Connect with us

community

ಬಡ ಜನರ ಭೂ ಕಬಳಿಕೆ : ಬುಡಾ ಮಾಜಿ ಅಧ್ಯಕ್ಷನ ವಿರುದ್ಧ ಗಂಭೀರ ಆರೋಪ

Published

on

 


ಬಡ ಜನರಿಗೆ ಇನಾಂ ರದ್ದತಿಯ ಬಳಿಕ ನೀಡಲಾಗಿದ್ದ ಭೂಮಿಯನ್ನು ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ)ದ ಮಾಜಿ ಅಧ್ಯಕ್ಷ ಎನ್. ಪ್ರತಾಪ್ ರೆಡ್ಡಿ ಪ್ರಭಾವ ಬಳಸಿ, ಬೆದರಿಕೆ ಹಾಕಿ ಕಿತ್ತುಕೊಂಡಿರುವ ಬಗ್ಗೆ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪತ್ರಿಕಾ ಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದೆ.

ಶುಕ್ರವಾರ (ಡಿ.26) ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಪ್ರತಾಪ್ ರೆಡ್ಡಿ ವಿರುದ್ದ ಬಳ್ಳಾರಿ ನಗರಕ್ಕೆ ಹೊಂದಿಕೊoಡಿರುವ ಕೌಲ್ ಬಜಾರಿನ ದಾನಪ್ಪಬೀದಿ ಮತ್ತು ಬಂಡಿಹಟ್ಟಿ ಏರಿಯಾಗಳ ಬಡಜನತೆಯ ಭೂಮಿಯನ್ನು ಕಿತ್ತುಕೊಂಡಿರುವುದಾಗಿ ಆರೋಪಿಸಿ ಈ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶ ಮಾಡಿ ಪ್ರತಾಪ್‌ರೆಡ್ಡಿ ನಡೆಸುತ್ತಿರುವ ಉಪಟಳ ಮತ್ತು ಬಡ ಜನರ ಭೂಮಿಯ ವಂಚನೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದೆ.

1970ರ ದಶಕದಲ್ಲಿ ಇನಾಂ ರದ್ದತಿಯ ಬಳಿಕ ಸರ್ವೆ ನಂಬರ್ 715ಎ ಕೌಲ್ ಬಜಾರಿನ 1080 ಎಕರೆ ಇನಾಂ ಭೂಮಿಯಲ್ಲಿ 134 ಎಕರೆ ಭೂಮಿಯನ್ನು, 7 ಮಾದಿಗ, 4 ಕುರುಬ, 5 ಮಡಿವಾಳ ಹಾಗೂ 1 ಈಡಿಗ ಸೇರಿ 17 ಕುಟುಂಬಗಳಿಗೆ ಆಗಿನ ಭೂ ನ್ಯಾಯ ಮಂಡಳಿ ಹಂಚಿಕೆ ಮಾಡಿತ್ತು. ಈ ಎಲ್ಲಾ ಕುಟುಂಬಗಳಿಗೆ ಮಂಡಳಿ ಫಾರಂ ನಂಬರ್ 10 ನೀಡಿತ್ತು, ಅಲ್ಲದೆ ಫಲಾನುಭವಿಗಳ ಹೆಸರಿಗೆ ಹಕ್ಕು ಬದಲಾಯಿಸಿತ್ತು. ಅಂದಿನಿoದ ಈ ಎಲ್ಲಾ ಕುಟುಂಬಗಳು ತಮಗೆ ದೊರೆತ ಭೂಮಿಯನ್ನು ನಂಬಿ ಬದುಕುತ್ತಿದ್ದವು ಎಂದು ಸಮಿತಿ ಹೇಳಿದೆ.

ಮುಂದುವರಿದು, 2006ರಿಂದ ಪ್ರತಾಪ್ ರೆಡ್ಡಿಯ ಕಣ್ಣು ಈ ಭೂಮಿಯ ಮೇಲೆ ಬಿದ್ದಿದೆ. ಆ ಬಳಿಕ ಅವರು ಗೂಂಡಾಗಿರಿ ಮಾಡುತ್ತಾ, ಬೆದರಿಕೆ ಹಾಕುತ್ತಾ ಬಂದಿದ್ದಾರೆ. ಇವರ ಕಿರುಕುಳಕ್ಕೆ ಬಡ ಜನರ ಬದುಕು ದಿವಾಳಿಯಾಗುತ್ತಾ ಸಾಗಿದೆ. ಭೂ ಒಡೆಯರಾಗಿದ್ದ ಮಾದಿಗ ಸಮುದಾಯದ ಕುಟುಂಬಗಳು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಸ ಗುಡಿಸುವ ಪೌರಕಾರ್ಮಿರಾಗಿ ಜೀವನ ಸಾಗಿಸುವಂತಾಗಿದೆ. ಮಡಿವಾಳರು ಜೀವ ಭಯದಿಂದ ಊರು ಬಿಟ್ಟಿದ್ದರೆ, ಈ ಭೂಮಿಯ ಸಹವಾಸವೇ ಬೇಡವೆಂದು ಜೀವ ಉಳಿಸಿಕೊಂಡು ಬದುಕುವ ಪರಿಸ್ಥಿತಿ ಕೆಲವರದ್ದಾಗಿದೆ. ಇನ್ನೂ ಕೆಲವರು ಜೀವ ಹೋದರೂ ಪರವಾಗಿಲ್ಲ, ನ್ಯಾಯ ಪಡೆದೇ ತೀರುತ್ತೇವೆಂದು ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೀದಿಗಿಳಿದು ಹಲವಾರು ಬಾರಿ ಹೋರಾಟ ನಡೆಸಿದ್ದಾರೆ ಎಂದು ಸಮಿತಿ ವಿವರಿಸಿದೆ.

