Connect with us

national

ಚೀನಾದ ನಾಯಿಯನ್ನು ಭಾರತದ ಅವಿಷ್ಕಾರ ಎಂಬಂತೆ ಬಿಂಬಿಸಿರುವುದು ಮುಜುಗುರ ತಂದಿದೆ- ಸಿ.ಎಂ. ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಎಡವಟ್ಟಿಗೆ ಜಾಗತಿಕ ಮಟ್ಟದಲ್ಲಿ ಹಾಸ್ಯಕ್ಕೆ ಗುರಿಯಾದ ಭಾರತ

Published

on

ದೆಹಲಿಯ ಭರತ್ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ (India AI Impact Summit) ಪ್ರದರ್ಶಿಸಲಾದ ‘ರೋಬೋಡಾಗ್’ (Robodog) ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರವು ಈ ಹಿಂದೆ ಯುಪಿಎ (UPA) ಸರ್ಕಾರದ ಯೋಜನೆಗಳನ್ನು ನಕಲು ಮಾಡಿ ತನ್ನದೇ ಎಂದು ಹೆಸರಿಟ್ಟುಕೊಂಡಿತ್ತು. ಈಗ ತಂತ್ರಜ್ಞಾನದಲ್ಲೂ ಅದೇ ‘ಕಾಪಿ-ಪೇಸ್ಟ್’ ಸಂಸ್ಕೃತಿಯನ್ನು ಮುಂದುವರಿಸಿದೆ ಎಂದು ಸಿದ್ದರಾಮಯ್ಯ ಎಕ್ಸ್​​ ಖಾತೆಯಲ್ಲಿ ಟೀಕಿಸಿದ್ದಾರೆ.


