Connect with us

court

ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಪ್ರಭು ವಿರುದ್ಧ ಅಪಪ್ರಚಾರ: ಕಾಂಗ್ರೆಸ್ ಮುಖಂಡ ಹಾಗೂ ವೆಬ್‌ಸೈಟ್ ಪಬ್ಲಿಷರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

Published

on

ಪುತ್ತೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಉಜ್ವಲ್ ಕುಮಾರ್ ಪ್ರಭು ಅವರ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿ, ಅವರ ಘನತೆಗೆ ಕುಂದು ತಂದ ಆರೋಪದ ಮೇಲೆ ‘ಬಿಎಲ್‌ಆರ್ ಪೋಸ್ಟ್’ ವೆಬ್‌ಸೈಟ್‌ನ ಪಬ್ಲಿಷರ್, ಎಡಿಟರ್ ಮತ್ತು ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಅಲಿ ವಿರುದ್ಧ ಪುತ್ತೂರಿನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ ಮತ್ತು ದೂರು:
ನೆಹರುನಗರದ ನಿವಾಸಿಯಾಗಿರುವ ಉಜ್ವಲ್ ಕುಮಾರ್ ಪ್ರಭು (39) ಅವರು ಕಳೆದ 10 ವರ್ಷಗಳಿಂದ ‘ಯು.ಆರ್. ಪ್ರಾಪರ್ಟೀಸ್’ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. ಇವರು ತಮ್ಮ ಪತ್ನಿಯ ಹೆಸರಿನಲ್ಲಿ ಜಾಗ ಖರೀದಿಸಿ, ‘ಶ್ರೀ ಮಾರ್ಕಿಂಗ್ ಪಾರ್ಕ್’ ಎಂಬ ಲೇಔಟ್ ಅನ್ನು ಚಿಕ್ಕಮುಡ್ನೂರು ಗ್ರಾಮದಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಸರ್ಕಾರಿ ನಿಯಮಾವಳಿಗಳಂತೆ ರೆರಾ (RERA) ಅನುಮೋದಿತ ಪ್ರಾಜೆಕ್ಟ್ ಆಗಿದೆ.

ಆದರೆ, ಸುಮಾರು ಎರಡು ವಾರಗಳ ಹಿಂದೆ ‘ಬಿಎಲ್‌ಆರ್ ಪೋಸ್ಟ್’ ಎಂಬ ವೆಬ್ ನ್ಯೂಸ್ ಸೈಟ್‌ನಲ್ಲಿ ಉಜ್ವಲ್ ಪ್ರಭು ಅವರು ಸರ್ಕಾರಿ ಜಾಗವನ್ನು ಕಬಳಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿತ್ತು. ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ವ್ಯವಸ್ಥಿತವಾಗಿ ಹರಡಲಾಗಿತ್ತು.

ದೂರಿನ ಅನ್ವಯ ನ್ಯಾಯಾಲಯವು ಮೂವರು ಆರೋಪಿಗಳ ವಿರುದ್ಧ ನೋಟಿಸ್ ಜಾರಿ ಮಾಡಿದ್ದು, ಪ್ರಥಮ ಆರೋಪಿ: ಪಬ್ಲಿಷರ್, ಬಿಎಲ್‌ಆರ್ ಪೋಸ್ಟ್.ಎರಡನೇ ಆರೋಪಿ: ಎಡಿಟರ್, ಬಿಎಲ್‌ಆರ್ ಪೋಸ್ಟ್. ಮೂರನೇ ಆರೋಪಿ: ಎಚ್. ಮಹಮ್ಮದ್ ಅಲಿ (ಕಾಂಗ್ರೆಸ್ ಮುಖಂಡ) ಆಗಿದ್ದಾರೆ.

ದೂರಿನ ಪ್ರಕಾರ, ಮೂರನೇ ಆರೋಪಿಯು ಸ್ವಯಂ ಘೋಷಿತ ಆರ್‌ಟಿಐ ಕಾರ್ಯಕರ್ತನಾಗಿದ್ದು, ವೆಬ್‌ಸೈಟ್‌ನವರಿಗೆ ಸುಳ್ಳು ಮಾಹಿತಿ ನೀಡಿ ಸುದ್ದಿ ಪ್ರಕಟಿಸುವಂತೆ ಮಾಡಿದ್ದಾನೆ. ಅಲ್ಲದೆ ಈ ಸುದ್ದಿಯನ್ನು ಪುತ್ತೂರಿನ ವಿವಿಧ ರಾಜಕೀಯ ಮತ್ತು ಸಾರ್ವಜನಿಕ ವಾಟ್ಸಾಪ್ ಗ್ರೂಪ್‌ಗಳಿಗೆ ಹರಿಬಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಬೇರೆಯವರ ಮುಖಾಂತರ ಹಣಕ್ಕಾಗಿ ಬೇಡಿಕೆ ಇಡುವ ಮತ್ತು ವ್ಯವಹಾರವನ್ನು ಹಾಳು ಮಾಡುವ ಉದ್ದೇಶ ಈ ಕೃತ್ಯದ ಹಿಂದೆ ಇದ್ದು,ಇದು ಬ್ಲ್ಯಾಕ್‌ಮೇಲ್ ತಂತ್ರ ಎಂದು ದೂರಲಾಗಿದೆ.

