government
ಸುಬ್ರಹ್ಮಣ್ಯದಲ್ಲಿ ‘ಅನಧಿಕೃತ ಪೂಜೆ’ಗಳ ಹಾವಳಿ: ಭಕ್ತರೇ, ಧಾರ್ಮಿಕ ಮಾಫಿಯಾ ಬಗ್ಗೆ ಎಚ್ಚರ!
ಸುಬ್ರಹ್ಮಣ್ಯ: ರಾಜ್ಯದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು ಕೋಟಿಗಟ್ಟಲೆ ಲೂಟಿ ಮಾಡುವ ಧಾರ್ಮಿಕ ಮಾಫಿಯಾವೊಂದು ಸದ್ದಿಲ್ಲದೆ ತಲೆಎತ್ತಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಈ ಅನಧಿಕೃತ ಪೂಜೆಗಳ ಜಾಲವು ಭಕ್ತರ ಕಿಸೆಗೆ ಕತ್ತರಿ ಹಾಕುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಕ್ಷೇತ್ರಕ್ಕೆ ಬರುವ ಭಕ್ತರು ಇಲ್ಲಿ ಮುಖ್ಯವಾಗಿ ಎರಡು ರೀತಿಯ ಪೂಜಾ ಪದ್ಧತಿಗಳನ್ನು ಗಮನಿಸಬೇಕಾಗಿದೆ.
೧. ಅಧಿಕೃತ ಪೂಜೆ (ಕ್ಷೇತ್ರದ ಸನ್ನಿಧಿಯಲ್ಲಿ ನಡೆಯುವ ಸೇವೆಗಳು)
ದೇವಸ್ಥಾನದ ಕಚೇರಿಯಿಂದ ರಶೀದಿ (ಚೀಟಿ) ಪಡೆದು, ದೇವಸ್ಥಾನದ ಆವರಣದೊಳಗೇ ಅಧಿಕೃತ ವೈದಿಕರ ಮುಖಾಂತರ ಶಾಸ್ತ್ರೋಕ್ತವಾಗಿ ನಡೆಯುವ ಪೂಜೆಗಳಿವು.
ಪ್ರಯೋಜನ: ಈ ಪೂಜೆಗಳಿಗೆ ಭಕ್ತರು ನೀಡುವ ಹಣ ನೇರವಾಗಿ ದೇವಸ್ಥಾನದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.
ವಿಶ್ವಾಸಾರ್ಹತೆ: ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಮಹತ್ವಾಕಾಂಕ್ಷೆಯ ಪೂಜೆಗಳು ಸುಬ್ರಹ್ಮಣ್ಯ ಸ್ವಾಮಿಗೆ ನೇರವಾಗಿ ತಲುಪಬೇಕಾದರೆ ಅಧಿಕೃತ ಪೂಜೆಗಳನ್ನೇ ಆಶ್ರಯಿಸಬೇಕು.
೨. ಅನಧಿಕೃತ ಪೂಜೆ (ಖಾಸಗಿ ಲೂಟಿ ಕೇಂದ್ರಗಳು)
ದೇವಸ್ಥಾನದ ಆಡಳಿತ ಮಂಡಳಿಗೂ ಇವರಿಗೂ ಯಾವುದೇ ಸಂಬಂಧವಿರುವುದಿಲ್ಲ. ನಿವೃತ್ತ ವೈದಿಕರು, ದೇವಸ್ಥಾನದಿಂದ ಹೊರಹಾಕಲ್ಪಟ್ಟವರು, ಸಾಲದ ಸುಳಿಗೆ ಸಿಲುಕಿ ಹಣದ ಅಗತ್ಯವಿರುವವರು ಹಾಗೂ ಶೀಘ್ರವಾಗಿ ಶ್ರೀಮಂತರಾಗಲು ಬಯಸುವ ಕೆಲವು ಖಾಸಗಿ ವ್ಯಕ್ತಿಗಳು ಈ ಅನಧಿಕೃತ ಪೂಜೆಗಳ ಸೂತ್ರಧಾರರಾಗಿದ್ದಾರೆ.
ಗ್ಯಾರೇಜ್, ಪಾರ್ಕಿಂಗ್ ಲಾಡ್ಜ್ ಗಳಲ್ಲಿಯೂ ಹೋಮ-ಹವನ!
