Connect with us

accident

ಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ತೆರೆದು ರಸ್ತೆಗೆ ಬಿದ್ದ ಸಹೋದರಿಯರು; ಚಾಲಕ, ನಿರ್ವಾಹಕನ ವಿರುದ್ಧ ಕೇಸ್ ದಾಖಲು

Published

on

ಬೆಳ್ತಂಗಡಿ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಬಾಗಿಲು ಆಕಸ್ಮಿಕವಾಗಿ ತೆರೆದ ಪರಿಣಾಮ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಸಹೋದರಿಯರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಮಾರ್ಚ್ 31ರಂದು ಬೆಳಗ್ಗೆ ಕಳಿಯ ಗ್ರಾಮದ ನಿವಾಸಿಗಳಾದ ಚರಿಷ್ಮಾ (17) ಮತ್ತು ಚದ್ಮಕಾ (15) ಎಂಬ ಸಹೋದರಿಯರು ಎಂದಿನಂತೆ ಕಾಲೇಜಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಕಳಿಯದಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿತ್ತು. ಗೇರುಕಟ್ಟೆ ಸಮೀಪ ತಲುಪುತ್ತಿದ್ದಂತೆ ಬಸ್ಸಿನ ಬಾಗಿಲು ದಿಢೀರನೆ ತೆರೆದುಕೊಂಡಿದ್ದು, ಬಾಗಿಲ ಬಳಿಯಿದ್ದ ಇಬ್ಬರೂ ವಿದ್ಯಾರ್ಥಿನಿಯರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.

ರಸ್ತೆಗೆ ಬಿದ್ದ ಪರಿಣಾಮ ಇಬ್ಬರೂ ಸಹೋದರಿಯರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಜಾಗರೂಕತೆಯ ಆರೋಪ: ಬಸ್ ಚಾಲಕ ದಯಾನಂದ ಅವರು ವಾಹನವನ್ನು ಅತ್ಯಂತ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಮತ್ತು ನಿರ್ವಾಹಕ ಕಾಶಿನಾಥ್ ಅವರು ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಕರ್ತವ್ಯ ಲೋಪವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಕ್ಷನ್ 281: ಅಜಾಗರೂಕ ಚಾಲನೆ. ಸೆಕ್ಷನ್ 125: ಜೀವಕ್ಕೆ ಅಪಾಯ ತರುವಂತಹ ನಿರ್ಲಕ್ಷ್ಯದ ಕೃತ್ಯ.ಸೆಕ್ಷನ್ 125(a): ನಿರ್ಲಕ್ಷ್ಯದಿಂದ ಗಾಯ ಉಂಟುಮಾಡುವುದು.ಸೆಕ್ಷನ್‌ಗಳ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ:

ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಕೊರತೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading
Advertisement

accident

ರಸ್ತೆ ತಿರುವಿನಲ್ಲಿ ದಿಢೀರನೆ ತೆರೆದುಕೊಂಡ ಬಾಗಿಲು..ಸರ್ಕಾರಿ ಬಸ್ಸಿಂದ ಹೊರಕ್ಕೆಸೆಯಲ್ಪಟ್ಟು ಸಹೋದರಿಯರಿಗೆ ಗಂಭೀರ ಗಾಯ.

Published

on

ಬೆಳ್ತಂಗಡಿ : ಸರ್ಕಾರಿ ಬಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದ ಸಹೋದರಿಯರಿಬ್ಬರು
ರಸ್ತೆ ತಿರುವಿನಲ್ಲಿ ಏಕಾಏಕಿ ಬಸ್ಸಿನ ಬಾಗಿಲು ತೆರೆದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಕಳಿಯ ಗ್ರಾಮದ ರೇಷ್ಮೆರೋಡ್ ಎಂ ಆರ್ ಪಿ ಎಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದ ಸಹೋದರಿಯರು ರೇಷ್ಮೆ ರೋಡ್ ಎಂಬಲ್ಲಿನ ರಸ್ತೆ ತಿರುವಿನಲ್ಲಿ ದಿಢೀರನೆ ಬಸ್ಸಿನ ಬಾಗಿಲು ತೆರೆಯಲ್ಪಟ್ಟು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.

