Connect with us

DEATH

ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣರವರ ಸಹೋದರ ಗಂಗಾಧರ ಸುವರ್ಣ ಹೃದಯಾಘಾತದಿಂದ ನಿಧನ

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ ಅವರ ಸಹೋದರ, ಉದ್ಯಮಿ ಗಂಗಾಧರ ಸುವರ್ಣ (66) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ನರಿಮೊಗರು ಸುವರ್ಣ ಎಸ್ಟೇಟ್ ಮಾಲಕರಾದ ವೇದನಾಥ ಸುವರ್ಣ ಅವರ ಸಹೋದರರಾಗಿರುವ ಇವರು, ಶಿವಗಂಗಾ ಕನ್ಸ್ಟ್ರಕ್ಷನ್ ಸಂಸ್ಥೆಯ ಉದ್ಯಮಿಯಾಗಿದ್ದರು. ಕೃಷಿಕರೂ ಆಗಿದ್ದ ಇವರು ದಿ. ಕಮಲಾಕ್ಷಿ ಮತ್ತು ಮಾಯಿಲಪ್ಪ ಸುವರ್ಣ ದಂಪತಿಯ ಪುತ್ರ.

ಘಟನೆಯ ವಿವರ: ಏಪ್ರಿಲ್ 24ರಂದು ರಾತ್ರಿ ಗಂಗಾಧರ ಸುವರ್ಣ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಪುತ್ತೂರಿನ ದರ್ಬೆ ಹಿತ ಆಸ್ಪತ್ರೆಗೆ ಕರೆತರಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರ ಕುಟುಂಬ: ಮೃತರು ಪತ್ನಿ ಶರ್ಮಿಳಾ, ಪುತ್ರ ಕೌಶಿಕ್, ಪುತ್ರಿ ಕೀರ್ತನಾ, ಸಹೋದರ ವೇದನಾಥ ಸುವರ್ಣ ಹಾಗೂ ಸಹೋದರಿಯರಾದ ತಿಲೋತ್ತಮ ಬಪ್ಪಳಿಗೆ, ವೀಣಾ ಬಪ್ಪಳಿಗೆ ಮತ್ತು ವಿನಯ ಸುಳ್ಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಗಂಗಾಧರ ಸುವರ್ಣ ಅವರ ನಿಧನಕ್ಕೆ ಸ್ಥಳೀಯ ಗಣ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

DEATH

ಕಳೆಂಜಿಮಲೆ ರಕ್ಷಿತಾರಣ್ಯದ ತಪ್ಪಲಲ್ಲಿ ಕಾಟಿಯ ದುರಂತ ಅಂತ್ಯ

Published

on

ಬಂಟ್ವಾಳ ತಾಲೂಕು ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಲವು ವರ್ಷಗಳಿಂದ ಸ್ವಚ್ಚಂದವಾಗಿ ಸುತ್ತಾಡುತ್ತಿದ್ದ(ಕಾಟಿ)ಕಾಡೆತ್ತು ಹಗ್ಗದ ಉರುಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದೆ.

ರಕ್ಷಿತಾರಣ್ಯದ ತಪ್ಪಲು ಪ್ರದೇಶದ ವಿಟ್ಲ ಪಡ್ನೂರು ಗ್ರಾಮದ ಅನಿಲಕಟ್ಟೆ ಪೂರ್ಲಿಪ್ಪಾಡಿ ಎಂಬಲ್ಲಿನ ದಿ.ಮೋನಪ್ಪ ಗೌಡರ ಸ್ವಾಧೀನದ ಜಮೀನಿನಲ್ಲಿರುವ ನಾಲ್ಕೈದು ಕುಟುಂಬಗಳ ಕೃಷಿಗೆ ಅನುಕೂಲವಾಗುವ ಕೆದುವಾರು ಪಾಲಿನ ಕೆರೆಗೆ ನೀರು ಕುಡಿಯಲು ಕಾಡೆತ್ತು ಬರುತ್ತಿತ್ತು.