ಇತ್ತೀಚಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಇಂತಹ ಅಣಬೆ ಪೂಜಾ ಕೇಂದ್ರಗಳು ಮಿತಿಮೀರಿವೆ. ನಂಬಲಾಗದ ಸಂಗತಿಯೆಂದರೆ:
ಗ್ಯಾರೇಜ್‌ಗಳಲ್ಲಿ ಪೂಜೆ: ಸುಸ್ಥಿತಿಯಲ್ಲಿದ್ದ ವಾಹನ ಗ್ಯಾರೇಜ್‌ಗಳನ್ನು ಮುಚ್ಚಿ, ಅಲ್ಲಿ ಭಕ್ತರನ್ನು ವಂಚಿಸುವ ಪೂಜಾ ಕೇಂದ್ರಗಳನ್ನು ತೆರೆಯಲಾಗಿದೆ.
ಕಾರ್ ಪಾರ್ಕಿಂಗ್‌ನಲ್ಲಿ ಹೋಮ: ಕಾಶಿಕಟ್ಟೆ ಬಳಿಯ ಲಾಡ್ಜ್ ಒಂದರ ಕಾರ್ ಪಾರ್ಕಿಂಗ್ ಜಾಗದಲ್ಲೂ ಅಂಡಿಗುಂಡಿ ಪೂಜೆಗಳನ್ನು ನಡೆಸಿ ಭಕ್ತರನ್ನು ಯಾಮಾರಿಸಲಾಗುತ್ತಿದೆ.
ಖಾಸಗಿ ಮಂದಿರಗಳ ದುರ್ಬಳಕೆ: ಸುಜ್ಞಾನ ಮಂದಿರ, ಶಾರದಾ ಮಂದಿರ, ಶಿವ ಸದನ, ಹಾಗೂ ಕೆಲವು ಖಾಸಗಿ ಮನೆಗಳಲ್ಲೂ ಶಾಸ್ತ್ರೋಕ್ತವಲ್ಲದ, ಕೇವಲ “ಹೊಗೆ ಎಬ್ಬಿಸುವ” ನಾಮಕಾವಸ್ತೆ ಪೂಜೆಗಳನ್ನು ನಡೆಸಿ ಭಕ್ತರ ಕಿಸೆ ಖಾಲಿ ಮಾಡಲಾಗುತ್ತಿದೆ.
ಅಡುಗೆ ಭಟ್ಟರ ಮನೆಯಲ್ಲಿಯೂ ಸೇವೆ : ದೇವಸ್ಥಾನದ ಅಡುಗೆ ಭಟ್ಟರೊಬ್ಬರ ಮನೆಯಲ್ಲಿಯೂ ಹೋಮದ ಹೊಗೆ ಹೊರಬರುತ್ತಿದೆ.
ಸರ್ವರ್ ಈಶನ ವಿಶೇಷ ನಾಗಾರಾಧನೆ : ಇವರೂ ಖಾಸಗೀಯಾಗಿ ಅನಧಿಕೃತ ಸಂಸ್ಕಾರ ಮಾಡುತ್ತಿದ್ದಾರೆ
ಬಳ್ಪದ ಭಟ್ರವರಿಂದಲೂ ಅನಧಿಕೃತ ಪೂಜೆ : ಆದಿ ಸುಬ್ರಹ್ಮಣ್ಯ ದೇಗುಲದ ದಾರಿಯಲ್ಲಿ ಇವರ ಅನಧಿಕೃತ ಪೂಜೆ ನಡೆಯುತ್ತಿದೆ.
ವಿಶೇಷವೆಂದರೆ ಕೇರಳದ ಭಟ್ರವರಿಂದಲೂ ಪೂಜೆ ಆರಂಭ : ಸ್ಥಳೀಯರು ನಮ್ಮ ಜಿಲ್ಲೆಯವರು ಬಿಟ್ಟು ಈಗ ಕೇರಳದ ಭಟ್ರು ಕೂಡಾ ಪೂಜೆ ಮಾಡಲು ಶುರು ಮಾಡಿದ್ದು, ಇನ್ನೂ ಯಾವ ರಾಜ್ಯದವರು ಬರುತ್ತಾರೋ ಗೊತ್ತಿಲ್ಲ.
ಆನ್‌ಲೈನ್‌ನಲ್ಲೂ ಸುಬ್ರಹ್ಮಣ್ಯನ ಹೆಸರಿನಲ್ಲಿ ‘ಟ್ರೇಡಿಂಗ್’!
