Connect with us

crime

ಸಾಕು ನಾಯಿಯ ಅನಾರೋಗ್ಯವನ್ನು ಸಹಿಸದೆ ಮಸಣದ ಹಾದಿ ಹಿಡಿದ ಸಹೋದರಿಯರು

Published

on

ಕೆಲವರಿಗೆ ಹಾಗೆ ಪ್ರಾಣಿಗಳೆಂದರೆ ಪಂಚಪ್ರಾಣ, ಅದರಲ್ಲೂ ನಾಯಿಗಳೆಂದರೆ ಅದನ್ನು ಬಿಟ್ಟು ಇರಲಾರದಷ್ಟು ಪ್ರೀತಿಯಲ್ಲಿರುತ್ತಾರೆ. ಅವುಗಳಿಗೆ ಅನಾರೋಗ್ಯ ಹಿಡಿದು ಏನನ್ನೂ ತಿನ್ನದೆ ಇದ್ದರೆ ಅದರ ಪ್ರೀತಿ ಪಾತ್ರರೂ ಏನೂ ತಿನ್ನಲಾರರು. ಹಾಗೆಂದು ಸಾಕು ನಾಯಿಯ ಅನಾರೋಗ್ಯವನ್ನು ಸಹಿಸದೆ ಮಸಣದ ಹಾದಿ ಹಿಡಿಯುವವರು ಇದ್ದಾರೆಯೇ ? ಎಂದರೆ ದೀರ್ಘಕಾಲದ ಖಿನ್ನತೆಯಲ್ಲಿದ್ದ ವಿದ್ಯಾವಂತ ಸಹೋದರಿಯರಿಬ್ಬರು ತಮಗೆ ಆಸರೆಯಾಗಿದ್ದ ಸಾಕುನಾಯಿಗೆ ಒದಗಿರುವ ಆಪತ್ತಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿರುವುದು ವರದಿಯಗಿದೆ.

ಲಕ್ನೋದ ದೌಡಾ ಪ್ರದೇಶದ ನಿವಾಸಿಗಳಾದ ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಎಂಬ ಸಹೋದರಿರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರೂ ವಿದ್ಯಾವಂತರಾಗಿದ್ದು, ಪದವಿ ಪೂರೈಸಿದ್ದಾರೆ. ಆದರೆ, 2014ರಿಂದಲೇ ಇಬ್ಬರೂ ತೀವ್ರತರವಾದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹತ್ತು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ, ಯಾವುದೇ ಚೇತರಿಕೆ ಕಂಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಮನೆಯಲ್ಲಿದ್ದ ಸಾಕುನಾಯಿ ಅವರಿಗೆ ದೊಡ್ಡ ಆಸರೆಯಾಗಿತ್ತು.

ಕಳೆದ ಕೆಲವು ದಿನಗಳಿಂದ ಈ ಸಹೋದರಿಯರ ಪ್ರೀತಿಯ ಸಾಕುನಾಯಿ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ದಿನದಿಂದ ದಿನಕ್ಕೆ ನಾಯಿಯ ಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಈ ಸೋದರಿಯರು ಮಾನಸಿಕವಾಗಿ ಜರ್ಜರಿತರಾಗಿದ್ದರು. ನಾಯಿ ಗುಣಮುಖವಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ, ಇಬ್ಬರೂ ತೀವ್ರ ಮನನೊಂದಿದ್ದರು. ಈಗಾಗಲೇ ಖಿನ್ನತೆಯಲ್ಲಿದ್ದ ಅವರಿಗೆ ಇದು ಹೆಚ್ಚು ಆಘಾತವಾಗಿತ್ತು.

ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇವರ ತಾಯಿ ಗುಲಾಬ್ ದೇವಿ ಅವರು ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ತರಲು ಇಬ್ಬರನ್ನೂ ಅಂಗಡಿಗೆ ಕಳುಹಿಸಿದ್ದರು. ಸಾಮಾನು ತರಲು ಹೋದವರು ಹತಾಶೆಯಿಂದ ಫಿನಾಯಿಲ್ ಸೇವಿಸಿ ಮನೆಗೆ ಮರಳಿದ್ದಾರೆ. ತಾಯಿಯ ಮುಂದೆ ಬಂದು ನಾವು ಫಿನಾಯಿಲ್ ಕುಡಿದಿದ್ದೇವೆ ಎಂದಿದ್ದಾರೆ. ಕೂಡಲೇ ಮಗನನ್ನು ಕರೆಸಿ, ಇಬ್ಬರನ್ನೂ ರಾಣಿ ಲಕ್ಷ್ಮಿಬಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್, ರಾಧಾ ಸಿಂಗ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರು. ಜಿಯಾ ಸಿಂಗ್ ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ರವಾನಿಸಿದ್ದಾರೆ.

