Connect with us

Dakshina Kannada

ತುಳು ಸಾಹಿತ್ಯ ಅನುವಾದ ವ್ಯಾಪಿಸಲಿ : ಪ್ರೊ.ವಿವೇಕ ರೈ;ಅಮೃತ ಸೋಮೇಶ್ವರರ ನಾಟಕಗಳ ಇಂಗ್ಲಿಷ್ ಅನುವಾದ ಬಿಡುಗಡೆ

Published

on

ಮಹಾನಗರ: ಅಮೃತ ಸೋಮೇಶ್ವರ ಅವರಂತಹ ಮೇರು ಬರಹಗಾರರ ತುಳು ಕೃತಿಗಳು ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದಗೊಂಡಾಗ ತುಳುವಿನ ಸತ್ವ ಹಾಗೂ ಕಂಪು ತುಳುನಾಡಿನ ಆಚೆಗೂ ಪಸರಿಸುವುದು ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅವರು ಹೇಳಿದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಇಂಗ್ಲಿಷ್, ಕನ್ನಡ ಹಾಗೂ ತುಳು ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಅಮೃತ ಸೋಮೇಶ್ವರ ಅವರ ಇಂಗ್ಲಿಷ್ ಗೆ ಅನುವಾದಗೊಂಡ ಗೋಂದೋಳು ಮತ್ತು ಇತರ ನಾಟಕ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂದೇ ಕೃತಿಯ ಅನುವಾದ ವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಪಶ್ಚಿಮ ದೇಶಗಳಲ್ಲಿ ಒಂದು ಪುಸ್ತಕದ 10ರಿಂದ 20 ಬೇರೆ ಬೇರೆ ಮಾದರಿಯ ಅನುವಾದಗಳು ಪ್ರಕಟವಾಗುತ್ತಿವೆ, ನಮ್ಮಲ್ಲಿಯೂ ಅನುವಾದವನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕಿದೆ ಎಂದು ವಿವೇಕ ರೈ ಅವರು ಹೇಳಿದರು.


ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿಯೂ ಅನುವಾದ ಕೇಂದ್ರ ಆರಂಭವಾಗಲಿ ಎಂದು ವಿವೇಕ ರೈ ಅವರು ಆಶಯ ವ್ಯಕ್ತಪಡಿಸಿದರು.
ನಮ್ಮನ್ನು ಅಗಲಿರುವ ಹಿರಿಯ ಸಾಹಿತಿ, ಸಾಂಸ್ಕೃತಿಕ ಚೇತನಗಳ ಬರಹವನ್ನು ಓದುವುದು, ತರ್ಜುಮೆ ಮಾಡುವುದು, ಅವರ ನಾಟಕಗಳ ಪ್ರಯೋಗಗಳನ್ನು ಆಗಾಗ್ಗೆ ಮಾಡುವ ಮೂಲಕ ಜನಮಾನಸದಲ್ಲಿ ಹಿರಿಯರ ನೆನಪುಗಳನ್ನು ನಿರಂತರವಾಗಿ ಉಳಿಸಬೇಕಾಗಿದೆ ಎಂದು ವಿವೇಕ ರೈ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ| ಡಾ| ಪ್ರವೀಣ್ ಮಾರ್ಟಿಸ್ ಅವರು ಮಾತನಾಡಿ, ವಿ.ವಿಯಲ್ಲಿ ಈಗಾಗಲೇ ತುಳು ವಿಭಾಗ ಆರಂಭಿಸಲಾಗಿದೆ. ತುಳು ಪೀಠ ಕೂಡ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ಮುದ್ದು ಮೂಡುಬೆಳ್ಳೆ ಅವರು ಅಮೃತರ ನಾಟಕಗಳ ವೈಶಿಷ್ಟ್ಯತೆ ಬಗ್ಗೆ ಮಾತನಾಡಿದರು.
ಕಲಾವಿದ ಗೋಪಿ ಅವರು 1994ರಲ್ಲಿ ರಚಿಸಿರುವ ತುಳು ಅಕಾಡೆಮಿಯ ಲಾಂಛನವನ್ನು ಅವರೇ ವರ್ಣಮಯವಾಗಿ ಮರು ವಿನ್ಯಾಸಗೊಳಿಸಿದ್ದು, ಈ ವರ್ಣಮಯ ಲಾಂಛನವನ್ನು ಪ್ರೊ. ವಿವೇಕ ರೈ ಅವರು ಅನಾವರಣಗೊಳಿಸಿದರು.
ಕೃತಿಗಳ ಅನುವಾದಕಿ ಸಂತ ಅಲೋಶಿಯಸ್ ಪರಿಗಣಿತ ವಿ.ವಿಯ ಆಂಗ್ಲ ಭಾಷಾ ಉಪನ್ಯಾಸಕಿ ಡಾ| ಸಿಲ್ವಿಯಾ ರೇಗೊ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಸಹ ಪ್ರಾಧ್ಯಾಪಕ ಡಾ| ಚೇತನ್ ಸೋಮೇಶ್ವರ, ಅಲೋಷಿಯಸ್ ವಿ.ವಿಯ ಭಾಷಾ ನಿಕಾಯದ ಡೀನ್ ಡಾ.ಮಹಾಲಿಂಗ ಭಟ್ ಉಪಸ್ಥಿತರಿದ್ದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕಾಡೆಮಿಯ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಗಳು ಗೊಂದೋಳು ತುಳು ಹಾಡನ್ನು ಪ್ರಸ್ತುತಪಡಿಸಿದರು.
ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಡಾ.ಮೆಲಿಶಾ ಗೋವಿಯಸ್ ಸ್ವಾಗತಿಸಿದರು, ತುಳು ವಿಭಾಗದ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ವಂದಿಸಿದರು.

