Connect with us

award

ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಮಹಿಮಾ ಆರ್. ಕೆ.ಗೆ ರಾಷ್ಟ್ರಮಟ್ಟದ ಪ್ರಥಮ ಬಹುಮಾನ

Published

on

ಧಾರವಾಡ: ಇಲ್ಲಿನ ಸೆಂಟರ್ ಫಾರ್ ಮಲ್ಟಿ-ಡಿಸಿಪ್ಲಿನರಿ ಡೆವಲಪ್ಮೆಂಟ್ ರಿಸರ್ಚ್ (CMDR) ಸಂಸ್ಥೆಯು ಭಾರತ ಮತ್ತು ವಿದೇಶಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಇಂದಿನ ಬದುಕಿಗೆ ಭಾರತೀಯ ಜ್ಞಾನ ಪರಂಪರೆ’ (IKS 2.0) ಪ್ರಬಂಧ ಸ್ಪರ್ಧೆಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ ಮಹಿಮಾ ಆರ್. ಕೆ. ಪ್ರಥಮ ಸ್ಥಾನ ಗಳಿಸಿದ್ದಾರೆ.

‘ಭಾರತೀಯ ಜ್ಞಾನ ಪರಂಪರೆ ಎಂಬ ಬೆಳಕ ದೀವಟಿಗೆ: ಅವಲೋಕನ’ ಎಂಬ ಶೀರ್ಷಿಕೆಯಡಿ ಮಹಿಮಾ ಅವರು ಮಂಡಿಸಿದ ಪ್ರಬಂಧವು ಒಟ್ಟು 71.33 ಅಂಕಗಳನ್ನು ಪಡೆಯುವ ಮೂಲಕ 10,000 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಏಕೈಕ ಕನ್ನಡ ಪ್ರಬಂಧ ಎಂಬ ಹೆಗ್ಗಳಿಕೆಗೆ ಈ ಬರಹ ಪಾತ್ರವಾಗಿರುವುದು ವಿಶೇಷ. ಭಾರತೀಯ ಪರಂಪರೆಯ ಜ್ಞಾನವು ಇಂದಿನ ಆಧುನಿಕ ಬದುಕಿಗೆ ಹೇಗೆ ದೀವಟಿಗೆಯಂತೆ ದಾರಿದೀಪವಾಗಿದೆ ಎಂಬುದನ್ನು ಇವರು ತಮ್ಮ ಪ್ರಬಂಧದಲ್ಲಿ ಸವಿವರವಾಗಿ ವಿಶ್ಲೇಷಿಸಿದ್ದಾರೆ. ಭಾರತೀಯ ಜ್ಞಾನ ಪರಂಪರೆಯ ಮಹತ್ವವನ್ನು ಇಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ವಿಶ್ಲೇಷಿಸಿದ ಇವರ ಬರಹವು ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ವಿಟ್ಲದ ರವಿಶಂಕರ ಕುಳಮರ್ವ ಹಾಗೂ ಇತ್ತಿಚೆಗೆ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪಡೆದ ಡಾ. ಮೈತ್ರಿ ಭಟ್ ದಂಪತಿಯ ಪುತ್ರಿಯಾಗಿರುವ ಮಹಿಮಾ, ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

award

ಸಾಧಕ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ: ಮಂಗಳೂರು ಕಮಿಷನರೇಟ್‌ನಿಂದ ಪ್ರಶಂಸನಾ ಪತ್ರ, ನಗದು ಬಹುಮಾನ ವಿತರಣೆ

Published

on

ಮಂಗಳೂರು: ಕಳೆದ ಆರು ತಿಂಗಳ ಅವಧಿಯಲ್ಲಿ ಅಪರಾಧ ಪತ್ತೆ, ಸೈಬರ್ ಕ್ರೈಂ, ಮಾದಕ ದ್ರವ್ಯ ನಿಗ್ರಹ (NDPS) ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 29 ಪೊಲೀಸ್ ಅಧಿಕಾರಿಗಳು ಹಾಗೂ 118 ಸಿಬ್ಬಂದಿಗೆ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗಿದೆ.

