Connect with us

Article

ನಿಯಮದ ಹೆಸರಿನಲ್ಲಿ ಅಮಾನವೀಯತೆ; KSRTC ನಿರ್ವಾಹಕನ ಹಠಕ್ಕೆ ಕಬಕದಲ್ಲಿ ಕಣ್ಣೀರಿಟ್ಟ ವಿಟ್ಲದ ಶಾಲಾ ಬಾಲಕ!

Published

on

ವಿಟ್ಲ: “ಸಾರ್ವಜನಿಕ ಸೇವೆ” ಎಂಬ ಬೋರ್ಡ್ ಹಾಕಿಕೊಂಡು ರಸ್ತೆಗಿಳಿಯುವ ಸರ್ಕಾರಿ ಬಸ್‌ಗಳು ಸಾರ್ವಜನಿಕರ ಪ್ರಾಣ ಹಿಂಡುವ ಕೆಲಸಕ್ಕೆ ಕೈಹಾಕಿವೆಯೇ? ನಿಯಮಗಳ ಹೆಸರಿನಲ್ಲಿ ಕನಿಷ್ಠ ಮಾನವೀಯತೆಯನ್ನೂ ಮರೆತು ವರ್ತಿಸುವ ಸಾರಿಗೆ ಸಿಬ್ಬಂದಿಯ ಉಡಾಫೆಗೆ ಕೊನೆಯೇ ಇಲ್ಲವೇ? ಹೌದು, ಇಂದು ಶನಿವಾರ ಮಧ್ಯಾಹ್ನ ವಿಟ್ಲದಲ್ಲಿ ನಡೆದ ಘಟನೆಯೊಂದು ಇಡೀ ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ಸಿನ ನಿರ್ವಾಹಕ (ಕಂಡೆಕ್ಟರ್) ಹಾಗೂ ಸಂಚಾರ ನಿಯಂತ್ರಕರ (ಟ್ರಾಫಿಕ್ ಕಂಟ್ರೋಲರ್) ಬೇಜವಾಬ್ದಾರಿತನಕ್ಕೆ ವಿಟ್ಲದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ಅಮಾಯಕ ಬಾಲಕನೊಬ್ಬ ಕಬಕ ನಿಲ್ದಾಣದಲ್ಲಿ ಕಣ್ಣೀರು ಹಾಕುತ್ತಾ ನಿಲ್ಲುವಂತಾದ ಘೋರ ಘಟನೆ ನಡೆದಿದೆ.

ಪುತ್ತೂರು ಪುತ್ತೂರು ಎಂದು ಕೂಗಿ ಜನ ತುಂಬಿಸಿದ್ರು, ಕಂಬಳಬೆಟ್ಟು ಅಂದರೂ ಕಬಕಕ್ಕೆ ಟಿಕೆಟ್ ಕೊಟ್ಟರು!

ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ಪರಿಸರದ ನಿವಾಸಿಯಾಗಿರುವ ಈ ಬಾಲಕ ಎಂದಿನಂತೆ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಮರಳಲು ವಿಟ್ಲ ಸಂತೆ ಮಾರುಕಟ್ಟೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ. ಈ ವೇಳೆ ಕಾಸರಗೋಡು-ಧರ್ಮಸ್ಥಳ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ಸು (KA19 F 3299) ಅಲ್ಲಿಗೆ ಬಂದಿದೆ. ನಿರ್ವಾಹಕ ಜೋರಾಗಿ “ಪುತ್ತೂರು.. ಪುತ್ತೂರು..” ಎಂದು ಕೂಗುತ್ತಾ ಜನರನ್ನು ತುಂಬಿಸುತ್ತಿದ್ದರಿಂದ, ಪುತ್ತೂರು ರಸ್ತೆಯ ಕಂಬಳಬೆಟ್ಟುವಿಗೆ ಹೋಗಬೇಕಾಗಿದ್ದ ಬಾಲಕ ಸಹಜವಾಗಿಯೇ ಆ ಬಸ್ಸನ್ನು ಹತ್ತಿದ್ದಾನೆ.

