Connect with us

Bantawala

ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ಮಾಲ್ ಬೆಳಕಿಗೆ… ಇದು ಪಂಚಲಿಂಗೇಶ್ವರನ ಮಹಿಮೆ

Published

on

ವಿಟ್ಲ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯಲ್ಲಿ ಸಂತೆ ವ್ಯಾಪಾರದ ಗುತ್ತಿಗೆ ಪಡೆದ ವ್ಯಕ್ತಿಯೋರ್ವ ಸಂತೆ ವ್ಯಾಪಾರಸ್ಥರಿಂದ ಬೇಕಾಬಿಟ್ಟಿ ಬಾಡಿಗೆ ಕಿತ್ತುಕೊಂಡು ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡಿ ಕೈತೊಳೆದುಕೊಂಡ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ನ್ಯಾಯಕ್ಕಾಗಿ ಬಡ ವ್ಯಾಪಾರಸ್ಥರು ಪಂಚಾಯತಿನ ಮೆಟ್ಟಿಲೇರಿದ್ದಾರೆ.
ಸಂತೆ ವ್ಯಾಪಾರದಲ್ಲಿ ಮಿತಿಮೀರಿದ ಬ್ರೋಕರ್‌ಗಳ ಹಾವಳಿಯಿಂದ ಬಡ ವ್ಯಾಪಾರಸ್ಥರಿಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಮಹೇಶ್‌ದಾಸ್ ಎಂಬಾತನೇ ಇದೀಗ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗುತ್ತಿಗೆಯನ್ನು ವಹಿಸಿಕೊಂಡು ಬಡ ವ್ಯಾಪಾರಸ್ಥರಲ್ಲಿ ಒಂದಕ್ಕೆ ಎರಡುಪಟ್ಟು ಬಾಡಿಗೆ ವಸೂಲಾತಿ ಮಾಡಿಕೊಂಡು ಮೋಸ ಎಸಗಿದ ಸಂತೆ ವ್ಯಾಪಾರಿಗಳ ಅಧ್ಯಕ್ಷ ಎಂದು ತಿಳಿದುಬಂದಿದೆ.


ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಎಂಬ ಸಂತೆ ವ್ಯಾಪಾರಸ್ಥರು ಪಂಚಾಯತ್‌ಗೆ ದೂರು ನೀಡಿದವರಾಗಿದ್ದು, ‌ ತನ್ನ ವ್ಯಾಪಾರದ ಬಾಬ್ತು ಪಂಚಾಯತ್‌ ನಿಯಮಗಳನ್ನು ಮೀರಿ ಗುತ್ತಿಗೆದಾರ ಅಧಿಕ ಬಾಡಿಗೆಯನ್ನು ತನ್ನಿಂದ ವಸೂಲಾತಿ ಮಾಡಿರುವನೆಂದು ಆರೋಪಿಸಿದ್ದಾರೆ. ನಾನು, ನನ್ನ ಅಣ್ಣ, ನನ್ನ ಚಿಕ್ಕಮ್ಮ, ಹೇಮಂತ್‌, ಸುಬಾಶ್‌, ಪ್ರಸಾದ್‌ ಮತ್ತು ಅವರ ಪತ್ನಿ ಹಾಗೆ ಸುಮಾರು 10 ಜನ ವ್ಯಾಪಾರಸ್ಥರು ಜ,28ರಂದು ದೂರು ಸಲ್ಲಿಸಿದ್ದೇವೆ ಎಂದು ಲಕ್ಷ್ಮೀಶ ಮಾದ್ಯಮಕ್ಕೆ ತಿಳಿಸಿದ್ದಾರೆ.

