Connect with us

Condolences

13 ವರ್ಷಗಳ ಮೌನಕ್ಕೆ ಮುಕ್ತಿ: ಹರೀಶ್ ರಾಣಾಗೆ ಕಣ್ಣೀರಿನ ‘ಗೌರವಯುತ’ ವಿದಾಯ

Published

on

ಅದು ಕೇವಲ ಒಂದು ಆಸ್ಪತ್ರೆಯ ವಾರ್ಡ್ ಆಗಿರಲಿಲ್ಲ, ಬದಲಿಗೆ ದಶಕಗಳ ಕಾಲ ನಡೆದ ಮೌನ ಯುದ್ಧವೊಂದು ಅಂತ್ಯವಾಗುತ್ತಿದ್ದ ರಣರಂಗವಾಗಿತ್ತು. ಕಳೆದ 13 ವರ್ಷಗಳಿಂದ ಏಮ್ಸ್ ಆಸ್ಪತ್ರೆಯ ಹಾಸಿಗೆಯ ಮೇಲೆ ಚಲನರಹಿತವಾಗಿ ಮಲಗಿದ್ದ 31 ವರ್ಷದ ಹರೀಶ್ ರಾಣಾ, ಕೊನೆಗೂ ನೋವುಗಳಿಲ್ಲದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

“ಹೊರಡುವ ಸಮಯವಿದು… ಎಲ್ಲರನ್ನೂ ಕ್ಷಮಿಸು”
ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 22 ಸೆಕೆಂಡುಗಳ ಆ ವಿಡಿಯೋ ಕಲ್ಲು ಮನಸ್ಸನ್ನೂ ಕರಗಿಸುವಂತಿದೆ. ರಾಣಾ ಅವರ ಹಾಸಿಗೆಯ ಸುತ್ತ ಜಮಾಯಿಸಿದ್ದ ಕುಟುಂಬಸ್ಥರು, ಭಾರವಾದ ಹೃದಯದಿಂದ ಅವರಿಗೆ ಅಂತಿಮ ವಿದಾಯ ಹೇಳಿದರು. ಬ್ರಹ್ಮಕುಮಾರಿ ಸಂಸ್ಥೆಯ ಸಹೋದರಿಯೊಬ್ಬರು ರಾಣಾ ಹಣೆಗೆ ತಿಲಕವನ್ನಿಟ್ಟು, “ನೀನು ಹೊರಡುವ ಸಮಯ ಬಂದಿದೆ, ಎಲ್ಲರನ್ನೂ ಕ್ಷಮಿಸು” ಎಂದು ತಲೆಯ ಮೇಲೆ ಕೈ ಸವರುತ್ತಾ ಹೇಳುತ್ತಿದ್ದಾಗ, ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವವಾಗಿದ್ದವು. ಪಕ್ಕದಲ್ಲೇ ಕುಳಿತಿದ್ದ ತಾಯಿಯ ಮೌನ ರೋದನೆ ಆ 13 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಸಂಕಟಕ್ಕೆ ಸಾಕ್ಷಿಯಾಗಿತ್ತು.

ನ್ಯಾಯಾಲಯದ ಐತಿಹಾಸಿಕ ತೀರ್ಪು
2013ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಮೆದುಳಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ರಾಣಾ, ಅಂದಿನಿಂದ ಕೋಮಾದಲ್ಲಿದ್ದರು. ಉಸಿರಾಟಕ್ಕೆ ಮತ್ತು ಆಹಾರಕ್ಕೆ ಪೈಪ್‌ಗಳನ್ನೇ ಆಶ್ರಯಿಸಿದ್ದ ಮಗನ ಸ್ಥಿತಿಯನ್ನು ಕಂಡು ಕಂಗೆಟ್ಟ ಪೋಷಕರು, ‘ದಯಾಮರಣ’ಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆಯ ನಂತರ, ಮಾ. 11 ರಂದು ನ್ಯಾಯಾಲಯವು ದಯಾಮರಣಕ್ಕೆ ಅನುಮತಿ ನೀಡಿತು. ಇದು ದೇಶದ ಕಾನೂನು ಇತಿಹಾಸದಲ್ಲಿ ಒಂದು ಮಹತ್ವದ ಮತ್ತು ಅತ್ಯಂತ ಭಾವನಾತ್ಮಕ ತೀರ್ಪಾಗಿದೆ.

