Connect with us

crime

ಬ್ರೇಕಿಂಗ್ ನ್ಯೂಸ್: ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್‌ ಪಿ.ಜಿ. ಅಮಾನತು – ಎಸಿಪಿ ತನಿಖಾ ವರದಿಯ ಬೆನ್ನಲ್ಲೇ ಕಮಿಷನರ್ ಕಠಿಣ ಕ್ರಮ!

Published

on

ಮಂಗಳೂರು: ಮಹಿಳೆಯರೊಂದಿಗೆ ಅನುಚಿತ ವರ್ತನೆ ಹಾಗೂ ಪ್ರಶ್ನಾರ್ಹ ನಡವಳಿಕೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್‌ ಪಿ.ಜಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಎಸಿಪಿ ಅವರು ಸಲ್ಲಿಸಿದ ಸುದೀರ್ಘ ತನಿಖಾ ವರದಿಯಲ್ಲಿ ಇನ್ಸ್‌ಪೆಕ್ಟರ್ ಅವರ ಆಡಿಯೋ ಮತ್ತು ವಿಡಿಯೋ ಪುರಾವೆಗಳು ಅಸಭ್ಯವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಂಗಳೂರು ಉತ್ತರ ವಲಯ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಶ್ರೀಕಾಂತ್‌ ಅವರು ನಡೆಸಿದ ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿ ಹಾಗೂ ಸತ್ಯಾಂಶಗಳು ಹೊರಬಂದಿದ್ದು, ಇನ್ಸ್‌ಪೆಕ್ಟರ್ ವಿರುದ್ಧ ಹೇಳಿಕೆ ನೀಡಿದ್ದ ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ಕೌಟುಂಬಿಕ ಕಲಹಗಳಿದ್ದು, ಇಬ್ಬರ ವಿರುದ್ಧವೂ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್‌ಪೆಕ್ಟರ್ ವಿರುದ್ಧದ ದೂರು ಸೇರಿದಂತೆ ಬಹುತೇಕ ಪ್ರಕರಣಗಳು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದಿದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ. ಎರಡನೇ ಮಹಿಳೆ ಅವಿತ ಮಿನೇಜಸ್ ಅವರ ಪತಿಯ ವಿರುದ್ಧ 4 ಪ್ರಕರಣಗಳಿದ್ದು, ಬಡವರ ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣದ ದುರುಪಯೋಗದ ಆರೋಪ ಇವರ ಮೇಲಿದೆ. ಇನ್ಸ್‌ಪೆಕ್ಟರ್ ಲಂಚ ಕೇಳಿದ್ದಾರೆ ಎನ್ನಲಾದ ಸ್ಥಳ ಸಿಸಿಟಿವಿ ವ್ಯಾಪ್ತಿಯಲ್ಲಿದ್ದು, ಅಲ್ಲಿ ಲಂಚ ಕೇಳಿದ ಅಥವಾ ಕಿರುಕುಳ ನೀಡಿದ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ. ತನಿಖಾ ವರದಿಯ ಪ್ರಕಾರ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಮಹಿಳೆಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ-ವಿಡಿಯೋದಲ್ಲಿರುವ ಮಹಿಳೆಯರು ಬೇರೆ ಬೇರೆಯಾಗಿದ್ದಾರೆ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ಅವರ ನಡವಳಿಕೆ ತೀರಾ ಪ್ರಶ್ನಾರ್ಹವಾಗಿದ್ದು, ಫೋನ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅತ್ಯಂತ ಅಸಭ್ಯವಾಗಿ ಮಾತನಾಡಿರುವುದು ಕಂಡುಬಂದಿದೆ. ಆಡಿಯೋ ಮತ್ತು ವಿಡಿಯೋದಲ್ಲಿ ಕಂಡುಬಂದ ಮಹಿಳೆಯರು ಇನ್ಸ್‌ಪೆಕ್ಟರ್ ವಿರುದ್ಧ ಅಧಿಕೃತ ದೂರು ನೀಡಲು ಸದ್ಯಕ್ಕೆ ನಿರಾಕರಿಸಿದ್ದಾರೆ. ಆದರೆ, ಭವಿಷ್ಯದಲ್ಲಿ ಅವರು ಹೇಳಿಕೆ ನೀಡಲು ಇಚ್ಛಿಸಿದರೆ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಎಸಿಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಮಿಷನರ್ ಆದೇಶ:
ಆರೋಪಿಗಳ ಹಿನ್ನೆಲೆ ಏನೇ ಇದ್ದರೂ, ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಇಲಾಖೆಯ ಘನತೆಗೆ ಕುಂದು ತಂದಿದೆ ಎಂದು ಮಂಗಳೂರು ಕಮಿಷನರ್ ಸುಧೀರ್‌ ಕುಮಾರ್‌ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್‌ಪೆಕ್ಟರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಇಲಾಖಾ ಮಟ್ಟದ ಸವಿಸ್ತಾರ ವಿಚಾರಣೆ ನಡೆಯಲಿದೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.‌

ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು?
ಇನ್ನು, ಮೂಡಬಿದ್ರೆ ಪೊಲೀಸ್​ ಇನ್ಸ್‌ಪೆಕ್ಟರ್​ ಸಂದೇಶ್​ ಪಿಜಿ ವಿರುದ್ಧ ಕಿರುಕುಳ ಆರೋಪದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿ, ಸಂತ್ರಸ್ತೆ ಈ ಹಿಂದೆ ಜೂನ್​ನಲ್ಲಿ ದೂರು ಕೊಟ್ಟಿದ್ದರು. ಅದರ ಪ್ರಕಾರ ಎಸ್​ಪಿ ಅವರಿಗೆ ಪತ್ರ ಬರೆಯಲಾಗಿತ್ತು, ಈಗ ಮತ್ತಷ್ಟು ಸಂತ್ರಸ್ತೆಯರು ಇದ್ದಾರೆ ಅಂತ ಗೊತ್ತಾಗ್ತಾ ಇದೆ. ಈ ಬಗ್ಗೆಯೂ ಎಸ್​ಪಿ ಹಾಗೂ ಕಮೀಷನರ್​ಗೆ ವರದಿ ಕೇಳಲಾಗಿದೆ ಜೊತೆಗೆ ಇನ್ಸ್‌ಪೆಕ್ಟರ್ ವಿರುದ್ಧ ಏನ್ ಕ್ರಮ ಆಗಿದೆ ಅಂತಾನೂ ಕೇಳಿದ್ದೇನೆ, ನೋಡೋಣ ಏನು ವರದಿಯನ್ನು ಕೊಡ್ತಾರೆ ಅಂತ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದ್ದರು.

ಅಧಿಕೃತ ದೂರು ನೀಡದ ಸಂತ್ರಸ್ತರು:

ವಿಡಿಯೋದಲ್ಲಿರುವ ಮಹಿಳೆಯರು ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೂಡ ಮೇಲ್ನೋಟಕ್ಕೆ ಅಧಿಕಾರಿಯ ನಡವಳಿಕೆ ಸರಿಯಿಲ್ಲದ ಕಾರಣ ಅವರನ್ನು ಅಮಾನತು ಮಾಡಿ ಮುಂದಿನ ವಿಚಾರಣೆಗೆ ಆದೇಶಿಸಲಾಗಿದೆ.


Continue Reading
Advertisement

accident

ಟ್ಯಾಬ್ಲೆಟ್ ಆರಿಫ್ ಹತ್ಯೆ ಪ್ರಕರಣ: ಸಿಸಿಬಿಗೆ ತನಿಖೆ ಹಸ್ತಾಂತರ; ಆರು ಮಂದಿ ಹಂತಕರ ಗುರುತು ಪತ್ತೆ

