Connect with us

Mangaluru

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮುಂದೆ ಡ್ರೈನೇಜ್ ಕೊಳಚೆ ನೀರಿನ “ಈಜುಕೊಳ” – ಸ್ಮಾರ್ಟ್ ಸಿಟಿ ಹೊಗಳಿಕೆಗೆ ಜನರ ಹಿಡಿಶಾಪ

Published

on

ಮಂಗಳೂರು: ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡುವ ಹೆಸರಿನಲ್ಲಿ ಕೋಟಿ ಕೋಟಿ ಖರ್ಚು ಮಾಡುತ್ತಿರುವ ಆಡಳಿತ ವ್ಯವಸ್ಥೆಗೆ, ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಮುಂದಿನ ರಾಜ್ಯ ಹೆದ್ದಾರಿ ಬದಿಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರ ಬಾಯಲ್ಲಿ ಕೇಳಿಬರುತ್ತಿದೆ.

ಆಸ್ಪತ್ರೆಯ ಪಕ್ಕದಲ್ಲೇ ಡ್ರೈನೇಜ್ ಕೊಳಚೆ ನೀರು ಶೇಖರಣೆಯಾಗಿ ದೊಡ್ಡ ಈಜುಕೊಳದಂತಾಗಿದೆ. ನೊರೆ, ಕಸ, ದುರ್ವಾಸನೆ ಹೊರಸೂಸುವ ಈ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗುತ್ತಿದ್ದು, ರೋಗ ಹರಡುವ ಆತಂಕವೂ ಹೆಚ್ಚಾಗಿದೆ.

ರೋಗಿಗಳೇ ಮೂಗು ಮುಚ್ಚಿ ಸಂಚರಿಸುವ ಪರಿಸ್ಥಿತಿ
ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ಆಸ್ಪತ್ರೆ ಮುಂಭಾಗದ ವಾಣಿಜ್ಯ ಸಂಕೀರ್ಣಗಳಲ್ಲಿನ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ದಿನನಿತ್ಯ ಮೂಗು ಮುಚ್ಚಿ ಬದುಕುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಆಸ್ಪತ್ರೆ ಮುಂದೆಯೇ ಈ ಕೊಳಚೆ ನೀರಿನ ದುರ್ವಾಸನೆಯನ್ನು ಸಹಿಸಿಕೊಂಡು ನಡೆದಾಡುವ ದುಃಸ್ಥಿತಿ ಇದೆ.

“ಆಸ್ಪತ್ರೆ ಎಂದರೆ ಸ್ವಚ್ಛತೆ, ಆರೋಗ್ಯದ ಪ್ರತೀಕ. ಆದರೆ ಇಲ್ಲಿಯೇ ಡ್ರೈನೇಜ್ ನೀರು ನಿಂತು ಈಜುಕೊಳವಾಗಿದ್ದರೆ ರೋಗ ಗುಣವಾಗೋದಾ, ಇಲ್ಲಾ ಹೊಸ ರೋಗ ತಗುಲುತ್ತಾ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಮಾರ್ಟ್ ಸಿಟಿಗೆ ವ್ಯಂಗ್ಯ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಡ್ರೈನೇಜ್ ಸುಧಾರಣೆ ಆಗುತ್ತದೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮುಂದೆಯೇ ಇಂಥ ನರಕಯಾತನೆ ಇದ್ದರೆ, ಸ್ಮಾರ್ಟ್ ಸಿಟಿ ಎಂಬುದು ಕೇವಲ ಕಾಗದ ಮೇಲಷ್ಟೇ ಎಂಬುದು ಸಾಬೀತಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ತಕ್ಷಣ ಡ್ರೈನೇಜ್ ನೀರು ಹರಿದು ಹೋಗಲು ಕ್ರಮ ಕೈಗೊಂಡು, ಶುಚಿಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

judgement

12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ!

Published

on

ಮಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ದೋಷಿಗಳಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ಅವರು ಆದೇಶಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ!

2014ರ ಮೇ 15 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿಯ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿ ಬಂದ ಬೊಲೆರೋ ವಾಹನವೊಂದು ಅವರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಗಂಗಾಧರ ಪಾಂಗಾಳ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.

ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಬಿಂಬಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಅಪಘಾತವಲ್ಲ, ಬದಲಿಗೆ ಕೃತ್ಯ ಎಸಗಲು ರೂಪಿಸಿದ ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿತ್ತು.

ಕೊಲೆಗೆ ಕಾರಣವೇನು?

