Connect with us

crime

ಪುತ್ತೂರು ಅತ್ಯಾಚಾರ ವಂಚನೆ ಪ್ರಕರಣ; ಹಿಂದೂ ಸಂಘಟನೆಗಳ ಮೌನವೇಕೆ ? ಪ್ರತಿಭಾ ಕುಳಾಯಿ

Published

on

ಸಂಧಾನದ ಬಾಗಿಲು ಮುಚ್ಚಿದೆ; ಆರೋಪಿ ಕೃಷ್ಣ ಜೆ.ರಾವ್‌ ( KRISHNA J. RAO)ಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ; ನಾಮಕರಣ ಶಾಸ್ತçದ ಮೂಲಕ ಕಲ್ಲಡ್ಕದಿಂದಲೇ ಪ್ರತಿಭಟನೆ, ಪೂಜಾಳನ್ನು ವಿವಾಹವಾಗಿ ಮನೆ ಅಳಿಯನಾದರೆ ನಾನೇ ಅವರಿಗೆ 50 ಲಕ್ಷ ರೂ. ಕೊಡುತ್ತೇನೆ – ಪ್ರತಿಭಾ ಕುಳಾಯಿ ಸವಾಲು


ಮಂಗಳೂರು : ಪುತ್ತೂರಿನಲ್ಲಿ ಯುವತಿಗೆ ಮಗು ಕರುಣಿಸಿ ಮದುವೆಗೆ ನಿರಾಕರಿಸುತ್ತಿರುವ ಆರೋಪಿ ಕೃಷ್ಣ ಜೆ.ರಾವ್‌ಗೆ ಕೋರ್ಟ್ನಿಂದ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು. ಸಂಧಾನದ ಬಾಗಿಲು ಮುಚ್ಚಿದ್ದು, ಜ. 24ರಂದು ಕಲ್ಲಡ್ಕದಲ್ಲಿ ಪ್ರತಿಭಟನಾರ್ಥವಾಗಿ ಮಗುವಿಗೆ ನಾಮಕರಣ ಶಾಸ್ತ್ರ ನಡೆಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.

50 ಲಕ್ಷ ರೂ.ಗಳ ಪರಿಹಾರ ನೀಡಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಅನ್ಯಾಯಕ್ಕೊಳಗಾದ ಯುವತಿ, ಮಗು ಹಾಗೂ ಯುವತಿಯ ಪೋಷಕರ ಜತೆ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಡಿಎನ್‌ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಪೂಜಾಳ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಸಾಬೀತಾದರೂ ಅವರು ಈಕೆಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಬದಲಾಗಿ 50 ಲಕ್ಷ ರೂ.ಗಳ ಪರಿಹಾರ ನೀಡಿ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ. ಇದಕ್ಕೆ ಯುವತಿಯಾಗಲಿ ಆಕೆಯ ಕುಟುಂಬವಾಗಲಿ ಒಪ್ಪುವುದಿಲ್ಲ. ಅವರಿಗೆ ಬೆಂಬಲವಾಗಿ ಸಮಾಜದ ಎಲ್ಲಾ ವರ್ಗದ ಜನ ಅವರ ಜತೆಗಿದೆ ಎಂದರು. ಕೃಷ್ಣ ಜೆ. ರಾವ್ ಯುವತಿ ಜತೆ ವಿವಾಹ ಆಗಿ ಆ ಮಗುವಿಗೆ ತಂದೆಯ ಸ್ಥಾನಮಾನ ನೀಡುವ ಆಶಾಭಾವನೆಯೊಂದಿಗೆ ಆತನಿಗೆ ಜಾಮೀನು ದೊರಕಿ ಆತ ಆರಾಮವಾಗಿ ಓಡಾಡಿಕೊಂಡಿದ್ದರೂ, ನಾವು ಈವರೆಗೆ ಸುಮ್ಮನಿದ್ದೆವು. ಆತನ ತಾಯಿ ನನ್ನ ಮೇಲೆ ಹಾಗೂ ಯುವತಿಯ ತಾಯಿ ಮೇಲೆ ಮಾನ ಹರಾಜು ಪ್ರಕರಣ ದಾಖಲಿಸಿದ್ದಾರೆ. ಆದರೆ ವಾಸ್ತವದಲ್ಲಿ ಇಲ್ಲಿ ಓರ್ವ ಯುವತಿ ಮತ್ತು ಆಕೆಯ ಕುಟುಂಬದವರ ಮಾನ ಹರಾಜು ಹಾಕಲಾಗಿದೆ ಎಂದವರು ಹೇಳಿದರು.

