DEATH
ಮನೆಯಲ್ಲಿ ಒಬ್ಬಂಟಿಯಾಗಿದ್ದ ವೃದ್ಧ ಸಂಶಯಾಸ್ಪದ ಸಾವು..ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು.
ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿ ಕೆ.ಸಿ. ವರ್ಗೀಸ್ (73)ಎಂಬವರು ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂದರ್ಭ ಕಳೆದ ರಾತ್ರಿ(ಫೆ.8) ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಸಾವಿನ ಹಿಂದೆ ಹಲವು ರೀತಿಯ ಅನುಮಾನಗಳು ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕಾರ್ಯದಲ್ಲಿ ತೊಡಗಿದ್ದಾರೆ. ಕೆ.ಸಿ. ವರ್ಗೀಸ್ ಅವರ ಮೂವರು ಗಂಡು ಮಕ್ಕಳ ಪೈಕಿ ಇಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಆಟೋ ಚಾಲಕರಾಗಿರುವ ಕಿರಿಯ ಪುತ್ರ ಕೆ.ವಿ. ಥೋಮಸ್ ತನ್ನ ಪತ್ನಿ, ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ವೃದ್ಧ ದಂಪತಿಗಳಾದ ಕೆ.ಸಿ. ವರ್ಗೀಸ್ ಹಾಗೂ ಅವರ ಪತ್ನಿ ಎಸ್ತರಾ ವರ್ಗೀಸ್ ಕೊಪ್ಪ ಮಾದೇರಿಯ ಮನೆಯಲ್ಲಿ ವಾಸವಾಗಿದ್ದು, ಮದ್ಯ ಸೇವಿಸುತ್ತಿರುವ ಕೆ.ಸಿ. ವರ್ಗೀಸ್ ಪ್ರತಿನಿತ್ಯ ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದರೆಂಬ ಮಾಹಿತಿ ಕೇಳಿಬರುತ್ತಿದೆ. ಫೆ.8ರಂದು ಹಗಲು ವೇಳೆ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಎಸ್ತರಾ ಅವರು ಮಗ ಕೆ.ವಿ. ಥೋಮಸ್ ಅವರ ಮನೆಗೆ ಹೋಗಿದ್ದರು.ರಾತ್ರಿ ಆಟೋ ಬಾಡಿಗೆ ಮುಗಿಸಿ ಇದೇ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ತಂದೆ ಕೆ.ಸಿ. ವರ್ಗೀಸ್ ಅವರ ಮನೆಯಲ್ಲಿ ಲೈಟ್ ಉರಿಯುತ್ತಿರುವುದನ್ನು ಗಮನಿಸಿ ಬಂದು ಪರಿಶೀಲನೆ ನಡೆಸಿದ ವೇಳೆ ತಂದೆ ಮಂಚದಿಂದ ಬಿದ್ದು ಗಾಯಗೊಂಡಿದ್ದರೆನ್ನಲಾಗಿದೆ. ತಕ್ಷಣವೇ ಅವರನ್ನು ಅಂಬುಲೆನ್ಸ್ ವಾಹನದಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ ಎಂದು ಪುತ್ರ ಕೆ.ವಿ. ಥೋಮಸ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.ವರ್ಗೀಸ್ ಸಾವಿನ ಹಿಂದೆ ಹಲವು ರೀತಿಯ ಅನುಮಾನಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ. ಹೊರಗಿನಿಂದ ಮನೆಗೆ ಬಂದವರು ಹಲ್ಲೆ ನಡೆಸಿರುವುದರಿಂದಲೇ ಕೆ.ಸಿ. ವರ್ಗೀಸ್ ಸಾವನ್ನಪ್ಪಿರಬಹುದು ಎಂಬ ಮಾತುಗಳು ಪರಿಸರದಲ್ಲಿ ಕೇಳಿ ಬರುತ್ತಿವೆ. ಕೆ.ಸಿ. ವರ್ಗೀಸ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದ್ದು, ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳೂ ಆಗಮಿಸಿ ತನಿಖೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ UDR 07/2026, ಕಲಂ : 194(III) (IV)BNSS 2023ರಂತೆ ಪ್ರಕರಣ ದಾಖಲಾಗಿದೆ.