ಸಂಚರಿಸುತ್ತಿದ್ದ ಬಸ್ಸಿನಿಂದ ಕೆಳಗೆ ಎಸೆಯಲ್ಪಟ್ಟ ಸಹೋದರಿಯರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯರು ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಸಹೋದರಿಯರ ಪೈಕಿ ಒಬ್ಬಾಕೆ ಎಸ್ ಎಸ್ ಎಲ್.ಸಿ ಪರೀಕ್ಷೆಗೆ ತೆರಳುತ್ತಿದ್ದು ಮತ್ತೊಬ್ಬಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿಗಳ ಪುತ್ರಿಯರು ಗಾಯಾಳುಗಳೆಂದು ತಿಳಿದುಬಂದಿದೆ. ಗಾಯಾಳು ಸಹೋದರಿಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Continue Reading

accident

ಟ್ಯಾಬ್ಲೆಟ್ ಆರಿಫ್ ಹತ್ಯೆ ಪ್ರಕರಣ: ಸಿಸಿಬಿಗೆ ತನಿಖೆ ಹಸ್ತಾಂತರ; ಆರು ಮಂದಿ ಹಂತಕರ ಗುರುತು ಪತ್ತೆ

Published

on

ಮಂಗಳೂರು: ತೊಕ್ಕೊಟ್ಟು ಫ್ಲೈಓವರ್ ನಲ್ಲಿ ನಡೆದ ರೌಡಿಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರು ಜನ ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಪ್ರಕರಣವನ್ನು ಎಸಿಪಿ ಮತ್ತು ಸಿಸಿಬಿ ತಂಡಕ್ಕೆ ವರ್ಗಾಯಿಸಲಾಗಿದೆ.
ಕೊಲೆ ಪಾತಕಿಗಳ ನಿರಂತರ ಸಂಚಾರದಿಂದಾಗಿ ತಕ್ಷಣವೇ ಬಂಧಿಸಲು ಪೊಲೀಸ್ ತಂಡಕ್ಕೆ ಸವಾಲುಗಳು ಎದುರಾಗಿದ್ದರೂ ಪಾಪಿಗಳ ಚಲನವಲನದ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದ ಮತ್ತು ಪಾಪಿಗಳಿಗೆ ಪರಾರಿಯಾಗಲು ಸಹಕರಿಸಿ ಆಶ್ರಯ ನೀಡಿದ ಖದೀಮರಿಗೂ ಕಾನೂನಿನ ಉರುಳು ಬಿಗಿಯಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆಯಲ್ಲಿ ಶಂಕಿತರ ಕೈವಾಡ ಸ್ಪಷ್ಟವಾದಲ್ಲಿ ಅಂತಹವರನ್ನು ಕೂಡಾ ಬಂಧಿಸಲಾಗುವುದು ಎಂದು ಕಮಿಷನರ್ ಸ್ಪಷ್ಟವಾಗಿ ಹೇಳಿದ್ದಾರೆ. ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವವರು ಭಾರತೀಯ ನ್ಯಾಯ ಸಂಹಿತೆಯ(BNS)ಕಲಂ 249(a)ಅಡಿಯಲ್ಲಿ (ಅಪರಾಧಿಯನ್ನು ಆಶ್ರಯಿಸುವುದು)ಶಿಕ್ಷೆಗೆ ಒಳಪಟ್ಟವರಾಗುತ್ತಾರೆ ಎಂಬುದನ್ನು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರು ಪುನರುಚ್ಚರಿಸಿದ್ದಾರೆ. ಯಾವುದೇ ಮುಲಾಜಿಲ್ಲದೇ ಈ ನಿಯಮವನ್ನು ಹಿಂದಿನ ಪ್ರಕರಣಗಳಂತೆಯೇ ಜಾರಿಗೆ ತರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಉಳ್ಳಾಲ ಬಳಿಯ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಶುಕ್ರವಾರ ಮುಂಜಾನೆ ನಡೆದ ರೌಡಿಶೀಟರ್ ಆರಿಫ್ ಅಲಿಯಾಸ್ ‘ಟ್ಯಾಬ್ಲೆಟ್ ಆರಿಫ್’ (46) ಎಂಬಾತನ ಭೀಕರ ಹತ್ಯೆ ಪ್ರಕರಣವು ಕರಾವಳಿಯಲ್ಲಿ ಮತ್ತೆ ಗ್ಯಾಂಗ್‌ವಾರ್ ಭೀತಿಯನ್ನು ಹುಟ್ಟುಹಾಕಿದೆ. ಈ ಹತ್ಯೆಯ ಹಿಂದೆ ಹಳೆಯ ಸೇಡಿನ ಸಂಚು ಇರುವ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಹತ್ಯೆಯ ಹಿನ್ನೆಲೆ ಮತ್ತು ಸೇಡಿನ ಆಯಾಮ:
ಪೊಲೀಸ್ ಮೂಲಗಳ ಪ್ರಕಾರ, ಕಳೆದ ವರ್ಷ ನಡೆದಿದ್ದ ಮತ್ತೊಬ್ಬ ರೌಡಿಶೀಟರ್ ‘ಟೋಪಿ ನೌಫಾಲ್’ ಎಂಬಾತನ ಹತ್ಯೆಯ ಘಟನೆಯನ್ನು ಆರಿಫ್ ಮತ್ತು ಆತನ ತಂಡ ಸಂಭ್ರಮಿಸಿತ್ತು ಎಂದು ಹೇಳಲಾಗಿದೆ. ಈ ಸಂಭ್ರಮಾಚರಣೆಯೇ ಈಗ ಆರಿಫ್ ಪ್ರಾಣಕ್ಕೆ ಮುಳುವಾಗಿದೆ ಎನ್ನಲಾಗುತ್ತಿದೆ. ಈದ್ ಹಬ್ಬದ ದಿನದಂದೇ ಗೆಳೆಯನ ಗೋರಿಯ ಮುಂದೆ ನಿಂತು ಸೇಡು ತೀರಿಸಿಕೊಳ್ಳುವ ಶಪಥ ಮಾಡಲಾಗಿತ್ತು ಎಂಬ ಗಂಭೀರ ಮಾಹಿತಿ ತನಿಖೆಯ ವೇಳೆ ಹೊರಬಂದಿದೆ.

