Connect with us

Bantawala

ಬಿ‌ಬಿಕೆ ಸ್ಪೋರ್ಟ್ಸ ಕ್ಲಬ್ ಇದರ ವತಿಯಿಂದ ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಕೂಟ ಯಶಸ್ವಿಯಾಗಿ ಮುಕ್ತಾಯ.

Published

on

ಬಿಗ್ ಬ್ಲಾಸ್ಟರ್ ಸ್ಪೋರ್ಟ್ಸ್ ಕ್ಲಬ್, ಕೋಡಪದವು ಇದರ ವತಿಯಿಂದ ಕೋಡಪದವು ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರೀಮಿಯರ್ ಲೀಗ್ ಸೀಸನ್–5 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಭಾನುವಾರ ಕ್ರೀಡಾ ಉತ್ಸಾಹ, ಜನಸಾಗರ ಹಾಗೂ ಸಂಭ್ರಮದ ನಡುವೆ ಯಶಸ್ವಿಯಾಗಿ ಮುಕ್ತಾಯವಾಯಿತು. ನೇರ ಪ್ರಸಾರದ ಮೂಲಕ ನಡೆದ ಈ ಪಂದ್ಯಾಟವು ಬಂಟ್ವಾಳ ತಾಲೂಕಿನ ಅತೀದೊಡ್ಡ ಪಂದ್ಯಾಕೂಟ ಎಂದೆನಿಸಿತು.ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಿತು.

ಈ ಬೃಹತ್ ಪಂದ್ಯಾಟದಲ್ಲಿ ಎರಡೂ ಜಿಲ್ಲೆಗಳ ಹೆಸರಾಂತ ಐಕಾನ್ ಆಟಗಾರರನ್ನು ಒಳಗೊಂಡ 8 ತಂಡಗಳು ಭಾಗವಹಿಸಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ನೀಡಿತು. ಗ್ರಾಮೀಣ ಕ್ರೀಡಾಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಿದ ಈ ಲೀಗ್ ಮಾದರಿಯ ಟೂರ್ನಿ, ಸಂಘಟನೆಯ ಶಿಸ್ತು, ವ್ಯವಸ್ಥೆ ಹಾಗೂ ಉತ್ಸಾಹದಿಂದ ಮಾದರಿಯಾಗಿ ಮೂಡಿಬಂದಿತು.
ಪಂದ್ಯಾಟದ ಅಂಗವಾಗಿ ನಡೆದ ಸಾಧಕರ ಸನ್ಮಾನ ಸಮಾರಂಭದಲ್ಲಿ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾಧ್ಯಮ ಕ್ಷೇತ್ರದ ಸನ್ಮಾರ್ಗ ಚಾನೆಲ್ ಪ್ರದಾನ ಸಂಪಾದಕ ಎ.ಕೆ. ಕುಕ್ಕಿಲ, ಸಾಮಾಜಿಕ ಸೇವಾ ಕ್ಷೇತ್ರದ ಹಸೈನಾರ್ ತಾಳಿತ್ತನೂಜಿ, ಡಿ ಗ್ರೂಪ್ ವಿಟ್ಲ, ನಿವೃತ್ತ ಶಿಕ್ಷಕಿ ಶಕುಂತಲ, ನಿವೃತ್ತ ಪೊಲೀಸ್ ಅಧಿಕಾರಿ ಮೋನಪ್ಪ ಗೌಡ ಕುಕ್ಕಿಲ, ಹಾಗೂ 14ರ ವಯಸ್ಸಿನಲ್ಲೇ ರಾಷ್ಟ್ರೀಯ ಕಬಡ್ಡಿ ತಂಡವನ್ನು ನಾಲ್ಕು ಬಾರಿ ಪ್ರತಿನಿಧಿಸಿದ ಕುಮಾರಿ ಕೀರ್ತಿ ಅವರನ್ನು ಗೌರವಿಸಲಾಯಿತು.

ರೋಚಕ ಫೈನಲ್ ಪಂದ್ಯದಲ್ಲಿ ಕರೀಂ ಮದಕ ಅವರ ಮಾಲಕತ್ವದ ಅಸೀಪ್ ಕುಲ್ಯಾರ್ ನಾಯಕತ್ವದ ರೋಯಲ್ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡರೆ, ಬಾಲಕೃಷ್ಣ ಕುಕ್ಕಿಲ ಅವರ ಮಾಲಕತ್ವದ ಯಶವಂತ ಮದಕ ನಾಯಕತ್ವದ ಮಾರುತಿ ಫ್ರೆಂಡ್ಸ್ ಕೋಡಪದವು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು. ರೋಯಲ್ ಚಾಲೇಂಜರ್ಸ್ ತಂಡದ ವಿಶಾಲ್ ಉತ್ತಮ ದಾಂಡಿಗ ಮತ್ತು ಸರಣಿಶ್ರೇಷ್ಠಿ ಪ್ರಶಸ್ತಿ ಪಡೆಸುಕೊಂಡರೆ,ಮಾರುತಿ ತಂಡದ ಶೀನಾಥ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರು.ಉಭಯ ತಂಡಗಳ ಹೋರಾಟ ಕ್ರೀಡಾಭಿಮಾನಿಗಳಿಂದ ಭಾರೀ ಪ್ರಶಂಸೆಗೆ ಪಾತ್ರವಾಯಿತು.

