crime
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡುತ್ತಿದ್ದ ವಂಚನಾ ಜಾಲ ಪೊಲೀಸ್ ಬಲೆಗೆ; ನೂರಾರು ಕೋಟಿ ವಂಚನೆ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್
ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದ ಮಂಗಳೂರು ಕಮೀಷನರ್ ವ್ಯಾಪ್ತಿಯಲ್ಲಿ ಬರುವ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ತಂಡಕ್ಕೆ ಒಂದು ಬಿಗ್ ಸೇಲ್ಯೂಟ್….. ಈವರೆಗೆ ಯಾರೂ ಪತ್ತೆ ಮಾಡಲಾರದ ವಂಚನಾ ಜಾಲವನ್ನು ತಮ್ಮ ಬಲೆಗೆ ಕೆಡವಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೋಟಿಯಲ್ಲ, ಹತ್ತಾರು ಕೋಟಿಯೂ ಅಲ್ಲ.., ನೂರಾರು ಕೋಟಿಗೂ ಅಧಿಕ ವಂಚನೆ ಮಾಡಿದ ಸೈಬರ್ ವಂಚನಾ ಜಾಲವನ್ನು ಬೇಧಿಸಿ ಆರೋಪಿತರನ್ನು ಬಂಧಿಸಿ ಭೇಷ್ ಎನಿಸಿಕೊಂಡ ಪೊಲೀಸರ ಸಾಹಸಮಯ ಕರ್ತವ್ಯಕ್ಕೆ ತಲೆಬಾಗಲೇ ಬೇಕು.
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ವಂಚನೆ ಮಾಡಿದ ತಂಡವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯವರು ಒಟ್ಟು 11 ಜನ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ. ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೈನಾದ ವಂಚಕರಿದ್ದು, ನೇಪಾಳ ಪೊಲೀಸರು ಚೈನಾದ ವಂಚಕರನ್ನು ದಸ್ತಗಿರಿ ಮಾಡಿರುತ್ತಾರೆ. 05 ಭಾರತೀಯ ಆರೋಪಿತರು ತಲೆಮರಿಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಆರೋಪಿತರ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿದಾಗ ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿದ್ದು, ಸದ್ರಿ ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 4580 ಕ್ಕೂ ಹೆಚ್ಚು NCRP PORTAL ನಲ್ಲಿ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 1 ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿರುತ್ತದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು ರೂ 30,70,26,725 ಹಣ ವರ್ಗಾವಣೆ ಆಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆದಬೇಕಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳಾದ 1.ಮಕವನ್ ವಿಕ್ರಂ (25) ತಂದೆ: ದೇವರಾಜ್ ಬಾಯ್, ಬಾವಾ ನಗರ್ ಜಿಲ್ಲೆ ಗುಜರಾತ್. 2.ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ತಂದೆ: ಸರಂಜಿತ್ ಕೊಲ್ಲತ್ತಾ ಪಶ್ಚಿಮ ಬಂಗಾಳ. 3.ಪುಪ್ಲ ಶಿವ ಕುಮಾರ್ ರಾವ್ (32) ತಂದೆ: ಲೇಟ್ ಪುಪ್ಲ ಕುಮಾರ್ ರಾವ್, ಸಿಂಗಬುಮ್ ಜಿಲ್ಲೆ ಜಾರ್ಖಾಂಡ್ 4.