1ನೇ ಆರೋಪಿ ಸತೀಶ್ ಬೈಕಂಪಾಡಿಯನ್ನು ‘ಬೈಕಂಪಾಡಿ ಮೊಗವೀರ ಮಹಾಸಭಾ’ದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಈ ಅಮಾನತಿಗೆ ಮೃತ ಗಂಗಾಧರ ಪಾಂಗಾಳ ಅವರೇ ಮೂಲ ಕಾರಣವೆಂದು ಭಾವಿಸಿದ ಆರೋಪಿಗಳು, ಅವರ ಮೇಲೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದರು. ಈ ಹಳೆ ದ್ವೇಷ ತೀರಿಸಿಕೊಳ್ಳಲು ಒಳಸಂಚು ರೂಪಿಸಿದ ಆರೋಪಿಗಳು, ಗಂಗಾಧರ ಅವರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿ ಬಂದು ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿದ್ದರು. ಗಂಗಾಧರ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ನಂತರ ಆರೋಪಿಗಳು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದರು.

ಶಿಕ್ಷೆಗೆ ಗುರಿಯಾದ ದೋಷಿಗಳು:

ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ನಾಲ್ವರು ಆರೋಪಿಗಳ ವಿವರ ಹೀಗಿದೆ:

  1. ಸತೀಶ್ ಬೈಕಂಪಾಡಿ (57 ವರ್ಷ) – ಎ-1 ಆರೋಪಿ (ಮೀನಕಳಿಯ ನಿವಾಸಿ)
  2. ಪುಷ್ಪರಾಜ್ (47 ವರ್ಷ) – ಎ-2 ಆರೋಪಿ (ಶಿವಳ್ಳಿ ಗ್ರಾಮ, ಉಡುಪಿ)
  3. ಹರೀಶ್ ಬೈಕಂಪಾಡಿ (61 ವರ್ಷ) – ಎ-3 ಆರೋಪಿ (ಮೀನಕಳಿಯ ನಿವಾಸಿ)
  4. ಭಾಸ್ಕರ್ ಬೈಕಂಪಾಡಿ (63 ವರ್ಷ) – ಎ-4 ಆರೋಪಿ (ಮೀನಕಳಿಯ ನಿವಾಸಿ)

(ಟಿಪ್ಪಣಿ: ಆರೋಪಿಗಳಾದ ಸತೀಶ್, ಹರೀಶ್ ಮತ್ತು ಭಾಸ್ಕರ್ ಬೈಕಂಪಾಡಿ ಅವರು ಸ್ವಂತ ಸಹೋದರರಾಗಿದ್ದಾರೆ.)

ನ್ಯಾಯಾಲಯ ವಿಧಿಸಿದ ಶಿಕ್ಷೆ ಮತ್ತು ದಂಡದ ವಿವರ:

ಐಪಿಸಿ ಕಲಂ 302, 120, 109 r/w 34 ಅಡಿ: ನಾಲ್ಕೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾ ಶಿಕ್ಷೆ).

ಐಪಿಸಿ ಕಲಂ 201 (ಸಾಕ್ಷ್ಯ ನಾಶ) r/w 34 ಅಡಿ: ಎಲ್ಲಾ ಆರೋಪಿಗಳಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು ತಲಾ ₹1,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ).

ಮೃತನ ಮಗಳಿಗೆ ಪರಿಹಾರ: ಆರೋಪಿಗಳಿಂದ ವಸೂಲಿ ಮಾಡಲಾಗುವ ಒಟ್ಟು ₹66,000 ದಂಡದ ಮೊತ್ತದಲ್ಲಿ, ₹50,000 ಹಣವನ್ನು ಮೃತ ಗಂಗಾಧರ ಪಾಂಗಾಳ ಅವರ ಮಗಳಿಗೆ ಪರಿಹಾರವಾಗಿ ನೀಡಲು ಹಾಗೂ ಉಳಿದ ₹16,000 ಹಣವನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.

ವಾಹನಗಳು ಜಪ್ತಿ – ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಕೃತ್ಯ ಎಸಗಲು ಮತ್ತು ಸಂಚು ರೂಪಿಸಲು ಬಳಸಲಾಗಿದ್ದ ಆರೋಪಿಗಳಿಗೆ ಸೇರಿದ ಬೊಲೆರೋ, ರೀಡ್ಝ್ ಹಾಗೂ ಮಾರುತಿ ಕಾರುಗಳನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶದಂತೆ ನಾಲ್ಕೂ ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತನಿಖಾ ತಂಡ ಮತ್ತು ಸರ್ಕಾರಿ ಅಭಿಯೋಜಕರು:

ಪಣಂಬೂರು ಪೊಲೀಸ್ ಠಾಣೆಯ അന്നಿನ ಇನ್‌ಸ್ಪೆಕ್ಟರ್‌ಗಳಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ ಹಾಗೂ ರವೀಶ್ ನಾಯಕ್ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿದ್ದರು. ತನಿಖಾಧಿಕಾರಿ ಲೋಕೇಶ್ ಎ.ಸಿ. ಅವರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ಪ್ರಬಲವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ

Continue Reading

accident

ಮಂತ್ರಾಲಯಕ್ಕೆ ತೆರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ: ಯಕ್ಷಧ್ರುವ ಪಟ್ಲ ಫೌಂಡೇಶನ್ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ ನಿಧನ