ಇನಾಂ ರದ್ದತಿಗೂ ಮೊದಲು ಈ ಭೂಮಿ ದಿವಂಗತ ರಾಜರಾಜೇಶ್ವರಿಶಾಸ್ತ್ರಿ ಮತ್ತು ಅವರ ಮಗ ಬ್ರಹ್ಮಶಾಸ್ತ್ರಿ ಅವರಿಗೆ ಸೇರಿತ್ತು. ಇದೇ ಭೂಮಿಯಲ್ಲಿ ಈಗಿನವರ ಎರಡು-ಮೂರು ತಲೆಮಾರುಗಳು ದುಡಿಯುತ್ತಾ ಬಂದಿದೆ. ಭೂಮಿಯ ಮಾಲೀಕರಾಗಿದ್ದ ಬ್ರಹ್ಮಶಾಸ್ತ್ರಿಯೇ ಈ ಭೂಮಿಯಲ್ಲಿ ದುಡಿಯುತ್ತಿದ್ದವರ ಕೂಲಿ, ಕೆಲಸ ಗೇಣಿ ಮಾಡುತ್ತಿದ್ದವರ ವಿವರಗಳನ್ನು ಸರ್ಕಾರಕ್ಕೆ ಕೊಟ್ಟಿದ್ದಾರೆ. ಅದರ ಪ್ರಕಾರವೇ ನ್ಯಾಯ ಮಂಡಳಿ 134 ಎಕರೆ ಸೇರಿದಂತೆ ನೂರಾರು ಎಕರೆ ಭೂಮಿಯನ್ನು ಹಂಚಿದೆ. ಫಾರಂ ನಂಬರ್ 10, ಮ್ಯೂಟೇಷನ್, ಪಹಣಿ ಎಲ್ಲವೂ ವರ್ಗಾವಣೆಯಾಗಿ ಇಂದಿನವರೆಗೂ ಕಂದಾಯ ಕಟ್ಟುತ್ತಾ ಬರುತ್ತಿದ್ದಾರೆ. ಭೂಮಿಯ ಮೇಲೆ ಬ್ಯಾಂಕ್ ಸಾಲ, ಬೆಳೆ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕುಟುಂಬಗಳು ಬೆಳದಂತೆ ಭೂಮಿಯು ವಿಭಾಗಗಳಾಗಿ ಹಂಚಿಹೋಗಿವೆ. ಜನರು ಭಾವಿ, ಬೋರ್‌ವೆಲ್ ಕೊರೆದು, ವಿದ್ಯುತ್ ಸಂಪರ್ಕ ಪಡೆದು ತರಕಾರಿ ಹಾಗೂ ಇನ್ನಿತರೆ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಗಮನಾರ್ಹವಾಗಿ, ಈ ಭೂಮಿಯಲ್ಲಿ ಜೀವ ಸವೆಸಿದ್ದ ಅವರ ತಾತ-ಮುತ್ತಾಂದಿರ ಸಮಾಧಿಗಳು ಕೂಡ ಇದೇ ಎಂದು ಸಮಿತಿ ತಿಳಿಸಿದೆ.

ಮಡಿವಾಳರು ಈ ಜಮೀನಿನಲ್ಲಿ ಅವರ ಕುಲ ಕಸುಬು ಮಾಡಿಕೊಂಡು ಬಂದಿರುವುದಕ್ಕೆ ಅವರವರ ಹೊಲಗಳಲ್ಲಿ ಕಟ್ಟಿರುವ ನೀರಿನ ಕಟ್ಟೆಗಳು, ಚಿಕ್ಕ ಚಿಕ್ಕ ಬಾವಿಗಳು ಪುರಾವೆಯಾಗಿವೆ. ಈಗ 2006ರಿಂದ ಪ್ರತಾಪ್ ರೆಡ್ಡಿ ಆ ಭೂಮಿ ನನ್ನದು ಎಂದು ಹೇಳುತ್ತಿದ್ದಾರೆ ಎಂದಿದೆ.

