Connect with us

Bantawala

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಸಾಮೂಹಿಕ ಧರಣಿ; 23 ವರ್ಷ ಕಳೆದರೂ ಮುಚ್ಚದ ಬ್ರಹ್ಮರಕೂಟ್ಲು ಟೋಲ್ ಗೇಟ್ : ನಿಯಮ ಬಾಹಿರ ಸುಂಕ ಸಂಗ್ರಹದ ವಿರುದ್ಧ ಜನಾಗ್ರಹ

Published

on

ಬಂಟ್ವಾಳ: ನಿಯಮ ಮೀರಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣವೇ ಮುಚ್ಚಬೇಕೆಂದು ಆಗ್ರಹಿಸಿ ‘ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ ವತಿಯಿಂದ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾರ್ಚ್ 3, ಮಂಗಳವಾರದಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೃಹತ್ ಪ್ರತಿಭಟನೆ ನಡೆಯಿತು.

ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಬೆಳಿಗ್ಗೆ 9-30ಕ್ಕೆ ಆರಂಭವಾದ ಪ್ರತಿಭಟನಾ ಸಭೆ ಮಧ್ಯಾಹ್ನ 12:30 ರವರೆಗೆ ನಡೆಯಿತು. ಸಾಮೂಹಿಕ ಧರಣಿಗೆ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಹೋರಾಟಗಾರರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು.
ಹೋರಾಟದ ನೇತೃತ್ವವನ್ನು ಮಾಜಿ ಸಚಿವ ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಬಿ. ರಮಾನಾಥ ರೈ ಮತ್ತು ಟೋಲ್ ವಿರೋಧಿ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ವಹಿಸಿದ್ದರು. ಸಂಚಾಲಕರಾದ ಮೋಹನ್ ಶೆಟ್ಟಿ ಮತ್ತು ಶೇಖರ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಮುಖಂಡರಾದ ಎಂ.ಜಿ.ಹೆಗಡೆ, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ರಾಮಣ್ಣ ವಿಟ್ಲ, ಶೇಖರ್ ಲಾಯಿಲ, ಸುಹೈಲ್ ಖಂದಕ್, ಪದ್ಮರಾಜ್ ಪೂಜಾರಿ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

“ಟೋಲ್ ಗೇಟ್ ತೆರವುಗೊಳ್ಳುವವರೆಗೂ ನಾವು ವಿಶ್ರಮಿಸುವುದಿಲ್ಲ. ಇದು ನಮ್ಮ ಮೊದಲ ಹಂತದ ಹೋರಾಟವಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಬಿ.ರಮಾನಾಥ ರೈ ಹೇಳಿದರು.

ಸುರತ್ಕಲ್ ಟೋಲ್ ಗೇಟ್ ತೆರವಿಗೆ ಪ್ರಮುಖ ಕಾರಣರಾದ ಹುಟ್ಟು ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಹೆದ್ದಾರಿ ಇಲಾಖೆಯ ನಿಯಮ-ನಿಬಂಧನೆಗಳನ್ನು ಗಾಳಿಗೆ ತೂರಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಬ್ರಹ್ಮರಕೂಟ್ಲು ಟೋಲ್ ವಾಹನ ಸವಾರರ ಸುಲಿಗೆ ಕೇಂದ್ರವಾಗಿದೆ. ಪ್ರತೀ ಅರುವತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಟೋಲ್ ಇರಬೇಕು, ಶೌಚಾಲಯ, ಅಂಬ್ಯುಲೆನ್ಸ್, ಸುಸಜ್ಜಿತ ಸರ್ವಿಸ್ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಇರಬೇಕೆಂಬ ಹೆದ್ದಾರಿ ಇಲಾಖೆಯ ನಿಯಮಗಳಿದ್ದರೂ ಬ್ರಹ್ಮರಕೂಟ್ಲು ಟೋಲ್ ಮಾತ್ರ ಇದ್ಯಾವುದನ್ನೂ ಪಾಲಿಸಿಲ್ಲ. ಅದೂ ಅಲ್ಲದೇ ಉಪ್ಪಿನಂಗಡಿ ವಳಾಲು, ಬಂಟ್ವಾಳ ಪಣಕಜೆ, ಗಂಜಿಮಠಗಳಲ್ಲಿ ಹೊಸ ಟೋಲ್ ಗೇಟ್ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ಇಂದಿನ ಪ್ರತಿಭಟನೆಯು ಪ್ರಥಮ ಹಂತದ ಪ್ರತಿಭಟನೆಯಾಗಿದ್ದು ತಕ್ಷವೇ ಟೋಲ್ ಗೇಟ್ ತೆರವು ಮಾಡದಿದ್ದಲ್ಲಿ ಬ್ರಹ್ಮರಕೂಟ್ಲು ಟೋಲ್ ಇಲ್ಲೇ ಪಕ್ಕದ ನೇತ್ರಾವತಿ ನದಿ ಸೇರುವುದು ಪಕ್ಕಾ ಎಂಬುದನ್ನು ಅರಿತುಕೊಳ್ಳಲಿ ಎಂದು ಮುಂದಿನ ಹೋರಾಟದ ತೀವ್ರತೆಯನ್ನು ಪರೋಕ್ಷವಾಗಿ ಹೇಳಿದರು. ಸಾವಿರಾರು ಹೋರಾಟಗಾರರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಎಚ್ಚರಿಸಿ, ಕಳೆದ 23 ವರ್ಷಗಳಿಂದ ನಿರಂತರವಾಗಿ ಸುಂಕ ಸಂಗ್ರಹಿಸುತ್ತಿರುವ ಈ ಕೇಂದ್ರವು ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

