Connect with us

health

ಬೆಳ್ಳಾರೆಯುವ ರಕ್ತ ನಿಧಿ ಉದ್ಘಾಟನೆ – ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ

Published

on

ಸುಳ್ಯ | ಬೆಳ್ಳಾರೆ:
“ರಕ್ತದಾನ ಕೇವಲ ವೈದ್ಯಕೀಯ ಸೇವೆಯಲ್ಲ, ಅದು ಮಾನವೀಯ ಸಂಬಂಧಗಳನ್ನು ಬೆಸೆಯುವ ಮಹಾ ಸೇತುವೆ” ಎಂಬ ಸಂದೇಶದೊಂದಿಗೆ ಯುವ ರಕ್ತ ನಿಧಿ – ಬೆಳ್ಳಾರೆ ವತಿಯಿಂದ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ದಿನಾಂಕ 11-01-2026, ಆದಿತ್ಯವಾರ ಬೆಳ್ಳಾರೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.


ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಡೆದ ಶಿಬಿರಕ್ಕೆ ಸುಮಾರು 120ಕ್ಕೂ ಅಧಿಕ ಯುವಕರು ರಕ್ತದಾನ ಮಾಡುವ ಮೂಲಕ ಅಪಾರ ಸ್ಪಂದನೆ ವ್ಯಕ್ತಪಡಿಸಿದರು. ಯುವಕರು, ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾನವೀಯತೆಗೆ ಜೀವ ತುಂಬಿದರು.
ಪ್ರಾಸ್ತಾವಿಕ ಭಾಷಣದಲ್ಲಿ ಯುವ ರಕ್ತ ನಿಧಿಯ ಮುಖ್ಯಸ್ಥರಾದ ಆರ್.ಕೆ. ಭಟ್ (ಕುರುಂಬುಡೆಯಲು) ಅವರು ಯುವ ರಕ್ತ ನಿಧಿಯ ಉದ್ದೇಶ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು ಶ್ರೀ ಭಾಸ್ಕರ್ ರಾವ್ IPS, ಉಪಾಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಕರ್ನಾಟಕ ಅವರು ಉದ್ಘಾಟಿಸಿ ಮಾತನಾಡಿ, “ಗ್ರಾಮ ಮಟ್ಟದಲ್ಲಿ ಬಲಿಷ್ಠ ರಕ್ತದಾನಿಗಳ ಜಾಲ ನಿರ್ಮಾಣವಾಗಬೇಕಾದ ಅಗತ್ಯವಿದೆ. ಇಂತಹ ಯುವ ರಕ್ತ ನಿಧಿಗಳು ಸಮಾಜದ ಆರೋಗ್ಯದ ರಕ್ಷಕರಾಗಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಅತಿಥಿಯಾಗಿ ಭಾಗವಹಿಸಿದ್ದ ಡಾ. ಮುರಳಿ ಮೋಹನ್ ಚೂಂತಾರು, ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಕರ್ನಾಟಕ ಅವರು, “ರಕ್ತದಾನವು ಧರ್ಮ, ಜಾತಿ, ವರ್ಗಗಳ ಗಡಿಯನ್ನು ಮೀರಿ ಮನುಷ್ಯನನ್ನು ಮನುಷ್ಯನೊಂದಿಗೆ ಕಟ್ಟಿ ಹಾಕುವ ಮಹತ್ವದ ಸೇವೆ” ಎಂದರು.
ಡಾ. ಶರತ್ ಕುಮಾರ್ ರಾವ್ ಜೆ., ಹಿರಿಯ ರೋಗಶಾಸ್ತ್ರಜ್ಞರು, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಅವರು ರಕ್ತದಾನದ ಆರೋಗ್ಯ ಮಹತ್ವ, ಭದ್ರತೆ ಹಾಗೂ ಸಮಾಜಕ್ಕೆ ಅದರ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಧಾಕರ ರೈ ಪಿ.ಬಿ., ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಸುಳ್ಯ ತಾಲೂಕು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ನಮಿತಾ ರೈ, ಅಧ್ಯಕ್ಷರು, ಗ್ರಾಮ ಪಂಚಾಯತ್ – ಬೆಳ್ಳಾರೆ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ಮೂವರು ವಿಶೇಷ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.