ಗೌರವ್ ಪಾಂಡೆ (24) ತಂದೆ; ಕೌಶಾಲ್ ಪಾಂಡೆ , ಮಾವೋ ಜಿಲ್ಲೆ ಉತ್ತರ ಪ್ರದೇಶ. 5.ಹರ್ಷ್ ಮಿಸ್ರಾ (22) ತಂದೆ: ಗ್ಯಾನ್ ಪ್ರಕಾಶ್, ಸುಲ್ತಾನ್ ಪುರ್ ಜಿಲ್ಲೆ ಉತ್ತರ ಪ್ರದೇಶ. 6.ರಾಜೇಶ್ ಮಂಡನ್ (30) ತಂದೆ: ಪಾವು ಮಂಡನ್, ಡಿಯೋಗರ್ ಜಿಲ್ಲೆ ಜಾರ್ಖಾಂಡ್. 7.ಮೊಹಮ್ಮದ್ ಆಕೀಬ್ ಅಲಿ (27) ತಂದೆ: ಮೊಹಮ್ಮದ್ ಸಾಬಿತ್ ಅಲಿ, ಲಕ್ನೋ ಜಿಲ್ಲೆ ಉತ್ತರ ಪ್ರದೇಶ. 8.ರಾಜೀವ್ ರಂಜನ್ ಕುಮಾರ್ (30) ತಂದೆ: ಶ್ರೀಕಾಂತ್ ಕುಮಾರ್, ನಳಂದ ಜಿಲ್ಲೆ ಬಿಹಾರ್. 9.ಮಿಥುನ್ ಕುಮಾರ್ ಮಂಗರಾಜ್ (38) ತಂದೆ: ನಿರ್ಮಲ್ ಕುಮಾರ್, ಸಿಂಗಬುಮ್ ಜಿಲ್ಲೆ ಜಾರ್ಖಾಂಡ್ 10. ನೌಶಾದ್ ಅಲಿ (34) ತಂದೆ: ಜೋಕಾನ್ ಅಲಿ, ಝಾನ್ಸಿ ಜಿಲ್ಲೆ ಉತ್ತರ ಪ್ರದೇಶ. 11. ಓಂ ಪ್ರಕಾಶ್ ಯಾಧವ್ (37)ತಂದೆ: ಪ್ರೇಮ್ ಚಂದ್ ಯಾದವ್, ಜೈಪುರ್ ರಾಜಸ್ಥಾನ ಬಂಧಿಸಲಾಗಿದೆ. ವಂಚಕರಿಂದ ಲ್ಯಾಪ್ ಟಾಪ್ -1, ಮೊಬೈಲ್ ಪೋನ್ ಗಳು-21 ವಿವಿಧ ಕಂಪನಿಯ ಸಿಮ್ ಕಾರ್ಡ್ ಗಳು – 20 ಬೇರೆ ಬೇರೆ ಬ್ಯಾಂಕ್ ಡೆಬಿಟ್ ಕ್ರೆಡಿಟ್ ಕಾರ್ಡ್ ಗಳು – 20 ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ವಿವರ
ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣಾ ಅ.ಕ್ರ 02/2026 ಕಲಂ 66(ಸಿ), 66(ಡಿ), ಐಟಿ ಕಾಯ್ದೆ ಕಲಂ 318(4), 308(5) ಬಿಎನ್ ಎಸ್ ಪ್ರಕರಣದಲ್ಲಿ ಪಿರ್ಯಾದಿದಾರರಿಂದ 1 ಕೋಟಿ 38 ಲಕ್ಷ ಹಣವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದು, ಸದ್ರಿ ವಂಚಕರು ನೇಪಾಳದಲ್ಲಿ ಕುಳಿತು ವಂಚನೆ ಮಾಡುತ್ತಿದ್ದ ಬಗ್ಗೆ ತನಿಖೆಯಿಂದ ಹಾಗೂ ತಾಂತ್ರಿಕ ವಿಶ್ಲೇಷಣೆಯಿಂದ ಪತ್ತೆ ಹಚ್ಚಿ ವಂಚಕರ ಗ್ಯಾಂಗ್ ನ್ನು ದಸ್ತಗಿರಿ ಮಾಡಲಾಗಿದೆ.
ಒಂದು ವಂಚಕರ ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್ ರವರನ್ನು ನೇಮಕ ಮಾಡಿಕೊಂಡು, ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು USDT ನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ.
ಇನ್ನೊಂದು ವಂಚಕರ ತಂಡವು ಕಾಂಬೋಡಿಯಾ ಮತ್ತು ಇತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದು, ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ತಿಳಿದುಬಂದಿರುತ್ತದೆ.
ಸೆನ್ ಪೊಲೀ್ಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ವಂಚನೆಗೆ ಉಪಯೋಗಿಸಲು ಫಿರ್ಯಾದಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ NCRP PORTAL ನಲ್ಲಿ ಸುಮಾರು 128 ಪ್ರಕರಣಗಳು ಮತ್ತು ಒಟ್ಟು 36 FIR ದಾಖಲಾಗಿರುತ್ತದೆ.
