Connect with us

Article

ಪೆರುವಾಯಿ: ಅಂಗನವಾಡಿ ಮಕ್ಕಳಿಗೆ ಕಲುಷಿತ ನೀರು ಪೂರೈಕೆ, ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ

Published

on

ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ/ಗ್ರಾಮ ಪಂಚಾಯತ್ ಕಛೇರಿ/ಭಜನಾ ಮಂದಿರಕ್ಕೆ ಕಳೆದ 6 ತಿಂಗಳಿಂದ ಕಲುಷಿತ ಕುಡಿಯುವ ನೀರು ಪೂರೈಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮಕ್ಕಳ ಮತ್ತು ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜು ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:
ಪೆರುವಾಯಿ ಅಂಗನವಾಡಿ, ಗ್ರಾಮ ಪಂಚಾಯತ್ ಕಛೇರಿ ಹಾಗೂ ಭಜನಾ ಮಂದಿರಕ್ಕೆ ಸರಬರಾಜಾಗುತ್ತಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಯಲ್ಲಿನ ನೀರಿನ ಮಾದರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಿಲ್ಲಾ ಪಂಚಾಯತ್ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ, ಅದು ತೀವ್ರವಾಗಿ ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಲ್ಲ ಎಂದು 29-10-2025 ರಂದು ಪೆರುವಾಯಿ ಗ್ರಾಮ ಪಂಚಾಯತ್‌ಗೆ ವರದಿ ನೀಡಲಾಗಿತ್ತು.

ಜೊತೆಗೆ ಆ ನೀರನ್ನು ಬಳಸದಂತೆ ಸ್ಪಷ್ಟ ಸೂಚನೆಯನ್ನೂ ನೀಡಲಾಗಿತ್ತು. ಆದರೂ ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ದಿನಾಂಕ 13-04-2026 ರಂದು ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮತ್ತೆ ನೀರಿನ ಮಾದರಿ ಪರೀಕ್ಷಿಸಿದಾಗಲೂ ಅದೇ ತೆರೆದ ಬಾವಿಯ ನೀರು ಕಲುಷಿತವಾಗಿದೆ ಎಂಬ ವರದಿ ಬಂದಿದೆ.

ಮಕ್ಕಳ/ಗ್ರಾಮಸ್ಥರ ಆರೋಗ್ಯಕ್ಕೆ ಗಂಡಾಂತರ:
ಕಲುಷಿತ ಎಂದು ಆರು ತಿಂಗಳಲ್ಲಿ ಎರಡು ಬಾರಿ ವರದಿ ಬಂದಿದ್ದರೂ ಇಂದಿಗೂ ಅದೇ ಕಲುಷಿತ ನೀರನ್ನು ಪೆರುವಾಯಿ ಅಂಗನವಾಡಿ ಕೇಂದ್ರಕ್ಕೆ ಹಾಗೂ ಗ್ರಾಮದ ವಿವಿಧ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಎಳೆಯ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ನಿರ್ಲಕ್ಷ್ಯ ಅತ್ಯಂತ ಗಂಭೀರ ಮತ್ತು ಖಂಡನೀಯ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರ ಆಗ್ರಹ:
ಇಂತಹ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ ಎಸಗಿದ ಪಿಡಿಒ ದೀಪಕ್ ರಾಜು ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ತುರ್ತಾಗಿ ಶುದ್ಧ, ಸುರಕ್ಷಿತ ಹಾಗೂ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಮಕ್ಕಳ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಇತಿಹಾಸ ಪ್ರಸಿದ್ಧ ವಿಟ್ಲ ಕೋಟಿಕೆರೆಗೆ ಮರುಜೀವ: ಭರದಿಂದ ಸಾಗುತ್ತಿದೆ ಹೂಳೆತ್ತುವ ಕಾರ್ಯ, ದಾನಿಗಳ ಸಹಕಾರಕ್ಕೆ ಕರೆ

Published

on

ವಿಟ್ಲ: .ಇತಿಹಾಸ ಪ್ರಸಿದ್ಧ ವಿಟ್ಲದ ‘ಕೋಟಿಕೆರೆ’ಯ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯವು‌ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಅತ್ಯಂತ ಭರದಿಂದ ಸಾಗುತ್ತಿದೆ. ದಿನೇ ದಿನೇ ಸುಂದರ ರೂಪ ಪಡೆಯುತ್ತಿರುವ ಕೆರೆಯ ಅಭಿವೃದ್ಧಿ ಕಾರ್ಯವನ್ನು ಪ್ರತಿನಿತ್ಯ ನೂರಾರು ಸಾರ್ವಜನಿಕರು ಕುತೂಹಲದಿಂದ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

