Connect with us

Condolences

ಚಾಮರಾಜನಗರದಲ್ಲಿ ಉಬಾರ್‌ ಮಂಜ ಬೈದ್ಯನ ಸಂಸ್ಮರಣೆ ಅಗೋಚರ ಕ್ರಾಂತಿಕಾರಿಗಳ ಇತಿಹಾಸ ಯುವ ಸಮುದಾಯಕ್ಕೆ ತಲುಪಲಿ: ಸುರೇಶ್ ಎನ್. ಋಗ್ವೇದಿ

Published

on

ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಗೋಚರವಾಗಿ ದೇಶಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳ ಜೀವನ ಚರಿತ್ರೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಜಾಗೃತಿಯ ಕಾರ್ಯವಾಗಬೇಕಿದೆ. ವಿವಿಧ ಪ್ರಾಂತ್ಯಗಳಲ್ಲಿ ಹೋರಾಡಿ ಬಲಿದಾನಗೈದ ಕ್ರಾಂತಿಕಾರಿಗಳನ್ನು ಗೌರವಿಸುವ ಜೊತೆಗೆ, ಅವರ ಇತಿಹಾಸವನ್ನು ಸಮಗ್ರವಾಗಿ ಅನಾವರಣಗೊಳಿಸುವ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ನಗರದ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ‘ಜೈ ಹಿಂದ್ ಕಟ್ಟೆ’ಯಲ್ಲಿ ಹಮ್ಮಿಕೊಂಡಿದ್ದ, ಭಾರತದ ಸ್ವಾತಂತ್ರ್ಯ ಚಳುವಳಿಯ ವೀರ ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯ ರವರ ಕೊಡುಗೆಗಳ ಕುರಿತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ್ದ ಮಹಾವೀರ!

ಮಂಜ ಬೈದ್ಯರವರ ಸಾಹಸಗಾಥೆಯನ್ನು ಸ್ಮರಿಸಿದ ಸುರೇಶ್ ಎನ್. ಋಗ್ವೇದಿ, “ಉಪ್ಪಿನಂಗಡಿ ಗ್ರಾಮದವರಾದ ಮಂಜ ಬೈದ್ಯರವರು ಬ್ರಿಟಿಷರ ದೌರ್ಜನ್ಯ, ಶೋಷಣೆ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ ತಮ್ಮ ಖಜಾನೆಯ ಹುದ್ದೆಗೆ ರಾಜೀನಾಮೆ ನೀಡಿ ಕ್ರಾಂತಿಯ ಹಾದಿ ಹಿಡಿದರು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ, ಅಂದರೆ 1837 ರಲ್ಲೇ ಬ್ರಿಟಿಷರನ್ನು ತುಳುನಾಡಿನಲ್ಲಿ ಕಟ್ಟಿಹಾಕುವ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದವರು ಇವರು” ಎಂದರು.

“ಖಜಾನೆಯ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡು, ಅದನ್ನು ಮತ್ತೊಬ್ಬ ಕ್ರಾಂತಿಕಾರಿ ಕಲ್ಯಾಣ ಸ್ವಾಮಿಗೆ ತಲುಪಿಸಿ ಅವರ ಮೂಲಕ ಶಸ್ತ್ರಾಸ್ತ್ರ ಹೋರಾಟ ಸಂಘಟಿಸಿದವರು ಮಂಜ ಬೈದ್ಯರು. ಬ್ರಿಟಿಷರನ್ನು ಮಟ್ಟಹಾಕಿ ಬರೋಬ್ಬರಿ 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರ ಮುಕ್ತ ವಲಯವನ್ನಾಗಿ ಮಾಡಿದ ಮಹಾ ಕ್ರಾಂತಿಕಾರಿ ಅವರು. ತುಳುನಾಡಿನಲ್ಲಿ ಹಾಲೇರಿ ವಂಶಸ್ಥರ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂತಿಮವಾಗಿ 1837ರ ಮೇ 27ರಂದು ಇವರನ್ನು ಬ್ರಿಟಿಷರು ನೇಣುಗಂಬಕ್ಕೇರಿಸಿದರು. ಈ ದೌರ್ಜನ್ಯವನ್ನು ಭಾರತೀಯರು ಎಂದಿಗೂ ಮರೆಯಲಾರರು” ಎಂದು ಅವರು ಮಾರ್ಮಿಕವಾಗಿ ನುಡಿದರು.