Published

on

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮಂಗಳೂರು ಇದರ ಜೊತೆ ಕಾರ್ಯದರ್ಶಿ, ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರದ ಮುಖಂಡರಾದ ರವಿ ಶೆಟ್ಟಿ ಅಶೋಕನಗರ (60) ಅವರು ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ತಿರುಪತಿ ಕ್ಷೇತದ ದರ್ಶನ ಮುಗಿಸಿ ಮಂತ್ರಾಲಯದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಂತ್ರಾಲಯಕ್ಕೆ ಕೇವಲ ಒಂದೆರಡು ಕಿಲೋಮೀಟರ್ ದೂರವಿರುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ರವಿ ಶೆಟ್ಟಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೂವರು ಪ್ರಾಣಾಪಾಯದಿಂದ ಪಾರು: ಕಾರಿನಲ್ಲಿದ್ದ ಇತರ ಪ್ರಯಾಣಿಕರಾದ ಪುರುಷೋತ್ತಮ ಭಂಡಾರಿ, ಸುದೇಶ್ ರೈ ಮತ್ತು ಪ್ರದೀಪ್ ಆಳ್ವ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯ: ರವಿ ಶೆಟ್ಟಿ ಅಶೋಕನಗರ ಅವರು ಮಂಗಳೂರು ಹಾಪ್‌ಕಾಮ್ಸ್‌ನ ಪ್ರಧಾನ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಜೊತೆ ಕಾರ್ಯದರ್ಶಿಯಾಗಿ ಯಕ್ಷಗಾನ ಕಲಾವಿದರ ಕ್ಷೇಮಾಭಿವೃದ್ಧಿಗೆ ಶ್ರಮಿಸಿದ್ದ ಅವರು, ಮಂಗಳೂರಿನ ಹಲವಾರು ಧಾರ್ಮಿಕ, ಸಾಮಾಜಿಕ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕಂಬನಿ ಸಲ್ಲಿಕೆ: ರವಿ ಶೆಟ್ಟಿ ಅವರ ಅಕಾಲಿಕ ನಿಧನಕ್ಕೆ ಯಕ್ಷಗಾನ ರಂಗದ ಗಣ್ಯರು, ಸಹಕಾರಿ ಕ್ಷೇತ್ರದ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

Continue Reading

JYOTHIPRAKASH

ಮಂಗಳೂರು: ‘ಮಂಗಳೂರ ಸಮಾಚಾರ’ ಹಾಗೂ ಹರ್ಮನ್ ಮೊಗ್ಲಿಂಗ್ ಕೊಡುಗೆ ಚಾರಿತ್ರಿಕವಾದದ್ದು – ಎಂ.ಎ. ಗಫೂರ್

Published

on

ಮಂಗಳೂರು: ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗಟ್ಟಿ ಬುನಾದಿ ಹಾಕಿದ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಹಾಗೂ ಅದರ ಸಂಪಾದಕರಾದ ಹರ್ಮನ್ ಮೊಗ್ಲಿಂಗ್ ಅವರ ಕೊಡುಗೆ ಚಾರಿತ್ರಿಕವಾದದ್ದು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರು ಹೇಳಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (KJU) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ (KTC) ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ‘ಮಂಗಳೂರ ಸಮಾಚಾರ’ದ ಸಂಪಾದಕ ಡಾ. ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯ ಲೋಕಕ್ಕೂ ಅಪೂರ್ವ ಕೊಡುಗೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು, “ಮೊಗ್ಲಿಂಗ್ ಅವರು ಕೇವಲ ಪತ್ರಿಕೋದ್ಯಮಕ್ಕೆ ಮಾತ್ರವಲ್ಲದೆ, ಜೈಮಿನಿ ಭಾರತ, ಬಸವ ಪುರಾಣ, ದಾಸ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೂ ಅಪೂರ್ವ ಕೊಡುಗೆಗಳನ್ನು ನೀಡಿದ್ದಾರೆ” ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಂ. ವಾಟ್ಸನ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಪಿ.ಬಿ. ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮದ ಮಹತ್ವದ ಕುರಿತು ಮಾತನಾಡಿದರು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ , ಕೋಶಾಧಿಕಾರಿ ಕೆನ್ಯೂಟ್ ಪಿಂಟೋ, ಮಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಕರ್ತರಾದ ಡೊನಾಲ್ಡ್‌ ಪಿರೇರಾ, ಎಡ್ವರ್ಡ್ ಲೋಬೋ, ಶಾರುಖ್, ಹಮೀದ್ ವಿಟ್ಲ ಸೇರಿದಂತೆ ಥಿಯೋಲೋಜಿಕಲ್ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ‌ ಈಶ್ವರ ವಾರಣಾಶಿ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು




Continue Reading

Trending

Copyright © 2025 Deevatige

error: Content is protected !!