ಈ ದಲ್ಲಾಳಿಗಳು ಈಗ ಡಿಜಿಟಲ್ ರೂಪದಲ್ಲೂ ಭಕ್ತರಿಗೆ ಜಾಲ ಬೀಸುತ್ತಿದ್ದಾರೆ. “ದೇವಸ್ಥಾನಕ್ಕಿಂತ ಕಡಿಮೆ ವೆಚ್ಚ”, “ರಶ್ ಇರುವುದಿಲ್ಲ”, “ಉಚಿತ ಊಟ-ವಸತಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನೀಡಿ ಆನ್‌ಲೈನ್ ಮೂಲಕ ಭಕ್ತರನ್ನು ಬುಕ್ ಮಾಡಲಾಗುತ್ತಿದೆ. ಕುಮಾರಧಾರ ನದಿಯ ದಾಟಿದ ತಕ್ಷಣ, “ಇಲ್ಲಿ ಎಲ್ಲಿ ಪೂಜೆ ಮಾಡಿದರೂ ದೇವರಿಗೆ ತಲುಪುತ್ತದೆ” ಎಂದು ಅಮಾಯಕ ಜನರನ್ನು ಮಂಗ ಮಾಡಲಾಗುತ್ತಿದೆ.
ಕಾನೂನಾತ್ಮಕ ತೊಡಕು: ಇವೆಲ್ಲವೂ ಖಾಸಗಿ ಜಾಗಗಳಲ್ಲಿ, ವೈಯಕ್ತಿಕ ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವುದರಿಂದ “ಧಾರ್ಮಿಕ ಸ್ವಾತಂತ್ರ್ಯ”ದ ಅಡಿಯಲ್ಲಿ ಪೊಲೀಸರಾಗಲಿ ಅಥವಾ ದೇವಸ್ಥಾನದ ಮಂಡಳಿಯಾಗಲಿ ತಕ್ಷಣ ಕ್ರಮ ಕೈಗೊಳ್ಳಲು ಕಾನೂನಾತ್ಮಕ ಅಡೆತಡೆಗಳಿವೆ.
ಒಟ್ಟಾಗಿ ಹೇಳುವುದಾದರೆ ಇದಕ್ಕೆ ಕಡಿವಾಣ ಬೀಳದೆ ಇದ್ದರೆ ಮುಂದೊಂದು ದಿನ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಭಕ್ತರ ಸಂಖ್ಯೆಯೆ ಇಲ್ಲದಿರಬಹುದು. ಮಾನ್ಯ ಧಾರ್ಮಿಕ ಖಾತೆಯ ಮಂತ್ರಿಗಳು ಇತ್ತ ಗಮನಹರಿಸಲೇ ಬೇಕು.

ಭಕ್ತರಿಗೆ ನಮ್ಮ ಮನವಿ ಮತ್ತು ಜಾಗೃತಿ:
ಭಕ್ತರೇ, ನಿಮ್ಮ ಕಷ್ಟ ನಿವಾರಣೆಗೆ ಹಾಗೂ ದೇವರಿಗೆ ಸಲ್ಲಿಸುವ ಸೇವೆ ಸಾರ್ಥಕವಾಗಬೇಕಾದರೆ ಎಚ್ಚರಿಕೆಯಿಂದ ಇರಿ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವಾಗ ಕೇವಲ ದೇವಸ್ಥಾನದ ಅಧಿಕೃತ ಕೌಂಟರ್‌ಗಳು ಅಥವಾ ಅಧಿಕೃತ ವೆಬ್‌ಸೈಟ್ ಮೂಲಕವೇ ಪೂಜೆಗಳನ್ನು ಕಾಯ್ದಿರಿಸಿ.
ಮಧ್ಯವರ್ತಿಗಳ, ದಲ್ಲಾಳಿಗಳ ಹಾಗೂ ಕಡಿಮೆ ವೆಚ್ಚದ ಆಮಿಷ ಒಡ್ಡುವ ಆನ್‌ಲೈನ್ ವಂಚಕರ ಮಾತುಗಳಿಗೆ ಮರುಳಾಗಬೇಡಿ.
ಗ್ಯಾರೇಜ್, ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ನಡೆಯುವ ಪೂಜೆಗಳಿಂದ ದೇವರಿಗೂ ಪ್ರೀತಿಯಾಗುವುದಿಲ್ಲ, ನಿಮಗೂ ಫಲ ಸಿಗುವುದಿಲ್ಲ; ಕೇವಲ ವಂಚಕರ ಕಿಸೆ ತುಂಬುತ್ತದೆ ಅಷ್ಟೇ.