ಜ.24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ

ಕರಾವಳಿಯಲ್ಲಿ ಹಿಂದು ಸಮಾಜದ ಬಗ್ಗೆ ಮುಖಂಡರು, ರಾಜಕೀಯ ನೇತಾರರು ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಾರೆಯೇ ವಿನಃ ಇಂತಹ ಸನ್ನಿವೇಶದಲ್ಲಿ ಸಿಲುಕಿದವರನ್ನು ಪಾರು ಮಾಡುವ ಬಗ್ಗೆ ನೆರವಿಗೆ ಧಾವಿಸುತ್ತಿಲ್ಲ. ಹಾಗಾಗಿ ನಾವು ಬೇರೆ ಸಮುದಾಯದವರನ್ನೂ ಧ್ವನಿ ಎತ್ತಲು ಆಹ್ವಾನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಂಘಟನಾತ್ಮಕವಾಗಿ ಶಕ್ತಿ ಕೇಂದ್ರ ಆಗಿರುವ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರ ಊರಿನಿಂದಲೇ ಹೋರಾಟ ಆರಂಭಿಸುತ್ತಿದ್ದೇನೆ. ಇದೇ ಕಾರಣಕ್ಕೆ ಜ.24 ರಂದು ಕಲ್ಲಡ್ಕದಲ್ಲೇ ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸುವುದಾಗಿ ಪ್ರತಿಭಾ ಕುಳಾಯಿ ಹೇಳಿದರು.

ಪೂಜಾ ಆತ್ಮಹತ್ಯೆಗೂ ಯೋಚಿಸಿದ್ದಾಳೆ

ಮಗುವಿನ ತಂದೆ ಕೃಷ್ಣ ಜೆ.ರಾವ್ ಯಾವ ಕಾರಣಕ್ಕೆ ಪೂಜಾಳನ್ನು ತಿರಸ್ಕರಿಸುತ್ತಿದ್ದಾನೆ ಎಂದು ಅರ್ಥವಾಗುತ್ತಿಲ್ಲ. ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ ಅರ್ಥಮಾಡಿಕೊಂಡಿದ್ದ ಇವರಿಬ್ಬರ ಸರಸದಲ್ಲಿ ಮಗು ಜನಿಸಿದ ಬಳಿಕ ಮತ್ತೆ ಆಕೆಯನ್ನು ದೂರ ಮಾಡುವುದರಲ್ಲಿ ಅರ್ಥ ಇಲ್ಲ. ಆಕೆ ಯಾವುದೇ ಕಾರಣಕ್ಕೂ ಅಬಲೆ ಅಲ್ಲ, ಆಕೆಯೂ ನಿತ್ಯವೂ ನೊಂದುಕೊಳ್ಳುತ್ತಿದ್ದು, ಆತ್ಮಹತ್ಯೆಗೂ ಯೋಚಿಸಿದ್ದಾಳೆ. ಅವಳ ಬದುಕಿಗೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತಿದ್ದು, ಮುಂದೆ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಶ್ರೀನಿವಾಸ ದೇವರಿಗೆ ಯಾವಾಗಲೋ ಕಲ್ಯಾಣ ಆಗಿದೆ