ಸಮ್ಮೇಳನದಲ್ಲಿ ಪ್ರದರ್ಶಿಸಲಾದ ರೋಬೋಡಾಗ್ ಚೀನಾ ಮೂಲದ ‘ಯೂನಿಟ್ರೀ’ (Unitree) ಕಂಪನಿಯ ಉತ್ಪನ್ನವಾಗಿದೆ. ಆದರೆ ಇದನ್ನು ಭಾರತದ್ದೇ ಆವಿಷ್ಕಾರ ಎಂಬಂತೆ ಬಿಂಬಿಸಿರುವುದು ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರ ತಂದಿದೆ ಎಂದು ಅವರು ಕಿಡಿಕಾರಿದ್ದಾರೆ. ಮೋದಿಯವರ ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನವು ಈಗ ‘ಫೇಕ್ ಇನ್ ಇಂಡಿಯಾ’ (Fake in India) ಆಗಿ ಬದಲಾಗಿದೆ. ಸ್ವದೇಶಿ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಬದಲು ಪರಕೀಯರ ತಂತ್ರಜ್ಞಾನಕ್ಕೆ ಭಾರತದ ಲೇಬಲ್ ಅಂಟಿಸುವ ಕೆಲಸ ಆಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟ್ ಪ್ರದರ್ಶನ
ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ ಉತ್ತರ ಪ್ರದೇಶದ ಗಾಲ್ಗೋಟಿಯಸ್ ವಿಶ್ವವಿದ್ಯಾಲಯವು ಒಂದು ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿತು. ಇದಕ್ಕೆ ‘ಒರಿಯನ್’ (Orion) ಎಂದು ಹೆಸರಿಡಲಾಗಿತ್ತು. ಆದರೆ, ನೆಟ್ಟಿಗರು ಇದನ್ನು ತಕ್ಷಣವೇ ಗುರುತಿಸಿ, ಇದು ಚೀನಾದ ‘ಯೂನಿಟ್ರೀ’ (Unitree) ಕಂಪನಿಯ Unitree Go2 ಮಾಡೆಲ್ ಎಂದು ಸಾಕ್ಷ್ಯ ಸಮೇತ ಬಹಿರಂಗಪಡಿಸಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಇದನ್ನು ನಮ್ಮ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ” ಎಂದು ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಚೀನಾದಿಂದ ಕೇವಲ 2-3 ಲಕ್ಷ ರೂಪಾಯಿಗೆ ಸಿಗುವ ರೋಬೋಟ್ ಎಂದು ಗೊತ್ತಾದಾಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಚೀನಾದ ರೋಬೋಟಿಕ್ ತನ್ನದೇ ಸಾಧನೆಯೆಂಬಂತೆ ಪ್ರದರ್ಶಿಸಿದ್ದ ಆರೋಪಕ್ಕೆ ಗುರಿಯಾದ ಗಾಲ್ಗೋಟಿಯಾಸ್ (Galgotias) ವಿಶ್ವವಿದ್ಯಾಲಯ ಬುಧವಾರ ಕ್ಷಮೆಯಾಚಿಸಿದೆ.
ಇತ್ತೀಚಿನ AI ಶೃಂಗಸಭೆಯಲ್ಲಿ ಸೃಷ್ಟಿಯಾದ ಗೊಂದಲಕ್ಕೆ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಕ್ಷಮೆಯಾಚಿಸುತ್ತದೆ. ಉತ್ಪನ್ನದ ತಾಂತ್ರಿಕ ಮೂಲದ ಬಗ್ಗೆ ಮಾಹಿತಿಯಿಲ್ಲದ ವ್ಯಕ್ತಿಯೊಬ್ಬರು, ಮಾಧ್ಯಮದವರೊಂದಿಗೆ ತಪ್ಪು ಮಾಹಿತಿಯನ್ನು ನೀಡಿರುವುದು ಈ ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಈ ಜಾಗತಿಕ ವೇದಿಕೆಯಲ್ಲಿ ತಂತ್ರಜ್ಞಾನವನ್ನು ತಪ್ಪಾಗಿ ಪ್ರತಿನಿಧಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ, ನಮ್ಮ ವಿಶ್ವ ವಿದ್ಯಾಲಯವು ಶೈಕ್ಷಣಿಕ ಸಮಗ್ರತೆ, ಪಾರದರ್ಶಕತೆ ಮತ್ತು ಕೆಲಸದ ಜವಾಬ್ದಾರಿಯುತ ಪ್ರಾತಿನಿಧ್ಯಕ್ಕೆ ಬದ್ಧವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.


ಚೀನಾ ಮೂಲದ ಯುನಿಟ್ರೀ ಗೋ2 ರೋಬೋಟಿಕ್ ನಾಯಿಯನ್ನು, ತಾವೇ ನಿರ್ಮಿಸಿದ್ದೇವೆ ಮತ್ತು ಇದರ ಹೆಸರು ಓರಿಯನ್ ಎಂದು ಹೇಳಿಕೆ ನೀಡಿದ ಹಿನ್ನಲೆ ವಿವಾದ ಭುಗಿಲ್ಲೆದ್ದಿದೆ. ಪ್ರಾಧ್ಯಾಪಕರೊಬ್ಬರು ರೋಬೋಡಾಗ್​ನ್ನು ಓರಿಯನ್ ಎಂದು ಪರಿಚಯಿಸಿ ಅದನ್ನು ಸಂಸ್ಥೆಯ ಶ್ರೇಷ್ಠತಾ ಕೇಂದ್ರವು ಅಭಿವೃದ್ಧಿಪಡಿಸಿದೆ ಎಂದು ಹೇಳುವ ಕ್ಲಿಪ್ ವೈರಲ್ ಆಗಿತ್ತು.
ವಾಸ್ತವವಾಗಿ ಈ ಸಾಧನವು ಯುನಿಟ್ರೀ ಗೋ2 ಆಗಿದ್ದು, ಇದು ಚೀನಾ ಮೂಲದ ರೊಬೊಟಿಕ್ಸ್ ಕಂಪನಿ ಯುನಿಟ್ರೀ ತಯಾರಿಸಿದ AI-ಚಾಲಿತ ರೋಬೋಟಿಕ್ ನಾಯಿಯಾಗಿದ್ದು, ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿಲ್ಲ ಎಂದು ಆರೋಪಿಸಲಾಗಿದೆ. ನಂತರ, ವಿಶ್ವವಿದ್ಯಾನಿಲಯವು ಈ ಸಾಧನವನ್ನು ನಿರ್ಮಿಸಿದ್ದೇವೆ ಎಂದು ಎಂದಿಗೂ ಹೇಳಿಕೊಂಡಿಲ್ಲ ಮತ್ತು ಅದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಚೀನಾದ ತಯಾರಕರಿಂದ ಖರೀದಿಸಲಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿತು.