B.O.T ಮಾದರಿಯಲ್ಲಿ ನಿರ್ಮಾಣವಾದ ಈ ಸಾಮಾನ್ಯ ಚತುಷ್ಪಥ ರಸ್ತೆಯಲ್ಲಿ ಕಳೆದ ಎರಡು ದಶಕಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. “ಹೂಡಿದ ಬಂಡವಾಳ ಮರು ಸಂಗ್ರಹವಾಗಿಲ್ಲ” ಎಂಬ ಪ್ರಾಧಿಕಾರದ ವಾದವು ಜನಸಾಮಾನ್ಯರ ದನಿಯನ್ನು ಹತ್ತಿಕ್ಕುವ ತಂತ್ರವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಎರಡು ಟೋಲ್ ಗೇಟ್ ನಡುವೆ ಕನಿಷ್ಠ 60 ಕಿ.ಮೀ ಅಂತರವಿರಬೇಕು. ಆದರೆ, ಇಲ್ಲಿ ಕೇವಲ 32 ಕಿ.ಮೀ ದೂರದಲ್ಲಿ ತಲಪಾಡಿ ಮತ್ತು 44 ಕಿ.ಮೀ ದೂರದಲ್ಲಿ ಹೆಜಮಾಡಿ ಟೋಲ್ ಗೇಟ್‌ಗಳು ಕಾರ್ಯಾಚರಿಸುತ್ತಿವೆ. ಇದು ನೇರ ಕಾನೂನು ಉಲ್ಲಂಘನೆಯಾಗಿದೆ. ಈಗಾಗಲೇ ಜಿಲ್ಲೆಯ ಸುತ್ತಮುತ್ತ ಉಪ್ಪಿನಂಗಡಿಯ ವಳಾಲು (31 ಕಿ.ಮೀ), ಪಣಕಜೆ (28 ಕಿ.ಮೀ) ಮತ್ತು ಗಂಜಿಮಠ (32 ಕಿ.ಮೀ) ಗಳಲ್ಲಿ ಹೊಸ ಟೋಲ್ ಕೇಂದ್ರಗಳು ನಿರ್ಮಾಣವಾಗುತ್ತಿವೆ. ಇವೆಲ್ಲವೂ ಕಾರ್ಯಾರಂಭ ಮಾಡಿದರೆ ದಕ್ಷಿಣ ಕನ್ನಡದ ಪ್ರಯಾಣಿಕರಿಗೆ ಹೆದ್ದಾರಿ ಸಂಚಾರವೇ ಶಾಪವಾಗಲಿದೆ. ಈ ರಸ್ತೆಯಲ್ಲಿ ಸರಿಯಾದ ಸರ್ವೀಸ್ ರಸ್ತೆಗಳಿಲ್ಲ, ಯಾವುದೇ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ಸೌಲಭ್ಯಗಳಿಲ್ಲ. ಹೀಗಿದ್ದರೂ ದುಬಾರಿ ಸುಂಕ ವಸೂಲಿ ಮಾಡುತ್ತಿರುವುದು ನ್ಯಾಯವಲ್ಲ.

“ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣವೇ ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೇಂದ್ರ ಭೂಸಾರಿಗೆ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ” ಎಂದು ಹೋರಾಟದ ಸಂಚಾಲಕರು ತಿಳಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದ್ದು, ನ್ಯಾಯಯುತ ತೀರ್ಮಾನಕ್ಕಾಗಿ ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.

ಮನವಿಯ ಯಥಾ ಪ್ರತಿ..