ಬಸ್ ಹತ್ತಿದ ಬಾಲಕ ತನಗೆ ‘ಕಂಬಳಬೆಟ್ಟು’ ಎಂದು ಹೇಳಿ ಹಣ ನೀಡಿದ್ದಾನೆ. ಆದರೆ ನಿರ್ವಾಹಕ ಆತನಿಗೆ ಕಬಕಕ್ಕೆ ಟಿಕೆಟ್ ನೀಡಿ ಸೈಲೆಂಟಾಗಿದ್ದಾನೆ. ಚಿಕ್ಕ ಮಗುವಾಗಿದ್ದರಿಂದ ಬಾಲಕನಿಗೆ ಟಿಕೆಟ್‌ನಲ್ಲಿ ಏನಿದೆ ಎಂದು ಗಮನಿಸಲು ಸಾಧ್ಯವಾಗಿಲ್ಲ.

“ಇಲ್ಲಿ ಸ್ಟಾಪ್ ಇಲ್ಲ, ಇಳಿಸಲ್ಲ!” – ಗೋಗರೆದರೂ ಕರಗದ ಕಂಡೆಕ್ಟರ್ ಹೃದಯ

ಬಸ್ಸು ಕಂಬಳಬೆಟ್ಟು ದರ್ಗಾ ಬಳಿ ತನ್ನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಾಲಕ ಇಳಿಯುವುದಕ್ಕಾಗಿ ನಿರ್ವಾಹಕನಲ್ಲಿ ವಿನಂತಿಸಿದ್ದಾನೆ. ಆದರೆ ಆ ವೇಳೆ ಕಂಡೆಕ್ಟರ್ ನೀಡಿದ ಉತ್ತರ ಬಾಲಕನಿಗೆ ಆತಂಕದ ಸುನಾಮಿಯನ್ನೇ ಎಬ್ಬಿಸಿದೆ!

“ಇಲ್ಲಿ ಸ್ಟಾಪ್ ಇಲ್ಲ, ಮುಂದಿನ ಸ್ಟಾಪ್ ಇರೋದೇ ಕಬಕದಲ್ಲಿ. ಅಲ್ಲಿಯ ತನಕ ಗಾಡಿ ನಿಲ್ಲಿಸಲ್ಲ, ನೀನು ಅಲ್ಲೇ ಇಳಿಬೇಕು” ಎಂದು ನಿರ್ವಾಹಕ ಗಡುಸಾಗಿ ಹೇಳಿದ್ದಾನೆ.

ತನ್ನ ನಿಲ್ದಾಣದಿಂದ ಬರೋಬ್ಬರಿ 4 ಕಿಲೋಮೀಟರ್ ದೂರವಿರುವ ಕಬಕದಲ್ಲಿ ಇಳಿಯಬೇಕು ಎಂದು ಕೇಳಿ ಬಾಲಕ ತೀವ್ರ ಗಾಬರಿಗೊಂಡಿದ್ದಾನೆ. ತಾನು ಒಬ್ಬನೇ ಇರುವುದು, ಕಂಬಳಬೆಟ್ಟು ಬಿಟ್ಟು ಬೇರೆಲ್ಲೂ ಹೋದವನಲ್ಲ ಎಂಬ ಭಯದಿಂದ ತನಗೆ ಇಳಿಯಲು ಅವಕಾಶ ಮಾಡಿಕೊಡುವಂತೆ ನಿರ್ವಾಹಕನ ಬಳಿ ಪದೇ ಪದೇ ಗೋಗರೆದಿದ್ದಾನೆ. ಆದರೂ ಆ ಕಂಡೆಕ್ಟರ್ ಹೃದಯ ಕರಗಲಿಲ್ಲ. ಬಸ್ಸೇನೂ ಆಕಾಶದಲ್ಲಿ ಹಾರುವ ವಿಮಾನವಲ್ಲ, ಹಳಿಗಳ ಮೇಲೆ ಓಡುವ ರೈಲೂ ಅಲ್ಲ; ಬಾಲಕ ತಪ್ಪು ಗ್ರಹಿಕೆಯಿಂದ ಬಸ್ ಹತ್ತಿದ್ದಾನೆ ಎಂದು ತಿಳಿದಿದ್ದರೂ, ಕನಿಷ್ಠ ಮಾನವೀಯತೆಯ ನೆಲೆಗಟ್ಟಿನಲ್ಲಿ ಬಸ್ ನಿಲ್ಲಿಸಿ ಆ ಮಗುವನ್ನು ಇಳಿಸುವ ಸೌಜನ್ಯವನ್ನು ಆತ ತೋರಿಸಲಿಲ್ಲ. ಕೊನೆಗೂ ಹಠ ಹಿಡಿದು ಆ ಪುಟ್ಟ ಮಗುವನ್ನು 4 ಕಿ.ಮೀ ದೂರದ ಕಬಕದಲ್ಲೇ ಇಳಿಸಿ ಬಸ್ ಮುನ್ನಡೆಸಿದ್ದಾನೆ!

