Connect with us

Belthangady

ಸೌಜನ್ಯ ಕೊಲೆ ಪ್ರಕರಣ: ರಾಜ್ಯ ಸರ್ಕಾರ ಹಾಗೂ ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

Published

on

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ನೀಡಿದೆ. ಈ ಮೂಲಕ ಪ್ರಕರಣದಲ್ಲಿ ಮತ್ತೆ ನ್ಯಾಯದ ಭರವಸೆ ಚಿಗುರಿದೆ.

ದಶಕಕ್ಕೂ ಹೆಚ್ಚು ಕಾಲ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ತಿರುವು ಲಭಿಸಿದೆ. ಪ್ರಕರಣದ ಮರು ತನಿಖೆಗೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ವಿವರಣೆ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

ಹಿನ್ನೆಲೆ ಮತ್ತು ನ್ಯಾಯಾಲಯದ ನಡಾವಳಿ:
ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮರು ತನಿಖೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲರಾದ ಶೋಭಾ ಗುಪ್ತಾ ಅವರು ಪ್ರಕರಣದ ತನಿಖೆಯಲ್ಲಿ ನಡೆದಿರುವ ಲೋಪದೋಷಗಳನ್ನು ನ್ಯಾಯಾಧೀಶರ ಗಮನಕ್ಕೆ ತಂದರು.

ವಕೀಲರ ಪ್ರಮುಖ ವಾದಗಳು:
ಸ್ಥಳೀಯ ಪೊಲೀಸರು ಮತ್ತು ಸಿಬಿಐ ಎರಡೂ ಸಂಸ್ಥೆಗಳು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ವಿಫಲವಾಗಿವೆ. ಸೌಜನ್ಯ ಅವರ ಶವ ಸಿಕ್ಕ ಸ್ಥಳದಲ್ಲಿ ಲಭ್ಯವಿದ್ದ ಮಹತ್ವದ ಸಾಕ್ಷ್ಯಗಳನ್ನು ಆಧರಿಸಿ ವೈಜ್ಞಾನಿಕ ತನಿಖೆ ನಡೆಸುವಲ್ಲಿ ತನಿಖಾಧಿಕಾರಿಗಳು ಎಡವಿದ್ದಾರೆ.
ಪ್ರಕರಣದಲ್ಲಿ ಸ್ಥಳೀಯವಾಗಿ ಹಲವರ ಮೇಲೆ ಬಲವಾದ ಅನುಮಾನಗಳಿದ್ದರೂ, ಸಿಬಿಐ ಅವರನ್ನು ಸಮರ್ಪಕವಾಗಿ ವಿಚಾರಣೆಗೆ ಒಳಪಡಿಸಿಲ್ಲ. ಆದ್ದರಿಂದ ಸತ್ಯಾಸತ್ಯತೆ ಹೊರಬರಲು ಸ್ವತಂತ್ರ ಮರು ತನಿಖೆಯ ಅಗತ್ಯವಿದೆ ಎಂದು ವಕೀಲರು ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ನ ಆದೇಶ:
ಈ ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ವಿನೋದ್ ಚಂದ್ರನ್ ಅವರಿದ್ದ ದ್ವಿಸದಸ್ಯ ಪೀಠವು, ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ಪ್ರತಿವಾದಿಗಳಿಂದ ವರದಿ ಬಂದ ನಂತರವಷ್ಟೇ ಮರು ತನಿಖೆಯನ್ನು ಯಾರು ನಡೆಸಬೇಕು ಮತ್ತು ಅದರ ಸ್ವರೂಪ ಹೇಗಿರಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗಾಗಿ ರಾಜ್ಯ ಸರ್ಕಾರ ಈಗಾಗಲೇ ರಚಿಸಿರುವ ಎಸ್‌ಐಟಿ (SIT) ಬಗ್ಗೆಯೂ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದು, ಅದರ ಮೂಲಕವೇ ಹೆಚ್ಚಿನ ತನಿಖೆ ನಡೆಸಲು ಅವಕಾಶವಿದೆ ಎಂಬ ಅಂಶವನ್ನು ಪ್ರಸ್ತಾಪಿಸಿದ್ದಾರೆ.