ಹೋರಾಟದ ಅಂತ್ಯ
ಕುಟುಂಬದ ಅಂತಿಮ ವಿದಾಯದ ಬಳಿಕ ವೈದ್ಯರು ಹಂತ ಹಂತವಾಗಿ ಜೀವ ರಕ್ಷಕ ಸಾಧನಗಳನ್ನು ಹಿಂತೆಗೆದುಕೊಂಡರು. ಹರೀಶ್ ರಾಣಾ ಅವರ ನಿರ್ಗಮನವು ಕೇವಲ ಒಂದು ಸಾವು ಮಾತ್ರವಲ್ಲ, ಅದು ಪ್ರೀತಿಪಾತ್ರರು ತಮ್ಮ ಮಗನಿಗೆ ದೀರ್ಘಕಾಲದ ನರಳಾಟದಿಂದ ನೀಡಿದ ‘ವಿಮೋಚನೆ’.

“ಪ್ರೀತಿ ಎಂದರೆ ಕೇವಲ ಹಿಡಿದಿಟ್ಟುಕೊಳ್ಳುವುದಲ್ಲ, ನೋವಿನಲ್ಲಿರುವ ಜೀವಕ್ಕೆ ಮುಕ್ತಿ ನೀಡಿ ಕಳುಹಿಸಿಕೊಡುವುದೂ ಹೌದು” ಎಂಬುದಕ್ಕೆ ರಾಣಾ ಕುಟುಂಬದ ಈ ನಿರ್ಧಾರ ಸಾಕ್ಷಿಯಾಯಿತು

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಸ್ನಾನಕ್ಕಿಳಿದ ಹೈದರಾಬಾದ್ ಮೂಲದ ತಂದೆ-ಮಗ ಸೇರಿ ಐವರು ನೀರುಪಾಲು!

Published

on

ರಾಯಚೂರು/ಮಂತ್ರಾಲಯ: ರಾಯಚೂರು ಜಿಲ್ಲೆಯ ಗಡಿಭಾಗದಲ್ಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಂತ್ರಾಲಯದ ಬಳಿ ಭೀಕರ ದುರಂತವೊಂದು ಸಂಭವಿಸಿದೆ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಒಂದೇ ಕುಟುಂಬದ ಐವರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ಮೃತರನ್ನು ಹೈದರಾಬಾದ್ ಮೂಲದ ಸತೀಶ್ (35) ಮತ್ತು ಅವರ 5 ವರ್ಷದ ಪುತ್ರ ಯುವನ ಚಂದ್ರ, ಮಂತ್ರಾಲಯ ಗ್ರಾಮದ ರಾಘವೇಂದ್ರ (25) ಹಾಗೂ ಧನುಷ್ (23) ಮತ್ತು ಉರವಕೊಂಡದ ಸಂಧ್ಯಾ (22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬ ಮಹಿಳೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸತ್ಯನಾರಾಯಣ ಪೂಜೆಗೆ ಬಂದಿದ್ದಾಗ ದುರಂತ: ಪೊಲೀಸ್ ಮೂಲಗಳ ಪ್ರಕಾರ, ಸುಮಾರು 10 ಜನರಿದ್ದ ಸಂಬಂಧಿಕರ ಗುಂಪೊಂದು ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಆಯೋಜಿಸಲಾಗಿದ್ದ ಕೌಟುಂಬಿಕ ಕಾರ್ಯಕ್ರಮ ಹಾಗೂ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಬಂದಿತ್ತು. ಪೂಜೆಯ ಬಳಿಕ ನದಿಯ ದಂಡೆಗೆ ತೆರಳಿದ್ದ ಇವರಲ್ಲಿ ಆರು ಜನರು ತುಂಗಭದ್ರಾ ನದಿಗೆ ಈಜಲು ಮತ್ತು ಸ್ನಾನ ಮಾಡಲು ಇಳಿದಿದ್ದಾರೆ. ಆದರೆ, ನೀರಿನ ಆಳದ ಅಂದಾಜು ಸಿಗದೆ ತೀವ್ರ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ನದಿ ದಂಡೆಯಲ್ಲಿದ್ದ ಇತರ ಸಂಬಂಧಿಕರು ತಕ್ಷಣವೇ ಕೂಗಾಡಲು ಆರಂಭಿಸಿದಾಗ, ಸ್ಥಳೀಯ ಮೀನುಗಾರರು ಮತ್ತು ಮಂತ್ರಾಲಯ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಹೈದರಾಬಾದ್ ಮೂಲದ ತಂದೆ ಸತೀಶ್ ಹಾಗೂ ಮಗ ಯುವನ ಚಂದ್ರ ಸೇರಿದಂತೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನುಳಿದವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡದ (SDRF) ಸಹಾಯದೊಂದಿಗೆ ತೀವ್ರ ಶೋಕ ಕಾರ್ಯ ಮುಂದುವರಿದಿದೆ.

ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ನದಿಯಲ್ಲಿ ನೀರುಪಾಲಾದವರ ಹುಡುಕಾಟ ವೇಳೆ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.

ಪವಿತ್ರ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಹಾಗೂ ಪೂಜೆ ಮುಗಿಸಿದ ತಕ್ಷಣವೇ ಇಡೀ ಕುಟುಂಬ ದುರಂತಕ್ಕೀಡಾಗಿರುವುದು ಸ್ಥಳದಲ್ಲಿ ಜಮಾಯಿಸಿರುವ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ




Continue Reading

Condolences

ಚಾಮರಾಜನಗರದಲ್ಲಿ ಉಬಾರ್‌ ಮಂಜ ಬೈದ್ಯನ ಸಂಸ್ಮರಣೆ ಅಗೋಚರ ಕ್ರಾಂತಿಕಾರಿಗಳ ಇತಿಹಾಸ ಯುವ ಸಮುದಾಯಕ್ಕೆ ತಲುಪಲಿ: ಸುರೇಶ್ ಎನ್. ಋಗ್ವೇದಿ

Published

on

ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಗೋಚರವಾಗಿ ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ಜೀವನ ಚರಿತ್ರೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಜಾಗೃತಿಯ ಕಾರ್ಯವಾಗಬೇಕಿದೆ. ವಿವಿಧ ಪ್ರಾಂತ್ಯಗಳಲ್ಲಿ ಹೋರಾಡಿ ಬಲಿದಾನಗೈದ ಕ್ರಾಂತಿಕಾರಿಗಳನ್ನು ಗೌರವಿಸುವ ಜೊತೆಗೆ, ಅವರ ಇತಿಹಾಸವನ್ನು ಸಮಗ್ರವಾಗಿ ಅನಾವರಣಗೊಳಿಸುವ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ನಗರದ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ‘ಜೈ ಹಿಂದ್ ಕಟ್ಟೆ’ಯಲ್ಲಿ ಹಮ್ಮಿಕೊಂಡಿದ್ದ, ಭಾರತದ ಸ್ವಾತಂತ್ರ್ಯ ಚಳುವಳಿಯ ವೀರ ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯ ರವರ ಕೊಡುಗೆಗಳ ಕುರಿತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ್ದ ಮಹಾವೀರ!

ಮಂಜ ಬೈದ್ಯರವರ ಸಾಹಸಗಾಥೆಯನ್ನು ಸ್ಮರಿಸಿದ ಸುರೇಶ್ ಎನ್. ಋಗ್ವೇದಿ, “ಉಪ್ಪಿನಂಗಡಿ ಗ್ರಾಮದವರಾದ ಮಂಜ ಬೈದ್ಯರವರು ಬ್ರಿಟಿಷರ ದೌರ್ಜನ್ಯ, ಶೋಷಣೆ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ ತಮ್ಮ ಖಜಾನೆಯ ಹುದ್ದೆಗೆ ರಾಜೀನಾಮೆ ನೀಡಿ ಕ್ರಾಂತಿಯ ಹಾದಿ ಹಿಡಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ, ಅಂದರೆ 1837 ರಲ್ಲೇ ಬ್ರಿಟಿಷರನ್ನು ತುಳುನಾಡಿನಲ್ಲಿ ಕಟ್ಟಿಹಾಕುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದವರು ಇವರು” ಎಂದರು.