“ಬೋಧಿಸುವ ಸ್ಥಳದಲ್ಲಿ ಬೋಳಿಸುವವರಿದ್ದಾರೆ, ನಿಮ್ಮ ಭಕ್ತಿ ನಿಮ್ಮ ಎಚ್ಚರಿಕೆಯಲ್ಲಿರಲಿ.”
court
ಬೆಂಗಳೂರು ‘ರಿಂಗ್ ರೋಡ್ ಶುಭಾ’ ಕೊಲೆ ಪ್ರಕರಣ: ಅಪರಾಧಿಗಳ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ
ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ 2003ರ ಬಹುಚರ್ಚಿತ ‘ರಿಂಗ್ ರೋಡ್ ಶುಭಾ’ ಕೊಲೆ ಪ್ರಕರಣದ ಪ್ರಮುಖ ಅಪರಾಧಿಗಳಾದ ಶುಭಾ ಶಂಕರನಾರಾಯಣ ಮತ್ತು ಆಕೆಯ ಪ್ರಿಯಕರ ಡಿ. ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಕರ್ನಾಟಕ ಸಚಿವ ಸಂಪುಟ ತಿರಸ್ಕರಿಸಿದೆ. ಜೀವಾವಧಿ ಶಿಕ್ಷೆಯಿಂದ ವಿನಾಯಿತಿ ಕೋರಿ ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ಈ ಮನವಿಯನ್ನು ಪರಿಶೀಲಿಸಿದ ಸಂಪುಟ, ಈ ಕೃತ್ಯವು ಅತ್ಯಂತ ಕ್ರೂರ ಹಾಗೂ ಪೂರ್ವನಿಯೋಜಿತವಾಗಿದ್ದು ಕಾನೂನು ಚೌಕಟ್ಟಿಗೆ ಬರುವುದಿಲ್ಲವೆಂದು ತಳ್ಳಿಹಾಕಿದೆ.
ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಬಳಿಕ, ಶಿಕ್ಷೆ ಕಡಿತ ಅಥವಾ ಕ್ಷಮಾದಾನ ಕೋರಿ ಶುಭಾ ಹಾಗೂ ಅರುಣ್ ವರ್ಮಾ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರ ಸಚಿವಾಲಯವು ನಿಯಮಾನುಸಾರ ಅಭಿಪ್ರಾಯ ಕೋರಿ ಅರ್ಜಿಯನ್ನು ರಾಜ್ಯ ಗೃಹ ಇಲಾಖೆಗೆ ರವಾನಿಸಿತ್ತು. ಗೃಹ ಇಲಾಖೆಯು ಕಾರಾಗೃಹ ಹಾಗೂ ಪೊಲೀಸ್ ಇಲಾಖೆಯಿಂದ ಅಭಿಪ್ರಾಯ ಸಂಗ್ರಹಿಸಿ, ಕಡತವನ್ನು ಸಚಿವ ಸಂಪುಟದ ಮುಂದಿಟ್ಟಿತ್ತು.
ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಮಹತ್ವದ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಗಿರೀಶ್ ಕೊಲೆ ಕೃತ್ಯವು ಅತ್ಯಂತ ಕ್ರೂರ, ಅಮಾನವೀಯ ಹಾಗೂ ಪೂರ್ವನಿಯೋಜಿತವಾಗಿದ್ದರಿಂದ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಮತ್ತು ಈ ಅರ್ಜಿಗಳು ಕಾನೂನು ಚೌಕಟ್ಟಿನಲ್ಲಿ ಬರುವುದಿಲ್ಲ ಎಂದು ತೀರ್ಮಾನಿಸಿ ಸಂಪುಟವು ಅರ್ಜಿಯನ್ನು ತಿರಸ್ಕರಿಸಿದೆ. ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿರುವ ಈ ಸಂಪುಟದ ಶಿಫಾರಸನ್ನು ಇದೀಗ ಅಂತಿಮ ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಏನಿದು ‘ರಿಂಗ್ ರೋಡ್ ಶುಭಾ’ ಪ್ರಕರಣ?
