Connect with us

About

ಮಾತು ಮೊದಲಾಗಿ….

ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಮತ್ತು ನೂತನ ಆವಿಷ್ಕಾರಗಳು ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ವ್ಯಾಪ್ತಿ ಬಹಳಷ್ಟು ವಿಸ್ತೃತಗೊಳ್ಳುತ್ತಿದೆ. ಪತ್ರಿಕಾ ರಂಗ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾಲ್ಕನೇಯ ಆಧಾರ ಸ್ತಂಭ. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಪತ್ರಿಕಾಂಗ ವ್ಯವಸ್ಥೆಗಳಲ್ಲಿ ಯಾವುದೇ ಒಂದು ಹಾದಿ ತಪ್ಪಿದರೂ ಜನ ಬೀದಿಗಿಳಿಯುತ್ತಾರೆ. ಹೋರಾಟದ ಮೂಲಕ ಪ್ರಜಾ ಪ್ರಭುತ್ವಕ್ಕೆ ಆಗಿರುವ ಅಪಾಯವನ್ನು ಎಚ್ಚರಿಸುತ್ತಾರೆ. ಪ್ರಜಾವ್ಯವಸ್ಥೆ ಶಿಥಿಲವಾದರೆ ಅದನ್ನು ಸರಿಪಡಿಸಿ ಪ್ರಜಾಪ್ರಭುತ್ವವನ್ನು ಉಳಿಸಿಬೆಳೆಸಬೇಕಾದ ಕರ್ತವ್ಯ ಮಾಧ್ಯಮಗಳದ್ದು. ಪತ್ರಿಕಾರಂಗವೇ ಶಿಥಿಲಗೊಂಡರೆ ಪ್ರಜಾಪ್ರಭುತ್ವ ಸದೃಢವಾಗಿರಲು ಸಾಧ್ಯವೇ ಇಲ್ಲ.
ಜನತಂತ್ರ ವ್ಯವಸ್ಥೆಯಲ್ಲಿ ಪತ್ರಿಕೆ ಜನಸಾಮಾನ್ಯರ ಧ್ವನಿಯಾಗಿದೆ. ಪತ್ರಕರ್ತರು ಜನಸಾಮಾನ್ಯರ ಪ್ರತಿನಿಧಿಗಳು. ಅಧಿಕಾರಸ್ತರ ಜೊತೆಯಾಗಿದ್ದು, ಅವರ ಆಮೀಷಗಳಿಗೆ ಒಳಗಾಗದೆ ನಿರ್ಲಿಪ್ತತೆಯನ್ನು ಕಾಪಾಡಿಕೊಂಡು ಬಂದರೆ ಮಾತ್ರ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯಲು ಸಾಧ್ಯವಿದೆ. ಪತ್ರಿಕಾರಂಗಕ್ಕೆ ತನ್ನದೇ ಆದ ಕಾನೂನು ಇತಿಮಿತಿಗಳಿದ್ದು, ಅದು ಜನತಾಂತ್ರಿಕ ಸಮಾಜದ ಒಂದು ಜವಾಬ್ಧಾರಿಯುತವಾದ ಅಂಗವಾಗಿದೆ. ದೈನಂದಿನ ಜಾಗತಿಕ ಆಗು-ಹೋಗುಗಳನ್ನು ತ್ವರಿತವಾಗಿ ಅತ್ಯಾಕರ್ಷಕವಾಗಿ ಸಮಾಜಕ್ಕೆ ನೀಡುವುದರ ಜೊತೆಗೆ ಸಮಾಜದ ಶುದ್ಧೀಕರಣ ಕಾರ್ಯ ಮಹತ್ತರವಾದ ಜವಾಬ್ದಾರಿಯಾಗಿದೆ. ಮೊಬೈಲ್, ಕಂಪ್ಯೂಟರ್‌ಗಳೇ ಇಂದಿನ ಪತ್ರಿಕೆಗಳ ಹಾಳೆಗಳಾಗಿದ್ದು, ವರದಿಗಳು ನೇರವಾಗಿ ನಮ್ಮ ಜೇಬನ್ನೇ ಸೇರುವ ಟೆಕ್ನಾಲಾಜಿಯಲ್ಲಿ ನಾವಿರುವಾಗ ಜಗತ್ತಿನಾದ್ಯಂತ ನಡೆಯುವ, ನಡೆಯಲಿರುವ ಕ್ಷಣಕ್ಷಣದ ಸುದ್ದಿಗಳು, ಮಾಹಿತಿಗಳನ್ನು ಪಡೆದುಕೊಳ್ಳಬಹುದಾದ ಯುಗದಲ್ಲಿ ನಾವಿದ್ದೇವೆ. ವರದಿಗಳು ಅವಸರದ ಬರಹವಾಗಿದ್ದರೂ ಮಾಹಿತಿಯ ಶೋಧನೆ ಸಮಂಜಸವಾಗಿದ್ದಾಗ ಮಾತ್ರ ನಿಖರವಾದ ವರದಿ ಎಂದೆನಿಸುತ್ತದೆ. ಡಿಜಿಟಲ್ ಯುಗದ ಈ ಸಮಯಗಳಲ್ಲಿ ವರದಿಗಳಲ್ಲಿ ತಿರುಚುವಿಕೆ, ಅಪೂರ್ಣ ಮಾಹಿತಿ, ನಮ್ಮಲ್ಲಿಯೇ ಮೊದಲು ಎಂದು ಟಿಆರ್‌ಪಿಗಾಗಿ ಪೈಪೋಟಿ ದಿನನಿತ್ಯ ಕಾಣಬಹುದಾಗಿದೆ.

