Connect with us

Dakshina Kannada

“ಬಿಜೆಪಿ ಕಾರ್ಯಕರ್ತನ ಕೊಲೆಗೆ ನ್ಯಾಯ ಕೇಳಲು ಕಾಂಗ್ರೆಸ್ಸಿಗನಾದ ನಾನು ಬೀದಿಗೆ ಬಂದಿದ್ದೇನೆ”: ಮಂಗಳೂರಿನಲ್ಲಿ ಬಿ. ಕೆ. ಹರಿಪ್ರಸಾದ್ ಗುಡುಗು

Published

on

ಮಂಗಳೂರು: ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆಯಾಗಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿನಾಯಕ ಬಾಳಿಗಾ ಅವರ ನಿವಾಸದ ಬಳಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

“ನನ್ನ ಜೀವನದಲ್ಲಿ ಇಂತಹ ಒಂದು ಅಪರೂಪದ ದಿನ ಬರುತ್ತದೆ ಎಂದು ನಾನು ಕನಸಿನ ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ. ಒಬ್ಬ ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಕೇಳಿ ಕಾಂಗ್ರೆಸ್ಸಿಗನಾದ ನಾನು ಇಂದು ಬೀದಿಗೆ ಬಂದಿದ್ದೇನೆ. ಇದು ಕಾಲದ ಮಹಿಮೆ,” ಎಂದು ಭಾಷಣ ಆರಂಭಿಸಿದರು.
“ಹಿoದೂಗಳ ಮೇಲೆ ದೌರ್ಜನ್ಯವಾದಾಗ ಅಥವಾ ಹಿಂದುತ್ವವಾದಿಗಳ ಕೊಲೆಯಾದಾಗ ಬಿ. ಕೆ. ಹರಿಪ್ರಸಾದ್ ಯಾಕೆ ಮಾತಾಡಲ್ಲ ಎಂದು ಆರ್.ಎಸ್.ಎಸ್ ಹಾಗೂ ಬಿಜೆಪಿ ನಾಯಕರು ನನ್ನನ್ನು ಯಾವಾಗಲೂ ಪ್ರಶ್ನಿಸುತ್ತಾರೆ. ಆದರೆ ಇಂದು ಮಂಗಳೂರಿನ ನೆಲದಲ್ಲಿ ನಿಂತು ಒಬ್ಬ ಪ್ರಾಮಾಣಿಕ ಹಿಂದುತ್ವವಾದಿ ಕಾರ್ಯಕರ್ತನ ಹತ್ಯೆಗೆ ನ್ಯಾಯ ಕೇಳುತ್ತಿದ್ದೇನೆ. ಇದಕ್ಕೆ ಆರ್.ಎಸ್.ಎಸ್ ಮತ್ತು ಬಿಜೆಪಿ ನಾಯಕರು ಉತ್ತರ ನೀಡಬೇಕು,” ಎಂದು ಸವಾಲು ಹಾಕಿದರು.
“ವಿನಾಯಕ ಬಾಳಿಗಾ ಅವರು ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು. ದೇವಸ್ಥಾನದ ಹಣ ದುರುಪಯೋಗವಾಗುತ್ತಿದೆ ಎಂದು ತೋರಿಸಿಕೊಟ್ಟಿದ್ದೇ ಅವರು ಮಾಡಿದ ಅಪರಾಧವೇ? ದೇವಸ್ಥಾನದ ಹಣ ಮುಸ್ಲಿಮರಿಗೆ ಹೋಗುತ್ತಿದೆ ಎಂದು ಆರ್.