2003ರ ಡಿಸೆಂಬರ್ 3 ರಂದು ಇಂಟೆಲ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬಿ.ವಿ. ಗಿರೀಶ್ (27) ಅವರೊಂದಿಗೆ ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ಶಂಕರನಾರಾಯಣ ಅವರ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ನಡೆದ ಕೇವಲ ನಾಲ್ಕೇ ದಿನಗಳಲ್ಲಿ, ಶುಭಾ ತನ್ನ ಭಾವಿ ಪತಿ ಗಿರೀಶ್‌ನನ್ನು ಹೊರಗೆ ಕರೆದೊಯ್ದು, ವಿಮಾನಗಳು ಇಳಿಯುವುದನ್ನು ನೋಡೋಣವೆಂದು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ರಿಂಗ್ ರೋಡ್‌ಗೆ ಕರೆತಂದಿದ್ದಳು.
ಪೂರ್ವಯೋಜಿತ ಸಂಚಿನಂತೆ, ಶುಭಾಳ ಪ್ರಿಯಕರ ಅರುಣ್ ವರ್ಮಾ ಮತ್ತು ಆತನ ಸಹಚರರು ಗಿರೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದರು. ಮನೆಯವರು ನಿಗದಿಪಡಿಸಿದ್ದ ಮದುವೆ ಇಷ್ಟವಿಲ್ಲದೆ, ಪ್ರಿಯಕರನೊಂದಿಗೆ ಸೇರಿ ನಡೆಸಿದ ಈ ಹತ್ಯೆ ಪ್ರಕರಣವು ರಾಜ್ಯಾದ್ಯಂತ ಭಾರೀ ಆಕ್ರೋಶ ಹಾಗೂ ಸದ್ದು ಮಾಡಿತ್ತು. ಆಗಷ್ಟೇ ಬಳಕೆಯಲ್ಲಿ ಬಂದಿದ್ದ ಮೊಬೈಲ್ ಕಾಲ್ ಡಿಟೇಲ್ಸ್ (CDR) ಆಧಾರದ ಮೇಲೆ ಪೊಲೀಸರು ಶುಭಾ ಮತ್ತು ಆಕೆಯ ಸಹಚರರನ್ನು ಬಂಧಿಸಿದ್ದರು.
2010ರಲ್ಲಿ ಬೆಂಗಳೂರಿನ ತ್ವರಿತಗತಿ ನ್ಯಾಯಾಲಯವು ಶುಭಾ, ಅರುಣ್ ವರ್ಮಾ, ವೆಂಕಟೇಶ್ ಮತ್ತು ದಿನೇಶ್ ಅವರಿಗೆ ಕೊಲೆ ಹಾಗೂ ಸಂಚು ರೂಪಿಸಿದ ಆರೋಪದಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಈ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದ್ದವು.
government
‘ಭಾರತ ಮಾತಾ ಕೀ ಜೈ’ ಅಂದ ಮಾತ್ರಕ್ಕೆ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲಾಗದು: ಮಂಗಳೂರು ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ ಹಾಗೂ ಘಟನೆಯ ಸ್ಪಷ್ಟನೆ!
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅತ್ಯಂತ ಕಠಿಣ ಹಾಗೂ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನ ಪ್ರಸಿದ್ಧ ಪೇಜ್ ‘Kudla Trolls’ (ಕುಡ್ಲಾ ಟ್ರೋಲ್ಸ್) ನಲ್ಲಿ ಪ್ರಸಾರವಾದ ಪೋಸ್ಟ್‌ಗೆ ಪೊಲೀಸ್ ಇಲಾಖೆಯು ಅಧಿಕೃತವಾಗಿ ಪ್ರತಿಕ್ರಿಯಿಸಿದ್ದು, ದೇಶಭಕ್ತಿಯ ಹೆಸರಿನಲ್ಲಿ ಕಾನೂನುಬಾಹಿರ ಕೃತ್ಯಗಳನ್ನು ಎಸಗುವವರಿಗೆ ಖಡಕ್ ಎಚ್ಚರಿಕೆ ನೀಡಿದೆ.
‘ಕುಡ್ಲಾ ಟ್ರೋಲ್ಸ್’ ಪೋಸ್ಟ್ ಮತ್ತು ಇಲಾಖೆಯ ಉತ್ತರ:
ಇನ್‌ಸ್ಟಾಗ್ರಾಮ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪೋಸ್ಟ್‌ಗೆ ಕಮೀಷನರ್ ಅವರ ಪ್ರಕಟಣೆಯ ಮೂಲಕ ಇಲಾಖೆಯು ನೇರ ಸ್ಪಷ್ಟನೆ ನೀಡಿದೆ. “ಕಾನೂನು ಉಲ್ಲಂಘಿಸುವವರು ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ‘ದೇಶಭಕ್ತಿ’ಯನ್ನು ಗುರಾಣಿಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ” ಎಂದು ಇಲಾಖೆ ತಿಳಿಸಿದೆ.
