Connect with us

drugs

ಭಾರತಕ್ಕೂ ಎಂಟ್ರಿ ಕೊಟ್ಟಿತೇ ‘ಜಾಂಬಿ ಡ್ರಗ್’? ಚಂಡೀಗಢದಲ್ಲಿ ಡೆಲಿವರಿ ಬಾಯ್ ವಿಲಕ್ಷಣ ವರ್ತನೆ; ವಿಡಿಯೋ ವೈರಲ್!

Published

on

ಅಮೆರಿಕದಂತಹ ದೇಶಗಳನ್ನು ನಡುಗಿಸಿರುವ ಭೀಕರ ‘ಜಾಂಬಿ ಡ್ರಗ್’ (Zombie Drug) ಈಗ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇದಕ್ಕೆ ಪೂರಕವೆಂಬಂತೆ ಚಂಡೀಗಢದಲ್ಲಿ ನಡೆದ ವಿಲಕ್ಷಣ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಚಂಡೀಗಢದ ಸೆಕ್ಟರ್ 33B ವಸತಿ ಪ್ರದೇಶದಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಬಾಯ್ ಒಬ್ಬರು ಸುಮಾರು 2 ರಿಂದ 2.5 ಗಂಟೆಗಳ ಕಾಲ ರಸ್ತೆಯಲ್ಲೇ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿದ್ದ ಘಟನೆ ನಡೆದಿದೆ. ಬೆನ್ನಿನ ಮೇಲೆ ಡೆಲಿವರಿ ಬ್ಯಾಗ್ ಹೊತ್ತು, ಬಾಯಲ್ಲಿ ಬೀಡಿ ಇಟ್ಟುಕೊಂಡಿದ್ದ ಈ ಯುವಕ, ಸುತ್ತಮುತ್ತಲಿನ ಯಾವುದೇ ಅರಿವಿಲ್ಲದೆ ಕಲ್ಲಿನಂತೆ ಜಡವಾಗಿ ನಿಂತಿದ್ದನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅನೇಕ ಬಳಕೆದಾರರು ಇದನ್ನು ಅಮೆರಿಕದಲ್ಲಿ ಜನಜೀವನವನ್ನು ನಾಶಪಡಿಸುತ್ತಿರುವ ಫೆಂಟನಿಲ್ (Fentanyl) ಅಥವಾ ಜಾಂಬಿ ಡ್ರಗ್‌ನ ಪರಿಣಾಮ ಎಂದು ಬಣ್ಣಿಸಿದ್ದಾರೆ. “ಭಾರತಕ್ಕೂ ಈ ಮಾರಕ ಡ್ರಗ್ ಎಂಟ್ರಿ ಕೊಟ್ಟಿದೆಯೇ? ಇದು ನಿಜಕ್ಕೂ ಅಪಾಯಕಾರಿ ಮುನ್ಸೂಚನೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯುವಕನನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಏನಿದು ‘ಜಾಂಬಿ ಡ್ರಗ್’?
ಸಾಮಾನ್ಯವಾಗಿ ಪ್ರಾಣಿಗಳಿಗೆ ನೋವು ನಿವಾರಕವಾಗಿ ಬಳಸುವ ಕ್ಸೈಲಜಿನ್ (Xylazine) ಎಂಬ ಟ್ರ್ಯಾಂಕ್ವಿಲೈಜರ್ ಅನ್ನು ‘ಜಾಂಬಿ ಡ್ರಗ್’ ಎಂದು ಕರೆಯಲಾಗುತ್ತದೆ. ಇದನ್ನು ಫೆಂಟನಿಲ್, ಮಾರ್ಫಿನ್ ಅಥವಾ ಹೆರಾಯಿನ್‌ನಂತಹ ಮಾದಕ ವಸ್ತುಗಳೊಂದಿಗೆ ಬೆರೆಸಿ ಸೇವಿಸಿದಾಗ ಮನುಷ್ಯರು ತಮ್ಮ ಪ್ರಜ್ಞೆ ಕಳೆದುಕೊಂಡು, ದೇಹದ ಮೇಲೆ ಹತೋಟಿಯಿಲ್ಲದೆ ವಿಚಿತ್ರವಾಗಿ ವರ್ತಿಸುತ್ತಾರೆ. ಅಮೆರಿಕದಲ್ಲಿ ಈ ಡ್ರಗ್‌ನಿಂದಾಗಿ ಸಾವಿರಾರು ಯುವಕರು ಬೀದಿಗಳಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ವರದಿಯಾಗಿದೆ. ಚಂಡೀಗಢದ ಈ ಘಟನೆ ಮಾದಕ ವ್ಯಸನದ ಪರಿಣಾಮವೋ ಅಥವಾ ಆರೋಗ್ಯ ಸಮಸ್ಯೆಯೋ ಎಂಬುದು ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿದುಬರಬೇಕಿದೆ. ಆದರೆ, ಈ ವಿಡಿಯೋ ಮಾತ್ರ ಭಾರತೀಯರಲ್ಲಿ ಹೊಸ ಆತಂಕವನ್ನಂತೂ ಸೃಷ್ಟಿಸಿದೆ.