ಕಬಕದಲ್ಲಿ ಕಣ್ಣೀರಿಡುತ್ತಾ ನಿಂತ ಬಾಲಕ!

ಯಾವತ್ತೂ ಹೆತ್ತವರನ್ನು ಬಿಟ್ಟು ಏಕಾಂಗಿಯಾಗಿ ವಿಟ್ಲ ಮತ್ತು ಕಂಬಳಬೆಟ್ಟು ಪರಿಸರ ದಾಟದ ಆ 6ನೇ ತರಗತಿಯ ಮಗು, ಅಪರಿಚಿತ ಕಬಕ ನಿಲ್ದಾಣದಲ್ಲಿ ದಿಕ್ಕುತೋಚದೆ, ಭಯ ಮತ್ತು ನೋವಿನಿಂದ ಕಣ್ಣೀರು ಹಾಕುತ್ತಾ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲುವಂತಾಯಿತು. ತಪ್ಪು ಸಾರಿಗೆ ಸಿಬ್ಬಂದಿಯದ್ದೇ ಆಗಿತ್ತು. ಏಕೆಂದರೆ ಅದು ನಿಗದಿತ ನಿಲುಗಡೆಯ (ಲಿಮಿಟೆಡ್ ಸ್ಟಾಪ್) ಬಸ್ಸಾಗಿದ್ದರೆ, ವಿಟ್ಲದಲ್ಲಿ ಜನರನ್ನು ಹತ್ತಿಸುವಾಗಲೇ ಕಂಬಳಬೆಟ್ಟುವಿಗೆ ಸ್ಟಾಪ್ ಇಲ್ಲ ಎಂಬ ಮಾಹಿತಿಯನ್ನು ನಿರ್ವಾಹಕ ನೀಡಬೇಕಿತ್ತು. ಅದನ್ನು ಬಿಟ್ಟು ಕೇವಲ ಹಣದ ಆಸೆಗೆ “ಪುತ್ತೂರು ಪುತ್ತೂರು” ಎಂದು ಕೂಗಿ ಜನ ತುಂಬಿಸಿ, ಕೊನೆಗೆ ಮಗುವಿನ ರೋದನೆಗೂ ಕರಗದೆ ನಡೆದುಕೊಂಡ ಈ ಅಮಾನವೀಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಂಚಾಯತ್ ಅಧ್ಯಕ್ಷರ ಕರೆಗೂ ಉಡಾಫೆ ಉತ್ತರ ನೀಡಿದ ನಿಯಂತ್ರಕ!

ಈ ಅನ್ಯಾಯದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ಅವರು ವಿಟ್ಲ ಸಂಚಾರ ನಿಯಂತ್ರಕರಿಗೆ (Traffic Controller) ಕರೆ ಮಾಡಿ ಸಾರಿಗೆ ಸಿಬ್ಬಂದಿಯ ಈ ಬೇಜವಾಬ್ದಾರಿತನ ಮತ್ತು ದುರ್ವರ್ತನೆಯ ಬಗ್ಗೆ ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಸಂಬಳ ಪಡೆಯುವ ಆ ಕಡೆಯ ಅಧಿಕಾರಿ, ತಪ್ಪು ಮಾಡಿದ ಸಿಬ್ಬಂದಿಗೆ ಬುದ್ಧಿ ಕಲಿಸುವ ಬದಲು, ಅತ್ಯಂತ ಉಡಾಫೆಯ ಉತ್ತರ ನೀಡುವ ಮೂಲಕ ತನ್ನ ಕೈಕೆಳಗಿನ ನೌಕರನ ಅಮಾನವೀಯ ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಸಾರಿಗೆ ಸಂಸ್ಥೆಯ ಅಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾರ್ವಜನಿಕರ ಪ್ರಶ್ನೆ: ನಿಯಮಗಳು ಮನುಷ್ಯರಿಗಾಗಿಯೇ? ಅಥವಾ ಮನುಷ್ಯರನ್ನು ಹಿಂಸಿಸಲಿಕ್ಕಾಗಿಯೇ?

ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ದುರ್ಬಲರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಸಾರಿಗೆ ಸಂಸ್ಥೆಯ ಕನಿಷ್ಠ ನಿಯಮ. ಆದರೆ ಇಲ್ಲಿ ನಿಯಮಗಳ ಪೊಳ್ಳು ವಾದ ಮಂಡಿಸಿ, ಮಗುವೊಂದನ್ನು ತಾಯಿಯಿಂದ ದೂರವಾಗಿಸಿ ಬೀದಿಯಲ್ಲಿ ನಿಲ್ಲಿಸಿದ ಈ ಸರ್ಕಾರಿ ವ್ಯವಸ್ಥೆ ನಿಜಕ್ಕೂ ಸಾರ್ವಜನಿಕ ವಿರೋಧಿಯಾಗಿದೆ. ಹವಾಮಾನ ವೈಪರೀತ್ಯವಿರಲಿ, ಯಾವುದೇ ತಾಂತ್ರಿಕ ತೊಂದರೆಯಿರಲಿ, ಬಸ್ಸನ್ನು ಒಂದು ನಿಮಿಷ ನಿಲ್ಲಿಸಿ ಮಗುವನ್ನು ಇಳಿಸಿದ್ದರೆ ಆಕಾಶವೇನೂ ತಲೆಮೇಲೆ ಬೀಳುತ್ತಿರಲಿಲ್ಲ.

ಈ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಮಗುವಿನ ಭಯ-ಆತಂಕಕ್ಕೆ ಕಾರಣನಾದ ಆ ಹಠಮಾರಿ ಕಂಡೆಕ್ಟರ್ ಮತ್ತು ಆತನನ್ನು ಸಮರ್ಥಿಸಿಕೊಂಡ ವಿಟ್ಲ ಸಂಚಾರ ನಿಯಂತ್ರಕನ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಾರ್ವಜನಿಕರೇ ಇಂತಹ ಬಸ್ಸುಗಳನ್ನು ತಡೆದು ನಿಲ್ಲಿಸಿ ಪಾಠ ಕಲಿಸುವ ದಿನ ದೂರವಿಲ್ಲ!




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಆಕಾಶದ ಕಾಣುತ್ತಿದೆ ಅಚ್ಚರಿ: ಚಂದ್ರನ ಪಕ್ಕ‌ ಇಂದು ಮಿನುಗುತ್ತಿರುವ ‘ಬೆಳ್ಳಿ ಚುಕ್ಕೆ’ ಶುಕ್ರ ಗ್ರಹದ ರಹಸ್ಯ!

Published

on

ಆಕಾಶದಲ್ಲಿ ಚಂದ್ರನ ಸನಿಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಮಿನುಗುತ್ತಿರುವುದು ಯಾವುದೇ ನಕ್ಷತ್ರವಲ್ಲ, ಬದಲಾಗಿ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ (Venus). ಸಂಜೆಯ ಪಶ್ಚಿಮ ದಿಗಂತದಲ್ಲಿ ಬಾಲಚಂದ್ರ ಹಾಗೂ ಈ ಬೆಳ್ಳಿ ಚುಕ್ಕೆಯು ಪರಸ್ಪರ ಅತ್ಯಂತ ಹತ್ತಿರದಲ್ಲಿ ಗೋಚರಿಸುತ್ತಿರುವುದು ಎಲ್ಲೆಡೆ ಭಾರಿ ಕುತೂಹಲ ಮೂಡಿಸಿದೆ.