ವಿಟ್ಲದ ಜಾತ್ರೆಯ ನೊಂದ ಸಂತೆ ವ್ಯಾಪಾರಸ್ಥ ಲಕ್ಷ್ಮೀಶ ಅವರು ಮಾದ್ಯಮದೊಂದಿಗೆ ಮಾತನಾಡಿದ ಆಡಿಯೋ ಕೇಳಿಸಿಕೊಳ್ಳಿ


ಮಹೇಶ್‌ ವಿರುದ್ಧ ಸಂತೆ ಮಳಿಗೆಗಳ ವಸೂಲಾತಿಯಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ಮತ್ತು ಮೋಸ ಮಾಡಿರುವುದಾಗಿ ವಿಟ್ಲ ಪಟ್ಟಣ ಪಂಚಾಯತ್‌ಗೆ ಲಿಖಿತ ದೂರು ನೀಡಿದ್ದು, ಒಟ್ಟು 65 ಅಂಗಡಿಮಳಿಗೆಗಳ ಲೆಕ್ಕ ಸಿಕ್ಕಿದ್ದು. ಈ ಪೈಕಿ ಇನ್ನು ಹೆಚ್ಚುವರಿ 25 ಅಂಗಡಿಗಳ ಹಣ ಬರಬೇಕಾಗಿದೆ ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದಿರುವ ಪಂಚಾಯತ್‌ ಖಂಡಿತಾ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಪಂಚಾಯತ್‌ ಟೆಂಡರ್‌ ಪ್ರಕಾರ ಜಾತ್ರಾ ಸಂತೆಗಾಗಿ 10ಅಡಿ ಜಾಗಕ್ಕೆ 10ಸಾವಿರ ಬಾಡಿಗೆ, 1800 ರೂ. ಜಿಎಸ್‌ಟಿ ಹಾಗೂ ಆತನೇ ಟೆಂಡರ್‌ ಪ್ರಕ್ರಿಯೆಯಲ್ಲಿ ನಿಗದಿ ಪಡಿಸಿದ 1900 ರೂ. ಸೇರಿ ಒಟ್ಟು 13700 ರೂ. ಆಗಿರುತ್ತದೆ. ಆದರೆ ಈತ ಬಡ ವ್ಯಾಪಾರಸ್ಥರಿಂದ 20 ಅಡಿ ಜಾಗಕ್ಕೆ 27400 ರೂ. ಪಡೆದುಕೊಳ್ಳಬೇಕಾದ ಬದಲು 35000.00 ಪಡೆದುಕೊಂಡಿರುತ್ತಾನೆ. ಹಾಗೆಯೇ 10 ಫೀಟ್‌ ಅಂಗಡಿಗೆ 15 ಸಾವಿರ ಮತ್ತು 15 ಫೀಟ್‌ ನ ಅಂಗಡಿಗೆ 10 ಫೀಟ್‌ ಸ್ಥಳದ ರಶೀದಿ ನೀಡಿ 18000/20000 ಹಣವನ್ನು ಕೊಡುವಂತೆ ದಮ್ಕಿ ಹಾಕಿ ಪಡೆದಿರುವುದಾಗಿದೆ ಎಂದು ಆರೋಪಿಸಿದ್ದಾರೆ.
ದೂರುದಾರ ಲಕ್ಷ್ಮೀಶ್‌ ಮತ್ತು ಆತನ ಸಹೋದರ ನವನೀತ್‌ ಸಂತೆ ವ್ಯಾಪಾರಸ್ಥರಾಗಿದ್ದು, ಅವರು ಪಡೆದುಕೊಂಡ 20 ಫೀಟ್‌ ಅಂಗಡಿಯ ಸ್ಥಳಾವಕಾಶಕ್ಕೆ 27400 ಆಗಿದ್ದು, 35000 ರೂ. ಪಡೆದುಕೊಂಡು ಮೋಸ ಮಾಡಿರುವುದಾಗಿದೆ. ಈ ಮೊದಲು ಮದ್ಯವತಿಗಳ ವಿರುದ್ಧ ಹೋರಾಡುತಿದ್ದ ಮಹೇಶ್‌ ಈಗ ಸ್ವತಃ ತಾನೇ ಬ್ರೋಕರ್ ಆಗಿ ಧಮ್ಕಿ ಹಾಕಿದ ಘಟನೆ ನಡೆದಿದ್ದು ಬಡ ವ್ಯಾಪಾರಸ್ಥರಾದ ನಮಗೆ ಮೋಸ ಆಗಿದೆ ಎಂದು ತಿಳಿಸಿದ್ದಾರೆ.
40 ಅಂಗಡಿಗಳ ಲೆಕ್ಕಾಚಾರದಲ್ಲಿ ಪಂಚಾಯತ್‌ಗೆ ಹಣ ಪಾವತಿಸಿದ್ದು, ಪಂಚಾಯತ್‌ ಸಾರ್ವಜನಿಕ ಭಕ್ತಾದಿಗಳ ಮತ್ತು ಮಾದ್ಯಮದವರ ಒತ್ತಡಕ್ಕೆ ಈಗಾಗಲೇ ಸಂತೆ ಅಂಗಡಿಗಳನ್ನು ಎಣಿಸಿ 65 ಎಂದು ಲೆಕ್ಕ ಮಾಡಿದ್ದು, ಹೆಚ್ಚುವರಿ ಬಾಡಿಗೆ ಅಂಗಡಿಗಳ ಹಣವನ್ನು ಗುತ್ತಿಗೆದಾರನಿಂದ ವಸೂಲಾತಿ ಮಾಡಿ ಕೊಳ್ಳುತ್ತೇವೆ ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿಗಳವರು ಮಾದ್ಯಮಕ್ಕೆ ತಿಳಿಸಿದ್ದಾರೆ.
ಸಂತೆ ವ್ಯಾಪಾರಸ್ಥರ ಅಧ್ಯಕ್ಷ ,ಹಿಂದೂ ಜಾತ್ರೆ ವ್ಯಾಪಾರಸ್ಥರ ಅಧ್ಯಕ್ಷ ,ಜಿಲ್ಲಾ ಅಧ್ಯಕ್ಷ ಎಂದೆಲ್ಲಾ ಹೇಳಿಕೊಳ್ಳುತ್ತಿರುವ ಮಹೇಶ್‌ ವಿಟ್ಲ ಜಾತ್ರೆಯ ಸುಸಂದರ್ಭದಲ್ಲಿಯೇ ಜನಪ್ರತಿನಿಧಿಗಳ ಮನವೊಲಿಸಲು ಸಂತೆ ವ್ಯಾಪಾರದ ಹೆಸರಿನಲ್ಲಿ ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡುವಾಗಲೇ ಸಂತೆ ಗೋಲ್‌ ಮಾಲ್‌ ಬಯಲಾಗಿದೆ.

