Connect with us

Belthangady

ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣ ಮಾಡುವಿರಾ.?ಚುನಾವಣೆ ಬಹಿಷ್ಕಾರ ಹಾಕಿದರೂ ಜನಪ್ರತಿನಿಧಿಗಳು/ಅಧಿಕಾರಿಗಳು ಡೋಂಟ್ ಕೇರ್.

Published

on

ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಸ್ತೆ, ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಚುನಾವಣಾ ಬಹಿಷ್ಕಾರ ಹಾಕಿದಾಗ ಮತದಾರರ ಕೈಕಾಲು ಹಿಡಿದ ಅಧಿಕಾರಿಗಳು ಮತ್ತೆ ಆ ಕಡೆ ತಲೆ ಹಾಕಿಯೂ ಮಲಗಿಲ್ಲ. ಇದೀಗ ಮತ್ತೊಮ್ಮೆ ಚುನಾವಣಾ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ. ಇದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೈಕಂಬ- ಅತ್ಯಡ್ಕ- ಬಳ್ಳಿತೋಟ- ಬೋಜಾರ ರಸ್ತೆ- ಸೇತುವೆಯ ಮುಗಿಯದ ಕಣ್ಣೀರಿನ ಗೋಳು..

ನಾವೂರು ಗ್ರಾಮದ ಕೈಕಂಬದಿಂದ ನಡ ಗ್ರಾಮದ ಬೋಜಾರ ಮೂಲಕ ಮುಡಾಯಿಬೆಟ್ಟು ಪ್ರದೇಶವನ್ನು ಸಂಪರ್ಕಿಸುವ ಈ ರಸ್ತೆ ಸುಮಾರು 4 ಕಿಲೋ ಮೀಟರ್ ದೂರವಿದೆ. ಈ ರಸ್ತೆ ಡಾಮರು ಕಾಣದೆ ಸರಿಸುಮಾರು 30 ವರ್ಷಗಳೇ ಕಳೆದಿದೆ. ಇದೀಗ ಅಲ್ಲೊಂದು ಇಲ್ಲೊಂದು ಡಾಮರೀಕರಣದ ಅವಶೇಷಗಳು ಮಾತ್ರ ಡಾಮರು ರಸ್ತೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿವೆ. ಜಲ್ಲಿಕಲ್ಲುಗಳು ರಸ್ತೆಯನ್ನು ಬಿಟ್ಟು ಬದಿಗೆ ಸರಿದಿದೆ. ಅಂತೂ ಇದೀಗ ಸದ್ದ ಪರಿಸ್ಥಿತಿಯಲ್ಲಿ ರಸ್ತೆಯ ಅಸ್ಥಿಪಂಜರ ಮಾತ್ರ ಗೋಚರಿಸುತ್ತಿದೆ.

ಈ ರಸ್ತೆಯ ಸಂಪರ್ಕಕ್ಕಾಗಿ ಕೈಕಂಬ ಎಂಬಲ್ಲಿರುವ ಸೇತುವೆಯು ಯಾವುದೇ ಕ್ಷಣ ಕುಸಿದು ಬೀಳುವ ಹಂತದಲ್ಲಿದೆ. ಸೇತುವೆಯ ಅಡಿಭಾಗದಲ್ಲಿ ಸಿಮೆಂಟ್ ಇಲ್ಲದೇ ಕರಗಿ ಹೋಗಿರುವ ಕಬ್ಬಿಣದ ಸರಳುಗಳು ಕಾಣುತ್ತಿವೆ. ನಾಲ್ಕು ಚಕ್ರದ ವಾಹನಗಳು ಸಂಚರಿಸುವಾಗ ಅಡಿಪಾಯದ ಕಲ್ಲುಗಳು ಒಂದೊಂದಾಗಿ ಕೆಳಕ್ಕೆ ಬೀಳುತ್ತಿವೆ.