ದಿನಾಂಕ 20-07-2026 ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಮಾನ್ಯ ಪೊಲೀಸ್ ಆಯುಕ್ತರು ಕರ್ತವ್ಯದಕ್ಷತೆ ಮೆರೆದ ಸಿಬ್ಬಂದಿಗೆ ಈ ಗೌರವ ಸಮರ್ಪಿಸಿದರು.

ಪೊಲೀಸ್ ಇಲಾಖೆಯ ಪ್ರಮುಖ ಸಾಧನೆಗಳು:

ದೀರ್ಘಕಾಲದ ಪ್ರಕರಣಗಳು (LPC) ಹಾಗೂ ವಾರಂಟ್ ಬಂಧನ: ಕಳೆದ 6 ತಿಂಗಳಲ್ಲಿ ವರ್ಷಗಳಿಂದ ತಲೆಮರೆಸಿಕೊಂಡಿದ್ದ 24 ದೀರ್ಘಕಾಲದ ಬಾಕಿ ಪ್ರಕರಣಗಳ (LPC) ಆರೋಪಿಗಳನ್ನು ಹಾಗೂ ಎನ್.ಬಿ.ಡಬ್ಲ್ಯು. (NBW) ವಾರಂಟ್ ಹೊಂದಿದ್ದ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.

₹1.20 ಕೋಟಿ ಮೌಲ್ಯದ ಸೊತ್ತು ವಶ: 2026ನೇ ಸಾಲಿನಲ್ಲಿ ದಾಖಲಾದ ಕಳವು ಪ್ರಕರಣಗಳಲ್ಲಿ 88 ಪ್ರಕರಣಗಳನ್ನು ಭೇದಿಸಲಾಗಿದ್ದು, ಒಟ್ಟು ₹1,20,00,000 (1 ಕೋಟಿ 20 ಲಕ್ಷ) ಮೌಲ್ಯದ ಕಳವಾದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ.

ಮಾದಕ ವಸ್ತು (Drugs) ಜಾಲದ ವಿರುದ್ಧ ಸಮರ:

ಮಾದಕ ವಸ್ತು ಮಾರಾಟ/ಸಾಗಾಟದ ವಿರುದ್ಧ 84 ಪ್ರಕರಣಗಳನ್ನು ದಾಖಲಿಸಿ, 142 ಪೆಡ್ಲರ್ಗಳನ್ನು ಬಂಧಿಸಲಾಗಿದೆ.

ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 346 ಪ್ರಕರಣಗಳನ್ನು ದಾಖಲಿಸಿ, 443 ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ.

ಸೈಬರ್ ಅಪರಾಧ ತಡೆ ಹಾಗೂ ಅಂತರರಾಷ್ಟ್ರೀಯ ಜಾಲ ಭೇದ:

ನಗರದಲ್ಲಿ ನಿರಂತರವಾಗಿ ನಡೆಸಿದ ಅರಿವು ಕಾರ್ಯಕ್ರಮಗಳಿಂದ ಸೈಬರ್ ವಂಚನೆ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ‘1930’ ಸಹಾಯವಾಣಿ ಮೂಲಕ ತ್ವರಿತವಾಗಿ ಸ್ಪಂದಿಸಿ ಸಾರ್ವಜನಿಕರ ಹಣ ಮರುಪಡೆಯಲು ಶ್ರಮಿಸಿದ ಸಿಬ್ಬಂದಿಯನ್ನು ಈ ವೇಳೆ ಗೌರವಿಸಲಾಯಿತು.

ಪ್ರಮುಖ ಸಾಧನೆ: ನೇಪಾಳದಿಂದ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ‘ಇನ್ವೆಸ್ಟ್ಮೆಂಟ್ ಫ್ರಾಡ್’ (Investment Fraud) ಜಾಲವನ್ನು ಭೇದಿಸಿ, ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ಕ್ರೈಂ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಮಂಗಳೂರು ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ.