ಆನ್‌ಲೈನ್, ಆ್ಯಪ್, ವೆಬ್‌ಸೈಟ್ ಪತ್ರಿಕೋದ್ಯಮಗಳು ಮುದ್ರಣ ಮಾದ್ಯಮವನ್ನು ಈಗಾಗಲೇ ದಾಟಿ ಮುಂದೆ ಸಾಗಿದೆ. ಇದೀಗ ಪತ್ರಕರ್ತರು ಮಾತ್ರವಲ್ಲ ಜನಸಾಮಾನ್ಯರೇ ಪತ್ರಿಕೋದ್ಯವiದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರ ಪರಿಣಾಮವಾಗಿ ಪ್ರತೀ ಸಂಸ್ಥೆಗಳಲ್ಲಿಯೂ ಪತ್ರಕರ್ತರ ಸಂಖ್ಯೆ ಪತ್ರಿಕೆಗಳ ಪ್ರಸಾರ ದಿನೇ ದಿನೇ ಇಳಿಮುಖವಾಗುತ್ತಲೇ ಇದೆ. ಅಂದರೆ ಮುಂದೊಂದು ದಿನ ಪತ್ರಕರ್ತರೇ ಇಲ್ಲದ ಪತ್ರಿಕೋದ್ಯಮ ಪ್ರಪಂಚ ಇರಲಿದೆ ಎಂಬ ಸೂಚನೆ ಗೋಚರಿಸುತ್ತಿದೆ. ಈಗಾಗಲೇ ಜಗತ್ತಿನಾದ್ಯಂತ ಬಾಂಬ್ ಸ್ಫೋಟ ಮೊದಲಾದ ಅನೇಕಾನೇಕ ಪ್ರಮುಖ ಘಟನೆಗಳು ನಡೆದಾಗ ಅವುಗಳ ಮಾಹಿತಿಗಳನ್ನು ಆನ್ ಲೈನ್ ಮಾಲಕ ಜಗತ್ತಿಗೆ ನೀಡಿದ್ದು ಜನಸಾಮಾನ್ಯರೇ. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಳ್ಳುವುದು, ಸಂವಹನ ನಡೆಸುವುದು, ಮಾಹಿತಿಯ ಗುಣಮಟ್ಟವನ್ನು ನಿರ್ದರಿಸುವುದು, ಪ್ರತಿಕ್ರಿಯಿಸುವುದು, ವಿಮರ್ಶಿಸುವುದು, ಚರ್ಚಿಸುವುದು, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ಮೊದಲಾದ ಅವಕಾಶಗಳು ಆನ್‌ಲೈನ್ ಮೂಲಕ ಸಿಕ್ಕಿದಾಗ ಜನಸಾಮಾನ್ಯರ ಕೈಗೆ ಪಾರದರ್ಶಕದ ಶಸ್ತ್ರ ಸಿಕ್ಕಿದಂತಾಗಿದೆ. ಜನಸಾಮಾನ್ಯರೆಲ್ಲರ ನೆಚ್ಚಿನ ಆಯ್ಕೆಯಾಗಿ ಸಾಮಾಜಿಕ ಜಾಲತಾಣ ಯಾವಾಗ ಸ್ಥಾನವನ್ನು ಪಡೆಯಿತೋ ಅವಾಗಲೇ ಪತ್ರಿಕೆ ಟಿವಿ ಮಾದ್ಯಮ ಜನರ ದ್ವಿತೀಯ ಆಯ್ಕೆಯಾಗಿ ಹಿಂಬಡ್ತಿ ಪಡೆಯಲಾರಂಬಿಸಿದೆ. ಅನಿವಾರ್ಯವಾಗಿ ಪತ್ರಕರ್ತರು ಆನ್ ಲೈನ್‌ನತ್ತ ಮುಖಮಾಡಲೇ ಬೇಕಾಯಿತು.

