Connect with us

state

ಪ್ರೇಮ ವಿವಾಹವಾದ ಟೆಕ್ಕಿ ದಂಪತಿಯ ದುರಂತ ಅಂತ್ಯ: ಪತಿ ಆತ್ಮಹತ್ಯೆ ಬೆನ್ನಲ್ಲೇ ಪತ್ನಿಯೂ ಸಾವು!

Published

on


ಪ್ರೀತಿಸಿ ಮದುವೆಯಾಗಿದ್ದ ಅಂತರ್‌ಧರ್ಮೀಯ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿಗಳು ವಾರದ ಅಂತರದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಗರದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ತೆಲಂಗಾಣದ ಹೈದರಾಬಾದ್ ಮೂಲದ ಭಾನುಚಂದ್ರರೆಡ್ಡಿ (34) ಹಾಗೂ ಅವರ ಪತ್ನಿ ಸಹಿದಾ ಸಿರಾಜ್‌ (31) ಎಂದು ಗುರುತಿಸಲಾಗಿದೆ.

ಭಾನುಚಂದ್ರರೆಡ್ಡಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೆ, ಸಹಿದಾ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು, ಅಂತರ್‌ಧರ್ಮೀಯ ವಿವಾಹವಾಗಿದ್ದ ವಿಚಾರವನ್ನು ಪೋಷಕರಿಂದ ಮುಚ್ಚಿಟ್ಟಿದ್ದರು. ಕಳೆದ ಆರು ತಿಂಗಳಿನಿಂದ ಥಣಿಸಂದ್ರ ಮುಖ್ಯರಸ್ತೆಯ ಭಾರತಿಸಿಟಿಯಲ್ಲಿರುವ ‘ನಿಕಿಹೋಮ್‌’ ಅಪಾರ್ಟ್‌ಮೆಂಟ್‌ನ 8ನೇ ಮಹಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದರು.

ಕೆಲಸ ಕಳೆದುಕೊಂಡಿದ್ದ ಭಾನುಚಂದ್ರರೆಡ್ಡಿ:
ಮೂಲಗಳ ಪ್ರಕಾರ, ಆರು ತಿಂಗಳ ಹಿಂದೆ ಎಐ (AI) ತಂತ್ರಜ್ಞಾನದ ಕಾರಣದಿಂದಾಗಿ ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿದ್ದ ಭಾನುಚಂದ್ರರೆಡ್ಡಿ ಭಾರತಕ್ಕೆ ಮರಳಿದ್ದರು. ನಂತರ ಬೇರೆಲ್ಲೂ ಕೆಲಸ ಸಿಗದ ಕಾರಣ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಒಂದೇ ವಾರದಲ್ಲಿ ನಡೆದ ಎರಡು ಸಾವು:
ಪತಿಯ ಆತ್ಮಹತ್ಯೆ: ಕಳೆದ ವಾರ ಸಹಿದಾ ಅವರು ಹೈದರಾಬಾದ್‌ಗೆ ಕುಟುಂಬಸ್ಥರನ್ನು ನೋಡಲು ತೆರಳಿದ್ದ ಸಮಯದಲ್ಲಿ, ಭಾನುಚಂದ್ರರೆಡ್ಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪತ್ನಿಯ ದುರಂತ ಅಂತ್ಯ: ನಿನ್ನೆ ಹೈದರಾಬಾದ್‌ನಿಂದ ವಾಪಸ್ ಬಂದ ಸಹಿದಾ ಅವರು ಪತಿ ಸಾವನ್ನಪ್ಪಿರುವುದನ್ನು ಕಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಅದೇ ನೋವಿನಲ್ಲಿ ಅಪಾರ್ಟ್‌ಮೆಂಟ್‌ನ 11ನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಕ್ಕೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

ಸಹಿದಾ ಅವರು ರಾಜಕೀಯ ಪ್ರಭಾವವಿರುವ ಕುಟುಂಬದ ಹಿನ್ನೆಲೆ ಹೊಂದಿದ್ದು, ಅವರಿಗೆ ಬೇರೆ ಕಡೆ ಮದುವೆ ಮಾಡಲು ಪೋಷಕರು ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೊತ್ತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

BJP

ರಾಜ್ಯ ಬಿಜೆಪಿಯಲ್ಲಿ ‘ತ್ರಿಬಲ್ ಸರ್ಜರಿ’ಗೆ ಮುಹೂರ್ತ ಫಿಕ್ಸ್: ವಿಜಯೇಂದ್ರ ಔಟ್, ಸೋಮಣ್ಣ ಇನ್? ಬಿಎಸ್ ವೈಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ !

Published

on

ಬೆಂಗಳೂರು: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿರುವಾಗಲೇ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಸಾಂಸ್ಥಿಕ ಹಾಗೂ ನಾಯಕತ್ವ ಬದಲಾವಣೆಗಳಿಗೆ ಹೈಕಮಾಂಡ್ ವೇದಿಕೆ ಸಜ್ಜುಗೊಳಿಸಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಜಕೀಯ ಚರ್ಚೆಗಳ ಪ್ರಕಾರ, ನವೆಂಬರ್ ಮಾಸಾಂತ್ಯದೊಳಗೆ ರಾಜ್ಯ ಬಿಜೆಪಿಯಲ್ಲಿ ಮೂರು ಪ್ರಮುಖ ‘ಮೇಜರ್ ಸರ್ಜರಿ’ಗಳು ನಡೆಯುವುದು ಬಹುತೇಕ ಖಚಿತವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಸುತ್ತಲೇ ಸುತ್ತುತ್ತಿರುವ ಈ ಬೆಳವಣಿಗೆಯಲ್ಲಿ, ಅವರ ಒಬ್ಬ ಪುತ್ರ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರೆ, ಇನ್ನೊಬ್ಬ ಪುತ್ರನಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ದಟ್ಟವಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಸುದೃಢಗೊಳಿಸುವುದು ಹಾಗೂ ಪಕ್ಷದ ಭಿನ್ನಮತೀಯರನ್ನು ತಣ್ಣಗಾಗಿಸಿ ಮುಂಬರುವ ಸವಾಲುಗಳಿಗೆ ಪಕ್ಷವನ್ನು ಸಜ್ಜುಗೊಳಿಸುವುದು ಹೈಕಮಾಂಡ್‌ನ ಮುಖ್ಯ ಉದ್ದೇಶವಾಗಿದೆ.

ರಾಜ್ಯ ಬಿಜೆಪಿಯಲ್ಲಿ ಸಂಭವಿಸಲಿರುವ ಆ 3 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ:

1. ಬಿ.ವೈ. ವಿಜಯೇಂದ್ರ ಔಟ್ – ವಿ. ಸೋಮಣ್ಣಗೆ ರಾಜ್ಯ ಬಿಜೆಪಿ ಸಾರಥ್ಯ?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ 3 ವರ್ಷಗಳ ಅವಧಿ ನವೆಂಬರ್ 10ಕ್ಕೆ ಮುಕ್ತಾಯಗೊಳ್ಳಲಿದೆ. ಪಕ್ಷದಿಂದ ಉಚ್ಚಾಟಿತರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷಕ್ಕೆ ವಾಪಸ್ ಬರಲು “ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು” ಎಂಬ ಷರತ್ತು ವಿಧಿಸಿದ್ದರು. ಈ ಷರತ್ತಿಗೆ ವಿಜಯೇಂದ್ರ ಕೂಡ ಸಮ್ಮತಿ ಸೂಚಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ, ಪ್ರಸ್ತುತ ಕೇಂದ್ರ ರೈಲ್ವೇ ರಾಜ್ಯ ಸಚಿವರಾಗಿರುವ ವಿ. ಸೋಮಣ್ಣ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಹೈಕಮಾಂಡ್ ಫೈನಲ್ ಮಾಡಿದೆ ಎನ್ನಲಾಗುತ್ತಿದೆ. ಸೋಮಣ್ಣ ಅವರ ನೇಮಕಕ್ಕೆ ಯತ್ನಾಳ್ ಸೇರಿದಂತೆ ಬಿಜೆಪಿಯ ಯಾವುದೇ ಭಿನ್ನಮತೀಯ ನಾಯಕರ ತಕರಾರಿಲ್ಲದಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

2. ವಿಧಾನಸಭೆ ವಿಪಕ್ಷ ನಾಯಕ ಬದಲು: ಸುನಿಲ್ ಕುಮಾರ್ ಮುಂಚೂಣಿಗೆ!

ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಅವಧಿಯೂ ನವೆಂಬರ್ 17ಕ್ಕೆ 3 ವರ್ಷ ಪೂರೈಸಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ನಿರಂತರ ಹೋರಾಟ ನಡೆಸುತ್ತಿದ್ದರೂ, ಪಕ್ಷದ ಒಳಗಿನ ನಾಯಕರೇ ಅವರ ವಿರುದ್ಧ “ಹೊಂದಾಣಿಕೆ ರಾಜಕೀಯ”ದ ಆರೋಪಗಳನ್ನು ಮಾಡುತ್ತಿದ್ದರು.

ಹೀಗಾಗಿ, ಕರಾವಳಿ ಭಾಗದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ನೂತನ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲು ವರಿಷ್ಠರು ಒಲವು ತೋರಿದ್ದಾರೆ. ಕಳೆದ ಶಾಸನಸಭೆ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಯಶಸ್ವಿಯಾಗಿ ಎತ್ತಿಹಿಡಿದು ಗಮನಸೆಳೆದಿದ್ದ ಸುನಿಲ್ ಕುಮಾರ್ ಅವರಿಗೆ ಈ ಜವಾಬ್ದಾರಿ ಸಿಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ.

3. ಬಿ.ವೈ. ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನ?

ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸುವುದರಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬೇಸರವಾಗದಂತೆ ನೋಡಿಕೊಳ್ಳಲು ಹೈಕಮಾಂಡ್ ಹೊಸ ಪ್ರಪೋಸಲ್ ಒಂದನ್ನು ಮುಂದಿಟ್ಟಿದೆ.

ಇದರ ಪ್ರಕಾರ, ಕೇಂದ್ರ ಸಚಿವ ಸ್ಥಾನದಲ್ಲಿದ್ದ ವಿ. ಸೋಮಣ್ಣ ರಾಜ್ಯ ರಾಜಕಾರಣಕ್ಕೆ (ರಾಜ್ಯಾಧ್ಯಕ್ಷರಾಗಿ) ಮರಳಿದರೆ, ತೆರವಾಗುವ ‘ಕರ್ನಾಟಕ ಕೋಟಾ’ದ ಕೇಂದ್ರ ಸಚಿವ ಸ್ಥಾನವನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಮೂರು ಬಾರಿ ಸಂಸದರಾಗಿ ಸತತವಾಗಿ ಗೆದ್ದು ಬಂದಿರುವ ರಾಘವೇಂದ್ರ ಅವರಿಗೆ ಈ ಮೂಲಕ ಸೂಕ್ತ ಸ್ಥಾನಮಾನ ಕಲ್ಪಿಸಲು ಯಡಿಯೂರಪ್ಪ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಕುಮಾರ್ ಬಂಗಾರಪ್ಪ ಹೇಳಿಕೆಯಿಂದ ಹೆಚ್ಚಿದ ಕಾವು

ವಿಜಯೇಂದ್ರ ಅವರ ಸ್ಥಾನಕ್ಕೆ ಹೊಸಬರ ಆಯ್ಕೆಯಾಗುವುದು ಶೇ. 99ರಷ್ಟು ಪಕ್ಕಾ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ನೀಡಿದ ಹೇಳಿಕೆ ಈ ಎಲ್ಲಾ ಊಹಾಪೋಹಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.

ಈ ಮೂರು ಮೇಜರ್ ಸರ್ಜರಿಗಳ ಮೂಲಕ ಯತ್ನಾಳ್ ಹಾಗೂ ಈಶ್ವರಪ್ಪ ಅವರಂತಹ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತಂದು, ಭಿನ್ನಮತ ಶಮನಗೊಳಿಸಿ 2028ರ ಚುನಾವಣೆಗೆ ಈಗಿನಿಂದಲೇ ಕಮಲ ಪಡೆಯನ್ನು ಸಜ್ಜುಗೊಳಿಸಲು ಕೇಂದ್ರ ನಾಯಕತ್ವ ಗ್ರೀನ್ ಸಿಗ್ನಲ್ ನೀಡಿದೆ.