ವ್ಯಾಪಾರ ಮತ್ತು ಪ್ರತಿಷ್ಠೆಗೆ ಧಕ್ಕೆ:
ಉಜ್ವಲ್ ಪ್ರಭು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ ಕೆಲವು ಗಂಭೀರ ಅಂಶಗಳನ್ನು ಉಲ್ಲೇಖಿಸಿದ್ದು, ಈ ಅಪಪ್ರಚಾರದಿಂದಾಗಿ ಸುಮಾರು 5 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿದೆ. ಉದ್ಯಮಿಯ ಸುಮಾರು 800 ಗ್ರಾಹಕರು ಈ ಸುದ್ದಿಯಿಂದ ಆತಂಕಕ್ಕೊಳಗಾಗಿದ್ದು, ಕಂಪನಿಯ ಮೇಲಿನ ನಂಬಿಕೆಗೆ ಹೊಡೆತ ಬಿದ್ದಿದೆ. ಸುಳ್ಳು ಸುದ್ದಿಯಿಂದಾಗಿ ಬ್ಯಾಂಕ್‌ನವರು ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ
ಎಂದು ತಿಳಿಸಿದ್ದಾರೆ.

ನ್ಯಾಯಾಲಯದ ನಡಾವಳಿ:
ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2) ಮತ್ತು 356(3) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯು ಮಾರ್ಚ್ 24 ರಂದು ನಡೆಯಲಿದೆ. ಉಜ್ವಲ್ ಪ್ರಭು ಅವರ ಪರವಾಗಿ ಹಿರಿಯ ವಕೀಲರಾದ ನಾಗೇಶ್ ಶರ್ಮಾ ಅವರು ವಾದ ಮಂಡಿಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಬಂಟ್ವಾಳ: ಪೋಕ್ಸೋ ಪ್ರಕರಣ ಸಾಬೀತು – ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ

Published

on

ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದ್ದು, ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-2) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ಅಬ್ದುಲ್ ಲತಿಫ್ ಶಿಕ್ಷೆಗೊಳಗಾದ ಅಪರಾಧಿ. ಈ ಪ್ರಕರಣದಲ್ಲಿ ಒಟ್ಟು ಮೂವರ ವಿರುದ್ಧ ಆರೋಪವಿದ್ದು, ಪ್ರಮುಖ ಆರೋಪಿಯ ದೋಷವು ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಪ್ರಕರಣದ ಹಿನ್ನೆಲೆ ಮತ್ತು ತನಿಖೆ:

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಧಿಸೂಚನೆ ಸಂಖ್ಯೆ 141/2025 ರ ಅಡಿಯಲ್ಲಿ ಪೋಕ್ಸೋ ಕಾಯ್ದೆ-2012ರ ಕಲಂ: 4, 6, 8, 12, 19(1)(b), 21 ಹಾಗೂ BNS-2023ರ ಕಲಂ: 64(2)(f), 75 r/w 3(5) ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಹಾಗೂ ತನಿಖಾಧಿಕಾರಿ ಅನಂತ ಪದ್ಮನಾಭ ಅವರು ಕೂಲಂಕಷವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:

ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (FTSC-2) ನಡೆದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷಿಗಳನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಾನು ಕೆ.ಎಸ್. ಅವರು, ಆರೋಪಿ ಅಬ್ದುಲ್ ಲತಿಫ್‌ನ ಕೃತ್ಯವು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಿನಾಂಕ 19.09.2026 ರಂದು ಈ ಕೆಳಗಿನ ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿದ್ದಾರೆ:

  • ಕಾರಾಗೃಹ ವಾಸ: 20 ವರ್ಷಗಳ ಕಠಿಣ ಕಾರಾಗೃಹ ವಾಸ.
  • ದಂಡದ ಮೊತ್ತ: ರೂ. 80,000/- (ಎಂಭತ್ತು ಸಾವಿರ ರೂಪಾಯಿಗಳು).