ಪ್ರತಾಪ್ ರೆಡ್ಡಿ ಮತ್ತು ಅವರ ಹೆಂಡತಿ ಶೈಲಜಾ ರೆಡ್ಡಿ ಹೆಸರಿಗೆ ಸರ್ವೆ ನಂಬರ್ 715ಎನಲ್ಲಿ 134 ಎಕರೆ ಭೂಮಿಯನ್ನು 2005-06ರಲ್ಲಿ ಟಿಎಸ್ ನಂಬರ್ (ಟೌನ್ ಸರ್ವೆ) ನೋಂದಣಿ ಮಾಡಿಕೊಂಡಿದ್ದಾರೆ. ಇದಾದ ನಂತರ ಸರ್ವೆ ನಂಬರ್ 715ಎನಲ್ಲಿ ಉಳುಮೆ ಮಾಡುತ್ತಿದ್ದ ಕುಟುಂಬಗಳನ್ನು ಒಕ್ಕಲೇಳುವಂತೆ ಮಾಡಿದ್ದಾರೆ. ಈ ವ್ಯಾಜ್ಯ ಪೊಲೀಸ್, ಕಂದಾಯ ಇಲಾಖೆ ಮತ್ತು ನ್ಯಾಯಾಲಯದ ಮೆಟ್ಟಿಲೇರಿದೆ. ಕೆಲ ಪೊಲೀಸ್ ಅಧಿಕಾರಿಗಳು ಪ್ರತಾಪ್ ರೆಡ್ಡಿಪರ ವಕಾಲತ್ ವಹಿಸಿ ಕೋರ್ಟ್ ವ್ಯಾಜ್ಯ ಇತ್ಯರ್ಥಪಡಿಸುವವರೆಗೆ ಯಾರೂ ಜಮೀನಿಗೆ ಹೋಗದಂತೆ ಫರ್ಮಾನು ಹೊರಡಿಸಿದ್ದಾರೆ. ಇದರಿಂದ ಭೂಮಿ ಉಳುಮೆ ಮಾಡದೆ ಬೀಳು ಬೀಳುವಂತಾಗಿದೆ. ಪ್ರತಾಪ್ ರೆಡ್ಡಿ ವಿರುದ್ದ ಧ್ವನಿ ಎತ್ತಿದ್ದಕ್ಕಾಗಿ ಫಲಾನುಭವಿಗಳ ಮೇಲೆ ಸುಳ್ಳು ಕೇಸ್ ದಾಖಲಿಸಿ ಕೋರ್ಟ್-ಕಚೇರಿ ಅಲೆಯುವಂತೆ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.

ಪ್ರತಾಪ್ ರೆಡ್ಡಿ ತನ್ನ ಹೆಸರಿಗೆ 61.23 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟಿದ್ದರೆ, ಅವರ ಹೆಂಡತಿ ಶೈಲಜಾರೆಡ್ಡಿ 73 ಎಕರೆ ಭೂಮಿಗೆ 13,50,000 ರೂಪಾಯಿಗಳನ್ನು ಕೊಟ್ಟು ದಿನಾಂಕ : 17-10-2005 ನೋಂದಣಿ ಮಾಡಿಸಿಕೊಂಡಿದ್ದಾರೆoದು ದಾಖಲೆಗಳು ಹೇಳುತ್ತಿವೆ. ಅಂದರೆ ಎಕರೆಗೆ ಕೇವಲ 20 ಸಾವಿರ ರೂಪಾಯಿ ಕೊಟ್ಟಂತಾಗಿದೆ. 134 ಎಕರೆ ಗಂಡ ಹೆಂಡತಿ ಹೆಸರಲ್ಲಿ ಒಂದೇ ದಿನ ನೋಂದಣಿ ಆಗಿರುವ ಈ ಭೂಮಿ ಬಳ್ಳಾರಿ ನಗರದಲ್ಲಿ ಇಷ್ಟು ಕಡಿಮೆ ದರದಲ್ಲಿ, ಅದೂ ಅವರ ಪ್ರಕಾರವೇ ಟೌನ್ ವ್ಯಾಪ್ತಿಗೊಳಪಟ್ಟ ಭೂಮಿ ಸಿಗುತ್ತದೆಂದರೆ ನಂಬಲು ಸಾಧ್ಯವೇ? ಎಂದು ಸಮಿತಿ ಪ್ರಶ್ನಿಸಿದೆ.