, ಆದರೆ ಅವುಗಳ ಮೇಲಿನ ಅತೀವ ಅವಲಂಬನೆ ಮಾನಸಿಕವಾಗಿ ದುರ್ಬಲರಾದವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರ ಬಗ್ಗೆ ಕುಟುಂಬಸ್ಥರು ಸದಾ ನಿಗಾ ಇಡುವುದು ಅನಿವಾರ್ಯ. ಮನೆಯಲ್ಲಿ ಮಾನಸಿಕ ಅಸ್ವಸ್ತರು ಇದ್ದರೆ ಅವರ ಬಗ್ಗೆ ಅತೀವ ಕಾಳಜಿವಹಿಸಿ ಅಥವಾ ಹೆಚ್ಚಿನ ಸಹಾಯಕ್ಕಾಗಿ ಸ್ಥಳೀಯ ಚಿಕಿತ್ಸಾಲಕ್ಕೆ ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ.

Continue Reading
Advertisement

Belthangady

ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ: ಬೆಳ್ತಂಗಡಿಯಲ್ಲಿ ಸಿಐಡಿ ತನಿಖೆ ಆರಂಭ

Published

on

ಬೆಳ್ತಂಗಡಿ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಅತ್ಯಾಚಾರ ಹಾಗೂ ಸುಲಿಗೆ ಆರೋಪದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಚುರುಕುಗೊಳಿಸಿದೆ. ಇಂದು ಸಿಐಡಿ ಅಧಿಕಾರಿಗಳ ತಂಡ ಬೆಳ್ತಂಗಡಿಗೆ ಆಗಮಿಸಿ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸುವ ಮೂಲಕ ಅಧಿಕೃತವಾಗಿ ತನಿಖೆ ಆರಂಭಿಸಿದೆ.

ಪ್ರಕರಣದ ಹಿನ್ನೆಲೆ:
ಬೆಳ್ತಂಗಡಿ ತಾಲೂಕಿನ ಕಾಲೇಜೊಂದರ ಪ್ರಾಂಶುಪಾಲರೊಬ್ಬರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2020 ರಿಂದ 2023ರ ಅವಧಿಯಲ್ಲಿ ಜಮೀನು ವಿವಾದವೊಂದರ ವಿಚಾರಣೆಯ ನೆಪದಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಕೇಸ್ ಮರುಚಾಲನೆ ಮಾಡುವ ಬೆದರಿಕೆ ಹಾಕಿ ಸುಮಾರು 16 ಲಕ್ಷ ರೂ. ನಗದು, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮನೆ ನಿರ್ಮಾಣಕ್ಕಾಗಿ ತೇಗದ ಮರದ ದಿಮ್ಮಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.

ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸೂಚನೆಯಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಸಂದೇಶ್ ಪಿ.ಜಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

ಮಾರ್ಚ್‌ 25ರಂದು ವೇಣೂರು ಪೊಲೀಸ್‌ ಠಾಣೆಯಿಂದ ಬೆಂಗಳೂರು ಸಿಐಡಿ ಕಚೇರಿಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಿದ್ದು, ಸಿಐಡಿ ಡಿವೈಎಸ್‌ಪಿ ನೇತೃತ್ವದ ತಂಡವು ಮಾರ್ಚ್‌ 31ರಂದು ಸಂಜೆ ನಾರಾವಿ ಐಬಿಗೆ ಆಗಮಿಸಿದೆ. ಇಂದು ವೇಣೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸಿಐಡಿ ತಂಡವು ಸಂತ್ರಸ್ತೆಯ ಹೇಳಿಕೆ ಪಡೆಯುವುದು, ಸ್ಥಳಗಳ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಮೇಲೆ ತನಿಖೆ ಕೈಗೆತ್ತಿಕೊಳ್ಳಲಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಸಂತ್ರಸ್ತರು ಇದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಿದೆ.

Continue Reading

accident

ಬೆಳ್ತಂಗಡಿ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ತೆರೆದು ರಸ್ತೆಗೆ ಬಿದ್ದ ಸಹೋದರಿಯರು; ಚಾಲಕ, ನಿರ್ವಾಹಕನ ವಿರುದ್ಧ ಕೇಸ್ ದಾಖಲು

Published

on

ಬೆಳ್ತಂಗಡಿ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನ ಬಾಗಿಲು ಆಕಸ್ಮಿಕವಾಗಿ ತೆರೆದ ಪರಿಣಾಮ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಸಹೋದರಿಯರಿಬ್ಬರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಮಾರ್ಚ್ 31ರಂದು ಬೆಳಗ್ಗೆ ಕಳಿಯ ಗ್ರಾಮದ ನಿವಾಸಿಗಳಾದ ಚರಿಷ್ಮಾ (17) ಮತ್ತು ಚದ್ಮಕಾ (15) ಎಂಬ ಸಹೋದರಿಯರು ಎಂದಿನಂತೆ ಕಾಲೇಜಿಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಕಳಿಯದಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿತ್ತು. ಗೇರುಕಟ್ಟೆ ಸಮೀಪ ತಲುಪುತ್ತಿದ್ದಂತೆ ಬಸ್ಸಿನ ಬಾಗಿಲು ದಿಢೀರನೆ ತೆರೆದುಕೊಂಡಿದ್ದು, ಬಾಗಿಲ ಬಳಿಯಿದ್ದ ಇಬ್ಬರೂ ವಿದ್ಯಾರ್ಥಿನಿಯರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.

