crime
ಮಂಗಳೂರು: 46 ಲಕ್ಷ ಮೌಲ್ಯದ MDMA ವಶ; ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ಗಳ ಬಂಧನ
ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಕಂಕನಾಡಿ ನಗರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 46.5 ಲಕ್ಷ ರೂಪಾಯಿ ಮೌಲ್ಯದ MDMA ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ.
ದಿನಾಂಕ 19-04-2026ರಂದು ಮಂಗಳೂರಿನ ಜೆಪ್ಪಿನ ಮೊಗರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ದೊಡ್ಡ ಪ್ರಮಾಣದ MDMA ಮಾರಾಟ ಮಾಡಲು ಪೆಡ್ಲರ್ಗಳು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಬೆನ್ನತ್ತಿದ ಕಂಕನಾಡಿ ನಗರ ಪೊಲೀಸರು, ಕೆಎ 70 ಕೆ 3333 ನಂಬರ್ನ ಬಜಾಜ್ ಫ್ರೀಡಂ ಬೈಕ್ ಅನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ 465.8 ಗ್ರಾಂ ತೂಕದ MDMA ಪತ್ತೆಯಾಗಿದೆ. ಕೂಡಲೇ ಪೊಲೀಸರು ಪೆರ್ಮಾನ್ನೂರು ನಿವಾಸಿಗಳಾದ 40 ವರ್ಷದ ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ ಹಾಗೂ 37 ವರ್ಷದ ನಜರತ್ ಅಲಿ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತ ಪರ್ವೇಜ್ ಒಬ್ಬ ರೂಢಿಗತ ಡ್ರಗ್ ಪೆಡ್ಲರ್ ಆಗಿದ್ದು, ಈತನ ಮೇಲೆ ಈಗಾಗಲೇ ಮಂಗಳೂರಿನ ಪಾಂಡೇಶ್ವರ, ವಾಮಂಜೂರು, ಬಂದರು ಠಾಣೆಗಳು ಸೇರಿದಂತೆ ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟದ ಪ್ರಕರಣಗಳು ದಾಖಲಾಗಿವೆ. ಈತ ಹೊರ ಜಿಲ್ಲೆಗಳಿಂದ ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ತಂದು ಮಂಗಳೂರಿನ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಈತನ ಕೃತ್ಯಕ್ಕೆ ನಜರತ್ ಅಲಿ ಸಾಥ್ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 46,50,000/- ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ. ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

crime
ಶಿಕಾರಿಪುರ: ಜಾಗದ ವಿಚಾರಕ್ಕೆ ಗಲಾಟೆ; ಪತ್ನಿ, ಮಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ
ಶಿಕಾರಿಪುರ ತಾಲೂಕಿನ ಚುಂಚಿನಕೊಪ್ಪ ಗ್ರಾಮದಲ್ಲಿ ಜಾಗದ ವಿಚಾರವಾಗಿ ನಡೆದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ತಿರುಗಿ, ಒಂದೇ ಕುಟುಂಬದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಮೂರ್ತಿ ನಾಯ್ಕ್ ಎಂಬುವವರು ಏಪ್ರಿಲ್ 18ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಾಗ, ಅವರ ಮನೆಯ ಪಕ್ಕದಲ್ಲಿ ಹೊಸದಾಗಿ ಮನೆ ನಿರ್ಮಿಸುತ್ತಿದ್ದ ಮೇಘರಾಜ ನಾಯ್ಕ್ ಅವರಿಗೆ ಓಡಾಡಲು ಮೂರು ಅಡಿ ಜಾಗ ಬಿಡುವಂತೆ ಕೋರಿದ್ದರು. ಈ ವೇಳೆ ವಾಗ್ವಾದ ಆರಂಭವಾಗಿದ್ದು, ಮೇಘರಾಜ ನಾಯ್ಕ್ ಅವರ ಮಗ ಲೋಹಿತ್ ಎಂಬಾತ ಕಬ್ಬಿಣದ ರಾಡ್ನಿಂದ ಮೂರ್ತಿ ನಾಯ್ಕ್ ಅವರ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ.