ಸ್ಪೂರ್ತಿದಾಯಕ ಇತಿಹಾಸ ಹೊರಬರಲಿ:

ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ಅತ್ಯಂತ ಸ್ಪೂರ್ತಿದಾಯಕವಾಗಿದ್ದು, ಯುವಕರಲ್ಲಿ ದೇಶಾಭಿಮಾನ ಹಾಗೂ ಹೋರಾಟದ ಮಾನಸಿಕತೆಯನ್ನು ಬೆಳೆಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಅಡಗಿರುವ ಇಂತಹ ನೈಜ ಇತಿಹಾಸ ಹಾಗೂ ಸ್ವಾತಂತ್ರ್ಯ ಪ್ರೇಮಿಗಳ ಸಮಗ್ರ ಹೋರಾಟದ ವಿವರಗಳು ಬೆಳಕಿಗೆ ಬರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರದ್ಧಾಂಜಲಿ ಸಲ್ಲಿಕೆ:

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಡಿ. ಮುರುಗೇಶ್ ಅವರು ಉಭಾರ ಮಂಜ ಬೈದ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕ್ರಾಂತಿಕಾರಿಯ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಪ್ರಮುಖರಾದ ರವಿ, ಭೋಜರಾಜ್, ಸಾನಿಕ ಹಾಗೂ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಹೃದಯಾಘಾತಕ್ಕೆ ಬಲಿ: ವಾರದೊಳಗೆ ಇಬ್ಬರು ಮುಖ್ಯಶಿಕ್ಷಕಿಯರ ಸಾವು!

Published

on

ಬಂಟ್ವಾಳ: ಶಿಕ್ಷಣ ಕ್ಷೇತ್ರಕ್ಕೆ ಆಘಾತಕಾರಿ ಸುದ್ದಿ. ಕೆಲಿಂಜ ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ (58) ಅವರು ಹೃದಯಾಘಾತದಿಂದ ನ.2ರಂದು ರಾತ್ರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಶೇಷವೆಂದರೆ, ವಾರದ ಹಿಂದಷ್ಟೇ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದು, ಇದೀಗ ಮತ್ತೋರ್ವ ಮುಖ್ಯಶಿಕ್ಷಕಿಯ ಸಾವು ಶಿಕ್ಷಣ ವಲಯದಲ್ಲಿ ತೀವ್ರ ಶೋಕ ಮೂಡಿಸಿದೆ.

ಗುರುಪುರ ಕೈಕಂಬದ ಕಂದಾವರ ಬೈಲು ನಿವಾಸಿಯಾಗಿದ್ದ ವನಿತಾ ಶೆಟ್ಟಿಗಾರ್ ಅವರು ನ.2ರಂದು ಎಂದಿನಂತೆ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಮನೆಗೆ ಮರಳಿದ್ದರು. ರಾತ್ರಿ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು, ಬಳಿಕ ವಾಂತಿಯಾಗಿದ್ದು, ತಕ್ಷಣ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದ ವನಿತಾ ಶೆಟ್ಟಿಗಾರ್ ಅವರು ಅನೇಕ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದರು. ಅವರ ನಿಧನದಿಂದ ಶಿಕ್ಷಕ ವಲಯದಲ್ಲಿ ಶೋಕ ಆವರಿಸಿದೆ. ಸಹೋದ್ಯೋಗಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದಕ್ಕೂ ಮೊದಲು ಅಕ್ಟೋಬರ್ 27ರಂದು ಕೆಲಿಂಜ ಶಾಲೆಯ ಸಮೀಪದ ಒಕ್ಕೆತ್ತೂರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿ ಯಮುನಾ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಈ ಘಟನೆ ನಡೆದು ವಾರ ಕಳೆಯುವ ಮುನ್ನವೇ ಮತ್ತೊಂದು ಶಾಲೆಯ ಮುಖ್ಯಶಿಕ್ಷಕಿ ವನಿತಾ ಶೆಟ್ಟಿಗಾರ್ ಅವರು ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯ ಶಿಕ್ಷಣ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.