ಇದು ನಕ್ಷತ್ರವೇಕಲ್ಲ? ಶುಕ್ರ ಗ್ರಹದ ವಿಶೇಷತೆ

ಸ್ವಂತ ಬೆಳಕಿಲ್ಲದಿದ್ದರೂ ಕಾಂತಿ: ಸಾಮಾನ್ಯ ನಕ್ಷತ್ರಗಳು ತಮ್ಮ ಸ್ವಂತ ಬೆಳಕಿನಿಂದ ಮಿನುಗುತ್ತವೆ. ಆದರೆ ಶುಕ್ರ ಗ್ರಹಕ್ಕೆ ಸ್ವಂತ ಬೆಳಕಿಲ್ಲ. ಇದು ಸೂರ್ಯನ ಬೆಳಕನ್ನು ಅತ್ಯಧಿಕ ಪ್ರಮಾಣದಲ್ಲಿ ಪ್ರತಿಫಲಿಸುವುದರಿಂದ ರಾತ್ರಿ ಆಕಾಶದಲ್ಲಿ ಚಂದ್ರ ಬಿಟ್ಟರೆ ಅತಿ ಹೆಚ್ಚು ಕಾಂತಿಯುತವಾಗಿ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ‘ಸಂಜೆ ನಕ್ಷತ್ರ’ ಅಥವಾ ‘ಬೆಳ್ಳಿ ಚುಕ್ಕೆ’ ಎಂದು ಕರೆಯಲಾಗುತ್ತದೆ.

ದಟ್ಟ ವಾತಾವರಣ: ಶುಕ್ರ ಗ್ರಹವು ಸೂರ್ಯನಿಗೆ ಹತ್ತಿರವಿರುವ ಗ್ರಹವಾಗಿದ್ದು, ಇದರ ದಟ್ಟವಾದ ವಾತಾವರಣವು ಸೂರ್ಯನ ಬೆಳಕನ್ನು ಬಲವಾಗಿ ಪ್ರತಿಫಲಿಸುತ್ತದೆ.

ಸಂಯೋಗ (Conjunction) ಮತ್ತು ಚಂದ್ರ ಮರೆಮಾಚುವಿಕೆ (Lunar Occultation)

ಗ್ರಹ-ಚಂದ್ರ ಯುತಿ: ಖಗೋಳಶಾಸ್ತ್ರದ ಪ್ರಕಾರ, ಭೂಮಿ, ಚಂದ್ರ ಮತ್ತು ಶುಕ್ರ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ನಿರ್ದಿಷ್ಟ ಸಾಪೇಕ್ಷ ಸ್ಥಾನಕ್ಕೆ ಬಂದಾಗ ಒಂದೇ ನೇರ ಸಾಲಿನಲ್ಲಿ (Conjunction) ಅತಿ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತವೆ. ಭೂಮಿಯಿಂದ ನೋಡುವಾಗ ಈ ಎರಡೂ ಆಕಾಶಕಾಯಗಳು ಅಕ್ಕಪಕ್ಕದಲ್ಲಿ ಇದ್ದಂತೆ ಭಾಸವಾಗುತ್ತವೆ.

ಚಂದ್ರ ಮರೆಮಾಚುವಿಕೆ: ಭಾರತದ ಕೆಲ ಭಾಗಗಳಲ್ಲಿ ಚಂದ್ರನು ಶುಕ್ರ ಗ್ರಹದ ಮುಂಭಾಗದಲ್ಲೇ ಹಾದುಹೋಗುವ ಅಪರೂಪದ ‘ಚಂದ್ರ ಮರೆಮಾಚುವಿಕೆ’ (Lunar Occultation) ವಿದ್ಯಮಾನವೂ ಜರಗಿದೆ. ಅಂದರೆ ಕೆಲಕಾಲ ಶುಕ್ರ ಗ್ರಹವು ಚಂದ್ರನ ಹಿಂದೆ ಮರೆಯಾಗಿ, ನಂತರ ಆಚೆ ಬಂದಿದೆ. ಇದು ಬರಿಗಣ್ಣಿಗೂ ಅತ್ಯಂತ ಆಕರ್ಷಕವಾಗಿ ಗೋಚರಿಸುವ ದೃಶ್ಯವಾಗಿದೆ.

ಚೌತಿ ಚಂದ್ರನ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ

ಪೌರಾಣಿಕ ಹಿನ್ನೆಲೆ: ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ (ಗಣೇಶ ಚತುರ್ಥಿ) ದಿನ ಚಂದ್ರನನ್ನು ನೋಡಿದರೆ ಕಳಂಕ ಅಥವಾ ಅಪವಾದ ಬರುತ್ತದೆ (ಮಣಿಭರಣ ಕಳಂಕ) ಎಂಬುದು ಜನರಲ್ಲಿ ಶತಶತಮಾನಗಳಿಂದ ರೂಢಿಯಲ್ಲಿರುವ ನಂಬಿಕೆಯಾಗಿದೆ.