ಎಸ್.ಎಸ್ ನಾಯಕರು ಬೊಬ್ಬೆ ಹೊಡೆಯುತ್ತಾರೆ. ಆದರೆ ಬಾಳಿಗಾ ಅವರು ದೇವಸ್ಥಾನದ ಹಣ ಪ್ರಭಾವಿ ನಾಯಕರ ಮನೆಗೆ ಹೋಗುತ್ತಿದೆ ಎಂದು ಸಾಬೀತುಪಡಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಸಂಚು ರೂಪಿಸಿ ಕೊಲೆ ಮಾಡಲಾಯಿತು,” ಎಂದು ಗಂಭೀರವಾಗಿ ಆರೋಪಿಸಿದರು.
“ಈ ಹತ್ಯೆಯ ಮೊದಲ ಆರೋಪಿ ನಮೋ ಬ್ರಿಗೇಡ್ ಅಧ್ಯಕ್ಷ ನರೇಶ್ ಶೆಣೈ. ಈತ ಈಗಲೂ ನ್ಯಾಯಾಲಯದಲ್ಲಿ ಗರ್ವದಿಂದ ನಿಲ್ಲುತ್ತಾನೆ. ಇಲ್ಲಿನ ಬಹುತೇಕ ಬಿಜೆಪಿ ಎಂ.ಎಲ್.ಎಗಳು ನರೇಶ್ ಶೆಣೈ ಮರ್ಜಿಯಲ್ಲಿದ್ದಾರೆ. ಚುನಾವಣೆ ಸಮಯದಲ್ಲಿ ಹಣ ಹಂಚುವುದು ಮತ್ತು ಮೀಡಿಯಾ ಮ್ಯಾನೇಜ್ ಮಾಡುವುದು ಇವನ ಕೆಲಸ. ಹೀಗಾಗಿಯೇ ಬಿಜೆಪಿ ಶಾಸಕರು ಮತ್ತು ಸಂಸದರು ಈ ಕೊಲೆ ಬಗ್ಗೆ ಮೌನ ವಹಿಸಿದ್ದಾರೆ,” ಎಂದು ಕಿಡಿಕಾರಿದರು.
“ವಿನಾಯಕ ಬಾಳಿಗಾ ಅವರು ಲವ್ ಜಿಹಾದ್ ಮಾಡಿದ್ದರೇ? ಅಥವಾ ಗೋ ಸಾಗಾಟ ಮಾಡಿದ್ದರೇ? ಅವರು ಯಾವ ಹಿಂದೂ ವಿರೋಧಿ ಕೆಲಸ ಮಾಡಿದ್ದರು ಎಂದು ನೀವು ಅವರನ್ನು ಕೊಲೆ ಮಾಡಿದ್ದೀರಿ? ನಮಗೆ ಇದಕ್ಕೆ ಉತ್ತರ ಬೇಕು. ದೇವರಿಗೆ ಸಲ್ಲಿಸುವ ಕಾಣಿಕೆಯನ್ನು ದೇವರಿಗೇ ಉಳಿಸಲು ಹೋರಾಡಿದ ಬಾಳಿಗಾ ಅವರ ಪರವಾಗಿ ನಿಲ್ಲದವರು ಅಸಲಿ ಹಿಂದುಗಳೇ?” ಎಂದು ಹರಿಪ್ರಸಾದ್ ಪ್ರಶ್ನಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, “ಬಾಳಿಗಾ ಹತ್ಯೆಯಾದಾಗ ಹಂತಕರನ್ನು ರಕ್ಷಿಸಲು ವ್ಯವಸ್ಥಿತ ಪಿತೂರಿ ನಡೆಯಿತು. ಬಾಳಿಗಾ ಒಬ್ಬ ಭ್ರಷ್ಟಾಚಾರಿ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಅಂದು ಜನಪರ ಸಂಘಟನೆಗಳು ಒಗ್ಗಟ್ಟಾಗಿ ಬೀದಿಗೆ ಇಳಿಯದಿದ್ದರೆ ಈ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿತ್ತು,” ಎಂದರು.