ರಿಗೆ,
ಯೋಜನಾ ನಿರ್ದೇಶಕರು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)
ಮಂಗಳೂರು

ವಿಷಯ : ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ಕುರಿತು.

ನಂತೂರು – ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮರಕೂಟ್ಲು ಬಳಿ ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ಮುಚ್ಚಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. B.O.T ಮಾದರಿಯಲ್ಲಿ ನಿರ್ಮಾಣಗೊಂಡಿರುವ ಬಿ ಸಿ ರೋಡ್ ನಂತೂರು ಹೆದ್ದಾರಿಯಲ್ಲಿ 23 ವರ್ಷಗಳ ಕಾಲ ನಿರಂತರ ಸುಂಕ ಸಂಗ್ರಹಿಸಿದ ತರುವಾಯವೂ ಟೋಲ್ ಗೇಟ್ ಮುಚ್ಚದಿರುವುದು ಒಪ್ಪಲು ಸಾಧ್ಯವಿಲ್ಲದ ಸಂಗತಿ. ಯಾವುದೇ ಬೈಪಾಸ್, ಮೇಲ್ಸೇತುವೆ, ಅಂಡರ್ ಪಾಸ್ ಗಳಿಲ್ಲದ, ಸರಿಯಾದ ಸರ್ವೀಸ್ ರಸ್ತೆಗಳನ್ನು ಹೊಂದಿರದ, ಗುಣಮಟ್ಟದ ನಿರ್ವಹಣೆ ಇಲ್ಲದ ನಾಲ್ಕು ಪಥಗಳ ಸಾಮಾನ್ಯ ರಸ್ತೆಗೆ 23 ವರ್ಷಗಳಿಗೂ ದೀರ್ಘ ಕಾಲ ಟೋಲ್ ಸಂಗ್ರಹಿಸಿಯೂ “ಹೂಡಿದ ಹಣ ಮರು ಸಂಗ್ರಹ ಆಗಿಲ್ಲ” ಎಂದರೆ ನಂಬಲು ಸಾಧ್ಯವಿಲ್ಲ.

ಅದಲ್ಲದೆ, ಬ್ರಹ್ಮರಕೂಟ್ಲುಟೋಲ್ ಗೇಟ್ ಗೆ 32 ಕಿ ಮೀ ದೂರದ ತಲಪಾಡಿ, 44 ಕಿ.ಮೀ ದೂರದ ಹೆಜಮಾಡಿಯಲ್ಲಿ ಎಳೆಂಟು ವರ್ಷಗಳ ಈಚೆಗೆ ಹೊಸ ಟೋಲ್ ಸಂಗ್ರಹ ಕೇಂದ್ರಗಳು ಕಾರ್ಯನಿರ್ವಹಿಸತೊಡಗಿವೆ. ಇದು ಎರಡು ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಟ ಅಂತರವಾದ 60 ಕಿ ಮೀ ನಿಯಮದ ನೇರ ಉಲ್ಲಂಘನೆ ಆಗಿದೆ. ಇಷ್ಟಲ್ಲದೆ, ಈಗ ಬ್ರಹ್ಮರಕೂಟ್ಟು ಟೋಲ್ ಗೇಟ್ ನಿಂದ ಬೆಂಗಳೂರು ಕಡೆಗೆ 31 ಕಿ ಮೀ ದೂರದ ಉಪ್ಪಿನಂಗಡಿಯ ವಳಾಲು ಎಂಬಲ್ಲಿ ಹಾಗೂ ಚಿಕ್ಕಮಗಳೂರು ಕಡೆಗಿನ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ 28 ಕಿ ಮೀ ದೂರದಲ್ಲಿ, ಸಾಣೂರು ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ಗಂಜಿಮಠ ಎಂಬಲ್ಲಿ 32 ಕೀ ಮೀ ದೂರದಲ್ಲಿ ಹೀಗೆ ಹೊಸದಾಗಿ ಮೂರು ಟೋಲ್ ಸಂಗ್ರಹ ಕೇಂದ್ರಗಳು ನಿರ್ಮಾಣ ಹಂತದಲ್ಲಿದೆ. ಇದೆಲ್ಲವೂ ಅಂತರದ ನಿಯಮಗಳ ಉಲ್ಲಂಘನೆ ಮಾತ್ರ ಅಲ್ಲದೆ, ಈ ಭಾಗದಲ್ಲಿ ಹೆದ್ದಾರಿ ಪ್ರಯಾಣವೆ ತೀರಾ ದುಬಾರಿಯಾಗಿ ಅಸಹನೀಯ ಸಂದರ್ಭ ಸೃಷ್ಟಿಯಾಗಲಿದೆ. ಇಂತಹ ಸಂದರ್ಭದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ.