ಮಂಗಳೂರು ಪೊಲೀಸ್ ಕಮೀಷನರ್ ಅವರ ಹೇಳಿಕೆಯ ಪೂರ್ಣ ವಿವರ:
“ಭಾರತ ಮಾತಾ ಕೀ ಜೈ!
ನಾವು ಪೊಲೀಸರು, ಭಾರತ ಮಾತೆಯ ಹೆಮ್ಮೆಯ ಪುತ್ರ-ಪುತ್ರಿಯರು. ದೇಶದ ಸೇವೆ ಮತ್ತು ರಕ್ಷಣೆಗಾಗಿ ನಾವು ಪೊಲೀಸ್ ಪಡೆಗೆ ಸೇರಿದ್ದೇವೆ. ಸಂವಿಧಾನವನ್ನು ಎತ್ತಿಹಿಡಿಯಲು ಹಾಗೂ ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ನಾವು ಪ್ರತಿಜ್ಞೆ ಮಾಡಿದ್ದೇವೆ. ಈ ಜವಾಬ್ದಾರಿಯನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಹೆಮ್ಮೆಯಿಂದ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ.
ದುರದೃಷ್ಟವಶಾತ್, ದೇಶದ ಒಳಗೆ ರಾಷ್ಟ್ರವನ್ನು ರಕ್ಷಿಸುವ ಭರದಲ್ಲಿ, ನಮ್ಮದೇ ದೇಶದ ನಾಗರಿಕರು ಕಾನೂನು ಮುರಿದಾಗ ಕೆಲವೊಮ್ಮೆ ನಾವು ಅವರನ್ನು ನಿಯಂತ್ರಿಸಬೇಕಾಗುತ್ತದೆ.
ದೇಶದ ಕಾನೂನುಗಳನ್ನು ಮೀರುವವರು ಮತ್ತು ಸಂವಿಧಾನದ ಆಶಯಗಳಿಗೆ ಗೌರವ ನೀಡದವರು, ತಮ್ಮ ವಿರುದ್ಧದ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ‘ದೇಶಭಕ್ತಿ’ಯನ್ನು ಗುರಾಣಿಯಾಗಿ ಬಳಸಲು ಸಾಧ್ಯವಿಲ್ಲ.ಅಪರಾಧ ಎಸಗಿ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತಂದ ನಂತರ “ಭಾರತ್ ಮಾತಾ ಕಿ ಜೈ” ಎಂದು ಕೂಗಿದ ಮಾತ್ರಕ್ಕೆ ಯಾರೂ ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ.
ತಮ್ಮ ತಪ್ಪು ನಡವಳಿಕೆ ಅಥವಾ ಕಾನೂನುಬಾಹಿರ ಕೃತ್ಯಗಳಿಂದ ಗಮನ ಬೇರೆಡೆ ಸೆಳೆಯಲು ದೇಶಭಕ್ತಿಯ ಘೋಷಣೆಗಳನ್ನು ಬಳಸುವುದು ರಾಷ್ಟ್ರಸೇವೆಯಾಗುವುದಿಲ್ಲ. ಬದಲಾಗಿ, ತಾವು ಮಾಡುವ ಕೆಲಸಗಳು ಭಾರತ ಮಾತೆಗೆ ಹೆಮ್ಮೆ ತರುವಂತಹ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತಿವೆಯೇ ಇಲ್ಲವೇ ಎಂದು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಭಾರತ ಮಾತಾ ಕೀ ಜೈ!