ಸನ್ಮಾನಿತರಾದವರು:
ಡಾ. ಮುರಳಿ ಮೋಹನ್ ಚೂಂತಾರು, ಪಿ.ಬಿ. ಸುಧಾಕರ ರೈ ಹಾಗೂ ಪ್ರತೀಕ್ ಬೆಳ್ಳಾರೆ.
ಶಿಬಿರದ ವಿಶೇಷತೆಯೆಂದರೆ, ಪ್ರಥಮ ಬಾರಿಗೆ ರಕ್ತದಾನ ಮಾಡಿದ ಯುವಕರನ್ನು ವಿಶೇಷವಾಗಿ ಗುರುತಿಸಿ ಪ್ರೋತ್ಸಾಹಿಸಿದುದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವರನ್ನು ರಕ್ತದಾನಕ್ಕೆ ಪ್ರೇರೇಪಿಸುವಂತಾಯಿತು.
ಗ್ರಾಮ ಪಂಚಾಯತ್, ವಿವಿಧ ಸಂಘ–ಸಂಸ್ಥೆಗಳು, ಸಾಮಾಜಿಕ, ಧಾರ್ಮಿಕ ಹಾಗೂ ವೃತ್ತಿಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿ,
“ನಮ್ಮ ಗ್ರಾಮದ ರಕ್ತದ ಅವಶ್ಯಕತೆ ನಮ್ಮಿಂದಲೇ ಪೂರೈಕೆಯಾಗಲಿ” ಎಂಬ ಆಶಯವನ್ನು ಸಾಕಾರಗೊಳಿಸಿದವು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಸುರೇಶ್ ಕುಮಾರ್ ಶೆಟ್ಟಿ (ಪನ್ನೆ), ಶ್ರೀರಾಮ ಪಾಟಜೆ, ಪ್ರಸಾದ್ ಸೇಮಿತ ಬೆಳ್ಳಾರೆ, ದಿಲೀಪ್ ಗಟ್ಟಿಗಾರು, ಶೈಲೇಶ್ ನೆಟ್ಟಾರು, ವಿನಯ್ ಭಾರದ್ವಾಜ್, ಸುಬ್ರಹ್ಮಣ್ಯ ಜೋಶಿ, ಆರಿಫ್ ಬೆಳ್ಳಾರೆ, ಗಿರಿಧರ ರೈ ಪನ್ನೆ, ಭಾಸ್ಕರ ನೆಟ್ಟಾರು, ನವೀನ್ ರೈ ತಂಬಿನಮಕ್ಕಿ, ಚಂದ್ರಶೇಖರ ರೈ ಬಜನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಬೆಳ್ಳಾರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾದ ಪದ್ಮನಾಭ ಶೆಟ್ಟಿ ಪರುವಾಜೆ, ವನಿತಾ ಸಾರಕೆರೆ, ನಾರಾಯಣ ಕೊಂಡೆಪಾಡಿ, ವೇದಿತ್ ರೈ, ವಸಂತ ಪಡಪು, ಲೋಕೇಶ್ ಬೆಳ್ಳಾರೆ ಮೊದಲಾದವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರದೀಪ್ ಕುಮಾರ್ ರೈ ಪನ್ನೆ ಅವರು ನಡೆಸಿದ್ದು, ವಂದನಾರ್ಪಣೆಯನ್ನು ನಿಸ್ಮಿತಾ ಬೆಳ್ಳಾರೆ ಸಲ್ಲಿಸಿದರು.


ಒಟ್ಟಾರೆ, ಈ ಕಾರ್ಯಕ್ರಮವು ರಕ್ತದಾನದ ಮೂಲಕ ಮಾನವೀಯತೆಯನ್ನು ಬಲಪಡಿಸಿ, ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ದಾರಿ ತೋರಿದ ಬೆಳ್ಳಾರೆಯ ಇತಿಹಾಸದ ನೆನಪಿನ ಘಟನೆಯಾಗಿ ಉಳಿಯಿತು.

Continue Reading
Advertisement

community

ಬೆಂಗಳೂರಿನಲ್ಲಿ ಮಾರ್ಚ್ 18ಕ್ಕೆ ಅದ್ದೂರಿ ‘ಮಹಾ ಪ್ರತ್ಯಂಗಿರಾ ಯಾಗ 2026’: ಸಂಕಷ್ಟಗಳ ನಿವಾರಣೆಗೆ ವಿಶೇಷ ಪೂಜೆ

Published

on

ಬೆಂಗಳೂರು: ನಗರದ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ (ರಿ) ಹಾಗೂ ಶ್ರೀ ಪಾಂಡುರಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ‘ಮಹಾ ಪ್ರತ್ಯಂಗಿರಾ ಯಾಗ 2026’ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯುಗಾದಿ ಅಮಾವಾಸ್ಯೆಯ ಪುಣ್ಯದಿನವಾದ ಮಾರ್ಚ್ 18, 2026 ರಂದು ಈ ವಿಶೇಷ ಯಾಗ ನಡೆಯಲಿದೆ.


