ಹಣ ದೇವಸ್ಥಾನಕ್ಕೆ ಜಮೆಯಾಗಿದೆ.

ಪಾರದರ್ಶಕ ಹರಾಜು ಪ್ರಕ್ರಿಯೆ

ಲೈಟಿಂಗ್ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ ಅವರು, ಊರಿನವರಿಗೆ ನೀಡಬೇಕೆಂಬ ಒತ್ತಾಯವಿತ್ತಾದರೂ, ಸ್ಥಳೀಯರು 6 ಲಕ್ಷ ರೂ.ಗಳಿಗೆ ಕೇಳಿದ್ದರು. ಆದರೆ ನಾವು ಅದಕ್ಕಿಂತ ಕಡಿಮೆ ದರಕ್ಕೆ ನೀಡುವ ಮೂಲಕ ಪಾರದರ್ಶಕತೆ ಕಾಪಾಡಿಕೊಂಡಿದ್ದೇವೆ. ಹರಾಜಿನ ಹೊರತಾಗಿ ಬಂದವರಿಂದ ಪಡೆದ ಪ್ರತಿಯೊಂದು ಪೈಸೆಗೂ ದೇವಸ್ಥಾನದ ವತಿಯಿಂದಲೇ ರಶೀದಿ ನೀಡಲಾಗಿದೆ ಮತ್ತು ಪ್ರತಿಯೊಬ್ಬರ ಹೆಸರು ಸಮೇತ ಲೆಕ್ಕವಿದೆ ಎಂದು ಅವರು ವಿವರಿಸಿದರು.

“ಲಕ್ಷಾಂತರ ಭಕ್ತರು ಜಾತ್ರೆಯ ಯಶಸ್ಸನ್ನು ಶ್ಲಾಘಿಸುತ್ತಿರುವಾಗ, ಕೇವಲ ಐದಾರು ಮಂದಿ ಟೀಕೆ ಮಾಡುತ್ತಿರುವುದು ವಿಷಾದನೀಯ. ಇಂತಹ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ,” ಎಂದು ಈಶ್ವರ ಭಟ್ ಪಂಜಿಗುಡ್ಡೆಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ — ಹಿರಿಯ ಪತ್ರಕರ್ತ ಯಶು ವಿಟ್ಲ ದಂಪತಿಗೆ ಗೌರವ ಸನ್ಮಾನ

Published

on

ವಿಟ್ಲ:ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಹಿರಿಯ ಪತ್ರಕರ್ತ, ಸಾಹಿತಿ ಯಶವಂತ್ ವಿಟ್ಲ (ಯಶು ವಿಟ್ಲ) ಅವರಿಗೆ ಗೌರವ ಸನ್ಮಾನ ಹಾಗೂ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ವಿಟ್ಲದಲ್ಲಿರುವ ಅವರ ನಿವಾಸ ‘ಶ್ರವಣ‘ದಲ್ಲಿ ಇತ್ತೀಚೆಗೆ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ವಹಿಸಿದ್ದರು. ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಹಿರಿಯ ಪತ್ರಕರ್ತ ದಂಪತಿಗೆ ಗೌರವ ಸನ್ಮಾನ

ಪತ್ರಿಕಾರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸುದೀರ್ಘ ಕೊಡುಗೆ ನೀಡಿದ ಹಿರಿಯ ಪತ್ರಕರ್ತ ಯಶು ವಿಟ್ಲ ದಂಪತಿಯನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷರಾದ ಸಂತೋಷ್‌ ಕುಮಾರ್‌ ಶಾಂತಿನಗರ ಅವರು ಸನ್ಮಾನಿತರಾದ ಯಶು ವಿಟ್ಲ ಅವರ ಬಗ್ಗೆ ಮಾತನಾಡಿ ಸನ್ಮಾನ ಪತ್ರ ವಾಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶು ವಿಟ್ಲ ಅವರು, “ಸಾಹಿತ್ಯ ಕ್ಷೇತ್ರ ಹಾಗೂ ಪತ್ರಿಕೋದ್ಯಮದಲ್ಲಿನ ನನ್ನ ಸುದೀರ್ಘ ಪಯಣವನ್ನು ಗುರುತಿಸಿ ಗೌರವಿಸಿದ ತಾಲೂಕು ಘಟಕಕ್ಕೆ ಅಭಾರಿಯಾಗಿದ್ದೇನೆ” ಎಂದು ಧನ್ಯವಾದ ಅರ್ಪಿಸಿ, ಪತ್ರಕರ್ತರಿಗೆ ಶುಭ ಹಾರೈಸಿದರು.