ತ್ವರಿತ ತನಿಖೆ ಮತ್ತು ಸಮರ್ಥ ವಾದ ಮಂಡನೆಯ ಮೂಲಕ ಅಪರಾಧಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Continue Reading

court

ಎಸ್‌ಪಿಗಳಿಗೆ ಗಡಿಪಾರು ಅಧಿಕಾರವಿಲ್ಲ: ರಾಜ್ಯ ಸರ್ಕಾರದ ಸುತ್ತೋಲೆ ರದ್ದುಗೊಳಿಸಿದ ಹೈಕೋರ್ಟ್

Published

on

ಬೆಂಗಳೂರು: ಕರ್ನಾಟಕ ಪೊಲೀಸ್ ಕಾಯ್ದೆಯಡಿ ವ್ಯಕ್ತಿಗಳನ್ನು ಗಡಿಪಾರು ಮಾಡುವ ಅಧಿಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್‌ಪಿ) ವಹಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಉಚ್ಚ ನ್ಯಾಯಾಲಯ ತಡೆ ನೀಡಿದ್ದು, ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ:

2025ರ ನವೆಂಬರ್ 18ರಂದು ರಾಜ್ಯ ಸರ್ಕಾರವು ಎಸ್‌ಪಿಗಳಿಗೆ ಗಡಿಪಾರು ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿತ್ತು. ಈ ಅಧಿಸೂಚನೆಯನ್ನಾಧರಿಸಿ ಬೆಳಗಾವಿ ಎಸ್‌ಪಿ ಅವರು 2026ರ ಏಪ್ರಿಲ್ 28ರಂದು ನಿಪ್ಪಾಣಿ ತಾಲೂಕಿನ ಚಂದ್ರಕಾಂತ ಶಂಕರ ವಡ್ಡರ್ ಎಂಬುವವರನ್ನು ಗಡಿಪಾರು ಮಾಡಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಕಾಂತ ಅವರು ಹೈಕೋರ್ಟ್ ಧಾರವಾಡ ಪೀಠದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಮುಖ ತೀರ್ಪು ನೀಡಿದೆ.

ಹೈಕೋರ್ಟ್ ನೀಡಿದ ಪ್ರಮುಖ ಸ್ಪಷ್ಟನೆಗಳು:

ಕಾಯ್ದೆ ಮೀರಲು ಬಾರದು: ಪೊಲೀಸ್ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ನಿರ್ದಿಷ್ಟ ಪ್ರಾಧಿಕಾರಗಳನ್ನು ಹೊರತುಪಡಿಸಿ, ಕೇವಲ ಕಾರ್ಯಾಂಗದ ಆದೇಶ/ಸುತ್ತೋಲೆಯ ಮೂಲಕ ಎಸ್‌ಪಿಗಳಿಗೆ ಗಡಿಪಾರು ಮಾಡುವ ಅಧಿಕಾರ ವರ್ಗಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲ.

ಗೆಜೆಟ್ ಪ್ರಕಟಣೆಯಿಲ್ಲ: ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಅಧಿಕೃತ ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಿರಲಿಲ್ಲ. ಕಾಯ್ದೆಯ ಪ್ರಕಾರ ಗೆಜೆಟ್‌ನಲ್ಲಿ ಪ್ರಕಟಗೊಳ್ಳದ ಯಾವುದೇ ಅಧಿಸೂಚನೆಗೆ ಕಾನೂನು ಮಾನ್ಯತೆ ಇರುವುದಿಲ್ಲ. ಹೀಗಾಗಿ ಬೆಳಗಾವಿ ಎಸ್‌ಪಿ ಹೊರಡಿಸಿದ್ದ ಗಡಿಪಾರು ಆದೇಶಕ್ಕೆ ಯಾವುದೇ ಸಿಂಧುತ್ವವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಕಾನೂನಾತ್ಮಕವಾಗಿ ಗಡಿಪಾರು ಅಧಿಕಾರ ಯಾರಿಗಿದೆ?

ನ್ಯಾಯಾಲಯದ ಸ್ಪಷ್ಟನೆ ಪ್ರಕಾರ, ಪೊಲೀಸ್ ಕಾಯ್ದೆಯಡಿ ಗಡಿಪಾರು ಆದೇಶ ಹೊರಡಿಸಲು ಈ ಕೆಳಗಿನ ಅಧಿಕಾರಿಗಳಿಗೆ ಮಾತ್ರ ಶಾಸನಬದ್ಧ ಅಧಿಕಾರವಿರುತ್ತದೆ:

ಕಮಿಷನರೇಟ್ ವ್ಯಾಪ್ತಿ: ಬೆಂಗಳೂರು ನಗರ ಸೇರಿದಂತೆ ಪೊಲೀಸ್ ಕಮಿಷನರೇಟ್ ಒಳಪಡುವ ಪ್ರದೇಶಗಳಲ್ಲಿ ಪೋಲಿಸ್ ಕಮಿಷನರ್‌ಗೆ ಮಾತ್ರ ಅಧಿಕಾರವಿರುತ್ತದೆ.