ಪ್ರಕರಣದ ಮರುನೋಟ:
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೂ ಸೌಜನ್ಯ ಕುಟುಂಬ ಮತ್ತು ಮಹಿಳಾಪರ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಕಳೆದೊಂದು ವರ್ಷದಿಂದ ಮಹಿಳಾಪರ ಹೋರಾಟಗಾರರು, ಲೇಖಕಿಯರು ‘ಕೊಂದವರು ಯಾರು?’ ಎಂಬ ಆಂದೋಲನ ಕಟ್ಟಿಕೊಂಡು ಸೌಜನ್ಯ ಮಾತ್ರವಲ್ಲದೆ ಧರ್ಮಸ್ಥಳ ಆಸುಪಾಸಿನಲ್ಲಿ ನಡೆದ ಮಹಿಳೆಯರ ಅಸಹಜ ಸಾವಿನ ತನಿಖೆಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.ಈ ಘಟನೆ ಇಡೀ ರಾಜ್ಯಾದ್ಯಂತ ಜನಕ್ರೋಶಕ್ಕೆ ಕಾರಣವಾಗಿದೆ.

Continue Reading
Advertisement

Belthangady

ಯಕ್ಷರಂಗದಲ್ಲಿ ‘ಕೃಷ್ಣ’ನ ಕ್ರೋಧ: ಪ್ರೇಕ್ಷಕರ ಶಿಳ್ಳೆಗೆ ಕೆರಳಿದ ಉಜಿರೆ ಅಶೋಕ ಭಟ್; ವೇದಿಕೆಯಲ್ಲೇ ದರ್ಪದ ಮಾತುಗಳ ಸುರಿಮಳೆ!

Published

on

ಯಕ್ಷಗಾನ ಎನ್ನುವುದು ಕೇವಲ ಮನರಂಜನೆಯಲ್ಲ, ಅದೊಂದು ಶಿಸ್ತಿನ ಕಲೆ. ಆದರೆ ಇತ್ತೀಚೆಗೆ ವೇದಿಕೆಯ ಮೇಲೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ನಡೆಯುತ್ತಿರುವ ಸಂಘರ್ಷಗಳು ಕಲಾಭಿಮಾನಿಗಳಲ್ಲಿ ಬೇಸರ ಮೂಡಿಸಿವೆ. ಭಾಗವತರ ಆಲಾಪನೆಗೆ ಶಿಳ್ಳೆ ಹೊಡೆದರೆಂದು ಕಲಾವಿದ ಉಜಿರೆ ಅಶೋಕ ಭಟ್ ಅವರು ಕೃಷ್ಣನ ವೇಷದಲ್ಲಿಯೇ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವೇದಿಕೆಯಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಡೆದದ್ದೇನು?
ಭಾಗವತರ ಪದ್ಯಕ್ಕೆ ಕೃಷ್ಣನ ವೇಷಧಾರಿ ಉಜಿರೆ ಅಶೋಕ ಭಟ್ ಅವರು ಅರ್ಥ ಹೇಳಲು ಸಿದ್ಧರಾಗುತ್ತಿದ್ದಂತೆ, ಭಾಗವತರ ಆಲಾಪನೆಗೆ ಪ್ರೇಕ್ಷಕರ ಸಾಲಿನಿಂದ ಕೇಳಿಬಂದ ಜೋರಾದ ಶಿಳ್ಳೆ ಮತ್ತು ಶಬ್ದಗಳಿಂದ ವಿಚಲಿತರಾಗಿದ್ದಾರೆ.. ಇದರಿಂದ ತೀವ್ರ ಅಸಮಾಧಾನಗೊಂಡ ಕಲಾವಿದರು, ಕಥೆಯ ಪ್ರಸಂಗವನ್ನು ಬದಿಗಿಟ್ಟು ನೇರವಾಗಿ ಪ್ರೇಕ್ಷಕರತ್ತ ತಿರುಗಿದರು. “ಇದು ಶಿಳ್ಳೆ ಹೊಡೆಯುವ ಜಾಗವಲ್ಲ, ಯಕ್ಷಗಾನದ ಗಂಭೀರತೆ ಅರ್ಥ ಮಾಡಿಕೊಳ್ಳಿ” ಎಂಬ ಖಡಕ್ ಮಾತುಗಳೊಂದಿಗೆ ಶಿಸ್ತಿನ ಪಾಠ ಆರಂಭಿಸಿದ್ದಾರೆ- “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ದೋಂಬರಾಟವೇ? ಇದು ಯಕ್ಷಗಾನವೇ? ಕೋಳಿ ಕಟ್ಟವೇ? ಕಂಬಳವೇ? ಎಂದು ವೇದಿಕೆಯಲ್ಲೇ ಪ್ರಶ್ನೆ ಮಾಡಿದ್ದಾರೆ. ಶಿಳ್ಳೆ ಹಾಕಿದವರು ಯಾರು? ಹುಚ್ಚರನ್ನು ಬೆಳೆಸಬೇಡಿ, ಕಲಾವಿದರನ್ನು ಬೆಳೆಸಿ, ಆಗದೆ ಇದ್ದರೆ ಬನ್ಸ್‌ ತಿಂದು ಹೋಗಿ, ಭಾಗವತರ ಕಂಠ ಹಾಳು ಮಾಡುತ್ತೀರಾ ? ನಾವು ಯಕ್ಷಗಾನ ಮಾಡಬೇಕೋ? ಎಂದು ಆಕ್ರೋಶಿತರಾಗಿ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ವತಿಯಿಂದ ಯಕ್ಷಗಾನ ಮಂಡಳಿಯವರು ಕುಂದಾಪುರದ ಹನ್ನಾಬೈಲಿನಲ್ಲಿ ಮಾ.26 ರಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ, ಭಾಗವತರು ಪದ ಹಾಡುತ್ತಿರುವ ಸಂದರ್ಭದಲ್ಲಿ ಆಲಾಪನೆ ಮಾಡುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ಪದ್ಯ ಮುಗಿದ ನಂತರ ಕೃಷ್ಣ ವೇಷಧಾರಿ ಅಶೋಕ್ ಭಟ್ ಗರಂ ಆಗಿ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತುಗಳು ವೈರಲ್‌ ಆಗಿದೆ.

