Connect with us

Mangaluru

“ಕೋಮುಗಲಭೆ ತಡೆಯಿರಿ, ಯಾರೇ ಇದ್ದರೂ ಕ್ರಮ ಕೈಗೊಳ್ಳಿ”: ಸಿದ್ದರಾಮಯ್ಯ ಕುರಿತು ಮಾಜಿ ಜಿಲ್ಲಾಧಿಕಾರಿ, ಸಂಸದ ಸಶಿಕಾಂತ್ ಸೆಂಥಿಲ್ ಭಾವುಕ ಬರಹ

Published

on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡು ಕಾಂಗ್ರೆಸ್ ಸಂಸದ ಎಸ್. ಸಶಿಕಾಂತ್ ಸೆಂಥಿಲ್ ಅವರು ಸಿದ್ದರಾಮಯ್ಯ ಅವರೊಂದಿಗಿನ ತಮ್ಮ ಆಡಳಿತಾತ್ಮಕ ಅನುಭವಗಳನ್ನು ನೆನೆದು ಫೇಸ್‌ಬುಕ್‌ನಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ, ತಳಮಟ್ಟದ ಜನರ ಪರವಾದ ಕಾಳಜಿ ಮತ್ತು ಯುವ ಅಧಿಕಾರಿಗಳಿಗೆ ಅವರು ನೀಡುತ್ತಿದ್ದ ಧೈರ್ಯವನ್ನು ಸೆಂಥಿಲ್ ಶ್ಲಾಘಿಸಿದ್ದಾರೆ.

ಕೋಮುಗಲಭೆ ಸಂದರ್ಭದ ಆ ಫೋನ್ ಕರೆ!

ತಾವು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ದಿನಗಳ ಕಠಿಣ ಸಂದರ್ಭವನ್ನು ಸ್ಮರಿಸಿರುವ ಸೆಂಥಿಲ್, “ಆಗ ಜಿಲ್ಲೆಯಲ್ಲಿ ಎರಡು ಧರ್ಮಗಳ ಇಬ್ಬರು ವ್ಯಕ್ತಿಗಳು ಕೊಲ್ಲಲ್ಪಟ್ಟಿದ್ದರು. ಇಡೀ ನಗರವೇ ಕೋಮು ಸ್ಫೋಟದ ಅಂಚಿನಲ್ಲಿ ನಿಂತಿತ್ತು. ಆ ಆತಂಕದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನನಗೆ ಕರೆ ಮಾಡಿದರು. ಅವರ ಧ್ವನಿಯಲ್ಲಿ ಎಂದಿನಂತೆ ನೇರ ನಡೆ ಇತ್ತು. ‘ನೀವು ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಏನು ಮಾಡಬೇಕೋ ಅದನ್ನು ಮುಲಾಜಿಲ್ಲದೆ ಮಾಡಿ. ತಪ್ಪು ಮಾಡಿದವರು ನಮ್ಮದೇ ಪಕ್ಷದವರಾಗಿದ್ದರೂ ಬಂಧಿಸಲು ಹಿಂದೇಟು ಹಾಕಬೇಡಿ. ಆದರೆ ಪರಿಸ್ಥಿತಿ ಮಾತ್ರ ಒಂದು ದಿನದೊಳಗೆ ನಿಯಂತ್ರಣಕ್ಕೆ ಬರಬೇಕು’ ಎಂದು ಸ್ಪಷ್ಟ ಸೂಚನೆ ನೀಡಿದ್ದರು” ಎಂದು ಬರೆದುಕೊಂಡಿದ್ದಾರೆ.