ಸಾಮಾಜಿಕ ಜಾಲತಾಣ ನಿಗಾ ಮತ್ತು ಕಾನೂನು ಸುವ್ಯವಸ್ಥೆ:

ದ್ವೇಷ ಭಾಷಣಕ್ಕೆ ತಡೆ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ, ಅಪಪ್ರಚಾರ ಹಾಗೂ ದ್ವೇಷ ಭಾಷಣ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ನಗರದಲ್ಲಿ ಶಾಂತಿ ಕಾಯ್ದುಕೊಳ್ಳಲಾಗಿದೆ.

ನ್ಯಾಯಾಲಯದಲ್ಲಿ ಶಿಕ್ಷೆ ಹಾಗೂ ತುರ್ತು ಸೇವೆ: ತನಿಖೆಯನ್ನು ಗುಣಮಟ್ಟದ ರೀತಿಯಲ್ಲಿ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಅಧಿಕಾರಿಗಳು, ಬಂದೋಬಸ್ತ್ ಕರ್ತವ್ಯ ಸಫಲಗೊಳಿಸಿದವರು ಹಾಗೂ ‘112’ ತುರ್ತು ಸಹಾಯವಾಣಿ ಮತ್ತು ನಿಸ್ತಂತು (Wireless) ವಿಭಾಗದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದ ಸಿಬ್ಬಂದಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು

Continue Reading

award

ಆರೋಪಿಗಳ ಬೇಟೆಯಲ್ಲಿ ಸೈ: ವಿಟ್ಲ ಎಎಸ್‌ಐ ಜಯರಾಮ ಕೆ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯ ಪ್ರತಿಷ್ಠಿತ ಪ್ರಶಸ್ತಿ

Published

on

ವಿಟ್ಲ: 2025-26ನೇ ಸಾಲಿನ ಪ್ರತಿಷ್ಠಿತ ‘ಡಿಜಿ ಮತ್ತು ಐಜಿಪಿ ಕಮಾಂಡೇಷನ್ ಡಿಸ್ಕ್ ಪ್ರಶಸ್ತಿ’ಗೆ ರಾಜ್ಯದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯ್ಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂವರ ಪೈಕಿ ವಿಟ್ಲ ಪೊಲೀಸ್‌ ಠಾಣೆಯ ಹೆಮ್ಮೆಯ ಸಹಾಯಕ ಉಪನಿರೀಕ್ಷಕ (ಎ.ಎಸ್‌.ಐ) ಜಯರಾಮ ಕೆ ಅವರು ಈ ಉನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ದಕ್ಷತೆ ಹಾಗೂ ಜನಸ್ನೇಹಿ ಸೇವೆಗೆ ಸಿಕ್ಕ ಗೌರವ: ವಾರಂಟ್‌ ಹಾಗೂ ಎಲ್‌ಪಿಸಿ (LPC) ಪ್ರಕರಣಗಳಲ್ಲಿ ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ತಲೆಮರೆಸಿಕೊಂಡಿದ್ದ ಹಲವು ಪ್ರಮುಖ ಆರೋಪಿಗಳನ್ನು ಅತ್ಯಂತ ಚಾಣಾಕ್ಷತನದಿಂದ ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಜಯರಾಮ ಕೆ ಅವರು ಯಶಸ್ವಿಯಾಗಿದ್ದಾರೆ. ತಮ್ಮ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ದಕ್ಷತೆ ಹಾಗೂ ಜನಸ್ನೇಹಿ ಸೇವೆಯ ಮೂಲಕ ಪೊಲೀಸ್‌ ಇಲಾಖೆಯಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿರುವ ಇವರ ಅಪ್ರತಿಮ ಸಾಧನೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್‌ ಇಲಾಖೆಯು ಈ ಅತ್ಯುನ್ನತ ಗೌರವವನ್ನು ನೀಡಿ ಸನ್ಮಾನಿಸಲಿದೆ.