ಗಲಾಟೆಯನ್ನು ತಡೆಯಲು ಬಂದ ಮೂರ್ತಿ ನಾಯ್ಕ್ ಅವರ ಪತ್ನಿ ಸವಿತಾಬಾಯಿ ಅವರ ತಲೆಗೂ ಲೋಹಿತ್ ಅದೇ ರಾಡ್ನಿಂದ ಹೊಡೆದು ರಕ್ತಗಾಯ ಮಾಡಿದ್ದು, ಸೀತೀಬಾಯಿ ಎಂಬುವವರು ಕಲ್ಲಿನಿಂದ ಅವರ ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಜಗಳ ಬಿಡಿಸಲು ಹೋದ ಮಗಳು ಪವಿತ್ರಾಳ ಕೂದಲು ಹಿಡಿದು ಗಣೇಶ್ ಎಂಬಾತ ಕೆಳಕ್ಕೆ ತಳ್ಳಿದ್ದು, ಆರೋಪಿ ಮೇಘರಾಜ ನಾಯ್ಕ್ ಅವರು ಮಚ್ಚು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಮೂರ್ತಿ ನಾಯ್ಕ್, ಸವಿತಾಬಾಯಿ ಮತ್ತು ಪವಿತ್ರಾ ಅವರಿಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಲೋಹಿತ್, ಸೀತೀಬಾಯಿ, ಗಣೇಶ್ ಮತ್ತು ಮೇಘರಾಜ ನಾಯ್ಕ್ ಎಂಬ ನಾಲ್ವರ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಅಡಿಯಲ್ಲಿ ಕಲಂ 118(1), 74, 329(4), 351(3), ಮತ್ತು 3(5) ರ ಪ್ರಕಾರ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

crime
ಐಪಿಎಸ್ ಅಧಿಕಾರಿಗಳ ವಿರುದ್ಧ ಕಿರುಕುಳದ ಗಂಭೀರ ಆರೋಪ: ಸ್ಫೋಟಕ ಮಾಹಿತಿ ಹೊರಹಾಕಲು ಅನುಮತಿ ಕೋರಿದ ಎಸ್ಪಿ
ಕರ್ನಾಟಕ ಪೊಲೀಸ್ ಇಲಾಖೆಯೊಳಗಿನ ಆಂತರಿಕ ಅಸಮಾಧಾನ ಈಗ ಬಹಿರಂಗ ರೂಪ ಪಡೆದಿದೆ. ಹೊರರಾಜ್ಯದ ಕೆಲವು ಐಪಿಎಸ್ ಅಧಿಕಾರಿಗಳು ಸ್ಥಳೀಯ ಕನ್ನಡದ ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ತಾರತಮ್ಯ ಎಸಗುತ್ತಿದ್ದಾರೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಪೊಲೀಸ್ ಅಧೀಕ್ಷಕ ಎಸ್.ಎಸ್. ಕಾಶಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಪತ್ರ ಬರೆದಿರುವ ಅವರು, ಇಲಾಖೆಯ ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಕಿರುಕುಳದ ಕುರಿತು ಸಾರ್ವಜನಿಕವಾಗಿ ಸ್ಫೋಟಕ ಮಾಹಿತಿಗಳನ್ನು ಹೊರಹಾಕಲು ತಮಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಪತ್ರದಲ್ಲಿರುವ ಪ್ರಮುಖ ಅಂಶಗಳು:
ತಾರತಮ್ಯದ ಆರೋಪ: ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಹೊರರಾಜ್ಯದ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರ ಬಲದಿಂದ ಕೆಳಹಂತದ ಸಿಬ್ಬಂದಿ ಹಾಗೂ ಸ್ಥಳೀಯ ಕನ್ನಡಿಗ ಅಧಿಕಾರಿಗಳ ಮೇಲೆ ದರ್ಪ ಮತ್ತು ತಾರತಮ್ಯ ತೋರುತ್ತಿದ್ದಾರೆ.
ವ್ಯವಸ್ಥಿತ ಕಿರುಕುಳ: ಮೂಲತಃ ಕನ್ನಡಿಗರಾಗಿರುವ ಅಧಿಕಾರಿಗಳನ್ನು ತುಳಿಯುವ ಉದ್ದೇಶದಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಎಸ್ಪಿ ಕಾಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿರ್ದಿಷ್ಟ ಅಧಿಕಾರಿಗಳ ವಿರುದ್ಧ ದೂರು: ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಕೆಲವು ಅಧಿಕಾರಿಗಳ ಕಾರ್ಯವೈಖರಿ ಮತ್ತು ಅವರು ಅಧೀನ ಸಿಬ್ಬಂದಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಪತ್ರದಲ್ಲಿ ನೇರವಾಗಿ ಪ್ರಸ್ತಾಪಿಸಲಾಗಿದೆ.
ಅವಕಾಶಕ್ಕಾಗಿ ಮನವಿ: ಈ ದೌರ್ಜನ್ಯಗಳ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ವಿವರಗಳನ್ನು ನೀಡಲು ಏಪ್ರಿಲ್ 18 ರಿಂದ ಏಪ್ರಿಲ್ 29ರ ನಡುವೆ 30 ನಿಮಿಷಗಳ ಕಾಲಾವಕಾಶ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಈಗಾಗಲೇ ಈ ವಿಚಾರವಾಗಿ ಮೌಖಿಕವಾಗಿ ಮತ್ತು ಲಿಖಿತವಾಗಿ ಹಲವು ಬಾರಿ ದೂರು ನೀಡಿದ್ದರೂ ಸಹ ಶೇಕಡಾ 80 ರಷ್ಟು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾಶಿ ಅವರ ಈ ಪತ್ರವು ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧವೇ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ಬಹಿರಂಗವಾಗಿ ತಿರುಗಿಬಿದ್ದಿರುವುದು ಇಲಾಖೆಯಲ್ಲಿನ ಆಂತರಿಕ ಶಿಸ್ತಿನ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.