“ಆ ಮಾತುಗಳು ಆತಂಕದಲ್ಲಿದ್ದ ಒಬ್ಬ ಯುವ ಜಿಲ್ಲಾಧಿಕಾರಿಗೆ ಅಪಾರ ವಿಶ್ವಾಸ ಮತ್ತು ಧೈರ್ಯವನ್ನು ನೀಡಿದವು. ಅದು ಕೇವಲ ಅಧಿಕಾರಯುತ ಆದೇಶವಾಗಿರಲಿಲ್ಲ; ಬದಲಿಗೆ ಒಬ್ಬ ಜವಾಬ್ದಾರಿಯುತ ನಾಯಕನ ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ ಮತ್ತು ಅಧಿಕಾರಿಗೆ ನೀಡಿದ ಸಂಪೂರ್ಣ ಬೆಂಬಲವಾಗಿತ್ತು” ಎಂದು ಸೆಂಥಿಲ್ ಅಭಿಪ್ರಾಯಪಟ್ಟಿದ್ದಾರೆ.

ಇತರ ಆಡಳಿತಗಾರರಿಗಿಂತ ಭಿನ್ನವಾಗಿದ್ದ ‘ಸಿದ್ದು’

ತಮ್ಮ ಅಧಿಕಾರಾವಧಿಯ ಮತ್ತೊಂದು ವಿಭಿನ್ನ ಅನುಭವವನ್ನು ಹಂಚಿಕೊಂಡಿರುವ ಅವರು, “ಮತ್ತೊಂದು ಆಡಳಿತಾವಧಿಯಲ್ಲಿ (ಬೇರೆ ಸರ್ಕಾರದ ಅವಧಿಯಲ್ಲಿ) ಇದೇ ರೀತಿಯ ಕೋಮು ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾದಾಗ, ಆಡಳಿತ ಕಡೆಯಿಂದ ಕರೆ ಬಂದು ‘ಯಾವುದೇ ಕಠಿಣ ಕ್ರಮ ಕೈಗೊಳ್ಳಬೇಡಿ; ಪರಿಸ್ಥಿತಿ ಹೇಗಿದೆಯೋ ಹಾಗೆಯೇ ಇರಲಿ’ ಎಂಬ ಸೂಚನೆ ಬಂದಿತ್ತು. ಇಂತಹ ನಡೆಗಳು ಯಾರು ಯಾರ ಲಾಭಕ್ಕಾಗಿ ಆಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತವೆ. ಆದರೆ ಸಿದ್ದರಾಮಯ್ಯ ಎಂದಿಗೂ ಆ ರೀತಿಯ ರಾಜಕಾರಣಿಯಾಗಿರಲಿಲ್ಲ” ಎಂದು ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

ಘನತೆಯಿಂದ ಕೆಳಗಿಳಿದ ನಾಯಕ

“ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸಿನ ಲೆಕ್ಕವನ್ನು ಬೆರಳ ತುದಿಯಲ್ಲಿಟ್ಟುಕೊಂಡಿದ್ದ ನಾಯಕ. ಪ್ರತಿಯೊಂದು ಹೆಜ್ಜೆಯಲ್ಲೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ, ನಿಖರತೆಯಿಂದ ಆಳ್ವಿಕೆ ನಡೆಸಿದವರು. ಸಮಾಜದ ತಳಮಟ್ಟದಲ್ಲಿರುವ ಶೋಷಿತರ, ಬಡವರ ಪರವಾಗಿ ದೃಢವಾಗಿ ನಿಂತ ವ್ಯಕ್ತಿ. ನಾನೊಬ್ಬ ರಾಜಕೀಯ ನಾಯಕನಾಗಿ ನಿಜವಾಗಿಯೂ ಗೌರವಿಸುವ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ” ಎಂದಿದ್ದಾರೆ.