ರಸ್ತೆಗೆ ಬಿದ್ದ ಪರಿಣಾಮ ಇಬ್ಬರೂ ಸಹೋದರಿಯರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಜಾಗರೂಕತೆಯ ಆರೋಪ: ಬಸ್ ಚಾಲಕ ದಯಾನಂದ ಅವರು ವಾಹನವನ್ನು ಅತ್ಯಂತ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದರು ಮತ್ತು ನಿರ್ವಾಹಕ ಕಾಶಿನಾಥ್ ಅವರು ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಾಯಗೊಂಡ ವಿದ್ಯಾರ್ಥಿನಿ ಚರಿಷ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಕರ್ತವ್ಯ ಲೋಪವೇ ಈ ಅಪಘಾತಕ್ಕೆ ನೇರ ಕಾರಣ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿನಿಯ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಸೆಕ್ಷನ್ 281: ಅಜಾಗರೂಕ ಚಾಲನೆ. ಸೆಕ್ಷನ್ 125: ಜೀವಕ್ಕೆ ಅಪಾಯ ತರುವಂತಹ ನಿರ್ಲಕ್ಷ್ಯದ ಕೃತ್ಯ.ಸೆಕ್ಷನ್ 125(a): ನಿರ್ಲಕ್ಷ್ಯದಿಂದ ಗಾಯ ಉಂಟುಮಾಡುವುದು.ಸೆಕ್ಷನ್‌ಗಳ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ:

ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆಯ ಕೊರತೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

crime

ಪೊಲೀಸ್ ಭೇಟೆ: ದೇವಸ್ಥಾನದ ಕಳ್ಳ ಹಾಗೂ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ

Published

on

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಮತ್ತು ಉರ್ವಾ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದೇವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದ ಅಂತರರಾಜ್ಯ ಕಳ್ಳ ಹಾಗೂ ಕಳೆದ 9 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಂಜಾರು ದೇವಸ್ಥಾನದ ಹುಂಡಿ ಕಳವು: ತಮಿಳುನಾಡು ಮೂಲದ ಆರೋಪಿ ಅರೆಸ್ಟ್
ಮಾರ್ಚ್ 3ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದ ಬಾಗಿಲು ಮುರಿದು, ಮೂರು ಕಾಣಿಕೆ ಹುಂಡಿಗಳಿಂದ ಸುಮಾರು ರೂ. 25,000/- ಹಣವನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಬಜಪೆ ಪೊಲೀಸರು ಮಾರ್ಚ್ 31ರಂದು ಅಂತರರಾಜ್ಯ ಕಳ್ಳ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25) ಎಂಬಾತನನ್ನು ಬಂಧಿಸಿದ್ದಾರೆ.
ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಿವಾಸಿಯಾದ ಈತ, ರೈಲಿನಲ್ಲಿ ಬಂದು ಕಳ್ಳತನ ನಡೆಸಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದ. ಈತ ಉಡುಪಿಯ ಬ್ರಹ್ಮಾವರ ಠಾಣೆಯ ಕಳವು ಪ್ರಕರಣ ಹಾಗೂ ಪಣಂಬೂರು ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲೂ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಬಜಪೆ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ನೂತನ್, ರಾಜೇಶ್ ಮತ್ತು ಪ್ರಕಾಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಮುಂಬೈನಲ್ಲಿ ಸೆರೆ
ಮತ್ತೊಂದು ಪ್ರಕರಣದಲ್ಲಿ, ದರೋಡೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಸಿ (LPC) ವಾರಂಟ್ ಆರೋಪಿಯನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಅಶೋಕ ನಗರದ ನಿವಾಸಿ ಸುಹಾನ್ @ ಸೋನು (33) ಬಂಧಿತ ಆರೋಪಿ.
ಈತನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಮಾರ್ಚ್ 29ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಆರೋಪಿಯನ್ನು ಉರ್ವಾ ಎಎಸ್ಐ ಲಕ್ಷ್ಮಣ್ ಮತ್ತು ತಂಡ ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ಈತನ ಮೇಲೆ ಉರ್ವಾ ಮತ್ತು ಮಂಗಳೂರು ಉತ್ತರ ಠಾಣೆಗಳಲ್ಲಿ ದರೋಡೆ ಸಂಚು ಹಾಗೂ ಹಲ್ಲೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಪ್ರಕರಣಗಳು ದಾಖಲಾಗಿವೆ.

ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಂಗಳೂರು ನಗರ ಪೊಲೀಸರ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Continue Reading

Trending

Copyright © 2025 Deevatige