ಚೀನಾ ಮೂಲದ ಜಾಗತಿಕ ರೊಬೊಟಿಕ್ಸ್ ಕಂಪನಿಯಾದ ಯುನಿಟ್ರೀಯಿಂದ ಈ ರೋಬೋಟಿಕ್ ನಾಯಿಯನ್ನು ಖರೀದಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕಾ ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯವು ಹೇಳಿಕೆಯಲ್ಲಿ ತಿಳಿಸಿದೆ.
ಸ್ಪಷ್ಟವಾಗಿ ಹೇಳಬೇಕೆಂದರೆ, ಗ್ಯಾಲ್ಗೋಟಿಯಾಸ್ ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ, ಅಥವಾ ನಾವು ಹಾಗೆ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ. ನಾವು ನಿರ್ಮಿಸುತ್ತಿರುವುದು ಶೀಘ್ರದಲ್ಲೇ ಭಾರತದಲ್ಲಿ ಅಂತಹ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ, ಎಂಜಿನಿಯರ್ ಮಾಡುವ ಮತ್ತು ತಯಾರಿಸುವ ಮನಸ್ಸುಗಳನ್ನು ಎಂದು ವಿಶ್ವವಿದ್ಯಾನಿಲಯವು ತಿಳಿಸಿದೆ.
ಆದರೆ ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆ ಸ್ಥಳದಲ್ಲಿರುವ ವಿಶ್ವವಿದ್ಯಾಲಯಕ್ಕೆ ನೀಡಲಾಗಿದ್ದ ಸ್ಟಾಲ್​ನ್ನು ಖಾಲಿ ಮಾಡುವಂತೆ ಕೇಳಲಾಯಿತು. ನಂತರ ಸ್ವಾಲ್​ಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು,

ಎಐ ಶೃಂಗಸಭೆಯಲ್ಲಿ ನಡೆದ ಮಾಧ್ಯಮ ಸಂವಾದದ ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿಯೊಬ್ಬರು “ಒರಿಯನ್” ನ್ನು ಸಂಸ್ಥೆಯ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಯಿತು. ವಿಡಿಯೋದಲ್ಲಿ ಈ ರೋಬೋಟ್ ನಿಗಾವಹಣೆ ಮತ್ತು ಮೇಲ್ವಿಚಾರಣೆ ಕಾರ್ಯಗಳಿಗೆ ಬಳಸಬಹುದು ಎಂದು ವಿವರಿಸಲಾಗಿತ್ತು. ಬಳಿಕ ಇದು ಸುಮಾರು 2–3 ಲಕ್ಷ ರೂಪಾಯಿ ಬೆಲೆಯ Unitree Go2 ಮಾದರಿಯೊಂದಿಗೆ ಹೋಲಿಕೆಯಾಗುತ್ತದೆ ಎಂದು ಹಲವರು ಹೇಳಿದ್ದರು.