ಸುದ್ದಿಯ ಸಾರಾಂಶ:ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಸಾರ್ವಜನಿಕವಾಗಿ ಕಾನೂನು ಕೈಗೆತ್ತಿಕೊಳ್ಳುವವರು, ಆ ಬಳಿಕ ದೇಶಭಕ್ತಿಯ ಶೀರ್ಷಿಕೆ/ಘೋಷಣೆಗಳನ್ನು ಬಳಸಿ ತಮಗೆ ರಕ್ಷಣೆ ಪಡೆಯಲು ಯತ್ನಿಸುವುದಕ್ಕೆ ಕಮೀಷನರ್ ತಮ್ಮ ಹೇಳಿಕೆಯ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವುದೇ ನಿಜವಾದ ದೇಶಭಕ್ತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಅತ್ಯಂತ ಕಠಿಣ ಹಾಗೂ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ದೇಶಭಕ್ತಿಯ ಹೆಸರಿನಲ್ಲಿ ಕಾನೂನುಬಾಹಿರ ಕೃತ್ಯಗಳನ್ನು ಎಸಗುವವರಿಗೆ ಎಚ್ಚರಿಕೆ ನೀಡುವುದರ ಜೊತೆಗೆ, ಇತ್ತೀಚಿನ ಘಟನೆಯೊಂದರ ಕುರಿತು ಪೊಲೀಸ್ ಇಲಾಖೆಯ ಅಧಿಕೃತ ಸ್ಪಷ್ಟನೆಯನ್ನು ಬಿಡುಗಡೆ ಮಾಡಲಾಗಿದೆ.
ಘಟನೆಯ ಕುರಿತು ಪೊಲೀಸ್ ಇಲಾಖೆಯ ಸ್ಪಷ್ಟನೆ:
ಪೊಲೀಸರು ಪ್ರತಿಭಟನಾಕಾರರನ್ನು ಕೇವಲ ಒಮ್ಮೆ ಮಾತ್ರ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅನೇಕರು ತಪ್ಪು ಅಭಿಪ್ರಾಯದಲ್ಲಿದ್ದರು. ಈ ಕುರಿತು ಇಲಾಖೆಯು ಕೆಳಗಿನ ಅಂಶಗಳ ಮೂಲಕ ಸ್ಪಷ್ಟನೆ ನೀಡಿದೆ:
- ಪ್ರತಿಭಟಿಸಲು ಬಯಸುವ ಯಾರಿಗೂ ನಾವು ಎಂದಿಗೂ ಅನುಮತಿ ನಿರಾಕರಿಸಿಲ್ಲ. ಶಾಂತಿಭಂಗವಾಗುವ ಆತಂಕವಿರುವ ಸಂದರ್ಭದಲ್ಲಿ ನಾವು ಕೆಲವು ಷರತ್ತುಗಳನ್ನು ವಿಧಿಸುತ್ತೇವೆ. ಇದನ್ನು ನಾವು ಅನೇಕ ಬಾರಿ ಮಾಡಿದ್ದೇವೆ.
- ಆದರೆ, ಈ ಘಟನೆಯಲ್ಲಿ ಅವರು ಅನುಮತಿಯನ್ನೂ ಕೇಳಿರಲಿಲ್ಲ ಹಾಗೂ ಪೊಲೀಸರಿಗೆ ಯಾವುದೇ ಮುನ್ಸೂಚನೆಯನ್ನೂ ನೀಡಿರಲಿಲ್ಲ.
- ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಪ್ರತಿಭಟಿಸಲು ಅವಕಾಶ ನೀಡಲಾಗಿತ್ತು ಮತ್ತು ಅದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು.
- ಹೊರಗಿನಿಂದ ಒಳಗೆ ನುಗ್ಗಲು ಯತ್ನಿಸಿದವರ ವಿರುದ್ಧ ಕಾಲೇಜು ಆಡಳಿತ ಮಂಡಳಿಯು ದೂರು ನೀಡಿದರೆ ಅದು ಅತಿಕ್ರಮ ಪ್ರವೇಶವಾಗುತ್ತದೆ ಮತ್ತು ಅವರನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಗಿದೆ.
- ಅವರನ್ನು ವಶಕ್ಕೆ ತೆಗೆದುಕೊಂಡ ನಂತರ, ಅಂತಹ ಕೃತ್ಯವನ್ನು ಪುನರಾವರ್ತಿಸುವುದಿಲ್ಲ ಎಂದು ಖಾತರಿಪಡಿಸಿಕೊಳ್ಳಲು ನಾವು ಮುಚ್ಚಳಿಕೆ (ಬಾಂಡ್) ಬರೆಸಿಕೊಳ್ಳಲು ಬಯಸಿದ್ದೆವು. ಆದಾಗ್ಯೂ, ಅವರ ಮನವಿಯ ಮೇರೆಗೆ ಅದನ್ನು ಪಡೆಯಲಿಲ್ಲ ಮತ್ತು ಅವರು ವಿದ್ಯಾರ್ಥಿಗಳಾಗಿರುವುದರಿಂದ ಸೌಮ್ಯವಾದ ದೃಷ್ಟಿಕೋನವನ್ನು ತೋರಲಾಯಿತು.