Continue Reading
Advertisement

award

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಡಾ. ಅರುಣ್ ಕೆ. ಮತ್ತು ಎಸಿಪಿ ನಜ್ಮಾ ಫಾರೂಕಿ ಸೇರಿದಂತೆ ಜಿಲ್ಲೆಯ ಹಲವು ಪೊಲೀಸರಿಗೆ ಮುಖ್ಯಮಂತ್ರಿ ಚಿನ್ನದ ಪದಕದ ಗೌರವ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ (SP) ಡಾ. ಅರುಣ್ ಕೆ. ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಪದಕ ಲಭಿಸಿದೆ. ಅವರೊಂದಿಗೆ ಮಂಗಳೂರು ನಗರದ ಸಂಚಾರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ (ACP) ನಜ್ಮಾ ಫಾರೂಕಿ ಅವರಿಗೂ ಚಿನ್ನದ ಪದಕ ಪ್ರಕಟಗೊಂಡಿದೆ.


ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕದ ಗರಿ ಪ್ರಕಟಗೊಂಡಿದ್ದು, ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಈ ಗೌರವವನ್ನು ಘೋಷಿಸಿದೆ.
ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸ್ಪೆಷಲ್ ಎಆರ್‌ಎಸ್‌ಐ, 7ನೇ ಪಡೆ ಕೆಎಸ್‌ಆರ್‌ಪಿಯ ಕೆ.ಎಂ. ಶಿವಶೇಖರ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಿಎಆರ್ ವಿಭಾಗದ ಎಎಸ್‌ಐ ತಿಲಕ್ ರಾಜ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಲ್ಲದೆ, ಬಂಟ್ವಾಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಇರ್ಷಾದ್ ಪಿ. , ಮಂಗಳೂರು ನಗರದ ಊರ್ವ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಲಲಿತಾಲಕ್ಷ್ಮಿ , ಬೆಳ್ತಂಗಡಿ ಗ್ರಾಮಾಂತರ ಠಾಣೆಯ ವಿಜಯ ಕುಮಾರ್ ರೈ , ಕಂಕನಾಡಿ ನಗರ ಠಾಣೆಯ ಜಯಾನಂದ ಎನ್., ಮತ್ತು ಮಂಗಳೂರು ಸೈಬರ್ ಕ್ರೈಂ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಮಣಿ ಎಂ.ಎನ್. ಹಾಗೂ ಸತೀಶ್ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಈ ಪದಕ ಪ್ರದಾನ ಸಮಾರಂಭವು ಏಪ್ರಿಲ್ 02, 2026 ರಂದು ಬೆಂಗಳೂರಿನಲ್ಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಪದಕ ವಿಜೇತ ಅಧಿಕಾರಿಗಳು ಮಾರ್ಚ್ 29 ರಿಂದಲೇ ಬೆಂಗಳೂರಿನ ಕೆಎಸ್‌ಆರ್‌ಪಿ 3ನೇ ಪಡೆಯಲ್ಲಿ ನಡೆಯುವ ಪೂರ್ವಾಭ್ಯಾಸದಲ್ಲಿ ಭಾಗವಹಿಸಲಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ತಿಳಿಸಿದೆ.

Continue Reading

accident

ತೊಕ್ಕೊಟ್ಟು ಫ್ಲೈಓವರ್ ಮೇಲೆ ರೌಡಿಶೀಟರ್ ಆರಿಫ್ ಭೀಕರ ಹತ್ಯೆ: ಸಿನಿಮೀಯ ಶೈಲಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ

Published

on

ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲೆ ಶುಕ್ರವಾರ ಮುಂಜಾನೆ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ವ್ಯಕ್ತಿಯನ್ನು ತಲಪಾಡಿಯ ಮುಳ್ಳುಗುಡ್ಡೆ ಹೌಸ್ ನಿವಾಸಿ ಆರಿಫ್ ಯಾನೆ ‘ಟಾಬ್ಲೆಟ್ ಆರಿಫ್’ (46) ಎಂದು ಗುರುತಿಸಲಾಗಿದೆ. ಧಕ್ಕೆಯಲ್ಲಿ ಮೀನು ವ್ಯಾಪಾರ ನಡೆಸುತ್ತಿದ್ದ ಆರಿಫ್, ಪ್ರತಿದಿನದಂತೆ ಇಂದು ಮುಂಜಾನೆ ತನ್ನ ಬೈಕ್‌ನಲ್ಲಿ ಮಂಗಳೂರಿನತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಇಂದು ದುಷ್ಕರ್ಮಿಗಳು ಆರಿಫ್ ಗಾಗಿ ಫೈಓವರ್‌ ಮೇಲೆಯೇ ಕಾಯುತ್ತ ಕುಳಿತಿದ್ದು, ಆರಿಫ್‌ ಪ್ರಯಾಣಿಸುತ್ತಿದ್ದ ಬೈಕ್ ಅನ್ನು ಅಡ್ಡಗಟ್ಟಿ, ಬಳಿಕ ತಲೆ ಭಾಗಕ್ಕೆ ಗಂಭೀರವಾಗಿ ಕಡಿದು ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಬೈಕ್‌ನಲ್ಲಿ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದಾಗ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅತಿ ವೇಗವಾಗಿ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆರಿಫ್ ರಸ್ತೆಗೆ ಬೀಳುತ್ತಿದ್ದಂತೆ, ಕಾರಿನಿಂದ ಇಳಿದು ಬಂದ ತಂಡವು ತಲವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ತಲೆ ಮತ್ತು ದೇಹದ ಭಾಗಕ್ಕೆ ಮನಬಂದಂತೆ ಕಡಿದು ಸಿನಿಮೀಯ ರೀತಿಯಲ್ಲಿ ಕೊಲೆಗೈದು ಪರಾರಿಯಾಗಿದೆ. ತೀವ್ರ ರಕ್ತಸ್ರಾವದಿಂದಾಗಿ ಆರಿಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ತೊಡಗಿಸಿ ಕೊಂಡಿದ್ದ ಆರಿಫ್ ನನ್ನು ವೈಯಕ್ತಿಕ ದ್ವೇಷ ದಿಂದ ಹತ್ಯೆ ಗೈದಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ.ಆರಿಫ್ ವಿರುದ್ಧ 2008ರಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ನಂತರ ದೀರ್ಘಕಾಲ ಯಾವುದೇ ಪ್ರಕರಣಗಳಿರಲಿಲ್ಲ.


2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಆತನ ಮೇಲೆ ಒಮ್ಮೆ ಕೊಲೆ ಯತ್ನ ನಡೆದಿತ್ತು, ಆ ಪ್ರಕರಣದಲ್ಲಿ ನೌಫಾಲ್ ಹಾಗೂ ತಂಡವನ್ನು ಪೊಲೀಸರು ಬಂಧಿಸಿದ್ದರು. ಹಳೆಯ ವೈಯಕ್ತಿಕ ದ್ವೇಷವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.’ ಹತ್ಯೆಗೆ ಸ್ಪಷ್ಟ ಕಾರಣ ಏನೆಂಬುದು ಪೊಲೀಸರ ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಸದ್ಯಕ್ಕೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Continue Reading

cyber crime

AI ತಂತ್ರಜ್ಞಾನ ಬಳಸಿ ಕೋಮುದ್ವೇಷ ಹರಡುವ ವಿಡಿಯೋ ಹಂಚಿಕೆ: ಮಂಗಳೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

Published

on

ಮಂಗಳೂರು: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ವಿಡಿಯೋ ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಟ್ವಾಳ ಮೂಲದ ವ್ಯಕ್ತಿಯೊಬ್ಬನನ್ನು ಕಂಕನಾಡಿ ನಗರ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕುಡೆಲ್ ಹೌಸ್ ನಿವಾಸಿ ಮಹಮ್ಮದ್ ರಫೀಕ್ (38) ಎಂದು ಗುರುತಿಸಲಾಗಿದೆ. ಈತ ಫೇಸ್‌ಬುಕ್‌ನಲ್ಲಿ “ನಝೀರ ಮಂಗಳೂರು” ಎಂಬ ಹೆಸರಿನ ಖಾತೆಯ ಮೂಲಕ ವಿವಾದಾತ್ಮಕ ಕೃತ್ಯ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

2025ರ ಅಕ್ಟೋಬರ್‌ನಲ್ಲಿ ಆರೋಪಿಯು ತನ್ನ ಫೇಸ್‌ಬುಕ್ ಖಾತೆಯಲ್ಲಿ AI ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದನು. ಇದು ಸಮಾಜದಲ್ಲಿ ಶಾಂತಿ ಕದಡುವ ಮತ್ತು ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಉದ್ದೇಶ ಹೊಂದಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196, 353(1), ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿತ್ತು.

ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 22, 2026 ರಂದು ಬೆಂಗಳೂರಿನಲ್ಲಿ ಆತನನ್ನು ದಸ್ತಗಿರಿ ಮಾಡಿದ್ದಾರೆ. ಬಳಿಕ ಆತನನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Continue Reading

Trending

Copyright © 2025 Deevatige