ಎಲ್ಲರನ್ನೂ ಒಳಗೊಳ್ಳುವ ವಾತಾವರಣ ನಿರ್ಮಾಣ: ಜ್ಯೋತಿ ಪ್ರಕಾಶ್ ಪುಣಚ

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಪುಣಚ ಅವರು, “ಹಿಂದೆ ಚಾಲ್ತಿಯಲ್ಲಿದ್ದ ಕಠಿಣ ನಿಯಮಗಳಿಂದಾಗಿ ಹಲವು ಸಕ್ರಿಯ ಬರಹಗಾರರು ಪತ್ರಕರ್ತರ ಸಂಘಟನೆಯ ಹಕ್ಕುಗಳಿಂದ ವಂಚಿತರಾಗುತ್ತಿದ್ದರು. ಪ್ರತಿಯೊಬ್ಬ ಸಕ್ರಿಯ ಪತ್ರಕರ್ತನಿಗೂ ಸೂಕ್ತ ಗುರುತಿಸುವಿಕೆ ಸಿಗಬೇಕೆಂಬ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಸ್ತಿತ್ವಕ್ಕೆ ಬಂದಿದೆ,” ಎಂದರು.

“ಇಂದು ನಮ್ಮ ಯೂನಿಯನ್ ಮುದ್ರಣ ಹಾಗೂ ದೃಶ್ಯ ಮಾಧ್ಯಮ ಮಾತ್ರವಲ್ಲದೆ ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೂ ಮುಕ್ತ ಸದಸ್ಯತ್ವ ನೀಡುವ ಮೂಲಕ ಸೌಹಾರ್ದಯುತ ವಾತಾವರಣ ನಿರ್ಮಿಸಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕು ಘಟಕಗಳು ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗಷ್ಟೇ ಬೆಳ್ತಂಗಡಿ ತಾಲೂಕು ಸಮಿತಿ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕು ಸಮಿತಿಯನ್ನು ರಚಿಸುವ ಯೋಜನೆಯನ್ನು ಹೊಂದಿದ್ದೇವೆ. ರಾಮದಾಸ್ ಶೆಟ್ಟಿ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲೇ 30ಕ್ಕೂ ಹೆಚ್ಚು ಹೊಸ ಸದಸ್ಯರು ನೋಂದಾವಣೆಯಾಗಿದ್ದಾರೆ. ಹಿರಿಯ ಪತ್ರಕರ್ತರ ಮನೆಗೇ ತೆರಳಿ ಗೌರವಿಸುವುದು ನಮ್ಮ ಯೂನಿಯನ್‌ನ ವಿಶೇಷ ಪರಿಪಾಠವಾಗಿದೆ,” ಎಂದು ಜ್ಯೋತಿ ಪ್ರಕಾಶ್ ಪುಣಚ ತಿಳಿಸಿದರು.

ಗಣ್ಯರ ನುಡಿ

ತಾರಾನಾಥ್ ಗಟ್ಟಿ ಕಾಪಿಕಾಡು (ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ):

ಪತ್ರಿಕಾ ದಿನಾಚರಣೆಯ ಮಹತ್ವ ಮತ್ತು ಆರಂಭದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಕಾಪಿಕಾಡು ಅವರು, “ಪತ್ರಿಕಾ ದಿನಾಚರಣೆಯ ಮಹತ್ವದ ಈ ಸಂದರ್ಭದಲ್ಲಿ ಪತ್ರಿಕಾರಂಗದಲ್ಲಿ ಅಪಾರ ಹೆಸರು ಮಾಡಿರುವ ಯಶು ವಿಟ್ಲ ಅವರನ್ನು ಸನ್ಮಾನಿಸುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಭಾಗ್ಯ ಹಾಗೂ ಕರ್ತವ್ಯವಾಗಿದೆ. ಆ ಕಾಲದಲ್ಲಿ ಗ್ರಾಮಪಂಚಾಯತ್‌ನಿಂದ ಹಿಡಿದು ಶಾಸಕರ ತನಕ ಪತ್ರಿಕೆಯ ಬರಹಗಳಿಗೆ ಉತ್ತಮವಾದ ಸ್ಪಂದನೆ ದೊರೆಯುತ್ತಿತ್ತು. 1978ರಿಂದ ಆ ಕಾಲದ ಪ್ರಭಾವಿ ಪತ್ರಿಕೆ ‘ನವಭಾರತ’ದ ಮೂಲಕ ಪತ್ರಿಕಾ ರಂಗಕ್ಕೆ ಬಂದ ಯಶು ವಿಟ್ಲ ಅವರು ನಂತರ ‘ಉದಯವಾಣಿ’ಯಲ್ಲಿ ಸುಮಾರು 33 ವರ್ಷಗಳ ಕಾಲ ಕ್ರಿಯಾಶೀಲ ಪತ್ರಕರ್ತರಾಗಿ ‘ಬಂಟ್ವಾಳ ಸಮಾಚಾರ’ ಮೊದಲಾದ ಅನೇಕ ಬರಹಗಳ ಮೂಲಕ ಮನೆಮಾತಾಗಿದ್ದಾರೆ. ಆ ಮೂಲಕ ಯಶು ವಿಟ್ಲ ಅವರು ವಿಟ್ಲದ ಅಭಿವೃದ್ಧಿಯಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ,” ಎಂದು ಶ್ಲಾಘಿಸಿದರು.