ವಾರದ ಅಂತರದಲ್ಲಿ ಇಬ್ಬರು ಶಾಲಾ ಮುಖ್ಯಸ್ಥೆಯರನ್ನು ಕಳೆದುಕೊಂಡಿರುವುದು ಶಿಕ್ಷಕ ಸಮುದಾಯದಲ್ಲಿ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

Continue Reading

accident

MRPL ಉದ್ಯೋಗಿ ರಾಜೇಶ್ ಎ. ಡಿ’ಸಿಲ್ವಾ ನಿಧನ: ಸಂಸ್ಥೆಯಿಂದ ತೀವ್ರ ಸಂತಾಪ, ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

Published

on

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಉದ್ಯೋಗಿ ಶ್ರೀ ರಾಜೇಶ್ ಎ. ಡಿ’ಸಿಲ್ವಾ ಅವರು ಸುಟ್ಟ ಗಾಯಗಳಿಂದಾಗಿ 2026ರ ಅಕ್ಟೋಬರ್ 17ರಂದು ನಿಧನರಾಗಿದ್ದು, ಅವರ ಅಗಲಿಕೆಗೆ MRPL ಆಡಳಿತ ಮಂಡಳಿ ತೀವ್ರ ಕಂಬನಿ ಮಿಡಿದಿದೆ.

ಕಳೆದ ಸೆಪ್ಟೆಂಬರ್ 30, 2026ರಂದು ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ (CHT) ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಯಲ್ಲಿ ರಾಜೇಶ್ ಅವರು ತೀವ್ರವಾಗಿ ಸುಟ್ಟ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಕ್ಟೋಬರ್ 17ರಂದು ಕೊನೆಯುಸಿರೆಳೆದಿದ್ದಾರೆ.

ಕುಟುಂಬಕ್ಕೆ ₹1.20 ಕೋಟಿ ಆರ್ಥಿಕ ನೆರವು

ಈ ಕಷ್ಟದ ಸಮಯದಲ್ಲಿ ಮೃತರ ಕುಟುಂಬದೊಂದಿಗೆ ಆಡಳಿತ ಮಂಡಳಿ ದೃಢವಾಗಿ ನಿಲ್ಲಲಿದ್ದು, ತನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ. ಮೃತರ ಕುಟುಂಬದ ಭವಿಷ್ಯ ಹಾಗೂ ಆರ್ಥಿಕ ಭದ್ರತೆಯ ಹಿತದೃಷ್ಟಿಯಿಂದ ಸಂಸ್ಥೆಯು ₹90 ಲಕ್ಷಗಳ ಎಕ್ಸ್‌ಗ್ರೇಷಿಯಾ (ವಿಶೇಷ) ಪರಿಹಾರ ಘೋಷಿಸಿದೆ. ಇದರೊಂದಿಗೆ, ವಿವಿಧ ಮೂಲಗಳಿಂದ ಸಿಗುವ ಪರಿಹಾರ ಸೇರಿದಂತೆ ಮೃತರ ಕುಟುಂಬಕ್ಕೆ ತಲುಪುವ ಒಟ್ಟು ಆರ್ಥಿಕ ನೆರವಿನ ಮೊತ್ತ ₹1.20 ಕೋಟಿ ಆಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Continue Reading

Condolences

ಮಂಡ್ಯದಲ್ಲಿ ಕಣ್ಣೀರು ತರಿಸುವ ಘಟನೆ: ಬದುಕಿದ್ದಾಗ ಕಡೆಗಣಿಸಿ ಸತ್ತಾಗ ಲಕ್ಷಾಂತರ ರೂ. ಹಂಚಿಕೊಂಡ ಸಂಬಂಧಿಕರು!