“ಖಜಾನೆಯ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡು, ಅದನ್ನು ಮತ್ತೊಬ್ಬ ಕ್ರಾಂತಿಕಾರಿ ಕಲ್ಯಾಣ ಸ್ವಾಮಿಗೆ ತಲುಪಿಸಿ ಅವರ ಮೂಲಕ ಶಸ್ತ್ರಾಸ್ತ್ರ ಹೋರಾಟ ಸಂಘಟಿಸಿದವರು ಮಂಜ ಬೈದ್ಯರು. ಬ್ರಿಟಿಷರನ್ನು ಮಟ್ಟಹಾಕಿ ಬರೋಬ್ಬರಿ 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರ ಮುಕ್ತ ವಲಯವನ್ನಾಗಿ ಮಾಡಿದ ಮಹಾ ಕ್ರಾಂತಿಕಾರಿ ಅವರು. ತುಳುನಾಡಿನಲ್ಲಿ ಹಾಲೇರಿ ವಂಶಸ್ಥರ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂತಿಮವಾಗಿ 1837ರ ಮೇ 27ರಂದು ಇವರನ್ನು ಬ್ರಿಟಿಷರು ನೇಣುಗಂಬಕ್ಕೇರಿಸಿದರು. ಈ ದೌರ್ಜನ್ಯವನ್ನು ಭಾರತೀಯರು ಎಂದಿಗೂ ಮರೆಯಲಾರರು” ಎಂದು ಅವರು ಮಾರ್ಮಿಕವಾಗಿ ನುಡಿದರು.

ಸ್ಪೂರ್ತಿದಾಯಕ ಇತಿಹಾಸ ಹೊರಬರಲಿ:

ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ಅತ್ಯಂತ ಸ್ಪೂರ್ತಿದಾಯಕವಾಗಿದ್ದು, ಯುವಕರಲ್ಲಿ ದೇಶಾಭಿಮಾನ ಹಾಗೂ ಹೋರಾಟದ ಮಾನಸಿಕತೆಯನ್ನು ಬೆಳೆಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಅಡಗಿರುವ ಇಂತಹ ನೈಜ ಇತಿಹಾಸ ಹಾಗೂ ಸ್ವಾತಂತ್ರ್ಯ ಪ್ರೇಮಿಗಳ ಸಮಗ್ರ ಹೋರಾಟದ ವಿವರಗಳು ಬೆಳಕಿಗೆ ಬರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರದ್ಧಾಂಜಲಿ ಸಲ್ಲಿಕೆ:

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಡಿ. ಮುರುಗೇಶ್ ಅವರು ಉಭಾರ ಮಂಜ ಬೈದ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕ್ರಾಂತಿಕಾರಿಯ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಪ್ರಮುಖರಾದ ರವಿ, ಭೋಜರಾಜ್, ಸಾನಿಕ ಹಾಗೂ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.




Continue Reading

Condolences

ಬ್ರಿಟಿಷರ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ: ಮಂಜ ಬೈದ್ಯರ ಹೆಸರನ್ನು ಶಾಶ್ವತವಾಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ – ಸಂಸದ ಕೋಟ ಶ್ರೀನಿವಾಸ ಪೂಜಾರಿ

Published

on

ಉಪ್ಪಿನಂಗಡಿ: “ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಧೀರೋದಾತ್ತ ಹೋರಾಟ ನಡೆಸಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯರ ದೇಶಪ್ರೇಮದ ಚರಿತ್ರೆ 190 ವರ್ಷಗಳ ಬಳಿಕ ಮುನ್ನೆಲೆಗೆ ಬರುತ್ತಿರುವುದು ವಿಶೇಷವಾಗಿದೆ. ಅವರ ಹೆಸರನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಸುವ ಕಾರ್ಯದತ್ತ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ,” ಎಂದು ಸಂಸದ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಧ್ಯಯನ ವರದಿ ಮಂಡನೆ ಮತ್ತು ಗಣ್ಯರ ಅನಿಸಿಕೆ: ಕಾರ್ಯಕ್ರಮದಲ್ಲಿ ಪತ್ರಕರ್ತ ಉದಯಕುಮಾರ್ ಅವರು ಮಂಜ ಬೈದ್ಯರ ಕುರಿತಾದ ಸುದೀರ್ಘ ಅಧ್ಯಯನ ವರದಿಯನ್ನು ಮಂಡಿಸಿದರು. ವೈದ್ಯರಾದ ಡಾ. ಸುಪ್ರೀತ್ ಲೋಬೋ, ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್‌ ಬಸ್ತಿಕಾರ್ ಮಾತನಾಡಿ ವಿಚಾರ ಮಂಡಿಸಿದರು.