Continue Reading

BANGALORE

ಸಿದ್ದರಾಮಯ್ಯ ವಿರುದ್ಧದ ವಿವಾದಾತ್ಮಕ ಸ್ಟಿಂಗ್ ವಿಡಿಯೋ ಪ್ರಕರಣ: ಪವರ್ ಟಿವಿ ರಾಕೇಶ್ ಶೆಟ್ಟಿ ಮನೆ, ಕಚೇರಿ ಮೇಲೆ ಸಿಸಿಬಿ ದಾಳಿ.

Published

on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸಲಾಗಿದೆ ಎನ್ನಲಾದ ವಿವಾದಾತ್ಮಕ ಸ್ಟಿಂಗ್ ವಿಡಿಯೋ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಪ್ರಕರಣದ ಪ್ರಮುಖ ಶಂಕಿತರಾಗಿರುವ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಸೋಮವಾರ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ದಿಢೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.ಬೆಳಗಿನಿಂದಲೇ ನಗರದ ವಿವಿಧ ಭಾಗಗಳಲ್ಲಿ ಸಿಸಿಬಿಯ ಹಲವು ತನಿಖಾ ತಂಡಗಳು ಏಕಕಾಲಕ್ಕೆ ಕಾರ್ಯಾಚರಣೆಗಿಳಿದಿದ್ದವು. ಈ ವಿವಾದಾತ್ಮಕ ಸ್ಟಿಂಗ್ ವಿಡಿಯೋ ಸಿದ್ಧಪಡಿಸುವಲ್ಲಿ ರಾಕೇಶ್ ಶೆಟ್ಟಿ ಹಾಗೂ ಕಾಂಗ್ರೆಸ್‌ನಿಂದ ಉಚ್ಚಾಟಿತಗೊಂಡಿರುವ ನಾಯಕಿ ಕೃಪಾ ಆಳ್ವ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು, ಈಗಾಗಲೇ ಇಬ್ಬರನ್ನೂ ಪೊಲೀಸರು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.

ದೆಹಲಿ ಫೋನ್, ಕುಮಾರಸ್ವಾಮಿ ನಿವಾಸದ ಲಿಂಕ್.

ಸಿಸಿಬಿ ದಾಳಿಗೆ ಮುನ್ನ ತನಿಖೆಯಲ್ಲಿ ಮತ್ತೊಂದು ಮಹತ್ವದ ವಿಷಯ ಬೆಳಕಿಗೆ ಬಂದಿತ್ತು. ಸ್ಟಿಂಗ್ ವಿಡಿಯೋವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ಬಳಸಲಾಗಿದ್ದ ಮೊಬೈಲ್ ಫೋನ್ ಅನ್ನು ದೆಹಲಿಯಲ್ಲಿ ಖರೀದಿಸಲಾಗಿತ್ತು ಹಾಗೂ ಅದನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲಿ ಹಸ್ತಾಂತರಿಸಲಾಗಿತ್ತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ನವೆಂಬರ್ 1ರಂದು ಮಾಹಿತಿ ನೀಡಿದ್ದರು.ಬಂಧಿತ ಆರೋಪಿ ರಿತೇಶ್ ಪಾಂಡೆ ನೀಡಿದ ಹೇಳಿಕೆಯನ್ನಾಧರಿಸಿ ಪೊಲೀಸರು ಈ ಕೋನದಲ್ಲಿ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಆರೋಪಗಳಿಗೆ ಸಾಕ್ಷ್ಯಾಧಾರಗಳಿಲ್ಲ.