Published

on

ಮಂಡ್ಯ: ಮಾನವೀಯತೆ ಮರೆತು, ಹಣಕ್ಕಷ್ಟೇ ಬೆಲೆ ನೀಡುವ ಕಟು ಸತ್ಯಕ್ಕೆ ಸಾಕ್ಷಿಯಾಗುವಂತಹ ಹೃದಯವಿದ್ರಾವಕ ಘಟನೆಯೊಂದು ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಆಸರೆ ನೀಡಬೇಕಾದ ಕುಟುಂಬಸ್ಥರಿದ್ದರೂ ಭಿಕ್ಷೆ ಬೇಡಿ ಬದುಕುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ನಂತರ, ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದ್ದು, ಸತ್ತ ಮೇಲೆ ಆ ಹಣವನ್ನು ಸಂಬಂಧಿಕರು ಹಂಚಿಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ನಗರದ ಗುತ್ತಲು ನಿವಾಸಿಯಾಗಿದ್ದ ನೂರ್‌ ಎಂಬ ವೃದ್ಧೆ, ಕುಟುಂಬದವರ ನೆರವಿಲ್ಲದೆ ದಶಕಗಳಿಂದ ಊರೂರು ಅಲೆದು ಭಿಕ್ಷಾಟನೆ ಮಾಡುತ್ತಿದ್ದರು. ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ ಎಂಬಂತೆ ದಿನ ದೂಡುತ್ತಿದ್ದ ಇವರು, ವಯೋಸಹಜ ಕಾಯಿಲೆಯಿಂದ ತಮ್ಮ ಪುಟ್ಟ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾವಿನ ನಂತರ ಬೆಳಕಿಗೆ ಬಂದ ಲಕ್ಷಾಂತರ ರೂಪಾಯಿ! ವೃದ್ಧೆ ಮೃತಪಟ್ಟ ಸುದ್ದಿ ತಿಳಿದು ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಬಳಿಕ ಮನೆಯನ್ನು ಪರಿಶೀಲಿಸಿದಾಗ ಮೂಟೆಗಳು ಹಾಗೂ ಪೆಟ್ಟಿಗೆಗಳಲ್ಲಿ ಕಂತೆ ಕಂತೆ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿವೆ. ಎಣಿಕೆ ಮಾಡಿದಾಗ ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ತಿಳಿದುಬಂದಿದೆ.

ಆಶ್ಚರ್ಯ ಎಂದರೆ, ಅಜ್ಜಿ ಬದುಕಿದ್ದಾಗ ತಿರುಗಿಯೂ ನೋಡದ, ಅವರ ಕಷ್ಟಕ್ಕೆ ಸ್ಪಂದಿಸದ ಸಂಬಂಧಿಕರು, ಈ ಹಣ ಪತ್ತೆಯಾಗುತ್ತಿದ್ದಂತೆಯೇ ಅದನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವೃದ್ಧೆ ಬದುಕಿದ್ದಾಗ ಅನ್ನ ಹಾಕದವರು, ಸತ್ತ ಮೇಲೆ ಅವರ ಕಷ್ಟದ ಹಣಕ್ಕೆ ಮುಗಿಬಿದ್ದಿರುವುದು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ. “ಹಣಕ್ಕೆ ಕೊಡುವ ಬೆಲೆಯನ್ನು ಮನುಷ್ಯತ್ವಕ್ಕೆ ನೀಡದ ಇವರೆಲ್ಲಾ ಮನುಷ್ಯರಾ?” ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಸಂಬಂಧಿಕರ ಅನಾಗರಿಕ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ

Continue Reading

ads (2)
ads (3)
ads (4)
ads (5)
ads (6)
ads (1)
ads (8)
ads (7)

Trending

Copyright © 2025 Deevatige

error: Content is protected !!