DEATH
ಪತ್ನಿಯ ಕಿರುಕುಳಕ್ಕೆ ಮಗ ಬಲಿ: ಸುದೀಪ್ ರೈ ತಂದೆ ದಾಮೋದರ ರೈ ಗಂಭೀರ ಆರೋಪ
ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ರೈ ಅವರ ಸಾವಿಗೆ ಅವರ ಪತ್ನಿಯೇ ಕಾರಣ ಎಂದು ಸುದೀಪ್ ಅವರ ತಂದೆ ದಾಮೋದರ ರೈ ನೆಲ್ಯಾಡಿ ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯಾ ಶೆಟ್ಟಿ ಎಂಬಾಕೆ ನೀಡಿದ ಮಾನಸಿಕ ಕಿರುಕುಳವೇ ತನ್ನ ಮಗನ ಸಾವಿಗೆ ನೇರ ಕಾರಣವಾಗಿದ್ದು, ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಫೇಸ್‌ಬುಕ್ ಪರಿಚಯ, ರಿಜಿಸ್ಟರ್ ಮದುವೆ:
ದಾಮೋದರ ರೈ ಅವರು ಘಟನೆಯ ಹಿನ್ನೆಲೆಯನ್ನು ವಿವರಿಸುತ್ತಾ, “ನನ್ನ ಮಗ ಸುದೀಪ್ ರಿಯಲ್ ಎಸ್ಟೇಟ್ ಮತ್ತು ಸೋಲಾರ್ ಪ್ಯಾನಲ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಆತನಿಗೆ ಸೌಮ್ಯಾ ಶೆಟ್ಟಿ ಎಂಬಾಕೆಯ ಪರಿಚಯ ಫೇಸ್‌ಬುಕ್ ಮೂಲಕವಾಗಿತ್ತು. ಮದುವೆ ಪ್ರಸ್ತಾಪ ಬಂದಾಗ ನಾವು ಅವರ ಮನೆಗೆ ಹೋಗಿದ್ದೆವು ಮತ್ತು ಅವರು ನಮ್ಮ ಮನೆಗೆ ಬಂದಿದ್ದರು. ಫೆಬ್ರವರಿ 16ರಂದು ನಾವು ಅವರ ಮನೆಗೆ ಭೇಟಿ ನೀಡಿ ಬಂದ ಬಳಿಕ, ‘ಸದ್ಯಕ್ಕೆ ಮದುವೆ ಅರ್ಜೆಂಟ್ ಬೇಡ, ಯೋಚಿಸಿ ನಿರ್ಧಾರ ಮಾಡೋಣ’ ಎಂದು ಹೇಳಿದ್ದೆವು. ಆದರೆ ನಮಗೆ ತಿಳಿಯದಂತೆ ಮರುದಿನವೇ ಅಂದರೆ ಫೆಬ್ರವರಿ 17ರಂದು ಅವರಿಬ್ಬರು ಪುತ್ತೂರಿನ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂಬ ವಿಷಯ ಈಗ ತಿಳಿದುಬಂದಿದೆ,” ಎಂದು ತಿಳಿಸಿದರು.

ಸಾರ್ವಜನಿಕವಾಗಿ ಅವಮಾನ ಮತ್ತು ಕಿರುಕುಳ:
ಮದುವೆಯ ನಂತರ ಸುದೀಪ್ ಉಜಿರೆಯಲ್ಲಿರುವ ಮಾವನ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಮಾರ್ಚ್ 16ರಂದು ನೆಲ್ಯಾಡಿಗೆ ಬಂದಿದ್ದ ಸೌಮ್ಯಾ, ಸುದೀಪ್ ಮತ್ತು ಅವರ ಪೋಷಕರ ಎದುರೇ ರಂಪಾಟ ಮಾಡಿದ್ದಾಳೆ. “ಫೋನ್ ತೆಗೆದಿಲ್ಲ ಎಂಬ ಕಾರಣಕ್ಕೆ ನೆಲ್ಯಾಡಿ ಪೇಟೆಯಲ್ಲಿ ಎಲ್ಲರ ಎದುರೇ ಅಸಭ್ಯವಾಗಿ ಬೈದು ನಮಗೆ ತೀವ್ರ ಅವಮಾನ ಮಾಡಿದ್ದಾಳೆ. ಆನಂತರ ಸುದೀಪ್ ಆಕೆಯ ಜೊತೆಗೇ ಹೋಗಿದ್ದ,” ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.