ರೂಪುಗೊಳ್ಳುತ್ತಿದೆ ತಡೆಗೋಡೆ; ಮರ-ಪೊದೆಗಳ ತೆರವು

ಕೋಟಿಕೆರೆಯ ಸಂರಕ್ಷಣೆಯ ಮೊದಲ ಹಂತವಾಗಿ, ಈ ಹಿಂದೆ ಕುಸಿದು ಬಿದ್ದಿದ್ದ ಕಲ್ಲಿನ ತಡೆಗೋಡೆಯ ಪುನರ್ ನಿರ್ಮಾಣ ಕಾರ್ಯವು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆರೆಯ ಸುತ್ತಲೂ ದಟ್ಟವಾಗಿ ಹಬ್ಬಿಕೊಂಡಿದ್ದ ಪೊದೆಗಳು ಮತ್ತು ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಕೊನೆಯ ಹಂತದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅಲ್ಲದೆ, ಕೆರೆಯ ನೀರಿಗೆ ಬಾಗಿಕೊಂಡು ಅಪಾಯಕಾರಿಯಾಗಿದ್ದ ಭಾರಿ ಗಾತ್ರದ ನಿರುಪಯುಕ್ತ ಮರಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಹೂಳೆತ್ತುವಿಕೆಗೆ ಕ್ರೇನ್ ಕಾರ್ಯಾಚರಣೆ: ಯುವಕರ ಶ್ರಮಕ್ಕೆ ಹೈಕೋರ್ಟ್ ವಕೀಲರ ಮೆಚ್ಚುಗೆ

ಕೋಟಿಕೆರೆಯ ಉದ್ದಗಲಕ್ಕೂ ತಳಭಾಗದಲ್ಲಿ ಸುಮಾರು ಐದು ಅಡಿಗಳಷ್ಟು ಆಳದಲ್ಲಿ ತುಂಬಿಕೊಂಡಿರುವ ದಶಕಗಳ ಹಳೆಯ ದುರ್ನಾತಭರಿತ ಹೂಳನ್ನು (ಕೆಸರು) ಹೊರತೆಗೆಯುವುದು ಸದ್ಯ ಎದುರಾಗಿರುವ ಅತಿ ದೊಡ್ಡ ಸವಾಲಾಗಿದೆ. ಕಳೆದ ಮೂರು ದಿನಗಳಿಂದ ಹಿಟಾಚಿ ಯಂತ್ರವನ್ನು ಬಳಸಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿತ್ತಾದರೂ, ಹೂಳಿನ ಪ್ರಮಾಣ ಅಗಾಧವಾಗಿರುವುದರಿಂದ ಇದೀಗ ಬೃಹತ್ ಕ್ರೇನ್ ಒಂದನ್ನು ಸ್ಥಳಕ್ಕೆ ತರಲಾಗಿದೆ. ಕೆರೆಯ ತಳಭಾಗದಲ್ಲಿ ಹಿಟಾಚಿ ಯಂತ್ರವು ಹೂಳನ್ನು ಒಟ್ಟುಗೂಡಿಸುತ್ತಿದ್ದರೆ, ಮೇಲ್ಭಾಗದಲ್ಲಿ ನಿಂತಿರುವ ಕ್ರೇನ್‌ನ ರೋಪ್ ಮೂಲಕ ಕೆರೆಗೆ ಇಳಿಸಲಾದ ದೊಡ್ಡ ಬಕೆಟ್‌ಗಳಿಗೆ ಹೂಳನ್ನು ತುಂಬಿಸಿ ಮೇಲಕ್ಕೆತ್ತುವ ಜಂಟಿ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ.

ಈ ಮಹತ್ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ, ಮಾಧ್ಯಮಗಳಲ್ಲಿ ವರದಿಯನ್ನು ವೀಕ್ಷಿಸಿದ ವಿಟ್ಲ ಮೂಲದವರೇ ಆದ ಪ್ರಖ್ಯಾತ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಯುವಕರ ಭಗೀರಥ ಪ್ರಯತ್ನ ಹಾಗೂ ಸಾಮಾಜಿಕ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಯುವಕರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಲ್ಲದೆ, ಕೆರೆಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣವೇ 11,111 ರೂಪಾಯಿ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ಹೃದಯವಂತರ ಸಹಕಾರದ ಅಗತ್ಯವಿದೆ