“ಅವರ ನಡೆಯ ಉದಾತ್ತ ಪರಂಪರೆ ಕೇವಲ ಅವರು ಘೋಷಿಸಿದ ಯೋಜನೆಗಳಲ್ಲಾಗಲಿ ಅಥವಾ ಅವರು ಮಂಡಿಸಿದ ಬಜೆಟ್‌ಗಳಲ್ಲಾಗಲಿ ಅಡಗಿಲ್ಲ. ಬದಲಿಗೆ ಅವರು ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಅಧಿಕಾರಿಗಳಿಗೆ ಧೈರ್ಯ ತುಂಬಲು ಮಾಡುತ್ತಿದ್ದ ಆತ್ಮೀಯ ಫೋನ್ ಕರೆಯಲ್ಲಿ ಹಾಗೂ ಆತಂಕಗೊಂಡ ಅಧಿಕಾರಿಗೆ ‘ಹೋಗಿ ಶಾಂತಿ ಕಾಪಾಡಿ’ ಎಂದು ಬೆಂಬಲವಾಗಿ ನಿಲ್ಲುತ್ತಿದ್ದ ರೀತಿಯಲ್ಲಿದೆ. ಈಗ ಅವರು ಅದೇ ಘನತೆಯೊಂದಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವಾಗ ನನ್ನ ಹೃದಯ ಆಳವಾಗಿ ಕಲಕಿದೆ. ತಾವು ನಂಬಿದ ತತ್ವಗಳು ಯಾವುದೇ ದೊಡ್ಡ ಸ್ಥಾನಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ ಎಂಬುದನ್ನು ಅರ್ಥಮಾಡಿಕೊಂಡ ನಾಯಕನ ಉದಾತ್ತ ನಡೆ ಇದು” ಎಂದು ಬಣ್ಣಿಸಿದ್ದಾರೆ.

ಕೊನೆಯದಾಗಿ, “ಸಿದ್ದರಾಮಯ್ಯನವರೇ, ನೀವು ದೀರ್ಘಕಾಲ ಆರೋಗ್ಯದಿಂದಿರಿ. ನಿಮ್ಮ ಸುದೀರ್ಘ ರಾಜಕೀಯ ಅನುಭವದಿಂದ ದೇಶಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಹೆಚ್ಚಿನ ಮಾರ್ಗದರ್ಶನ ನೀಡುವಂತಾಗಲಿ” ಎಂದು ಸಶಿಕಾಂತ್ ಸೆಂಥಿಲ್ ಶುಭ ಹಾರೈಸಿದ್ದಾರೆ.





ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಮಂಗಳೂರು: ಕುಂಟಿಕಾನ್-ಕೊಟ್ಟಾರ ಸರ್ವಿಸ್ ರಸ್ತೆಯ ಚರಂಡಿ ಸ್ಲ್ಯಾಬ್ ಕುಸಿತ; ವಾಹನ ಸವಾರರ ಜೀವಕ್ಕೆ ಸಂಚಕಾರ!

Published

on

ಮಂಗಳೂರು: ನಗರದ ಕುಂಟಿಕಾನ್ ಜಂಕ್ಷನ್‌ನಿಂದ ಕೊಟ್ಟಾರ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮಧ್ಯೆ ಸಾರ್ವಜನಿಕರ ಜೀವಕ್ಕೆ ಆಪತ್ತು ತಂದೊಡ್ಡುವ ಘಟನೆಯೊಂದು ನಡೆದಿದೆ. ಇಲ್ಲಿನ ನೀರು ಹರಿದು ಹೋಗುವ ಚರಂಡಿ ಮೇಲೆ ಹಾಕಲಾಗಿದ್ದ ಸಿಮೆಂಟ್ ಸ್ಲ್ಯಾಬ್‌ಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಮಧ್ಯಾಹ್ನದ ವೇಳೆಗೆ ಸಂಪೂರ್ಣ ಕುಸಿತ:
ಕುಂಟಿಕಾನ್ ಡಿ-ಮಾರ್ಟ್ ಹಾಗೂ ಬಿ.ಎಂ.ಎಸ್ ಹೋಟೆಲ್ ಮುಂಭಾಗದ ಸರ್ವಿಸ್ ರಸ್ತೆಯ ಅಂಡರ್‌ಪಾಸ್ ತಿರುವಿನಲ್ಲೇ ಈ ಅಪಾಯಕಾರಿ ಕಂದಕ ಸೃಷ್ಟಿಯಾಗಿದೆ. ಇಂದು (ಮೇ 29) ಮುಂಜಾನೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದ ಈ ಸ್ಲ್ಯಾಬ್, ಮಧ್ಯಾಹ್ನದ ವೇಳೆಗೆ ವಾಹನಗಳ ಸಂಚಾರದ ಒತ್ತಡಕ್ಕೆ ಸಿಲುಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪರಿಣಾಮ ರಸ್ತೆಯ ಮಧ್ಯದಲ್ಲೇ ದೊಡ್ಡದೊಂದು ಕಂದಕ ನಿರ್ಮಾಣವಾಗಿದೆ.