ವಿಶ್ವದಲ್ಲೇ ಮೊದಲು:
ಡಾ. ಶ್ರೀ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರ ನೇತೃತ್ವದಲ್ಲಿ ಈ ಯಾಗ ನಡೆಯಲಿದ್ದು, ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ 21 ರೀತಿಯ ಕಾಳಿಯರು, 12 ರೀತಿಯ ದುರ್ಗೆಯರು, ದಶಮಹಾವಿದ್ಯೆ ಹಾಗೂ 40 ಪ್ರತ್ಯಂಗಿರಾ ದೇವಿಯರ ಆರಾಧನೆಯೊಂದಿಗೆ ಈ ಮಹಾ ಯಾಗವನ್ನು ನೆರವೇರಿಸಲಾಗುತ್ತಿದೆ.


ಯಾಗದ ಉದ್ದೇಶ:
ಮಾಟ-ಮಂತ್ರ, ಕೆಟ್ಟ ದೃಷ್ಟಿ, ಶತ್ರು ಬಾಧೆ, ಹಣಕಾಸಿನ ತೊಂದರೆ ಹಾಗೂ ಗ್ರಹದೋಷಗಳಿಂದ ಬಳಲುತ್ತಿರುವ ಭಕ್ತರಿಗಾಗಿ ಈ ಯಾಗವನ್ನು ಆಯೋಜಿಸಲಾಗಿದೆ. ಭಕ್ತರು ತಮ್ಮ ಹಸ್ತದಿಂದಲೇ ವಿವಿಧ ಮುದ್ರೆ, ಮಂತ್ರ ಮತ್ತು ತಂತ್ರಗಳ ಮೂಲಕ ಪೂರ್ಣಾಹುತಿ ನೀಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ, ಯುಗಾದಿ ಅಮಾವಾಸ್ಯೆಯ ಪುಣ್ಯದಿನವಾದ 2026ರ ಮಾರ್ಚ್ 18, ಬುಧವಾರದಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ‘ಮಹಾ ಪ್ರತ್ಯಂಗಿರಾ ಯಾಗ’ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಭಕ್ತರು www.sptt.in ವೆಬ್‌ಸೈಟ್ ಸಂಪರ್ಕಿಸಬಹುದು ಅಥವಾ ಪೋಸ್ಟರ್‌ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗಳನ್ನು (92421 30010, 88845 22464) ಸಂಪರ್ಕಿಸಲು ಕೋರಲಾಗಿದೆ.

Continue Reading

court

ನ್ಯಾಯಾಲಯಕ್ಕೇ ‘ಖೆಡ್ಡಾ’ ತೋಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಜನಪ್ರಿಯ ವೈದ್ಯ: ಹಾಸನ ನ್ಯಾಯಾಧೀಶರ ಐತಿಹಾಸಿಕ ಆದೇಶ!

Published

on

ವಿಮೆ ಹಣದ ಆಸೆಗಾಗಿ ಸುಳ್ಳು ದಾಖಲೆ ಸೃಷ್ಟಿಸಿ, ನ್ಯಾಯಾಲಯವನ್ನೇ ದಾರಿ ತಪ್ಪಿಸಲು ಯತ್ನಿಸಿದ ಹಾಸನದ ಪ್ರಖ್ಯಾತ ‘ಜನಪ್ರಿಯ ಆಸ್ಪತ್ರೆ’ಯ ಮಾಲೀಕ ಡಾ. ಅಬ್ದುಲ್ ಬಶೀರ್ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಈಗ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇಶದ ನ್ಯಾಯಾಂಗ ಇತಿಹಾಸದಲ್ಲೇ ಅಪರೂಪ ಎನ್ನಬಹುದಾದ ಈ ಪ್ರಕರಣದಲ್ಲಿ, ಸುಳ್ಳು ಸಾಕ್ಷ್ಯ ನುಡಿದ ವೈದ್ಯರ ವಿರುದ್ಧವೇ ಎಫ್‌ಐಆರ್ (FIR) ದಾಖಲಿಸಲು ಹಾಸನ ನ್ಯಾಯಾಲಯ ಆದೇಶಿಸಿದೆ.