ವೈಜ್ಞಾನಿಕ ಸತ್ಯ: ಖಗೋಳ ವಿಜ್ಞಾನದ ದೃಷ್ಟಿಯಿಂದ ಚಂದ್ರನನ್ನು ನೋಡುವುದರಿಂದ ಯಾವುದೇ ಶಾಪ, ಅಪವಾದ ಅಥವಾ ಕೆಟ್ಟ ಪರಿಣಾಮಗಳು ಸಂಭವಿಸುವುದಿಲ್ಲ. ಇದು ಕೇವಲ ನೈಸರ್ಗಿಕ ಉಪಗ್ರಹವಾಗಿದ್ದು, ಭೂಮಿಯ ಸುತ್ತ ನಿರಂತರವಾಗಿ ಸುತ್ತುತ್ತದೆ. ಚತುರ್ಥಿಯ ದಿನ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಸಾಪೇಕ್ಷ ಸ್ಥಾನದಿಂದಾಗಿ ತೆಳುವಾದ ಕಮಾನು ಅಥವಾ ಅರ್ಧಚಂದ್ರಾಕಾರದಲ್ಲಿ ಗೋಚರಿಸುತ್ತಾನೆ.

ವೀಕ್ಷಣೆ ಹೇಗೆ?

ಅಮಾವಾಸ್ಯೆಯ ನಂತರದ ಆರಂಭಿಕ ದಿನಗಳಲ್ಲಿ (ಬಾಲಚಂದ್ರನಿದ್ದಾಗ) ಪಶ್ಚಿಮ ಆಕಾಶದಲ್ಲಿ ಸಂಜೆಯ ಹೊತ್ತು ಈ ಅದ್ಭುತ ದೃಶ್ಯವು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಜನರು ಇದನ್ನು ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Continue Reading

Article

ಸರ್ವರಲ್ಲೂ ಸಮಭಾವದ ಪ್ರತೀಕ ಗಣೇಶೋತ್ಸವ: ಹಬ್ಬಗಳು ಒಗ್ಗಟ್ಟಿನ ಸೇತುವೆಯಾಗಲಿ

Published

on

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧ್ರಾಮಿಕ ಆಚರಣೆಗಳಲ್ಲ, ಅವು ಮನುಕುಲವನ್ನು ಬೆಸೆಯುವ ಭಾವನಾತ್ಮಕ ಕೊಂಡಿಗಳು. ಅದರಲ್ಲಿಯೂ ಗಣೇಶ ಚತುರ್ಥಿಯು ವಿಘ್ನಗಳನ್ನು ನಿವಾರಿಸಿ, ಬುದ್ಧಿವಂತಿಕೆ ಹಾಗೂ ಸಮೃದ್ಧಿಯನ್ನು ತರುವ ಹಬ್ಬವಾಗಿ ಮಾತ್ರವಲ್ಲದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ.

ಪ್ರಕೃತಿಯ ವಿಸ್ಮಯವನ್ನು ಗಮನಿಸಿದರೆ ನಮಗೆ ದೊಡ್ಡ ಪಾಠ ಸಿಗುತ್ತದೆ. ಸೂರ್ಯನ ಬೆಳಕು, ಚಂದ್ರನ ತಂಪಾದ ಬೆಳಕು, ಬೀಸುವ ಗಾಳಿ ಮತ್ತು ಹರಿಯುವ ನದಿಗಳು ಎಂದಿಗೂ ಜಾತಿ, ಮತ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಪ್ರಕೃತಿಯು ಇಡೀ ಮಾನವ ಕುಲವನ್ನು ತನ್ನ ಮಕ್ಕಳಂತೆ ಸಮಾನವಾಗಿ ಕಾಣುತ್ತದೆ. ಅದೇ ರೀತಿ, ನಮ್ಮ ಹಬ್ಬಗಳ ಆಚರಣೆಯೂ ಕೂಡ ಭೇದಭಾವಗಳನ್ನು ಮರೆತು ಎಲ್ಲರನ್ನು ಅಪ್ಪಿಕೊಳ್ಳುವಂತಾಗಬೇಕು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಾಗ, ಅದರ ಮುಖ್ಯ ಉದ್ದೇಶವೇ ಜಾತಿ-ಮತಗಳ ಗಡಿಯನ್ನು ಮೀರಿ ಇಡೀ ಸಮಾಜವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯವನ್ನು ಬಿತ್ತುವ ಮಾಧ್ಯಮಗಳಾಗಬೇಕಿದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮ, ನಂಬಿಕೆಗಳು ಮತ್ತು ಆಚರಣೆಗಳು ಶ್ರೇಷ್ಠವಾಗಿರುವುದು ಸಹಜ ಮತ್ತು ನೈಸರ್ಗಿಕ. ಆದರೆ, ತನ್ನ ಧರ್ಮದಷ್ಟೇ ಇತರರ ಧರ್ಮವನ್ನೂ ಗೌರವಿಸುವುದೇ ನಿಜವಾದ ಮಾನವತೆಯ ಪ್ರತೀಕ. ದ್ವೇಷ ಅಥವಾ ಅಸೂಯೆಗಾಗಿ ಒಗ್ಗೂಡುವುದಕ್ಕಿಂತ, ಸೌಹಾರ್ದತೆ ಮತ್ತು ಮಾನವೀಯತೆಗಾಗಿ ಒಂದಾಗುವುದೇ ಹಬ್ಬಗಳ ಅತಿ ದೊಡ್ಡ ಸಂದೇಶ.