ಬಡ ವ್ಯಾಪಾರಸ್ಥರಿಗೆ ಬತ್ತಿಯಿಟ್ಟು, ಪಂಚಾಯತನ್ನು ಏಮಾರಿಸಿ ಅಧಿಕಾರಿಗಳನ್ನು ತನ್ನ ಕಪಿಮುಷ್ಠಿಯೊಳಗೆ ಇರಿಸಿಕೊಳ್ಳುವ ಗುತ್ತಿಗೆದಾರರೇ ಅಥವಾ ಜಾತ್ರೆ ಹೆಸರಲ್ಲಿ ಗುಳುಂ ಮಾಡುವ ಭಕ್ತ ವೇಷದಾರಿಗಳೇ ಕಾಲಾವಧಿಗೆ ನಡೆದುಕೊಂಡು ಬಂದಿರುವ ಜಾತ್ರೋತ್ಸವ ಶ್ರದ್ಧಾ ಕೇಂದ್ರಗಳು ದೇವರ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳಲು ಇರುವ ಧಾರ್ಮಿಕ ಜೂಜು ಕೇಂದ್ರವಲ್ಲ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಭಕ್ತಾದಿಗಳಿಗೆ ಸಂತೆ ಸಾಮಾನುಗಳ ಅಧಿಕ ಹೊರೆ ಬೀಳಬಾರದೆಂದು ಪಂಚಾಯತ್‌ ಅತೀ ಕಡಿಮೆ ಬಾಡಿಗೆಗೆ ಅಂಗಡಿ ಮಳಿಗೆಗಳನ್ನು ನೀಡಿರುವಾಗ ಬಡ ವ್ಯಾಪಾರಸ್ಥರ ಮೇಲೆ ಅಪ್ರಯೋಜಿತವಾಗಿ ಹೇರುವ ಬಾಡಿಗೆ ದರಗಳು ನೇರವಾಗಿ ಭಕ್ತರ ಜೇಬಿಗೆ ಬೀಳುತ್ತದೆ ಎಂಬುವುದು ಸುಳ್ಳಲ್ಲ.
ನಾಳೆಯೂ ಪಂಚಾಯತ್‌ಗೆ ಇನ್ನೂ 3-4 ಜನ ವ್ಯಾಪಾರಸ್ಥರು ಬಂದು ದೂರು ನೀಡಲಿದ್ದೇವೆ ಎಂದು ಲಕ್ಷ್ಮೀಶ ತಿಳಿಸಿದ್ದಾರೆ. ಕೊನೆಗೂ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ ಮಾಲ್‌ ಬಯಲಿಗೆ ಬಂದೇ ಬಿಟ್ಟಿದೆ. ಎಲ್ಲವೂ ಪಂಚಲಿಂಗೇಶ್ವರನ ಮಹಿಮೆ.