ಇತರ ಜಿಲ್ಲಾ ವ್ಯಾಪ್ತಿ: ಕಮಿಷನರೇಟ್ ಹೊರತಾದ ಪ್ರದೇಶಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು (ಡಿಸಿ) ಹಾಗೂ ಉಪ ವಿಭಾಗಾಧಿಕಾರಿಗಳಿಗೆ (ಎಸಿ) ಮಾತ್ರ ಗಡಿಪಾರು ಮಾಡುವ ಅಧಿಕಾರವಿದೆ.

    Continue Reading

    BJP

    ಮಹಿಳಾ ಪಿಎಸ್‌ಐ ಕಪಾಳಕ್ಕೆ ಹೊಡೆದ ಬಿಜೆಪಿ ಶಾಸಕನ ಪುತ್ರಿ ಐಶ್ವರ್ಯಗೆ ನಿರೀಕ್ಷಣಾ ಜಾಮೀನು ವಜಾ

    Published

    on

    ಶ್ರೀರಂಗಪಟ್ಟಣ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಎದುರಿಸುತ್ತಿರುವ ಶಾಸಕ ಬಿ. ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶ್ರೀರಂಗಪಟ್ಟಣದ ಸ್ಥಳೀಯ ನ್ಯಾಯಾಲಯ ವಜಾಗೊಳಿಸಿದೆ.

    ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯಾದೇವಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಭದ್ರತಾ ಕರ್ತವ್ಯದಲ್ಲಿದ್ದ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಸವಿತಾ ಬಿ. ಪಾಟೀಲ್ ಅವರ ಮೇಲೆ ಈ ಹಲ್ಲೆ ನಡೆದಿತ್ತು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ದೂರು ದಾಖಲಾಗಿತ್ತು. ಬಂಧನದ ಭೀತಿಯಲ್ಲಿದ್ದ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸದ್ಯ ನ್ಯಾಯಾಲಯ ತಿರಸ್ಕರಿಸಿದೆ.

    ಘಟನೆಯ ಹಿನ್ನೆಲೆ:

    ಭೀಮನ ಅಮಾವಾಸ್ಯೆಯಂದು ದೇವಾಲಯಕ್ಕೆ ಭಕ್ತರ ದಂಡೇ ಹರಿದುಬಂದಿದ್ದರಿಂದ ಎಸ್‌ಐ ಸವಿತಾ ಪಾಟೀಲ್ ಭದ್ರತಾ ಕರ್ತವ್ಯದಲ್ಲಿದ್ದರು. ಸಂಜೆ ಸುಮಾರು 4 ಗಂಟೆಗೆ ದೇಗುಲಕ್ಕೆ ಆಗಮಿಸಿದ ಐಶ್ವರ್ಯ, ಗರ್ಭಗುಡಿಗೆ ನೇರವಾಗಿ ಪ್ರವೇಶ ನೀಡುವಂತೆ ಕೋರಿದ್ದರು. ಆದರೆ ಸಾಲಿನಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಧಿಕಾರಿ ಸವಿತಾ ನೇರ ದರ್ಶನಕ್ಕೆ ನಿರಾಕರಿಸಿದ್ದರು.

    ಇದರಿಂದ ಕುಪಿತಗೊಂಡ ಐಶ್ವರ್ಯ, “ನಾನು ಪೊಲಿಟಿಕಲ್ ಲೀಡರ್ ಮಗಳು, ಡಿವೈಎಸ್‌ಪಿ ಹೆಂಡತಿ. ನನ್ನನ್ನೇ ಕಾಯಿಸುತ್ತೀಯಾ?” ಎಂದು ಏರುಧ್ವನಿಯಲ್ಲಿ ಗದರಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯ ಕಪಾಳಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಬಹಿರಂಗ ಕ್ಷಮೆಯಾಚಿಸಿದ್ದ ಶಾಸಕ ಸುರೇಶ್ ಗೌಡ:

    ಪುತ್ರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಶಾಸಕ ಬಿ. ಸುರೇಶ್ ಗೌಡ ಅವರು ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. “ನನ್ನ ಮಗಳು ಸಣ್ಣ ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ. ಸಾರ್ವಜನಿಕ ಜೀವನದಲ್ಲಿರುವ ನಾವು ಹೀಗೆ ವರ್ತಿಸಬಾರದಿತ್ತು. ಮಗಳ ತಪ್ಪಿಗೆ ನಾನೇ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ” ಎಂದು ಅವರು ಹೇಳಿಕೆ ನೀಡಿದ್ದರು.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಶ್ವರ್ಯ ಅವರನ್ನು ವಿಚಾರಣೆಗೊಳಪಡಿಸಿದ್ದರೂ ಬಂಧಿಸಿರಲಿಲ್ಲ. ಇದೀಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದರಿಂದ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.

    Continue Reading

    Trending

    Copyright © 2025 Deevatige

    error: Content is protected !!