ಕಲಾವಿದನ ಆಕ್ರೋಶಕ್ಕೆ ಕಾರಣವೇನು?
ಉಜಿರೆ ಅಶೋಕ ಭಟ್ ಅವರ ವಾದದ ಪ್ರಕಾರ, ಯಕ್ಷಗಾನದ ಅರ್ಥಗಾರಿಕೆ ಎನ್ನುವುದು ಏಕಾಗ್ರತೆಯಿಂದ ನಡೆಯಬೇಕಾದ ಪ್ರಕ್ರಿಯೆ. ಪ್ರೇಕ್ಷಕರು ಅನಗತ್ಯವಾಗಿ ಶಿಳ್ಳೆ ಹಾಕುವುದು ಅಥವಾ ಗದ್ದಲ ಮಾಡುವುದು ಕಲೆಯ ಗೌರವಕ್ಕೆ ಧಕ್ಕೆ ತರುತ್ತದೆ. “ನಾವು ಕಷ್ಟಪಟ್ಟು ಕಲೆ ಪ್ರದರ್ಶಿಸುವಾಗ ಶಿಸ್ತು ಇರಬೇಕು” ಎನ್ನುವುದು ಅವರ ಆಕ್ರೋಶದ ಹಿಂದಿನ ಆಶಯವಾಗಿತ್ತು.