ಅಂತರದ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯ ಹೆದ್ದಾರಿಗಳಲ್ಲಿ ಹಲವಾರು ಟೋಲ್ ಗೇಟ್ ಗಳನ್ನು ಸ್ಥಾಪಿಸುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ತೀವ್ರ ಅತೃಪ್ತಿ, ಆಕ್ಷೇಪಗಳಿಗೆ ಕಾರಣವಾಗುತ್ತಿದೆ ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪುನ‌ರ್ ಪರಿಶೀಲನೆ ನಡೆಸಬೇಕು. ನಿಯಮಗಳನ್ನು ನ್ಯಾಯಯುತವಾಗಿ ಅನುಷ್ಠಾನಗೊಳಿಸಬೇಕು.

ಬ್ರಹ್ಮರಕೂಟ್ಲುಟೋಲ್ ಗೇಟ್ ನಲ್ಲಿ 23 ವರ್ಷಗಳ ದೀರ್ಘ ಅವರಿಗೆ ಸುಂಕ ಸಂಗ್ರಹ ನಡೆಸಲಾಗಿರುವುವುದು, ತೀವ್ರ ವಾಹನ ದಟ್ಟಣೆಯ ಈ ರಸ್ತೆಯಲ್ಲಿ ಅಗಾಧ ಮೊತ್ತದ ಹಣ ಮರು ಸಂಗ್ರಹ ಆಗಿರುವುದು ಸೇರಿದಂತೆ ಯಾವುದೇ ಆಯಾಮದಲ್ಲಿ ನೋಡಿದರೂ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವುಗೊಳಿಸುವುದು ನ್ಯಾಯಯುತವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣದಿಂದಲೆ ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯನ್ನು ಸಾಮೂಹಿಕ ಧರಣಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿನಂತಿಸುತ್ತಿದ್ದೇವೆ. ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ತೀರ್ಮಾನಿನದಿದ್ದಲ್ಲಿ ಮುಂದಕ್ಕೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಈ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಇತೀ ತಮ್ಮ ವಿಶ್ವಾಸಿಗಳು
ಸಂಚಾಲಕರು

ಯಥಾ ಪ್ರತಿ

  1. ಶ್ರೀ ನಿತಿನ್ ಗಡ್ಕರಿ, ಭೂ ಸಾರಿಗೆ ಸಚಿವರು. ನವದೆಹಲಿ
  2. ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆ
  3. ಶ್ರೀ ಬ್ರಿಜೇಶ್ ಚೌಟ, ಮಾನ್ಯ ಸಂಸದರು, ದಕ್ಷಿಣ ಕನ್ನಡ, ಮಂಗಳೂರು.
  4. ಮಾನ್ಯ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.
  5. ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು ( ಐ ಜಿ ಪಿ) ಪಶ್ಚಿಮ ವಲಯ, ಮಂಗಳೂರು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬ್ರೇಕಿಂಗ್ ನ್ಯೂಸ್: ಕಾರ್ಕಳ – ಮೂಡುಬಿದ್ರೆ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ; ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರು

Published

on

ಕಾರ್ಕಳ: ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರ್ಕಳದಿಂದ ಮೂಡುಬಿದ್ರೆಯತ್ತ ವೇಗವಾಗಿ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ (KA 70 A 0099) ನಡುವೆ ಮುಖಾಮುಖಿ ಭೀಕರ ಡಿಕ್ಕಿ ಸಂಭವಿಸಿದೆ.

ಘಟನೆಯ ವಿವರ ಹಾಗೂ ರಕ್ಷಣಾ ಕಾರ್ಯ: ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಾಜುಗಳು ಪುಡಿಯಾಗಿವೆ. ಕಾರಿನ ಒಳಗೆ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಸಹ, ಡಿಕ್ಕಿಯ ತೀವ್ರತೆಯಿಂದಾಗಿ ಮುಂಭಾಗದಲ್ಲಿ ಕುಳಿತಿದ್ದ ಮಾಜಿ ಸಚಿವ ರಮಾನಾಥ ರೈ ಹಾಗೂ ಕಾರು ಚಾಲಕ ಒಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದು, ಅತ್ಯಂತ ಪ್ರಯಾಸಪಟ್ಟು ಅವರನ್ನ ಕಾರಿನಿಂದ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ದಾಖಲು: ಅಪಘಾತದಲ್ಲಿ ಗಾಯಗೊಂಡಿರುವ ರಮಾನಾಥ ರೈ ಹಾಗೂ ಕಾರು ಚಾಲಕರನ್ನು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಬಸ್ ಹಾಗೂ ಕಾರಿನಲ್ಲಿದ್ದ ಇತರೆ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ.

