Connect with us

Bantawala

ನೇರಳಕಟ್ಟೆ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಸಿಬ್ಬಂದಿ ಮೇಲಿನ ದೂರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

Published

on

ವಿಟ್ಲ: ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಅಧಿಕಾರಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು (High Court) ತಡೆಯಾಜ್ಞೆ ನೀಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಬಂಟ್ವಾಳ ತಾಲೂಕಿನ ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಣಿ ಶಾಖೆಯ ಸಿಬ್ಬಂದಿ, ನೆಟ್ಟಮುತ್ತೂರು ನಿವಾಸಿ ಸೇಸಮ್ಮ (47 ವರ್ಷ) ಎಂಬುವವರು ಸಂಘದ ಪದಾಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಹಾಗೂ ಪ್ರಭಾರ ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 88/2026 ರಂತೆ ಜಾತಿ ನಿಂದನೆ ಮೊಕದ್ದಮೆ ದಾಖಲಾಗಿತ್ತು.

ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು:

ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಹಾಗೂ ತನಿಖಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕರಣದ ಮುಂದಿನ ತನಿಖೆ ಹಾಗೂ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನ್ಯಾಯಾಲಯದಲ್ಲಿ ವಾದ:

ನೇರಳಕಟ್ಟೆ ಸಹಕಾರ ಸಂಘದ ಪದಾಧಿಕಾರಿಗಳ ಪರವಾಗಿ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರು ವಾದ ಮಂಡಿಸಿದ್ದರು. ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಸದ್ಯಕ್ಕೆ ಈ ಪ್ರಕರಣದ ಕಾನೂನು ಪ್ರಕ್ರಿಯೆಗಳಿಗೆ ತಡೆ ನೀಡುವ ಮೂಲಕ ಸಂಘದ ಅಧ್ಯಕ್ಷರು ಹಾಗೂ ಸಿಬ್ಬಂದಿಗೆ ಸಮಾಧಾನ ತಂದಿದೆ.


ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಸಾಲೆತ್ತೂರು ಸಿರಿ ವಿದ್ಯಾಲಯಕ್ಕೆ ‘ಕರ್ಣಾಟಕ ಬ್ಯಾಂಕ್’ನಿಂದ ಬಸ್ ಕೊಡುಗೆ

Published

on

ಬಂಟ್ವಾಳ: ತಾಲೂಕಿನ ಸಾಲೆತ್ತೂರು ಗ್ರಾಮದ ಸಿರಿ ವಿದ್ಯಾಲಯಕ್ಕೆ ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ದೇಶದ ಅಗ್ರಗಣ್ಯ ಹಣಕಾಸು ಸಂಸ್ಥೆ ಕರ್ಣಾಟಕ ಬ್ಯಾಂಕ್, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೂತನ ಶಾಲಾ ಬಸ್ಸನ್ನು ಕೊಡುಗೆಯಾಗಿ ನೀಡಿದೆ.

19ನೇ ವರ್ಷದ ಸಂಭ್ರಮ – ಹತ್ತನೇ ತರಗತಿ ಆರಂಭ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುವ ಮಹದೋದ್ದೇಶದೊಂದಿಗೆ 2007ರಲ್ಲಿ ಆರಂಭವಾದ ಸಿರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯು ಪ್ರಸ್ತುತ 18 ವರ್ಷಗಳನ್ನು ಪೂರೈಸಿ 19ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಕಳೆದ ಸಾಲಿನಲ್ಲಿ 9ನೇ ತರಗತಿ ಆರಂಭಿಸಲಾಗಿದ್ದು, ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಹತ್ತನೇ ತರಗತಿ ಆರಂಭಗೊಳ್ಳುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನೀಡಿದ ಬಸ್ ಕೊಡುಗೆಯು ಶಾಲೆಯ ಪ್ರಗತಿಗೆ ಸಾಕ್ಷಿಯಾಗಿದೆ.

ಬಸ್ ಕೀಲಿ ಹಸ್ತಾಂತರ: ಸಾಲೆತ್ತೂರಿನ ಸಿರಿ ವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಮಂಗಳೂರು ವಲಯದ ಮುಖ್ಯ ವ್ಯವಸ್ಥಾಪಕರು ಹಾಗೂ ಕ್ಲಸ್ಟರ್ ಮುಖ್ಯಸ್ಥರಾದ ಶ್ರೀ ಲಕ್ಷ್ಮಿನಾರಾಯಣ ಪಿ.ಎಸ್. ಅವರು ನೂತನ ಬಸ್ಸಿನ ಕೀಲಿಯನ್ನು ವಿದ್ಯಾಲಯದ ಮುಖ್ಯಸ್ಥರಾದ ಸತೀಶ್ ಕುಮಾರ್ ಆಳ್ವ ಇರಾ ಬಾಳಿಕೆ ಅವರಿಗೆ ಹಸ್ತಾಂತರಿಸಿದರು.