ಹಾಸನ: ಅಪಘಾತ ವಿಮೆ ಹಣ ಪಡೆಯುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಹಾಸನದ ಜನಪ್ರಿಯ ಆಸ್ಪತ್ರೆಯ ಮಾಲೀಕ ಡಾ. ಅಬ್ದುಲ್ ಬಶೀರ್ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗರಾಜ್ ಕೆ. ವಿರುದ್ಧ ಹಾಸನದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಎಫ್‌ಐಆರ್ ದಾಖಲಿಸಲು ಆದೇಶಿಸಿದೆ. ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮತ್ತು ಅಪರೂಪದ ಪ್ರಕರಣವಾಗಿ ಇದು ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಹಿನ್ನೆಲೆ:
2014ರ ಮೇ 26ರಂದು ಮೊಹಮ್ಮದ್ ಗೌಸ್ ಎಂಬಾತ ತನ್ನ ಮನೆಯ ಮಹಡಿಯಿಂದ ಬಿದ್ದು ಗಾಯಗೊಂಡಿದ್ದನು. ಆತನನ್ನು ತಂದೆ ಫಯಾಜ್ ಅವರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಂದು ಕರ್ತವ್ಯದಲ್ಲಿದ್ದ ವೈದ್ಯ ಡಾ. ಪ್ರಕಾಶ್ ಅವರು ರೋಗಿಯನ್ನು ಪರೀಕ್ಷಿಸಿ, ಸಣ್ಣಪುಟ್ಟ ಗಾಯಗಳಾಗಿರುವುದನ್ನು ನಮೂದಿಸಿ ಎಂಎಲ್‌ಸಿ (MLC – Medico Legal Case) ವರದಿ ನೀಡಿದ್ದರು. ಇದು ರೋಗಿಯ ತಂದೆಯ ಸಹಿಯೊಂದಿಗೆ ಸರ್ಕಾರಿ ದಾಖಲೆಯಾಗಿತ್ತು.

ಸುಳ್ಳು ಕಥೆ ಸೃಷ್ಟಿ:
ಆದರೆ, ನಂತರದ ದಿನಗಳಲ್ಲಿ ವಿಮೆ ಹಣ ಪಡೆಯಲು ಈ ಪ್ರಕರಣಕ್ಕೆ ತಿರುವು ನೀಡಲಾಯಿತು. ಮೊಹಮ್ಮದ್ ಗೌಸ್ ತನ್ನ ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಶಾಶ್ವತ ವೈಕಲ್ಯ ಉಂಟಾಗಿದೆ ಮತ್ತು ಚಿಕಿತ್ಸೆಗಾಗಿ 1 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಸುಳ್ಳು ಆರೋಪ ಹೊರಿಸಿ ನ್ಯಾಯಾಲಯದಲ್ಲಿ 10 ಲಕ್ಷ ರೂ. ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದ.

ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಹಾಜರಾದ ‘ಜನಪ್ರಿಯ ಆಸ್ಪತ್ರೆ’ಯ ಮಾಲೀಕ ಡಾ. ಅಬ್ದುಲ್ ಬಶೀರ್, ರೋಗಿ ತನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ರೋಗಿಗೆ ಮಟನ್ ಮಾರ್ಕೆಟ್‌ನಲ್ಲಿ ಬೈಕ್ ಅಪಘಾತವಾಗಿದೆ ಎಂದು ಸುಳ್ಳು ಕಥೆ ಕಟ್ಟಿದ ಅವರು, ಮೊದಲಿನ ಎಂಎಲ್‌ಸಿ ವರದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಹೊಸದಾಗಿ ಎಂಎಲ್‌ಸಿ ಸಂಖ್ಯೆಯನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಧೀಶರ ಕಟು ಟಿಪ್ಪಣಿ:
ಪ್ರಕರಣದ ವಿಚಾರಣೆ ನಡೆಸಿದ ಹಾಸನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಆನಂದ್ ಅವರು, ಅಕ್ರಮವನ್ನು ಕೂಲಂಕಷವಾಗಿ ಪರಿಶೀಲಿಸಿದರು. ವಿಚಾರಣೆ ವೇಳೆ, ಈ ಅಕ್ರಮದಲ್ಲಿ ಹಿಮ್ಸ್ (HIMS) ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗರಾಜ್ ಕೆ. ಅವರೂ ಶಾಮೀಲಾಗಿರುವುದು ಬೆಳಕಿಗೆ ಬಂದಿತು.