Continue Reading
Advertisement

accident

ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ – ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Published

on

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ನಡೆದಿದೆ.

ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ನಿವಾಸಿ ಭಾರತಿ (48) ಅಪಘಾತಕ್ಕೀಡಾದ ಮಹಿಳೆ. ಇವರು ತನ್ನ ಮಗಳು ದೀಪ್ತಿ ಅವರೊಂದಿಗೆ ಸಜಿಪಮುನ್ನೂರಿನ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ಬಂದಿದ್ದರು. ಕಾಣಿಕೆ ಮುಗಿಸಿ ವಾಪಸ್ಸಾಗುವಾಗ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಡಿಕ್ಕಿಯ ರಭಸಕ್ಕೆ ಭಾರತಿ ಅವರು ಗಾಳಿಯಲ್ಲಿ ಹಾರಿ ರಸ್ತೆಯ ಬದಿಗೆ ಬಿದ್ದಿದ್ದಾರೆ. ಅಪಘಾತದ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಭಾರತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

award

ಮಂಗಳೂರು ವಿಶ್ವವಿದ್ಯಾಲಯ: ಸುಶ್ಮಿತ ಸಿ.ಎಚ್. ಅವರಿಗೆ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪ್ರದಾನ

Published

on

ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಶ್ಮಿತ ಸಿ.ಎಚ್. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

ಅವರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ “Antidiabetic activities of Syzygium hemisphericum (Wight) Alston and Syzygium kanarense (Talbot) Raizada” (ಸಿಜಿಜಿಯಂ ಹೆಮಿಸ್ಫೆರಿಕಂ ಮತ್ತು ಸಿಜಿಜಿಯಂ ಕೆನರೆನ್ಸ್ ಸಸ್ಯಗಳ ಮಧುಮೇಹ ವಿರೋಧಿ ಚಟುವಟಿಕೆಗಳು) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದರು.

2025ರ ಅಕ್ಟೋಬರ್‌ನಲ್ಲಿ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಇವರಿಗೆ, 2026ರ ಮಾರ್ಚ್ 28ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 44ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಯಿತು.

ಡಾ. ಸುಶ್ಮಿತ ಅವರು ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಣಿಯೂರು ಸೂರ್ಯನಾರಾಯಣ ಭಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲದ ಉದ್ಯೋಗಿ ಶ್ರೀಮತಿ ಆಶಾಪಾರ್ವತಿ ದಂಪತಿಯ ಪುತ್ರಿ. ಇವರು ಯುವ ಉದ್ಯಮಿ ಶ್ರೀ ಕೃಷ್ಣ ವಿಕಾಸ್ ಅವರ ಪತ್ನಿಯಾಗಿದ್ದಾರೆ.

ತಮ್ಮ ಈ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ-ತಾಯಿ, ಸಹೋದರಿ ಹಾಗೂ ಪತಿಯವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಡಾ. ಸುಶ್ಮಿತ ಅವರು ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Continue Reading

Bantawala

ಘನತ್ಯಾಜ್ಯ ವಿಲೇವಾರಿಯಲ್ಲಿ ಗೋಲ್ಮಾಲ್..ಸ್ಮಶಾನದಂತಾದ ವಿಟ್ಲದ ಘನತ್ಯಾಜ್ಯ ಘಟಕ..ಬೆಂಕಿ ಇಟ್ಟು ಸುಡುವ ಮೂಲಕ ಜನರ ಆರೋಗ್ಯದಲ್ಲಿ ಚೆಲ್ಲಾಟ..ಸಾಮಾಜಿಕ ಹೋರಾಟಗಾರನಿಂದ ಪೊಲೀಸ್ ಠಾಣೆಗೆ ದೂರು..