ಇದರ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ X ನಲ್ಲಿ ಪ್ರತಿಕ್ರಿಯಿಸಿ, AI ಸಮಿಟ್ ನ್ನು “ಅವ್ಯವಸ್ಥಿತ ಪಿಆರ್ ಪ್ರದರ್ಶನ” ಎಂದು ಟೀಕಿಸಿದ್ದಾರೆ. ಚೀನಾದ ಉತ್ಪನ್ನಗಳನ್ನು ಪ್ರದರ್ಶಿಸಿರುವುದರಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹಾಸ್ಯಕ್ಕೆ ಗುರಿಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೂಡ ಚೀನಾದ ರೋಬೋಟ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

Unitree Robotics ಕಂಪನಿ ಪ್ರಾಣಿಗಳ ಚಲನವಲನವನ್ನು ಅನುಕರಿಸುವ ನಾಲ್ಕುಕಾಲಿನ ರೋಬೋಟ್‌ಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧವಾಗಿದ್ದು, ಪರಿಶೀಲನೆ, ಸಂಶೋಧನೆ ಮತ್ತು ನಿಗಾವಹಣೆ ಸೇರಿದಂತೆ ಹಲವು ಕಾರ್ಯಗಳಿಗೆ ಅವುಗಳನ್ನು ಬಳಸಲಾಗುತ್ತದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

court

ಸುದ್ದಿ ಮಾಡಿದವನನ್ನೇ ಆರೋಪಿ ಮಾಡಿದ್ದು ಯಾಕೆ? ಪತ್ರಕರ್ತನ ಮೇಲಿನ ಎಫ್‌ಐಆರ್‌ಗೆ ಹೈಕೋರ್ಟ್ ತರಾಟೆ

Published

on

ಸರ್ಕಾರಿ ಶಾಲೆಯ ಕಳಪೆ ಮೂಲಸೌಕರ್ಯ ಮತ್ತು ಅವ್ಯವಸ್ಥೆಗಳನ್ನು ವರದಿ ಮಾಡಿದ ಪತ್ರಕರ್ತನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಮುಂದಿನ ಯಾವುದೇ ಕ್ರಮಕ್ಕೆ ತಡೆ ನೀಡಿದೆ. ಈ ಸಂಪೂರ್ಣ ಪ್ರಕರಣವನ್ನು ರಾಜ್ಯ ಸರ್ಕಾರದ “ಅಹಂಕಾರದ ವಿಷಯ” (Ego Issue) ಮತ್ತು “ಸಂದೇಶ ತಂದವನನ್ನು ಕೊಲ್ಲುವ” (Killing the Messenger) ಸೇಡಿನ ಕ್ರಮ ಎಂದು ಹೈಕೋರ್ಟ್ ಬಣ್ಣಿಸಿದೆ.

ಪ್ರಕರಣದ ಹಿನ್ನೆಲೆ: ಲಖನೌ ಮೂಲದ ಪತ್ರಕರ್ತ ಅಮಿತ್ ಯಾದವ್ ಅವರು ಆಗಸ್ಟ್ 20ರಂದು ಗೋಸಾಯಿಂಗಂಜ್‌ನ ಬೆಗ್ರಿಯಾ ಮೌನಲ್ಲಿರುವ ‘ಪೂರ್ವ ಮಾಧ್ಯಮಿಕ ವಿದ್ಯಾಲಯ’ಕ್ಕೆ ಭೇಟಿ ನೀಡಿದ್ದರು. ಶಾಲೆ ಕಳಪೆ ಸ್ಥಿತಿಯಲ್ಲಿದ್ದು, ಹಾಳಾದ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯವಿಲ್ಲದಿರುವುದನ್ನು ಅವರು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದರು. ಅಲ್ಲದೆ ಕೆಲ ಶಿಕ್ಷಕರ ಸಂದರ್ಶನವನ್ನೂ ನಡೆಸಿದ್ದರು.