ಬ್ಯಾಂಕ್ ಖಾತೆಗಳನ್ನು ಪಡೆಯಲು ವಂಚಕರು ಅನುಸರಿಸುವ ವಿಧಾನ.
ವಂಚಕರು ಬೇರೆ ಬೇರೆ ಕಂಪನಿಯ ಹೆಸರಿನಲ್ಲಿ ಇನ್ ಸ್ಟಾಗ್ರಾಂ ಹಾಗೂ ಟೆಲಿಗ್ರಾಂ ಖಾತೆಗಳ ಮೂಲಕ ತಮ್ಮ ನಿಜವಾದ ಹೆಸರುಗಳನ್ನು ಮರೆ ಮಾಚಿ ಜಾಹೀರಾತು ಮೂಲಕ ಕಾರ್ಪೋರೇಟ್ ಖಾತೆಗಳು, ಕರೆಂಟ್ ಖಾತೆಗಳು, USDT TO INR Exchange, Management Operator ಗಳು ಮತ್ತು OTP Worker ರವರು ಬೇಕಾಗಿದ್ದಾರೆ ಎಂಬುದಾಗಿ ಟೆಲಿಗ್ರಾಂ ಮತ್ತು ಇನ್ಸಾಟ್ರಾ ಗ್ರಾಂ ಮೂಲಕ ಬ್ಯಾಂಕ್ ಖಾತೆದಾರರನ್ನು ಸಂಪರ್ಕಿಸುತ್ತಾರೆ.
ದುರಾಸೆಗೊಳಗಾದವರು ಅವರನ್ನು ಸಂಪರ್ಕಿಸಿದಾಗ 5% ರಿಂದ 10% ಕಮಿಷನ್ ಕೊಡುವುದಾಗಿ ಮತ್ತು ಅವರಿಗೆ ಬೇಕಾದ ವಿಮಾನ ಟಿಕೇಟ್, ಕ್ಯಾಬ್ ಬುಂಕಿಂಗ್, ಹೋಟೇಲ್, ಲಾಡ್ಜ್ ವ್ಯವಸ್ಥೆ ನೀಡಿವುದಾಗಿ ಹಾಗೂ ಇವರಿಗೆ ವಿವಿಧ ರೀತಿಯ ಆಮಿಷಗಳನ್ನು ನೀಡಿ, ದುಬೈ, ನೇಪಾಳ ಮುಂತಾದ ಕಡೆಗಳಲ್ಲಿ ಕರೆಸಿಕೊಳ್ಳುತ್ತಾರೆ. ನಂತರ ಖಾತೆದಾರರನ್ನು ಮತ್ತು ಖಾತೆಗಳನ್ನು ಪೂರೈಸುವವರನ್ನು ಒಂದು ನಿರ್ದಿಷ್ಟವಾದ ಸ್ಥಳದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ವಂಚಕರು ತಮಗೆ ಸೇರಿದ ವಿವಿಧ ಕಂಪನಿಯ ಮೊಬೈಲ್ ಫೋನ್ ಗಳಿಗೆ ಖಾತೆದಾರರ ಸಿಮ್ ಗಳನ್ನು ಹಾಕಿಕೊಂಡು, Net Banking, ಮುಖಾಂತರ ವಂಚನೆಯ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ. ವಂಚಕರು ವಂಚನೆ ಮಾಡಿದ ಹಣದಿಂದ USDT ಗಳನ್ನು ಬೇರೆ ಬೇರೆ ಕಡೆಯಿಂದ ಖರೀದಿ ಮಾಡಿ, ಪ್ರತಿದಿನ ವಿದೇಶದಲ್ಲಿನ ಆರೋಪಿತರಿಗೆ ಕಳುಹಿಸುತ್ತಾರೆ.

ಹೂಡಿಕೆದಾರರನ್ನು ಆಕರ್ಷಿಸುವ ವಿಧಾನ.
ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು, ನಮ್ಮ ದೇಶದ ನಾಗರಿಕರಿಗೆ ಮುಖ್ಯ ವಂಚಕರು ಅಪರಿಚಿತ ವಾಟ್ಸಾಪ್ ಮೊಬೈಲ್ ನಂಬ್ರಗಳ ಮೂಲಕ ಇನ್ ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್ ಬುಕ್ ಗಳ ಮುಖಾಂತರ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವುದಾಗಿ ಆರ್ಕಷಿಸುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಂಶ ಬಂದಿರುವುದಾಗಿ ಆಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪ ಪ್ರಮಾಣದ ಲಾಭಂಶದ ಹಣವನ್ನು ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ, ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಪುಸುಲಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು 60 ಲಕ್ಷದಿಂದ 01 ಕೋಟಿಯವರೆಗೆ Investment fraud ಗೆ ಒಳಪಡಿಸುತ್ತಿದೆ.
ಡಿಜಿಟಲ್ ಸ್ಲೇವರಿ ಬಗ್ಗೆ ಎಚ್ಚರವಿರಲಿ.
ವಿದೇಶಗಳಲ್ಲಿ ಕೆಲಸಕ್ಕಾಗಿ ನೋಡುತ್ತಿರುವ ಯುವಕರಿಗೆ ನಕಲೀ ಜಾಹಿರಾತುಗಳ, ಏಜೆಂಟ್ ಗಳ ಮೂಲಕ ನಂಬಿಸಿ, ಪುಸಲಾಯಿಸಿ ಅವರನ್ನು ಟೂರಿಸ್ಟ್ ವೀಸಾ ದಲ್ಲಿ ಮಧ್ಯ ಪ್ರಾಂಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ ಅವರಿಂದ ದಾಖಲೆಗಳನ್ನು ಮತ್ತು ಪಾಸ್ ಪೋರ್ಟ್ ತೆಗೆದುಕೊಂಡು ಅವರನ್ನು ಅಲ್ಲಿ ಗೊತ್ತಿರದೇ ಇರುವ ಸ್ಥಳದಲ್ಲಿ ಬಂಧಿಸುತ್ತಾರೆ. ಅವರಿಂದ ಒತ್ತಾಯ ಪೂರಕವಾಗಿ ಮುಗ್ದ ಹೂಡಿಕೆದಾರರಿಗೆ ಅವರ ಮಾತೃ ಭಾಷೆಯಲ್ಲೇ ಮಾತನಾಡಿಸಿ ಪುಸಲಾಯಿಸಿ ಹಣ ವರ್ಗಾಹಿಸುವಂತೆ ಮಾಡಿಸುತ್ತಾರೆ. ಅವರಿಗೆ ಸರಿಯಾಗಿ ಊಟ ಉಪಹಾರ ನೀಡದೇ ಹಾಗೂ ಕುಟುಂಬದವರೊಂದಿಗೆ ಸಂಪರ್ಕವನ್ನು ಮಾಡಲು ಅವಕಾಶ ಕೊಡದೇ ಕೂಡಿ ಹಾಕಿ ಭಾರತದ ನಾಗರೀಕರಿಗೆ ವಂಚನೆ ಮಾಡಲು ಭಾರತೀಯರನ್ನೇ ಬಳಸುತ್ತಿದ್ದು, ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರುವುದು.
ಉದ್ಯೋಗಕ್ಕೆ ವಿದೇಶಗಳಿಗೆ ಏಜೆನ್ಸಿ ಮೂಲಕ ಹೋಗುವ ಯುವಕರು ಪ್ರೊಟೆಕ್ಟ್ಸ್ ಆಫ್ ಇಮಿಗ್ರೇಟ್ಸ್ ಬಳಿ ನೊಂದಣಿ ಆಗಿರುವ ಏಜೆನ್ಸಿ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ಅವರ ಮೂಲಕ ವಷ್ಟೇ ಕೆಲಸಗಳನ್ನು ಪಡೆದು, ಚೆಕ್ ಮಾಡಿ ಉದ್ಯೋಗಕ್ಕೆ ವಿದೇಶಕ್ಕೆ ಹೋಗುವುದು ಉತ್ತಮ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 06 ಜನರನ್ನು ವಿದೇಶದಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಅವರನ್ನು ಸೈಬರ್ ಸ್ಲೇವರಿ ಆಗಿ ಕೆಲಸ ಮಾಡಿಸುತ್ತಿದ್ದವರನ್ನು ರಕ್ಷಿಸಲಾಗಿದ್ದು, ಅವರು ನೀಡದ ದೂರಿನ ಮೇಲೆ ಪ್ರಕರಣ ಕೂಡ ದಾಖಲಾಗಿರುತ್ತದೆ.