ಕೋಟಿಕೆರೆಯ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕಾಗಿ ಈಗಾಗಲೇ ಊರಿನ ಹಾಗೂ ಪರವೂರ ಹಲವಾರು ದಾನಿಗಳು ಮನಪೂರ್ವಕವಾಗಿ ಧನಸಹಾಯದ ಹಸ್ತ ಚಾಚಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈವರೆಗೆ ಸುಮಾರು 1,70,000 ರೂಪಾಯಿ ವೆಚ್ಚವಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 2,00,000 ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ನಮ್ಮ ಹೆಮ್ಮೆಯ ಇತಿಹಾಸ ಪ್ರಸಿದ್ಧ ಕೋಟಿಕೆರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಈ ಪವಿತ್ರ ಕಾರ್ಯದಲ್ಲಿ ಇನ್ನಷ್ಟು ಜನ ಹೃದಯವಂತ ದಾನಿಗಳು ಆರ್ಥಿಕ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಮೂಲಕ ಕೈಜೋಡಿಸಬೇಕಾಗಿ ಕೆರೆ ಅಭಿವೃದ್ಧಿ ಸಮಿತಿಯವರು ವಿನಂತಿಸಿಕೊಂಡಿದ್ದು, ಈ ಬಳಗದ ಗ್ರೂಪ್ ಅಡ್ಮಿನ್ ಗಳಾದ 1) ಬಾಬು ಕೊಪ್ಪಳ, 2) ಕ್ಲಿಫರ್ಡ್ ವೇಗಸ್, 3) ಚಂದ್ರಹಾಸ ಕೊಪ್ಪಳ 4) ಅಣುಪ್ ಲಾಸ್ರಾದೊ 5) ಚಂದ್ರ ಟೈಯರ್ ಅಂಗಡಿ ಇವರುಗಳಲ್ಲಿ ಹಣ ನೀಡಬಹುದು ಅಥವಾ ಕ್ಯೂ ಆರ್ ಕೋಡ್ ಮೂಲಕವೂ ನೀಡಬಹುದಾಗಿದೆ ಎಂದು ವಿನಂತಿಸಿದ್ದಾರೆ.
ಈಗಾಗಲೇ ನಿರ್ಧರಿಸಿದ ಕೆಲಸಗಳು ಮುಕ್ತಾಯವಾದ ಬಳಿಕವೂ ಹಣ ಉಳಿದಲ್ಲಿ ಮತ್ತೆ ತಡೆಗೋಡೆ ಕಾಮಗಾರಿ ಮುಂದುವರಿಸುವ ಬಗ್ಗೆಯೂ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.




Continue Reading

Article

ತುಳುನಾಡಿನ ಇತಿಹಾಸದ ಹೆಮ್ಮೆಯ ಸಂಕೇತ ವಿಟ್ಲದ ‘ಕೋಟಿ ಕೆರೆ’ಗೆ ಜೀರ್ಣೋದ್ಧಾರದ ಕಾಯಕಲ್ಪ: ಸಾರ್ವಜನಿಕರ ಸಹಕಾರಕ್ಕೆ “ಕೋಟಿಕೆರೆ ಅಭಿವೃದ್ಧಿ ಬಳಗ”ಮನವಿ

Published

on

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಐತಿಹಾಸಿಕ ಪಟ್ಟಣವಾದ ವಿಟ್ಲದ ಹೆಮ್ಮೆಯ ಸಂಕೇತ, ತುಳುನಾಡಿನ ವೀರ ಹಾಗೂ ರಾಜವಂಶದ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿರುವ ಇತಿಹಾಸ ಪ್ರಸಿದ್ಧ ‘ಕೋಟಿ ಕೆರೆ’ ಇಂದು ಅಳಿವಿನ ಅಂಚಿಗೆ ಬಂದು ತಲುಪಿದ್ದು, ಯಾವ ಕ್ಷಣದಲ್ಲಾದರೂ ಜರಿದು ಮುಚ್ಚಿಹೋಗುವ ಭೀತಿಯಲ್ಲಿರುವ ಈ ಕೆರೆಯನ್ನು ಉಳಿಸಿಕೊಳ್ಳಲು ವಿಟ್ಲದ ಸಾರ್ವಜನಿಕರು ಹಾಗೂ ಕೊಡುಗೈ ದಾನಿಗಳು ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಕೆರೆಯ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಕಳೆದ ವಾರದಿಂದ ಇಲ್ಲಿ ನಿರಂತರವಾಗಿ ಕಾರ್ಮಿಕರಿಂದ ಜರಿದು ಬಿದ್ದ ತಡೆಗೋಡೆಗಳನ್ನು ಸರಿಪಡಿಸುವ ಕೆಲಸಗಳು ಮತ್ತು ಜೊತೆಯಾಗಿ ಶ್ರಮದಾನದ ಮೂಲಕವೂ ಕೆಲಸಗಳು ನಡೆಯುತ್ತಲಿವೆ.

ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ವಿಟ್ಲದ ಆಪತ್ಬಾಂಧವ ಮುರಳಿ, ಅನೂಪ್ ಲಸ್ರಾದೊ, ಜಯರಾಮ ಕಡಂಬು, ಮಾಜಿ ಯೋಧರಾದ ದಯಾನಂದ ನೇತ್ರಕೆರೆ, ವೆಂಕಟರಮಣ ಭಟ್, ಫಿನಿಕ್ಸ್‌ ಕಂಪ್ಯೂಟರಿನ ಜೋಯ್‌ ಪುಡ್ತಾದೊ, ಪತ್ರಕರ್ತ ವಿಟಿ ಪ್ರಸಾದ್ ಹಾಗೂ ಚಂದ್ರ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋಟಿ ಕೆರೆಯ ಹತ್ತಿರದ ಮನೆಯವರು ಕತ್ತಿ , ಹಾರೆ ಇನ್ನಿತರ ಪರಿಕರಗಳನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಕೆರೆಯ ಸುತ್ತು ಚಾಚಿಕೊಂಡಿರುವ ಮರಗಳ ತೆರವು, ನೀರು ಕೆಸರನ್ನು ಮೇಲಕ್ಕೆತ್ತುವ , ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಉಸಿರು ಬಿಗಿದು ನಿಂತ ಕೆರೆ: ಸುಮಾರು ಹತ್ತು ವರ್ಷಗಳ ಹಿಂದೆ ಈ ಕೆರೆ ಅಳಿವಿನ ಅಂಚಿನಲ್ಲಿದ್ದಾಗ ವಿಟ್ಲದ ಉದ್ಯಮಿ ಬಾಬು ಕೊಪ್ಪಳ ಅವರು ವೈಯಕ್ತಿಕ ಮುತುವರ್ಜಿ ವಹಿಸಿ ಜರಿದು ಹೋಗಿದ್ದ 20 ಮೀಟರ್ ಭಾಗವನ್ನು ದುರಸ್ತಿ ಮಾಡಿಸಿದ್ದರು. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಈಗ ಕೆರೆಯ ನಾಲ್ಕೂ ಬದಿಯ ಕಲ್ಲುಗಳು ಜರಿದು ನೀರು ಪಾಲಾಗಿದ್ದು, ಕಟ್ಟಿದ ಕಲ್ಲು ಮತ್ತು ಮಣ್ಣು ಜರಿದು ಬಿದ್ದು ಕೆರೆಯೊಳಗೆ ತುಂಬಿ ಹೋಗಿದೆ. ಕೆರೆ ಸದ್ಯ ಉಸಿರು ಬಿಗಿದು ಹಿಡಿದು ನಿಂತಂತಿದೆ. ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳು, ಈಜುಗಾರರು ಕಳೆದ ಏಳೆಂಟು ದಶಕಗಳ ಹಿಂದಿನಿಂದಲೇ ಈಜು ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದಕ್ಕೆ ಈ ಕೋಟಿ ಕೆರೆಯೇ ಸಾಕ್ಷಿಯಾಗಿದೆ. ಆ ಕಾರಣವಾಗಿಯೇ ಈ ಕೆರೆ ಮಾತ್ರ ವಿಟ್ಲದ ನಮ್ಮೆಲ್ಲರ ಹೆಮ್ಮೆಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಇಂದಿಗೂ ಉಳಿದುಕೊಂಡಿದೆ. ಅದರ ಅಭಿವೃದ್ಧಿ ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ಗ್ರಾಮೀಣ ಈಜುಪಟುಗಳ ನರ್ಸರಿ! ಆಧುನಿಕ ಇತಿಹಾಸದಲ್ಲಿ ಈ ಕೆರೆಯು ಕೇವಲ ನೀರಿನ ಮೂಲವಾಗಿ ಉಳಿಯದೆ, ಗ್ರಾಮೀಣ ಭಾಗದ ಅದ್ಭುತ ಕ್ರೀಡಾ ತರಬೇತಿ ಕೇಂದ್ರವಾಗಿ ಮಾರ್ಪಟ್ಟಿತ್ತು. ಅನೇಕ ಮಂದಿ ಈಜು ತರಬೇತುದಾರರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕೆರೆಯಲ್ಲಿ ಸಾವಿರಾರು ಗ್ರಾಮೀಣ ಯುವಕರಿಗೆ ಉಚಿತವಾಗಿ ಈಜು ಕಲಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜುಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಸಹಕಾರಕ್ಕೆ ಸಮಿತಿ ವಿನಂತಿ: ಇತಿಹಾಸ ಪ್ರಸಿದ್ಧ ಈ ಕೆರೆಗೆ ಬಂದೊದಗಿರುವ ದುಸ್ಥಿತಿಯನ್ನು ಕಂಡು ಮರುಗಿದ ವಿಟ್ಲದ ಕೆಲವು ಕೊಡುಗೈ ದಾನಿಗಳು, ದೈನಂದಿನ ಈಜುಗಾರರು, ಪೋಷಕರು, ವಿಟ್ಲದ ಕಲಾರಾಧಕರು ಹಾಗೂ ಕೋಟಿಕೆರೆಯ ಅಭಿಮಾನಿಗಳು ಸೇರಿಕೊಂಡು ಇದನ್ನು ಸ್ವಾವಲಂಬನೆಯಿಂದ ಉಳಿಸಿಕೊಳ್ಳುವ ಯೋಚನೆ ಮತ್ತು ಯೋಜನೆ ಹಾಕಿಕೊಂಡಿದ್ದಾರೆ. ತನು, ಮನ, ಧನದ ಮೂಲಕ ಇದರ ಅಭಿವೃದ್ಧಿಯ ಸಂಕಲ್ಪಕ್ಕಾಗಿ ಪಣ ತೊಟ್ಟಿದ್ದಾರೆ.