ಸಾವಿನ ಬಗ್ಗೆ ಅನುಮಾನ:
ಸೌಮ್ಯಾ ಜೊತೆಗೆ ಹೋದ ಎರಡು ದಿನಗಳಲ್ಲೇ ಸುದೀಪ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಕಾರ್ಕಳದ ನಿಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಇದು ಡೆಂಗ್ಯೂ ಜ್ವರ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಾವಿನ ಹಿಂದೆ ಪತ್ನಿಯ ಕಿರುಕುಳ ಮತ್ತು ಸಂಚಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ನೆಲ್ಯಾಡಿಯ ಸುದೀಪ್ ರೈ ಸಾವಿನ ಪ್ರಕರಣವು ಈಗ ಹನಿಟ್ರಾಪ್ ಮತ್ತು ಸರಣಿ ಮದುವೆ ವಂಚನೆಯ ಆಯಾಮವನ್ನು ಪಡೆದುಕೊಂಡಿದೆ. ಆರೋಪಿ ಸೌಮ್ಯಾ ಶೆಟ್ಟಿ ಕೇವಲ ಸುದೀಪ್‌ಗೆ ಮಾತ್ರವಲ್ಲದೆ, ಈ ಹಿಂದೆ ಹಲವು ಪುರುಷರಿಗೆ ಮದುವೆಯ ಆಮಿಷವೊಡ್ಡಿ ವಂಚಿಸಿರುವ ಗಂಭೀರ ವಿಚಾರಗಳು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿವೆ.
ಹನಿಟ್ರಾಪ್ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆಯೇ?
ಸುದೀಪ್ ಅವರ ಪೋಷಕರು ಸೌಮ್ಯಾ ಶೆಟ್ಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, “ಆಕೆ ನಾಟಕ ತಂಡದಲ್ಲಿ ಕಲಾವಿದೆಯಾಗಿದ್ದು, ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಾಳೆ. ಹಣಕ್ಕಾಗಿ ಮದುವೆಯಾಗುವ ಭರವಸೆ ನೀಡಿ ಹಲವರನ್ನು ನಂಬಿಸಿ ಮೋಸ ಮಾಡಿದ್ದಾಳೆ. ಈಕೆಯ ಹಿಂದೆ ಹನಿಟ್ರಾಪ್ ಗ್ಯಾಂಗ್ ಇರುವ ಶಂಕೆ ಇದೆ,” ಎಂದು ಕಣ್ಣೀರು ಹಾಕಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಮತ್ತೊಬ್ಬ ಸಂತ್ರಸ್ತ ಕಲಾವಿದನ ಅಳಲು:
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಟಕ ಕಲಾವಿದ ಮೂಲ್ಕಿಯ ವೇಣುಗೋಪಾಲ ಶೆಟ್ಟಿ ಅವರು ಸೌಮ್ಯಾ ಶೆಟ್ಟಿಯಿಂದ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. “ಆಕೆ ನನ್ನನ್ನೂ ಮದುವೆಯಾಗುತ್ತೇನೆಂದು ಹೇಳಿ ವಿಚಿತ್ರವಾಗಿ ಹಿಂಸೆ ಕೊಟ್ಟಿದ್ದಾಳೆ. ಮದುವೆ ಫಿಕ್ಸ್ ಆಗಿದ್ದನ್ನು ನಾನು ಸ್ಟೇಟಸ್ ಹಾಕಿದಾಗ ಹಲವರು ಫೋನ್ ಮಾಡಿ ಆಕೆ ಸರಿಯಿಲ್ಲ ಎಂದು ಎಚ್ಚರಿಸಿದ್ದರು. ಸ್ವತಃ ಆಕೆಯ ಮನೆಯವರೇ ಆಕೆಯನ್ನು ಹೊರಗೆ ಹಾಕಿದ್ದರು,” ಎಂದು ತಿಳಿಸಿದರು.