2019ರ ಭೀಕರ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೇತುವೆಯ ನಡುವಿನ ತಡೆಗೋಡೆ ಕೊಚ್ಚಿ ಹೋಗಿದ್ದರೂ ಈವರೆಗೂ ಯಾವನೇ ಒಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಅಪಾಯಕಾರಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಸ್ಥಳೀಯ ನಾವೂರು ಗ್ರಾಮ ಪಂಚಾಯತ್ ಬ್ಯಾನರ್ ಅಳವಡಿಸಿದೆ. ಬ್ಯಾನರ್ ತೂಗು ಹಾಕಿದರೆ ಸೇತುವೆ ದುರಸ್ತಿಯಾಗುವುದೇ ಎಂದು ಜನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕ್ಯಾಕರಿಸಿ ಉಗಿಯುತ್ತಿದ್ದಾರೆ.
ಆದರೂ ಅಪಾಯಕಾರಿ ಸೇತುವೆಯ ಬಗ್ಗೆ ಇನ್ನೂ ಗಮನ ಹರಿಸದಿರುವುದು ಜನರ ಜೀವ ಬಲಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆಯೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಜನರ ದಿನನಿತ್ಯದ ಬದುಕಿನಲ್ಲಿ ಬಹುಮುಖ್ಯವಾಗಿರುವ ಈ ಏಕೈಕ ಸೇತುವೆ ಮತ್ತು ರಸ್ತೆಯನ್ನು ದಿನನಿತ್ಯ 300 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಯೋಗಿಸುತ್ತಿದ್ದಾರೆ. ಪ್ರಸ್ತುತ ಈ ರಸ್ತೆ ಜನ , ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ಸೇತುವೆ ಕುಸಿಯುವ ಮುನ್ನವಾದರೂ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುವುದೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಮತ್ತೊಮ್ಮೆ ಚುನಾವಣಾ ಬಹಿಷ್ಕಾರದ ಕೂಗು.!
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಭಾಗದ ಜನರು ಸಾಮೂಹಿಕ ಚುನಾವಣಾ ಬಹಿಷ್ಕಾರ ಹಾಕಿ ಬ್ಯಾನರ್ ಅಳವಡಿಸುವ ಮೂಲಕ ಆಳುವ ವರ್ಗಕ್ಕೆ ಬಿಸಿ ಮುಟ್ಟಿಸಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳು ಸೇರಿದಂತೆ ಚುನಾವಣಾಧಿಕಾರಿಗಳು ಲಬೋ ಲಬೋ ಎನ್ನುತ್ತಾ ಸ್ಥಳಕ್ಕಾಗಮಿಸಿ ಗೊಡ್ಡು ಪುಢಾರಿಗಳನ್ನೂ ನಾಚಿಸುವಂತಹ ಭರವಸೆ ನೀಡಿ ವಾಪಸ್ ಹೋದವರು ಮತ್ತೆ ಆ ಕಡೆಗೆ ಅಪ್ಪಿತಪ್ಪಿಯೂ ತಲೆ ಹಾಕಿಯೂ ಮಲಗಿಲ್ಲ.

ಇದೀಗ ಮತ್ತೆ ಗ್ರಾಮ , ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳು ಸಾಲು ಸಾಲಾಗಿ ಬರಲಿದ್ದು , ಆಗ ಮತ್ತೊಮ್ಮೆ ಯಾವುದೇ ಕಾರಣಕ್ಕೂ ಜಗ್ಗದ, ಬಗ್ಗದ ರೀತಿಯಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಈಗಾಗಲೇ ತಯಾರಿ ನಡೆಸಲಾಗಿದೆ . ಅದಕ್ಕಿಂತಲೂ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಮ್ಮೆ ಮುಖಕ್ಕೆ ಮಂಗಳಾರತಿ ಮಾಡುವುದು ಗ್ಯಾರಂಟಿ ಎಂದು ಸಾರ್ವಜನಿಕರು ಆಕ್ರೋಶದಿಂದ ಹೇಳುತ್ತಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಮಂಗಳೂರು: MDMA ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ; 15.30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