ರಮಾನಾಥ ರೈಯವರು ಒಡಿಯೂರಿನಲ್ಲಿ ನಡೆದ ಒಡಿಯೂರು ಶ್ರೀ ವಿಕಾಸವಾಹಿನಿ ಸಂಭ್ರಮ ಹಾಗೂ ನೇರಳಕಟ್ಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂಗಳೂರಿನ ಕಾರ್ಯಕ್ರಮದ ಮುಗಿಸಿ ಕಾರ್ಕಳದ ಮತ್ತೊಂದು ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

Bantawala

ಪುಣಚದಲ್ಲಿ ಇನ್‌ಸ್ಟಾಗ್ರಾಂ ಪರಿಚಯ, ನಗ್ನ ಫೋಟೋ ಬ್ಲ್ಯಾಕ್‌ಮೇಲ್ ಜಾಲ; 10 ಪವನ್ ಚಿನ್ನ ದೋಚಿ ಯುವತಿಗೆ ವಂಚನೆ!

Published

on

ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ನಡೆದ ಈ ಘಟನೆಯು ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಒಂದು ಕಣ್ಣಾಡಿಸುವ ಉದಾಹರಣೆಯಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವಂಚಕನೊಬ್ಬ, ಯುವತಿಯೊಬ್ಬಳ ನಗ್ನ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿ 10 ಪವನ್‌ಗೂ ಅಧಿಕ ಚಿನ್ನಾಭರಣವನ್ನು ದೋಚಿರುವ ಕೃತ್ಯ ಆತಂಕಕಾರಿಯಾಗಿದೆ. ಅಪರಿಚಿತರೊಂದಿಗೆ ಜಾಲತಾಣಗಳಲ್ಲಿ ಸ್ನೇಹ ಬೆಳೆಸುವ ಮುನ್ನ ಯುವಜನತೆ, ವಿಶೇಷವಾಗಿ ಯುವತಿಯರು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಈ ಘಟನೆ ನಮಗೆ ಕಲಿಸುತ್ತದೆ.


ಕಳೆದ ಜುಲೈ ತಿಂಗಳಲ್ಲಿ ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ ಸುಪ್ರೀತ ಗೌಡ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ ಯುವತಿಯಿಂದ ಆರೋಪಿಯು ವಾಟ್ಸಾಪ್ ನಂಬರ್ ಪಡೆದುಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದ ಎನ್ನಲಾಗಿದೆ. ಮೆಸೇಜ್‌ ಮಾಡುತ್ತಲೇ ನಂತರ ಹೇಗೋ ಮಾಡಿ ಯುವತಿಯ ನಗ್ನ ಪೋಟೋವನ್ನು ತನ್ನಲ್ಲಿಟ್ಟುಕೊಂಡು ಆಕೆಯನ್ನು ಬೆದರಿಸಲು ಆರಂಭಿಸಿದ್ದಾನೆ.
​ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಸುಪ್ರೀತ್ ಗೌಡ, ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಸೇರಿಕೊಂಡು ಯುವತಿಯಿಂದ ಹಣ ಪೀಕಿಸಲು ಯುವತಿಯನ್ನು ಬ್ಲಾಕ್‌ ಮೈಲ್‌ ಮಾಡಲು ಆರಂಭಿಸಿದ್ದಾನೆ. ನನ್ನಲ್ಲಿ ಹಣ ಇಲ್ಲ ಎಂದಾಗ ಆಕೆಯ ಬಳಿ ಇರುವ ಚಿನ್ನಾಭರಣವನ್ನು ನೀಡುವಂತೆ “ನಿನ್ನ ಬಳಿ ಇರುವ ಚಿನ್ನವನ್ನು ಕೊಡಬೇಕು, ಇಲ್ಲವಾದಲ್ಲಿ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ತೆಗೆಯುತ್ತೇನೆ” ಎಂದು ಬೆದರಿಕೆ ಹಾಕಿದ್ದನೆನ್ನಲಾಗಿದೆ.