ವೇಣುಗೋಪಾಲ ಶೆಟ್ಟಿ ಅವರು ಹೇಳುವಂತೆ, ಸೌಮ್ಯಾ ಈ ಹಿಂದೆ ಕನಿಷ್ಠ ಇಬ್ಬರನ್ನು ಮದುವೆಯಾಗಿ ವಂಚಿಸಿದ್ದಾಳೆ. “2024ರ ಡಿಸೆಂಬರ್ ಬಳಿಕ ಆಕೆಯ ಚರಿತ್ರೆ ತಿಳಿದು ನಾನು ಮದುವೆ ಪ್ರಸ್ತಾಪ ಕೈಬಿಟ್ಟಿದ್ದೆ. ಕೊನೆಗೆ ಆಕೆ ನನ್ನ ವಿರುದ್ಧವೇ ಪೊಲೀಸ್ ದೂರು ನೀಡಿದ್ದಳು. ಈಗ ಸುದೀಪ್ ರೈ ಅವರಂತಹ ಅಮಾಯಕ ಆಕೆಯ ಕಿರುಕುಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪುರುಷರಿಗೂ ಇರಲಿ ಸಾಂತ್ವನ ಕೇಂದ್ರ:
ಸೌಮ್ಯಾ ಶೆಟ್ಟಿಯ ವಂಚನಾ ಜಾಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವೇಣು ಶೆಟ್ಟಿ, ಕಾನೂನಿನ ದುರುಪಯೋಗದ ಬಗ್ಗೆ ಮಾತನಾಡಿದರು. “ಕಾನೂನು ಮಹಿಳೆಯರ ಪರವಾಗಿದೆ, ಅವರು ಸುಳ್ಳು ದೂರು ಕೊಟ್ಟರೂ ಪೊಲೀಸರು ನಮ್ಮನ್ನು ಎಳೆದೊಯ್ಯುತ್ತಾರೆ. ಆದರೆ ಅನ್ಯಾಯಕ್ಕೊಳಗಾದ ಪುರುಷರಿಗಾಗಿ ಯಾವುದೇ ಕಾನೂನಿಲ್ಲ. ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಸಾಂತ್ವನ ಕೇಂದ್ರಗಳು ಇರಬೇಕು. ಈ ರೀತಿ ಅನ್ಯಾಯಕ್ಕೊಳಗಾದ ನಮಗೆ ನ್ಯಾಯ ಕೊಡುವವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.
ಪೊಲೀಸ್ ತನಿಖೆಗೆ ಆಗ್ರಹ:
ಸೌಮ್ಯಾ ಶೆಟ್ಟಿ ಮದುವೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ಉದ್ದೇಶ ಹೊಂದಿದ್ದಳೇ? ಈಕೆಯ ಹಿಂದೆ ಯಾರಿದ್ದಾರೆ? ಮತ್ತು ಸುದೀಪ್ ರೈ ಸಾವಿನಲ್ಲಿ ಈಕೆಯ ಪಾತ್ರವೇನು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಮತ್ತು ಸಂತ್ರಸ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.

DEATH
ಬೇಸಿಗೆ ರಜೆ ಎಳೆಬಿಸಿಲಿಗೆ ತಣ್ಣಗಾದ ಪುಟ್ಟ ಜೀವಗಳು: ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ
ಶಾಲಾ ರಜೆಯ ಮೋಜಿನಲ್ಲಿದ್ದ ಪುಟ್ಟ ಕಂದಮ್ಮಗಳಿಗೆ ಆ ಕೃಷಿ ಹೊಂಡವೇ ಮೃತ್ಯುಕೂಪವಾದ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಈಜಲು ಹೋದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಕಿರಣ್ (6), ಬಸಮ್ಮ (11), ಶರತ್ (6) ಹಾಗೂ ಹನುಮೇಶ್ (7) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಇರುವುದರಿಂದ ಗ್ರಾಮದ ಈ ನಾಲ್ವರು ಮಕ್ಕಳು ಆಟವಾಡುತ್ತಾ ಸಮೀಪದ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದಾರೆ. ಆದರೆ ನೀರಿನ ಆಳದ ಅರಿವಿಲ್ಲದೆ ಹೊಂಡಕ್ಕೆ ಇಳಿದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ನಾಲ್ವರೂ ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಮಕ್ಕಳು ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ಹೊಂಡದ ಬಳಿ ಮಕ್ಕಳ ಶವಗಳು ಪತ್ತೆಯಾಗಿವೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ಬೇಸಿಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಅಪಾಯಕಾರಿ ಜಲಮೂಲಗಳ ಬಳಿ ಮಕ್ಕಳು ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಈ ಘಟನೆ ಎಚ್ಚರಿಸಿದೆ.