Published

on

ಮಂಗಳೂರು: ನಗರದಾದ್ಯಂತ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪಿತೆಯನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗುರಿಂಗಾನ ನಿವಾಸಿ, ಪ್ರಸ್ತುತ ಪಂಪ್‌ವೆಲ್ ಉಜ್ಜೋಡಿಯ ರಾಧಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 103ರಲ್ಲಿ ವಾಸ್ತವ್ಯವಿದ್ದ ನಸೀಮಾ @ ನಸೀಮ (42) ಬಂಧಿತ ಆರೋಪಿ.

ಘಟನೆಯ ವಿವರ: ದಿನಾಂಕ 01-11-2026ರಂದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ವೇಳೆ ಪಂಪ್‌ವೆಲ್ ಉಜ್ಜೋಡಿ ಬಳಿಯ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಆರೋಪಿತೆಯ ವಶದಲ್ಲಿದ್ದ ಸುಮಾರು 15,30,000 ರೂಪಾಯಿ ಮೌಲ್ಯದ 153 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿತೆಯು ಮಂಗಳೂರು ನಗರದ ವಿವಿಧೆಡೆ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಆರೋಪಿತೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಜಾಲದಲ್ಲಿ ಇನ್ನು ಹಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Continue Reading

Belthangady

ಸೌಜನ್ಯ ಪ್ರಕರಣದ ತನಿಖಾ ಸಮಿತಿ ಪುನಾರಚನೆ: ಸಿಐಡಿ ಐಜಿಪಿ ಚೇತನ್ ಸಿಂಗ್ ರಾಥೋಡ್ ಮುಖ್ಯಸ್ಥರಾಗಿ ನೇಮಕ

Published

on

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿ ತಿದ್ದುಪಡಿ ಆದೇಶ ಹೊರಡಿಸಿದೆ.

ಕರ್ನಾಟಕ ಸರ್ಕಾರದ ಒಳಾಡಳಿತ ಇಲಾಖೆ (ಅಪರಾಧಗಳು) ದಿನಾಂಕ 30-10-2026 ರಂದು ಆದೇಶ ಸಂಖ್ಯೆ: ಹೆಚ್‌ಸಿಡಿ 228 ಸಿಒಡಿ 2026 ರಂತೆ ಈ ತಿದ್ದುಪಡಿ ಆದೇಶವನ್ನು ಪ್ರಕಟಿಸಿದೆ.

ಸೆಪ್ಟೆಂಬರ್ 24, 2026 ರಂದು ಹೊರಡಿಸಿದ್ದ ಮೂಲ ಆದೇಶದ ಕೋಷ್ಟಕದ ಕ್ರಮ ಸಂಖ್ಯೆ 01 ಮತ್ತು 05 ರಲ್ಲಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ತಿದ್ದುಪಡಿ ಆದೇಶದ ಪ್ರಕಾರ:

  1. ಶ್ರೀ ಚೇತನ್ ಸಿಂಗ್ ರಾಥೋಡ್, ಐಪಿಎಸ್, ಐಜಿಪಿ, ಸಿಐಡಿ, ಬೆಂಗಳೂರು – ಮುಖ್ಯಸ್ಥರಾಗಿ ನೇಮಕ
  2. ಶ್ರೀ ಶ್ರೀನಿಧಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ – ಸದಸ್ಯರಾಗಿ ನೇಮಕ

ಈ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರ ಸಹಿಯಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ಆದೇಶದ ಪ್ರತಿಯನ್ನು ಡಿಜಿ & ಐಜಿಪಿ, ಸಿಐಡಿ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ರವಾನಿಸಲಾಗಿದೆ.