ಹಿಂದೆ ಪತ್ರಿಕೆಗಳಲ್ಲಿ ಪ್ರಾಮಾಣಿಕತೆ ಎಲ್ಲಿದೆ ಎಂದು ಹುಡುಕುವುದು ಕಷ್ಟ. ಆದರೆ ಪತ್ರಿಕೆ ನಡೆಸುವವರ, ನಡೆದಾಡುವವರ, ಓಡಾಡುವವರ ಸುತ್ತುಮುತ್ತು ಅದನ್ನು ಕಂಡುಕೊಳ್ಳಬಹುದಿತ್ತು. ನೇರ ಎಂದು ನಿರಂತರವಾಗಿ ಬೊಬ್ಬೆ ಹೊಡೆಯುವ ಬಹುತೇಕ ದಿಟ್ಟ ಪತ್ರಿಕಾ ವಲಯವನ್ನೊಮ್ಮೆ ಬೆನ್ನು ಹತ್ತಿದರೆ ಜಾಹೀರಾತಿನ ಆಸೆಗೆ ಬಲಿಬಿದ್ದು ಹಲವಾರು ಓದುಗರು ಖಾತರದಿಂದ ಕಾಯುತ್ತಿದ್ದ ಸಮಗ್ರ ಸುದ್ದಿಗಳನ್ನು ಪ್ರಸಾರ ಮಾಡದೇ ಇರುವುದನ್ನು ಪತ್ತೆಹಚ್ಚಬಹುದು. ಇದು ಪತ್ರಿಕಾ ಮಾದ್ಯಮ ಅಲ್ಲವೇ ಅಲ್ಲ. ಬಹುಶಃ ಅದಕ್ಕೆ ಪತ್ರಿಕೋದ್ಯಮ ಸರಿಯಾದ ಹೆಸರೇ ಆಗಿದೆ. ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ. ಸಾಮಾಜಿಕ ಜಾಲತಾಣ ಬಹಳ ಸೂಕ್ಷ್ಮತೆಯ ಟೆಕ್ನಾಲಜಿಯನ್ನು ಕಾಪಾಡಿಕೊಂಡು ಬಂದಿದ್ದು, ನೆಟ್‌ವರ್ಕ್ ಮೀಡಿಯಾ ಅಂತೆಕಂತೆ ಸುಳ್ಳುಗಳನ್ನು ಅಂತೆಯೇ ಕುತಂತ್ರಿಗಳ ಬಣ್ಣವನ್ನು ಕ್ಷಣಾರ್ಧದಲ್ಲಿ ಬಯಲುಗೊಳಿಸುತ್ತದೆ. ಜನಸಾಮಾನ್ಯರು ಕೂಡಾ ಸುಳ್ಳು ಮಾದ್ಯಮವನ್ನು ನೇರಾನೇರವಾಗಿ ತರಾಟೆಗೆ ತೆಗೆದುಕೊಂಡು ಎಚ್ಚರಿಸುತ್ತಾರೆ. ಈಗ ಎಲ್ಲದಕ್ಕೂ ಜನ ಆನ್ ಲೈನ್‌ಗೆ ಒಗ್ಗಿಕೊಂಡಿದ್ದಾರೆ. ಹೆಚ್ಚಾಗಿ ಅಲ್ಲಲ್ಲಿ ನಡೆಯುವ ಕ್ಷಣ ಕ್ಷಣದ ಯಾವುದೇ ಮಾಹಿತಿಗಳಿಗಾಗಿ…ಕೈಯಲ್ಲಿಯೇ ಜಗತ್ತನ್ನು ನೋಡುತ್ತಾರೆ. ಮುಂದೆನಾದರೂ ಈ ಜಗತ್ತಿನಲ್ಲಿ ಸಂಭವಿಸುವುದಿದ್ದರೆ, ಅದನ್ನು ಪ್ರಪ್ರಥಮ ಬಾರಿಗೆ ನಾವು ಪಡೆದುಕೊಳ್ಳುವುದು ಸಾಮಾಜಿಕ ಜಾಲತಾಣಗಳಿಂದ ಮಾತ್ರ ಎಂಬ ಸತ್ಯ ಜನಸಾಮಾನ್ಯರಿಗೂ ಗೊತ್ತಾಗಿದೆ.