ಹರೀಶ್ ಬಂಟ್ವಾಳ್ (ಗೌರವಾಧ್ಯಕ್ಷರು, ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲೆ):

“ವಿಟ್ಲದ ಸಮಗ್ರ ಅಭಿವೃದ್ಧಿಯಲ್ಲಿ ಯಶು ವಿಟ್ಲ ಅವರ ಜನಪರ ಬರಹಗಳು ಪ್ರಮುಖ ಪಾತ್ರ ವಹಿಸಿವೆ. ಅಂತಹ ಹಿರಿಯರನ್ನು ಅವರ ಮನೆಯಲ್ಲೇ ಗೌರವಿಸುವ ಮೂಲಕ ಪುತ್ತೂರು ತಾಲೂಕು ಘಟಕ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದೆ. ಯಶು ವಿಟ್ಲ ಅವರು ಈ ಭಾಗದಲ್ಲಿ ಬಹಳಷ್ಟು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಬರಹಗಾರರಿಗೆ ನಿವೃತ್ತಿ ಜೀವನ ಎಂಬುವುದಿಲ್ಲ. ಪತ್ರಿಕಾ ರಂಗದಲ್ಲಿ ಕೇಳಿ ಬರುವ ಅನೇಕ ಹೆಸರುಗಳಲ್ಲಿ ಇವರು ಬಹಳ ಎತ್ತರದ ಸ್ಥಾನದಲ್ಲಿದ್ದಾರೆ. ಇಲ್ಲಿನ ಅಭಿವೃದ್ಧಿಯಲ್ಲಿ ಯಶು ವಿಟ್ಲ ಅವರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರೂ ಅವರ ಕಾರ್ಯ ಚಟುವಟಿಕೆಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಬಹಳಷ್ಟು ಲೇಖನಗಳು, ಬರಹಗಳು ಹಾಗೂ ಸಂಚಿಕೆಗಳು ಅವರ ಸಾಹಿತ್ಯ ಕ್ಷೇತ್ರದ ಆವಿಷ್ಕಾರಗಳಾಗಿವೆ. ಈಗಲೂ ಅವರು ಒಡಿಯೂರಿನಲ್ಲಿ ‘ದತ್ತಪ್ರಕಾಶ’ ಆಧ್ಯಾತ್ಮಿಕ ದ್ವೈಮಾಸಿಕ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಸದಸ್ಯರ ಸೇರ್ಪಡೆ ಹಾಗೂ ಡೈರಿ ವಿತರಣೆ

ಇದೇ ವೇಳೆ ಯೂನಿಯನ್‌ಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ದಿವಾಕರ್ ದಾಸ್ ಅವರ ಮಾಲಕತ್ವದ ಎಸ್.ಎಲ್.ವಿ. ಬುಕ್ ಹೌಸ್ ವತಿಯಿಂದ ಯೂನಿಯನ್‌ನ ಎಲ್ಲಾ ಸದಸ್ಯರಿಗೆ ಡೈರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾದ ವಿ.ಟಿ. ಪ್ರಸಾದ್, ಹೇಮಾ ಜಯರಾಮ್ ರೈ, ವಿಟ್ಲ ಅರಮನೆಯ ಜಯರಾಮ್ ಬಲ್ಲಾಳ್, ತಾಲೂಕು ಘಟಕದ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ಪ್ರಜ್ವಲ್ ಕೋಟ್ಯಾನ್, ಜೊತೆ ಕಾರ್ಯದರ್ಶಿ ಸುಮನಾ ಕೇಪು ಸೇರಿದಂತೆ ಹಲವು ಪತ್ರಕರ್ತರು ಹಾಗೂ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮ ನಿರೂಪಣೆ:

ಮೌಶ್ಮಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ತಾಲೂಕು ಅಧ್ಯಕ್ಷ ರಾಮದಾಸ್ ಶೆಟ್ಟಿ ಸ್ವಾಗತಿಸಿದರು. ಸದಸ್ಯೆ ಮಧುಶ್ರೀ ವಂದಿಸಿ, ತಾಲೂಕು ಕೋಶಾಧಿಕಾರಿ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

Continue Reading

Politics

‘ಬಿಜೆಪಿಗೆ ರಾಮದೇವರ ಶಾಪ’ – 2 ಸಾವಿರ ಕೋಟಿ ಹಗರಣವಾದಾಗ ಇಡಿ, ಸಿಬಿಐ ಎಲ್ಲಿ? : ವಿನಯ್ ಕುಮಾರ್ ಸೊರಕೆ ಕಿಡಿ

Published

on

ಪುತ್ತೂರು: ಬಿಜೆಪಿಯವರು ನಮ್ಮನ್ನು ಧರ್ಮಕ್ಕೆ ವಿರೋಧ ಎಂಬ ಪ್ರಚಾರ ಮಾಡುತ್ತಾರೆ. ಆದರೆ ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ. ನಮ್ಮ ಧರ್ಮವನ್ನು ಪ್ರಥಮವಾಗಿ ಗೌರವಿಸುತ್ತೇವೆ, ಅನುಸರಿಸುತ್ತೇವೆ. ಬೇರೆ ಧರ್ಮಗಳನ್ನು ದ್ವೇಷ ಮಾಡುವುದಿಲ್ಲ ಎಂದು ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇವತ್ತು ರಾಮದೇವರ ಶಾಪ ತಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಅಯೋಧ್ಯೆಯ ರಾಮ ಮಂದಿರದಲ್ಲಿ 2 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣ ನಡೆದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಟ್ರಸ್ಟ್ ಅನ್ನು ತಕ್ಷಣ ಬರ್ಕಾಸ್ತುಗೊಳಿಸಬೇಕು. ಭಕ್ತರ ನಂಬಿಕೆಗೆ ತೊಂದರೆ ಆಗದಂತೆ ನರೇಂದ್ರ ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಟ್ಟಿಗೆ ಎಲ್ಲಿ ಹೋಯ್ತು? ಹಣ ಎಲ್ಲಿಗೆ ಹೋಯ್ತು?
ಅಯೋಧ್ಯೆಯ ಹೆಸರಿನಲ್ಲಿ ಪ್ರತಿ ಮನೆ ಮನೆಗೆ ಇಟ್ಟಿಗೆ ಕೊಂಡು ಹೋಗಿ, ಪ್ರಮಾಣ ಮಾಡಿಸಿ, ಹರಕೆ ಹಣ ಕೊಂಡೊಯ್ದರು. ನಾನೂ ಮನೆಯಲ್ಲಿ ಕಾದಿದ್ದೆ. ಆದರೆ ಯಾರೂ ಬರಲೇ ಇಲ್ಲ. ಮರುದಿನ ಕಬ್ಬಿಣದ ಗೇಟ್ ಹಾಕಿದ್ದಾರೆ, ಆಲ್ಸೇಷನ್ ನಾಯಿ ಬಿಟ್ಟಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದರು. ವಾಸ್ತವದಲ್ಲಿ ನನ್ನ ಮನೆಯಲ್ಲಿ ಕಬ್ಬಿಣದ ಗೇಟ್ ಇಲ್ಲ, ಆಲ್ಸೇಷನ್ ನಾಯಿ ಸಾಕಿಯೇ ಇಲ್ಲ.

ರಾಮ ಮಂದಿರದ ನಿರ್ಮಾಣ ಕಲ್ಲಿನಿಂದಾಯ್ತು, ಇಟ್ಟಿಗೆಯಿಂದಲ್ಲ. ಆದರೆ ನನ್ನ ಪ್ರಶ್ನೆ ಇರುವುದು ಇಟ್ಟಿಗೆ ಎಲ್ಲಿ ಹೋಯ್ತು? ಭಕ್ತರಿಂದ ಸಂಗ್ರಹಿಸಿದ ಹಣ ಎಲ್ಲಿಗೆ ಹೋಯ್ತು? ಎಂದು ಪ್ರಶ್ನಿಸಿದರು.