Continue Reading

Belthangady

ಸೌಜನ್ಯ ಕೇಸ್ ಮರುತನಿಖೆಗೆ ಬಿಗ್ ಟ್ವಿಸ್ಟ್: ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿದ ಐಜಿಪಿ ಶಶಿಕುಮಾರ್!

Published

on

ಬೆಂಗಳೂರು: ಧರ್ಮಸ್ಥಳದ ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದ (SIT) ಮರುತನಿಖೆ ಬಿರುಸಿನಿಂದ ಸಾಗುತ್ತಿರುವ ನಡುವೆಯೇ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದೆ. ಎಸ್‌ಐಟಿ ಮುಖ್ಯಸ್ಥ ಸ್ಥಾನದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಹಿರಿಯ ಐಪಿಎಸ್ ಅಧಿಕಾರಿ, ಐಜಿಪಿ ಎನ್. ಶಶಿಕುಮಾರ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG-IGP) ಲಿಖಿತ ಮನವಿ ಸಲ್ಲಿಸಿದ್ದಾರೆ.

ಹೋರಾಟಗಾರರ ಅಪಸ್ವರ ಮತ್ತು ವಿರೋಧ: ಸೌಜನ್ಯ ಕುಟುಂಬಸ್ಥರು ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಸಂಘಟನೆಗಳು ಐಜಿಪಿ ಶಶಿಕುಮಾರ್ ಅವರ ನೇಮಕಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಶಶಿಕುಮಾರ್ ಅವರು ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ವೇಳೆ ಸ್ಥಳೀಯ ಪ್ರಭಾವಿಗಳೊಂದಿಗೆ ಒಡನಾಟ ಹೊಂದಿದ್ದರು, ಹೀಗಾಗಿ ಅವರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೋರಾಟಗಾರರು ಆರೋಪಿಸಿದ್ದರು. ಇತ್ತೀಚೆಗೆ ಹೋರಾಟಗಾರರ ನಿಯೋಗವು ಗೃಹ ಸಚಿವರನ್ನು ಭೇಟಿಯಾಗಿ ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸುವಂತೆ ಒತ್ತಾಯಿಸಿತ್ತಲ್ಲದೆ, ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿಯೂ ಎಚ್ಚರಿಸಿತ್ತು.

ತನಿಖೆಯ ಪಾರದರ್ಶಕತೆಗಾಗಿ ನಿರ್ಧಾರ: ಸಾರ್ವಜನಿಕ ವಲಯದಲ್ಲಿ ಎದ್ದಿರುವ ಅಪಸ್ವರಗಳು ಹಾಗೂ ತನಿಖೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕುಮಾರ್ ಅವರು ಸ್ವತಃ ತಾವೇ ಈ ಜವಾಬ್ದಾರಿಯಿಂದ ಕೈಬಿಡುವಂತೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ವಿಶೇಷವೆಂದರೆ, ಅಕ್ಟೋಬರ್ 28 ರಂದು ಶಶಿಕುಮಾರ್ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮರುತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿದ್ದರು. ಅಲ್ಲದೆ, ಅಕ್ಟೋಬರ್ 30 ರಂದು ಆರಂಭಿಕ ತನಿಖಾಧಿಕಾರಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಿತ್ತು. ಈ ಹಂತದಲ್ಲೇ ಮುಖ್ಯಸ್ಥರು ಹಿಂದೆ ಸರಿಯಲು ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ತಂಡದ ಮತ್ತೊಬ್ಬ ಪ್ರಮುಖ ಸದಸ್ಯರಾದ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಅವರು ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದು, ಇದೀಗ ಮುಖ್ಯಸ್ಥರೂ ವಿನಾಯಿತಿ ಕೋರಿರುವುದರಿಂದ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಸ್‌ಐಟಿಗೆ ನೂತನ ದಕ್ಷ ಅಧಿಕಾರಿಯನ್ನು ನೇಮಕ ಮಾಡುವ ಸಾಧ್ಯತೆಯಿದೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!