1837ರಲ್ಲಿ ಅಂದಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯ ಖಜಾನೆಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯರು, ಬ್ರಿಟಿಷ್ ಕಂಪೆನಿ ಸರ್ಕಾರದ ಅಮಾನುಷ ನಡಾವಳಿಗಳನ್ನು ಸಹಿಸದೆ ತಾವೇ ಕರ್ತವ್ಯ ನಿರ್ವಹಿಸುತ್ತಿದ್ದ ಖಜಾನೆಯ ಅಧಿಕಾರಿಗಳನ್ನು ಕಟ್ಟಿಹಾಕಿದ್ದರು. ಬಳಿಕ ಖಜಾನೆಯಲ್ಲಿದ್ದ ಧನಕನಕಗಳನ್ನು ಬಾಚಿಕೊಂಡು, ಆ ವೇಳೆ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಕಲ್ಯಾಣಸ್ವಾಮಿಗೆ ತಲುಪಿಸಿದ್ದರು. ಆ ಮೂಲಕ 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ ಇತಿಹಾಸವನ್ನು ಸ್ಮರಿಸಿದ ಗಣ್ಯರು, ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಇವರ ತ್ಯಾಗ 190 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವುದು ಹೆಮ್ಮೆಯ ವಿಚಾರ ಎಂದರು.

ಸರ್ಕಾರದ ಮಟ್ಟದಲ್ಲಿ ಶಾಶ್ವತ ಯೋಜನೆ: ಕೋಟ ಭರವಸೆ ಮುಂದುವರಿದು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, “ಮಂಜ ಬೈದ್ಯರ ಸಂಸ್ಮರಣೆ ಮಾಡುವ ಈ ದಿನ ನಮ್ಮೆಲ್ಲರ ಬದುಕಿನ ಸಾರ್ಥಕ್ಯದ ಕ್ಷಣವಾಗಿದೆ. ಇವರ ನೆನಪನ್ನು ಶಾಶ್ವತವಾಗಿ ಅಮರವಾಗಿಸಲು ಸರ್ಕಾರದ ನೆಲೆಯಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ನಾನು ಮತ್ತು ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ಅವರು ಚರ್ಚಿಸಿ, ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ,” ಎಂದು ಭರವಸೆ ನೀಡಿದರು.

ಕಲ್ಲೇರಿಯಲ್ಲಿ ವೃತ್ತ ಮತ್ತು ಸ್ಮಾರಕ ನಿರ್ಮಾಣಕ್ಕೆ ಸಹಕಾರ: ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, “ಬ್ರಿಟಿಷರ ದೌರ್ಜನ್ಯ ಮತ್ತು ಕಪಿಮುಷ್ಟಿಯಿಂದ ನಮ್ಮ ಸಮಾಜ ಹಾಗೂ ಜನರನ್ನು ಪಾರು ಮಾಡಲು ಕ್ರಾಂತಿಯ ಕಿಚ್ಚು ಹೊತ್ತಿಸಿ ಪ್ರಾಣತ್ಯಾಗ ಮಾಡಿದ ಅಪ್ರತಿಮ ವೀರ ಮಂಜ ಬೈದ್ಯರು. ಸಂಸ್ಮರಣಾ ಸಮಿತಿಯ ಬೇಡಿಕೆಯಂತೆ ನನ್ನ ಕ್ಷೇತ್ರ ವ್ಯಾಪ್ತಿಯ ಕಲ್ಲೇರಿಯಲ್ಲಿ ವೃತ್ತ (ಸರ್ಕಲ್) ನಿರ್ಮಿಸಿ ಅದಕ್ಕೆ ಮಂಜ ಬೈದ್ಯರ ಹೆಸರಿಡಲು ಸಂಪೂರ್ಣ ಸಹಕಾರ ನೀಡಲಾಗುವುದು. ಇದರೊಂದಿಗೆ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಕಟ್ಟಡವೊಂದಕ್ಕೆ ಇವರ ಹೆಸರಿಡುವ ಹಾಗೂ ಅವರ ಮೂಲ ಮನೆಯ ಬಳಿ ಸ್ಮಾರಕ ನಿರ್ಮಿಸುವ ಕಾರ್ಯಕ್ಕೆ ಎಲ್ಲರ ಸಲಹೆ ಪಡೆದು ಮುಂದುವರಿಯಲಾಗುವುದು,” ಎಂದರು.