DEATH
ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ, ಸೋಷಿಯಲ್ ಮೀಡಿಯಾ ಸ್ಟಾರ್ ಲಕ್ಷ್ಮೀ ನಾಯ್ಕ (93) ವಿಧಿವಶ
ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ಮರಿಮೊಮ್ಮಗ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್ ಆದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಜನಪ್ರಿಯ ವ್ಯಕ್ತಿತ್ವ, ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ‘ರೀಲ್ಸ್ ಅಜ್ಜಿ’ ಲಕ್ಷ್ಮೀ ನಾಯ್ಕ (93) ಅವರು ಭಾನುವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಗ್ರಾಮೀಣ ಸೊಗಡಿನ ಅನಭಿಷಿಕ್ತ ನಟಿ:
ಕಳೆದ ಕೆಲವು ವರ್ಷಗಳಿಂದ ತಮ್ಮ ಮೊಮ್ಮಗ, ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ಸೂರಜ್ ಅವರೊಂದಿಗೆ ಸೋಷಿಯಲ್ ಮೀಡಿಯಾ ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀ ನಾಯ್ಕ ಅವರು ಮನೆಮಾತಾಗಿದ್ದರು. ಇವರ ನೈಜ ನಟನೆ, ಮುಗ್ಧತೆ ಹಾಗೂ ಅಪ್ಪಟ ಹಳ್ಳಿ ಸೊಗಡಿನ ಮಾತುಗಳಿಗೆ ಮಾರುಹೋಗದವರೇ ಇಲ್ಲ. ಮೊಮ್ಮಗ ಸೂರಜ್ ಮಾಡುವ ತಮಾಷೆಯ ಪ್ರಶ್ನೆಗಳಿಗೆ ಅಜ್ಜಿ ನೀಡುತ್ತಿದ್ದ ಉತ್ತರಗಳು ಹಾಗೂ ಅವರ ವಿಶಿಷ್ಟ ಶೈಲಿಯ ನಗು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸದಾ ವೈರಲ್ ಆಗುತ್ತಿದ್ದವು.
ಲಕ್ಷಾಂತರ ಅಭಿಮಾನಿಗಳ ಕಂಬನಿ:
ವೃದ್ಧಾಪ್ಯದ ನಡುವೆಯೂ ಸದಾ ಲವಲವಿಕೆಯಿಂದ ಇರುತ್ತಿದ್ದ ಇವರ ನಿಧನದ ಸುದ್ದಿಯನ್ನು ಸೂರಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಅಜ್ಜಿ ಇನ್ನು ನೆನಪು ಮಾತ್ರ” ಎಂದು ಅವರು ಭಾವುಕವಾಗಿ ಬರೆದುಕೊಂಡಿದ್ದು, ಸಾವಿರಾರು ಅಭಿಮಾನಿಗಳು ಅಜ್ಜಿಯ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸುತ್ತಿದ್ದಾರೆ.

ವಾರ್ಧಕ್ಯದಿಂದ ಕೊನೆಯುಸಿರು:
ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ಷ್ಮೀ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮಂಚಿಕೇರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಕರ್ನಾಟಕದ ನೆಟ್ಟಿಗರಿಗೆ ತಮ್ಮ ವಿಡಿಯೋಗಳ ಮೂಲಕ ನಗು ಹಂಚಿದ್ದ ಒಬ್ಬ ಅದ್ಭುತ ಕಲಾವಿದೆಯನ್ನು ಕರುನಾಡು ಕಳೆದುಕೊಂಡಂತಾಗಿದೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