ಪ್ರೇಕ್ಷಕ ಪ್ರಭುಗಳನ್ನು ಮರೆತರೇ ಕಲಾವಿದರು?
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಜೋರಾಗಿವೆ:
ಯಕ್ಷಗಾನದ ಪಾವಿತ್ರ್ಯತೆ ಉಳಿಯಬೇಕು, ಕಲಾವಿದನಿಗೆ ಗೌರವ ಸಿಗಬೇಕು. ಶಿಳ್ಳೆ ಹಾಕುವುದು ಕಲೆಗೆ ಮಾಡುವ ಅವಮಾನ ಎಂದು ಒಂದು ವರ್ಗ ವಾದಿಸಿದರೆ , ವೇದಿಕೆಯ ಮೇಲೆ ಕೃಷ್ಣನಂತಹ ದೈವಸ್ವರೂಪಿ ಪಾತ್ರಧಾರಿ ಕಲಾವಿದನಿಗೆ ಸಂಯಮ ಇರಬೇಕು. ಪ್ರೇಕ್ಷಕರನ್ನು ಹೀನಾಯವಾಗಿ ಕಾಣುವುದು ಒಬ್ಬ ವೃತ್ತಿಪರ ಕಲಾವಿದನ ಲಕ್ಷಣವಲ್ಲ. ಕಲಾವಿದನ ಮಾತುಗಳಲ್ಲಿ ಸ್ಪಷ್ಟವಾಗಿ ದರ್ಪ, ಅಹಂಕಾರ ಮತ್ತು ತನ್ನ ಸಾಧನೆಯ ಮೇಲಿನ ಅತಿಯಾದ ಹೆಮ್ಮೆಯ ಭಾವನೆಗಳು ಕಾಣುತ್ತಿರುವುದರಿಂದ ಆತನು ತನ್ನನ್ನು ಇತರರಿಗಿಂತ ಮೇಲಿರುವವನಾಗಿ ಚಿತ್ರಿಸಿಕೊಂಡು, ತನ್ನ ಸಾಧನೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ವೇಳೆ ಇತರರ ಕೊಡುಗೆಗಳನ್ನು ಕಡಿಮೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಅಭಿಮಾನದಿಂದ ಪ್ರೇಕ್ಷಕರು ಹಾಕುವ ಶಿಳ್ಳೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಪ್ರೇಕ್ಷಕರಿಲ್ಲದೆ ಕಲೆ ಇಲ್ಲ, ಕಲಾವಿದರಿಲ್ಲದೆ ಸಂಸ್ಕೃತಿ ಇಲ್ಲ. ಇಬ್ಬರ ನಡುವೆ ಸಮನ್ವಯ ಇರಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಮತ್ತು ಅಭಿಮಾನವೇ ಕಾರಣ. ಶಿಳ್ಳೆ ಎನ್ನುವುದು ಅಭಿಮಾನದ ಸಂಕೇತವೂ ಆಗಿರಬಹುದು. ಸಣ್ಣ ತಪ್ಪುಗಳಿಗಾಗಿ ಪ್ರೇಕ್ಷಕ ಪ್ರಭುಗಳನ್ನು ವೇದಿಕೆಯ ಮೇಲಿಂದಲೇ ಹಿಯಾಳಿಸುವುದು ಕಲಾವಿದನಿಗೆ ಶೋಭೆ ತರುವುದಿಲ್ಲ. “ಕಲಾವಿದ ಬೆಳೆಯಲು ಬೇಕಾದ ಪ್ರೇಕ್ಷಕ ಸ್ನೇಹಿ ಮನೋಭಾವವನ್ನು ಅಶೋಕ ಭಟ್ ಅವರು ಮರೆತರೇ?” ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ವೇದಿಕೆಯ ಮೇಲಿಂದ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವುದು ಕಲಾವಿದನ ಅಹಂಕಾರವನ್ನು ತೋರಿಸುತ್ತದೆ. ಎಂಬುವುದು ಕಲಾಭಿಮಾನಿಗಳ ಕಡೆಯಿಂದ ಕೇಳಿಬರುತ್ತಿರುವ ವಾದಗಳು ಕಲಾವಿದನ ಈ ದರ್ಪದ ನಡೆ ಯಕ್ಷಗಾನದ ಆಂತರಿಕ ಶಿಸ್ತನ್ನು ಎತ್ತಿ ಹಿಡಿಯುವುದೋ ಅಥವಾ ಪ್ರೇಕ್ಷಕರನ್ನು ಕಲೆಯ ಸಂಭ್ರಮದಿಂದ ದೂರ ತಳ್ಳುವುದೋ ಎಂಬ ಬಗ್ಗೆ ಈಗ ಗಂಭೀರ ಚರ್ಚೆ ನಡೆಯುತ್ತಿದೆ.

ವೇದಿಕೆಯಲ್ಲಿ ಅರ್ಥ ಹೇಳಲು ಬಂದ ಪಾತ್ರಧಾರಿ ಭಾಗವತರಲ್ಲಿ ಅನುಮತಿ ಕೇಳಿದ ಬಳಿಕ ತನ್ನ ಬುದ್ಧಿವಾದದ ಮಾತು ಆರಂಭಿಸಬೇಕಾಗಿತ್ತು. ಅಥವಾ ವ್ಯವಸ್ಥಾಪಕರಲ್ಲಿ ತಿಳಿಸಬೇಕಿತ್ತು ಅದ್ಯಾವುದೂ ಇಲ್ಲದೇ ಏಕಾಏಕಿ ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ಬುದ್ಧಿ ಮಾತಿನ ಮೂಲಕ ವೇದಿಕೆಯಲ್ಲೇ ತನ್ನ ಅಹಂಕಾರ ಪ್ರವೃತ್ತಿಯನ್ನು ಅಶೋಕ್ ಭಟ್ ಸಾಬೀತು ಪಡಿಸಿರುವುದು ಯಕ್ಷಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Continue Reading