ಪುತ್ತೂರಿನ ಅರುಣ್ ಕುಮಾರ್ ಪುತ್ತಿಲರ ಬಗ್ಗೆ ನನಗೆ ತುಂಬಾ ಗೌರವ ಇದೆ. ಅವರು ಶ್ರೀನಿವಾಸ ದೇವರಿಗೆ ಕಲ್ಯಾಣ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಶ್ರೀನಿವಾಸ ದೇವರಿಗೆ ಯಾವಾಗಲೋ ಕಲ್ಯಾಣ ಆಗಿದೆ. ಈಗ ಆಗಬೇಕಾಗಿರುವುದು ಪೂಜಾಳಿಗೆ. ಅವಳಿಗೆ ಕೃಷ್ಣ ಜೆ.ರಾವ್ ಜೊತೆ ಕಲ್ಯಾಣ ಮಾಡಿಸುವ ಬಗ್ಗೆ ಪುತ್ತಿಲ ಮನಸ್ಸು ಮಾಡಲಿ. ಮದುವೆ ವಿಚಾರದಲ್ಲಿ ಸಂಧಾನ ಮಾತುಕತೆ ವೇಳೆ ಆತನ ಪೋಷಕರು ಈಡೇರಿಸಲಾಗದ ಷರತ್ತು ಇಟ್ಟಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು. ಹಾಗಾದರೆ ಮಾತ್ರ ಪೂಜಾಳವನ್ನು ಆತ ವಿವಾಹವಾಗಿ ವಿಚ್ಛೇದನ ನೀಡಲಾಗುವುದು. ಅಲ್ಲದೆ ಈ ವೇಳೆ 50 ಲಕ್ಷ ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಮೊದಲು ಆತನ ವಿರುದ್ಧದ ಎಲ್ಲಾ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದೆಲ್ಲಾ ಷರತ್ತುಗಳನ್ನು ವಿಧಿಸಲಾಗಿದೆ. ನಮಗೆ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ಆತ ಪೂಜಾಳನ್ನು ವಿವಾಹವಾಗಿ ಮನೆ ಅಳಿಯನಾದರೆ ನಾನೇ ಅವರಿಗೆ 50 ಲಕ್ಷ ರೂ. ಕೊಡುತ್ತೇನೆ ಎಂದು ಪ್ರತಿಭಾ ಕುಳಾಯಿ ಸವಾಲು ಹಾಕಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂತೃಸ್ತೆ ಪೂಜಾ ಮಾತಾಡಿ ತನ್ನ ನೋವನ್ನು ಹೇಳಿಕೊಂಡು ಗಳಗಳನೆ ಅತ್ತು ಕಣ್ನೀರು ಸುರಿಸಿದ ಘಟನೆಯೂ ನಡೆಯಿತು.

ಪ್ರಕರಣದ ಹಿನ್ನೆಲೆ
ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್, ತನ್ನ ಸಹಪಾಠಿಯಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿತ್ತು. ಯುವತಿ ಗರ್ಭವತಿಯಾದಾಗ ಆತ ಮದುವೆಗೆ ನಿರಾಕರಿಸಿ ತಲೆಮರೆಸಿಕೊಂಡಿದ್ದ. ಸಂತ್ರಸ್ತ ಯುವತಿಯು ಜೂನ್ 2024ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. 2024ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಂದ ಡಿಎನ್ಎ ಪರೀಕ್ಷಾ ವರದಿಯು, ಕೃಷ್ಣ ಜೆ. ರಾವ್ ಅವರೇ ಆ ಮಗುವಿನ ತಂದೆ ಎಂಬುದನ್ನು ಸಾಬೀತುಪಡಿಸಿದೆ. ಇದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತು. ಕೃಷ್ಣ ಜೆ. ರಾವ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. ಆತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸೆಪ್ಟೆಂಬರ್ ತಿಂಗಳಿನಲ್ಲಿ ಹೈಕೋರ್ಟ್ ಆತನಿಗೆ ಜಾಮೀನು ನೀಡಿತು.

ರಾಜಕೀಯ ಮತ್ತು ಸಾಮಾಜಿಕ ಪರಿಣಾಮ
ಈ ಪ್ರಕರಣ ಪುತ್ತೂರಿನಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಕಾಂಗ್ರೆಸ್ ಮತ್ತು ಇತರ ಸಂಘಟನೆಗಳು ಬಿಜೆಪಿ ಮುಖಂಡನ ಪುತ್ರನ ಬಂಧನಕ್ಕೆ ಒತ್ತಾಯಿಸಿ ಬೀದಿಗಿಳಿದಿದ್ದವು. ಸಂತ್ರಸ್ತ ಯುವತಿಯ ಪರವಾಗಿ ಮಹಿಳಾ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮತ್ತು ವಿಶ್ವಕರ್ಮ ಸಮಾಜದ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ.ಪಿ. ನಂಜುoಡಿ ನ್ಯಾಯ ಒದಗಿಸಲು ಧ್ವನಿ ಎತ್ತಿದ್ದರು ಮತ್ತು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ಹಿಂದೂ ಸಂಘಟನೆಗಳೂ ಸಹ ಸಂತ್ರಸ್ತ ಯುವತಿಗೆ ಅನ್ಯಾಯವಾಗಬಾರದು ಎಂದು ಒತ್ತಾಯಿಸಿ ಜಗನ್ನಿವಾಸ ರಾವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
ಒಟ್ಟಾರೆಯಾಗಿ ಈ ಪ್ರಕರಣವು ವೈಯಕ್ತಿಕ ವಂಚನೆಯಿoದ ಆರಂಭವಾಗಿ, ರಾಜಕೀಯ ಮುಜುಗರಕ್ಕೆ ಕಾರಣವಾಗಿ, ಅಂತಿಮವಾಗಿ ಡಿಎನ್ಎ ವರದಿಯ ಮೂಲಕ ಸತ್ಯ ಸಾಬೀತಾದ ನಂತರ ಜಗನ್ನಿವಾಸ ರಾವ್ ಅವರ ರಾಜಕೀಯ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬಿದ್ದರೂ ಮಗ ಮಾಡುತ್ತಿರುವ ವಂಚನೆಗೆ ತಂದೆ ಉತ್ತರಿಸಲಾರದೆ ಹೋದರು.

ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಾಧ್ಯತೆ

ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್‌ಗೆ ಕೆಲವು ಷರತ್ತುಗಳ ಅನ್ವಯ ಹೈಕೋರ್ಟಿನಿಂದ ಜಾಮೀನು ಮಂಜೂರಾಗಿದೆ. ಇದೀಗ ಮಗುವಿನ ಡಿಎನ್ಎ ವರದಿಯು ಆರೋಪಿಯ ವಿರುದ್ಧವಾಗಿ ಬಂದಿರುವುದರಿoದ, ಇದು ನ್ಯಾಯಾಲಯದಲ್ಲಿ ಪ್ರಬಲ ಸಾಕ್ಷ್ಯವಾಗಿ ಪರಿಣಮಿಸಲಿದೆ. ಸಂತ್ರಸ್ತ ಯುವತಿಗೆ ಪರಿಹಾರ ಕೊಡಿಸಲು ಮತ್ತು ಮಗುವಿನ ಹಕ್ಕುಗಳನ್ನು ರಕ್ಷಿಸಲು ಈ ವರದಿ ಪ್ರಮುಖ ಪಾತ್ರ ವಹಿಸುತ್ತದೆ. ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (Chargesheet) ಸಲ್ಲಿಕೆಯಾಗುವ ಸಾಧ್ಯತೆಯಿದೆ.

ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯದಂತೆ ಸ್ಥಳೀಯ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ನಿರಂತರವಾಗಿ ನಿಗಾ ಇಟ್ಟಿವೆ. ಸಂತ್ರಸ್ತ ಯುವತಿಯು ತನಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಹಿಂದೂ ಸಂಘಟನೆಗಳು ಹಿಂದೂ ಸಮಾಜಕ್ಕೆ ನ್ಯಾಯ ಒದಗಿಸುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ವೇದಿಕೆಯಲ್ಲಿ ಹೇಳುತ್ತಾ ಬಂದರೂ ನಮ್ಮ ಸಮಾಜದಿಂದಲೇ ಅನ್ಯಾಯಗಳು ನಡೆದಾಗ ಬಹುತೇಕ ಮೌನವಾಗಿರುವುದು ಮತ್ತು ಅನ್ಯಧರ್ಮಿಯರಿಂದ ಆಗುವ ಆಗಬಹುದಾದ ಅನ್ಯಾಯಗಳಿಗೆ ಮಾತ್ರ ಹಿಂದೂ ಸಂಘಟನೆಗಳು ಸೀಮಿತವಾಗಿರುವಂತೆ ಕಾಣುತ್ತಿದೆ ಎಂದು ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು

Published

on

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

  • ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
  • ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
  • ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:

ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ

Continue Reading

crime

ಪುತ್ತೂರು ಮಹಿಳಾ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ

Published

on

ಪುತ್ತೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ತಮ್ಮ ಹೋರಾಟಕ್ಕೆ ಜಯ ಸಿಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಮೂಲಗಳ ಪ್ರಕಾರ, ಬೆಳಿಗ್ಗೆ 11.30ರ ಸುಮಾರಿಗೆ ಅವರು ತಮ್ಮ ಹಳೆಯ ಕೇಸ್ ಒಂದರ ಸಂಬಂಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಹಿಳಾ ಠಾಣಾ ಇನ್‌ಸ್ಪೆಕ್ಟರ್‌ ಸುನಿಲ್ ಕುಮಾರ್ ಅವರು ಬೇರೆ ಕಾರ್ಯ ನಿಮಿತ್ತ ಠಾಣೆಯಲ್ಲಿ ಇರಲಿಲ್ಲ. ಹೀಗಾಗಿ, ಲಿಖಿತವಾಗಿ ಹಾಜರಾದ ಬಗ್ಗೆ ಅವರಿಗೆ ನೋಟಿಸ್ ನೀಡಲಾಯಿತು. ಮುಂದಿನ ಸೂಚಿತ ದಿನಾಂಕದಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೆ ಠಾಣೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸೇರಿದಂತೆ ಹಲವರು ಅಭಿಮಾನಿಗಳು ಅವರ ಜೊತೆಗಿದ್ದರು.

ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿಗೆ ಭೇಟಿ ನೀಡಿದಾಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದೇ ಹೋಗುತ್ತಿದ್ದು, ಅದರಂತೆ ಇಂದು ಠಾಣೆಗೆ ತೆರಳಿ ಹಿಂತಿರುಗುವಾಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.

Continue Reading

crime

ಸಕಲೇಶಪುರ ಲಾಡ್ಜ್‌ನಲ್ಲಿ ಕರಾಳ ರಾತ್ರಿ: ಬಾತ್‌ರೂಮ್‌ನಲ್ಲಿ 23 ವರ್ಷದ ಯುವತಿ ನಿಗೂಢ ಸಾವು, ಜೊತೆಗಿದ್ದ ಯುವಕರು ಎಸ್ಕೇಪ್!

Published

on

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ ಒಂದರಲ್ಲಿ 23 ವರ್ಷದ ವರ್ಷ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರಣೆ:

ಪ್ರವಾಸಕ್ಕೆ ತೆರಳಿದ್ದ ಮೂವರು: ಬೆಂಗಳೂರು ಮೂಲದ (ನಾಗಸಂದ್ರ/ಚಿಕ್ಕಬಾಣಾವರ) 23 ವರ್ಷದ ವರ್ಷ ಎಂಬ ಯುವತಿ, ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಎಂಬುವವರೊಂದಿಗೆ ಶುಕ್ರವಾರ ಪ್ರವಾಸಕ್ಕೆಂದು ಸಕಲೇಶಪುರಕ್ಕೆ ಬಂದಿದ್ದಳು.

ಪ್ರವಾಸಿ ತಾಣಗಳ ವೀಕ್ಷಣೆ: ಶನಿವಾರ, ಭಾನುವಾರ ಹಾಗೂ ಸೋಮವಾರದಂದು ಈ ಮೂವರು ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸುತ್ತಾಡಿದ್ದರು.

ಲಾಡ್ಜ್‌ನಲ್ಲಿ ತಂಗಿದ್ದ ದಳ: ವಳಲಹಳ್ಳಿ ಕೂಡಿಗೆಯಲ್ಲಿರುವ ಶ್ರೀದೇವು ಲಾಡ್ಜ್‌ನಲ್ಲಿ ಮೂವರು ಒಂದೇ ರೂಮ್‌ನಲ್ಲಿ ತಂಗಿದ್ದರು.

ಅನುಮಾನಾಸ್ಪದ ಸಾವು: ಮಂಗಳವಾರ ಲಾಡ್ಜ್‌ನ ಬಾತ್‌ರೂಮ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸುನೀಗಿದ್ದಾರೆ. ಯುವತಿ ಮೃತಪಟ್ಟ ಬಳಿಕ ಜೊತೆಗಿದ್ದ ಯುವಕರು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದಾರೆ (ಕೆಲವು ಮೂಲಗಳ ಪ್ರಕಾರ ಆಸ್ಪತ್ರೆಗೆ ಕರೆತಂದು ಬಳಿಕ ತೆರಳಿದ್ದಾರೆ).

ಆಸ್ಪತ್ರೆ ಹಾಗೂ ಪೊಲೀಸ್ ತನಿಖೆ: ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾತ್‌ರೂಮ್‌ನಲ್ಲಿ ಯುವತಿ ಮೃತಪಟ್ಟಿರುವುದು ಮತ್ತು ಜೊತೆಗಿದ್ದವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

Continue Reading

Trending

Copyright © 2025 Deevatige

error: Content is protected !!