ಈ ರೀತಿಯ ದೊಡ್ಡ ಮಟ್ಟದ ಭೂಮಿಯ ನೋಂದಣಿ ಮಾಡಿರುವುದು ಕೂಡ ಕಾನೂನಿಗೆ ವಿರುದ್ಧವಾಗಿದೆ.
ಭೂಮಿಯು ಮೂಲತಃ ದಿವಂಗತ ರಾಜರಾಜೇಶ್ವರಿಶಾಸ್ತ್ರಿಯವರಿಗೆ ಸೇರಿದ್ದು ಇವರಿಗೆ ಬ್ರಹ್ಮಶಾಸ್ತ್ರಿ ಮತ್ತು ತಿಪ್ಪಾಶಾಸ್ತ್ರಿ ಇಬ್ಬರು ಮಕ್ಕಳು, ಬೃಹ್ಮಶಾಸ್ತ್ರಿಗೆ ಮಕ್ಕಳಿಲ್ಲ. ತಿಪ್ಪಶಾಸ್ತ್ರಿಗೆ 3 ಜನ ಮಕ್ಕಳೆಂದರೆ ವೆಂಕಟರಮಣಶಾಸ್ತ್ರಿ, ಕೃಷ್ಣಶಾಸ್ತ್ರಿ, ಮತ್ತು ದಕ್ಷಿಣಾಮೂರ್ತಿ, ಉಳಿದ ಭೂಮಿಯೆಲ್ಲವೂ ದಿವಂಗತವಾಗಿರುವ ವೆಂಕಟರಮಣಶಾಸ್ತ್ರಿಯ ಹೆಸರಿನಲ್ಲಿದೆ. ಕೃಷ್ಣಶಾಸ್ತ್ರಿ ಹೆಂಡತಿ ಲಲಿತಮ್ಮ ಮತ್ತು ಇವರ ಮಕ್ಕಳಿಂದ ಪ್ರತಾಪ್‌ರೆಡ್ಡಿಯವರು 27 ಲಕ್ಷ ಹಣ ಕೊಟ್ಟು ಭೂಮಿಯನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಪ್ರತಾಪ್‌ರೆಡ್ಡಿಗೆ ಮಾರಾಟ ಮಾಡಿರುವ ವ್ಯಕ್ತಿಗಳ ಹೆಸರಿನಲ್ಲಿ ಭೂಮಿಯ ಹಕ್ಕು ಬದಲಾಗಿರುವ ಯಾವುದೇ ದಾಖಲೆಗಳಿಲ್ಲ. ಇದಕ್ಕೆ ಸಂಬoಧಿಸಿದ ಲಿಂಕ್ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಕೇಳಿದರೆ, ಲಿಂಕ್ ದಾಖಲೆ ಪತ್ರಗಳನ್ನು ಸುಟ್ಟು ಹಾಕಲಾಗಿದೆ ಎಂದು ಲಿಖಿತವಾದ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ. ದಾಖಲೆಗಳನ್ನು ಸುಟ್ಟು ಹಾಕಲಾಗಿದೆ ಎಂದರೆ ವಾಸ್ತವವನ್ನು ಮರೆಮಾಚಿದಂತೆ ಆಗುವುದಿಲ್ಲವೇ? ಎಂದು ಸಮಿತಿ ಕೇಳಿದೆ. ಇದರ ಹಿಂದೆ ಭ್ರಷ್ಟ ಅಧಿಕಾರಿಗಳ ಕೈವಾಡ ಇರುವ ಇದೆ ಎನ್ನುವುದರಲ್ಲಿ ಸಂಶಯವಿಲ್ಲವೆoದು ಹೇಳಬಹುದಾಗಿದೆ ಎಂದಿದೆ.

ಸರ್ಕಾರವೇ ಕೊಟ್ಟ ಎಲ್ಲಾ ದಾಖಲೆ ಪತ್ರಗಳು ಇದ್ದರೂ, ಜಿಲ್ಲಾಡಳಿತ ಬಡವರ ಪರವಾಗಿ ನಿಂತು ಗೊಂದಲವನ್ನು ಬಗೆ ಹರಿಸಬಹುದಾದ ವಿಷಯವಾಗಿದ್ದರೂ, ಕೆಲ ಅಧಿಕಾರಿಗಳು ಮಾಡಿದ ತಪ್ಪು ಮತ್ತು ಬೇಜವಾಬ್ದಾರಿತನಗಳು ವಿಷಯ ಕಗ್ಗಂಟಾಗಲು ಕಾರಣವಾಗಿದೆ. ಇದಕ್ಕೆ ಎನ್.ಪ್ರತಾಪ್‌ರೆಡ್ಡಿಯವರ ಅಧಿಕಾರ-ಹಣ ಕೆಲಸ ಮಾಡಿದೆ ಎಂದು ಯಾವುದೇ ಸಂಶಯವಿಲ್ಲದೇ ಹೇಳಬಹುದು ಎಂದು ಸಮಿತಿ ತಿಳಿಸಿದೆ.

ಭೂ ಫಲಾನುಭವಿಗಳು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದ ಸಂದರ್ಭದಲ್ಲಿ ಇವರ ಬೆನ್ನಿಗೆ ನಿಲ್ಲಬೇಕಾಗಿದ್ದ ಕಾನೂನು ಪಾಲಕರು, ಕಂದಾಯ ಇಲಾಖೆಯಯವರು ಸರಿಯಾಗಿ ಮಾರ್ಗದರ್ಶನ ಕೂಡ ಮಾಡಿರುವುದಿಲ್ಲ. ಈ ಜನರಿಗೆ ಸರ್ಕಾರವೇ ಕೊಟ್ಟಿರುವ ಭೂಮಿಯ ದಾಖಲೆಗಳ ಬಗ್ಗೆ ಒಬ್ಬೊಬ್ಬರು ಒಂದೊoದು ರೀತಿಯಲ್ಲಿ ವರ್ತಿಸುತ್ತಾ ಬಂದಿರುವುದರಿoದ ಪ್ರತಾಪ್‌ರೆಡ್ಡಿ ತೋಡಿದ ಮೋಸದ ಖೆಡ್ಡಾಕ್ಕೆ ಜಿಲ್ಲಾಡಳಿತವನ್ನು ಮತ್ತು ಶೋಷಿತ ಬಡ ಜನರನ್ನು ಬೀಳಿಸಿಕೊಂಡು, ಕಾನೂನು-ನ್ಯಾಯ, ನನ್ನ ಹಣ-ರಾಜಕೀಯ ಬಲಕ್ಕಿಂತ ದೊಡ್ಡದೇ? ಎಂದು ಸೆಡ್ಡು ಹೊಡೆದಿದ್ದಾರೆ ಎಂದಿದೆ.

ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವೇ ಆಗಿದೆ. ತಾಲ್ಲೂಕು ಸರ್ವೆಯರ್ ಹನುಮಂತಪ್ಪ ಎಂಬ ಅಧಿಕಾರಿಯನ್ನು ಕೋರ್ಟ್ ಕಮಿಷನ್ ವಾರಂಟ್ ಪ್ರಕಾರ ನೇಮಿಸಲಾಗಿದ್ದು, ಈ ಅಧಿಕಾರಿ ಕಾನೂನು ಪ್ರಕಾರ ಸರ್ವೆ ಮಾಡದೆ ರೈತರ ವಿರುದ್ಧ ಇರುವ ವಕೀಲರ ಮಾತಿನಂತೆ ಕೆಲಸ ಮಾಡುತ್ತೇನೆಂದು ಹೇಳಿ ಬಲಾಡ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಅಧಿಕಾರಿಯ ವಿರುದ್ಧ ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವ ಎನ್. ಪ್ರತಾಪ್‌ರೆಡ್ಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಹೈಕೋರ್ಟ್ನಲ್ಲಿ
ಪ್ರಕರಣ ಬಾಕಿಯಿದ್ದರೂ, ಪ್ರತಾಪ್‌ರೆಡ್ಡಿ ಬಡವರ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.

ಈ ವಿಚಾರವಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಬಡ ಜನರ ಭೂಮಿಯ ವಂಚನೆ ನಡೆಸುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರುಗಳಾದ ಕುಮಾರ್ ಸಮತಳ, ಮರಿಯಪ್ಪ, ಕಾವೇರಿ ಹಾಗೂ ಭೂಮಿಯಿಂದ ವಂಚನೆಗೊಳಗಾಗುತ್ತಿರುವ ಕೆ.ಮೋಹನ್ , ಕೆ.ಎಸ್ ರಘು, ಈ.ಈರೇಶ್ ಇದ್ದರು

Continue Reading
Advertisement

community

ನಾರಾಯಣ ಗುರು ನಿಗಮಕ್ಕೆ ಬಜೆಟ್ ನಲ್ಲಿ ಅನುದಾನವಿಲ್ಲ ; ಸರಕಾರದ ಕ್ರಮಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ತೀವ್ರ ಅಸಮಾಧಾನ

Published

on

ಕಾಂಗ್ರೆಸ್ ಸರ್ಕಾರವು ನಾಲ್ಕನೇ ಬಾರಿ ಮಂಡಿಸಿದ ಬಜೆಟ್ ನಲ್ಲೂ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಘೋಷಿಸದೆ ಸಮುದಾಯವನ್ನು ಕಡೆಗಣಿಸಿರುವ ಬಗ್ಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತೀವ್ರವಾಗಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಗಮನಸೆಳೆದ ಪಕ್ಷಾತೀತ ಶಾಸಕರಿಗೆ ಅಭಿನಂದನೆ ಸಲ್ಲಿಸಿದೆ.


ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷದಲ್ಲಿ ನಾಲ್ಕನೇ ಬಜೆಟ್ ಮಂಡಿಸಿದರೂ ನೂತನವಾಗಿ ರಚನೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿರುವುದು ಅತ್ಯಂತ ಖೇದಕರ. ಈ ಬಾರಿ ರಾಜ್ಯದ ಈಡಿಗ ಮತ್ತು 26 ಪಂಗಡಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಈ ಬಗ್ಗೆ ನಡೆಸಿದ ಹೋರಾಟವನ್ನು ಸರಕಾರವು ಕಡೆಗಣಿಸಿ ಸಮುದಾಯದ ಜನರಿಗೆ ದ್ರೋಹ ಎಸಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈಡಿಗ ನಿಗಮ ರಚನೆಯಾಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ ನಾರಾಯಣ ಗುರು ಅಭಿವೃದ್ಧಿ ಕೋಶಕ್ಕೆ ಮೀಸಲಿಟ್ಟಿದ್ದ 10 ಕೋಟಿ ರೂಪಾಯಿ ಹಣವನ್ನು ಮಾತ್ರ ವರ್ಗಾವಣೆ ಮಾಡಲಾಗುವುದು ಎಂದು ಸರಕಾರ ನೀಡಿರುವ ಹೇಳಿಕೆ ಈ ಸಮಾಜಕ್ಕೆ ಮಾಡಿದ ಅಗೌರವ. ಕನಿಷ್ಠ 500 ಕೋಟಿ ರೂ ಅನುದಾನ ಒದಗಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿ ಇತ್ತೀಚೆಗೆ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಕಲಬುರಗಿಯ ಚಿತ್ತಾಪುರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ 42 ದಿನಗಳ ಕಾಲ 708 ಕೀ . ಮೀ ಪಾದಯಾತ್ರೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ್ ತಂಗಡಗಿಯವರ ಮೂಲಕ ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ನೀಡದಿರುವುದು ರಾಜ್ಯದ 12 ಜಿಲ್ಲೆಗಳಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ಸಮುದಾಯವನ್ನು ತೀವ್ರವಾಗಿ ಕಡೆಗಣಿಸಿದಂತಾಗಿದೆ. ಸಮಾಜದ ಹಿರಿಯ ಮುಖಂಡರಾದ ಮಾಲಿಕಯ್ಯ ಗುತ್ತೇದಾರ್ ಮತ್ತು ಎಚ್ ಆರ್ ಶ್ರೀನಾಥ್ ದಣಿ ಗಳು ಮುಖ್ಯಮಂತ್ರಿ ಅವರ ಜೊತೆ ನೇರವಾಗಿ ಮಾತನಾಡಿ ಚರ್ಚೆ ಮಾಡಿದ್ದರೂ ಬಜೆಟ್ಟಿನಲ್ಲಿ ಯಾವುದೇ ಘೋಷಣೆಗಳಿಲ್ಲದೆ ಇರುವುದು ಸರಕಾರದ ನಿರ್ಲಕ್ಷಕ್ಕೆ ಉದಾಹರಣೆಯಾಗಿದೆ. ಸಮುದಾಯಕ್ಕಾಗಿ ರಚನೆ ಮಾಡಿದ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ರಾಜಕೀಯ ಪಕ್ಷಪಾತ ಧೋರಣೆ ಮಾಡದೆ ರಾಜ್ಯದ ಹಿಂದುಳಿದ ಸಮುದಾಯದ ನಾಲ್ಕನೇ ಅತಿ ದೊಡ್ಡ ಪಂಗಡದ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಿಂದುಳಿದ ಖಾತೆಯ ಸಚಿವರು ತಕ್ಷಣ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿ ಸಮುದಾಯದ ಇತರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ನಾಗೂರ್,ಅಶೋಕ್ ಗುತ್ತೇದಾರ್ ಬಡದಾಳ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಡಾ.ಸದಾನಂದ ಪೆರ್ಲ, ರಾಜೇಶ್ ಡಿ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರ್, ಇ. ತಿಮ್ಮಪ್ಪ ಗಂಗಾವತಿ, ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ ಹೊಳಕುಂದ, ಪ್ರವೀಣ್ ಜತ್ತನ್, ಸುರೇಶ್ ಗುತ್ತೇದಾರ್ ಕರದಾಳ, ಬಿ.ಎಂ ರಾವೂರು, ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರ ಪಕ್ಷಾತೀತ ಧ್ವನಿಗೆ ಮೆಚ್ಚುಗೆ :

ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಾ. 11ರಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ವಿಷಯ ಪ್ರಸ್ತಾಪಿಸಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಆಗಿಲ್ಲ. ನಿಗಮದ ರಚನೆಯ ಉದ್ದೇಶವಾದರೂ ಏನು ಎಂದು ಸರಕಾರವನ್ನು ಪ್ರಶ್ನಿಸಿದಾಗ ಸಚಿವ ತಂಗಡಗಿಯವರು ನಾರಾಯಣ ಗುರು ಅಭಿವೃದ್ಧಿ ಕೋಶದ ಹತ್ತು ಕೋಟಿ ನೀಡುವುದಾಗಿ ಉತ್ತರಿಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್ ಕುಮಾರ್ ಕನಿಷ್ಠ 50 ಕೋಟಿ ನಿಗಮಕ್ಕೆ ಇಡಬೇಕು ಎಂದು ಒತ್ತಾಯಿಸಿದರು ಈ ನಡುವೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಲಿಂಗಾಯತ ನಿಗಮ ಗಳಿಗೆಲ್ಲ 200 ರಿಂದ 300 ಕೋಟಿ ಕೊಡುತ್ತೀರಿ. ನಮ್ಮ ಸಮುದಾಯಕ್ಕೆ 100 ಕೋಟಿ ಯಾಕೆ ಕೊಡುವುದಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ 26 ಪಂಗಡಗಳಲ್ಲಿರುವ ಹಿಂದುಳಿದ ಜನ ಸಮುದಾಯಕ್ಕೆ ಸರಕಾರ ಸ್ಪಂದಿಸದಿರುವುದು ದುಃಖಕರ. ಬಿಲ್ಲವರ ಬೆಂಬಲದಿಂದ ಕರಾವಳಿಯ ಶಾಸಕರು ವಿಧಾನಸಭೆಗೆ ಬರುವಂತಾಗಿದೆ. ಅವರ ಋಣ ನಮ್ಮ ಮೇಲೆ ಇದೆ. ನಿಗಮಕ್ಕೆ ಅನುದಾನ ಘೋಷಣೆ, ಕುಲಕಸುಬು ಸೇಂದಿಯನ್ನು ಮಹಾರಾಷ್ಟ್ರ, ತೆಲಂಗಾಣ, ಕೇರಳದ ರಾಜ್ಯಗಳಲ್ಲಿರುವಂತೆ ಮುಂದುವರಿಸಲು ಅವಕಾಶ ನೀಡುವುದು, ಕುಲಕಸುಬು ಕಳೆದುಕೊಂಡು ಇದೀಗ ಕಲ್ಯಾಣ ಕರ್ನಾಟಕ ಭಾಗದಿಂದ 1,25,000 ಕ್ಕೂ ಸಂತ್ರಸ್ಥರಾಗಿ ಹೆಚ್ಚಿನ ಜನ ಮಹಾರಾಷ್ಟ್ರ ಗೋವಾ ಹೈದರಾಬಾದ್ ಬೆಂಗಳೂರಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಸರಕಾರ ತಕ್ಷಣ ನಿಗಮಕ್ಕೆ ಹಣ ಬಿಡುಗಡೆ ಮಾಡಿ ಈ ಸಮುದಾಯದ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ಬಿಲ್ಲವರು ಮತ್ತು ಈಡಿಗರ ಕಲ್ಯಾಣದ ದೃಷ್ಟಿಯಿಂದ ರಚನೆ ಮಾಡಿದ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ಸಮುದಾಯದ ಬಗ್ಗೆ ಶಾಸಕರು ಪಕ್ಷಾತೀತವಾಗಿ ಪಟ್ಟು ಹಿಡಿದು ಸರ್ಕಾರದ ಮೇಲೆ ಒತ್ತಡ ಹಾಕಿರುವುದಕ್ಕೆ ಹೋರಾಟ ಸಮಿತಿಯು ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಮಗೆ ಅನುದಾನ ಬೇಡವೇ? ಸ್ಪೀಕರ್ ಗೆ ಪ್ರಶ್ನಿಸಿದ ಸುನಿಲ್