ಘಟನೆ ನಡೆದದ್ದು ಹೇಗೆ?
ಶುಕ್ರವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಆರಿಫ್ ತನ್ನ ದ್ವಿಚಕ್ರ ವಾಹನದಲ್ಲಿ ಧಕ್ಕೆಯ ಮೀನು ಮಾರುಕಟ್ಟೆಗೆ ತೆರಳುತ್ತಿದ್ದಾಗ, ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿಗಳ ತಂಡ ತೊಕ್ಕೊಟ್ಟು ಫ್ಲೈಓವರ್ ಮೇಲೆ ಆತನ ಗಾಡಿಗೆ ಡಿಕ್ಕಿ ಹೊಡೆದಿದೆ. ಆರಿಫ್ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ತನಿಖೆ ಚುರುಕು:
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿದೆ. ಸಿಸಿಬಿ ಪೊಲೀಸರು ಈಗಾಗಲೇ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ಬಳಸಲಾದ ಕಾರನ್ನು ಬಂಟ್ವಾಳದ ಬುಡೋಳಿ ಬಳಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಈ ಹತ್ಯೆಯು ಮಂಗಳೂರು ನಗರದಲ್ಲಿ ಮತ್ತೆ ಗ್ಯಾಂಗ್‌ಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Continue Reading

accident

ರೌಡಿ ಶೀಟರ್ ಆರಿಫ್ ಹಂತಕರ ಬೆನ್ನಟ್ಟಿದ ಪೊಲೀಸರು! ರಕ್ತಸಿಕ್ತ ಕಾರು ವಶಕ್ಕೆ

Published

on

ರೌಡಿ ಶೀಟರ್‌ ಆರೀಫ್‌ ಹತ್ಯೆಯ ಹಂತಕರ ಕಾರನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ವಶಕ್ಕೆ ಪಡೆಯುವ ಮೂಲಕ ಹಂತಕರ ಜಾಡನ್ನು ಪತ್ತೆಹಚ್ಚಿದ್ದಾರೆ.

ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲೆ ಇಂದು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಆರಿಫ್ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು, ಹಂತಕರ ಕುರಿತು ಮಹತ್ವದ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾಗುವ ಮುನ್ನವೇ ಸಂಚು ರೂಪಿಸಿದ್ದ ಹಂತಕರು, ಆರಿಫ್‌ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಬಿಳಿ ಬಣ್ಣದ ಇನ್ನೋವಾ ಕಾರಿನಲ್ಲಿ (ಕೆಎಲ್‌86ಬಿ 6645 ) ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಅತಿ ವೇಗವಾಗಿ ಪರಾರಿಯಾಗಿದ್ದರು.

ವಿಟ್ಲದಲ್ಲಿ ಹಂತಕರ ಕಾರು ಪತ್ತೆ
ಹಂತಕರ ಬೆನ್ನಟ್ಟಿದ ಪೊಲೀಸರಿಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಹಂತಕರು ಬಳಸಿದ್ದ ಇನ್ನೋವಾ ಕಾರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಆಟೋ ರಿಕ್ಷಾವೊಂದರಲ್ಲಿ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆಟೋದಲ್ಲಿ ಒಟ್ಟು ಆರು ಜನ ಹಂತಕರು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ವಿಟ್ಲ ಮತ್ತು ಮಂಗಳೂರು ಪೊಲೀಸರ ಜಂಟಿ ತಂಡಗಳು ಈಗ ಸಂಭವನೀಯ ಅಡಗುದಾಣಗಳ ಮೇಲೆ ನಿಗಾ ಇಟ್ಟಿವೆ. ಹಂತಕರು ಯಾವ ದಿಕ್ಕಿನತ್ತ ಸಾಗಿದ್ದಾರೆ ಎಂಬ ಬಗ್ಗೆ ಸಿಸಿಟಿವಿ ಹಾಗೂ ಸ್ಥಳೀಯ ಆಟೋ ಚಾಲಕರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸ್ ಇಲಾಖೆ ವ್ಯಕ್ತಪಡಿಸಿದೆ.

ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಹತ್ಯೆ ಸುದ್ದಿ ಬರುತ್ತಿದ್ದಂತೆ ಜಿಲ್ಲೆಯ ಪೊಲೀಸರು ಎಚ್ಚೆತ್ತುಕೊಂಡು ಎಲ್ಲಾ ಕಡೆ ಹದ್ದಿನ ಕಣ್ಣು ಇಟ್ಟಿದ್ದರು. ಇದೇ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ಮಾಣಿ-ಉಪ್ಪಿನಂಗಡಿ ರಸ್ತೆಯ ಬುಡೋಳಿ ಎಂಬಲ್ಲಿ ಮುಂಜಾನೆ ಹೊತ್ತು ಇನ್ನೋವಾ ಕಾರಿನಲ್ಲಿ ಬಂದ ಆರು ಜನ ಸ್ಥಳೀಯ ಆಟೋ ಚಾಲಕನ ಎಬ್ಬಿಸಿ ಕಾರು ಕೆಟ್ಟು ಹೋಗಿದೆ ಎಂಬ ಕಾರಣ ನೀಡಿ ಆಟೋದಲ್ಲಿ ಬಿಡುವಂತೆ ಹೇಳಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಕಾರು ನಿಂತಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ತನ್ನ ತಂಡದೊಂದಿಗೆ ತೆರಳಿ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೀಗ ಸ್ಥಳಕ್ಕೆ ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ‌

Continue Reading

Trending

Copyright © 2025 Deevatige