Continue Reading
Advertisement

crime

ಎಂಡಿಎಂಎ ಮಾರಾಟ ಜಾಲ ಪತ್ತೆ; ಸಿಸಿಬಿ ಪೊಲೀಸರಿಂದ ಮೂವರ ಬಂಧನ

Published

on

ಮಂಗಳೂರು: ನಗರದ ಪಂಪ್‌ವೆಲ್ ಹಾಗೂ ಎಕ್ಕೂರು ಪರಿಸರದಲ್ಲಿ ಆಟೋ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 22, 2026 ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿಗಳಾದ ಹೈದರ್ @ ಹೈದರ್ ಆಲಿ (53), ಮೊಹಮ್ಮದ್ ಸಜಾದ್ (29) ಹಾಗೂ ಉಡುಪಿ ಜಿಲ್ಲೆಯ ಶಿರ್ವ ಮೂಲದ, ಪ್ರಸ್ತುತ ಪಂಪ್‌ವೆಲ್ ನಿವಾಸಿ ಜೈಸನ್ ಮೆನೆಜಸ್ (26) ಎಂದು ಗುರುತಿಸಲಾಗಿದೆ. ಬಂಧಿತರಿಂದ 2,50,000 ರೂಪಾಯಿ ಮೌಲ್ಯದ 26 ಗ್ರಾಂ ಎಂಡಿಎಂಎ, 37,000 ರೂಪಾಯಿ ನಗದು, 5 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕಮಾಪನ ಯಂತ್ರ ಹಾಗೂ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 4,37,500 ರೂಪಾಯಿ ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಪೈಕಿ ಹೈದರ್ ಅಲಿಯಾಸ್ ಹೈದರ್ ಆಲಿ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು 2024ರಲ್ಲಿ ಮಾದಕ ವಸ್ತು ಮಾರಾಟ ಮಾಡಿದ ಪ್ರಕರಣಗಳಿದ್ದವು. ಅಲ್ಲದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಿದ ಪ್ರಕರಣವೂ ದಾಖಲಾಗಿತ್ತು. ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ. ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

Bantawala

ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಆಟೋ ಚಾಲಕನ ರಂಪಾಟ; ಸಿಬ್ಬಂದಿ ಮೇಲೆ ಹಲ್ಲೆ, ಸಾವಿರಾರು ಮೌಲ್ಯದ ಸೊತ್ತು ಹಾನಿ

Published

on

ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಎಂಬಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಗೆ ನುಗ್ಗಿದ ಅಟೊರಿಕ್ಷಾ ಚಾಲಕ ಸಜಿಪಮೂಡಾ, ಬಂಟ್ವಾಳ ನಿವಾಸಿ ಅಫ್ರೀಝ್ (28) ಎಂಬಾತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕಚೇರಿಯ ಸೊತ್ತುಗಳನ್ನು ಹಾನಿಗೊಳಿಸಿರುವ ಘಟನೆ ಮಾರ್ಚ್ 20ರಂದು ಸಂಜೆ ನಡೆದಿದೆ.



ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಕುನಲ್ ಭುಹ್ನಿಯಾ (27) ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶುಕ್ರವಾರ ಸಂಜೆ ಕೆಎ 19 ಎಸಿ 2102 ನೊಂದಾವಣಿ ಸಂಖ್ಯೆಯ ಆಟೋರಿಕ್ಷಾವನ್ನು ಚಲಾಯಿಸಿಕೊಂಡು ಬಂದ ಚಾಲಕನು, ಏಜೆನ್ಸಿಯ ಒಳಗೆ ಪ್ರವೇಶಿಸಿ ಕಚೇರಿ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಅಶ್ವಿನ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿ, ನಂತರ ಕಚೇರಿಯ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳನ್ನು ಜಖಂಗೊಳಿಸಿದ್ದಾನೆ. ಈ ಕೃತ್ಯದಿಂದ ಸುಮಾರು 48,000/- ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆಟೋ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ವಿವಿಧ ಕಲಂಗಳು ಸೇರಿದಂತೆ ಕಲಂ 115(2): ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು. ಕಲಂ 287: ಸಾರ್ವಜನಿಕ ಸುರಕ್ಷತೆಗೆ ಧಕ್ಕೆ. ಕಲಂ 324(4): ಆಸ್ತಿಪಾಸ್ತಿಗೆ ಹಾನಿ ಮಾಡುವುದು. ಕಲಂ 351(2) & 352: ಅಪರಾಧಿಕ ಬೆದರಿಕೆ ಮತ್ತು ಹಲ್ಲೆ. ಸೆಕ್ಷನ್‌ಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ:
ಪ್ರಸ್ತುತ ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಆಟೋ ಚಾಲಕ ಏಜೆನ್ಸಿಯ ಆವರಣದಲ್ಲಿ ರಂಪಾಟ ಮಾಡುತ್ತಿರುವ ವೀಡಿಯೊ ಈಗ ಲಭ್ಯವಾಗಿದ್ದು, ತನಿಖೆಗೆ ಪೂರಕವಾಗಿದೆ.

Continue Reading

crime

ಉಳ್ಳಾಲ: ಗಾಂಜಾ ಪೆಡ್ಲಿಂಗ್ ಜಾಲದ ಮೇಲೆ ಪೊಲೀಸರ ದಾಳಿ; ಇಬ್ಬರ ಬಂಧನ

Published

on

ಮಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 12/03/2026 ರಂದು ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಗೌಂಡ್ ಪ್ರದೇಶದಲ್ಲಿ ಕೇರಳ ಮೂಲದ ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಉಳ್ಳಾಲ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಡಿ. ಮತ್ತು ಅವರ ತಂಡವು ಪಂಚರೊಂದಿಗೆ ಸ್ಥಳದ ಮೇಲೆ ದಾಳಿ ನಡೆಸಿತು.
ಶೇಖ್ ಅರ್ಬಾಜ್ (29): ಅಬ್ದುಲ್ ಅವರ ಪುತ್ರ, ಉಪ್ಪಳ, ಕಾಸರಗೋಡು ನಿವಾಸಿ.ರಶೀದ್ ಆಲ್ವಿನ್ (27): ಸಾದಿಕ್ ಆಲ್ವಿನ್ ಅವರ ಪುತ್ರ, ಮಣಿಮುಂಡ, ಉಪ್ಪಳ ನಿವಾಸಿ ಬಂಧಿತ ಆರೋಪಿಗಳು. ದಾಳಿಯ ಸಮಯದಲ್ಲಿ ಮತ್ತೊಬ್ಬ ಆರೋಪಿ ಅಲ್ತಾಫ್ ಎಂಬಾತನು ತನ್ನ ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಗಳಿಂದ 51,500/- ರೂಪಾಯಿ ಮೌಲ್ಯದ 1 ಕೆಜಿ 110 ಗ್ರಾಂ ಗಾಂಜಾ. ಒಂದು ರೆಡ್‌ಮಿ ಹಾಗೂ ಒಂದು ವಿವೋ ಕಂಪನಿಯ ಮೊಬೈಲ್ ಫೋನ್ (ಒಟ್ಟು ಮೌಲ್ಯ ಅಂದಾಜು 14,000/- ರೂ.).ನಗದು: 520/- ರೂಪಾಯಿಗಳು. ಮತ್ತು ಗಾಂಜಾ ಪ್ಯಾಕ್ ಮಾಡಲು ಬಳಸುತ್ತಿದ್ದ 20 ಜಿಪ್ ಲಾಕ್ ಕವರ್‌ಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2026 ರಂತೆ ಎನ್‌ಡಿಪಿಎಸ್ ಕಾಯ್ದೆ 1985 ರ ಕಲಂ 8(c), 20(b) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Trending

Copyright © 2025 Deevatige