Published

on

ಮಂಗಳೂರು: ತೊಕ್ಕೊಟ್ಟು ಫ್ಲೈಓವರ್ ನಲ್ಲಿ ನಡೆದ ರೌಡಿಶೀಟರ್ ಟ್ಯಾಬ್ಲೆಟ್ ಆರಿಫ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರು ಜನ ಆರೋಪಿಗಳ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಪ್ರಕರಣವನ್ನು ಎಸಿಪಿ ಮತ್ತು ಸಿಸಿಬಿ ತಂಡಕ್ಕೆ ವರ್ಗಾಯಿಸಲಾಗಿದೆ.
ಕೊಲೆ ಪಾತಕಿಗಳ ನಿರಂತರ ಸಂಚಾರದಿಂದಾಗಿ ತಕ್ಷಣವೇ ಬಂಧಿಸಲು ಪೊಲೀಸ್ ತಂಡಕ್ಕೆ ಸವಾಲುಗಳು ಎದುರಾಗಿದ್ದರೂ ಪಾಪಿಗಳ ಚಲನವಲನದ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.
ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದ ಮತ್ತು ಪಾಪಿಗಳಿಗೆ ಪರಾರಿಯಾಗಲು ಸಹಕರಿಸಿ ಆಶ್ರಯ ನೀಡಿದ ಖದೀಮರಿಗೂ ಕಾನೂನಿನ ಉರುಳು ಬಿಗಿಯಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆಯಲ್ಲಿ ಶಂಕಿತರ ಕೈವಾಡ ಸ್ಪಷ್ಟವಾದಲ್ಲಿ ಅಂತಹವರನ್ನು ಕೂಡಾ ಬಂಧಿಸಲಾಗುವುದು ಎಂದು ಕಮಿಷನರ್ ಸ್ಪಷ್ಟವಾಗಿ ಹೇಳಿದ್ದಾರೆ. ಆರೋಪಿಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುವವರು ಭಾರತೀಯ ನ್ಯಾಯ ಸಂಹಿತೆಯ(BNS)ಕಲಂ 249(a)ಅಡಿಯಲ್ಲಿ (ಅಪರಾಧಿಯನ್ನು ಆಶ್ರಯಿಸುವುದು)ಶಿಕ್ಷೆಗೆ ಒಳಪಟ್ಟವರಾಗುತ್ತಾರೆ ಎಂಬುದನ್ನು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿಯವರು ಪುನರುಚ್ಚರಿಸಿದ್ದಾರೆ. ಯಾವುದೇ ಮುಲಾಜಿಲ್ಲದೇ ಈ ನಿಯಮವನ್ನು ಹಿಂದಿನ ಪ್ರಕರಣಗಳಂತೆಯೇ ಜಾರಿಗೆ ತರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಉಳ್ಳಾಲ ಬಳಿಯ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಶುಕ್ರವಾರ ಮುಂಜಾನೆ ನಡೆದ ರೌಡಿಶೀಟರ್ ಆರಿಫ್ ಅಲಿಯಾಸ್ ‘ಟ್ಯಾಬ್ಲೆಟ್ ಆರಿಫ್’ (46) ಎಂಬಾತನ ಭೀಕರ ಹತ್ಯೆ ಪ್ರಕರಣವು ಕರಾವಳಿಯಲ್ಲಿ ಮತ್ತೆ ಗ್ಯಾಂಗ್‌ವಾರ್ ಭೀತಿಯನ್ನು ಹುಟ್ಟುಹಾಕಿದೆ. ಈ ಹತ್ಯೆಯ ಹಿಂದೆ ಹಳೆಯ ಸೇಡಿನ ಸಂಚು ಇರುವ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಹತ್ಯೆಯ ಹಿನ್ನೆಲೆ ಮತ್ತು ಸೇಡಿನ ಆಯಾಮ:
ಪೊಲೀಸ್ ಮೂಲಗಳ ಪ್ರಕಾರ, ಕಳೆದ ವರ್ಷ ನಡೆದಿದ್ದ ಮತ್ತೊಬ್ಬ ರೌಡಿಶೀಟರ್ ‘ಟೋಪಿ ನೌಫಾಲ್’ ಎಂಬಾತನ ಹತ್ಯೆಯ ಘಟನೆಯನ್ನು ಆರಿಫ್ ಮತ್ತು ಆತನ ತಂಡ ಸಂಭ್ರಮಿಸಿತ್ತು ಎಂದು ಹೇಳಲಾಗಿದೆ. ಈ ಸಂಭ್ರಮಾಚರಣೆಯೇ ಈಗ ಆರಿಫ್ ಪ್ರಾಣಕ್ಕೆ ಮುಳುವಾಗಿದೆ ಎನ್ನಲಾಗುತ್ತಿದೆ. ಈದ್ ಹಬ್ಬದ ದಿನದಂದೇ ಗೆಳೆಯನ ಗೋರಿಯ ಮುಂದೆ ನಿಂತು ಸೇಡು ತೀರಿಸಿಕೊಳ್ಳುವ ಶಪಥ ಮಾಡಲಾಗಿತ್ತು ಎಂಬ ಗಂಭೀರ ಮಾಹಿತಿ ತನಿಖೆಯ ವೇಳೆ ಹೊರಬಂದಿದೆ.