ಸ್ಥಳೀಯರಿಂದ ಹಳೆ ಟೈರ್ ಇಟ್ಟು ಎಚ್ಚರಿಕೆ:
ಯಾವುದೇ ಕ್ಷಣದಲ್ಲೂ ದ್ವಿಚಕ್ರ ವಾಹನಗಳು ಅಥವಾ ಇತರ ವಾಹನಗಳು ಈ ಕಂದಕಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಸವಾರರ ಗಮನಕ್ಕೆ ಬರಲೆಂದು ಸ್ಥಳೀಯರೇ ಕಂದಕದ ಮೇಲೆ ಹಳೇ ಟೈರ್ ಒಂದನ್ನು ಇಟ್ಟು ತಾತ್ಕಾಲಿಕ ಎಚ್ಚರಿಕೆ ಫಲಕದಂತೆ ರೂಪಿಸಿದ್ದಾರೆ. ಆದರೂ ರಾತ್ರಿ ವೇಳೆಯಲ್ಲಿ ಅಥವಾ ಅತಿ ವೇಗವಾಗಿ ಬರುವ ವಾಹನಗಳಿಗೆ ಇದು ಕಾಣಿಸದೆ ದೊಡ್ಡ ಅನಾಹುತ ಸಂಭವಿಸುವ ಭೀತಿ ದಟ್ಟವಾಗಿದೆ.

ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ:
ಕುಂಟಿಕಾನ್ ಮತ್ತು ಕೊಟ್ಟಾರ ಭಾಗವು ಅತ್ಯಂತ ಬ್ಯುಸಿ ರಸ್ತೆಯಾಗಿದ್ದು, ನಿರಂತರವಾಗಿ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ರಸ್ತೆ ಇಷ್ಟೊಂದು ಅಪಾಯಕಾರಿಯಾಗಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಇತ್ತ ತಲೆಹಾಕದಿರುವುದು ಸ್ಥಳೀಯರ ಹಾಗೂ ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಯಾವುದೋ ದೊಡ್ಡ ಜೀವಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸ್ಲ್ಯಾಬ್‌ಗಳನ್ನು ದುರಸ್ತಿಗೊಳಿಸಬೇಕು. ವಾಹನ ಸವಾರರ ಜೀವ ರಕ್ಷಿಸಬೇಕು” ಎಂದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಬಲವಾಗಿ ಆಗ್ರಹಿಸಿದ್ದಾರೆ.

ಮಾಹಿತಿ ನೀಡಿದವರು : ಸತೀಶ್‌ ಕಾಪಿಕಾಡು, ಹಿರಿಯ ವರದಿಗಾರರು




Continue Reading

accident

ಕುಡಿದು ಕಾರು ಚಲಾಯಿಸಿದ ಯಕ್ಷ ಭಾಗವತನಿಂದ ಪೊಲೀಸರಿಗೆ ಡಿಕ್ಕಿ – ಹೆಡ್ ಕಾನ್ಸ್ಟೇಬಲ್ ಗಂಭೀರ

Published

on

ಮಂಗಳೂರು: ಕುಡಿದ ಮತ್ತಿನಲ್ಲಿ ರಾಂಗ್ ಸೈಡ್‌ನಲ್ಲಿ ಕಾರು ಚಲಾಯಿಸಿದ ಯಕ್ಷ ತೆಲಿಕೆಯ ಭಾಗವತನೊಬ್ಬ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಘಟನೆ ಮಣ್ಣಗುಡ್ಡೆ ವೇರ್ ಹೌಸ್ ಬಳಿ ನಡೆದಿದೆ. ಅಪಘಾತದಲ್ಲಿ ಹೆಡ್ ಕಾನ್ಸ್ಟೇಬಲ್ ವಿಠ್ಠಲ್ ದಾಸ್ ಗಂಭೀರವಾಗಿ ಗಾಯಗೊಂಡು ಸೊಂಟದಿಂದ ಕೆಳಗೆ ಶಕ್ತಿ ಕಳೆದುಕೊಂಡಿದ್ದಾರೆ.