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಸಚಿವ ತಂಗಡಗಿ ಮತ್ತು ವಿಧಾನಸಭೆಯ ಉಪನಾಯಕರಾದ ಸುನಿಲ್ ಮಧ್ಯೆ ಬಿಸಿ ಬಿಸಿ ವಾಗ್ವಾದ ನಡೆಯುತ್ತಿದ್ದಾಗ ಸುನಿಲ್ ಕುಮಾರ್ ಸ್ಪೀಕರ್ ಯುಟಿ ಖಾದರ್ ಅವರಿಗೆ ನೇರವಾಗಿ ಅನುದಾನ ನಿಮಗೆ ಬೇಡವೇ? ಎಂದು ಪ್ರಶ್ನಿಸಿದರು. ಸ್ಪೀಕರ್ ನಯವಾಗಿ ಬೇಕು ಎಂದು ಹೇಳಿದಾಗ ಹಾಗಾದರೆ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಾರಾಯಣ ಗುರು – ಗಾಂಧಿ ಸಂಗಮದ ಶತಮಾನೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ತಾವು ತೋರಿಸಿದ ಉತ್ಸಾಹ ಮತ್ತು ನಾರಾಯಣ ಗುರು, ನಾರಾಯಣ ಗುರು ಎಂದು ಅಲ್ಲಿ ಉಲ್ಲೇಖಿಸಿ ಗೌರವ ಸೂಚಿಸಿದ್ದೀರಿ. ಆ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚದಷ್ಟು ನಿಗಮಕ್ಕೆ ಕೊಡದಿರುವುದು ಸರಿಯೇ? ತಾವು ಸಚಿವರಿಗೆ ಹೇಳಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಹಿಂದುಳಿದ ವರ್ಗಗಳ ಸಚಿವರನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

Continue Reading

community

ಬೆಂಗಳೂರಿನಲ್ಲಿ ಮಾರ್ಚ್ 18ಕ್ಕೆ ಅದ್ದೂರಿ ‘ಮಹಾ ಪ್ರತ್ಯಂಗಿರಾ ಯಾಗ 2026’: ಸಂಕಷ್ಟಗಳ ನಿವಾರಣೆಗೆ ವಿಶೇಷ ಪೂಜೆ

Published

on

ಬೆಂಗಳೂರು: ನಗರದ ಶ್ರೀ ಶಿರಡಿ ಸಾಯಿ ಭಿಕ್ಷಾ ಕೇಂದ್ರ (ರಿ) ಹಾಗೂ ಶ್ರೀ ಪಾಂಡುರಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ‘ಮಹಾ ಪ್ರತ್ಯಂಗಿರಾ ಯಾಗ 2026’ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಯುಗಾದಿ ಅಮಾವಾಸ್ಯೆಯ ಪುಣ್ಯದಿನವಾದ ಮಾರ್ಚ್ 18, 2026 ರಂದು ಈ ವಿಶೇಷ ಯಾಗ ನಡೆಯಲಿದೆ.


ವಿಶ್ವದಲ್ಲೇ ಮೊದಲು:
ಡಾ. ಶ್ರೀ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರ ನೇತೃತ್ವದಲ್ಲಿ ಈ ಯಾಗ ನಡೆಯಲಿದ್ದು, ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ 21 ರೀತಿಯ ಕಾಳಿಯರು, 12 ರೀತಿಯ ದುರ್ಗೆಯರು, ದಶಮಹಾವಿದ್ಯೆ ಹಾಗೂ 40 ಪ್ರತ್ಯಂಗಿರಾ ದೇವಿಯರ ಆರಾಧನೆಯೊಂದಿಗೆ ಈ ಮಹಾ ಯಾಗವನ್ನು ನೆರವೇರಿಸಲಾಗುತ್ತಿದೆ.