ಘಟನೆ ನಡೆದದ್ದು ಹೇಗೆ?
ಶುಕ್ರವಾರ ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಆರಿಫ್ ತನ್ನ ದ್ವಿಚಕ್ರ ವಾಹನದಲ್ಲಿ ಧಕ್ಕೆಯ ಮೀನು ಮಾರುಕಟ್ಟೆಗೆ ತೆರಳುತ್ತಿದ್ದಾಗ, ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿಗಳ ತಂಡ ತೊಕ್ಕೊಟ್ಟು ಫ್ಲೈಓವರ್ ಮೇಲೆ ಆತನ ಗಾಡಿಗೆ ಡಿಕ್ಕಿ ಹೊಡೆದಿದೆ. ಆರಿಫ್ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ತನಿಖೆ ಚುರುಕು:
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿದೆ. ಸಿಸಿಬಿ ಪೊಲೀಸರು ಈಗಾಗಲೇ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಗೆ ಬಳಸಲಾದ ಕಾರನ್ನು ಬಂಟ್ವಾಳದ ಬುಡೋಳಿ ಬಳಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಈ ಹತ್ಯೆಯು ಮಂಗಳೂರು ನಗರದಲ್ಲಿ ಮತ್ತೆ ಗ್ಯಾಂಗ್‌ಗಳ ನಡುವಿನ ಸಂಘರ್ಷಕ್ಕೆ ನಾಂದಿ ಹಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Continue Reading

crime

ಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!

Published

on

ಮಡಿಕೇರಿ: ಕೊಡಗು ಜಿಲ್ಲೆಯ ಎಮ್ಮೆಮಾಡು ಪರಿಸರದಲ್ಲಿ ನಡೆದ ಮುಸ್ಲಿಂ ಸಮುದಾಯದ ಮದುವೆ ಸಮಾರಂಭವೊಂದರಲ್ಲಿ, ತುಳುನಾಡಿನ ಪವಿತ್ರ ದೈವವನ್ನೇ ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿರುವ ಘಟನೆ ನಡೆದಿದೆ. ಮದುಮಗ ಮತ್ತು ಆತನ ಬೆಂಬಲಿಗರ ಈ ‘ಹುಚ್ಚಾಟ’ದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿವೆ.

ಸಾಮಾನ್ಯವಾಗಿ ಮುಸ್ಲಿಂ ಸಮುದಾಯದ ಮದುವೆ ದಿನದ ರಾತ್ರಿ ಮದುಮಗ ತನ್ನ ಸ್ನೇಹಿತರೊಂದಿಗೆ ಸೇರಿ ತಮಾಷೆಗಾಗಿ ಒಂದಷ್ಟು ವಿನೋದದ ಕಾರ್ಯಕ್ರಮಗಳನ್ನು ಮಾಡುವುದು ರೂಢಿ. ಆದರೆ ಎಮ್ಮೆಮಾಡಿನಲ್ಲಿ ನಡೆದ ಈ ವಿವಾಹದಲ್ಲಿ ಮದುಮಗನಿಗೆ ತುಳುನಾಡಿನ ದೈವದ ಕೋಲದ ಮಾದರಿಯಲ್ಲಿ ಮುಖ ಹಾಗೂ ಮೈಗೆ ಬಣ್ಣ ಬಳಿದು, ದೈವವನ್ನೇ ಅಣಕಿಸುವ ರೀತಿಯಲ್ಲಿ ಕುಳ್ಳಿರಿಸಿ ವಿಕೃತವಾಗಿ ವರ್ತಿಸಲಾಗಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಕೇವಲ ಹಿಂದೂ ಸಂಘಟನೆಗಳು ಮಾತ್ರವಲ್ಲದೆ, ಸ್ವತಃ ಮುಸ್ಲಿಂ ಸಮುದಾಯದ ಅನೇಕರು ಈ ನಡೆಯನ್ನು ಖಂಡಿಸಿದ್ದಾರೆ. “ಇಂತಹ ವರ್ತನೆಗಳು ಸಮಾಜದ ಶಾಂತಿ ಕದಡುತ್ತವೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ” ಎಂದು ಸಮುದಾಯದ ಹಿರಿಯರು ಆಡಿಯೋಗಳ ಮೂಲಕ ಅಸಮಾಧಾನ ಹೊರಹಾಕುತ್ತಿದ್ದಾರೆ.