ಮೋದಿ ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆ
2 ಸಾವಿರ ಕೋಟಿ ರೂ. ಹಗರಣ ಆಗಿರುವ ಈ ಹೊತ್ತಲ್ಲಿ ಇಡಿ, ಸಿಬಿಐ ಎಲ್ಲಿ ಮಲಗಿದೆ? ಅಗಾಧ ರಾಮ ಭಕ್ತರ ಭಾವನೆಗೆ ತೊಂದರೆ ಆಗಿರುವಾಗ ಮೌನ ಯಾಕೆ?

‘ನಾ ಖಾವೂಂಗಾ ನಾ ಖಾನೆ ದೂಂಗಾ’ ಎಂದು ಹೇಳಿದ ನರೇಂದ್ರ ಮೋದಿಯ ಮಾತಿಗೆ ಈಗ ಬೆಲೆ ಎಲ್ಲಿದೆ? ಇದರ ಬಗ್ಗೆ ಮನ್ ಕೀ ಬಾತ್ ಯಾಕಿಲ್ಲ? ಚೌಕಿದಾರ್ ಎಂದು ಕರೆಸಿಕೊಂಡರು, ಈಗ ಮರಿ ಚೌಕಿದಾರ್ ಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಧರ್ಮದಲ್ಲಿ ರಾಜಕೀಯ ಇರಬಾರದು, ಆದರೆ ರಾಜಕೀಯದಲ್ಲಿ ಧರ್ಮ ಬೇಕು ಎಂದು ಕಾಂಗ್ರೆಸ್ ನಂಬಿಕೊಂಡು ಬಂದಿದೆ. ಇವತ್ತು ಬಿಜೆಪಿಗೆ ರಾಮ ದೇವರ ಶಾಪ ತಟ್ಟಿದೆ ಎಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ, ರಾಜ್ಯ ಸಂಯೋಜಕರಾದ ಚಂದ್ರಹಾಸ ಶೆಟ್ಟಿ, ಶಶಿಕಿರಣ್ ರೈ, ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್, ಪುತ್ತೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಜೋಕಿಂ ಡಿಸೋಜ, ಪ್ರವೀಣ್ ಮುಂಡೋಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Continue Reading

JYOTHIPRAKASH

ಮಂಗಳೂರು: ‘ಮಂಗಳೂರ ಸಮಾಚಾರ’ ಹಾಗೂ ಹರ್ಮನ್ ಮೊಗ್ಲಿಂಗ್ ಕೊಡುಗೆ ಚಾರಿತ್ರಿಕವಾದದ್ದು – ಎಂ.ಎ. ಗಫೂರ್

Published

on

ಮಂಗಳೂರು: ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗಟ್ಟಿ ಬುನಾದಿ ಹಾಕಿದ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಹಾಗೂ ಅದರ ಸಂಪಾದಕರಾದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಚಾರಿತ್ರಿಕವಾದದ್ದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರು ಹೇಳಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (KJU) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ (KTC) ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ‘ಮಂಗಳೂರ ಸಮಾಚಾರ’ದ ಸಂಪಾದಕ ಡಾ. ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯ ಲೋಕಕ್ಕೂ ಅಪೂರ್ವ ಕೊಡುಗೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು, “ಮೊಗ್ಲಿಂಗ್ ಅವರು ಕೇವಲ ಪತ್ರಿಕೋದ್ಯಮಕ್ಕೆ ಮಾತ್ರವಲ್ಲದೆ, ಜೈಮಿನಿ ಭಾರತ, ಬಸವ ಪುರಾಣ, ದಾಸ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ” ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಂ. ವಾಟ್ಸನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಪಿ.ಬಿ. ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮದ ಮಹತ್ವದ ಕುರಿತು ಮಾತನಾಡಿದರು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ , ಕೋಶಾಧಿಕಾರಿ ಕೆನ್ಯೂಟ್ ಪಿಂಟೋ, ಮಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಕರ್ತರಾದ ಡೊನಾಲ್ಡ್‌ ಪಿರೇರಾ, ಎಡ್ವರ್ಡ್ ಲೋಬೋ, ಶಾರುಖ್, ಹಮೀದ್ ವಿಟ್ಲ ಸೇರಿದಂತೆ ಥಿಯೋಲೋಜಿಕಲ್ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ‌ ಈಶ್ವರ ವಾರಣಾಶಿ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು




Continue Reading

Trending

Copyright © 2025 Deevatige

error: Content is protected !!