ನಿನ್ನೆ(ಶುಕ್ರವಾರ)ಸಂಜೆ ಕುತ್ತಿಗೆಯಲ್ಲಿ ಪಾಲಿಥೀನ್ ಹಗ್ಗ ಬಿಗಿದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿದ್ದ ಕಾಡೆತ್ತು ನೋವು ತಾಳಲಾರದೇ ಕೆರೆಗೆ ನೀರು ಕುಡಿಯಲು ಬಂದಿರುವುದು ಸ್ಥಳೀಯರ ಕಣ್ಣಿಗೆ ಕಂಡು ಬಂದಿತ್ತು. ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯಾಧಿಕಾರಿಗಳ ತಂಡ ಶುಕ್ರವಾರ ಮುಸ್ಸಂಜೆಯೇ ಸ್ಥಳಕ್ಕಾಗಮಿಸಿ ಕುತ್ತಿಗೆಯಲ್ಲಿ ಬಿಗಿದಿದ್ದ ಹಗ್ಗದ ಉರುಳು ತುಂಡರಿಸಿದ್ದಾರೆ.
ಶನಿವಾರ ಬೆಳಗ್ಗೆ ಅದೇ ಅರಣ್ಯದೊಳಗಿನ ಕೆರೆಯ ಬದಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಡೆತ್ತು ಇಹಲೋಕ ತ್ಯಜಿಸಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ, ಉಕ್ಕುಡ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಹತ್ತು ಹದಿನೈದು ದಿನಗಳ ಹಿಂದೆ ಎಲ್ಲೋ ಕಾಟಿ ಮಾಂಸದ ರುಚಿ ಸವಿಯಲು ಜೊಲ್ಲು ಸುರಿಸಿದ್ದ ನರರಾಕ್ಷಸರು ಹತ್ಯೆಗೈಯಲು ಕಾಡೆತ್ತಿನ ಕುತ್ತಿಗೆಗೆ ಪಾಲಿಥೀನ್ ಹಗ್ಗದ ಉರುಳು ಬಿಗಿದಿರುವುದು ಸ್ಪಷ್ಟವಾಗಿದೆ.
ದೈತ್ಯ ದೇಹದ ಬಲಶಾಲಿಯಾಗಿದ್ದ ಕಾಡೆತ್ತು ನರರಾಕ್ಷಸರ ಪಾಲಿಥೀನ್ ಹಗ್ಗವನ್ನು ತುಂಡರಿಸಿದ್ದರೂ ಕುತ್ತಿಗೆಗೆ ಬಿಗಿದ ಉರುಳು ತೆಗೆಯಲಾಗಿಲ್ಲ. ದಿನದಿನಕ್ಕೆ ಕುತ್ತಿಗೆಯ ಉರುಳು ಬಿಗಿದ ಕಾರಣ ಕಾಡೆತ್ತಿನ ಕುತ್ತಿಗೆಯ ಅಡಿಭಾಗದಲ್ಲಿ ಭಾರಿ ಪ್ರಮಾಣದ ಗಾಯಗಳಾಗಿ ಹುಳ ಹುಟ್ಟಿಕೊಂಡಿದೆ. ನೋವು ತಡೆಯಲಾಗದೇ ಎಂದಿನಂತೆ ಬರುತ್ತಿದ್ದ ದಾರಿಯಲ್ಲೇ ಬಂದು ಕೆರೆಯಲ್ಲಿ ನೀರು ಕುಡಿದ ಬಳಿಕ ಇಂದು ಬೆಳಗ್ಗೆ ಕಾಡೆತ್ತು ಇಹಲೋಕ ತ್ಯಜಿಸಿದೆ.

ಇಲಾಖಾ ನಿಯಮದಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಬಳಿಕ ಅರಣ್ಯದಲ್ಲೇ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Continue Reading

Bantawala

ವಿಟ್ಲದ ಅನಿಕೇತ್ ನೀರಿನಲ್ಲಿ ಮುಳುಗಿ ಸಾವು; ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿ

Published

on

ಜಯಪುರ: ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಪ್ಪ ಜಯಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿಯು ವಿಟ್ಲದ ಬಾಲಕನಾಗಿದ್ದಾನೆ.