ಆದರೆ, ಇದಕ್ಕೆ ಪ್ರತಿಯಾಗಿ ಸ್ಥಳೀಯ ಆಡಳಿತ ಹಾಗೂ ಶಾಲೆಯ ಅಧಿಕಾರಿಗಳು, “ಶಾಲೆ ಉತ್ತಮ ಸ್ಥಿತಿಯಲ್ಲಿದೆ, ಶೌಚಾಲಯಗಳು ಸ್ವಚ್ಛವಾಗಿವೆ. ಪತ್ರಕರ್ತ ಅನುಮತಿಯಿಲ್ಲದೆ ಒಳನಮೂಗ್ಗಿ, ಮಕ್ಕಳ ಓದಿಗೆ ತೊಂದರೆ ಉಂಟುಮಾಡಿದ್ದಾರೆ ಹಾಗೂ ಇಬ್ಬರು ಮಹಿಳಾ ಶಿಕ್ಷಕಿಯರನ್ನು ಒತ್ತಾಯಿಸಿ ಮಾತನಾಡಿಸಿದ್ದಾರೆ. ಇದು ರಾಜಕೀಯ ಪ್ರೇರಿತ ವರದಿ” ಎಂದು ಆರೋಪಿಸಿ ಆಗಸ್ಟ್ 24ರಂದು ಗೋಸಾಯಿಂಗಂಜ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದರು.

ನ್ಯಾಯಾಲಯದ ಮಹತ್ವದ ವೀಕ್ಷಣೆಗಳು ಮತ್ತು ಆದೇಶಗಳು:

‘ಸಂದೇಶ ತಂದವನನ್ನು ಕೊಲ್ಲುವ’ ಯತ್ನ: ನ್ಯಾಯಮೂರ್ತಿಗಳಾದ ಅಬ್ದುಲ್ ಮೋಯಿನ್ ಮತ್ತು ಪ್ರಮೋದ್ ಕುಮಾರ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠವು ಸೆಪ್ಟೆಂಬರ್ 8 ರಂದು ನೀಡಿದ ಆದೇಶದಲ್ಲಿ, ಪತ್ರಕರ್ತನ ವರದಿಗೆ ಪ್ರತಿಕ್ರಿಯೆಯಾಗಿ ಎಫ್‌ಐಆರ್ ದಾಖಲಿಸಿರುವುದು ಮೇಲ್ನೋಟಕ್ಕೆ ‘ಸಂದೇಶ ತಂದವನನ್ನು ಕೊಲ್ಲುವ’ (Killing the messenger) ಹುನ್ನಾರವಾಗಿದೆ ಎಂದು ಸ್ಪಷ್ಟಪಡಿಸಿದೆ.

ಶಾಲೆಯ ಕರಾಳ ಮುಖದ ಫೋಟೋಗಳು: ವಿಚಾರಣೆ ವೇಳೆ ಹಾಜರುಪಡಿಸಿದ ಬಣ್ಣದ ಫೋಟೋಗಳು ಶಾಲೆಯ ಆವರಣ ಹಾಗೂ ಶೌಚಾಲಯಗಳ ‘ಅಧೋಗತಿ’ಯನ್ನು (Abysmal condition) ಮೇಲ್ನೋಟಕ್ಕೆ ಸಾಬೀತುಪಡಿಸುತ್ತವೆ ಎಂದು ನ್ಯಾಯಾಲಯ ಗಮನಿಸಿದೆ.