ಅಕ್ಟೋಬರ್ 29ರಂದು ಸಿಸಿಬಿ ನೀಡಿದ್ದ ಅಧಿಕೃತ ಮಾಹಿತಿಯ ಪ್ರಕಾರ, ವಿಡಿಯೋದಲ್ಲಿ ಮಾಡಲಾಗಿರುವ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಇದುವರೆಗೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಅಷ್ಟೇ ಅಲ್ಲದೆ, ವಿಡಿಯೋದಲ್ಲಿದ್ದ ಮಹಿಳೆಯೂ ಸಹ ತಾನು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಯೇ ಇಲ್ಲ ಎಂದು ಪೊಲೀಸರ ಮುಂದೆ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.ರಾಜಕೀಯ ನಾಯಕರ ವರ್ಚಸ್ಸಿಗೆ ಕುಂದು ತರುವ ಗೂಢ ಉದ್ದೇಶದಿಂದಲೇ ಈ ನಕಲಿ ಸ್ಟಿಂಗ್ ವಿಡಿಯೋವನ್ನು ಸೃಷ್ಟಿಸಿ ಹರಡಿಸಲಾಗಿದೆಯೇ ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ನಡುವೆ ರಾಕೇಶ್ ಶೆಟ್ಟಿ ಅವರ ಆಸ್ತಿಪಾಸ್ತಿ ಮತ್ತು ಕಚೇರಿಗಳ ಮೇಲಿನ ದಾಳಿಯು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ.

Continue Reading

accident

ಪ್ರವಾಸಕ್ಕೆಂದು ಹೊರಟ ಸ್ನೇಹಿತರ ಗುಂಪು ಶವವಾಗಿ ವಾಪಸ್..ಉತ್ತರಾಖಂಡ ಹೆಲಿಕಾಪ್ಟರ್ ಪತನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ದುರಂತ ಅಂತ್ಯ

Published

on

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಸಿಸಿಬಿ ಇನ್‌ಸ್ಪೆಕ್ಟರ್ ಸೇರಿದಂತೆ ಐವರು ಕನ್ನಡಿಗರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ದರ್ಶನಕ್ಕಾಗಿ ಬೆಂಗಳೂರಿನಿಂದ ಪ್ರವಾಸ ಕೈಗೊಂಡಿದ್ದ ಸ್ನೇಹಿತರ ಗುಂಪು ಈ ದುರಂತಕ್ಕೆ ಬಲಿಯಾಗಿದೆ. ಮೃತರನ್ನು ಸಿಸಿಬಿ ಇನ್‌ಸ್ಪೆಕ್ಟರ್ ಅರುಣ್ ಸಾಲಂಕೆ, ಹೆಚ್.ಎಸ್. ನಾಗರಾಜ್, ಪ್ರತಾಪ್, ಸುಧೀರ್ ಕೆ., ಶಂಕರೇಗೌಡ ಹಾಗೂ ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಎಂದು ಗುರುತಿಸಲಾಗಿದೆ.

ಘಟನೆಯ ವಿವರ:
ಬೆಂಗಳೂರಿನಿಂದ ಧಾರ್ಮಿಕ ಪ್ರವಾಸಕ್ಕೆ ತೆರಳಿದ್ದ ಈ ಸ್ನೇಹಿತರ ತಂಡ ಕೇದಾರನಾಥ ಮತ್ತು ಬದರಿನಾಥ ದರ್ಶನ ಪೂರೈಸಿ, ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಕ್ಕೆ ಟ್ರಾನ್ಸ್ ಭಾರತ್ ಏವಿಯೇಷನ್‌ಗೆ ಸೇರಿದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿತ್ತು. ಮಧ್ಯಾಹ್ನ 1:14 ಕ್ಕೆ ಬದರಿನಾಥದಿಂದ ಟೇಕಾಫ್ ಆದ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ರೇಡಾರ್ ಸಂಪರ್ಕ ಕಳೆದುಕೊಂಡಿದೆ. ಅಲ್ಲದೆ ಹೆಲಿಕಾಪ್ಟರ್‌ನ ಟ್ರ್ಯಾಕಿಂಗ್ ವ್ಯವಸ್ಥೆಯೂ ಸ್ಥಗಿತಗೊಂಡು, ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಅಪಘಾತದ ಕುರಿತು ಮಾಹಿತಿ ಪಡೆದ ಉತ್ತರಾಖಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಗುರುತು ಪತ್ತೆಹಚ್ಚಿದ್ದು, ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಸ್ನೇಹಿತರ ದುರಂತ ಸಾವು ಅವರ ಕುಟುಂಬಸ್ಥರು ಹಾಗೂ ಆಪ್ತರ ವಲಯದಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.

ತನಿಖೆಗೆ ಆದೇಶ – ಹಾರಾಟ ಸ್ಥಗಿತ:
ಘಟನೆ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!