ಮುಂದಿನ ಪೀಳಿಗೆಗೆ ಇತಿಹಾಸ ಹಾಗೂ ಪರಿಸರವನ್ನು ಉಳಿಸುವ ಈ ಪವಿತ್ರ ಕಾರ್ಯಕ್ಕೆ ವಿಟ್ಲ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬ ಸಾರ್ವಜನಿಕರು, ಅಭಿಮಾನಿಗಳು ಬಂದು ತಮ್ಮ ಸಹಕಾರವನ್ನು ನೀಡಬೇಕಾಗಿದೆ. ಇದು ಕೇವಲ ತನು-ಮನದಿಂದ ಆಗುವ ಕೆಲಸವಲ್ಲ, ಇದರ ಜೊತೆಗೆ ಧನ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ನಮ್ಮ ಊರಿನ ಈ ಸುಂದರ ಕೋಟಿ ಕೆರೆಗೆ ಹೊಸ ಜೀವ ಕಳೆ ನೀಡಲು ಉದಾರ ಮನಸ್ಸಿನಿಂದ ಎಲ್ಲರೂ ಧನಸಹಾಯ ಹಾಗೂ ಶ್ರಮದಾನದ ಮೂಲಕ ಸಹಕರಿಸಬೇಕಾಗಿ “ಕೋಟಿಕೆರೆ ಅಭಿವೃದ್ಧಿ ಬಳಗ” ವಿನಂತಿಸಿದ್ದು, ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಹೇಳಿದೆ. ಈ ಅಭಿವೃದ್ಧಿ ಬಳಗ ಒಂದು ವಾಟ್ಸಾಪ್‌ ಗ್ರೂಫನ್ನು ರಚಿಸಿಕೊಂಡಿದ್ದು, ಇನ್ನಷ್ಟು ಮಾಹಿತಿಗಳು, ದಿನಂಪ್ರತಿಯ ಕೆಲಸಕಾರ್ಯಗಳ ವಿವರಗಳು ಅದರಲ್ಲಿ ಹಾಕಲಾಗುತ್ತಿದ್ದು, ಗ್ರೂಪನ್ನು ಸೇರಲು ಕೆಳಗೆ ಲಿಂಕನ್ನು ನೀಡಲಾಗಿದೆ.

ಕೋಟಿಕೆರೆ ಅಭಿವೃದ್ಧಿ ಬಳಗ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/FfKDbO1gjcF4g11qZIgTzT





Continue Reading

Article

ದಯಾನಂದ ಕುಂತೂರು ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಕರಾವಳಿಯ ಕಲಾಭಿಮಾನಿಗಳ ಹೃದಯ ಗೆದ್ದ ಸ್ತ್ರೀ ವೇಷಧಾರಿಗೆ ಸಂದ ಗೌರವ