ಇದೀಗ ನಿಸ್ಪಕ್ಷವಾದ ವರದಿ ಮತ್ತು ತ್ವರಿತ ಪ್ರಸಾರಕ್ಕಾಗಿ ನಮ್ಮ ಆಯ್ಕೆಯೂ ಸಾಮಾಜಿಕ ಜಾಲತಾಣವೇ ಆಗಿದೆ. ದೀವಟಿಗೆ ಎಂಬ ಸುದ್ದಿ ಪ್ರಸಾರದ ವೆಬ್‌ಸೈಟ್ ಮೂಲಕ ಸಮಾಜಘಾತುಕ ಶಕ್ತಿಗಳನ್ನು ಬಗ್ಗುಬಡಿಯುವ ಆ ಮೂಲಕ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕೋದ್ಯಮವನ್ನು ಉಳಿಸಿ ಬೆಳೆಸಲು ಮುಂದಡಿಯಿಟ್ಟಿದ್ದೇವೆ
ಪ್ರಾಮಾಣಿಕ ಸೇವೆಗಾಗಿ ಧರ್ಮ ನಡೆಯಲ್ಲಿ ಅನುಗ್ರಹಿಸುವ ದೈವೀಶಕ್ತಿಯ ಜೀಟಿಗೆಯಾಗಿ, ಸಮಾಜಘಾತುಕ ಶಕ್ತಿಗಳನ್ನು ಸುಟ್ಟು ಬೂದಿ ಮಾಡುವ ದಗದಗಿಸುವ ದೀಟಿಗೆಯಾಗಿ, ನೊಂದವರ ಸಂಕಷ್ಟಗಳನ್ನು ಪರಿಹರಿಸಿ ಅವರ ಬಾಳನ್ನು ಬೆಳಗುವ ನೊಂದವರ ದಾರಿ ದೀಪವಾಗಿ ‘ದೀವಟಿಗೆ ಮೀಡಿಯಾ’ ವೆಬ್ ಸೈಟ್ ನಿಮ್ಮ ಮುಂದೆ ತಂದಿದ್ದೇವೆ.
ಸಮಾಜದಲ್ಲಿರುವ ಡೋಂಗಿ ಬಾಬಗಳು, ಅಕ್ರಮ ವ್ಯವಹಾರಗಳು, ಅನೈತಿಕ ಚಟುವಟಿಕೆಗಳು ದೇಶದ್ರೋಹದ ಕಾರ್ಯಗಳು, ಸಮಸ್ಯೆ ಸೃಷ್ಟಿಸಿ ಗಲಬೆಗಳನ್ನು ಹುಟ್ಟುಹಾಕಲು ನಡೆಸುವ ಸಂಚುಗಳು, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಗುತ್ತಿರುವ ದೌರ್ಜನ್ಯಗಳು ಹಿರಿಯರಿಗೆ ಆಗುತ್ತಿರುವ ಕಿರುಕುಳಗಳು, ಬದುಕು ಕಟ್ಟಿಕೊಳ್ಳಲಾರದೆ ನರಳುತ್ತಿರುವ ಸಂಸಾರಗಳು, ಮೇಲಾಧಿಕಾರಿಗಳಿಂದ ಕಿರುಕುಳಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯುವುದು ಕಂಡುಬಂದಲ್ಲಿ ಕಾನೂನಾತ್ಮಕವಾಗಿ ಅವರ ಜನ್ಮ ಜಾಲಾಡಿ ಅವರನ್ನು ಕಟಕಟೆಯ ಮೇಲೆ ನಿಲ್ಲಿಸುವ ಶಕ್ತಿಯಾಗಿ ದೀವಟಿಗೆ ಮೀಡಿಯಾ ಕೆಲಸ ಮಾಡಲು ಸಿದ್ಧವಿದೆ. ಅದಕ್ಕೆ ಓದುಗರಾದ ತಮ್ಮೆಲ್ಲರ ಪರಿಪೂರ್ಣ ಸಹಕಾರ ಬೇಕು.