ಈ ಶುಭ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಮಂಚಿ ಶಾಖೆಯ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಗೌಡ ಕೆ., ಪಿಎನ್‌ಬಿ ಮೆಟ್‌ಲೈಫ್‌ನ ಶ್ರೀ ಚರಣ್, ಸಿರಿ ವಿದ್ಯಾಲಯದ ಟ್ರಸ್ಟಿಗಳಾದ ಗಾಯತ್ರಿ ಶಿವರಾಮ್ ಶೆಟ್ಟಿ, ಕರುಣಾಕರ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.

ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 16 ಜನ ಶಿಕ್ಷಕ ವೃಂದವನ್ನು ಹೊಂದಿರುವ ಈ ವಿದ್ಯಾಲಯವು, ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಕರ್ಣಾಟಕ ಬ್ಯಾಂಕ್‌ನ ಈ ಸಾಮಾಜಿಕ ಕಾಳಜಿಯ ಕಾರ್ಯಕ್ಕೆ ಸ್ಥಳೀಯರು ಹಾಗೂ ಶಾಲಾ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

Continue Reading

Bantawala

ಬಂಟ್ವಾಳ-ಸುಳ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿ ಎಂ.ಎಸ್. ಮಹಮ್ಮದ್ ನೇಮಕ; ಕೆಪಿಸಿಸಿ ಆದೇಶ

Published

on

ವಿಟ್ಲ: ಮುಂಬರುವ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಹತ್ವದ ಹೆಜ್ಜೆ ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅನುಭವಿ ರಾಜಕಾರಣಿ ಎಂ.ಎಸ್. ಮಹಮ್ಮದ್ ಅವರನ್ನು ಬಂಟ್ವಾಳ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳ ನೂತನ ಉಸ್ತುವಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಅನುಭವಕ್ಕೆ ಸಿಕ್ಕ ಮನ್ನಣೆ: ಎಂ.ಎಸ್. ಮಹಮ್ಮದ್ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಈ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸತತ ಎರಡು ಅವಧಿಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಅಲ್ಲದೆ, ಮೂರು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಸದಸ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯ ಮಟ್ಟದಲ್ಲಿ ಪಕ್ಷದ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಅವರಿಗೆ, ಈಗ ಜಿಲ್ಲೆಯ ಎರಡು ಪ್ರಮುಖ ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ.

ಜಿ.ಎ. ಬಾವ ಅವರಿಗೆ ಆನೇಕಲ್ ಜವಾಬ್ದಾರಿ: ಈವರೆಗೆ ಬಂಟ್ವಾಳ ಮತ್ತು ಸುಳ್ಯ ಕ್ಷೇತ್ರಗಳ ಉಸ್ತುವಾರಿಯಾಗಿದ್ದ ಹಿರಿಯ ನಾಯಕ ಜಿ.ಎ. ಬಾವ ಅವರನ್ನು ಬೆಂಗಳೂರಿನ ಆನೇಕಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ವರ್ಗಾಯಿಸಲಾಗಿದೆ. ಎರಡೂ ಕ್ಷೇತ್ರಗಳ ಸಂಘಟನಾತ್ಮಕ ದೃಷ್ಟಿಯಿಂದ ಕೆಪಿಸಿಸಿ ಈ ಬದಲಾವಣೆ ಮಾಡಿದೆ.

ತಕ್ಷಣದಿಂದಲೇ ಜಾರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅನುಮೋದನೆಯೊಂದಿಗೆ, ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಜೆ.ಸಿ. ಚಂದ್ರಶೇಖರ್ ಅವರ ಆಡಳಿತ ವಿಭಾಗದಿಂದ ಈ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ನೇಮಕಗೊಂಡ ನೂತನ ಉಸ್ತುವಾರಿಗಳು ತಕ್ಷಣದಿಂದಲೇ ಆಯಾ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಎಂ.ಎಸ್. ಮಹಮ್ಮದ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕರು. ಸುಮಾರು 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಇವರು, ಕೆಳ ಹಂತದಿಂದ ರಾಜ್ಯ ಮಟ್ಟದವರೆಗೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಆರಂಭಿಕ ರಾಜಕೀಯ: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ವೃತ್ತಿಜೀವನ ಆರಂಭಿಸಿದ ಇವರು, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ನಾಯಕತ್ವ: ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿ, ಸ್ಥಳೀಯವಾಗಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ಥಳೀಯ ಆಡಳಿತ: ಇವರು ಸತತ ಮೂರು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಡಳಿತಾತ್ಮಕ ಅನುಭವವನ್ನೂ ಹೊಂದಿದ್ದಾರೆ.

ಕೆಪಿಸಿಸಿ ಜವಾಬ್ದಾರಿಗಳು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ (KPCC) ಸದಸ್ಯರಾಗಿ, ಕಾರ್ಯದರ್ಶಿಯಾಗಿ ಮತ್ತು ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನೂತನ ಜವಾಬ್ದಾರಿ: ಇದೀಗ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷವು ಇವರ ಅನುಭವವನ್ನು ಪರಿಗಣಿಸಿ, ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಕ್ಷೇತ್ರಗಳಾದ ಬಂಟ್ವಾಳ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ.