ಈ ಗಣೇಶ ಚತುರ್ಥಿಯಂದು ವಿಘ್ನಹರ್ತನನ್ನು ಆರಾಧಿಸುವಾಗ, ನಮ್ಮ ಮನಸ್ಸಿನಲ್ಲಿರುವ ಅಹಂಕಾರ, ತಾರತಮ್ಯ ಮತ್ತು ದ್ವೇಷದ ಭಾವನೆಗಳನ್ನು ವಿಸರ್ಜಿಸೋಣ. ಪ್ರಕೃತಿಯಂತೆ ವಿಶಾಲವಾದ ಹೃದಯವನ್ನು ರೂಢಿಸಿಕೊಂಡು, ಎಲ್ಲರೊಂದಿಗೆ ಬೆರೆತು ಬಾಳುವ ಸಂಕಲ್ಪ ಮಾಡೋಣ. ಹಬ್ಬಗಳು ನಮ್ಮನ್ನು ವಿಭಜಿಸದೆ, ಸೌಹಾರ್ದತೆಯ ಬಂಧದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿ.

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು!

Continue Reading

Article

ಚಿತ್ರದಲ್ಲಿ ತಾಯಿಯನ್ನು ಹುಡುಕಿದ ಕರು: ಪ್ರಕೃತಿಯ ಮಮತೆ ಮತ್ತು ಮಾನವನ ಕಠೋರತೆಗೆ ಹಿಡಿದ ಕನ್ನಡಿ

Published

on

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ವಿಡಿಯೋ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ತಾಯಿಯ ಪ್ರೀತಿ, ಮಮತೆ ಮತ್ತು ಅಪ್ಪುಗೆಗಾಗಿ ಒಂದು ಜೀವ ಎಷ್ಟು ತವಕಿಸುತ್ತದೆ ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿಯಾಗಿದೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ಹಾಲಿನ ಡೈರಿಯ ಲಾರಿಯೊಂದರ ಹಿಂಭಾಗದಲ್ಲಿ ಹಸುವಿನ ದೊಡ್ಡ ಚಿತ್ರವಿತ್ತು (ಪೋಸ್ಟರ್). ಹಾದಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಸಣ್ಣ ಕರುವೊಂದು ಆ ಚಿತ್ರವನ್ನು ಕಂಡ ತಕ್ಷಣ, ಅದು ತನ್ನದೇ ಹೆತ್ತ ತಾಯಿ ಎಂದು ಭಾವಿಸಿದೆ. ಓಡೋಡಿ ಬಂದು “ಅಂಬಾ…” ಎಂದು ಕರೆದಿದೆ. ಚಿತ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ತಾಯಿಯ ಬಳಿಗೆ ಹೋಗಲು ಹಂಬಲಿಸಿ ಲಾರಿಯ ಹಿಂಭಾಗಕ್ಕೆ ತನ್ನ ಮುಂಗಾಲುಗಳನ್ನಿಟ್ಟು ನಿಂತಿದೆ. ಹಸುವಿನ ಚಿತ್ರದಲ್ಲಿದ್ದ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ನಿರಂತರ ಪ್ರಯತ್ನ ನಡೆಸಿದೆ.