ಹಲವು ಠಾಣೆಗಳಲ್ಲಿ ಸೇವೆ, ಮೂರು ಬಾರಿ ಎಸ್‌ಪಿ ಪ್ರಶಸ್ತಿ: ಜಯರಾಮ ಕೆ ಅವರು ಈ ಹಿಂದೆಯೂ ವಾರಂಟ್ ವಿಶೇಷ ತನಿಖೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಂದ ಮೂರು ಬಾರಿ ವಿಶೇಷ ಪ್ರಶಂಸನಾ ಪತ್ರವನ್ನು ಪಡೆದುಕೊಂಡಿರುವುದು ಇವರ ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ಇಲಾಖೆಯ ವಿವಿಧ ವಿಭಾಗಗಳಲ್ಲಿ ಅಪಾರ ಅನುಭವ ಹೊಂದಿರುವ ಇವರು ಈ ಹಿಂದೆ ಉಪ್ಪಿನಂಗಡಿ, ಮಂಗಳೂರು ಸಂಚಾರ ಪೊಲೀಸ್, ಅಬಕಾರಿ, ವಿಶೇಷದಳ, ಬಂಟ್ವಾಳ ಗ್ರಾಮಾಂತರ, ಪುತ್ತೂರು ಹಾಗೂ ಸುಳ್ಯ ಠಾಣೆಗಳಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತಃ ಕುಳಗ್ರಾಮದ ಇಡ್ಕಿದು ನಿವಾಸಿಯಾಗಿರುವ ಜಯರಾಮ ಕೆ ಅವರ ಈ ಸಾಧನೆಗೆ ಇಲಾಖೆಯ ಉನ್ನತಾಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ಮತ್ತು ಅಭಿನಂದನೆಗಳ ಸುರಿಮಳೆಯಾಗುತ್ತಿದೆ.




Continue Reading

Article

ಪುತ್ತೂರು: ಅಪರೂಪದ ಶ್ವಾನ ಪ್ರೀತಿ; ನಾಪತ್ತೆಯಾದ ನೆಚ್ಚಿನ ನಾಯಿ ‘ಚಿನ್ನು’ ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಚೆಕ್ ಹಸ್ತಾಂತರಿಸಿದ ಮಾಲೀಕ

Published

on

ಪುತ್ತೂರು: ಮೂಕ ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಮಾನವೀಯತೆಗೆ ಸಾಕ್ಷಿಯಾಗುವಂತಹ ಅಪರೂಪದ ಹಾಗೂ ಆಶ್ಚರ್ಯಕರ ಘಟನೆಯೊಂದು ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ಎಂಬಲ್ಲಿ ನಡೆದಿದೆ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಸಾಕಿದ್ದ ವಿಶೇಷ ಶ್ವಾನವೊಂದು ನಾಪತ್ತೆಯಾದಾಗ, ಅದನ್ನು ಹುಡುಕಿಕೊಟ್ಟವರಿಗೆ ಮಾಲೀಕರು ಬರೋಬ್ಬರಿ 50,000 ರೂಪಾಯಿ ನಗದು ಬಹುಮಾನ ನೀಡುವ ಮೂಲಕ ತಮ್ಮ ಅನನ್ಯ ಶ್ವಾನ ಪ್ರೀತಿಯನ್ನು ಮೆರೆದಿದ್ದಾರೆ.

ಹಿನ್ನೆಲೆ: ಮನೆಯಲ್ಲೇ ಇವೆ 30 ನಾಯಿಗಳು! ಪೋಳ್ಯ ನಿವಾಸಿ ಗಣೇಶ್ ಕೇರ ಅವರು ಪ್ರಾಣಿ ಪ್ರೇಮಿಯಾಗಿದ್ದು, ತಮ್ಮ ಮನೆಯಲ್ಲಿ ಸುಮಾರು 30 ನಾಯಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ಇವರ ಸಾಕುಪ್ರಾಣಿಗಳ ಪೈಕಿ ‘ಚಿನ್ನು’ ಹೆಸರಿನ ದೇಶಿ ತಳಿಯ ನಾಯಿ ಅತ್ಯಂತ ವಿಶೇಷವಾಗಿತ್ತು. ಯಾಕಂದರೆ, ಈ ‘ಚಿನ್ನು’ ಫಿಟ್ಸ್ ಸಮಸ್ಯೆಯಿಂದಾಗಿ ತನ್ನ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿತ್ತು. ಇಂತಹ ವಿಶೇಷ ಕಾಳಜಿ ಬೇಕಾಗಿದ್ದ ನಾಯಿ ಸುಮಾರು ಮೂರು ವಾರಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು.