ನಿಯಮದ ಪ್ರಕಾರ, ಒಂದು ಬಾರಿ ಎಂಎಲ್‌ಸಿ ನೋಂದಣಿಯಾದ ಮೇಲೆ ಅದೇ ಸಂಖ್ಯೆಯನ್ನು ಮುಂದುವರಿಸಬೇಕು. ಆದರೆ, ಇಲ್ಲಿ ವೈದ್ಯರು ಉದ್ದೇಶಪೂರ್ವಕವಾಗಿ ಎರಡನೇ ಎಂಎಲ್‌ಸಿ ಮತ್ತು ಒಪಿಡಿ (OPD) ಸಂಖ್ಯೆಯನ್ನು ಸೃಷ್ಟಿಸಿರುವುದು ಸಾಬೀತಾಗಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, “ವೈದ್ಯಕೀಯ ವೃತ್ತಿಯ ಪಾವಿತ್ರ್ಯತೆಯನ್ನು ಹಾಳು ಮಾಡಿ, ನ್ಯಾಯಾಲಯದ ಹಾದಿ ತಪ್ಪಿಸಲು ಯತ್ನಿಸಲಾಗಿದೆ” ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ನ್ಯಾಯಾಲಯದ ಮಹತ್ವದ ಆದೇಶ:
ನ್ಯಾಯಾಲಯವನ್ನೇ ಯಾಮಾರಿಸಲು ಯತ್ನಿಸಿದ ವಾದಿ ಮೊಹಮ್ಮದ್ ಗೌಸ್, ಸಾಕ್ಷಿ ಡಾ. ಅಬ್ದುಲ್ ಬಶೀರ್ ಮತ್ತು ಕರ್ತವ್ಯ ಲೋಪವೆಸಗಿದ ವೈದ್ಯಾಧಿಕಾರಿ ಡಾ. ನಾಗರಾಜ್ ಕೆ. ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ವೈದ್ಯಕೀಯ ರಂಗದಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯದ ಈ ದಿಟ್ಟ ಕ್ರಮವು ಇನ್ಶೂರೆನ್ಸ್ ವಂಚನೆ ಮತ್ತು ವೈದ್ಯಕೀಯ ದಾಖಲೆಗಳ ತಿರುಚುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ

Continue Reading

Bantawala

ಕನ್ಯಾನ ಸರ್ಕಾರಿ ಪದವಿ ಕಾಲೇಜಿನಲ್ಲಿ ಮುಟ್ಟಿನ ನೈರ್ಮಲ್ಯ ಕುರಿತು ಮಾಹಿತಿ ಕಾರ್ಯಕ್ರಮ

Published

on

ಕಾಲೇಜಿನ ವಿದ್ಯಾರ್ಥಿನಿಯರಲ್ಲಿ ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಮುಟ್ಟಿನ ನೈರ್ಮಲ್ಯ, ಮಹಿಳೆಯರ ಆರೋಗ್ಯ ಮತ್ತು ಪೋಷಣೆ‘ ಕುರಿತು ಮಾಹಿತಿ ಕಾರ್ಯಕ್ರಮವನ್ನು ಕನ್ಯಾನ ಸರ್ಕಾರಿ ಪದವಿ ಕಾಲೇಜಿನ ಐಕ್ಯೂಎಸಿ ಮತ್ತು ವಿಮೆನ್ ಸೆಲ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕನ್ಯಾನ ಪ್ರಾಥಮಿಕ ಅರೋಗ್ಯ ಕೇಂದ್ರದ ಅರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಸೌಮ್ಯ ಎಸ್ ಕೆ ಅವರು ಮುಟ್ಟಿನ ಸ್ವಚ್ಛತೆ, ಅರೋಗ್ಯ ರಕ್ಷಣೆ ಹಾಗೂ ಪೋಷಣೆ ಕುರಿತು ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಲ್ಲಿ ಅರೋಗ್ಯ ಜಾಗೃತಿಯನ್ನು ಮೂಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸವಿತಾ, ಶ್ರೀಮತಿ ಚೈತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರಣ್ಯ ಸ್ವಾಗತಿಸಿ, ಶ್ರಾವಣ್ಯ ವಂದಿಸಿ, ಇಶ್ಮಿತಾ ನಿರೂಪಿಸಿ, ಚೇತನಾ ಮತ್ತು ಬಳಗ ಪ್ರಾರ್ಥಿಸಿದರು.

Continue Reading

Trending

Copyright © 2025 Deevatige