Published

on

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ವಿಲೇವಾರಿ ಮಾಡಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿ, ಸಿಬ್ಬಂದಿಗಳು ತ್ಯಾಜ್ಯಗಳ ರಾಶಿಗೆ ಘಟಕದ ಆವರಣದಲ್ಲೇ ಬೆಂಕಿಹಾಕಿ ಸುಡುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.

ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ಕಳೆದ ಮೂರು ತಿಂಗಳಿಂದ ಘನತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸಾಮಾಜಿಕ ಹೋರಾಟಗಾರ ಧನಂಜಯ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಸೇರಿದಂತೆ ಇತರ ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿತ್ತು. ಅದಕ್ಕಾಗಿಯೇ ಅಂಗಡಿ ಮಾಲಿಕರಿಂದ, ಜನ ಸಾಮಾನ್ಯರಿಂದ ಹಣ ವಸೂಲಿ ಕೂಡಾ ಮಾಡುತ್ತಿದ್ದಾರೆ. ಆದರೆ ಮೂಟೆ ಮೂಟೆ ಘನತ್ಯಾಜ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಆವರಣದಲ್ಲೇ ಸ್ಮಶಾನದಲ್ಲಿ ಹೆಣಗಳನ್ನು ಸುಡುವ ರೀತಿಯಲ್ಲಿ ಸುಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಏಳುತ್ತಿರುವ ವಿಷಕಾರಿ ಹೊಗೆಯು ಪರಿಸರಕ್ಕೆ, ಪರಿಸರ ನಿವಾಸಿಗಳ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ, ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ವೈಜ್ಞಾನಿಕವಾಗಿ ಸಂಶೋಧನೆಯಲ್ಲಿ ಸಾಬೀತಾಗಿದೆ.

ಈ ಅಕ್ರಮ ಚಟುವಟಿಕೆಯು ಪರಿಸರ ಸಂರಕ್ಷಣಾ ಕಾಯ್ದೆ 1986 (Environment Protection Act 1986), ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 (Air Pollution Act 1981) ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016 ರ (Plastic Waste Management Rules 2016) ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಘನತ್ಯಾಜ್ಯ ವಿಲೇವಾರಿಗೆ ಬಳಸದೆ ದುರ್ಬಳಕೆ ಮಾಡಲಾಗುತ್ತಿದೆ ಪಟ್ಟಣ ಪಂಚಾಯತಿನಲ್ಲಿ ಪ್ಲಾಸ್ಟಿಕ್‌ ವಿಲೇವಾರಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದರೂ ಅದನ್ನು ಸರಿಯಾಗಿ ಬಳಕೆ ಮಾಡದೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಆರೋಗ್ಯಾಧಿಕಾರಿ, ಸುಪರ್‌ವೈಸರ್‌ ಮತ್ತು ಕೌನ್ಸಿಲರ್‌ ಇವರೆಲ್ಲರೂ ಸೇರಿ ಸರಕಾರದಿಂದ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಪ್ಲಾಸ್ಟಿಕನ್ನು ಸುಟ್ಟು ಶಿಕ್ಷಾರ್ಹ ಅಪರಾಧವನ್ನೆಸಗುತ್ತಿದ್ದಾರೆ ಎಂದು ದೂರುದಾರರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಅಕ್ರಮ ಹಾಗೂ ಅವೈಜ್ಞಾನಿಕ ವಿಲೇವಾರಿಯು ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸದೆ ಗೋಲ್ಮಾಲ್ ನಡೆಸುವ ಮೂಲಕ ಸ್ಪಷ್ಟವಾಗಿ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಪ್ರಶ್ನಿಸಿದರೆ ಸಂಬಂಧಿಸಿದ ಅಧಿಕಾರಿ ಚೇತನ್ ಎಂಬವರು ಬೇಜವಾಬ್ದಾರಿ ಹಾಗೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ದೂರುದಾರರು ವಿವರಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಸದ್ಯ ವಿಟ್ಲ ಪೊಲೀಸರು ಈ ದೂರಿನ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Trending

Copyright © 2025 Deevatige