ಸಮಾರೋಪ ಸಮಾರಂಭದಲ್ಲಿ ಸಮಾಜಮುಖಿ ಚಿಂತನೆಯ ಭಾಗವಾಗಿ ದ.ಕ. ಜಿ. ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕೋಡಪದವು ಇಲ್ಲಿಗೆ ಸಿ.ಸಿ. ಕ್ಯಾಮರಾವನ್ನು SDMC ಅದ್ಯಕ್ಷರಿಗೆ ಕೊಡುಗೆಯಾಗಿ ನೀಡಲಾಯಿತು. ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಪಂದ್ಯಾಕೂಟದುದ್ದಕ್ಕೂ ಯಾವುದೇ ಗೊಂದಲಗಳಿಲ್ಲದೇ ಉತ್ತಮ ತೀರ್ಪುಗಾರರಾಗಿ ಪುರುಷೋತ್ತಮ್ ಬೆಳ್ಳಾರೆ, ಅಲಿ ಬೊನ್ಯಕುಕ್ಕು,ಮುಸ್ತಫಾ ಶರವು,ಅಜೀಜ್ ಕೆಲಿಂಜ ಕಾರ್ಯನಿರ್ವಹಿಸಿದರು.ವಿವಿಧ ಬಾಷಾ ವೀಕ್ಷಕ ವಿವರಣೆಗಾರರಾಗಿ ಸುಕೇಶ್,ಪಾರೂಕ್ ಬೊನ್ಯಕುಕ್ಕು,ಸಿದ್ದೀಕ್ ಕೋಡಪದವು,ಇಕ್ಬಾಲ್ ಸುರಿಬೈಲ್ ಪ್ರೇಕ್ಷಕರ ಮನರಂಜಿಸಿದರು.ಇವರನ್ನು ಸಮಾರೋಪ ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಜಿ.ಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಮಾಣಿ‌ ಗ್ರಾಮ ಪಂಚಾಯತ್ ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಕೆಲಿಂಜ SDMC ಅದ್ಯಕ್ಷರಾದ ಮೋಹಿತ್ ಶೆಟ್ಟಿ,ವಿಟ್ಲಪಡ್ನೂರು ಸೊಸೈಟಿ ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರು, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಲತಾ ಮದಕ, ಸದಸ್ಯರಾದ ಎ.ಬಿ. ಅಬ್ದುಲ್ಲಾ, ಸಂದೇಶ್ ಶೆಟ್ಟಿ ಬಿಕ್ನಾಜೆ, ಡಿ.ಗ್ರೂಪ್ ಇದರ ಅದ್ಯಕ್ಷರಾದ ಶಾಕೀರ್ ಅಳಕೆಮಜಲು,ಮಹಮ್ಮದ್ ಮಂಚಿ, ರಾಜೇಶ್ ಬಾರೆಬೆಟ್ಟು, ಹರ್ಷದ್ ಕುಕ್ಕಿಲ, ಸೋಮಶೇಖರ್ ಗೌಡ ತಾಳಿತ್ತನೂಜಿ, ಶಾಕೀರ್ ಅಳಕೆಮಜಲು, ಸಂತೋಷ್ ಕುಮಾರ್ ತಾಳಿತ್ತನೂಜಿ,ಬಿಬಿಕೆ ಸ್ಪೋರ್ಟ್ಸ್ ಕ್ಲಬ್ ಅದ್ಯಕ್ಷರಾದ ರಿಯಾಜ್ ತಾಳಿತ್ತನೂಜಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕ್ರೀಡಾ ಗೌರವ ಹೆಚ್ಚಿಸಿದರು. ಬಿಬಿಕೆ ತಂಡದ ಸಿದ್ದೀಕ್ ಪೆಲ್ತಡ್ಕ, ಕರೀಂ ಮದಕ,ಹಾರೀಸ್ ಕುಕ್ಕಿಲ, ಹಂಝ ತಾಳಿತ್ತನೂಜಿ ಸೇರಿದಂತೆ ಅಧಿಕೃತ ಸಲಹೆಗಾರರಾಗಿ ಪಂದ್ಯಾಕೂಟದುದ್ದಕ್ಕೂ ಸಹಕರಿಸಿದರು.

ads (2)
ads (3)
ads (4)
ads (5)
ads (6)
ads (1)
ads (8)
ads (7)

Bantawala

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ

ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್‌ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.

ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು

ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.

ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.

ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.

ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.

ಪ್ರಶಸ್ತಿ ಹಾಗೂ ಪುರಸ್ಕಾರ

ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

Continue Reading

Bantawala

ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್‌ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Continue Reading

Bantawala

ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

Published

on

ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

ಬಂಟ್ವಾಳ ಠಾಣೆಯಲ್ಲಿ ದೂರು:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Trending

Copyright © 2025 Deevatige

error: Content is protected !!