ಪಿರ್ಯಾದಿದಾರರಿಗೆ ಕಳೆದುಕೊಂಡ ಹಣವು ಮರಳಿ ಸಿಗದೇ ಇರುವುದಕ್ಕೆ ಕಾರಣಗಳು.
ವಂಚಕರು ವಂಚನೆಯಾದ ಹಣದಲ್ಲಿ ಆನ್ ಲೈನ್ ಮೂಲಕ USDT ಗಳನ್ನು ಖರೀದಿ ಮಾಡಿಕೊಂಡು ಅದೇ ದಿನ ಬೇರೆ ದೇಶಗಳಿಗೆ ಕಳುಹಿಸುವುದರಿಂದ ವಿದೇಶಕ್ಕೆ ಹಣ ಹೋಗುತ್ತದೆ.
ವಂಚನೆಗೊಳಗಾದ ದೂರುದಾರರು ಅದೇ ದಿನ ದೂರನ್ನು ನೀಡಲು ವಿಳಂಬ ಮಾಡುವುದರಿಂದ ಹಣ ಮರಳಿ ಸಿಗುವುದು ಕಷ್ಟವಾಗುತ್ತದೆ.
ಬ್ಯಾಂಕ್ ಖಾತೆ ನೀಡುವರೇ ಎಚ್ಚರ,
ಕಮೀಷನ್ ಆಸೆಗೆ ಒಳಗಾಗಿ ಬ್ಯಾಂಕ್ ಖಾತೆಯನ್ನು ವಂಚಕರಿಗೆ ನೀಡಿದಲ್ಲಿ ಖಾತೆದಾರರು ಸಹ ಆರೋಪಿತರಾಗುತ್ತಾರೆ. ಮುಖ್ಯ ವಂಚಕರು ವಿದೇಶದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದರಿಂದ ಪ್ರಮುಖ ಆರೋಪಿಗಿಂತ ಮೊದಲೇ ಕಮಿಷನ್ ಆಸೆಗೆ ಒಳಗಾದವರು ಕಾನೂನು ಪ್ರಕಾರ ಶೀಘ್ರವಾಗಿ ದಸ್ತಗಿರಿಯಾಗುತ್ತಾರೆ.
ಹೂಡಿಕೆದಾರರೇ ಎಚ್ಚರ
ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಕರ್ಷಿತ ಜಾಹೀರಾತುಗಳನ್ನು ನೋಡಿ, ಹೆಚ್ಚಿನ ಲಾಭಾಂಶದ ವಂಚನೆಗೆ ಒಳಗಾಗಬೇಡಿ. ಹಾಗೂ ಹೂಡಿಕೆಯನ್ನು ಮಾಡುವಾಗ ನಕಲಿ ಸೆಬಿ ಸರ್ಟಿಪೀಕೇಟ್, ನಕಲಿ ಡಿಮೇಟ್ ಖಾತೆಗಳನ್ನು ನೋಡಿ ಮೋಸ ಹೋಗಬೇಡಿ.
ಹೆಚ್ಚು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ ಹೆಚ್ಚಿನ ವಿದ್ಯಾವಂತರು ಇತ್ತಿಚೀನ ದಿನಗಳಲ್ಲಿ ಆನ್ ಲೈನ್ ಹೂಡಿಕೆ, ಹಣ ದ್ವಿಗುಣ, ಟ್ರೇಡಿಂಗ್ ಹೂಡಿಕೆಯಲ್ಲಿ ವಿಚಾರಿಸದೇ ವಂಚಕರ ಮೋಸದ ಬಲೆಗೆ ಬಿದ್ದು, ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದೆ.
ಹೂಡಿಕೆ ಮಾಡಬೇಕಾದರೆ SEBI Registration ಆಗಿರುವ ಸಂಸ್ಥೆ ಅಥವಾ ಬ್ರೋಕರ್ ರವರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮಾಡಿಸುವುದು. ಹೆಚ್ಚಿನ ಲಾಭಾಂಶ ಭರವಸೆಯ ಹೂಡಿಕೆ ಬಗ್ಗೆ ಅತೀ ಹೆಚ್ಚಿನ ಕಾಳಜಿ ಅವಶ್ಯವಾಗಿದೆ.