ಪ್ರತಿಷ್ಠೆಯ ಪ್ರಶ್ನೆಯಾಗಬಾರದು: ಮಕ್ಕಳ ಹಕ್ಕು ಕಾಯ್ದೆ (RTE Act, 2009) ಅಡಿಯಲ್ಲಿ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಪ್ರತ್ಯೇಕ ಶೌಚಾಲಯ ಒದಗಿಸುವುದು ಸರ್ಕಾರದ ಶಾಸನಾಬದ್ಧ ಕರ್ತವ್ಯ. ಪತ್ರಕರ್ತ ಲೋಪ ಎತ್ತಿ ತೋರಿಸಿದಾಗ ಸರ್ಕಾರ ಅದನ್ನು ಅಹಂಕಾರದ ವಿಷಯವಾಗಿ ಪರಿಗಣಿಸದೆ, ಸಮಸ್ಯೆ ಸರಿಪಡಿಸಬೇಕಿತ್ತು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಪ್ರವೇಶ ನಿರ್ಬಂಧವಿಲ್ಲ: ಶಾಲೆಗೆ ಪ್ರವೇಶಿಸದಂತೆ ಯಾವುದೇ ಸಾರ್ವಜನಿಕ ಅಧಿಕಾರಿಯಿಂದ ಮುಂಚಿತವಾಗಿ ಅಧಿಕೃತ ಆದೇಶ ಹೊರಡಿಸಿರಲಿಲ್ಲ. ಹೀಗಿರುವಾಗ ಪೊಲೀಸರು ನೇರವಾಗಿ BNS ಸೆಕ್ಷನ್ 223ರಡಿ ಎಫ್‌ಐಆರ್ ದಾಖಲಿಸಿರುವುದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವೈಯಕ್ತಿಕ ಅಫಿಡವಿಟ್ ಸಲ್ಲಿಕೆಗೆ ಆದೇಶ: ಶಾಲೆಯ ಸದ್ಯದ ಪರಿಸ್ಥಿತಿಯ ಕುರಿತು ಮತ್ತು ಪತ್ರಕರ್ತನ ವರದಿ ಬಳಿಕ (ಆಗಸ್ಟ್ 20ರ ನಂತರ) ಅಲ್ಲಿ ಯಾವುದೇ ದುರಸ್ತಿ ಅಥವಾ ಬದಲಾವಣೆಗಳನ್ನು ಮಾಡಲಾಗಿದೆಯೇ ಎಂಬ ಬಗ್ಗೆ ಸಂಪೂರ್ಣ ವಿವರ ಹಾಗೂ ಫೋಟೋಗಳೊಂದಿಗೆ ಮುಂದಿನ 4 ವಾರಗಳಲ್ಲಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಉತ್ತರ ಪ್ರದೇಶದ ಮೂಲ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

Continue Reading

arrest

ಲಿವ್-ಇನ್ ಸಂಗಾತಿ ಕೊಲೆ ಆರೋಪಿಗೆ ಬಸ್ ನಿಲ್ದಾಣದಲ್ಲೇ ಲಾಠಿ ಚಾರ್ಜ್ – ಪೊಲೀಸರ ಕ್ರಮದ ವಿಡಿಯೋ ವೈರಲ್!

Published

on

ಭಾವನಗರ: ಲಿವ್-ಇನ್ ಸಂಗಾತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಅಪರಾಧ ನಡೆದ ಸ್ಥಳದಲ್ಲೇ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಹಿನ್ನೆಲೆ:

ಭಾವನಗರದ ಬಸ್ ನಿಲ್ದಾಣದಲ್ಲಿ ಸೆಪ್ಟೆಂಬರ್ 3 ರಂದು 40 ವರ್ಷದ ಕಾಜಲ್‌ಬೆನ್ ಬರಿಯಾ ಎಂಬವರ ಮೇಲೆ ಆಕೆಯ ಲಿವ್-ಇನ್ ಸಂಗಾತಿ, 20 ವರ್ಷದ ಫೈಸಲ್ ಅಲಿಯಾಸ್ ಖಟ್ಟಿ ಲಖಾನಿ ಭೀಕರವಾಗಿ ಹಲ್ಲೆ ನಡೆಸಿದ್ದ.