Published

on

ರಂಗಭೂಮಿಯ ‘ಕಲಾರತ್ನ ಮಣಿ’ ದಯಾನಂದ ಕುಂತೂರು: ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಅನಭಿಷಿಕ್ತ ಕಲಾ ಸಾಮ್ರಾಟನಿಗೆ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ
ತುಳು-ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ಕಲಾ ಸೇವೆಯನ್ನೇ ಕಾಯಕವಾಗಿಸಿಕೊಂಡು ಯಶಸ್ಸಿನ ಶಿಖರವೇರಿದ ಧೀಮಂತ ಕಲಾವಿದ ಶ್ರೀ ದಯಾನಂದ ಕುಂತೂರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯ ವಿವಿಧ ಮಜಲುಗಳಲ್ಲಿ ಪಯಣಿಸಿ, ಸುಮಾರು 2500ಕ್ಕೂ ಅಧಿಕ ನಾಟಕಗಳಲ್ಲಿ ಅದ್ಭುತವಾಗಿ ಸ್ತ್ರೀ ವೇಷಧಾರಿಯಾಗಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಅವರ ಸಾಂಸ್ಕೃತಿಕ ಸಾಧನೆಯ ಮುಕುಟಕ್ಕೆ ಅತ್ಯುನ್ನತ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯ ಜಗದಗಲದ ಗರಿ ಸೇರ್ಪಡೆಯಾಗಿದೆ. ಇದು ಇಡೀ ಕರಾವಳಿ ಹಾಗೂ ಕನ್ನಡಿಗರು ಹೆಮ್ಮೆಪಡುವಂತಹ ಕ್ಷಣವಾಗಿದೆ.

ಬಾಲ್ಯ ಮತ್ತು ಕಲಾ ಪ್ರವೇಶದ ಹೆಜ್ಜೆಗಳು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂತೂರಿನ ಶ್ರೀಯುತ ಶೀನಪ್ಪ ಪೂಜಾರಿ ಅಲೆಕ್ಕಾಡಿ ಮತ್ತು ಶ್ರೀಮತಿ ಹೇಮಾವತಿ ದಂಪತಿಯ ಏಳನೇ ಮಗನಾಗಿ 07-06-1969 ರಲ್ಲಿ ದಯಾನಂದ ಕುಂತೂರು ಜನಿಸಿದರು. ಕುಂತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಉಪ್ಪಿನಂಗಡಿಯ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದರು.

ಶಾಲಾ ದಿನಗಳಲ್ಲೇ ಬಣ್ಣದ ಪ್ರಪಂಚದ ಕಡೆಗೆ ಆಕರ್ಷಿತರಾಗಿದ್ದ ದಯಾನಂದರು, ತಮ್ಮ ಎಂಟನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ಅವರು ವೃತ್ತಿಪರವಾಗಿ ಬಣ್ಣ ಹಚ್ಚಿದ ಮೊದಲ ತುಳು ನಾಟಕ ‘ನೇತ್ತರ್ದ ಕಾಣಿಕೆ’. ಅಲ್ಲಿಂದ ಆರಂಭವಾದ ಇವರ ಕಲಾ ಯಾನ ಇಂದಿಗೂ ದಣಿವರಿಯದ ಜಲಪಾತದಂತೆ ಮುನ್ನಡೆಯುತ್ತಿದೆ.

ಸ್ತ್ರೀ ಪಾತ್ರಗಳ ಮೂಲಕ ಅಪಾರ ಜನಮನ್ನಣೆ:
ತುಳು ಹಾಗೂ ಕನ್ನಡ ನಾಟಕ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಅಷ್ಟೇ ಸಹಜವಾಗಿ, ಆಕರ್ಷಕವಾಗಿ ಮತ್ತು ತನ್ಮಯತೆಯಿಂದ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ಆದರೆ ದಯಾನಂದ ಕುಂತೂರು ಅವರು ತಮ್ಮ ನಟನಾ ಕೌಶಲ್ಯದ ಮೂಲಕ ಸ್ತ್ರೀ ಸಹಜ ಭಾವನೆಗಳಾದ ನವರಸಗಳನ್ನು ರಂಗದ ಮೇಲೆ ಅತ್ಯಂತ ಮನೋಜ್ಞವಾಗಿ ಉಣಬಡಿಸಿದ್ದಾರೆ.