ಹಳೆಯ ಘಟನೆಯ ನೆನಪು:

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಾಲೆತ್ತೂರು ಎಂಬಲ್ಲಿಯೂ ಇಂತಹುದೇ ಘಟನೆ ನಡೆದಿತ್ತು. ಅಂದು ಮದುಮಗ ಕೋರಗಜ್ಜ ದೈವದ ವೇಷ ಧರಿಸಿ ಅತಿರೇಕ ಮೆರೆದಿದ್ದಕ್ಕಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಂಧನವೂ ನಡೆದಿತ್ತು. ಈಗ ಕೊಡಗಿನಲ್ಲಿ ಮತ್ತೆ ಅಂತಹದ್ದೇ ಘಟನೆ ಮರುಕಳಿಸಿರುವುದು ಜಿಲ್ಲಾಡಳಿತಕ್ಕೆ ಮತ್ತು ಪೋಲಿಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ತುಳುನಾಡಿನ ದೈವಾರಾಧನೆಯನ್ನು ಅಣಕಿಸಿದ ಮದುಮಗ ಮತ್ತು ತಂಡದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕ ಆಕ್ರೋಶಿತರಾಗಿ ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Continue Reading

crime

ದಕ್ಷಿಣ ಕನ್ನಡ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕೊಲೆ ಆರೋಪಿ ಸೇರಿ ಮೂವರು ವಶಕ್ಕೆ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಸತತ ಕಾರ್ಯಾಚರಣೆಯಲ್ಲಿ, ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಿತ ಹೇಳಿಕೆ ನೀಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

1. ಆಂಧ್ರದ ಜೈಲಿನಲ್ಲಿದ್ದ ಕೊಲೆ ಆರೋಪಿ ಪತ್ತೆ

ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ (ಅ.ಕ್ರ: 15/2012) ಹತ್ತು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಸುಳ್ಯ ಅಜ್ಜಾವರ ನಿವಾಸಿ N.M. ಅಜೀಜ್ ಎಂಬಾತನನ್ನು ಪತ್ತೆಹಚ್ಚಲಾಗಿದೆ. ಈತ 2018ರಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಂಡು, ಹೆಸರು ಬದಲಾಯಿಸಿಕೊಂಡು ಆಂಧ್ರಪ್ರದೇಶದಲ್ಲಿ ವಾಸವಾಗಿದ್ದನು. ಸದ್ಯ ಈತ ಆಂಧ್ರದ ಚಿತ್ತೂರು ಜೈಲಿನಲ್ಲಿರುವುದು ದೃಢಪಟ್ಟಿದ್ದು, ಪೊಲೀಸರು ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆಯಲಿದ್ದಾರೆ.

2. 8 ವರ್ಷಗಳ ನಂತರ ಕೇರಳದಲ್ಲಿ ಸಿಕ್ಕಿಬಿದ್ದ ಕಳ್ಳತನದ ಆರೋಪಿ

ಬಂಟ್ವಾಳ ಗ್ರಾಮಾಂತರ ಠಾಣೆಯ ಕಳ್ಳತನ ಪ್ರಕರಣವೊಂದರಲ್ಲಿ (ಅ.ಕ್ರ: 152/2017) ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೇರಳ ಪಲಕ್ಕಾಡ್ ನಿವಾಸಿ ಶಕೀಲ್ ಪಿ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿಯ ಮೇರೆಗೆ ಕೇರಳದ ತಿರೂರ್‌ನಲ್ಲಿ ಕಾರ್ಯಾಚರಣೆ ನಡೆಸಿದ ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಮತ್ತು ಸಿಬ್ಬಂದಿ ಶಿವಾನಂದ ಮಡ್ಡಿ ಅವರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

3. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷದ ಕಾಮೆಂಟ್: ಬಂಧನ

ಮಂಗಳೂರಿನ ಕಾರ್ಯಕ್ರಮವೊಂದರ ವಿಡಿಯೋಗೆ ಫೇಸ್‌ಬುಕ್‌ನಲ್ಲಿ ಕೋಮು ಪ್ರಚೋದನಾಕಾರಿ ಕಾಮೆಂಟ್ ಹಾಕಿದ್ದ ಚಾಮರಾಜನಗರ ಮೂಲದ ರಾಜೇಂದ್ರ ಸಿ (48) ಎಂಬಾತನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. 2026ರ ಜನವರಿಯಲ್ಲಿ ನಡೆದ ಸ್ಪರ್ಧೆಯ ವಿಡಿಯೋವೊಂದಕ್ಕೆ ಈತ ಅವಹೇಳನಕಾರಿ ಕಾಮೆಂಟ್ ಮಾಡಿದ್ದನು. ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಧಾರಗಳೊಂದಿಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Continue Reading

Trending

Copyright © 2025 Deevatige