- ಇದರ ಹೊರತಾಗಿಯೂ ಅವರು ಮಧ್ಯಾಹ್ನ ಮತ್ತೆ ತೆರಳಿ, ಕಾಲೇಜು ಅವರ ಬೇಡಿಕೆಗಳನ್ನು ಒಪ್ಪಿಕೊಂಡಿದ್ದರೂ ಸಹ ವಿದ್ಯಾರ್ಥಿಗಳನ್ನು ಪ್ರಚೋದಿಸಲು ಯತ್ನಿಸಿದರು. ಹೀಗಾಗಿ ಅವರನ್ನು ಮತ್ತೊಮ್ಮೆ ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಲಾಗಿದೆ. ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ.
government
ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ: ಪ್ರಮುಖ 6 ರಾಜ್ಯಗಳಿಗೆ ಹೊಸ ರಾಜ್ಯಪಾಲರ ಘೋಷಣೆ
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಪ್ರಮುಖ 6 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿ ಹಾಗೂ ಕೆಲವರನ್ನು ವರ್ಗಾವಣೆ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ 19ನೇ ರಾಜ್ಯಪಾಲರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ ಹಾಗೂ ಹಿರಿಯ ಬಿಜೆಪಿ ನಾಯಕಿ ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ರಾಜ್ಯವಾರು ನೂತನ ರಾಜ್ಯಪಾಲರ ವಿವರ:
ಕರ್ನಾಟಕ: ಡಾ. ಸುಧಾ ಯಾದವ್
ತಮಿಳುನಾಡು: ರಾಜೇಂದ್ರ ವಿಶ್ವನಾಥ್ ಅರ್ಲೇಕರ್ (ಕೇರಳದಿಂದ ವರ್ಗಾವಣೆ)
ಕೇರಳ: ಓಂ ಪ್ರಕಾಶ್ ಮಾಥುರ್ (ಸಿಕ್ಕಿಂನಿಂದ ವರ್ಗಾವಣೆ)
ಸಿಕ್ಕಿಂ: ದುಷ್ಯಂತ್ ಗೌತಮ್
ಒಡಿಶಾ: ಬ್ರಜ್ ಮೋಹನ್ ರಾಮ್ (ಜಾರ್ಖಂಡ್‌ನ ಹಿರಿಯ ಬಿಜೆಪಿ ನಾಯಕ)
ಉತ್ತರಾಖಂಡ: ಧಾಲ್ ಸಿಂಗ್ ಬಿಸೇನ್
ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿಯ ಸಿಂಹಾವಲೋಕನ:
ಥಾವರ್‌ಚಂದ್ ಗೆಹ್ಲೋಟ್ ಅವರು 2021 ಜುಲೈ 11 ರಂದು ಕರ್ನಾಟಕದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ನೇತೃತ್ವದ ಮೂರು ಸರ್ಕಾರಗಳ ಜೊತೆ ಸಾಂವಿಧಾನಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದು ಇವರ ಅಧಿಕಾರಾವಧಿಯ ಅತ್ಯಂತ ಚರ್ಚಿತ ಹಾಗೂ ಪ್ರಮುಖ ನಿರ್ಧಾರವಾಗಿತ್ತು.
ನೂತನವಾಗಿ ನೇಮಕಗೊಂಡಿರುವ ರಾಜ್ಯಪಾಲರು ಶೀಘ್ರದಲ್ಲೇ ಆಯಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಡಾ. ಸುಧಾ ಯಾದವ್ ಥಾವರ್‌ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಇವರು ನಿಯೋಜನೆಗೊಂಡಿದ್ದಾರೆ. ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ ಹಾಗೂ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿರುವ ಸುಧಾ ಯಾದವ್, ಮಾಜಿ ಲೋಕಸಭಾ ಸಂಸದೆಯಾಗಿದ್ದು, ಪ್ರಸ್ತುತ ಬಿಜೆಪಿ ಸಂಸದೀಯ ಮಂಡಳಿಯ ಪ್ರಮುಖ ಸದಸ್ಯೆಯಾಗಿದ್ದಾರೆ. ಶೀಘ್ರದಲ್ಲೇ ಅವರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
-
accident3 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala4 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime9 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime7 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala7 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala10 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident4 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident6 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