ವಿಟ್ಲ ಭಾಗದವರೇ ಆದ ಎಂ.ಎಸ್. ಮಹಮ್ಮದ್ ಅವರು ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿರುವ ಸಂಘಟನಾ ಚತುರ ಎಂದು ಪಕ್ಷದ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ.

Continue Reading

Bantawala

ಬಂಟ್ವಾಳ: ಪುಣಚದಲ್ಲಿ ಯುವಕ ನೇಣಿಗೆ ಶರಣು

Published

on

ಪುಣಚ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರಿಬೆಟ್ಟು ನಿವಾಸಿ ಕುಂಞಣ್ಣ ಮಣಿಯಾಣಿ ಅವರ ಪುತ್ರ ಹರ್ಷಿತ್ ಮಣಿಯಾಣಿ (29) ಶನಿವಾರ ಬೆಳಿಗ್ಗೆ ತಮ್ಮ ಮನೆಯ ಹಿಂಭಾಗದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಘಟನೆಯ ವಿವರ: ಮೃತ ಹರ್ಷಿತ್ ಕಳೆದ ಐದಾರು ವರ್ಷಗಳಿಂದ ಪುಣಚ ಗ್ರಾಮದ ಬೈಲುಗುತ್ತು ಜಗನ್ನಾಥ ರೈ ಅವರ ಪುತ್ರಿ ಶುಕ್ಲಾ ವಿಜಯ ರೈ ಅವರ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪುತ್ತೂರಿನಲ್ಲಿರುವ ಅವರ ಜಮೀನಿಗೆ ಕೆಲಸದಾಳುಗಳನ್ನು ಕರೆದುಕೊಂಡು ಹೋಗುವ ಮತ್ತು ಇತರೆ ಕೆಲಸಗಳನ್ನು ಇವರು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದರು. ಒಂದೆರಡು ಗೆಳೆಯರನ್ನು ಬಿಟ್ಟರೆ ಯಾರ ಸಂಪರ್ಕದಲ್ಲಿಯೂ ಇರಲಿಲ್ಲ. ಶುಕ್ರವಾರ ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಹೊರಾಂಗಣದಲ್ಲಿ ಮಲಗಿದ್ದ ಹರ್ಷಿತ್, ಶನಿವಾರ ಬೆಳಿಗ್ಗೆ ಮನೆಯವರು ನೋಡುವಾಗ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆಯ ಹಿಂಭಾಗದ ಗುಡ್ಡದ ಮರವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಯಾರೊಂದಿಗೂ ಅತಿಯಾಗಿ ಮಾತನಾಡದ ಸಾಧು ಸ್ವಭಾವದವರಾಗಿದ್ದ ಹರ್ಷಿತ್, ಕಳೆದ ಒಂದು ವಾರದಿಂದ ಇನ್ನಷ್ಟು ಮೌನವಾಗಿ ಯಾರಲ್ಲೂ ಮಾತನಾಡದೆ ಯಾವುದೋ ಬೇಸರದಲ್ಲಿ ಬಳಲುತ್ತಿದ್ದರು ಎನ್ನಲಾಗಿದೆ. ತಾಯಿಯ ಅನಾರೋಗ್ಯದ ಬಗ್ಗೆಯೂ ಅತಿಯಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ. ಆದರೆ, ಇವರ ಈ ಸಾವಿಗೆ ಯಾರಾದರೂ ಬೆದರಿಕೆ ಹಾಕಿರಬಹುದೇ ಎಂಬ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬೆದರಿಕೆಗೆ ಹೆದರಿ ಹರ್ಷಿತ್ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಕುಟುಂಬದಲ್ಲಿ ಶೋಕದ ಛಾಯೆ: ಮೃತ ಯುವಕ ತಂದೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯೊಂದಿಗೆ ವಾಸವಾಗಿದ್ದರು. ಇಬ್ಬರು ಸಹೋದರಿಯರಿಗೆ ಈಗಾಗಲೇ ವಿವಾಹವಾಗಿದೆ. ಆಘಾತದ ಮೇಲೆ ಆಘಾತವೆಂಬಂತೆ, ಹರ್ಷಿತ್ ಅವರ ತಂದೆಯ ಸಹೋದರಿಯ ಪುತ್ರ ಕೂಡ ಹಲವಾರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದೇ ಏಪ್ರಿಲ್ 23ರಂದು ಅವರ ತಂದೆಯ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ ನಿಗದಿಯಾಗಿದ್ದು, ಈಗಾಗಲೇ ಗೊನೆ ಮುಹೂರ್ತವೂ ನೆರವೇರಿತ್ತು. ಶುಭ ಕಾರ್ಯದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮಗನ ಸಾವು ಬರಸಿಡಿಲು ಬಡಿದಂತಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

Continue Reading

Trending

Copyright © 2025 Deevatige

error: Content is protected !!