Belthangady

ಪಣಕಜೆ ಟೋಲ್ ಗೇಟ್ ಅಕ್ರಮ: ಏಪ್ರಿಲ್‌ನಲ್ಲಿ ಬೃಹತ್ ಪಾದಯಾತ್ರೆ ಎಚ್ಚರಿಕೆ ನೀಡಿದ ಮುನೀರ್ ಕಾಟಿಪಳ್ಳ

Published

on

ಬೆಳ್ತಂಗಡಿ: ಬಿ.ಸಿ.ರೋಡ್ – ಚಾರ್ಮಾಡಿ ರಸ್ತೆಯ ಪಣಕಜೆ ಎಂಬಲ್ಲಿ ಭೂ ಸಾರಿಗೆ ಇಲಾಖೆಯಡಿ ನಿರ್ಮಾಣವಾಗುತ್ತಿರುವ ಟೋಲ್ ಗೇಟ್ ಸಂಪೂರ್ಣ ಕಾನೂನು ಬಾಹಿರವಾಗಿದ್ದು, ಜಿಲ್ಲೆಯ ಅಕ್ರಮ ಟೋಲ್ ಗೇಟ್‌ಗಳ ವಿರುದ್ಧ ಏಪ್ರಿಲ್ ತಿಂಗಳಿನಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹಾಗೂ ಹಿರಿಯ ಹೋರಾಟಗಾರ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ನಿರ್ಮಾಣವಾಗುತ್ತಿರುವ ಟೋಲ್ ಗೇಟ್ ಸ್ಥಳಕ್ಕೆ ‘ಜಿಲ್ಲಾ ಮಟ್ಟದ ಟೋಲ್ ಗೇಟ್ ತೆರವು ಹೋರಾಟ ಸಮಿತಿ’ಯ ನಿಯೋಗದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಜನರ ಶಾಂತಿಯುತ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ದೌರ್ಬಲ್ಯ ಎಂದು ಭಾವಿಸಿದೆ. ಬೇಕಾಬಿಟ್ಟಿ ಟೋಲ್ ನಿರ್ಮಾಣ ಮಾಡುವ ಮೂಲಕ ಜನರ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ಕಿಡಿಕಾರಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, “ನಿಯಮದ ಪ್ರಕಾರ ಪ್ರತಿ 60 ಕಿ.ಮೀ ದೂರದಲ್ಲಿ ಟೋಲ್ ಇರಬೇಕು. ಆದರೆ ಇಲ್ಲಿ 30-40 ಕಿ.ಮೀ ಅಂತರದಲ್ಲೇ ಟೋಲ್ ನಿರ್ಮಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚತುಷ್ಪಥ ರಸ್ತೆಗಳಲ್ಲಿ ಇರಬೇಕಾದ ಟೋಲ್, ಸಾಮಾನ್ಯ ಭೂ ಸಾರಿಗೆ ರಸ್ತೆಗಳಿಗೂ ವ್ಯಾಪಿಸಿರುವುದು ದುರಂತ,” ಎಂದರು.

ಈ ಅನ್ಯಾಯದ ವಿರುದ್ಧ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಅಗತ್ಯವಿದೆ ಎಂದು ನಿಯೋಗವು ಕರೆ ನೀಡಿದೆ.

ಈ ಸಂದರ್ಭದಲ್ಲಿ ಟೋಲ್ ಗೇಟ್ ತೆರವು ಹೋರಾಟ ಸಮಿತಿ ಸಂಚಾಲಕರಾದ ಬಿ. ಶೇಖರ್, ಮೋಹನ್ ಶೆಟ್ಟಿ ಪಂಜಿಕಲ್ಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ನಾಗೇಶ್ ಕುಮಾರ್ ಗೌಡ ಸೇರಿದಂತೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಏಪ್ರಿಲ್‌ನಲ್ಲಿ ನಡೆಯಲಿರುವ ಪಾದಯಾತ್ರೆಯ ಮೂಲಕ ಜಿಲ್ಲೆಯ ಒಗ್ಗಟ್ಟನ್ನು ಪ್ರದರ್ಶಿಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೋರಾಟ ಸಮಿತಿ ಸಜ್ಜಾಗಿದೆ.