ಯಾಗದ ಉದ್ದೇಶ:
ಮಾಟ-ಮಂತ್ರ, ಕೆಟ್ಟ ದೃಷ್ಟಿ, ಶತ್ರು ಬಾಧೆ, ಹಣಕಾಸಿನ ತೊಂದರೆ ಹಾಗೂ ಗ್ರಹದೋಷಗಳಿಂದ ಬಳಲುತ್ತಿರುವ ಭಕ್ತರಿಗಾಗಿ ಈ ಯಾಗವನ್ನು ಆಯೋಜಿಸಲಾಗಿದೆ. ಭಕ್ತರು ತಮ್ಮ ಹಸ್ತದಿಂದಲೇ ವಿವಿಧ ಮುದ್ರೆ, ಮಂತ್ರ ಮತ್ತು ತಂತ್ರಗಳ ಮೂಲಕ ಪೂರ್ಣಾಹುತಿ ನೀಡಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ, ಯುಗಾದಿ ಅಮಾವಾಸ್ಯೆಯ ಪುಣ್ಯದಿನವಾದ 2026ರ ಮಾರ್ಚ್ 18, ಬುಧವಾರದಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಈ ‘ಮಹಾ ಪ್ರತ್ಯಂಗಿರಾ ಯಾಗ’ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಭಕ್ತರು www.sptt.in ವೆಬ್‌ಸೈಟ್ ಸಂಪರ್ಕಿಸಬಹುದು ಅಥವಾ ಪೋಸ್ಟರ್‌ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗಳನ್ನು (92421 30010, 88845 22464) ಸಂಪರ್ಕಿಸಲು ಕೋರಲಾಗಿದೆ.

Continue Reading

Bantawala

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ.ಜನಪ್ರತಿನಿಧಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ..ರಸ್ತೆ ದುರವಸ್ಥೆಯಿಂದಾಗಿ 32ಬಡ ಕುಟುಂಬಗಳು ಹೈರಾಣ..

Published

on

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಭತ್ತನೇ ವಾರ್ಡಿನ ಬರ್ಕಳ, ಪೆರ್ಲದಬೈಲು ಪರಿಸರದ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಮೂವತ್ತೆರಡು ಬಡ ಕುಟುಂಬಗಳು, ಇತಿಹಾಸ ಪ್ರಸಿದ್ಧ ಪೆರ್ಲದಬೈಲು ಶ್ರೀ ಮಾರಿಯಮ್ಮ ದೈವಸ್ಥಾನ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಸುಮಾರು ಇನ್ನೂರು ವರ್ಷಗಳಿಂದ ಬೀಡಿ ಕಟ್ಟಿ ಕೂಲಿ ಕೆಲಸ ಮಾಡಿ ಬದುಕುತ್ತಿರುವ ಕುಟುಂಬಗಳಿಗೆ ಮಳೆಗಾಲ ಬಂತೆಂದರೆ ಎಲ್ಲಿಲ್ಲದ ನಡುಕ, ಭಯ ಆವರಿಸುತ್ತಿದೆ. ಈ ಭಾಗದ ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಶಾಲಾ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸಂಚರಿಸಲು ವಾಹನ ಸಂಚಾರ ಬಿಡಿ ಕನಿಷ್ಠ ನಡೆದು ಹೋಗಲು ಕೂಡಾ ರಸ್ತೆ ದುರವಸ್ಥೆಯಿಂದಾಗಿ ಅಸಾಧ್ಯವಾಗಿದೆ.

ತೀರಾ ಇಕ್ಕಟ್ಟಾದ ಘಾಟಿ ರಸ್ತೆಯಂತಿರುವ ಮಣ್ಣಿನ ಏರಿಳಿತದ ಕಣಿವೆ ರಸ್ತೆಯಲ್ಲಿ ಮಳೆ ಬಂತೆಂದರೆ ವಾಹನಗಳು ಸಂಚರಿಸುವಂತಿಲ್ಲ. ಅನಾರೋಗ್ಯ ಪೀಡಿತರನ್ನು ಪ್ರಾಣ ಉಳಿಯಬೇಕಾದರೆ ಬಟ್ಟೆಯಲ್ಲಿ ಸುತ್ತಿ ಹೊತ್ತುಕೊಂಡು ಹೋಗುವುದೊಂದೇ ದಾರಿಯಾಗಿದೆ.

ಚುನಾವಣೆ ಸಂದರ್ಭ ಮನೆ ಮುಂದೆ ನಿಂತು ಕೈ ಮುಗಿಯುತ್ತಾ ಕಾಂಕ್ರೀಟ್ ರಸ್ತೆ ಮಾಡಿಕೊಡುವ ಭರವಸೆ ನೀಡುವ ಪುಢಾರಿಗಳು ಚುನಾವಣಾ ಫಲಿತಾಂಶ ಘೋಷಣೆಯ ಬಳಿಕ ಐದು ವರ್ಷಗಳ ಕಾಲ ಅತ್ತ ಕಡೆ ಅಪ್ಪಿತಪ್ಪಿಯೂ ತಲೆ ಹಾಕಿಯೂ ಮಲಗುತ್ತಿಲ್ಲ ಎಂಬುದು ಈ ಭಾಗದ ಬಡ ಕುಟುಂಬಗಳ ಮಾತಾಗಿದೆ.


ಮುಂದಿನ ಮಳೆಗಾಲದ ಮೊದಲು ಬರ್ಕಳ, ಪೆರ್ಲದಬೈಲು ರಸ್ತೆ ಅಭಿವೃದ್ಧಿ ಮಾಡುವ ಮೂಲಕ ಈ ಭಾಗದ ಹಲವು ವರ್ಷಗಳ ಕನಸು ನನಸಾಗಿಸುವ ಇಚ್ಛಾಶಕ್ತಿಯೂ ನಮ್ಮಲ್ಲಿದೆ ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿ ತೋರಿಸಬೇಕಾಗಿದೆ.

Continue Reading

Trending

Copyright © 2025 Deevatige