ಆದರೆ, ಅದು ಕೇವಲ ನಿರ್ಜೀವ ಪೋಸ್ಟರ್ ಎಂಬ ಸತ್ಯ ಆ ಮುಗ್ಧ ಕರುವಿಗೆ ತಿಳಿಯಲಿಲ್ಲ. “ತಾಯಿ ನನ್ನನ್ನು ಏಕೆ ಹತ್ತಿರಕ್ಕೆ ಕರೆದುಕೊಳ್ಳುತ್ತಿಲ್ಲ, ಏಕೆ ಹಾಲು ನೀಡುತ್ತಿಲ್ಲ?” ಎಂದು ಅದು ನಿರಾಶೆಯಿಂದ ಗೋಗರೆಯುವ ದೃಶ್ಯ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ.

ಹೈನುಗಾರಿಕೆ ಮತ್ತು ನಮ್ಮ ನೈತಿಕತೆ:

ಈ ಸನ್ನಿವೇಶವು ಕೇವಲ ಒಂದು ವೈರಲ್ ವಿಡಿಯೋ ಅಲ್ಲ; ಬದಲಿಗೆ ಪ್ರಸ್ತುತ ಸಮಾಜದಲ್ಲಿ ಸಾಗುತ್ತಿರುವ ಹೈನುಗಾರಿಕೆ ಉದ್ಯಮದ ಕಠೋರ ನೈಜತೆಗೆ ಹಿಡಿದ ಕನ್ನಡಿ. ಪ್ರತಿಯೊಂದು ಪ್ರಾಣಿ-ಪಕ್ಷಿಗೂ ತಾಯಿಯ ಮಮತೆ ಅತ್ಯಗತ್ಯ. ಆದರೆ ಮನುಷ್ಯ ತನ್ನ ಸ್ವಾರ್ಥ ಮತ್ತು ಲಾಭಕ್ಕಾಗಿ ಕರು ಕುಡಿಯಬೇಕಾದ ಹಾಲನ್ನು ಸಂಪೂರ್ಣವಾಗಿ ಹಿಂಡಿ ಮಾರಾಟ ಮಾಡುತ್ತಿದ್ದಾನೆ.

ಅದರಲ್ಲೂ ವಿಶೇಷವಾಗಿ ಗಂಡು ಕರು ಹುಟ್ಟಿದರೆ, ಹಾಲು ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಅದನ್ನು ಬೀದಿಗೆ ತಳ್ಳುವುದು ಅಥವಾ ಅನಾಥವಾಗಿ ಬಿಟ್ಟುಬಿಡುವುದು ಸಮಾಜದಲ್ಲಿ ಸಾಮಾನ್ಯವಾಗಿದೆ. ತಾಯಿಯ ಹಾಲಿನಿಂದಲೂ, ತಾಯಿಯ ಪ್ರೀತಿಯಿಂದಲೂ ವಂಚಿತವಾದ ಇಂತಹ ಮುಗ್ಧ ಜೀವಿಗಳು ರಸ್ತೆ ರಸ್ತೆಗಳಲ್ಲಿ ಅಲೆಯುತ್ತಾ, ನಿರ್ಜೀವ ಚಿತ್ರಗಳಲ್ಲೂ ತಮ್ಮ ತಾಯಿಯನ್ನು ಹುಡುಕುವ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ಶೋಚನೀಯ.

ಈ ವಿಡಿಯೋ ನಮಗೆಲ್ಲರಿಗೂ ಒಂದು ಪ್ರಶ್ನೆಯನ್ನು ಎಸೆದಿದೆ — ಮನುಷ್ಯನ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳ ಕರುಳ ಬಳ್ಳಿಯ ಬಂಧವನ್ನು ಹೀಗೆ ತುಂಡರಿಸುವುದು ಎಷ್ಟು ಸರಿ? ಪ್ರಾಣಿಗಳ ಮೇಲಿನ ದಯೆ ಮತ್ತು ಕರುಣೆ ಕೇವಲ ಮಾತಿಗೆ ಸೀಮಿತವಾಗದೇ ಕಾರ್ಯಾಚರಣೆಗೆ ಬರಬೇಕಿದೆ

Continue Reading

Trending

Copyright © 2025 Deevatige

error: Content is protected !!