Continue Reading

Belthangady

ಯುವತಿಯ ಖಾಸಗಿ ವಿಡಿಯೋ ಹರಿಬಿಟ್ಟ ಆರೋಪಿ; ಉಪ್ಪಿನಂಗಡಿ ಪೊಲೀಸರಿಂದ ಎಫ್‌ಐಆರ್ ದಾಖಲು

Published

on

ಬೆಳ್ತಂಗಡಿ : ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ವಿವಾಹದ ಭರವಸೆ ನೀಡಿದ ಯುವಕನೊಬ್ಬ ಆಕೆಯ ಖಾಸಗಿ ವೀಡಿಯೋ ಪಡೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಬಗ್ಗೆ ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ನೆ ಗ್ರಾಮದ ಸುಶಾಂತ್ ಪೂಜಾರಿ ಹಾಗೂ ಆತನ ಸಹೋದರಿಯ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿಯ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವತಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಸುಶಾಂತ ಪೂಜಾರಿ ಎಂಬ ಯುವಕನ ಪರಿಚಯವಾಗಿತ್ತು. ತಾನು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು ಇದೀಗ ಊರಿಗೆ ಬಂದಿದ್ದೇನೆಂದು ಪರಿಚಯ ಮಾಡಿಕೊಂಡ ಸುಶಾಂತ್ ಪೂಜಾರಿ ಯುವತಿಯ ಜೊತೆ ಪ್ರೀತಿಯ ನಾಟಕವಾಡಿ ಬಲೆಗೆ ಬೀಳಿಸಿಕೊಂಡಿದ್ದಾನೆ. ಆತನ ಮಾತು ನಂಬಿದ ಯುವತಿ ಪ್ರತಿನಿತ್ಯ ಮೊಬೈಲ್ ಸಂಭಾಷಣೆ ನಡೆಸುತ್ತಾ ಹತ್ತಿರವಾಗಿದ್ದು ಬಳಿಕ ಸುಶಾಂತ್ ಪೂಜಾರಿ ಆಕೆಯ ಜೊತೆ ವಿವಾಹದ ಭರವಸೆಯನ್ನೂ ನೀಡಿ ಆತ್ಮೀಯತೆ ಮತ್ತು ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆರು ತಿಂಗಳಿಗೂ ಹೆಚ್ಚು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಈ ಸಂದರ್ಭದಲ್ಲಿ ಸುಶಾಂತ್ ಪೂಜಾರಿ ಯುವತಿಯ ಬಳಿ ಖಾಸಗಿ ವಿಡಿಯೋ ನೀಡುವಂತೆ ನಿರಂತರವಾಗಿ ಪೀಡಿಸುತ್ತಾ ಕಾಟ ಕೊಡುತ್ತಿದ್ದನೆನ್ನಲಾಗಿದೆ. ಆತನ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ಅದೊಂದು ದಿನ ಸ್ನಾನ ಮಾಡುವ ವೇಳೆ ಯುವತಿಯು ಸುಶಾಂತ್ ಪೂಜಾರಿಗೆ ವಿಡಿಯೋ ಕಾಲ್ ಮಾಡಿರುವುದನ್ನು ಆತ ರೆಕಾರ್ಡ್ ಮಾಡಿಕೊಂಡಿದ್ದಾನೆ. ಕೆಲದಿನಗಳ ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿಯಾಗಿ ಹಂಚಿಕೊಂಡಿದ್ದಾನೆ. ಇದಕ್ಕೆ ಆತನ ಸಹೋದರಿಯೂ ಸಹಕಾರ ನೀಡಿದ್ದಾಳೆ ಎಂದು ನೊಂದ ಯುವತಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ (BNS), 2023ರಂತೆ (U/s-318(3),316(3),77,r/w 3(5)); ಮಾಹಿತಿ ತಂತ್ರಜ್ಞಾನ ಕಾಯ್ದೆ 2008 (U/s-66(E),67(A)); SC & ST (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015
(U/s-3(1)(w)(i) (ii),3(2)(va)ಸೆಕ್ಷನ್ ಅಡಿಯಲ್ಲಿ ಮಾ.24 ರಂದು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ

Continue Reading

Trending

Copyright © 2025 Deevatige