ನಿಮ್ಮ ಪ್ರಾಮಾಣಿಕವಾಗಿರುವ ನ್ಯಾಯದ ಬೇಡಿಕೆಗಳಿಗೆ ನಮ್ಮ ಮೀಡಿಯಾದ ಮೂಲಕ ನ್ಯಾಯಸಮ್ಮತವಾದ ಕಳಕಳಿಯನ್ನು ಸಮಾಜದ ಮುಂದೆ ಇಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಂಕಷ್ಟಗಳಿದ್ದರೂ ಕಾನೂನು ಪರಿಮಿತಿಯೊಳಗಡೆ ಪರಿಹಾರ ಪಡೆದೇ ಪಡೆಯುವಲ್ಲಿ ನಾವು ನಿಮ್ಮ ಸಮಸ್ಯೆಗಳ ಜೊತೆಗೆ ಒಂದು ಹೆಜ್ಜೆ ಮುಂದೆ ಇದ್ದೇ ಇರುತ್ತೇವೆ.
ನಮ್ಮ ವೆಬ್ ಸೈಟ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ಓದುವುದರ ಮೂಲಕ, ಸಲಹೆ ಸೂಚನೆಗಳನ್ನು ನಿರಂತರವಾಗಿ ನೀಡುತ್ತಾ, ಸಹಕರಿಸಿ ಪ್ರೋತ್ಸಾಹಿಸುವಿರಾಗಿ ವಿನಂತಿಸುತ್ತೇವೆ.

ದೀವಟಿಗೆ ಬಳಗ

9448441282 / 9741468988

Copyright © 2025 Deevatige