ಕಾಜಲ್‌ಬೆನ್ ಹಾಗೂ ಆಕೆಯ ಸ್ನೇಹಿತ ರವಿ ಗೋಹಿಲ್ ಅವರ ನಡುವೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಫೈಸಲ್ ಜಗಳ ತೆಗೆದಿದ್ದ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ, ಫೈಸಲ್ ಕಾಜಲ್‌ಬೆನ್ ಅವರನ್ನು ನೆಲಕ್ಕೆ ಕೆಡವಿ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಬಲವಾಗಿ ಒದ್ದು, ತೀವ್ರವಾಗಿ ಗಾಯಗೊಳಿಸಿದ್ದ. ತೀವ್ರ ಗಾಯಗೊಂಡಿದ್ದ ಕಾಜಲ್‌ಬೆನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸೆಪ್ಟೆಂಬರ್ 4 ರಂದು ಮೃತಪಟ್ಟಿದ್ದರು. ಮೃತರ ತಾಯಿ ನೀಡಿದ ದೂರಿನನ್ವಯ ಪೊಲೀಸರು ಫೈಸಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಸ್ಥಳ ಮಹಜರು ವೇಳೆ ಬಸ್ ನಿಲ್ದಾಣದಲ್ಲೇ ಥಳಿತ:

ತನಿಖೆಯ ಭಾಗವಾಗಿ ನೀಲಾಂಬಾಗ್ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿ ಫೈಸಲ್‌ನನ್ನು ಘಟನೆ ನಡೆದ ಬಸ್ ನಿಲ್ದಾಣಕ್ಕೆ ಕರೆತಂದು ‘ದೃಶ್ಯ ಮರುನಿರ್ಮಾಣ’ (Crime Scene Recreation) ಮಾಡುತ್ತಿದ್ದರು. ಈ ವೇಳೆ ಹಗ್ಗದಿಂದ ಕಟ್ಟಿ ಕರೆತರಲಾಗಿದ್ದ ಆರೋಪಿಗೆ ಪೊಲೀಸರು ಕೋಲು ಹಾಗೂ ಲಾಠಿಗಳಿಂದ ಸಾರ್ವಜನಿಕರ ಎದುರಲ್ಲೇ ಥಳಿಸಿದ್ದಾರೆ.

ಘಟನೆಯ ವಿಡಿಯೋದಲ್ಲಿ ಪೊಲೀಸರು ಹಾಗೂ ನೂರಾರು ಸಾರ್ವಜನಿಕರು ಆರೋಪಿಯನ್ನು ಸುತ್ತುವರಿದಿರುವುದು ಮತ್ತು ಪೊಲೀಸರು ಆತನಿಗೆ ಲಾಠಿಯಿಂದ ಹೊಡೆಯುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ.

ಪೋಲಿಸರ ಕ್ರಮ ಸಮರ್ಥನೆ:

ಸಾರ್ವಜನಿಕವಾಗಿ ಆರೋಪಿಗೆ ಥಳಿಸಿದ ಕ್ರಮವನ್ನು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. “ಈ ಕೊಲೆ ಕೃತ್ಯವು ಅತ್ಯಂತ ಭೀಕರವಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಈ ಘಟನೆಯಿಂದ ಪೊಲೀಸ್ ಇಲಾಖೆಯ ವರ್ಚಸ್ಸಿಗೆ ಧಕ್ಕೆಯಾಗಿದ್ದಲ್ಲದೆ, ಕಾನೂನು-ಸುವ್ಯವಸ್ಥೆಯ ಮೇಲಿನ ನಂಬಿಕೆ ಕುಸಿದಿತ್ತು. ಹೀಗಾಗಿ ಅಪರಾಧಿಗಳಿಗೆ ಎಚ್ಚರಿಕೆ ನೀಡಲು ಮತ್ತು ಸಾರ್ವಜನಿಕರಲ್ಲಿ ಧೈರ್ಯ ತುಂಬಲು ‘ಹೆಚ್ಚುವರಿ ಕಠಿಣ ಕ್ರಮ’ ಕೈಗೊಳ್ಳಬೇಕಾಯಿತು” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ಅಪರಾಧ ಹಿನ್ನೆಲೆ:

ಆರೋಪಿ ಫೈಸಲ್ ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆತನ ವಿರುದ್ಧ ದರೋಡೆ ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸದ್ಯ ಪೊಲೀಸರು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ದಾಖಲೆಗಳು ಹಾಗೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

Continue Reading

MODI

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೂ ಮುನ್ನ ಭದ್ರತಾಲೋಪ: ನಕಲಿ PMO ಐಡಿ, ಬಂದೂಕು ಹೊಂದಿದ್ದ ಇಬ್ಬರು ಮುಂಬೈನಲ್ಲಿ ವಶಕ್ಕೆ!