ಸಭೆಯಲ್ಲಿ ಪ್ರೊ. ನರೇಂದ್ರ ನಾಯಕ, ಡಾ. ಪಿ.ವಿ ಭಂಡಾರಿ, ಅಮೃತ ಶೆಣೈ, ಬಿ. ಶೇಖರ್, ಡಿಎಸ್‌ಎಸ್ ನಾಯಕ ಎಂ. ದೇವದಾಸ್ ಮತ್ತು ಎಂ. ಜಿ ಹೆಗಡೆ ಉಪಸ್ಥಿತರಿದ್ದು, ಬಾಳಿಗಾ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

CONGRESS

ಮಂಗಳೂರು ಹಳೆ ಬಂದರು ಪ್ರದೇಶಕ್ಕೆ ಸಿಎಂ ಭೇಟಿ: ಮೀನುಗಾರಿಕೆ ವ್ಯವಹಾರ ಸ್ಥಗಿತಗೊಳಿಸಿದ್ದಕ್ಕೆ ಆಕ್ರೋಶ, ತನಿಖೆಗೆ ಆದೇಶ

Published

on

ಮಂಗಳೂರು, ಸೆ. 19: ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಮಂಗಳೂರು ಮೀನುಗಾರಿಕಾ ಧಕ್ಕೆ ಹಳೆ ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕಮಾರ್ ಅವರು, ತಮ್ಮ ಭೇಟಿಯ ವೇಳೆ ಮೀನುಗಾರಿಕಾ ವ್ಯವಹಾರ ಹಾಗೂ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೇ ಅಥವಾ ಪೊಲೀಸರೇ ಚಟುವಟಿಕೆಗಳನ್ನು ನಿಲ್ಲಿಸಿದ್ದರೆ ಅವರನ್ನು ಇಂದೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಮೀನುಗಾರರು ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ವ್ಯವಹಾರಗಳು ಎಂದಿನಂತೆ ಸುಗಮವಾಗಿ ನಡೆಯಬೇಕು ಎಂದು ಸಿಎಂ ತಿಳಿಸಿದರು. ಮೀನುಗಾರಿಕೆಯು ಆರ್ಥಿಕತೆಯ ದೊಡ್ಡ ಶಕ್ತಿಯಾಗಿದ್ದು, ಧಕ್ಕೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು, ಸುರಕ್ಷತೆ ಒದಗಿಸುವುದು ಹಾಗೂ ಸಣ್ಣ ದೋಣಿ ಮೀನುಗಾರರಿಗೆ ನೆರವು ನೀಡುವುದು ಸರ್ಕಾರದ ಕರ್ತವ್ಯ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ಅಳಿವೆ ಬಾಗಿಲಿಗೆ ಹೂಳೆತ್ತದೆ ಇರುವುದು ಅಪಾಯಕಾರಿಯಾಗಿದೆ ಎಂಬ ಮೀನುಗಾರರ ಅಳಲಿಗೆ ಸ್ಪಂದಿಸಿ, ಡ್ರೆಜಿಂಗ್ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆದು ಶೀಘ್ರವೇ ಸರ್ಕಾರವೇ ಸ್ವಂತ ಡ್ರೆಜಿಂಗ್ ಯಂತ್ರ ಖರೀದಿಸುವುದೋ ಅಥವಾ ಲೀಸ್‌ಗೆ ಪಡೆಯುವುದೋ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಕರಾವಳಿಯ ಅಭಿವೃದ್ಧಿಗೆ ಹೊಸ ಪಥದ ಚಿಂತನೆ ನಡೆಸಲಾಗಿದ್ದು, ಹೂಡಿಕೆದಾರರನ್ನು ಆಕರ್ಷಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜನಸಾಮಾನ್ಯರ ಬದುಕು ನಮಗೆ ಮುಖ್ಯವಾಗಿದ್ದು, ಹಿಂದೆಯೂ ನಾವು ಈ ವರದಿಯನ್ನು ತಿರಸ್ಕರಿಸಿದ್ದೇವೆ ಎಂದರು. ಕಾನೂನು ಚೌಕಟ್ಟಿನಲ್ಲಿ ಜನರಿಗೆ ಆಗುವ ಅನ್ಯಾಯ ತಪ್ಪಿಸಲು ವಾಸ್ತವ ಅಂಶಗಳನ್ನು ಅರಿಯಲು ಜನರ ಬಳಿಗೆ ಬಂದಿರುವುದಾಗಿ ತಿಳಿಸಿದರು. ಸಚಿವ ಸಂಪುಟದ ಅನುಮೋದನೆ ಕುರಿತು ಬಿಜೆಪಿ ಟೀಕೆಗಳಿಗೆ ಉತ್ತರಿಸಿ, “ನಾವು ನುಡಿದಂತೆ ನಡೆಯುತ್ತೇವೆ, ಅದೇ ನಮ್ಮ ಶಕ್ತಿ” ಎಂದು ಸ್ಪಷ್ಟಪಡಿಸಿದರು. ಈ ಭೇಟಿಯ ವೇಳೆ ಸಚಿವ ಯು.ಟಿ. ಖಾದರ್, ವಿವಿಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

award

ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಐತಿಹಾಸಿಕ ಮಾನ್ಯತೆ: ಕರಾವಳಿಯಲ್ಲಿ ಹಬ್ಬದ ವಾತಾವರಣ

Published

on

ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಬಲ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆಯಾಗಿದೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಮತ್ತಷ್ಟು ಪ್ರಬಲ ವೇದಿಕೆಯಾಗಲಿದೆ.

ನಿರಂತರ ಹೋರಾಟಕ್ಕೆ ಸಿಕ್ಕ ಫಲ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು.

ತಜ್ಞರ ಸಮಿತಿಯ ವರದಿ ಆಧಾರ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ತುಳುವರ ಬಹುಕಾಲದ ಕನಸು ನನಸಾಗಿದ್ದು, ಕರಾವಳಿ ಭಾಗದಲ್ಲಿ ಹರ್ಷೋದ್ಗಾರ ವ್ಯಕ್ತವಾಗಿದೆ.

Continue Reading

Trending

Copyright © 2025 Deevatige

error: Content is protected !!