ಘಟನೆಯ ಸಂಪೂರ್ಣ ವಿವರ:
ಪರಿಚಯ ಮತ್ತು ಸ್ನೇಹ: ಪುಣಚ ಗ್ರಾಮದ 20 ವರ್ಷದ ಯುವತಿಯೊಬ್ಬರ ಇನ್‌ಸ್ಟಾಗ್ರಾಂ ಖಾತೆಗೆ ಕಳೆದ ಜುಲೈ ತಿಂಗಳಲ್ಲಿ ‘ಸುಪ್ರೀತ್ ಗೌಡ’ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಇದನ್ನು ಸ್ವೀಕರಿಸಿದ ಬಳಿಕ, ಆರೋಪಿಯು ಆಕೆಯ ವಾಟ್ಸಾಪ್ ನಂಬರ್ ಪಡೆದುಕೊಂಡು ನಿರಂತರವಾಗಿ ಚಾಟ್ ಮಾಡಲು ಆರಂಭಿಸಿದ್ದಾನೆ. ಹೀಗೆ ಚಾಟಿಂಗ್ ಮುಂದುವರಿಸಿದ ಆರೋಪಿ, ಹೇಗೋ ಮಾಡಿ ಯುವತಿಯ ನಗ್ನ (ಖಾಸಗಿ) ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾನೆ. ಬಳಿಕ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ.
ಚಿನ್ನಾಭರಣ ದೋಚಿದ ಕೃತ್ಯ: “ನಿನ್ನ ಬಳಿ ಇರುವ ಚಿನ್ನವನ್ನು ಕೊಡಬೇಕು, ಇಲ್ಲವಾದಲ್ಲಿ ನಿನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಮಾನ ತೆಗೆಯುತ್ತೇನೆ” ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ಬೆದರಿಕೆಗೆ ತೀವ್ರವಾಗಿ ಭಯಭೀತರಾದ ಯುವತಿ, ಆತ ಹೇಳಿದಂತೆ ಮಾಡಲು ಮುಂದಾಗಿದ್ದಾರೆ.
ಮನೆ ಸಮೀಪವೇ ನಡೆದ ಕೃತ್ಯ: ಕಳೆದ ಆಗಸ್ಟ್ 18ರಂದು ಸುಪ್ರೀತ್ ಗೌಡ ತನ್ನ ಗೆಳೆಯನನ್ನು ಪುಣಚ ಗ್ರಾಮದಲ್ಲಿರುವ ಯುವತಿಯ ಮನೆ ಸಮೀಪಕ್ಕೆ ಬೈಕಿನಲ್ಲಿ ಕಳುಹಿಸಿದ್ದನು. ಯುವತಿಯು ಅನಿವಾರ್ಯವಾಗಿ ತನ್ನಲ್ಲಿದ್ದ 10 ಪವನ್‌ಗೂ ಅಧಿಕ (80 ಗ್ರಾಂ ಗೂ ಹೆಚ್ಚು) ಚಿನ್ನಾಭರಣಗಳನ್ನು ಆತನ ಗೆಳೆಯನಿಗೆ ಹಸ್ತಾಂತರಿಸಿದ್ದಾಳೆ. ಅಲ್ಲದೆ, ತನ್ನ ಫೋಟೋಗಳನ್ನು ವೈರಲ್ ಮಾಡದಂತೆ ಕಣ್ಣೀರಿನಿಂದ ವಿನಂತಿಸಿಕೊಂಡಿದ್ದಾಳೆ.
ಮನೆಮಂದಿಗೆ ಮಾಹಿತಿ ಮತ್ತು ವಂಚನೆ ಬಯಲು:
ಆರೋಪಿಯ ಅತಿಯಾಸೆಗೆ ಅಂತ್ಯವಿರಲಿಲ್ಲ. ಚಿನ್ನ ಕೊಟ್ಟ ಬಳಿಕವೂ ಮತ್ತೆ ಮತ್ತೆ ಚಿನ್ನ ನೀಡುವಂತೆ ಆತ ಯುವತಿಗೆ ಪೀಡಿಸಲು ಪ್ರಾರಂಭಿಸಿದನು. ಇದರಿಂದ ಮಾನಸಿಕವಾಗಿ ನೊಂದ ಯುವತಿಯು ಕೊನೆಗೆ ಧೈರ್ಯ ಮಾಡಿ ಮನೆಯವರ ಬಳಿ ಸಂಪೂರ್ಣ ವಿಷಯವನ್ನು ತಿಳಿಸಿಬಿಟ್ಟಿದ್ದಾಳೆ.
ಯುವತಿಯ ಮನೆಯವರು ಆರೋಪಿಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಾಗ, ಆತ “ನಾನು ನಿಮ್ಮಿಂದ ಪಡೆದ ಚಿನ್ನವನ್ನು ವಾಪಸ್ ಕೊಡುತ್ತೇನೆ, ಗಡಿಬಿಡಿ ಮಾಡಬೇಡಿ” ಎಂದು ನಂಬಿಸಿದ್ದಾನೆ. ಮನೆಯವರೂ ಸಹ ಚಿನ್ನ ವಾಪಸ್ ಸಿಕ್ಕರೆ ಸಾಕು ಎಂದು ಸುಮ್ಮನಾಗಿದ್ದರು. ಆದರೆ, ಕೆಲ ದಿನಗಳ ಬಳಿಕ ಆರೋಪಿ ತನ್ನ ಮೊಬೈಲ್ ನಂಬರ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪೂರ್ಣವಾಗಿ ತಲೆಮರೆಸಿಕೊಂಡಿದ್ದಾನೆ. ಕೊನೆಗೆ ಮೋಸಹೋಗಿರುವುದನ್ನು ಅರಿತ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆತಂಕಗಳು:
ಈ ಕೃತ್ಯದ ಹಿಂದೆ ಸುಪ್ರೀತ್ ಗೌಡನಲ್ಲದೆ ಒಂದು ದೊಡ್ಡ ವಂಚಕರ ಜಾಲವೇ (Cyber Gang) ಕೆಲಸ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಜಾಲವು ಇಂತಹದೇ ನೂರಾರು ಅಮಾಯಕ ಯುವತಿಯರ ಬದುಕನ್ನು ನರಕ ಸದೃಶ್ಯವನ್ನಾಗಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿ ಅಥವಾ ಆತನ ಗೆಳೆಯ ಚಿನ್ನಾಭರಣಗಳನ್ನು ಪಡೆಯಲು ನೇರವಾಗಿ ಮನೆ ಸಮೀಪವೇ ಬಂದಿದ್ದರಿಂದ, ಆತನನ್ನು ಸುಲಭವಾಗಿ ಖೆಡ್ಡಾಕ್ಕೆ ಬೀಳಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಯುವಜನತೆ ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಕನ್ನಡಿಯಾಗಿದೆ.
ಯುವಜನತೆ ಮತ್ತು ಪೋಷಕರಿಗೆ ಪ್ರಮುಖ ಜಾಗೃತಿ ಸಂದೇಶ ಹಾಗೂ ಎಚ್ಚರಿಕೆಗಳು:
ಅಪರಿಚಿತರ ಸ್ನೇಹಕ್ಕೆ ಮುಕ್ತ ಆಹ್ವಾನ ಬೇಡ: ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವೇ ಇಲ್ಲದ ವ್ಯಕ್ತಿಗಳು ಕಳುಹಿಸುವ ‘ಫ್ರೆಂಡ್ ರಿಕ್ವೆಸ್ಟ್’ಗಳನ್ನು ಯಾವುದೇ ಕಾರಣಕ್ಕೂ ಕುರುಡಾಗಿ ಸ್ವೀಕರಿಸಬೇಡಿ. ಸುಂದರ ಪ್ರೊಫೈಲ್ ಚಿತ್ರಗಳು ಅಥವಾ ನಕಲಿ ಖಾತೆಗಳ ಹಿಂದೆ ವಂಚಕರೇ ಇರುತ್ತಾರೆ ಎಂಬುದನ್ನು ಮರೆಯದಿರಿ.