ಘಟನೆಯ ವಿವರ: ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕೇತ್ (14) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಈಜಾಡುತ್ತಿದ್ದ ವೇಳೆ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದನು. ತಕ್ಷಣವೇ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಕುಟುಂಬದ ಹಿನ್ನೆಲೆ:ಮೃತ ಅನಿಕೇತ್ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರ. ಗೋವರ್ಧನ್ ನಾಯಕ್ ಅವರು ಜೀವವಿಮಾ ಪ್ರತಿನಿಧಿಯಾಗಿದ್ದು,ವಿಟ್ಲ ಖಾಸಗೀ ಬಸ್ಸು ನಿಲ್ದಾಣದ ಬಳಿ ಜೀವವಿಮಾ ನಿಗಮದ ಕಚೇರಿಯನ್ನು ಹೊಂದಿದ್ದಾರೆ. ಹಿಂದೂ ಸಂಘಟನೆಗಳು ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಗನ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ಈಗಾಗಲೇ ನಡೆಸಲಾಗಿದ್ದು ಇಂದು ರಾತ್ರಿಯೇ ಜಯಪುರದಿಂದ ವಿಟ್ಲಕ್ಕೆ ಮೃತದೇಹ ತರಲಾಗುವುದು. ನಾಳೆ(ಸೋಮವಾರ) ಬೆಳಗ್ಗೆ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಮೃತ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಖಚಿತ ಮೂಲಗಳು ತಿಳಿಸಿವೆ.

ಈ ಘಟನೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Condolences

ಯಕ್ಷಗಾನದ ದಿಗ್ಗಜ ‘ರಸಿಕರತ್ನ’ ಗೋಪಾಲಕೃಷ್ಣ ಜೋಷಿಯವರ ಧರ್ಮಪತ್ನಿ ಸಾವಿತ್ರಿ ಅಮ್ಮ ನಿಧನ; ನೇತ್ರದಾನದ ಮೂಲಕ ಸಾರ್ಥಕತೆ

Published

on

ವಿಟ್ಲ: ಶ್ರೀ ಧರ್ಮಸ್ಥಳ ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಕಲಾಭಿಮಾನಿಗಳ ಆರಾಧ್ಯ ದೈವ ದಿವಂಗತ ‘ರಸಿಕರತ್ನ’ ಗೋಪಾಲಕೃಷ್ಣ ಜೋಷಿಯವರ ಧರ್ಮಪತ್ನಿ ಸಾವಿತ್ರಿ ಅಮ್ಮ (92) ಅವರು ಮಂಗಳವಾರ ಮುಂಜಾನೆ ದೈವಾಧೀನರಾಗಿದ್ದಾರೆ.

ಕಳೆದ ಎರಡು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ದೈಗೋಳಿಯ ಶ್ರೀಸಾಯಿ ನಿಕೇತನ ಸೇವಾಶ್ರಮದಲ್ಲಿ ತಜ್ಞ ವೈದ್ಯರ ಆರೈಕೆಯಲ್ಲಿದ್ದರು. ಸೋಮವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ನೇತ್ರದಾನದ ಮೂಲಕ ಸಾರ್ಥಕತೆ:

ಸಾವಿತ್ರಿ ಅಮ್ಮ ಅವರು ಜೀವಿತಾವಧಿಯಲ್ಲಿ ವ್ಯಕ್ತಪಡಿಸಿದ್ದ ಇಚ್ಛೆಯಂತೆ, ಅವರ ಮರಣದ ನಂತರ ಕಣ್ಣುಗಳನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು. ಈ ಮೂಲಕ ಸಾವಿನಲ್ಲೂ ಪರರಿಗೆ ಬೆಳಕಾಗುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಮೃತರ ಅಂತ್ಯಕ್ರಿಯೆಯನ್ನು ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮೃತರು ಒಬ್ಬ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯಕ್ಷಗಾನ ಲೋಕದ ಹಿರಿಯ ಚೇತನದ ಪತ್ನಿಯ ಅಗಲಿಕೆಗೆ ಕಲಾಭಿಮಾನಿಗಳು ಹಾಗೂ ಸ್ಥಳೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!