ಒಗ್ಗಟ್ಟಿನಿಂದ ಹೋರಾಡಿದ್ದರೆ ಬ್ರಿಟಿಷರು ಆಳುತ್ತಿರಲಿಲ್ಲ: ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, “ಮಂಜ ಬೈದ್ಯರಂತಹ ಕ್ರಾಂತಿಕಾರಿಗಳ ಹೋರಾಟದ ಸಮಯದಲ್ಲಿ ಇಡೀ ದೇಶವೇ ಒಂದಾಗಿ ನಿಂತಿದ್ದರೆ ಬ್ರಿಟಿಷರು ನಮ್ಮನ್ನು ಆಳಲು ಸಾಧ್ಯವಿರುತ್ತಿರಲಿಲ್ಲ. ಮಂಜ ಬೈದ್ಯರ ಬಲಿದಾನ ಇತಿಹಾಸದ ಪುಟಗಳಲ್ಲಿ ಮುನ್ನೆಲೆಗೆ ಬರಲು 190 ವರ್ಷಗಳು ಬೇಕಾಯಿತು. ಈಗಲಾದರೂ ಅವರ ತ್ಯಾಗವನ್ನು ಅಮರವಾಗಿಸುವ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ,” ಎಂದರು.

ಭವ್ಯ ಚಾಲನೆ ಹಾಗೂ ಇತಿಹಾಸದ ಹಿನ್ನೆಲೆ: ‘ವಂದೇ ಮಾತರಂ’ ಗೀತೆಯ ಗಾಯನದೊಂದಿಗೆ ಆರಂಭವಾದ ಈ ಅಪೂರ್ವ ಕಾರ್ಯಕ್ರಮಕ್ಕೆ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್ ಅವರು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭವ್ಯ ಚಾಲನೆ ನೀಡಿದರು.

1837ರಲ್ಲಿ ನಡೆದ ಐತಿಹಾಸಿಕ ‘ಅಮರ ಸುಳ್ಯ ದಂಗೆ’ಯ ಮೂಲಕ ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ, ಹಾಲೇರಿ ರಾಜವಂಶಸ್ಥರ ಧ್ವಜ ಹಾರಿಸಿ ಕೇವಲ 13 ದಿನಗಳ ಕಾಲ ತುಳುನಾಡಿಗೆ ಸ್ವಾತಂತ್ರ್ಯ ತಂದುಕೊಡಲಾಗಿತ್ತು. ತದನಂತರ ಬ್ರಿಟಿಷ್ ಸೈನ್ಯ ಇವರನ್ನು ಬಂಧಿಸಿ 1837ರ ಮೇ 27ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ನೇಣುಗಂಬಕ್ಕೇರಿಸಿತು. ತಾಯ್ನಾಡಿನ ದಾಸ್ಯ ಮುಕ್ತಿಗಾಗಿ ಬಲಿದಾನಗೈದ ಈ ಮಹಾನ್ ಚೇತನದ ಸ್ಮರಣೆ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದೆ.

ಕಾರ್ಯಕ್ರಮದಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಸಂಪತ್ ಸುವರ್ಣ, ವಿವಿಧ ಸಂಘಟನೆಗಳ ಪ್ರಮುಖರು, ಮಂಜ ಬೈದ್ಯರ ವಂಶಸ್ಥರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ವೀರ ಹೋರಾಟಗಾರನಿಗೆ ಭಾವಪೂರ್ಣ ನಮನ ಸಲ್ಲಿಸಿದರು.ಜಾತಿ, ಧರ್ಮ ಮತ್ತು ರಾಜಕೀಯ ಭೇದ ಮರೆತು ಇತಿಹಾಸದ ವೀರನನ್ನು ಸ್ಮರಿಸಿದ ಕ್ಷಣಕ್ಕೆ ಉಪ್ಪಿನಂಗಡಿ ಸಾಕ್ಷಿಯಾಯಿತು.




Continue Reading

Trending

Copyright © 2025 Deevatige

error: Content is protected !!