ಮಂಗಳೂರು ಕಮೀಷನರ್ ಕರ್ಮ ಕಾಂಡ ಬಯಲು ಮಾಡುತ್ತೇನೆ ಎಂಬ ಮಾತಿನ ಹಿಂದೆ ಖಡಕ್ ಅಧಿಕಾರಿಯವರನ್ನು ಕರಾವಳಿಯಿಂದ ಎತ್ತಂಗಡಿ ಮಾಡುವ ಸಂಚು ಇರಬಹುದೇನೋ ಎಂಬ ಸಂಶಯದ ಸುಳಿಗಳು ಕಾಣುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದ ಆ ಮೂಲಕ ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೆಲವೇ ತಿಂಗಳುಗಳಲ್ಲಿ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರ ಕಾರ್ಯ ವೈಖರಿ ಕೆಲವರಿಗೆ ನುಂಗಲಾರದ ತುತ್ತಾಗಿ ಈ ಸಂಚು ನಡೆಯುತ್ತಿರಬಹುದೇ ಎಂಬುವುದು ಸಾರ್ವಜನಿಕ ಪ್ರಶ್ನೆ.

Belthangady
ಬೆಳ್ತಂಗಡಿ: ಗಾಂಜಾ ಮಾರಾಟ ಯತ್ನ ಪ್ರಕರಣ; ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಮಂಗಳೂರು ನ್ಯಾಯಾಲಯ
ಮಂಗಳೂರು: ಸುಮಾರು 17 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗೆ ಮಂಗಳೂರಿನ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 08/03/2009 ರಂದು ಬೆಳ್ತಂಗಡಿಯ ಉಜಿರೆ ರಥಬೀದಿ ಎಂಬಲ್ಲಿ ಅಂದಾಜು 1.500 ಕಿ.ಗ್ರಾಂ ತೂಕದ (ಅಂದಾಜು ಮೌಲ್ಯ 50,000 ರೂ.) ನಿಷೇಧಿತ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಬೆಳ್ತಂಗಡಿ ನಿವಾಸಿ ಟಿ.ಇ ಜೋಸೆಫ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 60/09, ಕಲಂ: 8(ಸಿ) ಜೊತೆಗೆ 20(ಬಿ) ಎನ್.ಡಿ.ಪಿ.ಎಸ್. (NDPS) ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಧೀಶರಾದ ಶ್ರೀ ಬಸವರಾಜ್ ರವರು, ಆರೋಪಿ ಟಿ.ಇ ಜೋಸೆಫ್ ತಪ್ಪಿತಸ್ಥನೆಂದು ತೀರ್ಮಾನಿಸಿ ದಿನಾಂಕ 16/04/2026 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ.
ವಿಧಿಸಲಾದ ಶಿಕ್ಷೆಯ ವಿವರಗಳು:
NDPS ಕಾಯ್ದೆಯ ಸೆಕ್ಷನ್ 8(c) ಮತ್ತು 20(b)(ii)(B) ಅಡಿಯಲ್ಲಿ: 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ 2 ತಿಂಗಳ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. NDPS ಕಾಯ್ದೆಯ ಸೆಕ್ಷನ್ 32-B(f) ಅಡಿಯಲ್ಲಿ: 1 ವರ್ಷದ ಅವಧಿಯ ಕಠಿಣ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ತನಿಖೆ ಮತ್ತು ವಾದ ಮಂಡನೆ:
ಅಂದಿನ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರಾಗಿದ್ದ ಬಿ.ಜಿ. ಸುಬ್ಬಾಪುರ್ ಮಠ್ ರವರು ಈ ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕರಾದ ಶ್ರೀಮತಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಸ್ತಾ ರವರು ಸಮರ್ಥವಾಗಿ ವಾದ ಮಂಡಿಸಿ ಆರೋಪದ ಮೇಲಿನ ದೋಷ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಪೊಲೀಸರ ಈ ಯಶಸ್ವಿ ತನಿಖೆ ಮತ್ತು ನ್ಯಾಯಾಲಯದ ಕಠಿಣ ತೀರ್ಪು ಸಮಾಜಕ್ಕೆ ಪ್ರಬಲ ಸಂದೇಶ ರವಾನಿಸಿದೆ.


-
crime3 weeks agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime3 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 weeks agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada4 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala4 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala2 months agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