Belthangady
ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ: ಬೆಳ್ತಂಗಡಿಯಲ್ಲಿ ಸಿಐಡಿ ತನಿಖೆ ಆರಂಭ
ಬೆಳ್ತಂಗಡಿ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಅತ್ಯಾಚಾರ ಹಾಗೂ ಸುಲಿಗೆ ಆರೋಪದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಚುರುಕುಗೊಳಿಸಿದೆ. ಇಂದು ಸಿಐಡಿ ಅಧಿಕಾರಿಗಳ ತಂಡ ಬೆಳ್ತಂಗಡಿಗೆ ಆಗಮಿಸಿ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸುವ ಮೂಲಕ ಅಧಿಕೃತವಾಗಿ ತನಿಖೆ ಆರಂಭಿಸಿದೆ.
ಪ್ರಕರಣದ ಹಿನ್ನೆಲೆ:
ಬೆಳ್ತಂಗಡಿ ತಾಲೂಕಿನ ಕಾಲೇಜೊಂದರ ಪ್ರಾಂಶುಪಾಲರೊಬ್ಬರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2020 ರಿಂದ 2023ರ ಅವಧಿಯಲ್ಲಿ ಜಮೀನು ವಿವಾದವೊಂದರ ವಿಚಾರಣೆಯ ನೆಪದಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಕೇಸ್ ಮರುಚಾಲನೆ ಮಾಡುವ ಬೆದರಿಕೆ ಹಾಕಿ ಸುಮಾರು 16 ಲಕ್ಷ ರೂ. ನಗದು, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮನೆ ನಿರ್ಮಾಣಕ್ಕಾಗಿ ತೇಗದ ಮರದ ದಿಮ್ಮಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.
ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸೂಚನೆಯಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಸಂದೇಶ್ ಪಿ.ಜಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 25ರಂದು ವೇಣೂರು ಪೊಲೀಸ್ ಠಾಣೆಯಿಂದ ಬೆಂಗಳೂರು ಸಿಐಡಿ ಕಚೇರಿಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಿದ್ದು, ಸಿಐಡಿ ಡಿವೈಎಸ್‌ಪಿ ನೇತೃತ್ವದ ತಂಡವು ಮಾರ್ಚ್ 31ರಂದು ಸಂಜೆ ನಾರಾವಿ ಐಬಿಗೆ ಆಗಮಿಸಿದೆ. ಇಂದು ವೇಣೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸಿಐಡಿ ತಂಡವು ಸಂತ್ರಸ್ತೆಯ ಹೇಳಿಕೆ ಪಡೆಯುವುದು, ಸ್ಥಳಗಳ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಮೇಲೆ ತನಿಖೆ ಕೈಗೆತ್ತಿಕೊಳ್ಳಲಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಸಂತ್ರಸ್ತರು ಇದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಿದೆ.
accident
ಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ತೆರೆದು ರಸ್ತೆಗೆ ಬಿದ್ದ ಸಹೋದರಿಯರು; ಚಾಲಕ, ನಿರ್ವಾಹಕನ ವಿರುದ್ಧ ಕೇಸ್ ದಾಖಲು
ಬೆಳ್ತಂಗಡಿ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಬಾಗಿಲು ಆಕಸ್ಮಿಕವಾಗಿ ತೆರೆದ ಪರಿಣಾಮ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಸಹೋದರಿಯರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಮಾರ್ಚ್ 31ರಂದು ಬೆಳಗ್ಗೆ ಕಳಿಯ ಗ್ರಾಮದ ನಿವಾಸಿಗಳಾದ ಚರಿಷ್ಮಾ (17) ಮತ್ತು ಚದ್ಮಕಾ (15) ಎಂಬ ಸಹೋದರಿಯರು ಎಂದಿನಂತೆ ಕಾಲೇಜಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಕಳಿಯದಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿತ್ತು. ಗೇರುಕಟ್ಟೆ ಸಮೀಪ ತಲುಪುತ್ತಿದ್ದಂತೆ ಬಸ್ಸಿನ ಬಾಗಿಲು ದಿಢೀರನೆ ತೆರೆದುಕೊಂಡಿದ್ದು, ಬಾಗಿಲ ಬಳಿಯಿದ್ದ ಇಬ್ಬರೂ ವಿದ್ಯಾರ್ಥಿನಿಯರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.