ಇವರು ನಟಿಸಿದ ಪ್ರಮುಖ ನಾಟಕಗಳಾದ ಬೈಯ ಮಲ್ಲಿಗೆ, ಗಂಗಾರಾಮು, ಗಂಗೆ ಗೌರಿ, ಸರಸ್ವತಿ, ತುಂಗಭದ್ರಾ, ಮೇಘ ಮುರಾರಿ, ಅಜ್ಜಿಗೆ ಎರ್ಲಾ ಇಜ್ಜಿ, ಗುತ್ತುದ ಇಲ್ಲ್, ಭೈರನ ಕುರಲ್, ಎನ್ನ ಕಥೆ ಬರೆಪರ, ಎರ್ಲಾ ಉಲ್ಲೇರ ಈ ಇಲ್ಲಾ, ತೆಲಿಪೆರಲಾ ಅತ್ತ್ ಬುಲಿಪೆರಲಾ ಅತ್ತ್, ದೇವತೆ, ಬದುಕು ಒಂಜಿ ನಾಟಕ, ಉಡಲ್ ಮೊಕೆದ ಕಡಲು, ಸಂಸಾರ ದೊಂಜಿ ಅಪಸ್ವರ, ಮಲ್ದೇದಿ, ಪೊನ್ನು ಒಂಜಿ ಪುದೆ, ಗಗ್ಗರೆ, ನಾಗ ನೆರೆಲ್, ನಾಗಬನ, ನಾಗನಿಧಿ, ಈರ್ ಎರ್ ಇಂಬೇರೆ, ದಾರೇದ ಸಿರಿ, ಕುಂಕುಮ, ಶನೇಶ್ವರ ಮಹಾತ್ಮೆ ಮುಂತಾದ ನೂರಾರು ಯಶಸ್ವಿ ನಾಟಕಗಳಲ್ಲಿ ಪ್ರಮುಖ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಅಲ್ಲದೆ, ಖ್ಯಾತ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ಕಲಾ ಸಂಗಮ ತಂಡದ ಸೂಪರ್ ಹಿಟ್ ನಾಟಕಗಳಾದ ‘ಒರಿಯರ್ದೊರಿ ಅಸಲ್ ಭಾಗ-2’ ಮತ್ತು ‘ಕೊಲ್ಯೂರು ಮೂಕಾಂಬಿಕೆ’ ನಾಟಕಗಳಲ್ಲಿನ ಇವರ ಅಭಿನಯ ರಂಗಭೂಮಿಯ ಇತಿಹಾಸದಲ್ಲೇ ಮೈಲಿಗಲ್ಲಾಗಿದೆ. ಹತ್ತು ನಿಮಿಷದಲ್ಲಿ ಬರೋಬ್ಬರಿ 12 ಸೀರೆಗಳನ್ನು ಒಂದು ನೃತ್ಯದಲ್ಲಿ ಬದಲಾಯಿಸಿ ವಿಶೇಷ ನೃತ್ಯ ಪ್ರದರ್ಶನ ನೀಡುವ ಮೂಲಕ ಜನರನ್ನು ಚಕಿತಗೊಳಿಸಿದ ಕೀರ್ತಿ ಇವರದ್ದಾಗಿದೆ. ಕಿರುತೆರೆಯಲ್ಲೂ ಹೆಜ್ಜೆ ಇಟ್ಟಿರುವ ಇವರು ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಧಾರಾವಾಹಿ ‘ಫಿಫ್ಟಿ ಫಿಫ್ಟಿ ಕನ್ನಡ’ ಮತ್ತು ಕನ್ನಡ ಚಲನಚಿತ್ರ ‘ಲಕ್ಷ್ಮಣ’ ದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕರಾವಳಿಯ ಹೆಮ್ಮೆಯ ಕಲಾ ರಾಯಭಾರಿ:
ದಯಾನಂದ ಕುಂತೂರು ಅವರ ಕಲಾ ಪ್ರೌಢಿಮೆ ಕೇವಲ ಕರಾವಳಿ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇವರು ಕರ್ನಾಟಕ ಸಾಂಸ್ಕೃತಿಕ ಇಲಾಖೆಯ ವತಿಯಿಂದ ರಾಜ್ಯದ ಅಧಿಕೃತ ಪ್ರತಿನಿಧಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ನಾಡಿನ ಕೀರ್ತಿಯನ್ನು ದೇಶದ ಗಡಿಯಲ್ಲಿ ಹೆಚ್ಚಿಸಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಾದ ದುಬೈ, ಅಬುಧಾಬಿ, ಮತ್ತು ಓಮನ್ ದೇಶಗಳಲ್ಲೂ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯ ರಾಯಭಾರಿಯಾಗಿದ್ದಾರೆ. ಇಂದಿಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಗಳ ಟ್ಯಾಬ್ಲೋಗಳಲ್ಲಿ (ಸ್ತಬ್ಧಚಿತ್ರ) ಇವರ ಸ್ತ್ರೀ ವೇಷಧಾರಿಯ ರೂಪಕ್ಕೆ ಅತ್ಯಂತ ಅಪಾರ ಬೇಡಿಕೆಯಿದೆ. ಯಕ್ಷಗಾನ ರಂಗದಲ್ಲೂ ಇವರು ತಮ್ಮ ಚತುರತೆಯನ್ನು ತೋರಿದ್ದಾರೆ.

ಹುಡುಕಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು:
ದಯಾನಂದ ಕುಂತೂರು ಅವರ ಸುದೀರ್ಘ 4 ದಶಕಗಳ ಕಲಾ ಸೇವೆಯನ್ನು ಗುರುತಿಸಿ ನೂರಾರು ಸಂಘ-ಸಂಸ್ಥೆಗಳು, ಯುವಕ ಮಂಡಲಗಳು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ:

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2022): ಕರ್ನಾಟಕ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುನ್ನತ ನಾಗರಿಕ ಗೌರವ.

ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಜಾಗತಿಕ ಮಟ್ಟದ ಸಾಧನೆಗಾಗಿ ಸಂದ ಪ್ರತಿಷ್ಠಿತ ಪುರಸ್ಕಾರ.

ರಂಗಭೂಮಿ ಕಲಾ ಸೇವಾರತ್ನ ಪ್ರಶಸ್ತಿ: ಕನ್ನಡ ಫಿಲಂ ಚೇಂಬರ್ (ರಿ) ಬೆಂಗಳೂರು ಇವರಿಂದ ರಾಜ್ಯ ಮಟ್ಟದ ಗೌರವ.

ರಾಜ್ಯಮಟ್ಟದ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ: ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು ಇವರಿಂದ ಸನ್ಮಾನ.

ಸಾಯಿ ಕಲಾವಿದೆರ್‌ ಸಂಸ್ಥೆ (ರಿ) ಕುಡ್ಲ ಇವರಿಂದ ಸಾಯಿ ಕಲಾಶ್ರೀ ಪ್ರಶಸ್ತಿ

ಬಿರುದು ಸನ್ಮಾನಗಳು:

ಬಾಲ್ಯ ಮೂಕಾಂಬಿಕೆ ಕ್ಷೇತ್ರ ಪಾಲ್ತಿಮಾರ್ ಇವರಿಂದ “ತುಳುನಾಡ ಅಭಿನೇತ್ರಿ” ಬಿರುದು.

ಜಾತ್ಯತೀತ ಜನತಾದಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರಿಂದ “ನಾಟ್ಯಮಯೂರಿ” ಬಿರುದು.

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ನಾಟಕ ರಂಗದ ಮಿನುಗುತಾರೆ” ಗೌರವ.

ಆರ್.ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇವರಿಂದ “ಕಲಾರತ್ನ ಮಣಿ” ಬಿರುದು.

ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ಇವರಿಂದ “ಅಗ್ನಿದುರ್ಗೆ ಪುರಸ್ಕಾರ”.

ದ.ಕ.ಜ.ಪಂ. ಉ.ಹಿ.ಪ್ರಾ. ಶಾಲೆ ಕುಂತೂರು ಇವರಿಂದ “ಕಲಾರತ್ನ ಮಗ” ಗೌರವ.

ಮಂಗಳೂರಿನ ಪ್ರಸಿದ್ಧ ನಾಟಕ ತಂಡಗಳಾದ ಧರಿತ್ರಿ ಕಲಾವಿದೆರ್, ತುಳುವೇರ್ ತುಡರ್, ಕಲಾ ಸಂಗಮ, ತುಳುವೇರ್ ಉಡಲ್ ಜೋಡುಕಲ್ಲು, ಸಾಯಿ ಕಲಾವಿದರ್ ಕುಡ್ಲ, ತ್ರಿನೇತ್ರ ಕಲಾವಿದರ್ ಕುಡ್ಲ ಸೇರಿದಂತೆ ಹಲವಾರು ಪ್ರತಿಷ್ಠಿತ ಕಲಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
ಅಪ್ಪಟ ರಂಗ ಕಾಯಕ ಯೋಗಿಯಾಗಿ, ಅಹರ್ನಿಷಿ ಕಲೆಯನ್ನೇ ಉಸಿರಾಡುತ್ತಿರುವ ಶ್ರೀ ದಯಾನಂದ ಕುಂತೂರು ಅವರಿಗೆ ಲಭಿಸಿರುವ ಈ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯು ಅವರ ಕಠಿಣ ಪರಿಶ್ರಮ ಮತ್ತು ಕಲಾ ಭಕ್ತಿಗೆ ಸಂದ ನೈಜ ಗೌರವವಾಗಿದೆ. ಕಲಾಮಾತೆಯ ಕೃಪೆ ಇವರ ಮೇಲೆ ಸದಾ ಇರಲಿ, ದೇವರು ಇವರಿಗೆ ಆಯುಷ್ಯ, ಆರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ, ಇವರಿಂದ ರಂಗಭೂಮಿಗೆ ಮತ್ತಷ್ಟು ಕಲಾ ಸೇವೆ ನಿರಂತರವಾಗಿ ನಡೆಯಲಿ ಎಂದು ನಾಡಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.




Continue Reading

Trending

Copyright © 2025 Deevatige

error: Content is protected !!