Published

on

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಬೇಕಿದ್ದ ಕಾರ್ಯಕ್ರಮದ ಸ್ಥಳದಲ್ಲಿ ಭಾರೀ ಭದ್ರತಾಲೋಪದ ಯತ್ನವೊಂದು ಬೆಳಕಿಗೆ ಬಂದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ, ನಕಲಿ ಪಿಎಂಒ (PMO) ಗುರುತಿನ ಚೀಟಿ ಹಾಗೂ ಬಂದೂಕು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಬೈನ ಬಾಂದ್ರಾ-ಕುರ್ಲಾ ಸಂಕೀರ್ಣದಲ್ಲಿರುವ ‘ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ’ದಲ್ಲಿ (NMACC) ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಪ್ರಧಾನಿಯವರ ಆಗಮನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ಕಾರ್ಯಕ್ರಮದ ಆವರಣದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ನಕಲಿ ಐಡಿ, ಅಂಗರಕ್ಷಕನ ಬಳಿ ಬಂದೂಕು! ವಶಕ್ಕೆ ಪಡೆಯಲಾದ 24 ವರ್ಷದ ರೋಹನ್ ಪಾರೇಖ್ ಎಂಬಾತ, ತಾನು ಪ್ರಧಾನಮಂತ್ರಿ ಕಚೇರಿಯ (PMO) ಅಧಿಕಾರಿ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಆದರೆ, ಆತ ತೋರಿಸಿದ ಗುರುತಿನ ಚೀಟಿಯನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಆತನೊಂದಿಗೆ ಬಂದಿದ್ದ ಅಂಗರಕ್ಷಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಬಳಿ ಅಕ್ರಮವಾಗಿ ಬಂದೂಕು ಪತ್ತೆಯಾಗಿದೆ.

ಪ್ರಧಾನಿ ಅವರ ಭದ್ರತೆಯ ದೃಷ್ಟಿಯಿಂದ ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಭದ್ರತಾ ಪಡೆಗಳು ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿವೆ.

ಉದ್ದೇಶವೇನು? ತನಿಖೆ ಚುರುಕು: ಇಬ್ಬರು ವ್ಯಕ್ತಿಗಳು ನಕಲಿ ಐಡಿ ಕಾರ್ಡ್ ಹಾಗೂ ಮಾರಕಾಸ್ತ್ರದೊಂದಿಗೆ ಕಾರ್ಯಕ್ರಮದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ಹಿಂದಿನ ನಿಜವಾದ ಉದ್ದೇಶವೇನು ಎಂಬುದರ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಮೊಬೈಲ್ ಫೋನ್‌ಗಳು, ಗುರುತಿನ ದಾಖಲೆಗಳು ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಯ ನಂತರ ಆರೋಪಿಗಳ ವಿರುದ್ಧ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2026
ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ (GFF) 2026 ಅನ್ನು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ಹಾಗೂ ಪ್ರಭಾವಶಾಲಿ ವಾರ್ಷಿಕ ಫಿನ್‌ಟೆಕ್ ಸಮ್ಮೇಳನಗಳಲ್ಲಿ ಒಂದಾಗಿದೆ.

ನಾಲ್ಕು ದಿನಗಳ ಕಾಲ ನಡೆಯಲಿರುವ GFF 2026ರ ಈ ಬಾರಿಯ ಥೀಮ್: “Potential to Impact: Agentic AI, Tokenisation, Quantum – Trusted, Connected, Global Systems for Inclusive Finance.” ಆಗಿದೆ.

Continue Reading

Trending

Copyright © 2025 Deevatige