ವೈಯಕ್ತಿಕ ಫೋಟೋ/ಮಾಹಿತಿಗಳನ್ನು ಹಂಚಿಕೊಳ್ಳಬೇಡಿ: ವಾಟ್ಸಾಪ್ ಅಥವಾ ಇತರೆ ಚಾಟಿಂಗ್ ಆಪ್‌ಗಳಿಗೆ ಬಂದ ಕೂಡಲೇ ನಿಮ್ಮ ವೈಯಕ್ತಿಕ ಫೋಟೋಗಳು, ನಂಬರ್‌ಗಳು ಅಥವಾ ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೈಬರ್ ವಂಚಕರು ಇಂತಹವುಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ.

ಬೆದರಿಕೆಗೆ ಹೆದರಿ ಕುಳಿತುಕೊಳ್ಳಬೇಡಿ (ಬ್ಲ್ಯಾಕ್‌ಮೇಲ್‌ಗೆ ಮಣಿಯಬೇಡಿ): ಯಾರಾದರೂ ನಿಮ್ಮ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿದರೆ, ಹಣ ಅಥವಾ ಒಡವೆಗಳನ್ನು ಕೇಳಿದರೆ, ಭಯಪಟ್ಟುಕೊಂಡು ಅವರ ಮಾತುಗಳಿಗೆ ತಲೆಬಾಗಬೇಡಿ. ವಂಚಕರು ಹಣ ನೀಡಿದರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಲೇ ಇರುತ್ತಾರೆ.

ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡಿ: ಯಾವುದೇ ಸಮಸ್ಯೆಯುಂಟಾದರೂ ಮುಚ್ಚಿಡದೆ ತಕ್ಷಣವೇ ತಂದೆ-ತಾಯಿ ಅಥವಾ ವಿಶ್ವಾಸಾರ್ಹ ಹಿರಿಯರ ಬಳಿ ವಿಷಯವನ್ನು ಹಂಚಿಕೊಳ್ಳಿ. ನಿಮ್ಮ ಮಾನ-ಮರ್ಯಾದೆಗೆ ಹೆದರಿಕೊಂಡು ಮೌನವಾಗಿರುವುದು ವಂಚಕರಿಗೆ ಮತ್ತಷ್ಟು ಧೈರ್ಯ ತುಂಬುತ್ತದೆ.

ಕೂಡಲೇ ಸೈಬರ್ ಕ್ರೈಮ್ ಅಥವಾ ಪೊಲೀಸರನ್ನು ಸಂಪರ್ಕಿಸಿ: ಅಪರಿಚಿತರಿಂದ ಯಾವುದೇ ರೀತಿಯ ಬೆದರಿಕೆ, ಕಿರುಕುಳ ಅಥವಾ ವಂಚನೆ ಎದುರಾದ ತಕ್ಷಣವೇ ಯಾವುದೇಂಜಿಕೆಗೆ ಒಳಗಾಗದೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಮ್‌ಗೆ ದೂರು ನೀಡಿ.

ಸಾಮಾಜಿಕ ಜಾಲತಾಣಗಳು ಮನರಂಜನೆಗೆ ಇರಬೇಕೇ ಹೊರತು, ನಮ್ಮ ಬದುಕನ್ನು ನರಕ ಮಾಡಿಕೊಳ್ಳಲು ಅಲ್ಲ. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂತಹ ಸೈಬರ್ ಕಳ್ಳರ ಬಲೆಗೆ ಬೀಳುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಜಾಗರೂಕರಾಗಿರಿ, ಸುರಕ್ಷಿತವಾಗಿರಿ!

Continue Reading

Bantawala

ಬಂಟ್ವಾಳ: ಪೋಕ್ಸೋ ಪ್ರಕರಣ ಸಾಬೀತು – ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ

Published

on

ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದ್ದು, ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-2) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ಅಬ್ದುಲ್ ಲತಿಫ್ ಶಿಕ್ಷೆಗೊಳಗಾದ ಅಪರಾಧಿ. ಈ ಪ್ರಕರಣದಲ್ಲಿ ಒಟ್ಟು ಮೂವರ ವಿರುದ್ಧ ಆರೋಪವಿದ್ದು, ಪ್ರಮುಖ ಆರೋಪಿಯ ದೋಷವು ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಪ್ರಕರಣದ ಹಿನ್ನೆಲೆ ಮತ್ತು ತನಿಖೆ:

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಧಿಸೂಚನೆ ಸಂಖ್ಯೆ 141/2025 ರ ಅಡಿಯಲ್ಲಿ ಪೋಕ್ಸೋ ಕಾಯ್ದೆ-2012ರ ಕಲಂ: 4, 6, 8, 12, 19(1)(b), 21 ಹಾಗೂ BNS-2023ರ ಕಲಂ: 64(2)(f), 75 r/w 3(5) ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಹಾಗೂ ತನಿಖಾಧಿಕಾರಿ ಅನಂತ ಪದ್ಮನಾಭ ಅವರು ಕೂಲಂಕಷವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:

ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (FTSC-2) ನಡೆದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷಿಗಳನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಾನು ಕೆ.ಎಸ್. ಅವರು, ಆರೋಪಿ ಅಬ್ದುಲ್ ಲತಿಫ್‌ನ ಕೃತ್ಯವು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಿನಾಂಕ 19.09.2026 ರಂದು ಈ ಕೆಳಗಿನ ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿದ್ದಾರೆ:

  • ಕಾರಾಗೃಹ ವಾಸ: 20 ವರ್ಷಗಳ ಕಠಿಣ ಕಾರಾಗೃಹ ವಾಸ.
  • ದಂಡದ ಮೊತ್ತ: ರೂ. 80,000/- (ಎಂಭತ್ತು ಸಾವಿರ ರೂಪಾಯಿಗಳು).

ತ್ವರಿತ ತನಿಖೆ ಮತ್ತು ಸಮರ್ಥ ವಾದ ಮಂಡನೆಯ ಮೂಲಕ ಅಪರಾಧಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Continue Reading

Trending

Copyright © 2025 Deevatige

error: Content is protected !!