ಘಟನೆ ವಿವರ:
ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಠ್ಠಲ್ ದಾಸ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಕುಮಾರ ಅವರು ರಾತ್ರಿ ಕರ್ತವ್ಯದಲ್ಲಿದ್ದರು. ಬಲ್ಲಾಲ್ ಬಾಗ್ ಜಂಕ್ಷನ್ ಬಳಿ ನಡೆದ ವಾಹನ ಅಪಘಾತ ಪ್ರಕರಣ ಪರಿಶೀಲಿಸಿ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಗೆ KA-19 MP-9623 ನಂಬರ್‌ನ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.

ಕಾರು ಚಲಾಯಿಸುತ್ತಿದ್ದ ಆರೋಪಿ ಸಂಪಾಜೆ ನಿವಾಸಿ ಧೀರಜ್ ಆರ್ ರೈ, ಯಕ್ಷ ತೆಲಿಕೆಯ ಭಾಗವತನಾಗಿದ್ದು, ಕುಡಿದಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿಕೊಂಡು ಬಂದು ಅಪಘಾತ ಎಸಗಿದ್ದಾನೆ.

ಹೆಡ್ ಕಾನ್‌ಸ್ಟೇಬಲ್ ವಿಠ್ಠಲ್ ದಾಸ್: ಅಪಘಾತದ ರಭಸಕ್ಕೆ ನೆಲಕ್ಕೆ ಬಿದ್ದ ಇವರ ತಲೆ, ಕುತ್ತಿಗೆ ಹಾಗೂ ಬೆನ್ನುಮೂಳೆಗೆ (ಸ್ಪೈನ್) ಗಂಭೀರ ಗಾಯಗಳಾಗಿವೆ. ತಕ್ಷಣವೇ ಇವರನ್ನು ಆಟೋ ರಿಕ್ಷಾ ಮೂಲಕ ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಇವರ ಸ್ಪೈನಲ್ ಕಾರ್ಡ್‌ಗೆ ತೀವ್ರ ಹಾನಿಯಾಗಿದ್ದು, ಸೊಂಟದಿಂದ ಕೆಳಭಾಗಕ್ಕೆ ಶಕ್ತಿ ಕುಂದಿದೆ. ಈಗಾಗಲೇ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ (Surgery) ಮಾಡಲಾಗಿದೆ.

ಕಾನ್‌ಸ್ಟೇಬಲ್ ಕುಮಾರ್: ಡಿಕ್ಕಿಯ ಪರಿಣಾಮ ಇವರ ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದು (Leg Fracture), ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾನೂನು ಕ್ರಮ:

ಪ್ರಾಥಮಿಕ ತನಿಖೆಯಲ್ಲಿ ಚಾಲಕ ಮದ್ಯಪಾನ ಮಾಡಿ, ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 (ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದ ಚಾಲನೆ) ಹಾಗೂ 125(b) (ಇತರರ ಜೀವಕ್ಕೆ ಅಪಾಯ ತರುವಂತಹ ಗಂಭೀರ ಗಾಯ ಉಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ

Continue Reading

crime

ಮುಲ್ಕಿ: ಬೈಕ್ ಕಳ್ಳತನ ಮಾಡಿದ ಇಬ್ಬರು ಹಳೇ ಕದೀಮರ ಬಂಧನ; ವಾಹನ, ಮೊಬೈಲ್ ವಶ

Published

on

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ನಗರದ ಮುಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಕಳುವಾಗಿದ್ದ ಬೈಕ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರನ್ನು ಸುರತ್ಕಲ್ ಮುಕ್ಕ ನಿವಾಸಿ ಉಮ್ಮರಬ್ಬ ಎಂಬುವವರ ಪುತ್ರ ಮೊಹಮ್ಮದ್ ರಾಝಿಕ್ (36 ವರ್ಷ) ಮತ್ತು ಮಂಗಳೂರು ನಗರದ ಬೈಕಂಪಾಡಿ ಅಂಗರಗುಂಡಿ ನಿವಾಸಿ ಬಿ. ಬಾವ ಎಂಬುವವರ ಪುತ್ರ ಉಬೈದತ್ ಹೈದರ್ (31 ವರ್ಷ) ಎಂದು ಗುರುತಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಕಳೆದ ಮೇ 18, 2026 ರಂದು ಮುಲ್ಕಿ ಜಂಕ್ಷನ್ ಬಳಿಯ ಅಪೋಲೊ ಫಾರ್ಮಾ ಹತ್ತಿರ ನಿಲ್ಲಿಸಲಾಗಿದ್ದ ಹೋಂಡಾ ಯುನಿಕಾರ್ನ್ ಬೈಕ್ (ನೊಂದಣಿ ಸಂಖ್ಯೆ: KA 20 EB 6383) ಕಳ್ಳತನವಾಗಿತ್ತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಮುಲ್ಕಿ ಠಾಣೆಯ ಪಿಎಸ್‌ಐ ಹಾಗೂ ಕ್ರೈಂ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿದೆ.

ಬಂಧಿತರಿಂದ ಸುಮಾರು 20,000 ರೂ. ಮೌಲ್ಯದ ಹೋಂಡಾ ಯುನಿಕಾರ್ನ್ ಬೈಕ್ ಮತ್ತು 18,000 ರೂ. ಮೌಲ್ಯದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿಗಳ ಹಿನ್ನೆಲೆ: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖದೀಮರು!

ಬಂಧಿತ ಇಬ್ಬರೂ ಆರೋಪಿಗಳು ಈ ಹಿಂದೆಯೂ ಹಲವು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಇವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟ್ ಹಾಗೂ ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ.

ಮೊಹಮ್ಮದ್ ರಾಝಿಕ್ ಮೇಲಿರುವ ಪ್ರಕರಣಗಳು:

ಸುರತ್ಕಲ್ ಪೊಲೀಸ್ ಠಾಣೆ (2024) – NDPS (ಮಾದಕ ದ್ರವ್ಯ ತಡೆ) ಕಾಯ್ದೆ.

ಪಣಂಬೂರು ಪೊಲೀಸ್ ಠಾಣೆ (2019) – NDPS ಕಾಯ್ದೆ.

ಮುಲ್ಕಿ ಪೊಲೀಸ್ ಠಾಣೆ (2023) – NDPS ಕಾಯ್ದೆ.

ಉಬೈದತ್ ಹೈದರ್ ಮೇಲಿರುವ ಪ್ರಕರಣಗಳು:

ಪಣಂಬೂರು ಪೊಲೀಸ್ ಠಾಣೆಯಲ್ಲಿ ದಂಗೆ, ಮಾರಕಾಸ್ತ್ರಗಳಿಂದ ಹಲ್ಲೆ, ಜೀವಬೆದರಿಕೆ, ಕಾನೂನುಬಾಹಿರ ಕೂಟ ಸೇರಿದಂತೆ ಒಟ್ಟು ನಾಲ್ಕು ಗಂಭೀರ ಐಪಿಸಿ (IPC) ಪ್ರಕರಣಗಳು (2002, 2014 ಮತ್ತು 2016ರ ಅವಧಿಯಲ್ಲಿ) ದಾಖಲಾಗಿವೆ.

ಮುಲ್ಕಿ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.





Continue Reading

Trending

Copyright © 2025 Deevatige

error: Content is protected !!