ಕಂಗಾಲಾಗಿದ್ದ ಮಾಲೀಕ; ಎಲ್ಲೆಡೆ ಬ್ಯಾನರ್, ಜಾಹೀರಾತು: ಮನೆಯ ಸದಸ್ಯನಂತಿದ್ದ, ಅದೂ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ‘ಚಿನ್ನು’ ಕಾಣೆಯಾದಾಗ ಗಣೇಶ್ ಕೆರೆ ಅವರು ತೀವ್ರ ಕಂಗಾಲಾಗಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಾಯಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅಷ್ಟೇ ಅಲ್ಲದೆ, ನಗರದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಈ ಕುರಿತು ಬ್ಯಾನರ್‌ಗಳನ್ನು ಕೂಡ ಅಳವಡಿಸಿ ಹುಡುಕಾಟ ನಡೆಸಿದ್ದರು.

ಹುಡುಕಿಕೊಟ್ಟ ಪುರಂದರ್: ಮಾತು ಉಳಿಸಿಕೊಂಡ ಗಣೇಶ್ ಕೇರ: ಗಣೇಶ್ ಅವರ ನಿರಂತರ ಪ್ರಯತ್ನ ಮತ್ತು ಪ್ರಾಣಿ ಪ್ರೇಮಕ್ಕೆ ಕೊನೆಗೂ ಫಲ ಸಿಕ್ಕಿದೆ. ಪೋಳ್ಯ ಪರಿಸರದವರೇ ಆದ ಪುರಂದರ್ ಎಂಬುವವರು ನಾಪತ್ತೆಯಾಗಿದ್ದ ಚಿನ್ನು ನಾಯಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ತಮ್ಮ ನೆಚ್ಚಿನ ಶ್ವಾನ ಮರಳಿ ಸಿಕ್ಕಿದ ತಕ್ಷಣ ಗಣೇಶ್ ಕೇರ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊಟ್ಟ ಮಾತಿನಂತೆ ತಕ್ಷಣವೇ ಅವರು ಪುರಂದರ್ ಅವರನ್ನು ತಮ್ಮ ಮನೆಗೆ ಕರೆಸಿ, ಎಲ್ಲರ ಸಮ್ಮುಖದಲ್ಲಿ 50,000 ರೂಪಾಯಿಗಳ ಚೆಕ್ ಅನ್ನು ವಿತರಿಸಿ ಕೃತಜ್ಞತೆ ಸಲ್ಲಿಸುವುದರೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಶ್ಲಾಘನೆ ವ್ಯಕ್ತಪಡಿಸಿದ ಸಾರ್ವಜನಿಕರು: ಪ್ರಸ್ತುತ ದಿನಗಳಲ್ಲಿ ಹಣಕ್ಕೋಸ್ಕರ ಪ್ರಾಣಿಗಳನ್ನು ಹಿಂಸಿಸುವ ಜನರ ಮಧ್ಯೆ, ಕಳೆದುಹೋದ ತನ್ನ ಸಾಕುಪ್ರಾಣಿಗಾಗಿ ಹಗಲಿರುಳು ಚಿಂತಿಸಿ, ಅದನ್ನು ಹುಡುಕಿಕೊಟ್ಟವರಿಗೆ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ನೀಡಿದ ಮಾಲೀಕರ ಶ್ವಾನ ಪ್ರೀತಿ ಮತ್ತು ಪ್ರಾಮಾಣಿಕತೆಗೆ ಕರಾವಳಿಯಾದ್ಯಂತ ಸಾರ್ವಜನಿಕರು ಹಾಗೂ ಪ್ರಾಣಿ ಪ್ರೇಮಿಗಳು ಭಾರಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಮೂಕ ಪ್ರಾಣಿಗಳ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧಕ್ಕೆ ಹಿಡಿದ ಕೈಗನ್ನಡಿಯಾಗಿದೆ.




Continue Reading

Trending

Copyright © 2025 Deevatige

error: Content is protected !!