ರಸ್ತೆಗೆ ಬಿದ್ದ ಪರಿಣಾಮ ಇಬ್ಬರೂ ಸಹೋದರಿಯರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಜಾಗರೂಕತೆಯ ಆರೋಪ: ಬಸ್ ಚಾಲಕ ದಯಾನಂದ ಅವರು ವಾಹನವನ್ನು ಅತ್ಯಂತ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಮತ್ತು ನಿರ್ವಾಹಕ ಕಾಶಿನಾಥ್ ಅವರು ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಕರ್ತವ್ಯ ಲೋಪವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಕ್ಷನ್ 281: ಅಜಾಗರೂಕ ಚಾಲನೆ. ಸೆಕ್ಷನ್ 125: ಜೀವಕ್ಕೆ ಅಪಾಯ ತರುವಂತಹ ನಿರ್ಲಕ್ಷ್ಯದ ಕೃತ್ಯ.ಸೆಕ್ಷನ್ 125(a): ನಿರ್ಲಕ್ಷ್ಯದಿಂದ ಗಾಯ ಉಂಟುಮಾಡುವುದು.ಸೆಕ್ಷನ್‌ಗಳ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ:
ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಕೊರತೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
crime
ಪೊಲೀಸ್ ಭೇಟೆ: ದೇವಸ್ಥಾನದ ಕಳ್ಳ ಹಾಗೂ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಮತ್ತು ಉರ್ವಾ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೇವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಅಂತರರಾಜ್ಯ ಕಳ್ಳ ಹಾಗೂ ಕಳೆದ 9 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಂಜಾರು ದೇವಸ್ಥಾನದ ಹುಂಡಿ ಕಳವು: ತಮಿಳುನಾಡು ಮೂಲದ ಆರೋಪಿ ಅರೆಸ್ಟ್
ಮಾರ್ಚ್ 3ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಬಾಗಿಲು ಮುರಿದು, ಮೂರು ಕಾಣಿಕೆ ಹುಂಡಿಗಳಿಂದ ಸುಮಾರು ರೂ. 25,000/- ಹಣವನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಬಜಪೆ ಪೊಲೀಸರು ಮಾರ್ಚ್ 31ರಂದು ಅಂತರರಾಜ್ಯ ಕಳ್ಳ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25) ಎಂಬಾತನನ್ನು ಬಂಧಿಸಿದ್ದಾರೆ.
ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿಯಾದ ಈತ, ರೈಲಿನಲ್ಲಿ ಬಂದು ಕಳ್ಳತನ ನಡೆಸಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದ. ಈತ ಉಡುಪಿಯ ಬ್ರಹ್ಮಾವರ ಠಾಣೆಯ ಕಳವು ಪ್ರಕರಣ ಹಾಗೂ ಪಣಂಬೂರು ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲೂ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಬಜಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ನೂತನ್, ರಾಜೇಶ್ ಮತ್ತು ಪ್ರಕಾಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.
9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮುಂಬೈನಲ್ಲಿ ಸೆರೆ
ಮತ್ತೊಂದು ಪ್ರಕರಣದಲ್ಲಿ, ದರೋಡೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ (LPC) ವಾರಂಟ್ ಆರೋಪಿಯನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಶೋಕ ನಗರದ ನಿವಾಸಿ ಸುಹಾನ್ @ ಸೋನು (33) ಬಂಧಿತ ಆರೋಪಿ.
ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಮಾರ್ಚ್ 29ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಆರೋಪಿಯನ್ನು ಉರ್ವಾ ಎಎಸ್ಐ ಲಕ್ಷ್ಮಣ್ ಮತ್ತು ತಂಡ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ಈತನ ಮೇಲೆ ಉರ್ವಾ ಮತ್ತು ಮಂಗಳೂರು ಉತ್ತರ ಠಾಣೆಗಳಲ್ಲಿ ದರೋಡೆ ಸಂಚು ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಪ್ರಕರಣಗಳು ದಾಖಲಾಗಿವೆ.
ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಗಳೂರು ನಗರ ಪೊಲೀಸರ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
